ವೀಕೆಂಡ್ ವಿತ್ ಮೋಹನ್
camohanbn@gmail.com
ಡಿಸೆಂಬರ್ ಬಂತೆಂದರೆ ಸಾಕು, ಕ್ರಿಸ್‌ಮಸ್ ಹಬ್ಬದ ಸಂಭ್ರಮಕ್ಕೆ ಅಣಿಯಾಗುತ್ತದೆ ಜಗತ್ತು. ಪಾಶ್ಚಿಮಾತ್ಯ ದೇಶಗಳಲ್ಲಂತೂ ಯೇಸು ಕ್ರಿಸ್ತನ ಹುಟ್ಟುಹಬ್ಬ ಆಚರಿಸಲು ಕಾತರದಿಂದ ಜನ ಕಾಯುತ್ತಿರುತ್ತಾರೆ.
ಬಹುತೇಕ ಕಂಪೆನಿಗಳು ಕ್ರಿಸ್ಮಸ್ ಹಬ್ಬಕ್ಕೆಂದು ವರ್ಷದ ಕೊನೆಯಲ್ಲಿ ತಮ್ಮ ನೌಕರರಿಗೆ ವಾರಗಟ್ಟಲೆ ರಜೆ ನೀಡುತ್ತವೆ. ನೌಕರರು ತಮ್ಮ ಕೆಲಸಗಳನ್ನು ಬೇಗನೆ ಮುಗಿಸಿ ಕ್ರಿಸ್ಮಸ್ ರಜಕ್ಕಾಗಿ ಕಾಯುತ್ತಿರುತ್ತಾರೆ. ಪಾಶ್ಚಿಮಾತ್ಯರು ಯಾವ ಕೆಲಸ ಸರಿಯಾಗಿ ಮಾಡುತ್ತಾರೋ ಇಲ್ಲವೋ ಗೊತ್ತಿಲ್ಲ, ಆದರೆ ತಮ್ಮ ಧರ್ಮದ ಆಚರಣೆಗಳ ಬಗ್ಗೆ ಪ್ರಚಾರವನ್ನಂತೂ ಬಹಳ ಚೆನ್ನಾಗಿ ಮಾಡುತ್ತಾರೆ. ಕ್ರಿಸ್ಮಸ್ ವಿಷಯದಲ್ಲೂ ಅಷ್ಟೇ, ಅವರು ಮಾಡಿದ ಪ್ರಚಾರ ಅದ್ಯಾವ ಮಟ್ಟಕ್ಕೆ ಜಗತ್ತನ್ನು ತಲುಪಿದೆ ಯೆಂದರೆ ಅವರ ಪ್ರಚಾರ ಪ್ರಕ್ರಿಯೆಗಳನ್ನು ಕಂಡು ಬೆಕ್ಕಸ ಬೆರಗಾಗಿ ಇತರ ಧರ್ಮದವರೂ ಕ್ರಿಸ್ಮಸ್ ಆಚರಿಸುವ ಮನಸ್ಥಿತಿಗೆ
ತಲುಪಿದ್ದಾರೆ.
ಭಾರತದಲ್ಲಂತೂ ಬ್ರಿಟಿಷರ ಅಡಿಪಾಯ ಇನ್ನೂ ಗಟ್ಟಿಯಾಗಿದೆ. ತಾವು ದೇಶ ಬಿಟ್ಟ ಮೇಲೂ ತಮ್ಮ ಆಚರಣೆಗಳು ಭಾರತೀಯರಲ್ಲಿ ಜೀವಂತ ಇರಬೇಕೆಂಬ ದುರಾಲೋಚನೆ ಆಂಗ್ಲರದ್ದಾಗಿತ್ತು. ಅವರ ಪ್ರಚಾರದ ಮೊದಲ ಟಾರ್ಗೆಟ್ ಮತ್ತದೇ ಶಿಕ್ಷಣ ಸಂಸ್ಥೆಗಳು. ಅದಕ್ಕಾಗಿಯೇ ಶಾಲೆಗಳಲ್ಲಿ ‘ಕ್ರಿಸ್ಮಸ್ ರಜೆ’ಯ ಪರಿಕಲ್ಪನೆ ತಂದರು.
