Friday, 13th December 2024

ಆರಂಭದಲ್ಲೇ ಅನಾರೋಗ್ಯ ಸಮಸ್ಯೆ ತಪಾಸಣೆ ಮಾಡಿಸಬೇಕು: ಶಾಸಕ ಜ್ಯೋತಿಗಣೇಶ್

ತುಮಕೂರು: ಆರಂಭದ ಹಂತದಲ್ಲಿಯೇ ಅನಾರೋಗ್ಯದ ಸಮಸ್ಯೆಗಳನ್ನು ತಪಾಸಣೆ ಮಾಡಿಸಿಕೊಂಡರೆ ಖರ್ಚು ಕಡಿಮೆ ಮಾಡಿಕೊಳ್ಳಬಹುದು ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ಸಲಹೆ ನೀಡಿದರು.
ಜಿಲ್ಲಾ ಒಕ್ಕಲಿಗರ ಒಕ್ಕೂಟ, ವಿಜಯ ಆಸ್ಪತ್ರೆ, ಪದ್ಮಶ್ರೀ ಡಯಾಗ್ನಾಸ್ಟಿಕ್ ಸೆಂಟರ್ ಇವರ ಸಂಯುಕ್ತಾಶ್ರಯದಲ್ಲಿ ಎಂ.ಜಿ.ರಸ್ತೆ ಯಲ್ಲಿರುವ ಪದ್ಮಶ್ರೀ ಡಯಾಗ್ನಾಸ್ಟಿಕ್ ಸೆಂಟರ್‌ನಲ್ಲಿ ಆರೋಗ್ಯ: ಮಹಿಳೆ ವಿಶೇಷ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು ಇಂದಿನ ದಿನಗಳಲ್ಲಿ ಮನುಷ್ಯ ಸದೃಢರಾಗಿರಲು ಆರೋಗ್ಯ ತುಂಬಾ ಮುಖ್ಯವಾಗಿದ್ದು, ನಿರ್ಲಕ್ಷಿಸಬಾರದು. ಶಿಕ್ಷಣ ಮತ್ತು ಆರೋಗ್ಯದ ಕಡೆಗೆ ಹೆಚ್ಚು ಗಮನ ಕೊಡಬೇಕು. ಈ ಬಗ್ಗೆ ಸಮಾಜದಲ್ಲಿ ಅರಿವು ಉಂಟು ಮಾಡಬೇಕು. ಬೈರವ ಸಂಘ, ಒಕ್ಕಲಿಗರ ಒಕ್ಕೂಟ ಈ ನಿಟ್ಟಿನಲ್ಲಿ ಉಪಯುಕ್ತ ಕೆಲಸ ಮಾಡುತ್ತಿದ್ದು, ಸರ್ಕಾರದ ಕೆಲಸವನ್ನು ಈ ಸಂಸ್ಥೆಗಳು ಮಾಡುತ್ತಿವೆ. ರೆಡ್‌ಕ್ರಾಸ್‌ನಂತಹ ಸಂಘ ಸಂಸ್ಥೆಗಳ ಸಹಯೋಗ ಪಡೆದು ಮಾದರಿ ಕಾರ್ಯಕ್ರಮ ಗಳನ್ನು ಆಯೋಜಿಸಲಿ ಎಂದು ಸಲಹೆ ನೀಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಕಾರ್ಯಕಾರಿ ಸಮಿತಿ ಸದಸ್ಯರು, ಪ್ರಜಾಪ್ರಗತಿ ಸಂಪಾದಕರೂ ಆದ ಎಸ್.ನಾಗಣ್ಣ ಮಾತನಾಡಿ ಮನುಷ್ಯನ ಜೀವನಶೈಲಿ ದಿನೆ ದಿನೆ ಬದಲಾಗುತ್ತಿರುವುದರಿಂದ ಬಹುತೇಕ ಮಂದಿಯ ಬದುಕು ಔಷಧಿಯ ಮೇಲೆ ನಿಂತಿದೆ ಎಂದು ಅಭಿಪ್ರಾಯಪಟ್ಟರು.
