Saturday, 23rd November 2024

ನೆಲಕಚ್ಚಲಿದೆಯೇ ಮಾಮ ಅರ್ಥ್‌ ಐಪಿಒ ?

ವೀಕೆಂಡ್ ವಿತ್ ಮೋಹನ್

camohanbn@gmail.com

ಷೇರು ಮಾರುಕಟ್ಟೆಯೆಂಬುದು ಹಣ ಮಾಡುವ ಹಾಗೂ ಕಳೆದುಕೊಳ್ಳುವ ಮಾಯಾ ಪೆಟ್ಟಿಗೆ. ಬಂಡವಾಳ ಹೂಡುವ ಕಂಪನಿ ಗಳ ಸಂಪೂರ್ಣ ವಿಷಯ ತಿಳಿದುಕೊಳ್ಳದೇ ಷೇರುಗಳಲ್ಲಿ ಹಣ ಹೂಡಿಕೆ ಮಾಡಿದರೆ ನಷ್ಟ ಕಟ್ಟಿಟ್ಟ ಬುತ್ತಿ.

ಇಡೀ ಷೇರು ಮಾರುಕಟ್ಟೆಯೇ ಲಾಭ ಮತ್ತು ನಷ್ಟಗಳ ಆಟ, ಶೇ.೯೫ರಷ್ಟು ಜನರು ಕಳೆದುಕೊಂಡ ಹಣ ಉಳಿದ ಶೇ.೫ರಷ್ಟು ಜನರಿಗೆ ಲಾಭವಾಗು ತ್ತದೆ. ೧೦೦ರಲ್ಲಿ ಐದು ಜನರು ಮಾತ್ರ ತಾವು ಬಂಡವಾಳ ಹೂಡ ಬಯಸುವ ಕಂಪನಿಗಳ ಸಂಪೂರ್ಣ ವಿವರ ಪಡೆದಿರುತ್ತಾರೆ ಉಳಿದವರು ಮಾರುಕಟ್ಟೆ ನಡೆದ ಮಾರ್ಗದಲ್ಲಿ ಬಂಡವಾಳ ಹೂಡಿ ಹೆಚ್ಚಿನ ಹಣ ಕಳೆದುಕೊಳ್ಳುತ್ತಾರೆ. ಷೇರು ಕಂಪನಿಗಳ ಬಗ್ಗೆ ವಿವರ ನೀಡುವ ತಜ್ಞರು ತಾವೇ ಸ್ವತಃ ಬಂಡವಾಳ ಹೂಡುವುದಿಲ್ಲ ಬದಲಾಗಿ ಷೇರುಗಳ ಬಗ್ಗೆ
ಒಂದಷ್ಟು ಜ್ಞಾನಾರ್ಜನೆಯನ್ನು ನೀಡಿ ಹಣ ಮಾಡುತ್ತಾರೆ.

ಒಂದು ದೇಶದ ಆರ್ಥಿಕ ವ್ಯವಸ್ಥೆಯ ಪ್ರಮುಖ ಆಧಾರಸ್ಥನೆಂಬ ಷೇರು ಮಾರುಕಟ್ಟೆ, ಜಗತ್ತಿನ ದೊಡ್ಡ ದೊಡ್ಡ ಷೇರು ಮಾರುಕಟ್ಟೆಗಳ ಪರಿಣಾಮ ಭಾರತದ ಷೇರು ಮಾರುಕಟ್ಟೆಯ ಮೇಲು ಬೀರುತ್ತದೆ. ಕಂಪನಿಯ ಮೂಲಭೂತ ಅಂಶಗಳಿಗೂ ಅದರ ಷೇರು ಮೌಲ್ಯಕ್ಕೂ ಬಹಳಷ್ಟು ವ್ಯತ್ಯಾಸವಿರುತ್ತದೆ. ಮೂಲಭೂತ ಅಂಶಗಳು ಬಲವಾಗಿರುವ ಷೇರುಗಳು ಎಂದೂ ಸಹ ಹೂಡಿಕೆದಾರರಿಗೆ ಮೋಸ ಮಾಡಿಲ್ಲ. ಹಲವು ಬಾರಿ ಕಂಪನಿಯ ಷೇರುಗಳ ಬೆಲೆ ಸಂಬಂಧವಿಲ್ಲದ ಅಂಶಗಳ ಮೇಲೆ ನಿರ್ಧಾರವಾಗುತ್ತದೆ.

