ವಿಶ್ಲೇಷಣೆ
ಗಣೇಶ್ ಭಟ್, ವಾರಣಾಸಿ
ಇತ್ತೀಚೆಗೆ ಗೃಹ ಸಚಿವ ಅಮಿತ್ ಶಾ, ಭಾರತದ ತಿರುಚಿದ ಇತಿಹಾಸ ಸರಿಪಡಿಸುವ ಸರಕಾರದ ಕೆಲಸವನ್ನು ಯಾರೂ ತಡೆಯ ಲಾರರು ಎಂದು ಹೇಳಿದ್ದರು. ಭಾರತದ ಮೇಲೆ ವಿದೇಶೀ ದಾಳಿಕೋರರು ಹಾಗೂ ವಸಾಹತುಶಾಹಿಗಳು ಹೇಗೆ ಆಕ್ರಮಣಗಳನ್ನು ನಡೆಸಿದ್ದರೋ ಅದೇ ರೀತಿ ಭಾರತದ ಇತಿಹಾಸದ ಮೇಲೂ ಆಕ್ರಮಣ ಎಸಗಲಾಗಿದೆ.
ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷ್ ಪ್ರಾಯೋಜಿತ ಇತಿಹಾಸಕಾರರು ಹಾಗೂ ಸ್ವಾತಂತ್ರ್ಯಾ ನಂತರದ ಕಮ್ಯುನಿಸ್ಟ್ ವಿಚಾರಧಾರೆ ಗಳಿಂದ ಪ್ರೇರಿತ ಇತಿಹಾಸಕಾರರು ಭಾರತದ ಚರಿತ್ರೆಯನ್ನು ವಿಕೃತಗೊಳಿಸಿದರು. ಇತರ ದೇಶಗಳ ಜನರು ತಮ್ಮದೇ ದೇಶದ ಚರಿತ್ರೆ ಕಾರರು ಬರೆದ ಇತಿಹಾಸವನ್ನು ಓದಿದರೆ, ಭಾರತೀಯರು ಮಾತ್ರ ವಿದೇಶಿಗಳು ಹಾಗೂ ಆಕ್ರಮಣಕಾರರು ಬರೆದ ಇತಿಹಾಸವನ್ನು ಅಭ್ಯಸಿಸಬೇಕಾದ ಪರಿಸ್ಥಿತಿ ಇದೆ ಎಂದು ಕಮಾಂಡರ ಜನರಲ್ ಜಿ ಡಿ ಭಕ್ಷಿಯವರು ಹೇಳಿರುವುದು ಸತ್ಯಕ್ಕೆ ದೂರವಾದ ಮಾತಲ್ಲ.
ವ್ಯಕ್ತಿಯೊಬ್ಬನ ಜೀವನದಲ್ಲಿ ಚಾರಿತ್ರ್ಯ ಎನ್ನುವುದು ಎಷ್ಟು ಪ್ರಮುಖವೋ ಅದೇ ರೀತಿ ದೇಶದ ಮಟ್ಟಿಗೆ ಸತ್ಯ ಹಾಗೂ ವಸ್ತುನಿಷ್ಠ ಚರಿತ್ರೆಯೂ ಮುಖ್ಯವಾಗಿದೆ. ಭಾರತದ ಇತಿಹಾಸದ ತಿರುಚುವಿಕೆ ಆರಂಭವಾದದ್ದು ‘ಆರ್ಯರ ಆಕ್ರಮಣ’ ಎನ್ನುವ ಸುಳ್ಳು ಸಿದ್ಧಾಂತದ ರಚನೆಯ ಮೂಲಕ. ಭಾರತವನ್ನು ಆಕ್ರಮಿಸಿ ತಮ್ಮ ಕೈವಶದಲ್ಲಿರಿಸಿಕೊಂಡ ಬ್ರಿಟಿಷರಿಗೆ ತಮ್ಮ ವಸಾಹತು ಶಾಹಿತ್ವವನ್ನು ಸಮರ್ಥಿಸಿಕೊಳ್ಳಲು ಒಂದು ಸೈದ್ಧಾಂತಿಕ ಕಾರಣ ಬೇಕಾಗಿತ್ತು.
