ಬೆಂಗಳೂರು: ವಂಡರ್ಲಾ ತನ್ನ 3ನೇ ತ್ರೈಮಾಸಿಕ ಫಲಿತಾಂಶವನ್ನು ಘೋಷಿಸಿದ್ದು, ಈ ಅವಧಿಯಲ್ಲಿ 118 ಕೋಟಿ ರೂ. ಆದಾಯ ವನ್ನು ಹೆಚ್ಚಿಸಿಕೊಂಡಿದೆ.
ಪ್ರತಿ ತ್ರೈಮಾಸಿಕದಲ್ಲಿಯೂ ಉತ್ತಮ ಫಲಿತಾಂಶ ಕಾಣುತ್ತಿರುವ ವಂಡರ್ ಲಾ, ಈ ವರ್ಷದ ಮೂರನೇ ತ್ರೈಮಾಸಿಕದಲ್ಲಿ 118 ಕೋಟಿ ರೂ. ಆದಾಯ ಗಳಿಸುವ ಮೂಲಕ ಶೇ. 62ರಷ್ಟು ವೃದ್ಧಿಸಿಕೊಂಡಿದೆ. ಈ ಅವಧಿಯಲ್ಲಿ ವಂಡರ್ಲಾ ಪಾರ್ಕ್ಗೆ ಒಟ್ಟು 9 ಲಕ್ಷ ಜನರು ಭೇಟಿ ನೀಡಿ ಮನರಂಜನೆ ಪಡೆದುಕೊಂಡಿದ್ದಾರೆ. ಬೆಂಗಳೂರು ಪಾರ್ಕ್ಗೆ 3.21 ಲಕ್ಷ ಜನರು, ಕೊಚ್ಚಿ ಪಾರ್ಕ್ಗೆ 3.16 ಲಕ್ಷ ಹಾಗೂ ಹೈದರಾಬಾದ್ ಪಾರ್ಕ್ಗೆ 2.82 ಲಕ್ಷ ಜನರು ಭೇಟಿ ನೀಡಿದ್ದು, ಬೆಂಗಳೂರಿಗೆ ಅತಿ ಹೆಚ್ಚು ಜನರು ಆಗಮಿಸಿದ್ದಾರೆ. ಇನ್ನು, ಆದಾಯದಲ್ಲಿಯೂ ವರ್ಷದಿಂದ ವರ್ಷಕ್ಕೆ ಏರಿಕೆ ಕಾಣುತ್ತಿದೆ.
2022ರ ಹಣಕಾಸು ವರ್ಷದ ಕೊನೆಯ ತ್ರೈಮಾಸಿಕದಲ್ಲಿ ಕೇವಲ 7.2 ಲಕ್ಷ ಜನರು ಆಗಮಿಸಿದ್ದರು, ಈ ಬಾರಿ 9.2 ಲಕ್ಷ ಜನರು ಭೇಟಿ ನೀಡಿದ್ದಾರೆ. ಆದಾಯವೂ ಸಹ ಕಳೆದ ಬಾರಿ 72.7 ಕೋಟಿ ಸಂಗ್ರಹವಾಗಿತ್ತು. ಈ ಬಾರಿ 118 ಕೋಟಿ ಸಂಗ್ರಹವಾಗಿದೆ. ಅದೇರೀತಿ ವಂಡರ್ಲಾ ರೆಸಾರ್ಟ್ನಲ್ಲಿಯೂ ಶೇ.72ರಷ್ಟು ಆದಾಯ ಹೆಚ್ಚಳವಾಗಿದೆ ಎಂದು ವಂಡರ್ಲಾ ಎಂಡಿ ಅರುಣ್ ಕೆ. ಚಿಟ್ಟಿಲಪ್ಪಿಳ್ಳಿ ತಿಳಿಸಿದರು.
ಕಳೆದ ಕೋವಿಡ್ ಸಂದರ್ಭದಲ್ಲಿ ಸಾಕಷ್ಟು ನಷ್ಟ ಅನುಭವಿಸಿದ್ದ ವಂಡರ್ಲಾ ಕೋವಿಡ್ ಬಳಿಕ ಹಂತಹAತವಾಗಿ ಚೇತರಿಸಿ ಕೊಂಡಿದೆ. ಜನರು ಸಹ ಮನರಂಜನೆಗೋಸ್ಕರ ವಂಡರ್ಲಾ ಪಾರ್ಕ್ನತ್ತ ಹೆಜ್ಜೆ ಇಡುತ್ತಿರುವುದು ಸಂತಸ ನೀಡಿದೆ. ವಂಡರ್ಲಾ ಪಾರ್ಕ್ನನ್ನು ಜನರ ಮನರಂಜನೆಗೆ ಸಾಧ್ಯವಾದಷ್ಟು ತೆರೆದಿರಲು ಹೊಸ ಹೊಸ ಗೇಮ್ಗಳನ್ನು ಪರಿಚಯಿಸುತ್ತಿದ್ದೇವೆ. ಈ ಎಲ್ಲಾ ಬೆಳವಣಿಗೆಯಿಂದ ವಂಡರ್ಲಾ ಫಲಿತಾಂಶವೂ ಉತ್ತಮವಾಗಿ ಬಂದಿದೆ ಎಂದು ಹೇಳಿದರು.