Saturday, 23rd November 2024

ಷೇರುಪೇಟೆ ಇಳಿಕೆ

ಮುಂಬೈ: ಭಾರತದ ಷೇರು ಮಾರುಕಟ್ಟೆಗಳ (Indian Share Markets) ಕುಸಿತದ ಟ್ರೆಂಡ್ ಮುಂದುವರಿಯುತ್ತಿದೆ. ಬಜೆಟ್ ಮಂಡನೆ ದಿನ ಬೆಳಗ್ಗೆ ಏರಿಕೆ ಕಂಡು, ಬಳಿಕ ಸಂಜೆಯ ವೇಳೆ ಷೇರುಗಳು ಕುಸಿದಿದ್ದವು.

ಇಂದು ಗುರುವಾರ ಬೆಳಗ್ಗೆ ಷೇರುಪೇಟೆ ಇಳಿಕೆ ಕಂಡಿದೆ. ಬಿಎಸ್​ಇ ಸೆನ್ಸೆಕ್ಸ್​ನ ಎಸ್ ಅಂಡ್ ಪಿ ವಿಭಾಗವು ಗುರುವಾರದ ವಹಿವಾಟಿ ನಲ್ಲಿ ಶೇ. 0.7, ಅಂದರೆ 463 ಅಂಕಗಳಷ್ಟು ಇಳಿಕೆ ಕಂಡು 59,245 ಮಟ್ಟಕ್ಕೆ ಬಂದಿದೆ. ಇನ್ನು ನಿಫ್ಟಿ50 (Nifty50) ಸೂಚ್ಯಂಕ ಕೂಡ 163 ಅಂಕಗಳಷ್ಟು ಕಡಿಮೆಯಾಗಿ 17,450 ಮಟ್ಟ ತಲುಪಿದೆ. ನಿನ್ನೆ ಮಂಡನೆಯಾದ ಬಜೆಟ್ 2023ನಿಂದ ನಿರೀಕ್ಷಿದ ಕ್ರಮಗಳು ಬರದೇ ಇದ್ದದ್ದು ಈ ಕುಸಿತಕ್ಕೆ ಒಂದು ಕಾರಣವಾದರೆ ಷೇರುಮಾರುಕಟ್ಟೆಯ ಎಫ್ ಅಂಡ್ ಒ ಟ್ರೇಡಿಂಗ್​ನ ವಾರದ ಗಡುವು ದಿನ ಮುಗಿದಿದ್ದರ ಪರಿಣಾಮವೂ ಈ ಕುಸಿತಕ್ಕೆ ಇನ್ನೊಂದು ಕಾರಣ ಎಂದು ಹೇಳಲಾಗುತ್ತಿದೆ.

ನಿರೀಕ್ಷೆಯಂತೆ ಅದಾನಿ ಗ್ರೂಪ್​ನ ಹಲವು ಸಂಸ್ಥೆಗಳ ಷೇರುಗಳು ಕುಸಿತ ಕಂಡಿವೆ.

ಇದರಿಂದಲೂ ಅವುಗಳ ಕುಸಿತ ಮುಂದುವರಿಕೆ ಆಗಿರಬಹುದು. ಅದಾನಿ ಕಂಪನಿಗಳ ಜೊತೆಗೆ ಎಚ್​ಡಿಎಫ್​ಸಿ ಲೈಫ್, ಎಸ್​ಬಿಐ, ಯುಪಿಎಲ್, ಯುಪಿಎಲ್ ಮತ್ತು ಐಸಿಐಸಿಐ ಬ್ಯಾಂಕ್​ನ ಷೇರುಗಳು ಗುರುವಾರದ ಬೆಳಗಿನ ವಹಿವಾಟಿನಲ್ಲಿ ಶೇ. 9.5ರವರೆಗೂ ಮೌಲ್ಯ ಕಳೆದುಕೊಂಡಿವೆ.

ಇನ್ನೊಂದೆಡೆ ಎಸ್​ಬಿಐ ಲೈಫ್, ಇನ್ಫೋಸಿಸ್, ಐಟಿಸಿ, ಟೆಕ್ ಮಹೀಂದ್ರ, ಹೆಚ್​ಸಿಎಲ್ ಟೆಕ್ ಮೊದಲಾದ ಕಂಪನಿಗಳ ಷೇರುಗಳು ತುಸು ವೃದ್ಧಿ ಕಂಡಿವೆ.

ಅಮೆರಿಕದಲ್ಲಿ ಹಣದುಬ್ಬರ ಕಡಿಮೆಯಾಗುವ ಸಾಧ್ಯತೆ ಕಾಣುತ್ತಿದೆ ಎಂದು ಅಲ್ಲಿನ ಸೆಂಟ್ರಲ್ ಬ್ಯಾಂಕ್ ಮುಖ್ಯಸ್ಥ ಜಿರೋಮ್ ಪೋವೆಲ್ ಹೇಳಿದ ಬೆನ್ನಲ್ಲೇ ಏಷ್ಯಾದ ಕೆಲ ಷೇರುಪೇಟೆಗಳ ವಹಿವಾಟಿನಲ್ಲಿ ತುಸು ವ್ಯತ್ಯಯಗಳಾಗಿವೆ.

ಇನ್ನು, ಅಮೆರಿಕದ ಷೇರುಮಾರುಕಟ್ಟೆಗಳ ಪೈಕಿ ನಾಸ್ಡಾಕ್ ಕಾಂಪೋಸಿಟ್ ಇಂಡೆಕ್ಸ್, ಎಸ್ ಅಂಡ್ ಪಿ 500, ಡೋ ಜೋನ್ಸ್ ಇಂಡೆಕ್ಸ್ ತುಸು ಮಟ್ಟಿಗೆ ಏರಿಕೆ ಕಂಡಿವೆ.