ಅದಕ್ಕೆ ಅವರು ಆರಿಸಿಕೊಂಡದ್ದು ಫ್ರೆಡರಿಕ್ ಮ್ಯಾಕ್ಸ್ ಮುಲ್ಲರ್ ಹೆಸರಿನ ಜರ್ಮನಿ ಮೂಲದ ಒಬ್ಬ ಭಾಷಾ ಶಾಸ್ತ್ರಜ್ಞನನ್ನು.
ಈತ ಭಾರತೀಯರನ್ನು ಕ್ರೈಸ್ತರನ್ನಾಗಿ ಪರಿವರ್ತಿಸುವ ಉದ್ದೇಶದಿಂದ ಭಾರತಕ್ಕೆ ಬಂದವ. ಈತ ೧೮೬೬ರಲ್ಲಿ ಚೆವಾಲಿಯರ್
ಬುನ್ಸೆನ್ಗೆ ಬರೆದ ಪತ್ರದಲ್ಲಿ ‘ರೋಮ್ ಅಥವಾ ಗ್ರೀಸಿಗಿಂತಲೂ ಮಿಗಿಲಾಗಿ ಕ್ರೈಸ್ತಧರ್ಮವನ್ನು ಅಪ್ಪಿಕೊಳ್ಳಲು ಭಾರತವು ಹೆಚ್ಚು ಪಕ್ವವಾಗಿದ್ದು, ಅಲ್ಲಿ ಹತ್ತು ವರ್ಷಗಳ ಕಾಲ ನೆಲೆಸಿ, ಭಾರತದ ಭಾಷೆಗಳು, ಧರ್ಮಗ್ರಂಥಗಳನ್ನು ಕಲಿತು ಅವುಗಳ ಮೂಲಕವೇ ಹಿಂದೂ ಧರ್ಮವನ್ನು ನಾಶಮಾಡಿ ಅಲ್ಲಿ ಕ್ರೈಸ್ತ ಧರ್ಮವನ್ನು ಪಸರಿಸುವ ಕೆಲಸವನ್ನು ಮಾಡಲು ತಾನು ಪ್ರಾಣವನ್ನು ಕೊಡಲೂ ಸಿದ್ಧ’ ಎಂದು ಹೇಳಿದ್ದಾನೆ.
ಮ್ಯಾಕ್ಸ್ ಮುಲ್ಲರ್ಗೆ ಸಂಸ್ಕೃತ ಕಲಿಯುವಾಗ ಆ ಭಾಷೆಯ ಪ್ರಬುದ್ಧತೆ ಅರ್ಥವಾಗುತ್ತದೆ. ಆತನಿಗೆ ಸಂಸ್ಕೃತ ಭಾಷೆಯ ಪದಗಳು
ಹಾಗೂ ಲ್ಯಾಟಿನ್ ಗ್ರೀಕ್ ಭಾಷೆಗಳ ಪದಗಳ ನಡುವೆ ಸಾಮ್ಯ ಕಾಣುತ್ತದೆ. ಆತ ಭಾರತದಂತಹ ದೇಶಗಳಲ್ಲಿ ಇಂತಹ ಪ್ರಬುದ್ಧ ಭಾಷೆಯು ಉಗಮವಾಗಲು ಸಾಧ್ಯವಿಲ್ಲ ಎಂದು ಭಾವಿಸಿ ಲ್ಯಾಟಿನ್ ಹಾಗೂ ಗ್ರೀಕ್ಗಳಿಂದಲೇ ಸಂಸ್ಕೃತ ಹುಟ್ಟಿರಬೇಕೆಂದು ತರ್ಕಿಸುತ್ತಾನೆ.
