ವೀಕೆಂಡ್ ವಿತ್ ಮೋಹನ್
camohanbn@gmail.com
ಭಾರತವು ಮಹಾರಾಜರ ಆಳ್ವಿಕೆಯಿಂದ ಹೊರಬಂದು ಪ್ರಜಾಪ್ರಭುತ್ವ ದೇಶವಾಗಿ ೭ ದಶಕಗಳು ಕಳೆದಿವೆ. ಪ್ರಜಾಪ್ರಭುತ್ವದಲ್ಲಿ
ತೆಗೆದುಕೊಳ್ಳಬೇಕಿರುವ ನಿರ್ಧಾರಗಳಿಗೆ ದೇಶದ ಪ್ರತಿಯೊಬ್ಬ ನಾಗರಿಕನೂ ಧ್ವನಿಯಾಗಬೇಕು. ಆದರೆ ಪ್ರಜಾಪ್ರಭುತ್ವ ವ್ಯವಸ್ಥೆ ಯಲ್ಲಿಯೂ ರಾಜ ಮನೆತನಗಳ ಆಡಳಿತದಂತೆ ತಮ್ಮ ಕುಟುಂಬಗಳ ಮೂಲಕ ರಾಜಕೀಯ ನಡೆಸುವ ಚಾಳಿ ನಿಲ್ಲಬೇಕಿದೆ.
ಸ್ವಾತಂತ್ರ್ಯ ಹೋರಾಟಕ್ಕೆ ಧ್ವನಿಯಾದ ನೂರಾರು ಕುಟುಂಬಗಳನ್ನು ತೆರೆಮರೆಗೆ ಸರಿಸಿ ಕೇವಲ ಒಂದು ಕುಟುಂಬಕ್ಕೆ ಜೋತು ಬಿದ್ದು ಕಾಂಗ್ರೆಸ್ ಪಕ್ಷ ಇಂದಿಗೂ ಅಧಿಕಾರದ ಕನಸು ಕಾಣುತ್ತಿದೆ. ಒಂದು ರಾಜಕೀಯ ಪಕ್ಷದ ಒಟ್ಟಾರೆ ನಿರ್ಧಾರವನ್ನು ಒಂದು ಕುಟುಂಬ ತೆಗೆದುಕೊಳ್ಳುವುದು ಪ್ರಜಾಪ್ರಭುತ್ವದ ಆಶಯಗಳಿಗೆ ವಿರುದ್ಧವಾದುದು. ರಾಜಕಾರಣದಲ್ಲಿ ಕುಟುಂಬವಿರುವುದು ಎಲ್ಲ ಪಕ್ಷಗಳಲ್ಲಿಯೂ ಸಾಮಾನ್ಯ, ಆದರೆ ಒಂದಿಡೀ ಕುಟುಂಬದ್ದೇ ರಾಜಕಾರಣವಾದರೆ ಜನರ ಗತಿಯೇನು? ಕುಟುಂಬ ರಾಜ ಕಾರಣದ ಕಾರ್ಯಕರ್ತರು ತಮ್ಮ ಜೀವನದ ಕಟ್ಟಕಡೆಯ ಕ್ಷಣ ದವರೆಗೂ ಒಂದು ಕುಟುಂಬಕ್ಕೆ ಜೋತುಬಿದ್ದು ಕೆಲಸ ಮಾಡ ಬೇಕಿರುವುದು ವಿಪರ್ಯಾಸ.
1970ರ ದಶಕದಲ್ಲಿ ಸರ್ವಾಧಿಕಾರಿ ಇಂದಿರಾ ಗಾಂಧಿಯವರ ವಿರುದ್ಧ ನಿಂತಂಥ ಜನತಾ ಪರಿವಾರದ ಕೆಲ ನಾಯಕರು, ನಂತರದ ದಿನಗಳಲ್ಲಿ ಬೇರೆ ಬೇರೆ ರಾಜ್ಯಗಳಲ್ಲಿ ತಮ್ಮ ಕುಟುಂಬಗಳ ಮೂಲಕ ಪಕ್ಷಗಳನ್ನು ಹುಟ್ಟುಹಾಕಿ ತಮ್ಮ ರಾಜಕೀಯ ಗಡಿಯನ್ನು ಸ್ಥಾಪಿಸಿಕೊಂಡು ಬಿಟ್ಟರು. ಪ್ರಾದೇಶಿಕತೆಯ ಹೆಸರಿನಲ್ಲಿ ಒಕ್ಕೂಟ ವ್ಯವಸ್ಥೆಯ ಮೌಲ್ಯಗಳನ್ನು ಬದಿಗೊತ್ತಿ ಚುನಾವಣಾ ರಾಜಕೀಯ ಮಾಡಿದ ಈ ಕುಟುಂಬಾಧಾರಿತ ಪ್ರಾದೇಶಿಕ ಪಕ್ಷಗಳು, ಪ್ರಜಾಪ್ರಭುತ್ವವನ್ನು ಗೌರವಿಸುವ ನಿಟ್ಟಿನಲ್ಲಿ ಆಡಳಿತ ನಡೆಸಲಿಲ್ಲ.