ಅಮೆರಿಕದ ದೇಶದ ಅಧ್ಯಕ್ಷರು ಭಾರತಕ್ಕೆ ಭೇಟಿ ನೀಡುತ್ತಾರೆಂದರೆ ಭಾರತೀಯ ಷೇರು ಮಾರುಕಟ್ಟೆ ಏರುಗತಿಯಲಿರುತ್ತದೆ, ಅತ್ತ ಕೋವಿಡ್ ಸಮಯದಲ್ಲಿ ಜಗತ್ತಿನ ಹಲವು ಷೇರು ಮಾರುಕಟ್ಟೆಗಳು ಪಾತಾಳ ಕಂಡಿದ್ದರೆ ಭಾರತೀಯ ಷೇರು ಮಾರುಕಟ್ಟೆ ಮಾತ್ರ ಏರುಗತಿಯಲ್ಲಿತ್ತು. ಕರೋನಾಕ್ಕೆ ಲಸಿಕೆ ಕಂಡುಹಿಡಿದ ವಿಷಯ ಬಹಿರಂಗವಾಗುತ್ತಿದ್ದಂತೆ ಷೇರು ಮಾರುಕಟ್ಟೆಯ ಎಲ್ಲಾ
ಷೇರುಗಳು ಏರುಗತಿಯಲ್ಲಿ ತಮ್ಮ ಮೌಲ್ಯವನ್ನು ಹೆಚ್ಚಿಸಿಕೊಂಡಿದ್ದವು.

ಕರೋನಾ ಲಸಿಕೆಗೂ ಮಾರುತಿ ಕಂಪನಿ ಷೇರಿಗೂ ಏನು ಸಂಬಂಧ ? ಆದರೂ ಮಾರುತಿ ಕಂಪನಿಯ ಷೇರುಗಳ ಬೆಲೆಯಲ್ಲಿ ಏರಿಕೆಯಾಯಿತು, ಅದೇ ಸಮಯದಲ್ಲಿ ಬ್ಯಾಂಕುಗಳ ಷೇರುಗಳ ಮೌಲ್ಯ ಏರಿಕೆಯಾಗಿತ್ತು. ಹಲವು ಬಾರಿ ಒಂದಕ್ಕೊಂದು ಸಂಬಂಧವಿಲ್ಲದಂತೆ ಹಲವು ಕಂಪನಿಗಳ ಷೇರುಗಳ ಮೌಲ್ಯ ಹೆಚ್ಚಾಗುತ್ತದೆ. ಕಳೆದ ಕೆಲವು ವರ್ಷಗಳಿಂದ ಹಲವು ನೂತನ ಕಂಪನಿಗಳಲ್ಲಿ ಲಕ್ಷಾಂತರ ಕೋಟಿ ವಿದೇಶಿ ಬಂಡವಾಳ ಭಾರತಕ್ಕೆ ಹರಿದು ಬಂದಿದೆ.

ತಂತ್ರಜ್ಞಾನ ಕ್ಷೇತ್ರದಲ್ಲಂತೂ ಹಿಂದೆಂದೂ ಕಂಡಿರದ ಬಂಡವಾಳ ಹೂಡಿಕೆಯಾಗಿದೆ. ಕೋರಮಂಗಲದ ಮೂರು ಬೆಡ್
ರೂಮ್ ಮನೆಯಲ್ಲಿ ಶುರುವಾದಂತಹ ’ಫ್ಲಿಪ್ ಕಾರ್ಟ್’ ಸಂಸ್ಥೆಯ ಇಂದಿನ ಮೌಲ್ಯ ಸುಮಾರು ೨೨ ಬಿಲಿಯನ್ ಅಮೆರಿಕನ್ ಡಾಲರ್. ಅಮೆರಿಕಾದ ’ಸಿಲಿಕಾನ್ ವ್ಯಾಲಿ’ಯಲ್ಲಿನ ‘ಊಬರ್’ ಮಾದರಿಯನ್ನೇ ಭಾರತದಲ್ಲಿ ಅನುಷ್ಠಾನಗೊಳಿಸಿದ ’ಓಲಾ’ ಕಂಪನಿಯ ಇಂದಿನ ಮೌಲ್ಯ ಬಿಲಿಯನ್ ಅಮೆರಿಕನ್ ಡಾಲರ್ ದಾಟಿದೆ. ’ಡಿಜಿಟಲ್ ಪೇಮೆಂಟ್’ ವ್ಯಾಪ್ತಿಯಲ್ಲಿ ತನ್ನದೇ ಛಾಪು ಮೂಡಿಸಿದ್ದ ’ಪೇಟಿಮ’ಕಂಪನಿಯ ಮೌಲ್ಯ ಬಿಲಿಯನ್ ಅಮೆರಿಕನ್ ಡಾಲರ್ ದಾಟಿದೆ.