ಇದಕ್ಕಾಗಿಯೇ ಮ್ಯಾಕ್ಸ್ ಮುಲ್ಲರ್, ಆರ್ಯರ ಆಕ್ರಮಣದ ಸಿದ್ಧಾಂತ ಹುಟ್ಟುಹಾಕುತ್ತಾನೆ. ಕ್ರಿ ಪೂ ೧೫೦೦ರಲ್ಲಿ ಆರ್ಯರು ಮಧ್ಯ ಏಷ್ಯಾದಿಂದ ಭಾರತಕ್ಕೆ ಬಂದರು ಎನ್ನುವ ವಾದವನ್ನು ಆತ ಹೊರಬಿಡುತ್ತಾನೆ. ಬೈಬಲ್ ಹೇಳುವ ಪ್ರಕಾರ ಭೂಮಿ ಕ್ರಿಸ್ತಪೂರ್ವ ೪೦೦೦ ವರ್ಷದ ಆಸುಪಾಸಿಗೆ ರೂಪುಗೊಂಡಿದ್ದು. ಆದರೆ ಇದಕ್ಕಿಂತಲೂ ಮೊದಲೇ ಭೂಮಿ ಇತ್ತು, ಮಾತ್ರವಲ್ಲ, ಭಾರತ
ದಲ್ಲಿ ಅತ್ಯುತ್ತಮವಾದ ನಾಗರಿಕತೆ ಇತ್ತು ಎಂದು ನಂಬಲು ಕ್ರೈಸ್ತ ಮತ ಪ್ರಚಾರಕನಾಗಿ ಭಾರತಕ್ಕೆ ಬಂದ ಮ್ಯಾಕ್ಸ್ ಮುಲ್ಲರ್ ಸಿದ್ಧನಿರಲಿಲ್ಲ. ಆದಕಾರಣ ಮಧ್ಯ ಏಷ್ಯಾ ಅಥವಾ ಯುರೋಪಿನ ಮುಂದುವರಿದ ಜನಾಂಗವಾದ ಆರ್ಯರು, ಕ್ರಿ.ಪೂ. ೧೫೦೦ರಲ್ಲಿ ರಥಗಳನ್ನೇರಿ ಹಿಮಾಲಯದ ಮೂಲಕ ಭಾರತಕ್ಕೆ ಬಂದರು ಎನ್ನುವ ಸಿದ್ಧಾಂತವನ್ನು ಆತ ಹೊಸೆದ.
ಆರ್ಯರು ಸಿಂಧೂ ನದೀ ಪಾತ್ರದ ನಾಗರಿಕರ ಮೇಲೆ ಆಕ್ರಮಣ ಮಾಡಿ ಅಲ್ಲಿ ನೆಲೆಸಿದ್ದ ದ್ರಾವಿಡರನ್ನು ದಕ್ಷಿಣಕ್ಕೆ ಓಡಿಸಿದರು ಎಂದು ಆತ ಪ್ರತಿಪಾದಿಸಿದ. ಮ್ಯಾಕ್ಸ್ ಮುಲ್ಲರ್ ನ ಆರ್ಯರ ಆಕ್ರಮಣ ಸಿದ್ಧಾಂತವನ್ನೇ ಆಧರಿಸಿ ಕ್ರೈಸ್ತ ಪಾದ್ರಿ ಬಿಷಪ್ ರಾಬರ್ಟ್ ಕಾಲ್ಡ ವೆಲ್ ಭಾರತೀಯರನ್ನು ಆರ್ಯ ಹಾಗೂ ದ್ರಾವಿಡ ಎಂಬ ವಿಭಜನೆಯ ಸಿದ್ಧಾಂತ ಜಾರಿಗೆ ತಂದ. ಹಿಂದೀ ಭಾಷೆಯನ್ನಾಡುವ ಉತ್ತರ ಭಾರತೀಯರು ಆರ್ಯ ಜನಾಂಗದವರು ಹಾಗೂ ತಮಿಳು, ಕನ್ನಡ, ಮಲಯಾಳಂ, ತೆಲುಗು ಭಾಷೆ ಗಳನ್ನು ಮಾತನಾಡುವ ದಕ್ಷಿಣ ಭಾರತೀಯರು ದ್ರಾವಿಡರು ಎನ್ನುವ ಭಾಷಾ ಧಾರಿತ ದೇಶ ಭಂಜನ ವಾದವನ್ನು ಕಾಲ್ಡ್ ವೆಲ್ ಪ್ರಚುರ ಪಡಿಸಿದ.
