Saturday, 23rd November 2024

ಅಷ್ಟು ಅವಸರವೇನಿತ್ತು ಬುದ್ದಿ ?!

ದಾಸ್ ಕ್ಯಾಪಿಟಲ್

dascapital1205@gmail.com

ನಮ್ಮ ಕಾಲದ ವೈಚಿತ್ರ್ಯ ಮತ್ತು ಶ್ರೇಷ್ಠ ಕುತೂಹಲದ ವ್ಯಕ್ತಿಗಳಾಗಿ, ದೈವತ್ವದ ಪರಮ ಚಿಂತನೆಯಲ್ಲಿ ಬದುಕನ್ನು, ಬದುಕಿನ ಸಾರ್ಥಕತೆಯನ್ನು ಕಂಡ ಅಪ್ಪಟ ಕನ್ನಡದ ಮನಸ್ಸು ಹೀಗೆ ನಮ್ಮ ನಡುವೆಯೇ ಇದ್ದು ನಮ್ಮಂತಾಗದೆ ವಿಶೇಷವಾಗಿ ತಮ್ಮ ಬಾಳನ್ನು ಬದುಕಿದ ಇಬ್ಬರು ದೈವೀ ಸ್ವರೂಪಿ ಜಂಗಮರು ಎಂದರೆ ಒಬ್ಬರು ಸಿದ್ದಗಂಗೆಯ ಜಗದಗಲ ಜೀವಜಂಗಮ ಪೂಜ್ಯ ಶ್ರೀಡಾ.ಶಿವಕುಮಾರ ಸ್ವಾಮಿಗಳು, ಇನ್ನೊಬ್ಬರು ಪೂಜ್ಯ ಸಿದ್ದೇಶ್ವರ ಶ್ರೀಗಳು.

ಮಹನೀಯರು, ಮಾನವತಾವಾದಿ ನಿಷ್ಠರು ಎಂತ ಸಂಬೋಧಿಸಲ್ಪಡುವ ಇವರೀರ್ವರೂ ನಮ್ಮ ಕಾಲದ ಅಮೃತ ಬಿಂದುಗಳು. ಇವರಿಗೆ ಇವರೇ ಸಾಟಿಯೆಂಬಂತೆ ಬಾಳಿ ಬದುಕಿ ದವರು. ಮೇಲ್ಪಂಕ್ತಿಯಾಗಿ ಬದುಕನ್ನು ಸವೆದರು. ಸವೆದು ಗಂಧವಾಗೇ ಉಳಿದು ಬಿಟ್ಟರು. ಶರಣರ ಔನ್ನತ್ಯವನ್ನು ಮರಣದಲ್ಲಿ ಕಾಣಬೇಕಂತೆ! ಸರಿಹೊತ್ತಿನ ಅಧುನಿಕತೆಯಲ್ಲೂ ಹೀಗೆ ಬದುಕಲು ಯಾರಿಂದ ಸಾಧ್ಯ ಎಂಬ ಚಿಂತನೆಗೂ ಸಾಧ್ಯವಿಲ್ಲದೇ ಬದುಕಿದವರು ಇವರೀರ್ವರು. ಯಾರು ಏನೇ ಅಂದರೂ ಇರ್ವರೂ ಮರೆಯಲಾಗದ ಅಮೃತ ಫಲಗಳು.