ಇಂದಿಗೂ ಬಹುತೇಕ ಶಾಲೆಗಳಲ್ಲಿ ಕ್ರಿಸ್ಮಸ್ ಬಂತೆಂದರೆ ‘ಸಾಂಟಾ ಕ್ಲಾಸ್’ನ ಉಡುಗೆಯನ್ನು ತೊಟ್ಟ ವೇಷಧಾರಿ ಮಕ್ಕಳಿಗೆ ಉಡುಗರೆಗಳನ್ನು ನೀಡಲು ಬರುತ್ತಾನೆಂಬ ಪರಿಕಲ್ಪನೆಯನ್ನು ಮಕ್ಕಳ ತಲೆಗೆ ತುಂಬಲಾಗುತ್ತದೆ. ಪ್ರತಿ ವರ್ಷವೂ ಮಕ್ಕಳು ಸಾಂಟಾನಿಗಾಗಿ ಕ್ರಿಸ್ಮಸ್ ಹಬ್ಬದಂದು ಕಾಯುವ ಪರಿಸ್ಥಿತಿಯನ್ನು ನಿರ್ಮಾಣ ಮಾಡಲಾಗುತ್ತದೆ. ಗೋಕುಲಾಷ್ಟಮಿಯಂದು ಶ್ರೀಕೃಷ್ಣನನ್ನು ಪೂಜಿಸಿ ಅವನ ಬಾಲ್ಯದ ತುಂಟಾಟವನ್ನು ಮಕ್ಕಳಿಗೆ ತಿಳಿಸುವ ಕೆಲಸವನ್ನು ಕೇವಲ ಬೆರಳೆಣಿಕೆಯಷ್ಟು ಶಾಲೆಗಳಷ್ಟೇ ಮಾಡುತ್ತವೆ. ಹಿಂದೂ ಶಾಲೆಗಳಲ್ಲಿ ಕ್ರಿಸ್ಮಸ್ ಆಚರಣೆ ಮಾಡಿದರೆ ಜಾತ್ಯತೀತತೆ ಎದ್ದು ಕಾಣುತ್ತದೆ.
ಆದರೆ, ಕ್ರಿಶ್ಚಿಯನ್ ಮಿಷನರಿಗಳು ನಡೆಸುವ ಶಾಲೆಗಳಲ್ಲಿ ಗೋಕುಲಾಷ್ಟಮಿ ಆಚರಿಸಿಯೆಂದರೆ ಕೋಮುವಾದವಾಗಿ ಬಿಡುತ್ತದೆ. ಪ್ರಚಾರಕ್ಕಾಗಿ ಪಾಶ್ಚಿಮಾತ್ಯರು ಬಳಸುವ ವಿಭಿನ್ನ ತಂತ್ರಗಾರಿಕೆ ಅಷ್ಟು ಸುಲಭವಾಗಿ ಜನಸಾಮಾನ್ಯರಿಗೆ ಅರ್ಥವಾಗುವುದಿಲ್ಲ. ಉದಾಹರಣೆಗೆ ಇಟಲಿಯ ರೈತರು ಹೊಲದಿಂದ ಸಂಜೆ ಮನೆಗೆ ಬಂದ ನಂತರ ಮನೆಯಲ್ಲಿರುತ್ತಿದ್ದ
ಅಲ್ಪ ಸ್ವಲ್ಪ ತರಕಾರಿಗಳನ್ನು ಹಿಟ್ಟಿನೊಂದಿಗೆ ಬೆರಸಿ ಬೇಯಿಸ್ಕೊಂಡು ತಿನ್ನುತ್ತಿದ್ದರು. ಅಮೆರಿಕಾದ ಪ್ರಜೆಯೊಬ್ಬನಿಗೆ ಈ
ಖಾದ್ಯ ಇಷ್ಟವಾಯಿತು, ರೈತನ ಖಾದ್ಯಕ್ಕೆ ಇನ್ನಷ್ಟು ಪದಾರ್ಥಗಳನ್ನು ಸೇರಿಸಿ ‘ಪಿಜ್ಜಾ’ಎಂದು ಕರೆದ.
