Saturday, 23rd November 2024

ಮಧ್ಯರಾತ್ರಿಯಿಂದ ಬೆಳಗಿನವರೆಗೂ ಡ್ರಗ್ಸ್ ಮಾರಾಟ: ಯುವತಿ ಬಂಧನ

ಕೊಚ್ಚಿ: ಮಧ್ಯರಾತ್ರಿಯಿಂದ ಬೆಳಗಿನ ಜಾವದವರೆಗೂ ಡ್ರಗ್ಸ್ ಮಾರಾಟ ಮಾಡುತ್ತಿದ್ದ 21 ವರ್ಷದ ಯುವತಿಯನ್ನು ಬಂಧಿಸ ಲಾಗಿದೆ. ಸುದೀರ್ಘ ತನಿಖೆಯ ನಂತರ ಕೇರಳದ ಅಬಕಾರಿ ಅಧಿಕಾರಿಗಳು ಯುವತಿಯನ್ನು ಬಂಧಿಸಿದ್ದಾರೆ.

ಆರೋಪಿಯನ್ನು ಕೊಲ್ಲಂ ಮೂಲಕ ಬ್ಲೆಸ್ಸಿ ಎಂದು ಗುರುತಿಸಲಾಗಿದೆ. ಈಕೆ ಎರ್ನಾಕುಲಂನ ಖಾಸಗಿ ಕಾಲೇಜಿನ ವಿದ್ಯಾರ್ಥಿನಿ. ಅಗತ್ಯವಿರುವವರು ಕಳುಹಿಸುತ್ತಿದ್ದ ಲೊಕೇಶನ್​​ಗೆ ಸ್ಕೂಟರ್​ ಮೂಲಕ ಡ್ರಗ್ಸ್​ ತಲುಪಿಸುತ್ತಿದ್ದಳು. ಕೋಯಿಕ್ಕೂಡ್​ ನಿವಾಸಿ ಯೊಬ್ಬರು ಭಾರೀ ಪ್ರಮಾಣದ ಎಂಡಿಎಂಎ ಡ್ರಗ್ಸ್​ ಅನ್ನು ಬ್ಲೆಸ್ಸಿಗೆ ತಲುಪಿಸುತ್ತಿದ್ದನು ಎಂದು ತಿಳಿದುಬಂದಿದೆ.

ಬ್ಲೆಸ್ಸಿ ವಾಸವಿರುವ ಬಾಡಿಗೆ ಫ್ಲ್ಯಾಟ್​ನಲ್ಲಿ 2.5 ಗ್ರಾಂ ಎಂಡಿಎಂಎ ಡ್ರಗ್ಸ್​ ಅನ್ನು ವಶಪಡಿಸಿಕೊಳ್ಳಲಾಗಿದೆ. ಬ್ಲೆಸ್ಸಿ ಓರ್ವ ಮೀನು ಗಾರನ ಮಗಳು. ವಾಯುಯಾನ ಕೋರ್ಸ್​ ಮಾಡಲೆಂದು ಕೊಚ್ಚಿಗೆ ಬಂದ ಬ್ಲೆಸ್ಸಿ, ತರಗತಿಗೆ ಹೋಗದೆ ಸ್ಪಾನಲ್ಲಿ ಕೆಲಸಕ್ಕೆ ಸೇರಿಕೊಂಡಳು. ಕೆಲಸ ಕಳೆದುಕೊಂಡಾಗ ಆಕೆ ಡ್ರಗ್ಸ್​ ವ್ಯವಹಾರಕ್ಕೆ ಇಳಿದಳು.ಇನ್ನಷ್ಟು ಮಂದಿ ಈ ಅವ್ಯವಹಾರದಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ.

ಪ್ರತಿದಿನ ತಡರಾತ್ರಿ 2.30ಕ್ಕೆ ಡ್ರಗ್ಸ್​ ವ್ಯವಹಾರ ಶುರು ಮಾಡಿ ಬೆಳಗ್ಗೆ 7 ಗಂಟೆಗೆ ಮುಗಿಸುತ್ತಿದ್ದಳು. ಕನಿಷ್ಠ 7 ಸ್ಥಳಗಳಿಗೆ ಪ್ರತಿದಿನ ಡ್ರಗ್ಸ್​ ಪೂರೈಸುತ್ತಿದ್ದಳು. ದಿನಕ್ಕೆ 7 ಸಾವಿರ ರೂ. ಸಂಪಾದನೆ ಮಾಡುತ್ತಿದ್ದಳು.

ಕಲೂರಿನಲ್ಲಿ ಎಂಡಿಎಂಎ ಸಮೇತ ಸಿಕ್ಕಿಬಿದ್ದ ಯುವಕನಿಂದ ದೊರೆತ ಮಾಹಿತಿ ಆಧಾರದ ಮೇಲೆ ತನಿಖೆ ನಡೆಸಿದಾಗ ಬ್ಲೆಸ್ಸಿ ಸಿಕ್ಕಿಬಿದ್ದಿದ್ದಾಳೆ. ಪೊಲೀಸರಿಗೆ ಸಿಕ್ಕಿಬೀಳಬಾರದೆಂಬ ಕಾರಣಕ್ಕೆ ಹೆಚ್ಚಾಗಿ ಸಿಮ್​ ಬಳಸದೇ ಹಾಟ್​ಸ್ಪಾಟ್​ ಮೂಲಕ ನೆಟ್​ ಬಳಸುತ್ತಿದ್ದಳು.