ಹತ್ತಾರು ದಶಕಗಳಿಂದ ವ್ಯವಹಾರ ನಡೆಸಿಕೊಂಡು ಬರುತ್ತಿರುವ ಹಲವು ಕಂಪನಿಗಳ ಮೂಲಭೂತ ಅಂಶಗಳು ಬಹಳ ಗಟ್ಟಿಯಾಗಿವೆ, ಇಂತಹ ಕಂಪನಿಗಳ ಷೇರುಗಳಲ್ಲಿ ಹೂಡಿಕೆ ಮಾಡಿದರೆ ನಷ್ಟವಾಗುವುದು ಬಹಳ ಕಡಿಮೆ. ಷೇರು ಮಾರುಕಟ್ಟೆ ಯ ಪಿತಾಮಹ ವಾರೆನ್ ಬಫೆಟ್‌ನ ಬತ್ತಳಿಕೆಯಲ್ಲಿರುವ ಬಹುತೇಕ ಷೇರುಗಳು ಇಂತಹ ಕಂಪನಿಗಳದ್ದೇ. ಭಾರತದ ಷೇರು ಮಾರುಕಟ್ಟೆಯ ಪಿತಾಮಹ ರಾಕೇಶ್ ಜುನ್‌ಜುನ್ ವಾಲಾರ ಬತ್ತಳಿಕೆಯಲ್ಲಿನ ಬಹುತೇಕ ಕಂಪನಿಗಳ ಷೇರುಗಳ
ಮೂಲಭೂತ ಅಂಶಗಳು ಗಟ್ಟಿಯಾಗಿವೆ.

ಕಳೆದ ಕೆಲವು ವರ್ಷಗಳಿಂದ ಮುಂಬೈ ಷೇರು ಮಾರುಕಟ್ಟೆಯಲ್ಲಿ ‘ಐ.ಪಿ.ಒ’ ನಡೆಸಿದ ಕೆಲವು ಕಂಪನಿಗಳ ಷೇರುಗಳ ಮೌಲ್ಯ ಪಾತಳ ಕಂಡಿದೆ. ಉದಾಹರಣೆಗೆ ಡಿಜಿಟಲ್ ಪೇಮೆಂಟ್ ದಿಗ್ಗಜನೆಂದು ಪ್ರಸಿದ್ಧಿಪಡೆದಿದ್ದ ’ಪೇಟಿಯಂ’ ಕಂಪನಿಯ ಷೇರುಗಳ ಮೌಲ್ಯ ಶೇ.೭೨ರಷ್ಟು ಕುಸಿದಿದೆ, ಹಾಗೆಯೆ ನೈಕ್ ಕಂಪನಿಯ ಷೇರುಗಳ ಮೌಲ್ಯ ಪಾತಾಳಕ್ಕೆ ಕುಸಿದಿದೆ. ಈ ಕಂಪನಿಗಳ ಕುಸಿಯುವಿಕೆಗೆ ಮುಖ್ಯ ಕಾರಣ ಅವುಗಳ ಮೂಲಭೂತ ಅಂಶಗಳು ದುರ್ಬಲವಿರುವುದು.

