Saturday, 14th December 2024

ಚಂದನವನಕ್ಕೆ ಎಂಬತ್ತೆಂಟು, ನಲುಗದ ಕನ್ನಡ ನಂಟು

ಶಿವಪ್ರಸಾದ್‌ ಎ.

‘ಮೆಲ್ಲುಸಿರೀ ಸವಿಗಾನ ಎದೆ ಝಲ್ಲೆನೆ ಹೂವಿನ ಬಾಣ’ ಈ ಹಾಡಿನ ಸಾಲುಗಳನ್ನು ಕೇಳಿಸಿಕೊಂಡ ಪ್ರತಿಯೊಂದು ಬಾರಿಯೂ
ಮನಸ್ಸು ಮುದಗೊಳ್ಳುತ್ತದೆ. ನಮ್ಮ ರಾಜ್ಯದ ಸಂಸ್ಕೃತಿ ಮತ್ತು ಕಲಾ ಉನ್ನತಿಗೆ ಕನ್ನಡ ಚಿತ್ರರಂಗದ ಕೊಡುಗೆ ಅವಿಸ್ಮರಣೀಯ.
ಈ ವರ್ಷ ನಮ್ಮ ಕನ್ನಡ ಚಿತ್ರರಂಗಕ್ಕೆ ಎಂಬತ್ತೆಂಟು ವಸಂತಗಳು ತುಂಬಿದ ಸಂಭ್ರಮ.

ಹೌದು, ಈ ಸಂದರ್ಭದಲ್ಲಿ ಚಿತ್ರರಂಗ ಇಲ್ಲಿಯವರೆಗೆ ನಡೆದು ಬಂದ ದಾರಿಯನ್ನು ಅವ ಲೋಕಿಸಿ, ಇದರ ಭವಿಷ್ಯದ ಬಗ್ಗೆ ನಾವು ಚಿಂತಿಸಬೇಕು. ಎಂಬತ್ತೆಂಟು ವರ್ಷಗಳ ಹಿಂದೆ ಮೊದಲ ಕನ್ನಡ ಟಾಕಿ ಚಿತ್ರವಾಗಿ ‘ಸತಿ ಸುಲೋಚನ’ ತೆರೆಕಂಡಿತ್ತು. ಈ ಚಿತ್ರ ವನ್ನು ಮಹಾರಾಷ್ಟ್ರದ ಕೊಲ್ಹಾಪುರದ ಛತ್ರಪತಿ ಸ್ಟುಡಿಯೋದಲ್ಲಿ ಚಿತ್ರೀಕರಿಸಿದ್ದರು. ದಕ್ಷಿಣ ಭಾರತದ ಇತರೆಲ್ಲ ಭಾಷೆ ಗಳಂತೆಯೇ ಕನ್ನಡ ಚಿತ್ರರಂಗವೂ ಮೊಳಕೆಯೊಡೆದದ್ದು ಅಂದಿನ ಮದರಾಸು ನಗರವಾಗಿದ್ದ ಚೆನ್ನೈನಲ್ಲಿ.

ಚಿತ್ರನಿರ್ಮಾಣಕ್ಕೆ ಸಂಬಂಧಪಟ್ಟ ಕಲಾವಿದರು, ತಂತ್ರಜ್ಞರು ಮತ್ತು ಸೌಕರ್ಯಗಳು ಚೆನ್ನೈನಲ್ಲಿ ಮಾತ್ರ ಲಭ್ಯವಿದ್ದ ಕಾಲದಲ್ಲಿ ಹಗಲು ಹೊತ್ತಿನಲ್ಲಿ ತೆಲುಗು, ತಮಿಳು ಭಾಷೆಗಳ ಚಿತ್ರಗಳನ್ನು ಚಿತ್ರೀಕರಿಸುತ್ತಿದ್ದ ಸ್ಟುಡಿಯೋ ಮತ್ತು ಸೆಟ್‌ಗಳಲ್ಲೇ ನಮ್ಮ ಕನ್ನಡ ಚಿತ್ರಗಳು ರಾತ್ರಿಯ ವೇಳೆ ನಿರ್ಮಾಣ ಗೊಳ್ಳುತ್ತಿದ್ದವು. ಹೌದು, ನಮ್ಮ ಕನ್ನಡ ಚಿತ್ರಗಳನ್ನು ಅಂದು ನಿರ್ಮಿಸಿದ ದಿಗ್ಗಜರಾದ ಗುಬ್ಬಿ ವೀರಣ್ಣ, ಎಚ್.ಎಲ್.ಎನ್. ಸಿಂಹ, ಬಿ.ಆರ್.ಪಂತುಲು, ಸಿಂಗ್ ಠಾಕೂರ್, ಜಿ.ವಿ.ಐಯ್ಯರ್, ಹುಣಸೂರು ಕೃಷ್ಣಮೂರ್ತಿ ಮುಂತಾದವರು ಇಂಥ ಪರಿಸ್ಥಿತಿಗಳಲ್ಲಿ ಕೆಲಸಮಾಡುತ್ತಿದ್ದರು.