ತಮ್ಮ ಪಕ್ಷದಲ್ಲಿನ ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸಿ ಕೇವಲ ತಮ್ಮ ಕುಟುಂಬದವರನ್ನು ಮಾತ್ರ ಬೆಳೆಸುವಲ್ಲಿ
ನಿರತರಾಗಿದ್ದಾರೆ. ಕರ್ನಾಟಕದ ಮಟ್ಟಿಗೆ ಮಾತನಾಡುವುದಾದರೆ, ಜಾತ್ಯತೀತ ಜನತಾದಳ ದೇವೇಗೌಡರ ಕುಟುಂಬಕ್ಕೆ ಮಾತ್ರ ಮೀಸಲು, ಇಲ್ಲಿ ಪಕ್ಷಾಧ್ಯಕ್ಷನಿಗೆ ನಿರ್ಧಾರ ಕೈಗೊಳ್ಳುವ ಹಕ್ಕಿಲ್ಲ. ಪ್ರತಿ ಚುನಾವಣೆಯಲ್ಲೂ, ಪಲ್ಲಕ್ಕಿ ಹೊರಲು ವ್ಯಕ್ತಿಯೊಬ್ಬನನ್ನು ಕರೆತರುವಂತೆ ಅಧ್ಯಕ್ಷನನ್ನು ಕರೆತರುತ್ತಾರೆ- ಒಮ್ಮೆ ಕುಮಾರಸ್ವಾಮಿ, ಮತ್ತೊಮ್ಮೆ ಎಚ್. ವಿಶ್ವನಾಥ್, ಈಗ ಸಿ.ಎಂ. ಇಬ್ರಾಹಿಂ.
ಇವರು ಜನರನ್ನು ಸಂಘಟಿಸಲಷ್ಟೇ ಮೀಸಲು, ಅಂತಿಮ ನಿರ್ಧಾರ ಪದ್ಮನಾಭನಗರದ ಮನೆಯಲ್ಲಾಗುತ್ತದೆ. ಜಾತ್ಯತೀತ ಜನತಾದಳದ ಸಂಪೂರ್ಣ ನಿಯಂತ್ರಣ ದೇವೇಗೌಡರ ಕುಟುಂಬದಲ್ಲಿದೆ. ಆಗಲೇ ಹೇಳಿದಂತೆ, ರಾಜಕಾರಣದಲ್ಲಿ ಅರ್ಹತೆ ಯಿರುವ ಕುಟುಂಬದ ನಾಯಕರಿರುವುದು ಸಹಜ, ಆದರೆ ರಾಜಕೀಯ ಪಕ್ಷವೊಂದರ ಸಂಪೂರ್ಣ ಹಿಡಿತ ಕುಟುಂಬದ ಕೈಯಲ್ಲಿರ
ಬಾರದು. ಜೆಡಿಎಸ್ ಪಕ್ಷದ ಸಾಮಾನ್ಯ ಕಾರ್ಯಕರ್ತ ಎಂದಿಗೂ ರಾಜ್ಯದ ಮುಖ್ಯಮಂತ್ರಿಯಾಗಲು ಸಾಧ್ಯವಿಲ್ಲ.