ಇಬ್ಬರನ್ನೂ ಕಳೆದುಕೊಂಡ ಈ ನೆಲ ನಿಜವಾದ ಅರ್ಥದಲ್ಲಿ ಅಮೂಲ್ಯ ರತ್ನಗಳನ್ನು ಕಳೆದುಕೊಂಡಿದೆ. ಒಂದು ಸಲ ಸುಮ್ಮನೆ ಕೂತು ಇರ್ವರ ಬದುಕನ್ನು ಆಲೋಚಿಸಿದರೆ, ಅಬ್ಬಾ ಎನ್ನುವಷ್ಟು ಅಚ್ಚರಿ! ಮೈಮನ ತುಂಬುವಷ್ಟು ರೋಮಾಂಚನ! ಬೃಹದಾಕಾರವೂ ಆಕಾಶದೆತ್ತರವೂ ಆಗಿ ಕಾಣುವ ಈ ಎರಡು ವ್ಯಕ್ತಿತ್ವಗಳನ್ನು ಸೂಕ್ಷ್ಮವಾಗಿಸಿಕೊಂಡರೆ ನಾವೆಷ್ಟು ಪೀಚುಗಳು ಅನಿಸುತ್ತದೆ! ಅನ್ಯರಲ್ಲಿ ಇರುವ ಗುಣವನ್ನು ಗ್ರಹಿಸುವ ಬಹುದೊಡ್ಡ ಔದಾರ್ಯದ ಮನಸ್ಸು ಶ್ರೀ ಸಿದ್ದೇಶ್ವರ ಸ್ವಾಮಿಗಳಲ್ಲಿ ಅಂತರ್ಗತವಾಗಿತ್ತು. ಅದಕ್ಕಾಗಿ ಅವರು ಬಹು ಎತ್ತರವನ್ನು ಏರಿದ ಮಹಾನ್ ಮಾನವತಾವಾದಿಯಾಗಿ ನಮಗೆ ಕಂಡರು.

ಪ್ರೀತಿಯನ್ನು ಮೊಗೆಮೊಗೆದು ಉಣಿಸಿದರು. ಒಳ್ಳೆಯದನ್ನು ಮಾತ್ರ ಹಿಂಜಿ ಹಿಂಜಿ ಸಮಾಜಕ್ಕೆ ಉಣಿಸಿದರು. ಒಂದೇ ಒಂದು ಸಲವೂ ಅವರಲ್ಲಿ ಈ ಸಮಾಜದಲ್ಲಿರುವ ವಕ್ರತೆ ಕಾಣಲಿಲ್ಲ. ವಕ್ರವಾಗಿ ಕಂಡಿದ್ದನ್ನೂ ನೇರವಾಗಿ ನೋಡಿದರು. ವ್ಯಾಖ್ಯಾನಿಸಿ ದರು. ಯಾರನ್ನೂ ಒಪ್ಪುವ, ಅಂತೆಯೇ ಸ್ವೀಕರಿಸುವ ಮನೋಧರ್ಮ ಸಹಜವಾಗೇ ಅವರಲ್ಲಿತ್ತು. ಒಳ್ಳೆಯದನ್ನು ಒಳ್ಳೆಯ ಭಾವದಲ್ಲಿ ನೋಡುವ ಅವರ ಮನಸ್ಸು ಸಮಾಜದ ಓರೆಕೋರೆಗಳನ್ನು ತಿದ್ದಲು ನಿರಂತರವಾಗಿ ಯತ್ನಿಸಿತ್ತು. ಸಮಾಜದ ಲೋಪವನ್ನು ದೋಷವನ್ನು ಸರಿಪಡಿಸುವ ಚಡಪಡಿಕೆ ಅವರಲ್ಲಿತ್ತು. ಅವರ ಪ್ರವಚನಗಳನ್ನು ಕೇಳಿದರೆ ಆದರ್ಶವೇ ಮೈದಳೆದು
ನಿಂತಿರುತ್ತಿತ್ತು. ನೈತಿಕತೆ ಅವರ ಬಹುದೊಡ್ಡ ಶಕ್ತಿ.

ಅವರೇನೇ ಅಂದರೂ ಅದು ಪೊಳ್ಳು ಆದರ್ಶವೆನಿಸದಿರಲು ಕಾರಣ, ಅವರ ನಡೆದು ಬಂದ ರೀತಿ! ಮೈ-ಮನಸ್ಸುಗಳನ್ನು ತಾವು ಸದಾಕಾಲವೂ ಧರಿಸುವ ಶ್ವೇತವರ್ಣದ ಬಟ್ಟೆಯಷ್ಟೇ ಶುಚಿಯಾಗಿಟ್ಟುಕೊಂಡ ಪರಮ ವೈರಾಗ್ಯದ ಮೂರ್ತಿಯಾಗಿ ನಮಗೆ ಕಾಣಲು ಸಾಧ್ಯವಾಗಿದ್ದು ನಡೆ ನುಡಿಯಲ್ಲಿನ ಸಮನ್ವಯದ ಸಾಂಗತ್ಯದಿಂದ! ಕಣ್ಣಲ್ಲಿ ತುಂಬಿಕೊಂಡಿದ್ದ ಸಾತ್ವಿಕ ಮೌನದಿಂದ! ಮನಸು ಇನ್ನೊಂದು ಲೋಕದ ಹುಡುಕಾಟದಲ್ಲಿರುವಂತೆ ಭಾಸವಾಗಿದ್ದರಿಂದ!