ಇಂದಿನ ಪೀಳಿಗೆಗೆ, ಆಗಿನವರು ಅನುಭವಿಸುತ್ತಿದ್ದ ಕಷ್ಟಗಳು ಸರ್ವಥಾ ಅರ್ಥವಾಗಲಾರವು. ಕನ್ನಡ ಚಿತ್ರಗಳಿಗೆ ಸೀಮಿತ ಮಾರು ಕಟ್ಟೆ ಇರುತ್ತಿತ್ತು. ಈ ಪರಿಸ್ಥಿತಿಯಲ್ಲಿ ಸ್ವತಂತ್ರವಾಗಿ ಕನ್ನಡ ಚಿತ್ರಗಳ ಮೇಲೆ ಹೆಚ್ಚಿನ ಹಣ ತೊಡಗಿಸುವ ಧೈರ್ಯ ನಿರ್ಮಾಪಕ ರಿಗಿರಲಿಲ್ಲ. ಆದ್ದರಿಂದ ರಾತ್ರಿಯ ವೇಳೆ ಕನ್ನಡ ಚಿತ್ರಗಳ ಚಿತ್ರೀಕರಣದ ಪದ್ಧತಿ ಆಗ ಜಾರಿಯಲ್ಲಿತ್ತು. ಐವತ್ತರ ದಶಕದಲ್ಲಿ ಕನ್ನಡ ಚಿತ್ರಜಗತ್ತಿಗೆ ಕಾಲಿಟ್ಟು, ಸುಮಾರು ಐದು ದಶಕಗಳ ಕಾಲ ಈ ರಂಗವನ್ನಾಳಿದ ಡಾ||ರಾಜ್‌ಕುಮಾರ್ ಕೂಡ ಆ ವೇಳೆಗಿನ್ನೂ ಜನಪ್ರಿಯತೆಯ ಸೋಪಾನವನ್ನೇರತೊಡಗಿದ್ದರು.

ಐವತ್ತು ಮತ್ತು ಅರುವತ್ತರ ದಶಕದ ಅಂತ್ಯದವರೆಗೂ ಚೆನ್ನೈನಲ್ಲೇ ಕೇಂದ್ರಿತವಾಗಿದ್ದ ಚಿತ್ರರಂಗ, ಎಪ್ಪತ್ತರ ದಶಕದವೇಳೆಗೆ ತನ್ನ ತವರಾದ ಬೆಂಗಳೂರಿಗೆ ಬಂತು. ಅದೇ ವೇಳೆಗೆ ಕಲಾತ್ಮಕ ಚಿತ್ರಗಳೆಂದೇ ಪರಿಗಣಿಸಲಾಗುವ ವಂಶವೃಕ್ಷ, -ಣಿಯಮ್ಮ, ಹಂಸಗೀತೆ
ಮುಂತಾದ ಚಿತ್ರಗಳು ತೆರೆಕಾಣತೊಡಗಿದವು. ಗಂಭೀರ ಸಾಹಿತ್ಯಿಕ ಕೃತಿಗಳನ್ನೂ ಕೈಗೆತ್ತಿಕೊಂಡು ಅವುಗಳನ್ನಾಧರಿಸಿ ಚಿತ್ರ ನಿರ್ಮಾಣ ಮಾಡುವ ಒಂದು ಹೊಸ ಬೆಳವಣಿಗೆ ಆಗ ಪ್ರಾರಂಭವಾಯಿತು.