ನಂತರ ಇದೆ ಪಿಜ್ಜಾ ತಿಂಡಿಯನ್ನು ಚಿತ್ರ ವಿಚಿತ್ರವಾಗಿ ತಯಾರಿಸಿ, ನೋಡನೋಡುತ್ತಲೇ ಇಡೀ ಜಗತ್ತಿಗೇ ತಲುಪಿಸಿಬಿಟ್ಟರು. ಇದರ ಪ್ರಚಾರ ಯಾವ ಮಟ್ಟಕ್ಕಿತ್ತೆಂದರೆ ಇಂದಿಗೂ ಹಲವರಿಗೆ ಪಿಜ್ಜಾ ಎಂದರೆ ಅಮೆರಿಕದ ಖಾದ್ಯವೆಂದುಕೊಂಡಿದ್ದಾರೆ.
ಕ್ರಿಸ್ಮಸ್ ಹಬ್ಬವನ್ನೂ ಇದೇ ಮಾದರಿಯಲ್ಲಿ ಭಾರತದಾದ್ಯಂತ ಪ್ರಚರಿಸುವುದರಲ್ಲಿ ಮಿಷನರಿಗಳು ಯಶಸ್ವಿಯಾಗಿವೆ.
ಕ್ರಿಸ್ಮಸ್ ಬಂತೆಂದರೆ ಸಾಕು ಕನಿಷ್ಠ ಪಕ್ಷ ಮನೆಗೊಂದು ‘ಕೇಕ್’ ತಂದು ಕತ್ತರಿಸಿ ತಿನ್ನಬೇಕೆಂಬ ಮನಃಸ್ಥಿತಿ ಬಹುತೇಕ ಭಾರತೀ ಯರಲ್ಲಿ ಬಂದುಬಿಟ್ಟಿದೆ.
ಕಾರಣ ಕ್ರಿಸ್ತನ ಹುಟ್ಟಿದ ಹಬ್ಬಕ್ಕಲ್ಲ, ಆದರೆ ಕ್ರಿಸ್ಮಸ್ ಹಬ್ಬದ ಸಮಯದಲ್ಲಿ ಮಾರುಕಟ್ಟೆಯಲ್ಲಿ ಸಿಗುವ ವಿವಿಧ ಬಗೆಯ ಕೇಕು ಗಳಿಗಾಗಿ. ಕ್ರಿಸ್ಮಸ್ ಕೇಕುಗಳು ಸಹ ಪ್ರಚಾರದ ಅಸಗಳೇ. ಇಡೀ ಜಗತ್ತೇ ಯೇಸು ಕ್ರಿಸ್ತನ ಹುಟ್ಟುಹಬ್ಬವನ್ನು ಆಚರಿಸುತ್ತಿದೆ ಯೆಂಬ ಸಂದೇಶ ರವಾನೆ ಯಾಗಬೇಕಷ್ಟೆ. ಕಳೆದ ಒಂದು ಶತಮಾನದಲ್ಲಿ ಸುಮಾರು ೧೦೦ ಕೋಟಿಗೂ ಅಧಿಕ ‘ಗಿಡಿಯನ್ ಬೈಬಲ’ಗಳನ್ನು ಜಗತ್ತಿನ ನಾನಾ ದೇಶಗಳಲ್ಲಿನ ಹೋಟೆಲುಗಳ ಕೊಠಡಿಗಳಲ್ಲಿ ಇರಿಸಿ ಧರ್ಮ ಪ್ರಚಾರ ಮಾಡುವ ಕೆಲಸ ನಡೆದಿದೆ.
ಪಾಶ್ಚಿಮಾತ್ಯ ದೇಶದಲ್ಲಿ ನೆಲೆಸಿರುವ ಹಲವು ಅನಿವಾಸಿ ಭಾರತೀಯರ ಪರಿಸ್ಥಿತಿ ಇನ್ನೂ ವಿಚಿತ್ರ. ತಮ್ಮ ಮಕ್ಕಳಿಗೆ ‘ಮಹಾಲಯ ಅಮಾವಾಸ್ಯೆ’ಯ ಮಹತ್ವವನ್ನು ಹೇಳಿಕೊಡುತ್ತಾರೋ ಇಲ್ಲವೋ ಗೊತ್ತಿಲ್ಲ, ಆದರೆ ಅದೇ ಪಕ್ಷ ಮಾಸದ
ಸಂದರ್ಭದಲ್ಲಿ ಪಾಶ್ಚಿಮಾತ್ಯರು ಆಚರಿಸುವ ದೆವ್ವಗಳ ಹಬ್ಬ ‘ಹಾಲೋವಿನ್’ ಬಗ್ಗೆ ಹೇಳಿಕೊಡುತ್ತಾರೆ. ದೆವ್ವಗಳ ವೇಷ
ತೊಡಿಸಿ ಮಕ್ಕಳನ್ನು ಕುಣಿಸಿ ಅವರ ತಲೆಯಲ್ಲಿ ಪಾಶ್ಚಿಮಾತ್ಯರ ಸಂಸ್ಕೃತಿಯನ್ನು ತುಂಬುತ್ತಾರೆ. ಪ್ರತಿವರ್ಷ ಏನು ನೆನಪಿಲ್ಲ
ದಿದ್ದರೂ ‘ಹಾಲೋವಿನ್’ ಮತ್ತು ‘ಕ್ರಿಸ್ಮಸ್’ ಮಕ್ಕಳಿಗೆ ನೆನಪಿರುತ್ತದೆ.