ಬ್ರಿಟಿಷರು ಹಾಗೂ ಕ್ರೈಸ್ತರು ಮಾತ್ರ ಹೊರಗಿನಿಂದ ಬಂದವರಲ್ಲ. ಭಾರತದಲ್ಲಿ ನೆಲೆಸಿರುವ ಜನರೂ ಹೊರಗಿನಿಂದ ಬಂದವರೇ ಎನ್ನುವ ವಾದದ ಮೂಲಕ ವಸಾಹತುವಾದವನ್ನು ಹಾಗೂ ಮತಾಂತರ ಕೃತ್ಯಗಳನ್ನು ಕಾಲ್ಡ್ ವೆಲ್ ಸಮರ್ಥಿಸಿದ. ಜಾತಿ ಪದ್ಧತಿಗಳನ್ನು ಆರ್ಯರೇ ಸೃಷ್ಟಿಸಿದರು ಎನ್ನುವುದೂ ಆತನ ವಾದವಾಗಿತ್ತು. ಡಾ ಬಿ. ಆರ್. ಅಂಬೇಡ್ಕರ್ ಸೇರಿದಂತೆ ಭಾರತದ
ವಿದ್ವಾಂಸರು ಆರ್ಯ ಆಕ್ರಮಣವನ್ನು ಸಮರ್ಥವಾಗಿಯೇ ಅಲ್ಲಗಳೆದರು. ಆರ್ಯರು ಸಿಂಧೂನದೀ ನಾಗರಿಕರ ಮೇಲೆ ಯಾವುದೇ ರೀತಿಯ ದಾಳಿ ಎಸಗಿದುದಕ್ಕೂ ಯಾವುದೇ ಆಧಾರ ಸಿಕ್ಕಿಲ್ಲ.
ಪ್ರಸಿದ್ಧ ಪುರಾತತ್ವಶಾಸ್ತ್ರಜ್ಞ ಹಾಗೂ ಇತಿಹಾಸ ತಜ್ಞರಾದ ಅಭಿಜಿತ್ ಚಾವ್ಡಾ ಹೇಳುವ ಪ್ರಕಾರ, ಸಿಂಧೂ ನದೀ ನಾಗರಿಕರನ್ನು ದಕ್ಷಿಣಕ್ಕೆ ಓಡಿಸಲಾದುದಕ್ಕೆ ಯಾವುದೇ ಆಧಾರಗಳಿಲ್ಲ. ಯುದ್ಧ ನಡೆದುದಕ್ಕೂ ಸಾಕ್ಷಿಯಿಲ್ಲ. ಆರ್ಯರು ಹರಪ್ಪಾ -ಮೊಹೆಂಜೋದಾರೋ ನಗರಗಳಿಗೆ ಬೆಂಕಿ ಹಚ್ಚಿದ್ದೇ ಹೌದಾದರೆ, ಅಲ್ಲಿ ಉತ್ಖನನದ ಸಂದರ್ಭದಲ್ಲಿ ಬೂದಿಯ ಕುರುಹುಗಳು ಸಿಗಬೇಕಿತ್ತು. ಹತ್ಯಾಕಾಂಡ ನಡೆಸಿದ್ದರೆ ಸಾಮೂಹಿಕ ದಫನ್ ನಡೆಸಿದ ಸ್ಥಳಗಳು ಸಿಗಬೇಕಿತ್ತು.
ಒಂದು ವೇಳೆ ಆರ್ಯರು ಹಿಂಸಾಚಾರ ನಡೆಸಿದ್ದರೆ ಹರಪ್ಪಾ- ಮೊಹೆಂಜೋ ದಾರೋಗಳಲ್ಲಿ ಸಿಕ್ಕ ಅಸ್ಥಿಪಂಜರಗಳಲ್ಲಿ ಖಡ್ಗ, ಈಟಿಗಳಿಂದಾದ ಗಾಯಗಳ ಕುರುಹು ಕಾಣಬೇಕಿತ್ತು ಎಂದು ಅಭಿಪ್ರಾಯ ಪಡುತ್ತಾರೆ. ದ್ರಾವಿಡರು ಸಂಸ್ಕೃತವನ್ನು ಬಳಸುತ್ತಿರಲಿಲ್ಲ ಎಂದು ಬಿಷಪ್ ಕಾಲ್ಡವೆಲ್ ಪ್ರತಿಪಾದಿಸಿದ್ದ. ಆದರೆ ತಮಿಳರ ಪ್ರಮುಖ ರಾಜರುಗಳಾದ ಚೋಳರು ತಮ್ಮ ಸಾಮ್ರಾಜ್ಯವನ್ನು ಈಗಿನ ಥಾಯ್ಲೆಂಡ್, ಇಂಡೋನೇಷ್ಯಾ, ಕಾಂಬೋಡಿಯಾಗಳಿಗೆ ವಿಸ್ತರಿಸಿರುವುದರ ಜತೆಗೆ ಅಲ್ಲಿ ಸಂಸ್ಕೃತ ವನ್ನು ಧಾರಾಳವಾಗಿ ಉಪಯೋಗಿಸಿದುದನ್ನೂ ಚಾವ್ಡಾ ಉದಾಹರಿಸಿದ್ದಾರೆ.