ಗಿರೀಶ್ ಕಾರ್ನಾಡ್, ಬಿ.ವಿ.ಕಾರಂತ್ ಮತ್ತು ಯು.ಆರ್.ಅನಂತಮೂರ್ತಿ ಮುಂತಾದವರು ಇಂಥ ಚಿತ್ರಪರಂಪರೆಗೆ ನಾಂದಿ ಹಾಡಿದರು. ಇದರಿಂದಾಗಿ ಹಲವು ರಾಷ್ಟ್ರ ಪ್ರಶಸ್ತಿಗಳೂ ಕನ್ನಡ ಚಿತ್ರಗಳನ್ನು ಹುಡುಕಿಕೊಂಡು ಬಂದವು. ಹಾಗೆಯೇ ಕುವೆಂಪು, ಬೇಂದ್ರೆ, ಗೋಪಾಲಕೃಷ್ಣ ಅಡಿಗ, ಕೆ.ಎಸ್.ನರಸಿಂಹಸ್ವಾಮಿಯವರಂಥ ಅಪ್ರತಿಮ ಕನ್ನಡ ಸಾಹಿತಿಗಳ ರಚನೆಗಳನ್ನು ಮತ್ತು ತ್ರಿವೇಣಿ, ಟಿ.ಕೆ.ರಾಮರಾವ್, ತರಾಸು ಮುಂತಾದ ಕಾದಂಬರಿಕಾರರ ಕೃತಿಗಳನ್ನು ಜನಪ್ರಿಯಗೊಳಿಸುವಲ್ಲಿ ಕನ್ನಡ ಚಿತ್ರಗಳು ನಿರ್ವಹಿಸಿದ ಪಾತ್ರ ಅಪೂರ್ವ.

ಈ ವೇಳೆಗೆ ನಿರ್ದೇಶಕನೇ ಚಿತ್ರದ ಅನಭಿಷಿಕ್ತ ದೊರೆ ಎಂಬಂತಿದ್ದ ಪುಟ್ಟಣ್ಣ ಕಣಗಾಲ್‌ರ ಚಿತ್ರಗಳೂ ಅಪಾರ ಜನಪ್ರಿಯತೆ ಗಳಿಸ ತೊಡಗಿದವು. ಅವರು ಹಲವಾರು ಹೊಸ ಪ್ರತಿಭೆಗಳಿಗೆ ಪ್ರೋತ್ಸಾಹವಿತ್ತು ಅವರೆಲ್ಲರಿಗೂ ಜನಮನ್ನಣೆ ದೊರೆಯುವಂತೆ ಮಾಡಿದರು. ಇವರಲ್ಲಿ ಡಾ.ವಿಷ್ಣುವರ್ಧನ್, ಡಾ. ಅಂಬರೀಶ್, ಜೈಜಗದೀಶ್, ಶ್ರೀನಾಥ್, ಚಂದ್ರಶೇಖರ್, ವಜ್ರಮುನಿ ಮುಂತಾದವರು ಪ್ರಮುಖರು. ಕನ್ನಡ ಚಿತ್ರರಂಗದವರು ಗೋಕಾಕ್ ಚಳವಳಿ ಮುಂತಾದವುಗಳಲ್ಲಿ ಭಾಗವಹಿಸುವುದರೊಂದಿಗೆ ಕನ್ನಡ ಭಾಷಾ ಪ್ರೇಮವನ್ನೂ ಮೆರೆದರು.