ಸಾವಿರಾರು ಕೋಟಿಯ ವ್ಯವಹಾರವನ್ನು ನಡೆಸುವ ಈ ಕಂಪನಿಗಳ ನಿವ್ವಳ ಲಾಭ ತೀರಾ ಕಡಿಮೆ. ವಿದೇಶಿ ಬಂಡವಾಳದ ಮೂಲಕ ಶುರುವಾದಂತಹ ಕಂಪನಿಗಳ ಮಾಲೀಕರು ಕಂಪನಿಯ ಭವಿಷ್ಯವನ್ನು ಯೋಚಿಸುವ ಬದಲು ತಮ್ಮ ಭವಿಷ್ಯವನ್ನು ಯೋಚಿಸಿ, ತಾವು ಯಾವಾಗ ಹಣ ಮಾಡಿಕೊಂಡು ಕಂಪನಿಯಿಂದ ಹೊರಬೇಕೆಂದೇ ಯೋಚಿಸುತ್ತಿರುತ್ತಾರೆ. ಇದಕ್ಕಾಗಿ ಇವರು ಹುಡುಕುವ ಅಸ ಐಪಿಒ. ಇದರ ಮೂಲಕ ತಮ್ಮ ಕಂಪನಿಯಲ್ಲಿ ಬಂಡವಾಳ ಹೂಡಿದ ಹೂಡಿಕೆದಾರರಿಗೆ ಲಾಭವನ್ನು ನೀಡಿ ತಮ್ಮ ಷೇರುಗಳನ್ನು ಮಾರಿ ಕಂಪನಿಯ ಭವಿಷ್ಯವನ್ನು ಬೇರೆಯವರಿಗೆ ನೀಡುತ್ತಾರೆ.

ನಷ್ಟದಲ್ಲಿರುವ ಹಲವು ಕಂಪನಿಗಳು ಐ.ಪಿ.ಒ ಮೂಲಕ ಮೂಲ ಹೂಡಿಕೆದಾರರಿಗೆ ಬಂಡವಾಳವನ್ನು ಹಿಂದಿರುಗಿಸಿರುವ ಹಲವು
ಉದಾಹರಣೆಗಳಿವೆ.ದಿವಂಗತ ಸಿzರ್ಥ್ ಒಡೆತನದ ಕಾಫಿ ಡೇ ಸಂಸ್ಥೆ ನಷ್ಟದಲ್ಲಿದ್ದರೂ ಸಹ ಐಪಿಒ ಮೂಲಕ ತನ್ನ ಹೂಡಿಕೆ ದಾರರಿಗೆ ತಮ್ಮ ಬಂಡವಾಳದ ಮೇಲೆ ಉತ್ತಮ ಲಾಭ ನೀಡುವ ಕೆಲಸ ಮಾಡಿತ್ತು. ಈ ರೀತಿಯ ತಂತ್ರಗಾರಿಕೆ ಸುಮಾರು ದಶಕಗಳಿಂದ ಪಾಶ್ಚಿಮಾತ್ಯ ದೇಶಗಳಲ್ಲಿ ಜಾರಿಯಲ್ಲಿದೆ, ಅಮೆರಿಕ ದೇಶದ ಷೇರು ಮಾರುಕಟ್ಟೆಯಂತೂ ಇಂತಹ ಕಂಪನಿ ಗಳಿಂದ ತುಂಬಿಹೋಗಿದೆ.

ಅಮೆರಿಕದ ಪ್ರತಿಷ್ಠಿತ ಕಂಪನಿ ಜೆ.ಸಿ ಪೆನ್ನಿ ಸುಮಾರು ವರ್ಷಗಳಿಂದ ನಷ್ಟದಲ್ಲಿದೆ. ಆದರೂ ಸಹ ಈ ಕಂಪನಿ ಅಲ್ಲಿನ ಷೇರು ಮಾರುಕಟ್ಟೆಯಲ್ಲಿ ಲಿಯಾಗಿದೆ. ಕೆಲವು ದಿನಗಳಲ್ಲಿ ಈ ಪಟ್ಟಿಗೆ ‘ಮಾಮ ಅರ್ಥ್’ ಕಂಪನಿಯೂ ಸೇರ್ಪಡೆಯಾಗುತ್ತಿದೆ. ೨೦೨೦ರಲ್ಲಿ ೪೨೦ ಕೋಟಿ ಹಾಗೂ ೨೦೨೧ರಲ್ಲಿ ೧೩೩೨ ಕೋಟಿ ನಷ್ಟ ಅನುಭವಿಸಿದ್ದ ‘ಮಾಮ ಅರ್ಥ್’ ಕಂಪನಿ, ೨೦೨೨ ಕೇವಲ ೧೪ ಕೋಟಿ ಲಾಭ ಮಾಡಿದ್ದು, ೨೦೨೩ರ ಮಧ್ಯಂತರ ಅವಽಯಲ್ಲಿ ಕೇವಲ ೩.೬೨ ಕೋಟಿ ಲಾಭ ಮಾಡಿದೆ.