ಮಾಸದ ತೇಜಸ್ಸು ಅವರಲ್ಲಿ ಮುಖದಲ್ಲಿ ಮಡುಗಟ್ಟಿದ್ದರಿಂದ! ಆದರೆ, ನಮ್ಮವರು ಅಂತ ಅನಿಸುವುದು ಮಾತ್ರ ನಮ್ಮಂತೆ ಶುಭ್ರವಾದ ಬಿಳಿ ಬಟ್ಟೆಯನ್ನು ಮೈತುಂಬಾ ಧರಿಸಿದ್ದರಿಂದ! ವಕ್ರವಾಗದೆ, ಹೊಂಚದೆ, ಕನಿಷ್ಠವನ್ನು ಕಾಣಲಾರದೆ, ಬಳುಕ ಲಾರದೆ ಇರುವ ಭಾಷೆಯಿಂದ ಯಾವ ಸೃಷ್ಟಿಶೀಲತೆಯೂ ಸಾಧ್ಯವಿಲ್ಲ ಎನಿಸಿಯೇ, ಅವರ ಹದವಾದ ಏರಿ ಇಳಿಯುವ ಮಾತಿನ ಓಘದ ಗಂಧದ ಮಾತುಗಳನ್ನು ಕೇಳಿಸಿಕೊಳ್ಳುವುದಕ್ಕೆ ಕಿವಿಗೆ ಹಿತವೆನಿಸುತ್ತದೆ. ಯಾವ ಉದ್ವೇಗವೂ ಆವೇಶವೂ ಇಲ್ಲದ ಹದ ತಪ್ಪದ ಅವರ ಮಾತುಗಳು ಅಪ್ಯಾಯಮಾನವಾಗಿ ಕಾಣುತ್ತಲೇ ಇರುತ್ತದೆ ಎಂದಿಗೂ!

ಎಂಥವನಿಗೂ ಅರ್ಥವಾಗುವ ಉತ್ತರ ಕರ್ನಾಟಕದ ಅವರ ದೇಸೀ ಲಯದ ಮಾತುಗಳು ಸ್ವದೇಶೀಯಾಗಿದ್ದು ಯಾವ ವಿಮರ್ಶೆಯ ಪ್ರಜ್ಞೆಯನ್ನೂ ಕಳೆದುಕೊಳ್ಳುತ್ತಿರಲಿಲ್ಲ. ಅವರು ಒಂದು ರೀತಿ Critical insiders ಇದ್ದ ಹಾಗೆ ಮಾತ ನಾಡಿದರು. ಕಥೆ, ಉಪಮೆ, ರೂಪಕಗಳು ಸೃಷ್ಟಿಶೀಲವಾಗಿ ಅವರ ಮಾತುಗಳಲ್ಲಿ ಕಂಡದ್ದು ಈ ಬಗೆಯ ದೃಷ್ಟಿಕೋನದ ಒಳ ಚಿಂತನೆಗಳಿಂದ! ಸಿದ್ದೇಶ್ವರರು ಒಳ ಮನಸಿನಲ್ಲೂ ಮನುಷ್ಯ ಸಹಜ ಸ್ವಭಾವದಲ್ಲೂ ಹುಟ್ಟಿಕೊಳ್ಳಬಹುದಾದ ಅಸಹಜವೇ ನಲ್ಲದ ನೆಗೆಟಿವ್ ಚಿಂತನೆಯನ್ನು ಅನ್ಯಥಾ ಮಾಡಿದವರು ಅಲ್ಲವೇನು? ಎಂದರೆ ಮಾಡಿರಲೂ ಬೇಕಾದ ಸಂದರ್ಭ ಸನ್ನಿವೇಶ ಗಳು ಅವರ ೮೨ ವರ್ಷದ ಬದುಕಿನಲ್ಲಿ ಎದುರಾಗಿರಲೇಬೇಕು.