ತಮಿಳುನಾಡಿನಲ್ಲಿ ನಡೆದ ದ್ರಾವಿಡ ಚಳವಳಿಯ ಮೂಲಕ ಹುಟ್ಟಿಕೊಂಡ ‘ಡಿಎಂಕೆ’ ಪಕ್ಷದ ಸಂಪೂರ್ಣ ಹಿಡಿತ ಕರುಣಾನಿಧಿ ಕುಟುಂಬದ ಕೈಯಲ್ಲಿದೆ. ಅಲ್ಲಿನ ಶಾಸಕರ ಹಣೆಬರಹ ನಿರ್ಧರಿಸುವುದು ಈ ಕುಟುಂಬವೇ, ಪಕ್ಷಕ್ಕಾಗಿ ದುಡಿದ ಲಕ್ಷಾಂತರ ಕಾರ್ಯಕರ್ತರ ಮಾತಿಗೆ ಅಲ್ಲಿ ಬೆಲೆಯಿಲ್ಲ. ಸಾಮಾನ್ಯ ಕಾರ್ಯಕರ್ತನೊಬ್ಬ ಡಿಎಂಕೆಯಿಂದ ಆರಿಸಿ ಬಂದು ತಮಿಳುನಾಡಿನ ಮುಖ್ಯಂತ್ರಿಯಾಗಲು ಸಾಧ್ಯವಿಲ್ಲ ಅಥವಾ ಪಕ್ಷದ ಪ್ರಮುಖ ನಿರ್ಧಾರ ಕೈಗೊಳ್ಳುವ ನಾಯಕನಾಗಲು ಸಾಧ್ಯವೇ ಇಲ್ಲ.
ಕರುಣಾನಿಧಿ ಕುಟುಂಬಕ್ಕೆ ನಿಷ್ಠನಾಗಿರುವವನಿಗಷ್ಟೇ ಟಿಕೆಟ್ ಹಂಚಿಕೆಯಲ್ಲಿ ಮಣೆಹಾಕಲಾಗುತ್ತದೆ. ದಶಕಗಳ ಕಾಲ ಆಡಳಿತ ನಡೆಸಿದ ಡಿಎಂಕೆ ತನ್ನ ಕುಟುಂಬದ ಆಸ್ತಿಯನ್ನು ಹೆಚ್ಚುಮಾಡಿಕೊಂಡಿತೇ ಹೊರತು ತಮಿಳುನಾಡನ್ನು ಮೇಲೆತ್ತಲು ಯತ್ನಿಸ ಲಿಲ್ಲ. ಜನರಿಗೆ ಇಲ್ಲಸಲ್ಲದ ಆಮಿಷ ತೋರಿಸಿ ಗೆದ್ದುಬರುವ ಡಿಎಂಕೆ, ಸಮಾಜದ ಒಂದು ವರ್ಗದಿಂದ ಹೆಚ್ಚಿನ ತೆರಿಗೆ ಸಂಗ್ರಹಿಸಿ ಮತ್ತೊಂದು ವರ್ಗಕ್ಕೆ ಹಂಚಿ ತನ್ನ ಕುಟುಂಬದ ಖಜಾನೆ ಯನ್ನು ಭದ್ರ ಮಾಡಿಕೊಳ್ಳುತ್ತದೆ.
ಕುಟುಂಬ ರಾಜಕಾರಣ ಮಾಡುವ ಪಕ್ಷಗಳಿಗೆ ತಮ್ಮ ಪ್ರದೇಶಗಳಲ್ಲಿನ ಸಮಸ್ಯೆಗಳ ನಿವಾರಣೆಯ ಇಚ್ಛೆ ಇರುವುದಿಲ್ಲ; ಬದಲಾಗಿ ಪ್ರತಿ ಚುನಾವಣೆಯಲ್ಲೂ ಪ್ರಾದೇಶಿಕತೆಯ ಹೆಸರಿನಲ್ಲಿ, ಸಮಸ್ಯೆಗಳನ್ನು ನಿವಾರಿಸುತ್ತೇವೆಂದು ಜನರ ಮುಂದೆ ಹೇಳುತ್ತ ಮತ ಪಡೆಯುತ್ತವೆ. ಉದಾಹರಣೆಗೆ, ಕರ್ನಾಟಕದಲ್ಲಿ ಜೆಡಿಎಸ್ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಹಳೇ ಮೈಸೂರು ಭಾಗದಲ್ಲಿ ಕಾವೇರಿ ನೀರಿನ ಸಮಸ್ಯೆಯನ್ನೇ ಹೇಳಿಕೊಂಡು ಮತ ಕೇಳುತ್ತದೆ.