ದುರ್ಬಲ ಮನಃಸ್ಥಿತಿಯನ್ನು ಕರಾರುವಾಕ್ಕಾಗಿ ಅರ್ಥ ಮಾಡಿಕೊಂಡು ಮನಸ್ಸಿನಲ್ಲಿ ಉಳಿಯುವಂತೆ ಪ್ರಚಾರ ಮಾಡುವ ಕಲೆ ಪಾಶ್ಚಿಮಾತ್ಯರಿಗೆ ಕರಗತ. ಇಂದಿಗೂ ಭಾರತೀಯರು ಬಿಳಿ ಚರ್ಮದವರನ್ನು ಕಂಡರೆ ಮಂಗಳ ಗ್ರಹದಿಂದ ಇಳಿದು ಬಂದವನಂತೆ ನೋಡುತ್ತಾರೆ,ಅವರು ಅತೀ ಬುದ್ದಿವಂತರೆಂಬ ಮನೋಭಾವ ನಮ್ಮವರಲ್ಲಿ ಇನ್ನೂ ತೊಲಗಿಲ್ಲ. ಕ್ರಿಸ್ಮಸ್ ಬಂತೆಂದರೆ ಪ್ರತಿಷ್ಠಿತ ಮಾಲ್‌ಗಳು ಕೋಟಿಗಟ್ಟಲೆ ಹಣವನ್ನು ದೀಪಾಲಂಕಾರಕ್ಕಾಗಿ ವ್ಯಯಿಸುತ್ತವೆ. ನಾನಾ ಬಗೆಯ ಖಾದ್ಯಗಳು, ಚಿತ್ತಾರದ ಕ್ರಿಸ್ಮಸ್ ಆಟಿಕೆಗಳು, ಬಣ್ಣ ಬಣ್ಣದ ಆಟಿಕೆಗಳು, ಕ್ರಿಸ್ಮಸ್ ಮರಗಳು ಪ್ರತಿಯೊಂದು ಮಾಲ್‌ಗಳಲ್ಲಿ ಕಾಣಸಿಗುತ್ತವೆ.
ಇದೇ ಮಾಲ್‌ಗಳು ದಸರಾ ಹಬ್ಬ ಬಂತೆಂದರೆ ಒಂದು ಆನೆಯ ಬೊಂಬೆಯನ್ನಿಟ್ಟು ಅಲಂಕಾರಗೊಳಿಸುವ ಗೋಜಿಗೆ ಹೋಗುವುದಿಲ್ಲ. ನಾಡದೇವತೆ ಚಾಮುಂಡೇಶ್ವರಿಯ ವಿಗ್ರಹವಿಟ್ಟು ಪೂಜೆಮಾಡುವುದಿಲ್ಲ. ವಿಪರ್ಯಾಸವೆಂದರೆ ಬಹುತೇಕ ಮಾಲುಗಳ ಮಾಲೀಕರು ಹಿಂದೂಗಳು, ಜನರನ್ನು ಆಕರ್ಷಿಸಲು ಮಾತ್ರ ಇವರುಗಳು ಬಳಸಿಕೊಳ್ಳುವುದೂ ಕ್ರಿಸ್ಮಸ್ ಹಬ್ಬವನ್ನು. ಕ್ರಿಸ್ಮಸ್ ಪ್ರಚಾರಕ ‘ಸಾಂಟಾ ಕ್ಲಾಸ್’ ವೇಷಧಾರಿಯನ್ನು ಮಕ್ಕಳಿಗೆ ತೋರಿಸಿ, ಉಡುಗೊರೆಗಳನ್ನು ನೀಡಿ ಆಕರ್ಷಿಸಲಾಗುತ್ತದೆ.