೨೦೨೩ರ ಮಧ್ಯಂತರ ಅವಽಯ ವೇಳೆಗೆ ಅಂದಾಜು ೭೨೨ ಕೋಟಿ ವಹಿವಾಟು ನಡೆಸಿದ್ದ ’ಮಾಮ ಅರ್ಥ್’ ಅತ್ಯಂತ ಕಡಿಮೆ ಲಾಭ ಕಂಡಿದೆ. ೨೦೨೩ರಲ್ಲಿ ಸಣ್ಣ ಚಿಟಿಕೆ ಉಪ್ಪಿನಷ್ಟು ಲಾಭಗಳಿಸಿರುವ ‘ಮಾಮ ಅರ್ಥ್’ ೨೦೧೬ರಲ್ಲಿ ತನ್ನ ವ್ಯಾಪಾರವನ್ನು ಪ್ರಾರಂಭ ಮಾಡಿತ್ತು. ಸಣ್ಣ ಲಾಭವಾದ ಕೂಡಲೇ ಐ.ಪಿ.ಒಗೆ ಹೋಗುತ್ತಿರುವುದನ್ನು ನೋಡಿದರೆ ಎಂತವರಿಗೂ ಅನುಮಾನ ಬರುತ್ತದೆ. ಈ ಹಿಂದೆ ಇದೆ ರೀತಿ ‘ಪೇಟಿಯಂ’ ಹಾಗೂ ನೈಕ್ ಕಂಪನಿಗಳು ಐಪಿಒಗೆ ನಂತರ ನೆಲಕಚ್ಚಿದ್ದವು, ಈ ಕಂಪನಿಗಳ ಜಾಹೀರಾತನ್ನು ಕಂಡು ಹೂಡಿಕೆ ಮಾಡಿದವರ ಬ್ಯಾಂಕ್ ಖಾತೆಯಲ್ಲಿನ ಹಣ ಖಾಲಿಯಾಗಿತ್ತು.

ಹಿಂದಿನ ಕಾಲದ ಕಂಪನಿಗಳು ಎಂದೂ ಸಹ ಸಣ್ಣ ಲಾಭ ಬಂದ ಕೂಡಲೇ ಷೇರು ಮಾರುಕಟ್ಟೆಯನ್ನು ಪ್ರವೇಶಿಸುತ್ತಿರಲಿಲ್ಲ. ಈಗ ಕಂಪನಿಗಳು ವಿಚಿತ್ರವಾದ ಮೌಲ್ಯಗಳನ್ನು ತಮ್ಮ ಖಾಸಗಿ ಬಂಡವಾಳ ಹೂಡಿಕೆದಾರರ ಮೂಲಕ ತಮ್ಮ ಮೌಲ್ಯ ಮಾಪನದಲ್ಲಿ ಬಳಸಿಕೊಂಡಿವೆ. ಷೇರು ಮಾರುಕಟ್ಟೆಗೂ ಈ ಮೌಲ್ಯಮಾಪನಕ್ಕೂ ಯಾವುದೇ ಸಂಬಂಧವಿರುವುದಿಲ್ಲ. ತಮ್ಮ ಕಂಪನಿಯಲ್ಲಿನ ಮೂಲ ಹೂಡಿಕೆದಾರರ ಹಣವನ್ನು ವಾಪಾಸ್ ನೀಡುವ ಸಲುವಾಗಿ ಬಹುತೇಕ ಕಂಪನಿಗಳು ಮಾರುಕಟ್ಟೆಗೆ ಪ್ರವೇಶಿಸುವಂತಾಗಿದೆ.