ತಮಿಳುನಾಡು ಮುಖ್ಯಮಂತ್ರಿಯೊಂದಿಗೆ ಉತ್ತಮ ಬಾಂಧವ್ಯವಿರುವ ದೇವೇಗೌಡರು ಈ ಸಮಸ್ಯೆಯನ್ನು ಬಗೆಹರಿಸುವ ಗೋಜಿಗೇ
ಹೋಗುವುದಿಲ್ಲ. ಬದಲಾಗಿ ಕಾವೇರಿ ಸಮಸ್ಯೆಯ ಸೃಷ್ಟಿಕರ್ತರಾಗಿರುವ ತಮಿಳುನಾಡಿನವರೊಂದಿಗೆ ಕೈಜೋಡಿಸಿ, ರಾಷ್ಟ್ರಮಟ್ಟ ದಲ್ಲಿ ಮೋದಿಯನ್ನು ಮಣಿಸಲು ರಾಜಕೀಯ ಪಕ್ಷಗಳ ಒಕ್ಕೂಟ ರಚನೆಗೆ ಮುಂದಾಗುತ್ತಾರೆ. ಅತ್ತ ತೆಲಂಗಾಣದ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ (ಕೆಸಿಆರ್), ರಾಯಚೂರನ್ನು ತೆಲಂಗಾಣಕ್ಕೆ ಸೇರಿಸಿ ಎಂದು ಬಹಿರಂಗ ಹೇಳಿಕೆ ನೀಡುತ್ತಾರೆ; ಅದನ್ನು ವಿರೋಧಿಸದ ಕುಮಾರಸ್ವಾಮಿ, ರಾಯರು ಕಳಿಸಿದ ಖಾಸಗಿ ವಿಮಾನದಲ್ಲಿ ಜೆಡಿಎಸ್ ನ ಶಾಸಕರನ್ನು ದೆಹಲಿಗೆ ಕರೆದೊಯ್ದು ಅವರ ನೂತನ ಪಕ್ಷದ ಉದ್ಘಾಟನೆಯಲ್ಲಿ ಭಾಗಿಯಾಗುತ್ತಾರೆ.
ಪ್ರಾದೇಶಿಕ ಸಮಸ್ಯೆಗಳ ಉಳಿಯುವಿಕೆಯೇ ಕುಟುಂಬಾಧಾರಿತ ಪಕ್ಷಗಳ ಅಸ್ತಿತ್ವದ ಮೂಲ; ಈ ಸಮಸ್ಯೆಗಳು ಬಗೆಹರಿದರೆ ಇವಕ್ಕೆ
ಅಸ್ತಿತ್ವವಿಲ್ಲ. ಹಾಗಾಗಿ ಅವು ಪ್ರಾದೇಶಿಕ ಸಮಸ್ಯೆಗಳನ್ನು ಬಗೆಹರಿಸುವ ಬದಲು ಜೀವಂತವಾಗಿರಿಸಲು ಯತ್ನಿಸುತ್ತವೆ. ಪ್ರತ್ಯೇಕ ತೆಲಂಗಾಣ ರಾಜ್ಯ ಹೋರಾಟದಲ್ಲಿದ್ದ ಕೆಸಿಆರ್, ತಮ್ಮ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ತೆಲಂಗಾಣ ರಾಜಕಾರಣವನ್ನು ತಮ್ಮ ಕುಟುಂಬಕ್ಕೆ ಮೀಸಲಿಟ್ಟರು. ತಾವು ಮತ್ತು ತಮ್ಮ ಕುಟುಂಬಿಕರು ತೆಲಂಗಾಣ ರಾಜ್ಯದ ಜನಕರು, ಇಲ್ಲಿ ತಮ್ಮ ಕುಟುಂಬ ಬಿಟ್ಟು ಬೇರಾರೂ ಅಧಿಕಾರಕ್ಕೆ ಬರಬಾರದು ಎಂಬುದು ಇವರ ಭ್ರಮೆ.