ಒಂದು ಕಾಲದಲ್ಲಿ ಚೋಳರ ವಶದಲ್ಲಿದ್ದ ಇಂಡೋ ನೇಷ್ಯಾದ ರಾಜಮನೆತನದ ಜನರು ಇಂದಿಗೂ ಸಂಸ್ಕೃತ ಭೂಯಿಷ್ಟವಾದ ಹೆಸರುಗಳನ್ನು ಇಟ್ಟುಕೊಳ್ಳುತ್ತಿದ್ದಾರೆ. ಅಲ್ಲಿಗೆ ಕಾಲ್ಡ್ ವೆಲ್ನ ಪ್ರತಿಪಾದನೆ ಸುಳ್ಳೆಂದು ಸಾಬೀತಾಯಿತು. ಕನ್ನಡದ ಸಂಶೋಧಕ, ವ್ಯಾಕರಣ ತಜ್ಞ ಹಾಗೂ ಸಾಹಿತಿಗಳಾಗಿದ್ದ ಸೇಡಿಯಾಪು ಕೃಷ್ಣ ಭಟ್ಟರು ತಮ್ಮ ‘ತಥ್ಯದರ್ಶನ’ ಹೆಸರಿನ ಕೃತಿಯ ಮೂಲಕ ಆರ್ಯ ಜನಾಂಗ, ಆರ್ಯ ಆಕ್ರಮಣ, ಆರ್ಯ ದ್ರಾವಿಡ ಭಿನ್ನವಾದ ಮೊದಲಾದ ಸಿದ್ಧಾಂತಗಳು ಸುಳ್ಳು ಎಂಬುದಾಗಿ ಸಮರ್ಥವಾಗಿ ಸಾಬೀತು ಪಡಿಸಿದ್ದಾರೆ.
ಈ ಮಹತ್ತರ ಕೃತಿಯನ್ನು ಸಂಸ್ಕೃತ ಹಾಗೂ ಇಂಗ್ಲಿಷ್ ಉಭಯ ಭಾಷಾ ವಿದ್ವಾಂಸರಾಗಿದ್ದ ಪಾದೇಕಲ್ಲು ನರಸಿಂಹ ಭಟ್ಟರು ಇಂಗ್ಲಿಷ್ಗೆ ‘ಡಿಸ್ಕವರಿ ಆಫ್ ಫಾಕ್ಟ್ಸ್’ ಹೆಸರಿನಲ್ಲಿ ಅನುವಾದ ಮಾಡಿದ್ದಾರೆ. ಅರೆಬರೆ ಸಂಸ್ಕೃತ ಕಲಿತಿದ್ದ ವಿದೇಶಿ ಇತಿಹಾಸಕಾರರ ಅವಾಂತರದ ಬಗ್ಗೆ ಪುಸ್ತಕದಲ್ಲಿ ಕೃಷ್ಣ ಭಟ್ಟರು ವಿವರಿಸಿzರೆ. ಆರ್ಯ, ವರ್ಣ ಮೊದಲಾದ ಪದಗಳು ರೂಪುಗೊಂಡ ಹಿನ್ನೆಲೆ ಕುರಿತಾಗಿ ಸಮರ್ಪಕ ವಿವರಣೆಗಳನ್ನು ತಥ್ಯದರ್ಶನದಲ್ಲಿ ಕೊಡಲಾಗಿದೆ.