ಇಲ್ಲ ಮುಖಾಮುಖಿ ಆಗಿರಲೇಬೇಕು ಎಂದು ಅನಿಸಲು ಕಾರಣ ಅವರು ಸ್ವಭಾವತಃ ಸಾತ್ವಿಕರು ಆಗಿರುವುದರಿಂದ!
ಎದರಿಂದರಲ್ಲೂ ಒಳಿತನ್ನೇ ಬಯಸುವವರಿಗೆ ಈ ಕಾಲವಲ್ಲ ಎಂಬುದು ಎಲ್ಲರ ಅನುಭವಜನ್ಯ ಸತ್ಯ! ಆದರೆ, ಸತ್ಯವಂತರಿಗೆ, ಸಾತ್ವಿಕರಿಗೆ ಇದು ಕಾಲವಲ್ಲ ಎಂಬ ಮಾತು ಕೇಳಿದ ಮೇಲೂ ಆ ಮಾತನ್ನು ಸುಳ್ಳು ಮಾಡಿದವರು ಸಿದ್ದೇಶ್ವರರು ಎಂದರೆ ಉತ್ಪ್ರೇಕ್ಷೆಯಾಗಲಾರದು!

ಆದರೆ, ಈ ಮಾತು ಒಮ್ಮೊಮ್ಮೆ ಪೂರ್ಣ ಸತ್ಯವಾಗಿ ಕಾಣುತ್ತದೆ ಸಿದ್ದೇಶ್ವರರ ಪಾಲಿಗೆ ಮಾತ್ರ! ಯಾಕೆಂದರೆ, ಅವರನ್ನು ಎಲ್ಲರೂ ಮುಟ್ಟಲೊವು! ಅವರ ನೈತಿಕತೆಯನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಲೊವು! ಅವರ ನಿಜ ಮನಸ್ಸನ್ನು ಅರ್ಥೈಸಿಕೊಳ್ಳಲೊವು! ಹೋಗಲಿ, ಕೊನೆಯ ಪಕ್ಷ ಅವರ ಮಾತುಗಳನ್ನು ಕೇಳಲೊವು, ಅವರನ್ನು ಓದಲೊವು! ಹೀಗೂ ಮಾಡಿ ಅವರನ್ನು ನಾವು ಸಾತ್ವಿಕರೆಂದು ಹೊಗಳುತ್ತಾ, ನಮ್ಮೊಳಗಿನ ಅನೈತಿಕತೆಯನ್ನು ಮೆರೆಯುತ್ತಾ ಅವರನ್ನು ಅನುಸರಿಸಲೊವು!

ಹುಸಿ ಶ್ಲಾಘನೆಯ ಮಾತುಗಳನ್ನು ಅವರ ಬಗ್ಗೆ ಆಡುತ್ತ ಅವರನ್ನು ದೇವರನ್ನಾಗಿ ಮಾಡುವ ದೊಡ್ಡಸ್ಥಿಕೆಯನ್ನು ತೋರಿಸುವುದು ಕಪಟವೆನಿಸುತ್ತದೆ. ಜಾತಿ, ಮತ, ಪಂಥಗಳನ್ನು ಮೀರಿ ನಿಂತ ನಮ್ಮ ಕಾಲದ ನಿಜ ಸಂತನನ್ನು ನಾವು ಸ್ವೀಕರಿಸುವ ಬಗೆಯ ಗೊಂದಲವಿದೆ. ಹೊಲಸು ರಾಜಕೀಯದ ವಾಸನೆಯಿದೆ. ಅವರನ್ನು ನಿಜ ಮನಸ್ಸಿನಿಂದ ಆರಾಽಸುವುದು ಓದು ಬರೆಹವಿಲ್ಲದ ಹಳ್ಳಿಗರು ಮಾತ್ರ!