ಇತ್ತ ಪಕ್ಷದಲ್ಲೂ, ಅತ್ತ ಸರಕಾರದಲ್ಲೂ ಕೇವಲ ತಮ್ಮ ಕುಟುಂಬದ ಪ್ರಮುಖರಿಗೇ ಉನ್ನತ ಸ್ಥಾನ, ಪಕ್ಷಕ್ಕೆ ದುಡಿದ ಲಕ್ಷಾಂತರ ಕಾರ್ಯಕರ್ತರ ಕಡೆಗಣನೆ, ಪಕ್ಷದ ಅಂತಿಮ ನಿರ್ಧಾರವೆಲ್ಲವೂ ಒಂದು ಕುಟುಂಬಕ್ಕಷ್ಟೇ ಮೀಸಲು. ‘ಕೆಸಿಆರ್’ ಮೇಲಿನ ಆಪಾದನೆಗಳಿಗೆ ಉತ್ತರಿಸುವುದು ಅವರ ಮಗ ಕೆ.ಟಿ. ರಾಮರಾವ್. ಮಂತ್ರಿಯಾಗಿರುವ ಇವರು ಪಕ್ಷದ ಪರವಾಗಿ ಮಾಧ್ಯಮ ಗಳಲ್ಲಿ ಸುದ್ದಿಯಾಗುತ್ತಿರುತ್ತಾರೆ, ಪಕ್ಷದ ಪ್ರತಿ ನಿರ್ಧಾರಕ್ಕೂ ಪ್ರತಿಕ್ರಿಯಿಸುತ್ತಾರೆ. ಅತ್ತ ಕೆಸಿಆರ್ ಮಗಳು ಕವಿತಾ ೨೦೧೯ರ
ಲೋಕಸಭಾ ಚುನಾವಣೆಯಲ್ಲಿ ಸೋತ ನಂತರ ೨೦೨೦ರಲ್ಲಿ ತೆಲಂಗಾಣ ವಿಧಾನ ಪರಿಷತ್ ಸದಸ್ಯೆಯಾಗಿ ಆಯ್ಕೆಯಾದರು.
ಹೀಗೆ ರಾಜಕೀಯ ಪಕ್ಷವೊಂದರ ಹಿಡಿತ ಒಂದಿಡೀ ಕುಟುಂಬದ ಕೈಯಲ್ಲಿರುವುದಕ್ಕೆ ತೆಲಂಗಾಣವೂ ಸಾಕ್ಷಿಯಾಗಿದೆ. ಇತ್ತ ಆಂಧ್ರಪ್ರದೇಶದಲ್ಲಿ ಹುಟ್ಟಿಕೊಂಡ ‘ವೈ. ಎಸ್. ರಾಜಶೇಖರ ರೆಡ್ಡಿ ಕಾಂಗ್ರೆಸ್’ ಪಕ್ಷದ ಉತ್ತರಾಧಿಕಾರಿಯಾದದ್ದು ಅವರ ಮಗ ಜಗನ್‌ಮೋಹನ್ ರೆಡ್ಡಿ. ಈ ಪಕ್ಷದ ಸಂಪೂರ್ಣ ಹಿಡಿತ ಜಗನ್ ಕೈಯಲ್ಲಿದೆ. ವೈಎಸ್‌ಆರ್ ಮಗಳು ಈಗಾಗಲೇ ತೆಲಂಗಾಣದಲ್ಲಿ ತಮ್ಮ ಅಧಿಪತ್ಯ ಸ್ಥಾಪಿಸಲು ಓಡಾಡುತ್ತಿದ್ದಾರೆ. ತಮ್ಮ ಕುಟುಂಬ ಕ್ರೈಸ್ತ ಧರ್ಮಕ್ಕೆ ತಲೆಬಾಗುತ್ತದೆಯೆಂಬ ಕಾರಣಕ್ಕೆ, ಸಾವಿರಾರು ವರ್ಷಗಳ ಇತಿಹಾಸದ ತಿರುಪತಿ ದೇಗುಲದ ಆಡಳಿತ ಮಂಡಳಿಯಲ್ಲಿ ಕ್ರೈಸ್ತ ಮಿಷನರಿಯನ್ನು ಕರೆತಂದು ದೇಗುಲದ ಚಹರೆ ಯನ್ನೇ ಬದಲಾಯಿಸ ಹೊರಟಿದ್ದು ಜಗನ್ ಕುಟುಂಬ.