‘ಬೀರ್ಬಲ್ ಸಹಾನಿ ಇನ್ಸ್ಟಿಟ್ಯೂಟ್ ಆಫ್ ಫಾಲಿಯೋ ಸೈನ್’ನ ಮುಖ್ಯಸ್ಥರಾದ ಡಾ. ನೀರಜ್ ರಾಯ್ ಎಲ್ಲ ಭಾರತೀಯರ ಡಿಎನ್ಎ ಬಹುತೇಕ ಹೋಲಿಕೆಯಾಗುವುದರಿಂದ ಆರ್ಯರು ಹೊರಗಿನಿಂದ ಬಂದವರು ಎನ್ನುವುದಕ್ಕೆ ಅರ್ಥವಿಲ್ಲ ಎಂದಿದ್ದಾರೆ. ಅವರು ಹರಿಯಾಣದ ರಾಖೀಗರಿಯಲ್ಲಿ ನಡೆಸಿದ ಉತ್ಖನನ ಹಾಗೂ ಸಂಶೋಧನೆಗಳೂ ಆರ್ಯರ ವಲಸೆ ಸಿದ್ಧಾಂತವನ್ನು ಸಂಪೂರ್ಣ ಸುಳ್ಳು ಎಂದು ಸಾಬೀತು ಪಡಿಸಿದೆ. ರಾಖೀಗರಿ ನಾಗರಿಕತೆಯು ಸಿಂಧೂ ನದೀ ನಾಗರಿಕತೆಯ ಮುಂದುವರಿದ ಭಾಗ. ಈ ನಗರವು ಕ್ರಿ.ಪೂ. ೨೬೦೦ ರಿಂದ ಕ್ರಿ.ಪೂ. ೧೯೦೦ ರವರೆಗಿನ ಅವಧಿಯದ್ದು. ರಾಖೀಗರಿಯಲ್ಲಿ ಉತ್ಖನನ ನಡೆಸಿದಾಗ ಸಿಕ್ಕ ಅಸ್ಥಿಪಂಜರಗಳು ಹಾಗೂ ವಸ್ತುಗಳ ವೈಜ್ಞಾನಿಕ ಅಧ್ಯಯನದಿಂದಾಗಿ ಮೂರು ಪ್ರಮುಖ ವಿಷಯಗಳು ಬೆಳಕಿಗೆ ಬಂದವು.
ಮೊದಲನೆಯದಾಗಿ ಅಲ್ಲಿ ಸಿಕ್ಕ ಎಲುಬು ಹಾಗೂ ಅಸ್ಥಿಪಂಜರಗಳ ಡಿಎನ್ಎಯು ಸಂಪೂರ್ಣವಾಗಿ ದೇಶೀಯವಾಗಿದೆ ಎಂದು
ಸಾಬೀತಾಗಿದೆ. ಅವುಗಳಲ್ಲಿ ಯಾವುದೇ ವಿದೇಶೀಯರ ಡಿಎನ್ಎ ಇಲ್ಲ. ಎರಡನೆಯದಾಗಿ ಅಲ್ಲಿ ಸಿಕ್ಕಿರುವ ಅಕ್ಕಿ ಹಾಗೂ ದವಸ ಧಾನ್ಯಗಳು. ಕ್ರಿಪೂ ೧೫೦೦ ರ ಕಾಲದಲ್ಲಿ ಭಾರತಕ್ಕೆ ಇರಾನ್ ಭಾಗದಿಂದ ಬಂದಿದ್ದ ಆರ್ಯರು ಅಕ್ಕಿ ಹಾಗೂ ದವಸ ಧಾನ್ಯಗಳನ್ನು ಭಾರತಕ್ಕೆ ಪರಿಚಯಿಸಿದರು ಎನ್ನುವ ವಾದವನ್ನು ವಿದೇಶೀ ಹಾಗೂ ಕಮ್ಯುನಿಸ್ಟ್ ಇತಿಹಾಸಕಾರರು ಹೇಳುತ್ತ ಬಂದಿದ್ದಾರೆ.