ಕಂಪನಿಯ ಮೂಲ ಮಾಲೀಕರು ತಮ್ಮ ಮೂಲ ಹೂಡಿಕೆದಾರರಿಗೆ ಹಣವನ್ನು ವಾಪಸ್ ನೀಡಲು ಸಾಧ್ಯವಾಗದಿದ್ದಾಗ ವಿಚಿತ್ರ
ಮೌಲ್ಯಮಾಪನಗಳನ್ನು ತಯಾರು ಮಾಡಿ ಮಾರುಕಟ್ಟೆಯನ್ನು ಪ್ರವೇಶಿಸಿ ಒಂದು ಅಥವಾ ಎರಡು ವಾರಗಳಲ್ಲಿ ಮೂಲ ಹೂಡಿಕೆದಾರರು ತಮ್ಮ ಹಣದ ಮೂಲಕ ನಿರ್ಗಮಿಸುವಂತೆ ಮಾಡಲಾಗುತ್ತದೆ. ಮೂಲ ಹೂಡಿಕೆದಾರರಿಂದ ಷೇರುಗಳನ್ನು ಖರೀದಿ ಮಾಡಿದ ಸಣ್ಣ ಸಣ್ಣ ಹೂಡಿಕೆದಾರರು ಸಮಯ ಕಳೆದಂತೆ ತಾವು ಹೂಡಿಕೆ ಮಾಡಿದ ಷೇರುಗಳ ಮೌಲ್ಯ ಕಡಿಮೆ ಯಾದಂತೆ ನಷ್ಟ ಅನುಭವಿಸುತ್ತಾರೆ.

ಅಮೆರಿಕ, ಸಿಂಗಪೂರ್, ಜಪಾನ್,ಲಂಡನ್ ಷೇರು ಮಾರುಕಟ್ಟೆಯಲ್ಲಿ ಈ ಮಾದರಿಯನ್ನು ಅನುಸರಿಸಿ ನಿರ್ಗಮಿಸಿದ ಜಗತ್ತಿನ ಪ್ರತಿಷ್ಠಿತ ಬಂಡವಾಳ ಹೂಡುವ ಕಂಪನಿಗಳಿವೆ. ಗೂಗಲ್ ಪೇ, ಫೋನ್ ಪೇ ಭಾರತೀಯ ಮಾರುಕಟ್ಟೆ ಆಕ್ರಮಿಸಿಕೊಂಡ ಮೇಲೆ ಪೇಟಿಯಂ ಕಂಪನಿಯವರನ್ನು ಕೇಳುವವರಿಲ್ಲದಂತಾಗಿದೆ. ಜನವರಿ ೨೦೨೨ರಲ್ಲಿ ‘ಮಾಮ ಅರ್ಥ್’ ಸುಮಾರು ೮೦೦೦ ಕೋಟಿ ಮೌಲ್ಯದ ೫೨ ಮಿಲಿಯನ್ ಅಮೆರಿಕನ್ ಡಾಲರ್ ಹಣವನ್ನು ಹೂಡಿಕೆ ಮಾಡಿಸಿಕೊಂಡಿತ್ತು.