ಆಹಾರದಿಂದಾಗಿಯೇ ನಮ್ಮ ಜೀವನಶೈಲಿ ಬದಲಾಗುತ್ತಿದೆ. ಅನಾರೋಗ್ಯ ಹೆಚ್ಚುತ್ತಿದೆ. ಔಷಧಗಳಿಂದಾಗಿ ಕಾಯಿಲೆಗಳು ನಿವಾರಣೆ ಯಾಗುತ್ತಿವೆ. ಮರಣ ಪ್ರಮಾಣವೂ ಕಡಿಮೆಯಾಗಿದೆ. ಆದರೆ ಅನಾರೋಗ್ಯಗಳು ಹೆಚ್ಚುತ್ತಿದ್ದು, ಆರೋಗ್ಯ ಕ್ಷೇತ್ರದ ಸುಧಾರಣೆಯ ಕಡೆಗೆ ಸರ್ಕಾರಗಳು, ಸಂಘ ಸಂಸ್ಥೆಗಳು ಹೆಚ್ಚು ಗಮನ ಹರಿಸಬೇಕಾಗಿದೆ ಎಂದರು.
ವಿಜಯ ಆಸ್ಪತ್ರೆಯ ಡಾ.ವಿಜಯಕುಮಾರ್ ಮಾತನಾಡಿ ಇಂದಿನ ದಿನಗಳಲ್ಲಿ ಕ್ಯಾನ್ಸರ್ ಹೆಚ್ಚು ಹರಡುತ್ತಿದೆ. ಅದರಲ್ಲೂ ವಿಶೇಷ ವಾಗಿ ಮಹಿಳೆಯರಿಗೆ ಸ್ತನದ ಕ್ಯಾನ್ಸರ್, ಗರ್ಭಕೋಶದ ಕ್ಯಾನ್ಸರ್, ಬಾಯಿ ಕ್ಯಾನ್ಸರ್ ಹೀಗೆ ಪ್ರಮುಖವಾಗಿ ಕೆಲವು ಕ್ಯಾನ್ಸರ್ ಕಾಯಿಲೆಗಳನ್ನು ಗುರುತಿಸಬಹುದು.
ಆರಂಭಿಕ ಹಂತದಲ್ಲಿಯೇ ಇವುಗಳನ್ನು ಗುರುತಿಸಿದರೆ ಶೇ.95 ರಷ್ಟು ಕಾಯಿಲೆಗಳನ್ನು ಗುಣಪಡಿಸಬಹುದು. ದುರಂತವೆ0ದರೆ, ಎಲ್ಲರೂ ರೋಗ ಉಲ್ಬಣಿಸಿದಾಗಲೇ ಆಸ್ಪತ್ರೆಗಳ ಕಡೆಗೆ ಬರುತ್ತಾರೆ. ಇದನ್ನು ಮನಗಂಡು ನವೆಂಬರ್‌ನಿ0ದ ಡಿಸೆಂಬರ್ ತಿಂಗಳ ವರೆಗೆ ಮಹಿಳೆಯರಿಗಾಗಿ ಉಚಿತ ತಪಾಸಣಾ ಕಾರ್ಯಕ್ರಮವನ್ನು ಇತರೆ ಆಸ್ಪತ್ರೆಗಳ ಸಹಯೋಗದೊಂದಿಗೆ ಆಯೋಜಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ರಂಗಪ್ಪ, ಡಿ.ಆರ್.ಕೇಶವಮೂರ್ತಿ, ಗಿರೀಶ್, ನಟೇಶ್, ಸುಜಾತ ನಂಜೇಗೌಡ, ರಂಗಮಣಿ ಕಾಮೇಶ್, ಕೃಷ್ಣಯ್ಯ, ಬೋರೇಗೌಡ, ಜಿ.ಕೆ.ಶ್ರೀನಿವಾಸ್ ಮೊದಲಾದವರು ಉಪಸ್ಥಿತರಿದ್ದರು.