ಕ್ರಿಪೂ ೨೬೦೦ ದಷ್ಟು ಹಿಂದಿನ ನಾಗರಿಕತೆಯಾದ ರಾಖೀಗರಿಯಲ್ಲಿ ಅಂದಿನ ಕಾಲದ ಅಕ್ಕಿ ಹಾಗೂ ದವಸಧಾನ್ಯಗಳು ಲಭಿಸಿರುವುದರಿಂದ ವಿದೇಶೀ ಇತಿಹಾಸಕಾರರು ಉಹಿಸಿರುವ ಇರಾನ್ ಮೂಲದ ಕಟ್ಟುಕತೆ ಸುಳ್ಳೆಂದು ಸಾಬೀತಾಗಿದೆ. ಮೂರನೆ ಫಲಿತಾಂಶವು ಆರ್ಯರು ಭಾರತಕ್ಕೆ ಹೊರಗಿನಿಂದ ಬಂದಿದ್ದಾರೆ ಎನ್ನುವ ವಾದದ ಸುಳ್ಳನ್ನು ಬಯಲುಮಾಡಿರುವುದು ಮಾತ್ರವಲ್ಲದೆ ಭಾರತದಿಂದ ಜನರು ಕ್ರಿ ಪೂ ೨೦೦೦ ದ ಅವಧಿಯ ಹೊರ ವಲಸೆ ಹೋಗುತ್ತಿದ್ದರು ಎನ್ನುವದನ್ನೂ (ಔಟ್ ಆಫ್ ಇಂಡಿಯಾ ಸಿದ್ಧಾಂತ) ಸಾಬೀತುಪಡಿಸಿದೆ. ತುರ್ಕ್ ಮೆನಿಸ್ತಾನದ ಗೊರ್ನೂ ಡೆಪೆ ಹೆಸರಿನ ಪ್ರದೇಶದಲ್ಲಿ ಕ್ರಿ ಪೂ ೨೪೦೦ ರಿಂದ ೧೬೦೦ ವರೆಗಿನ ಕಾಲದ ನಗರವು ಉತ್ಖನನದ ಮೂಲಕ ಲಭಿಸಿದ್ದು ಅಲ್ಲಿ ಲಭಿಸಿದ ಅಸ್ಥಿಪಂಜರಗಳ ಡಿಎನ್ಎಯು ಮಧ್ಯ ಏಷ್ಯಾ ಅಥವಾ ಯುರೋಪ್ನ ಯಾವುದೇ ದೇಶಗಳಲ್ಲಿ ಲಭಿಸಿದ ಎಲುಬುಗಳ ಡಿಎನ್ಎಗೆ ಹೋಲಿಕೆಯಾಗಿರಲಿಲ್ಲ.
ಆದರೆ ರಾಖೀಗರಿಯ ಎಲುಬುಗಳ ಡಿಎನ್ಎಯ ಜತೆಗೆ ಗೊರ್ನೂ ಡಿಎನ್ಎಯು ೧೦೦% ಹೋಲಿಕೆಯಾಗಿದ್ದು ಇದು ಸಿಂಧೂ
ನಾಗರಿಕತೆಯ ಜನರೇ ಗೊರ್ನೂ ಡೆಪೆಗೂ ವಲಸೆ ಹೋಗಿದ್ದಾರೆ ಎಂಬುದನ್ನು ಸೂಚಿಸುತ್ತದೆ. ಈ ಫಲಿತಾಂಶದ ಆಧಾರ
ದಲ್ಲಿ ಭಾರತದಿಂದ ಜನರು ಹೊರ ಭಾಗಕ್ಕೆ ವಲಸೆ ಹೋಗಿದ್ದರು ಎಂಬುದನ್ನು ಅರ್ಥಮಾಡಿಕೊಳ್ಳಬಹುದು. ವೇದಗಳು ಕ್ರಿ ಪೂ ೧೫೦೦ ರ ನಂತರ ಸೃಷ್ಟಿಯಾದವು ಎನ್ನುವುದು ಹಲವರ ವಾದವಾಗಿತ್ತು. ಆದರೆ ಋಗ್ವೇದದ ನದಿಸ್ತುತಿ ಸೂಕ್ತದಲ್ಲಿ ಗಂಗಾ, ಯಮುನಾ ಸರಸ್ವತಿ, ಶುತುದ್ರಿ(ಸಟ್ಲೆಜ್), ಪರುಷ್ಣಿ(ಇರಾವತಿ), ಅಸಿಕ್ನಿ(ಚೆನಾಬ) ಮೊದಲಾದ ೧೦ ನದಿಗಳನ್ನು ಹೆಸರಿಸಲಾಗಿದೆ.
ಸರಸ್ವತೀ ನದಿಯನ್ನು ಹೊರತು ಪಡಿಸಿ ಈ ಎಲ್ಲ ನದಿಗಳು ಇಂದಿಗೂ ಜೀವಂತವಾಗಿವೆ. ಸರಸ್ವತೀ ನದಿಯ ಹೆಸರೂ ವೇದಗಳಲ್ಲಿ ಇದ್ದಿರಬೇಕಾದರೆ ವೇದಗಳು ಸೃಷ್ಟಿಯಾದ ಕಾಲದಲ್ಲಿ ಸರಸ್ವತೀ ನದಿಯೂ ಜೀವಂತವಾಗಿ ಇದ್ದಿರಲೇಬೇಕು. ನಾಸಾ ಹಾಗೂ ಇಸ್ರೋ ಉಪಗ್ರಹಗಳು ಕಳುಹಿಸಿರುವ ಮಾಹಿತಿ ಪ್ರಕಾರ ಸರಸ್ವತೀ ನದಿಯು ೬೦೦೦ ವರ್ಷಗಳ ಮೊದಲೇ ಬತ್ತಿ ಹೋಗಿದೆ.