ಕನ್ನಡ ಪುಸ್ತಕಗಳ ಮಾರುಕಟ್ಟೆ ಬೆಳೆಯುವುದಕ್ಕೂ ಚಿತ್ರರಂಗವು ಅಪೂರ್ವ ಕೊಡುಗೆ ನೀಡಿದೆ. ನಮ್ಮ ಸಾಹಿತಿಗಳನ್ನು
ಜನಪ್ರಿಯಗೊಳಿಸುವುದರಲ್ಲಿ ಚಿತ್ರರಂಗದ ಪಾತ್ರ ಮಹತ್ವದ್ದು. ಪ್ರಸ್ತುತ ಪರಿಸ್ಥಿತಿಯಲ್ಲಿ, ಹಲವು ಅರ್ಥಪೂರ್ಣ ಚಿತ್ರಗಳು
ಕನ್ನಡದಲ್ಲಿ ಬರುತ್ತಿವೆಯಾದರೂ ಹಿಂದೆ ಬರುತ್ತಿದ್ದಂಥ ಉತ್ತಮ ಗುಣಮಟ್ಟದ ಚಿತ್ರಗಳು ಈಗ ಬರುತ್ತಿಲ್ಲವೇನೋ ಎಂಬ
ಕೊರಗು ಅನುಭವಕ್ಕೆ ಬರದಿರಲಾರದು. ಚಿತ್ರದ ಬಿಡುಗಡೆಗೆ ಮುನ್ನವೇ ಅದರ ನಕಲು ಪ್ರತಿಗಳು ಅಂತರ್ಜಾಲದ ಮಾರುಕಟ್ಟೆ ಯಲ್ಲಿ ಲಭ್ಯವಿರುವ ಇಂದಿನ ಪರಿಸ್ಥಿತಿಯಲ್ಲಿ, ಚಿತ್ರರಂಗದ ಉಳಿವಿಗೇ ಸವಾಲಾಗಿದೆ. ಈಗ ನೆಟ್‌ಫ್ಲಿಕ್ಸ್ ಮತ್ತು ಅಮೇಜಾನ್ ಪ್ರೈಮ್‌ಗಳ ಯುಗ. ಒಟಿಟಿ ಯುಗದಲ್ಲಿ ಚಿತ್ರರಂಗದ ಪ್ರಸ್ತುತತೆಯನ್ನು ಹೇಗೆ ಉಳಿಸಿಕೊಳ್ಳಬೇಕೆಂಬುದೂ ಒಂದು ಸವಾಲು.

ಹೀಗಾಗಿ, ಭಾರತೀಯ ಚಿತ್ರರಂಗವು ಪ್ಯಾನ್ ಇಂಡಿಯಾ ಚಿತ್ರಗಳ ಒಂದು ಹೊಸ ಪರಂಪರೆಯನ್ನು ಹುಟ್ಟುಹಾಕಿದೆ. ಕನ್ನಡ ಚಿತ್ರರಂಗವೂ ಇದಕ್ಕೆ ಮಿಗಿಲಾಗಿಲ್ಲ. ಕೆಜಿಎಫ್ ೧ ಮತ್ತು ೨, ವಿಕ್ರಾಂತ್ ರೋಣ, ಕಾಂತಾರ ಮುಂತಾದ ಚಿತ್ರಗಳು ಇತ್ತೀಚಿನ ದಿನಗಳಲ್ಲಿ ಕರ್ನಾಟಕದಲ್ಲಷ್ಟೇ ಅಲ್ಲದೆ, ಅಖಿಲ ಭಾರತಮಟ್ಟದಲ್ಲಿ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲೂ ಗುಲ್ಲೆಬ್ಬಿಸುತ್ತಿವೆ. ಕನ್ನಡ ಚಿತ್ರರಂಗದ ಮತ್ತು ಕನ್ನಡ ಸಂಸ್ಕೃತಿಯ ಛಾಪನ್ನು ಇಡೀ ವಿಶ್ವದೆಲ್ಲೆಡೆ ಮೂಡಿಸುತ್ತ ಜನಮೆಚ್ಚುಗೆ ಗಳಿಸುತ್ತಿರುವ ಇಂಥ ಚಿತ್ರಗಳು ಮತ್ತಷ್ಟು ಸಂಖ್ಯೆಯಲ್ಲಿ ಬಂದರೆ, ತೆಲುಗು ಮತ್ತು ತಮಿಳು ಚಿತ್ರರಂಗಗಳ ನೆರಳಿನಿಂದ ಕನ್ನಡ ಚಿತ್ರಗಳೂ ಸಂಪೂರ್ಣವಾಗಿ ಹೊರಬರಲು ಸಾಧ್ಯವಾಗುತ್ತದೆ. ಈ ಪ್ಯಾನ್ ಇಂಡಿಯಾ ಚಿತ್ರಗಳಿಂದ ದೇಶದೆಲ್ಲೆಡೆ ಕನ್ನಡ ಚಿತ್ರರಂಗವೂ ಗಣನೆಗೆ ಬರುವಂಥ ಚಿತ್ರಗಳನ್ನು ನೀಡಬಲ್ಲ ಸಾಮರ್ಥ್ಯ ಹೊಂದಿದೆಯೆಂಬುದು ಸರ್ವವಿದಿತವಾಗಿದೆ.

