ಜೂಜಾಟದ ದಾಸ್ಯಕ್ಕೆ ಬಿದ್ದ ಪಾಂಡವರು, ದ್ರೌಪದಿಯನ್ನು ಕೌರವರಿಗೆ ಪಣವಿಟ್ಟ ಕಥೆ ಹಳಯದು. ಇದೀಗ ಅಂತಹದ್ದೇ
ಘಟನೆಯೊಂದು ಉತ್ತರಪ್ರದೇಶದ ಪ್ರತಾಪಗಢ ಸಮೀಪದ ನಗರ್ ಕೊತ್ಲಾಲಿಯಲ್ಲಿ ನಡೆದಿದೆ.
ರೇಣು ಎಂಬ ಎರಡು ಮಕ್ಕಳ ತಾಯಿಯು ಲೂಡೊ ಚಟಕ್ಕೆ ಬಿದ್ದು, ತನ್ನಲ್ಲಿರುವ ಹಣವನ್ನೆಲ್ಲ ಕಳೆದುಕೊಂಡು, ಕೊನೆಯಲ್ಲಿ ತನ್ನನ್ನೇ ತಾನು ಪಣಕ್ಕಿಟ್ಟುಕೊಂಡು ಸೋತಿದ್ದಾಳೆ. ಈ ಪ್ರಕರಣ ಸಾಮಾಜಿಕ ಜಾಲತಾಣ ದಲ್ಲಿ ಭಾರೀ ವೈರಲ್ ಆಗಿದೆ. ಈ ಘಟನೆ ಆನ್ಲೈನ್ ಜೂಜಾಟದ ಕ್ರೌರ್ಯವನ್ನು ಎತ್ತಿ ತೋರಿಸಿದೆ. ಆನ್ಲೈನ್ ಜೂಜಾಟದ ಆಪ್ಗಳು ಬಂದಾಗಿನಿಂದ ಕೋಟಿ ಕೋಟಿ ಹಣ ಕಳೆದುಕೊಂಡು ಬೀದಿಗೆ ಬಂದ ಕುಟುಂಬಗಳು ಅದೆಷ್ಟೋ ಇವೆ.
ಆದರೂ ಆನ್ಲೈನ್ ಜೂಜಾಟದ ಮೇಲೆ ನಿರ್ಬಂಧ ಹೇರುವ ಪ್ರಬಲ ಕಾಯ್ದೆ, ಕಾನೂನು ರೂಪುಗೊಳ್ಳದಿರುವುದು ದುರದೃಷ್ಟಕರ. ೧೯೯೦ರ ದಶಕದ ಅಂತ್ಯದಲ್ಲಿ ಆನ್ ಲೈನ್ನಲ್ಲಿ ಈ ಜೂಜಿನ ಆಟ ಜನಪ್ರಿಯತೆ ಗಳಿಸಿತು. ೧೯೯೬ರಲ್ಲಿ ಕೇವಲ ೧೫ ಇಂತಹ ವೆಬ್ಸೈಟ್ಗಳು ಇದ್ದವು, ಈಗ ಇಂತಹ ಸಾವಿರಾರು ವೆಬ್ಸೈಟ್ ಗಳು ಅಸ್ತಿತ್ವದಲ್ಲಿವೆ. ಈ ವೆಬ್ ಸೈಟ್ಗಳ ದಿನನಿತ್ಯದ ವಹಿವಾಟು ನೂರಾರು ಕೋಟಿ ದಾಟುತ್ತವೆ. ಅಂದರೆ ದೇಶಾದ್ಯಂತ ಇಂತಹ ಆಪ್ಗಳಿಂದ ಎಷ್ಟು ಜನ ಮೋಸ ಹೋಗುತ್ತಿದ್ದಾರೆ ಎಂಬುದನ್ನು ಲೆಕ್ಕಹಾಕಿ.
ವಿದ್ಯಾರ್ಥಿಗಳು ಓದು, ಬರಹ ಬಿಟ್ಟು ಆನ್ಲೈನ್ ಜೂಜಾಟದಲ್ಲಿ ತೊಡಗಿದ್ದಾರೆ ಎಂದು ಅನೇಕ ಪೋಷಕರು ವೈದ್ಯರ ಬಳಿ ದೂರು ತೆಗೆದುಕೊಂಡು ಹೋಗುತ್ತಿದ್ದಾರೆ. ಜೂಜು ಇರುವುದು ಜೂಜುಕೋರರನ್ನು ಉದ್ದಾರ ಮಾಡಲಿಕ್ಕಲ್ಲ. ಹೆಚ್ಚಿನ
ಜೂಜುಕೋರರು ಹಣವನ್ನು ಕಳೆದುಕೊಳ್ಳುತ್ತಾರೆ, ಏಕೆಂದರೆ ಜೂಜಿನ ಅಡ್ಡಗಳು ಎಂದಿಗೂ ಜೂಜುಕೋರರು ಹಣ ಗೆಲ್ಲಲಿ ಎಂದು ಮಾಡಿದ ಜಾಗಗಳಲ್ಲ, ಬದಲಾಗಿ ಅಡ್ಡವನ್ನು ನಡೆಸುವವರ ಲಾಭಕ್ಕಾಗಿ ಮಾಡಿದ ಜಾಗಗಳು. ಜೂಜಾಡುವವರು ಗಮನಾರ್ಹ ಮೊತ್ತವನ್ನು ಗೆದ್ದಾಗಲೂ ಸಹ ಜೂಜಾಡುವ ಪ್ರಚೋದನೆ ಹೆಚ್ಚಾಗಿ ಮತ್ತೆ ಎಲ್ಲವನ್ನೂ ಕಳೆದುಕೊಳ್ಳುವವರೆಗೂ ಜೂಜನ್ನು ಮುಂದುವರಿಸುತ್ತಾರೆ. ಅನೇಕರು ಆರಂಭದಲ್ಲಿ ಒಂದೆರಡು ಬಾರಿ ಮಾತ್ರ ಗೆದ್ದು ಬೀಗಿರುತ್ತಾರೆ.
ನಂತರದ ದಿನಗಳಲ್ಲಿ ಸಾಕಷ್ಟು ಹಣ ಕಳೆದುಕೊಂಡವರೇ ಹೆಚ್ಚು. ಆದ್ದರಿಂದ ಸರಕಾರ ಆನ್ಲೈನ್ ಜೂಜಿನ ಆಪ್ಗಳ ಮೇಲೆ ನಿಯಂತ್ರಣ ಹೇರುವ ಮೂಲಕ ರೇಣುನಂತಹ ಅನೇಕ ಕುಟುಂಬಗಳ ರಕ್ಷಣೆ ಮಾಡಲಿ.