ಓದಿಕೊಂಡವರು ಅವರನ್ನು ವಿಮರ್ಶೆಯ ಕಟಕಟೆಗೆ ತಂದು ನಿಲ್ಲಿಸುತ್ತಾರೆ. ಅತ್ಯಾಧುನಿಕ ವೈದ್ಯಕೀಯ ವ್ಯವಸ್ಥೆಯಿರುವ ಈ ಕಾಲದಲ್ಲಿ ಅವರನ್ನು ಉಳಿಸಿಕೊಳ್ಳುವುದು ಅಂಥಾ ಪರಿಯ ಶ್ರಮವೇನೂ ಆಗಿಲ್ಲವಾಗಿತ್ತು. ಆದರೂ ನಾನು ಸಾಯಬೇಕೆಂಬ ದೃಢ ನಿಲುವನ್ನು ಹೊಂದಿದ ಅವರ ಬದುಕಿನ ಕೊನೆಯ ದಿನಗಳಲ್ಲಿ, ಗಳಿಗೆಗಳಲ್ಲಿ ಅವರನ್ನು ಕಾಡಿದ್ದಾದರೂ ಏನು? ಯಾವ ಹಂಬಲ ಅವರಲ್ಲಿತ್ತು? ಬದುಕಿನ ಸತ್ಯವನ್ನು ಅವರು ಕಂಡಿzದರೂ ಹೇಗೆ? ಅಥವಾ ಈ ಬದುಕನ್ನು ಮುಗಿಸಿದರೆ ಮಾತ್ರ ಬದುಕಿನ ಸತ್ಯವನ್ನು ಕಾಣಲು ಸಾಧ್ಯ ಎಂದು ಹೊರಟರೆ? ಯಾವ ಆಸೆಯೂ ಇಲ್ಲದೆ ಬದುಕಿದ ಅವರಿಗೆ ಕೊನೆಯ ಹಂತದಲ್ಲಿಯೂ ಯಾವ ಆಸೆಯೂ ಕಾಡಲಿಲ್ಲ ಎಂದರೆ ಅವರ ಮನಸ್ಥಿತಿಯನ್ನು ಅರ್ಥೈಸಿಕೊಳ್ಳಲು ಯಾವ ಮಾರ್ಗ ನಮಗಿದೆ? ಯಾವ ಒಳನೋಟಗಳು ನಮ್ಮಲ್ಲಿವೆ?

ನಾನು ಹೇಳುವುದು ಇಷ್ಟೆ: ಕೊನೆಯಪಕ್ಷ ಅವರ ಬದುಕು ಅಥವಾ ಬದುಕಿನ ಕುರಿತಾದ ಅವರ ಒಳನೋಟಗಳು ನಮ್ಮೊಳಗೂ ಚೂರು ಹುಟ್ಟಿಕೊಳ್ಳಬೇಕು. ಹೆಚ್ಚೇನೂ ಅಲ್ಲದಿದ್ದರೂ ಸ್ವಲ್ಪ ಮಟ್ಟಿಗಾದರೂ! ಯಾವುದದು? ಅಲ್ಲದಿದ್ದರೂ ಕೊನೆಯಪಕ್ಷ ಸ್ವಾರ್ಥವನ್ನಾದರೂ ತಕ್ಕಮಟ್ಟಿಗಾದರೂ ತ್ಯಜಿಸಲು ಸಾಧ್ಯವಾಗುವುದು? ನಿತ್ಯದ ಬದುಕಿನಲ್ಲಿ ಪರೋಪಕಾರವನ್ನು ರೂಢಿಸಿ ಕೊಳ್ಳುವುದು ಅಲ್ಪಮಟ್ಟಿಗಾದರೂ ಸಾಧ್ಯವಾಗಬೇಕು!