ಚಿತ್ರಸಂಗೀತವನ್ನು ಹೊಸ ದಿಕ್ಕಿನೆಡೆಗೆ ಸುಮಾರು ಮೂರು ದಶಕಗಳ ಹಿ.ದೆ ‘ಯುಗಪುರುಷ’ ಹಂಸಲೇಖ ಕೊಂಡೊಯ್ದರೆ, ಎರಡು ದಶಕಗಳ ಹಿಂದೆ ನಿರ್ದೇಶಕ ‘ಟೋಪಿವಾಲ’ ಉಪೇಂದ್ರ ಸಂಚಲನಾತ್ಮಕ ಚಿತ್ರಗಳನ್ನು ನೀಡುತ್ತ ಮತ್ತೆ ಈ ರಂಗದ ದಿಕ್ಕು
ಬದಲಿಸಿದರು. ಇತ್ತೀಚಿನ ದಿನಗಳಲ್ಲಿ ‘ಪರಮಾತ್ಮ’ ಯೋಗರಾಜ್ ಭಟ್ ಚಿತ್ರ ಸಾಹಿತ್ಯ, ಗೀತ ರಚನೆ, ನಿರ್ದೇಶನ ಮುಂತಾದ ಮಜಲುಗಳಲ್ಲಿ ಹೊಸ ಆಯಾಮಗಳಿಗೆ ನಾಂದಿ ಹಾಡಿದ್ದಾರೆ.

ಹೊಂಬಾಳೆ ಫ಼ಿಲ್ಮ್ಸ್‌ನಂಥ ಚಿತ್ರನಿರ್ಮಾಣ ಸಂಸ್ಥೆಗಳು ಬಹುದೊಡ್ಡ ಮೊತ್ತದ ಹಣವನ್ನು ಹೂಡಿ, ಅದಕ್ಕಿಂತ ಹಲವು ಪಟ್ಟು ಹೆಚ್ಚಿನ ಹಣವನ್ನು ಮತ್ತೆ ಮಾರುಕಟ್ಟೆಯಿಂದ ಹೇಗೆ ಹಿಂಪಡೆಯಬಹುದೆಂಬುದನ್ನು ತೋರಿಸಿವೆ. ಇವರೆಲ್ಲರೂ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ನವೀನ ಮೈಲಿಗಲ್ಲುಗಳನ್ನು ಸ್ಥಾಪಿಸುತ್ತಿದ್ದಾರೆ. ತೀರಾ ಇತ್ತೀಚಿನ ದಿನಗಳಲ್ಲಿ ಕರಾವಳಿ ಪ್ರತಿಭೆಗಳಾದ ರಿಷಭ್ ಶೆಟ್ಟಿ, ರಾಜ್ ಬಿ ಶೆಟ್ಟಿ, ರಕ್ಷಿತ್ ಶೆಟ್ಟಿ, ಪ್ರಮೋದ್ ಶೆಟ್ಟಿ, ಅನೂಪ್ ಮತ್ತು ನಿರೂಪ್ ಭಂಡಾರಿ ಮುಂತಾದವರು ನಿರ್ದೇಶನ ಮತ್ತು ನಟನೆಯ ವಿಭಾಗಗಳಲ್ಲಿ ಮತ್ತು ಅಜನೀಶ್ ಲೋಕ್‌ನಾಥ್‌ರಂಥ ಪ್ರತಿಭೆಗಳು ಸಂಗೀತ ನಿರ್ದೇಶನದ ವಿಭಾಗದಲ್ಲಿ ಚಿತ್ರರಂಗದ ಕೀರ್ತಿ ಪತಾಕೆಯನ್ನು ಮುಗಿಲೆತ್ತರಕ್ಕೇರಿಸುತ್ತಿದ್ದಾರೆ. ಹಲವು ಹೊಸ ಪ್ರತಿಭೆಗಳು ಇತರ ತಾಂತ್ರಿಕ ವಿಭಾಗಗಳಲ್ಲಿ ಕೆಲಸ ಮಾಡುತ್ತ ಚಿತ್ರರಂಗವನ್ನು ಹೊಸ ದಿಗಂತದೆಡೆಗೆ ಕೊಂಡೊಯ್ಯುತ್ತಿದ್ದಾರೆ.