ಮೂರನೇ ಶತಮಾನದಲ್ಲಿ ಯೇಸು ಕ್ರಿಸ್ತನ ಅನುಯಾಯಿಯಾಗಿದ್ದ ಈತನನ್ನು, ಯೇಸು ಕ್ರಿಸ್ತನ ಹುಟ್ಟುಹಬ್ಬದಂದು ಮಕ್ಕಳಿಗೆ
ಆಟವಾಡಿಸಲು ಬರುವ ತಾತನಂತೆ ಬಿಂಬಿಸಲಾಗಿದೆ. ಕ್ರಿಶ್ಚಿಯನ್ ಧರ್ಮದವರು ತಮ್ಮ ಆಚರಣೆಗಳಲ್ಲಿ ಈತನಿಗೆ ನೀಡಿರುವ ಸ್ಥಾನವನ್ನು ಗೌರವಿಸಲೇಬೇಕು. ಆದರೆ ಹಿಂದೂಗಳು ಕ್ರಿಸ್ಮಸ್ ಹಬ್ಬದ ಸಂದರ್ಭದಲ್ಲಿ ತಮ್ಮ ಮಕ್ಕಳಿಗೆ ಸಾಂಟಾ ಕ್ಲಾಸ್‌ನ ಬಗ್ಗೆ ತಲೆಗೆ ತುಂಬುವಷ್ಟು ಕ್ರಿಶ್ಚಿಯನ್ನರೂ ತಮ್ಮ ಮನೆಗಳಲ್ಲಿ ತಮ್ಮ ಮಕ್ಕಳಿಗೆ ಹೇಳಿಕೊಡುವುದಿಲ್ಲ.
‘ಹೊಟ್ಟೆಗೆ ಹಿಟ್ಟಿಲ್ಲವೆಂದರೂ ಜುಟ್ಟಿಗೆ ಮಲ್ಲಿಗೆ ಹೂವು’ ಎಂಬ ಗಾದೆ ಮಾತಿದೆ. ಈ ಮಾತಿನಂತೆ ಹಿಂದೂಗಳು ತಮ್ಮ
ಧರ್ಮದ ಆಚರಣೆಗಳನ್ನು ಗಾಳಿಗೆ ತೂರಿಯಾದರೂ ಸರಿ ಕ್ರಿಸ್ಮಸ್ ಹಬ್ಬವನ್ನು ಆಚರಿಸುತ್ತಾರೆ. ತಮ್ಮ ಮಕ್ಕಳಿಗೆ ಸಾಂಟಾ
ಕ್ಲಾಸ್‌ನ ವೇಷ ಧರಿಸಿ ಶಾಲೆಗೇ ಕಳುಹಿಸುವುದು, ತಮ್ಮ ವಾಟ್ಸಪ್ ಸ್ಟೇಟಸ್‌ಗಳಲ್ಲಿ ಮಕ್ಕಳ ಕ್ರಿಸ್ಮಸ್ ಫೋಟೋಗಳನ್ನು
ಹಾಕಿ ಸಂಭ್ರಮಿಸುವುದು, ಕ್ರಿಸ್ಮಸ್ ಹೆಸರಿನಲ್ಲಿ ಪಾರ್ಟಿ ಮಾಡುವುದು, ತಮ್ಮ ಸ್ನೇಹಿತರಿಗೆ ಉಡುಗೊರೆಗಳನ್ನು ನೀಡುವುದು…ಇತ್ಯಾದಿ. ಈ ಮದ್ಯೆ ‘ಸೀಕ್ರೆಟ್ ಸಾಂಟಾ’ಎಂಬ ಒಂದು ಆಟವನ್ನು ಬಹುತೇಕ ಹಿಂದೂಗಳು ಕ್ರಿಸ್ಮಸ್ ಸಂದರ್ಭದಲ್ಲಿ ಆಡುತ್ತಾರೆ.