ಜಮ್ಮು ಮತ್ತು ಕಾಶ್ಮೀರದಲ್ಲಿ ಕುಟುಂಬಾಧಾರಿತ ರಾಜಕಾರಣ ಮಾಡಿಕೊಂಡು ಬರುತ್ತಿರುವವರು ಅಬ್ದುಲ್ಲಾ ಮತ್ತು ಮುಫ್ತಿ ಕುಟುಂಬದವರು. ಕಾಶ್ಮೀರದ ಸಮಸ್ಯೆಯನ್ನು ಬಗೆಹರಿಸದೆ ಅದನ್ನೇ ಮೂಲಬಂಡವಾಳ ಮಾಡಿಕೊಂಡು, ಪ್ರತ್ಯೇಕತಾ ವಾದಿಗಳನ್ನು ಬೆಂಬಲಿಸಿ, ಯುವಕರನ್ನು ನಿರುದ್ಯೋಗಿಗಳನ್ನಾಗಿಸಿ ಉಗ್ರವಾದದೆಡೆಗೆ ತಳ್ಳಿದವರು. ಇವರು ತಮ್ಮ ಕುಟುಂಬದ ಮಕ್ಕಳನ್ನು ಉತ್ತಮ ವಿದ್ಯಾಭ್ಯಾಸಕ್ಕೆಂದು ಅಮೆರಿಕ, ಇಂಗ್ಲೆಂಡ್‌ಗಳಿಗೆ ಕಳುಹಿಸಿದರೇ ವಿನಾ, ಕಣಿವೆರಾಜ್ಯದ ಮಕ್ಕಳಿಗೆ ಬೇಕಿರುವ ಮೂಲಶಿಕ್ಷಣ ವ್ಯವಸ್ಥೆಯನ್ನು ಕಲ್ಪಿಸಲಿಲ್ಲ.
ಕಾಶ್ಮೀರದಲ್ಲಿ ‘ರೋಶನಿ ಕಾಯ್ದೆ’ಯನ್ನು ಜಾರಿ ಮಾಡಿದ ಫಾರೂಕ್ ಅಬ್ದುಲ್ಲಾ, ತಮ್ಮ ಕುಟುಂಬದವರನ್ನು ಬೆಂಬಲಿಸಿದವರಿಗೆ ಸಾವಿರಾರು ಎಕರೆ ಭೂಮಿ ಸಿಗುವಂತೆ ಮಾಡಿದ್ದರು. ಕಾಶ್ಮೀರದ ಬಡವನಿಗೆ ಮಾತ್ರ ಭೂಮಿ ಸಿಗಲಿಲ್ಲ, ಅಬ್ದುಲ್ಲಾ ಮತ್ತು ಮುಫ್ತಿ ಕುಟುಂಬಕ್ಕೆ ಸಾವಿರಾರು ಕೋಟಿ ರು. ಮೌಲ್ಯದ ಭೂಮಿ ದಕ್ಕಿತು. ಹೊರಜಗತ್ತಿನೊಡನೆ ಕಾಶ್ಮೀರವನ್ನು ಸಂಪರ್ಕಿಸುವ ಕೊಂಡಿಗಳನ್ನು ಕಿತ್ತುಹಾಕಿ ಅಲ್ಲಿನ ಜನ ಕತ್ತಲಕೋಣೆಯಲ್ಲಿ ಬದುಕುವಂತೆ ಮಾಡಿದವರು ಇವರು. ಉತ್ತರ ಪ್ರದೇಶದಲ್ಲಿ ಆಡಳಿತ ನಡೆಸಿದ ಮುಲಾಯಂ ಸಿಂಗ್‌ರ ಸಮಾಜವಾದಿ ಪಕ್ಷದ ಕಥೆಯೂ ಇದೇ, ಅಲ್ಲಿಯೂ ಅವರ ಕುಟುಂಬದ್ದೇ ಪಾರುಪತ್ಯ. ಮುಲಾಯಂ ನಂತರ ಅವರ ಮಗ ಅಖಿಲೇಶ್ ಯಾದವ್ ಪಕ್ಷವನ್ನು ನಡೆಸಿಕೊಂಡು ಹೋಗುತ್ತಿದ್ದಾರೆ.