ಒಂದು ವರ್ಷದ ಅವಧಿಯಲ್ಲಿ ತನ್ನ ಕಂಪನಿಯ ಮೌಲ್ಯವನ್ನು ೨೪,೦೦೦ ಕೋಟಿಗೆ ಏರಿಸಿಕೊಂಡಿದೆ. ಇಷ್ಟೊಂದು ಕಡಿಮೆ ಅವಧಿಯಲ್ಲಿ ಈ ಮಟ್ಟದ ಮೌಲ್ಯವನ್ನು ನಷ್ಟದಲ್ಲಿದ್ದ ಕಂಪನಿ ಹೇಗೆ ತಾನೇ ಏರಿಸಿಕೊಳ್ಳಲು ಸಾಧ್ಯವೆಂಬ ಪ್ರಶ್ನೆ ಹಲವರನ್ನು ಕಾಡುತ್ತಿದೆ. ಪ್ರಸ್ತುತ ಈ ಕಂಪನಿ ೨೪,೦೦೦ ಕೋಟಿ ಕಂಪನಿಯ ಮೌಲ್ಯದ ಆಧಾರದ ಮೇಲೆ ಐಪಿಒಗೆ ಬರಲು ಸಜ್ಜಾಗುತ್ತಿದೆ.
ಮಾರುಕಟ್ಟೆಯ ಹೂಡಿಕೆದಾರರಿಗೆ ತಾನು ಐಪಿಒ ಮೂಲಕ ಸುಮಾರು ೨,೪೦೦ ಕೋಟಿಯಷ್ಟು ಹಣವನ್ನು ಕ್ರೂಡೀಕರಿಸು ತ್ತೇವೆ ಎಂದು ಕಂಪನಿ ಹೇಳಿದ್ದು, ಈ ಹಣವನ್ನು ಕಂಪನಿಯ ಜಾಹೀರಾತುಗಳಿಗೆ ಅತಿ ಹೆಚ್ಚು ಬಳಸಿಕೊಳ್ಳುವುದಾಗಿ ಹೇಳಿದೆ.

ತನ್ನ ಆದಾಯಕ್ಕಿಂತಲೂ ೧೭೧೪ ಪಟ್ಟಿನ ಷೇರು ಮೌಲ್ಯವನ್ನು ’ಮಾಮ ಅರ್ಥ್’ ಐಪಿಒ ಮೂಲಕ ನಿರೀಕ್ಷಿಸುತ್ತಿದೆ. ಈ ಹಿಂದೆ ಪಾತಾಳ ಕಂಡಿದ್ದ ’ನೈಕ್’ ಕಂಪನಿಯ ಷೇರು ಮೌಲ್ಯ ತನ್ನ ಅದಾಯದ ೯೬೪ ಪಟ್ಟಿನಷ್ಟಿತ್ತು, ಹತ್ತಾರು ವರ್ಷಗಳಿಂದ ಗ್ರಾಹಕರ ಸರಕು ವಿಭಾಗದಲ್ಲಿ ವ್ಯವಹಾರ ನಡೆಸುತ್ತಿರುವ ಹಿಂದೂಸ್ತಾನ್ ಯುನಿಲಿವರ್ ಲಿಮಿಟೆಡ್‌ನ ಷೇರು ಮೌಲ್ಯ ತನ್ನ ಆದಾಯದ ೬೩ ರಷ್ಟಿದೆ. ದಶಕಗಳ ಹಳೆಯ ಕಂಪನಿಗಳ ಷೇರು ಮೌಲ್ಯ ಇಷ್ಟು ಕಡಿಮೆಯಿರಬೇಕಾದರೆ ನಿನ್ನೆ ಮೊನ್ನೆ ತನ್ನ ವ್ಯವಹಾರ ಶುರುಮಾಡಿದ ಮಾಮ ಅರ್ಥ್ ತನ್ನ ಆದಾಯದ ಸಾವಿರ ಪಟ್ಟನ್ನು ಹೇಗೆ ತಲುಪಲು ಸಾಧ್ಯವೆಂಬ ದೊಡ್ಡ ಪ್ರಶ್ನೆ
ಹೂಡಿಕೆದಾರರನ್ನು ಕಾಡತೊಡಗಿದೆ.