ವರಮಹಾಲಕ್ಷಿ ಹಬ್ಬದಂದು ಅರಿಶಿನ ಕುಂಕುಮಕ್ಕೆಂದು ಮನೆಗೆ ಬರುವ ಹೆಣ್ಣು ಮಕ್ಕಳಿಗೆ ನೀಡುವ ಉಡುಗೊರೆಯ ಬೆಲೆಯ ಬಗ್ಗೆ ಬಹಳ ಚಿಂತೆ ಮಾಡುವವರು ಕ್ರಿಸ್ಮಸ್ ಹಬ್ಬದ ಉಡುಗೊರೆಯ ಬೆಲೆಯ ಬಗ್ಗೆ ಚಿಂತಿಸುವುದೇ ಇಲ್ಲ. ‘ಜಿಂಗಲ್ ಬೆಲ್ಸ್’ ಹಾಡು ಯಾರಿಗೆ ತಾನೇ ತಿಳಿದಿಲ್ಲ? ಕ್ರಿಸ್ಮಸ್ ಹಬ್ಬದ ಸಂದರ್ಭದಲ್ಲಿ ಬಹುತೇಕ ಶಾಲೆಗಳಲ್ಲಿ ಈ ಹಾಡಿನದ್ದೇ ಪಾರುಪತ್ಯ. ಸಣ್ಣ ಮಕ್ಕಳಿಗೆ ದೇವರನಾಮ ಕಲಿಸುವ ಮುನ್ನ ಈ ಹಾಡು ಕಲಿಸಲಾಗುತ್ತದೆ. ಆಟವಾಡಲು ತರುವ ಆಟಿಕೆಗಳಲ್ಲಿ ಮೊದಲು ಕೇಳಸಿಗುವ ಹಾಡಿದು. ಪುಟ್ಟ ಹೆಜ್ಜೆ ಇಡುವ ಸಣ್ಣ ಕಂದಮ್ಮಗಳ ತಲೆಯಲ್ಲಿ ಈ ಹಾಡು ಕೂತುಬಿಡುತ್ತದೆ. ಅಷ್ಟರ ಮಟ್ಟಿಗಿನ ಪ್ರಚಾರ ಪಾಶ್ಚಿಮಾತ್ಯರದ್ದು.
ಬಹುತೇಕ ಆಟಿಕೆಗಳ ಚಿಪ್‌ಗಳಲ್ಲಿ ಈ ಹಾಡು ಇದ್ದೇ ಇರುತ್ತದೆ. ನಮ್ಮವರಿಗೆ ಇದರ ಅರಿವು ಕಡಿಮೆ. ಮುಂದಾಲೋಚನೆ ಯಿಲ್ಲದೆ ಖರೀದಿಸಿ ಮಕ್ಕಳ ತಲೆಯಲ್ಲಿ ತುಂಬಿ ಬಿಡುತ್ತಾರೆ. ರಾತ್ರಿ ಮಲಗುವಾಗ ತಮ್ಮ ಮಕ್ಕಳಿಗೆ ‘ರಾಮ ಸ್ಕಂದಂ ಹನುಮಂತಂ’ ಸೋತ್ರವನ್ನು ಎಷ್ಟು ಹಿಂದೂಗಳು ತಮ್ಮ ಮಕ್ಕಳಿಗೆ ಹೇಳಿಕೊಟ್ಟಿದ್ದಾರೆ ? ಮಕ್ಕಳಿಗೆ ಹೇಳಿಕೊಡುವುದನ್ನು ಬಿಡಿ ಸ್ವತಃ ಅವರಿಗೇ ತಿಳಿದಿರುವುದಿಲ್ಲ. ಮಕ್ಕಳ ಆಟಿಕೆ ಗಳಲ್ಲಿ ಎಲ್ಲಿಯಾದರೂ ಹಿಂದೂ ಧರ್ಮದ ಹಾಡುಗಳನ್ನು ಕೇಳಿದ್ದೀರಾ? ಪಾಶ್ಚಿಮಾತ್ಯರು ಪ್ರಚಾರ ಮಾಡುತ್ತಾರೆ, ನಮ್ಮವರು ಅವರ ಪ್ರಚಾರದ ಬಲೆಗೆ ಬೀಳುತ್ತಾರೆ.