ಎಲ್ಲದರಿಂದ, ಎಲ್ಲರಿಂದ ಬಿಟ್ಟು ಬದುಕುವುದನ್ನು, ಲೌಕಿಕದ ಸುಖಗಳಿಂದ ಎಷ್ಟು ಸಾಧ್ಯವೋ ಅಷ್ಟು ಅಗಲಿ ಇರುವುದನ್ನು
ಕಲಿಯಲು ಎನಿತಷ್ಟಾದರೂ ಸಾಧ್ಯವಾಗಬೇಕು! ಲೋಕ ವ್ಯವಹಾರದಲ್ಲಿ ಎಲ್ಲದರ ನಡುವೆಯೇ ಇದ್ದೂ ಇಲ್ಲದಂತೆ ಬದುಕಲು ದಿನದ ಸ್ವಲ್ಪ ಹೊತ್ತಾದರೂ ಸಾಧ್ಯವಾಗಬೇಕು! ಆದರೆ, ಇದೆಲ್ಲ ಹೇಳುವುದಕ್ಕೆ ಕೇಳುವುದಕ್ಕೆ ಮಾತ್ರ ಸಾಧ್ಯ ಎಂಬುದನ್ನು ನಾವು ಬವು. ಆದ್ದರಿಂದ, ಈ ಮೌಲ್ಯಗಳ ಅನುಕರಣೆ, ಅನುಸರಣೆ ನಮ್ಮಿಂದ ಸಾಧ್ಯ ಇಲ್ಲವೇ ಇಲ್ಲ!

ಯಾಕೆಂದರೆ, ಅವರಷ್ಟು ಎತ್ತರದ ಚಿಂತನೆಯ ಬದುಕಲ್ಲಿ ನಾವು ಬದುಕಿನಲ್ಲಿ ರೂಢಿಗೊಂಡವರಲ್ಲ. ಅಂಥ ಸಾಧಕರನ್ನು
ಅವರು ಇzಗಲೂ, ಅಗಲಿದ ಮೇಲೂ ಅವರನ್ನು ಹಾಡಿಹೊಗಳುವ, ಆ ಮೂಲಕ ಬದುಕುವುದನ್ನು ಕಲಿತ ನಮಗೆ ಅಂಥ ಸರಳ ಬದುಕು ಒಲ್ಲದಾಗಿದೆ! ಇಪ್ಪತ್ತನೆಯ ಶತಮಾನ ಕನ್ನಡದ ಅತ್ಯುತ್ತಮ ಕಾಲ ಎಂದು ಜಿಎಸ್ಸೆಸ್ ಹೇಳಿದ್ದರು. ನಿತ್ಯ ಬದುಕಿನ ನಮ್ಮನ್ನು ವಿಸ್ಮಯಗೊಳಿಸುವಂಥ ಈ ಶತಮಾನದ ಆಚೀಚೆಯ ಕೆಲವು ವರ್ಷಗಳಲ್ಲಿ ಅನೇಕ ಸಾಧಕರು ನಮ್ಮೊಂದಿಗೇ ಇದ್ದು ಬಾಳಿ ಹೋದರು. ಅವರ ಗುಣದೋಷಗಳು ನಮ್ಮ ಮೆಚ್ಚುಗೆಯ ಅಂಶವಾಗೇ ನಮಗೆ ಈ ಸಾಧಕರು ಕಾಣುತ್ತಾರೆ. ಕಾಣಬೇಕು.

ಕಲೆ, ಸಾಹಿತ್ಯ, ಶಿಕ್ಷಣ, ಜನಪದ, ವಿeನ, ಕ್ರೀಡೆ, ಪರಿಸರ- ಇವೇ ಮುಂತಾದ ಎಲ್ಲ ಪ್ರಕಾರಗಳಲ್ಲಿಯೂ ಅದ್ಭುತವೆನಿಸ ಬಹುದಾದ ಅಚ್ಚರಿಯನ್ನು ಸೃಷ್ಟಿಸಿಯೇ ಇವರು ನಮ್ಮನ್ನಗಲಿದರು. ಬಹುಸಂಖ್ಯಾತರು ಮೆಚ್ಚಿದ್ದು ಬೇರೆ, ನಿರ್ದಿಷ್ಟ ವರ್ಗ, ಜಾತಿ, ಪಂಥ ಗಳೇ ಮೆಚ್ಚಿ ಕೊಂಡಾಡಿದ್ದೂ ಬೇರೆ! ಆದರೆ, ಎಲ್ಲರೂ ಮೆಚ್ಚುವ ಸಾಧಕರಲ್ಲಿ ಸಿದ್ದೇಶ್ವರರು ಪ್ರಾತಃ ಸ್ಮರಣೀಯರು.