ಈ ಹಿಂದೆ ಚಿತ್ರರಂಗಕ್ಕೆ ಸರ್ಕಾರದ ನೆರವು ದೊರೆಯದೇ ಇದ್ದಂಥ ಮತ್ತು ಅತಿ ಕಡಿಮೆ ಪ್ರೋತ್ಸಾಹ ದೊರೆಯುತ್ತಿದ್ದ ದಿನಗಳಲ್ಲೂ ಎಷ್ಟೋ ಮರೆಯಲಾಗದ ಚಿತ್ರಗಳು ನಿರ್ಮಾಣ ಗೊಂಡು ಜನಮಾನಸದಲ್ಲಿ ಅಚ್ಚಳಿಯದೆ ಉಳಿದುಕೊಂಡಿವೆ. ಇಂದಿನ ಪರಿಸ್ಥಿತಿಯಲ್ಲಿ ಬಯಸಿದ ಪ್ರೋತ್ಸಾಹ, ನೆರವು ಸರ್ಕಾರ ದಿಂದ ದೊರೆಯುತ್ತಿದೆ, ಚಿತ್ರಗಳು ತಾಂತ್ರಿಕವಾಗಿ ಹಿಂದೆಂದಿ ಗಿಂತಲೂ ಉತ್ತಮವಾಗಿವೆ. ಆದರೆ ಹಲವು ಚಿತ್ರಗಳ ಬೌದ್ಧಿಕ ಗುಣಮಟ್ಟ ಮಾತ್ರ ಕುಸಿದಿದೆ. ಹೀಗೆಂದು ಇಡೀ ಚಿತ್ರರಂಗವನ್ನೇ ದೂಷಿಸುವಂಥ ಪರಿಸ್ಥಿತಿ ಇಲ್ಲವಾದರೂ, ಕಾದಂಬರಿಯಾಧಾರಿತ ಚಿತ್ರಗಳ ಯುಗದ ಮನಮಿಡಿಯುವ ಕಥೆಗಳು ಮತ್ತು
ಪಾತ್ರಗಳ ದಿನಗಳನ್ನು ನಾವು ಮತ್ತೆ ನೋಡಬೇಕೆಂಬ ಹಂಬಲ ಮನದಲ್ಲಿ ತುಡಿಯುತ್ತಿದೆ. ಈ ವಿಷಯವನ್ನು ಸಂಬಂಧಪಟ್ಟ
ನಿರ್ಮಾಪಕರು, ನಿರ್ದೇಶಕರು, ತಂತ್ರಜ್ಞರು ಮತ್ತು ಕಲಾವಿದರು ಗಂಭೀರವಾಗಿ ಪರಿಗಣಿಸಬೇಕು ಮತ್ತು ತಮ್ಮ ಕೆಲಸದ ಬಗ್ಗೆ ಆತ್ಮಾವಲೋಕನ ನಡೆಸಿಕೊಳ್ಳಬೇಕು. ಇದರ ಅವಶ್ಯಕತೆ ಈಗ ನಮ್ಮ ಚಿತ್ರರಂಗಕ್ಕಿದೆ.

Read E-Paper click here