ಸಮಾಜವಾದದ ಹೆಸರಲ್ಲಿ ಶುರುವಾದ ಈ ಪಕ್ಷ ಹೆಚ್ಚಾಗಿ ಬಂಡವಾಳವಾದಕ್ಕೆ ಕಟ್ಟುಬಿದ್ದಿತ್ತು. ಇವರು ತಮ್ಮ ಕುಟುಂಬವನ್ನೇ ಬಂಡವಾಳ ಮಾಡಿಕೊಂಡು ಸಾವಿರಾರು ಕೋಟಿ ಲೂಟಿ ಮಾಡಿ ಕುಟುಂಬದ ಆಸ್ತಿಯನ್ನು ಹೆಚ್ಚಿಸಿಕೊಂಡರೇ ಹೊರತು, ರಾಜ್ಯವನ್ನು ಅಭಿವೃದ್ಧಿಯೆಡೆಗೆ ಒಯ್ಯಲಿಲ್ಲ. ‘ಬೀಮಾರು’ (ರೋಗಗ್ರಸ್ತ) ರಾಜ್ಯಗಳಲ್ಲಿ ಒಂದೆನಿಸಿ ಕಾನೂನು-ಸುವ್ಯವಸ್ಥೆಯೇ ಇಲ್ಲದಾಗಿದ್ದ ಉತ್ತರ ಪ್ರದೇಶದಲ್ಲಿ ಹೊರಗಿನವರು ಕಾಲಿಡಲು ಹೆದರುವಂಥ ಪರಿಸ್ಥಿತಿ ನಿರ್ಮಾಣವಾಗಿತ್ತು.
ಕಾಂಗ್ರೆಸ್ಸಿನ ಕುಟುಂಬ ರಾಜಕಾರಣದ ನಂತರ ಅಧಿಕಾರ ಅನುಭವಿಸಿದ ಮುಲಾಯಂ ಕುಟುಂಬ ರಾಜ್ಯದಲ್ಲಿ ಭೀಕರ ಸನ್ನಿವೇಶ ವನ್ನೇ ಸೃಷ್ಟಿಸಿತ್ತು. ಬಿಹಾರದ ಕಥೆಯನ್ನು ವರ್ಷಗಳಿಂದಲೂ ಕೇಳುತ್ತಲೇ ಬಂದಿದ್ದೇವೆ. ಬಿಹಾರವೆಂದರೆ ಕೊಲೆ-ಸುಲಿಗೆ-ಬಡತನ ಇಷ್ಟೇ ವಿಷಯಗಳು. ಲಾಲು ಪ್ರಸಾದ್ ಯಾದವ್ ಕುಟುಂಬದ ಆಡಳಿತಕ್ಕೆ ಸಿಕ್ಕು ನಲುಗಿದ ಬಿಹಾರ ಇಂದಿಗೂ ಸಂಪೂರ್ಣ ಚೇತರಿಸಿಕೊಂಡಿಲ್ಲ. ಹೆಂಡತಿ ರಾಬ್ಡಿ ದೇವಿಯನ್ನು ಮುಖ್ಯಮಂತ್ರಿಯಾಗಿಸಿದ ಲಾಲೂ ಪಕ್ಷದಲ್ಲೂ ಕುಟುಂಬದ ಹೊರಗಿ ನವರಿಗೆ ಬೆಳೆಯಲು ಅವಕಾಶವಿಲ್ಲ.
ಲಾಲು ನಂತರ ಅವರ ಮಗ ತೇಜಸ್ವಿ ಯಾದವ್ ಸರದಿ. ಅಪ್ಪನೊಂದಿಗೆ ಚೆನ್ನಾಗೇ ಪಳಗಿರುವ ಈತನದ್ದೂ ಕುಟುಂಬಕೇಂದ್ರಿತ
ರಾಜಕಾರಣವೇ. ತಮ್ಮ ಕುಟುಂಬದ ಆಡಳಿತಾವಧಿಯಲ್ಲಿ ಸಾವಿರಾರು ಕೋಟಿ ಹಗರಣಗಳ ಸರಮಾಲೆಯನ್ನೇ ಹೊತ್ತಿರುವ ‘ಲಾಲು ಆಂಡ್ ಸನ್ಸ್’, ಬಿಹಾರವನ್ನು ಅಧೋಗತಿಗೆ ಕೊಂಡೊಯ್ದಿದ್ದವರು. ಭಾರತದ ಅಭಿವೃದ್ಧಿಯ ವೇಗಕ್ಕೆ ಬ್ರೇಕ್ ಬೀಳಲು, ಹಲವು ರಾಜ್ಯಗಳ ಅಭಿವೃದ್ಧಿ ಕುಂಠಿತವಾಗಲು ಕಾರಣವಾಗಿದ್ದು ಕುಟುಂಬ ಕೇಂದ್ರಿತ ರಾಜಕಾರಣವೇ.