ಪಾಶ್ಚಿಮಾತ್ಯರ ಪ್ರಚಾರದ ಮತ್ತೊಂದು ಉದಾಹರಣೆಯೆಂದರೆ ಕಾರ್ಟೂನ್ ಪಾತ್ರಗಳು. ಮಹಾಭಾರತದ ಭೀಮನಂತೆ
‘ಹಲ್ಕ’ಎಂಬ ಪಾತ್ರವನ್ನು ಸೃಷ್ಟಿ ಮಾಡಿ ಕೇವಲ ತಿಂಗಳುಗಳಲ್ಲಿ ಜಗತ್ತಿಗೆ ತಲುಪಿಸಿಬಿಡುತ್ತಾರೆ. ನಮ್ಮವರಿಗೆ ಮಕ್ಕಳಿಗೆ ಭೀಮನ ಪರಾಕ್ರಮವನ್ನು ತಿಳಿಸಲು ಸಮಯವೇ ಇರುವುದಿಲ್ಲ. ಅಷ್ಟರಲ್ಲಿ ಹಲ್ಕನ ಬೊಂಬೆಗಳು ಮಕ್ಕಳ ಕಪಾಟಿನಲ್ಲಿರುತ್ತವೆ.
ಈತನ ಕಾರ್ಟೂನ್‌ಗಳು ಹಾಲಿವುಡ್ ಅಂಗಳದಲ್ಲಿ ರಾರಾಜಿಸುತ್ತಿರುತ್ತವೆ. ಪೋಷಕರು ಮಕ್ಕಳ ಜತೆಗೂಡಿ ಸಾವಿರಾರು
ರುಪಾಯಿ ಖರ್ಚು ಮಾಡಿ ಮಾಲ್‌ಗಳಲ್ಲಿ ಈತನ ಸಿನಿಮಾ ನೋಡಲು ಹೋಗುತ್ತಾರೆ.
ನೂರು ರೂಪಾಯಿ ಖರ್ಚು ಮಾಡಿ ಮಕ್ಕಳ ಮಹಾಭಾರತದ ಪುಸ್ತಕವೊಂದನ್ನು ಮನೆಗೆ ತಂದು ಮಕ್ಕಳಿಗೆ ಹೇಳಿ ಕೊಡುವ ಕೆಲಸ ಮಾಡುವುದಿಲ್ಲ. ಪಾಶ್ಚಿಮಾತ್ಯರ ಪ್ರಚಾರದ ಗುಂಗಿನಲ್ಲಿದ್ದ ಹಿಂದೂ ಸಮಾಜದಲ್ಲಿ ಈಗೀಗ ಬದಲಾವಣೆಗಳು ಕಾಣಿಸು ತ್ತಿವೆ. ಪ್ರಚಾರದ ಮೂಲಕ ನಮ್ಮ ಮೇಲೆ ಹೇರಲಾಗಿದ್ದ ಆಚರಣೆಗಳ ಅರಿವಾಗುತ್ತಿದೆ. ಪ್ರತಿಯೊಂದು ಸೂಕ್ಷ್ಮ ಅಂಶಗಳನ್ನೂ ಜಾಗೃತ ಹಿಂದೂ ಗಮನಿಸುತ್ತಿದ್ದಾನೆ.
ದೀಪಾವಳಿಯ ಸಂದರ್ಭದಲ್ಲಿ ಪಟಾಕಿ ಸಿಡಿಸಿದರೆ ವಾಯುಮಾಲಿನ್ಯವಾಗುತ್ತದೆಯೆಂದು ಬಾಯಿ ಬಡೆದುಕೊಳ್ಳುವವರು ಕ್ರಿಸ್ಮಸ್ ಸಮಯದಲ್ಲಿ ಪಟಾಕಿ ಸಿಡಿಸಿದಾಗ ಉಂಟಾಗುವ ವಾಯುಮಾಲಿನ್ಯದ ಬಗ್ಗೆ ತುಟಿ ಬಿಚ್ಚದಿರುವುದನ್ನು ಗಮನಿಸಲಾಗು
ತ್ತಿದೆ. ನಾಗರಪಂಚಮಿಯಂದು ಹಾವಿಗೆ ಹಾಲೆರೆಯುವ ಬದಲು ಬಡವರಿಗೆ ದಾನ ಮಾಡಿ ಎಂದು ಹೇಳಿದವನು, ಕ್ರಿಸ್ಮಸ್ ಸಮಯದಲ್ಲಿ ಉಡುಗೊರೆಗಳ ವಿಷಯದಲ್ಲಿ ತುಟಿ ಬಿಚ್ಚದಿರುವುದನ್ನೂ ಸಮಾಜ ಗಮನಿಸುತ್ತಿದೆ. ಭಾರತ ಜಾತ್ಯತೀತ ರಾಷ್ಟ್ರ ಪ್ರತಿಯೊಂದು ಧರ್ಮದವರಿಗೂ ತಮ್ಮ ಆಚರಣೆಗಳನ್ನು ಆಚರಿಸುವ ಹಕ್ಕಿದೆ. ಅವರವರ ನಂಬಿಕೆಗಳಿಗೆ ತಕ್ಕಂತೆ ಹಬ್ಬಗಳು ನಡೆಯುತ್ತದೆ. ಆದರೆ ತಮ್ಮನ್ನು ತಾವು ಜಾತ್ಯತೀತರೆಂದು ಹೇಳಿಕೊಂಡು ಹಿಂದೂ ಧರ್ಮದ ಆಚರಣೆಗಳ ಬಗ್ಗೆ ಮಾತ್ರ ಆಗಾಗ ಅಸಂಬದ್ಧ ಹೇಳಿಕೆಗಳನ್ನು ನೀಡುವವರನ್ನು ಸಮಯ ಸಿಕ್ಕಾಗಲೆಲ್ಲ ಬೆತ್ತಲೆಗೊಳಿಸಬೇಕಿದೆ.