ಇದರಿಂದಾಗಿ ವೇದಗಳು ಸರಸ್ವತೀ ನದಿಯು ಜೀವಂತವಿರುವಾಗಲೇ ಅಂದರೆ ಕ್ರಿಪೂ ೪೦೦೦ಕ್ಕೂ ಮೊದಲು ಸೃಷ್ಟಿಯಾಗಿ
ದ್ದವು ಎಂದಾಯಿತು. ಆರ್ಯರು ಮಧ್ಯ ಏಷ್ಯಾದಿಂದ ಬಂದವರಾಗಿದ್ದರೆ ಅವರು ರಚಿಸಿದ ಮಂತ್ರಗಳಲ್ಲಿ ಮಧ್ಯ ಏಷ್ಯಾದ
ನದಿಗಳ ವಿವರಣೆ ಇರಬೇಕಿತ್ತು. ವೇದಗಳಲ್ಲಿ ಭಾರತದ ನದಿಗಳ ಬಗ್ಗೆ ಮಾತ್ರ ಪ್ರಸ್ತಾಪನೆ ಇವೆ. ಇದರಿಂದಾಗಿ ಆರ್ಯರು ಕ್ರಿ ಪೂ ೧೫೦೦ರಲ್ಲಿ ಭಾರತಕ್ಕೆ ಹೊರಗಿನಿಂದ ಬಂದರು ಹಾಗೂ ನಂತರವಷ್ಟೇ ವೇದಗಳು ಸೃಷ್ಟಿಯಾದವು ಎನ್ನುವ ಮ್ಯಾಕ್ಸ್ ಮುಲ್ಲರನ ವಾದವು ಸುಳ್ಳು ಎಂದು ಸಾಬೀತಾಗುತ್ತದೆ.
ಸರಸ್ವತೀ ನದಿಯ ತಟಗಳಲ್ಲಿ ವಾಸಿಸುತ್ತಿದ್ದ ಜನರೇ ಸಿಂಧೂ ಅಥವಾ ಸರಸ್ವತೀ ನಾಗರಿಕರು ಎಂದು ನಿವೃತ್ತ ಕಮಾಂಡರ್
ಜನರಲ್ ಜಿ ಡಿ ಭಕ್ಷಿಯವರು ತಮ್ಮ ಪುಸ್ತಕವಾದ ‘ದ ಸರಸ್ವತೀ ಸಿವಿಲೈಸೇಶನ್: ಎ ಪಾರಾಡೈಮ್ ಶಿಫ್ಟ್ ಇನ್ ಏನ್ಷಿಯೆಂಟ್ ಇಂಡಿಯನ್ ಹಿಸ್ಟರಿ’ ಪುಸ್ತಕದಲ್ಲಿ ವಿವರಿಸಿದ್ದಾರೆ. ದೇಶದ ಅಖಂಡತೆಯನ್ನು ಉಳಿಸಿಕೊಳ್ಳಬೇಕಾದರೆ ಸರಕಾರವು ತಿರುಚಲಾದ ಇತಿಹಾಸವನ್ನು ಸರಿಪಡಿಸಲೇಬೇಕು. ಇದರ ಮೊದಲ ಹಂತವಾಗಿ ಸರಕಾರವು ಆರ್ಯ ಆಕ್ರಮಣ, ಆರ್ಯ ವಲಸೆ, ಆರ್ಯ ದ್ರಾವಿಡ ಭೇದ ಕಲ್ಪನೆ ಮೊದಲಾದ ವಿಭಾಜಕ ಸಿದ್ಧಾಂತಗಳನ್ನು ಸಾರುವ ಪುಸ್ತಕಗಳನ್ನು, ಪಠ್ಯಗಳನ್ನು ಸಾರ್ವಜನಿಕ ಲಭ್ಯತೆ ಯಿಂದ ಹೊರಗಿಡಬೇಕು.