ಇವರದ್ದೇ ದಾರಿಯಲ್ಲಿ ಸಾಗಿದ ಪೇಟಿಯಂ ಹಾಗೂ ನೈಕ್ ಕಂಪನಿಗಳ ಷೇರುಗಳು ಪಾತಾಳಕ್ಕಿಳಿದು ಹೂಡಿಕೆದಾರರಿಗೆ ನಷ್ಟವನ್ನುಟುಮಾಡಿವೆ. ಷೇರು ಮಾರುಕಟ್ಟೆಯನ್ನು ಪ್ರವೇಶಿಸುವ ಮೊದಲು ಯಾರೋ ಹಾಕಿದ ಬಂಡವಾಳಕ್ಕೆ ತಮಗಿಷ್ಟ ಬಂದಂತೆ ಕಂಪನಿಯ ಮೌಲ್ಯವನ್ನು ಅಳೆಯುವ ಕಂಪನಿಗಳು ತಮ್ಮ ಜಾಹೀರಾತಿನ ಮೂಲಕ ಜನರ ಮನಸಿನಲ್ಲಿ ಕೂರುವ ಪ್ರಯತ್ನ ಮಾಡುತ್ತವೆ. ತಲೆ ಬುಡವಿಲ್ಲದ ಮೌಲ್ಯಗಳನ್ನು ನಾಲ್ಕು ಗೋಡೆಗಳ ನಡುವೆಯಷ್ಟೇ ಮಾಡಲು ಸಾಧ್ಯ, ಐಪಿಒ
ಎಂಬುದು ಸಾರ್ವಜನಿಕವಾಗಿ ಲಕ್ಷಾಂತರ ಜನರನ್ನು ಹೂಡಿಕೆ ದಾರರನ್ನಾಗಿಸುವ ವಿಧಾನ.

ಸಾರ್ವಜನಿಕ ಹೂಡಿಕೆದಾರರಿಗೆ ಕಂಪನಿಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲದಿದ್ದರೆ, ಕೇವಲ ಜಾಹೀರಾತುಗಳ ಆಧಾರದ ಮೇಲೆ ಬಂಡವಾಳ ಹೂಡಿದರೆ ನಷ್ಟ ಕಟ್ಟಿಟ್ಟ ಬುತ್ತಿ. ಈಗಾಗಲೇ ಷೇರು ಮಾರುಕಟ್ಟೆಯಲ್ಲಿ ಈ ಕಂಪನಿಯ ಬಗ್ಗೆ ಹಲವು ಬಗೆಯ ಚರ್ಚೆಗಳು ಶುರುವಾಗಿವೆ, ಮಾರುಕಟ್ಟೆ ತಜ್ಞರು ಸಕಾರಾತ್ಮಕವಾಗಿ ಮಾಮ ಅರ್ಥ್‌ನ ಐಪಿಒಗೆ ಸ್ಪಂದಿಸುತ್ತಿಲ್ಲ. ಕಂಪನಿಯ ವಸ್ತುಗಳನ್ನು ಮಾರ್ಕೆಟಿಂಗ್ ಮಾಡುವ ರೀತಿಯಲ್ಲಿ ಕಂಪನಿಯ ಐ.ಪಿ.ಒಗಳನ್ನು ಮಾರುಕಟ್ಟೆ ಮಾಡುವ ದೊಡ್ಡ ದೊಡ್ಡ ಕಂಪನಿಗಳಿವೆ.

ಅದಕ್ಕಾಗಿಯೇ ಆ ಕಂಪನಿ ಕೋಟ್ಯಂತರ ರುಪಾಯಿ ಹಣವನ್ನು ವ್ಯಯ ಮಾಡುತ್ತದೆ. ಹೂಡಿಕೆದಾರರು ಈ ಬಗ್ಗೆ ಎಚ್ಚರದಲ್ಲಿರ ಬೇಕು. ಆಗಲೇ ಹೇಳಿದ ಹಾಗೆ ಒಂದು ಕಂಪನಿಯ ಮೂಲಭೂತ ಅಂಶಗಳ ಬಗ್ಗೆ ಅನುಮಾನವಿದ್ದಲ್ಲಿ ಎಂದಿಗೂ ಸಹ ಅದರ ಷೇರುಗಳಲ್ಲಿ ಹೂಡಿಕೆ ಮಾಡಬಾರದು. ಮುಂದಿನ ದಿನಗಳಲ್ಲಿ ಇಷ್ಟೊಂದು ಕುತೂಹಲ ಮೂಡಿಸಿರುವ ಮಾಮ ಅರ್ಥ್‌ನ ಐ.ಪಿ.ಒ ಯಾವ ದಿಕ್ಕಿನಲ್ಲಿ ಸಾಗುತ್ತದೆಯೆಂದು ಕಾದು ನೋಡಬೇಕಿದೆ.
Read E-Paper click here