ಯಾಕೆಂದರೆ, ಅವರು ಒಂದು ಇಸಂಗೆ ಅಂಟಿಕೊಂಡೇ ಬದುಕಲಿಲ್ಲ. ತನ್ನದೇ ಆದ ತತ್ವ ಸಿದ್ಧಾಂತವನ್ನು ಹೇರಿದವರಲ್ಲ. ಪಕ್ಷ ಕಟ್ಟಿದವರಲ್ಲ. ಶಿಷ್ಯ ಸಂಕುಲವನ್ನು ಕಟ್ಟಿಕೊಂಡು ಮೆರೆದವರಲ್ಲ, ಕರ್ಮಠರಾಗದೆ, ಪುರಾಣ, ಗೀತೆ, ವೇದೋಪನಿಷತ್ತುಗಳನ್ನೂ ಓದಿದರು. ವೈದಿಕ ಸಾಹಿತ್ಯವನ್ನೂ ಓದಿದರು. ಆಧುನಿಕವೆನಿಸುವ ವಚನ ಮತ್ತು ದಾಸ ಸಾಹಿತ್ಯವನ್ನೂ ಓದಿದರು.
ಕಲೆಯನ್ನೂ ಆರಾಧಿಸಿದರು. ಸಾಹಿತ್ಯವನ್ನೂ ಓದಿದರು.

ಗಣಿತ ಮತ್ತು ವಿಜ್ಞಾನವನ್ನೂ ಅಭ್ಯಾಸ ಮಾಡಿದರು. ಅವುಗಳ ಪ್ರಸ್ತುತತೆಯನ್ನೂ ವ್ಯಾಖ್ಯಾನಿಸಿದರು. ಗಾಂಧಿಯನ್ನೂ
ಮೀರು ವಂತೆ ಸರಳ ಬದುಕನ್ನೂ ಬಾಳಿ ಬದುಕಿದರು. ದೀನರನ್ನೂ ದಲಿತರನ್ನೂ ಪಂಡಿತ ಪಾಮರರನ್ನೂ ಲಿಂಗಬೇಧವಿಲ್ಲದೆ, ಪ್ರೀತಿಯಿಂದ ಎಲ್ಲ ಜೀವ ಸಂಕುಲವನ್ನು ಒಂದು ದೃಷ್ಟಿ, ಒಂದು ಭಾವದಿಂದ ಕಂಡು, ಅಂತೆಯೇ ಎಲ್ಲವನ್ನೂ ಗೌರವಿಸಿ ಬದುಕಿದರು. ಸಿದ್ದೇಶ್ವರರ ಎಲ್ಲ ಜೀವನ ಮೌಲ್ಯಗಳ ಉಳಿವಿನ ಕಾರಣಕ್ಕಾಗಿಯಾದರೂ ಅವರನ್ನು ನಮ್ಮ ಹಾಗೂ ಮುಂದಿನ ತಲೆಮಾರುಗಳು ಓದಬೇಕು.

ಅವರ ಉಪನ್ಯಾಸಗಳನ್ನು ಕೇಳಬೇಕು. ಅಂಥ ವ್ಯವಸ್ಥೆ ತಕ್ಷಣಕ್ಕೂ ಶಾಶ್ವತಕ್ಕೂ ಒದಗುವಂತೆ ಮಾಡಬೇಕಾದ ಹೊಣೆ ನಮ್ಮ ಮೇಲಿದೆ. ವೈಚಾರಿಕವಾಗಿ, ಭಾವನಾತ್ಮಕವಾಗಿ, ಬೌದ್ಧಿಕವಾಗಿ ಬುದ್ಧಿಯೆಂದೇ ಸಂಬೋಧಿಸಲ್ಪಟ್ಟ ಪೂಜ್ಯ ಸಿದ್ದೇಶ್ವರ ಶ್ರೀಗಳು,
ಈ ಬದುಕನ್ನು ಅಂತ್ಯಗೊಳಿಸಲು ಸಖನಗೊಂಡರೆ ಎಂಬ ಆಲೋಚನೆ ಹುಟ್ಟುವಷ್ಟು ಸಾವಿಗಾಗಿ ಅವಸರಪಟ್ಟರೆ? ಅಷ್ಟಕ್ಕೂ ಅಂಥ ಅವಸರವೇನಿತ್ತು ಬುದ್ಧಿ?

 
Read E-Paper click here