ಯೇಸು ಕ್ರಿಸ್ತನ ಅನುಯಾಯಿಗಳಾದ ಕ್ರಿಶ್ಚಿಯನ್ನರಿಗೆ ಸಾಂಟಾ ಕ್ಲಾಸ್ ಮೂರನೇ ಶತಮಾನದಲ್ಲಿದ್ದ ಒಬ್ಬ ಸಂತ, ಅವರ ಧರ್ಮಾನುಸಾರ ಕ್ರಿಸ್ಮಸ್ ಸಮಯದಲ್ಲಿ ಆತನನ್ನು ತಮ್ಮ ಆಚರಣೆಯಲ್ಲಿ ಬಳಸಿಕೊಳ್ಳುವುದು ಅವರ ಹಕ್ಕು. ಆದರೆ ಹಿಂದೂಗಳಿಗೂ ಸಾಂಟಾ ಕ್ಲಾಸ್‌ನಿಗೂ ಎಲ್ಲಿಯ ಸಂಬಂಧ ? ಒಂದು ವೇಳೆ ತಮ್ಮ ಮಕ್ಕಳ ಮನರಂಜನೆಯ ಸಲುವಾಗಿ ಆತನನ್ನು ಬಳಸಿಕೊಂಡರೆ, ಪರ್ಯಾಯವಾಗಿ ಎಷ್ಟು ಜನ ಶ್ರೀಕೃಷ್ಣನ ಬಗ್ಗೆ ತಮ್ಮ ಮಕ್ಕಳಿಗೆ ಪಾಠ ಹೇಳುತ್ತಾರೆ? ಶ್ರೀರಾಮಚಂದ್ರನ ಕಥೆಗಳನ್ನು ಎಷ್ಟು ಜನ ತಮ್ಮ ಮಕ್ಕಳಿಗೆ ಹೇಳುತ್ತಾರೆ? ಮಹಾಭಾರತದ ನೀತಿ ಕಥೆಗಳನ್ನು ಎಷ್ಟು ಜನ ತಮ್ಮ ಮಕ್ಕಳಿಗೆ ಹೇಳುತ್ತಾರೆ ? ಸಂವಿಧಾನದಲ್ಲಿ ಧರ್ಮ ಪಾಲನೆ ಮೂಲಭೂತ ಹಕ್ಕಾಗಿದ್ದು ಅವರಿಗಿಷ್ಟ ಬಂದ ಧರ್ಮದ ಆಚರಣೆಯನ್ನು ಪಾಲಿಸಬಹುದಾಗಿದೆ.
ಆದರೆ ಪಾಶ್ಚಿಮಾತ್ಯರ ಪ್ರಚಾರದ ಅಬ್ಬರಕ್ಕೆ ಸಿಕ್ಕ ಹಿಂದೂಗಳು ತಮ್ಮ ಆಚರಣೆಗಳನ್ನು ಮರೆಯುತ್ತಿರುವುದರ ವಿರುದ್ಧ ಧ್ವನಿ ಎತ್ತಬೇಕಿರುವುದೂ ಸಹ ನಮ್ಮ ಕರ್ತವ್ಯ.