ಏಕೆಂದರೆ, ಪಕ್ಷವನ್ನು ಒಂದಿಡೀ ಕುಟುಂಬ ತನ್ನ ಹಿಡಿತದಲ್ಲಿಟ್ಟುಕೊಂಡಾಗ ಅವರಿಗೆ ಮುಖ್ಯವಾಗುವುದು ಕುಟುಂಬದ ಹಿತಾ ಸಕ್ತಿಯೇ ಹೊರತು ಜನರದ್ದಲ್ಲ. ಜೆಡಿಎಸ್ ನ ಕುಟುಂಬ ರಾಜಕಾರಣಕ್ಕೆ ಬೇಸತ್ತು ಹಲವು ನಾಯಕರು ಪಕ್ಷ ತೊರೆದರು, ಈ ಪೈಕಿ ಸಿದ್ದರಾಮಯ್ಯ ಮುಖ್ಯಮಂತ್ರಿಯೂ ಆದರು. ತಮ್ಮ ಕುಟುಂಬದಲ್ಲದವರನ್ನು ಬೆಳೆಸಲು ಇಚ್ಛಿಸದ ಪಕ್ಷವು ಪ್ರಜಾ ಪ್ರಭುತ್ವಕ್ಕೆ ಎಂದಿಗೂ ಮಾರಕ. ಕುಟುಂಬ ರಾಜಕಾರಣದಿಂದಾಗಿಯೇ ಜೆಡಿಎಸ್ ತನ್ನ ಅಸ್ತಿತ್ವವನ್ನು ಕೇವಲ ೩ ಜಿಲ್ಲೆಗೆ ಸೀಮಿತಗೊಳಿಸಿ ಕೊಂಡಂತಾಗಿದೆ.
ಮಂಡ್ಯ ಜಿಲ್ಲೆಯ ಜನರು ಈಗಾಗಲೇ ೨೦೧೯ರ ಲೋಕಸಭಾ ಚುನಾವಣೆಯ ವೇಳೆ ಒಂದು ವಿರೋಧವನ್ನು ನೀಡಿದ್ದಾರೆ; ಅಧಿಕಾರದಲ್ಲಿದ್ದುಕೊಂಡೂ ಕುಮಾರಸ್ವಾಮಿಯವರಿಗೆ ತಮ್ಮ ಮಗನನ್ನು ಗೆಲ್ಲಿಸಲಾಗಲಿಲ್ಲ. ಸಂಪೂರ್ಣ ಒಂದು ಕುಟುಂಬದ ವಶದಲ್ಲಿರುವ ಪಕ್ಷಕ್ಕೆ ರಾಜ್ಯ ಮತ್ತು ದೇಶದ ದೂರದೃಷ್ಟಿ ಕಾಣುವುದಿಲ್ಲ. ಇಂಥವರು ಕುಟುಂಬದ ಬೊಕ್ಕಸವನ್ನು ತುಂಬಿಸಿ ಕೊಳ್ಳುವಲ್ಲಿ ನಿರತರಾಗಿರುತ್ತಾರೆಯೇ ಹೊರತು ರಾಜ್ಯದ ಬೊಕ್ಕಸವನ್ನಲ್ಲ. ರಾಜಕೀಯ ಪಕ್ಷವೊಂದರಲ್ಲಿ ಕುಟುಂಬವಿರುವುದು ಸಹಜ, ಆದರೆ ಒಂದಿಡೀ ಕುಟುಂಬವೇ ರಾಜಕೀಯ ಪಕ್ಷವನ್ನು ತನ್ನ ವಶದಲ್ಲಿರಿಸಿಕೊಳ್ಳುವುದು ಪ್ರಜಾಪ್ರಭುತ್ವದ ಮೂಲ ಆಶಯಕ್ಕೆ ವಿರುದ್ಧವಾಗಿದೆ.
Read E-Paper click here