ತುಮಕೂರು: ರಾಜ್ಯ ಒಕ್ಕಲಿಗರ ಸಂಘದವತಿಯಿಂದ ನಗರದ ಬಡ್ಡಿಹಳ್ಳಿ ಮುಖ್ಯರಸ್ತೆಯಲ್ಲಿ ನಿರ್ಮಿಸಿರುವ ಉಚಿತ ವಿದ್ಯಾರ್ಥಿ ನಿಲಯ ಹಾಗೂ ಸಮುದಾಯ ಭವನದ ಉದ್ಘಾಟನಾ ಸಮಾರಂಭ ಡಿಸೆಂಬರ್ 12 ರಂದು ನಡೆಯಲಿದೆ ಎಂದು ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಹನುಮಂತರಾಯಪ್ಪ ಆರ್. ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಸುಮಾರು 200 ಗಂಡು ಮಕ್ಕಳು ಉಳಿದು ಕೊಳ್ಳಬಹುದಾದ ಹಾಸ್ಟಲ್ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬೇಕಾದ ತರಬೇತಿ ನೀಡಬಹುದಾದ ಕಟ್ಟಡ ಸೇರಿದಂತೆ ಸುಮಾರು 7 ಕೋಟಿ ರೂಗಳನ್ನು ವ್ಯಯಿಸಿ ಹಾಸ್ಟಲ್ ಮತ್ತು ಸಮುದಾಯ ಭವನ ನಿರ್ಮಿಸಲಾಗಿದೆ.ಸರಕಾರದ ಅನುದಾನವಿಲ್ಲದೆ ಕೇಂದ್ರ ಸಂಘದ ಅನುದಾನದಲ್ಲಿಯೇ ಕಟ್ಟಡ ನಿರ್ಮಾಣ ಮಾಡಲಾಗಿದೆ.ಉದ್ಘಾಟನೆಯಾದ ದಿನದಿಂದಲೇ ಪಿಯುಸಿ, ಡಿಗ್ರಿ,ವೃತ್ತಿಪರ ಕೋರ್ಸುಗಳಿಗೆ ಪ್ರವೇಶ ಪಡೆದ ವರು ಅರ್ಜಿ ಸಲ್ಲಿಸಿ ಉಚಿತ ವಿದ್ಯಾರ್ಥಿ ನಿಯಲದ ಪ್ರವೇಶ ಪಡೆಯಬಹುದು ಎಂದರು.
ತುಮಕೂರು ನಗರ ಒಕ್ಕಲಿಗರ ಸಂಘದಲ್ಲಿರುವ ಭಿನ್ನಾಭಿಪ್ರಾಯಗಳನ್ನು ಶಮನ ಮಾಡಲು ಎಲ್ಲಾ ರೀತಿಯ ಪ್ರಯತ್ನ ನಡೆಸಲಾಗಿದೆ.ಸರಕಾರ ಈಗಾಗಲೇ ಆಡಳಿತಾಧಿಕಾರಿಗಳನ್ನು ನೇಮಕ ಮಾಡಿ,ಚುನಾವಣೆಗೆ ಅಧಿಸೂಚನೆ ಹೊರಡಿಸಿದೆ. ಚುನಾವಣೆ ಮುಗಿದ ನಂತರ ಎಂ.ಜಿ.ರಸ್ತೆಯ ಕಟ್ಟಡ ಸೇರಿದಂತೆ ಎಲ್ಲವನ್ನು ಲೋಕಾರ್ಪಣೆಗೊಳಿಸಲು ಅಗತ್ಯಕ್ರಮ ವನ್ನು ಸಂಬಂಧಪಟ್ಟವರೊಂದಿಗೆ ಮಾತನಾಡಿ ಕೈಗೊಳ್ಳುವುದಾಗಿ ಹನುಮಂತರಾಯಪ್ಪ ಭರವಸೆ ನೀಡಿದರು.
ವಿದ್ಯಾರ್ಥಿ ನಿಲಯ ಹಾಗೂ ಸಮುದಾಯ ಭವನ ಉದ್ಘಾಟನೆಯ ಜೊತೆಗೆ, ಪ್ರತಿಭಾಪುರಸ್ಕಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳ ಲಾಗಿದೆ. 2022ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿಶೇ 95 ಮತ್ತು ದ್ವಿತೀಯ ಪಿಯು ಪರೀಕ್ಷೆಯಲ್ಲಿ ಶೇ90ರಷ್ಟು ಅಂಕ ಪಡೆದ ಸಮುದಾಯದ ಮಕ್ಕಳನ್ನು ಗೌರವಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ವಿಜಯಕುಮಾರ್,ಹನುಮಂತು, ಶ್ರೀನಿವಾಸ್,ಗಿರೀಶ್, ಕೃಷ್ಣಮೂರ್ತಿ, ರಮೇಶ್‌ಬಾಬು, ಶಂಕರ್,ಶ್ರೀಧರ್ ಮತ್ತಿತರರು ಉಪಸ್ಥಿತರಿದ್ದರು.