Wednesday, 11th December 2024

ರಾಜಕೀಯ ಪಕ್ಷಗಳಿಗೆ ಸರಕಾರ ಬಾಡಿಗೆಮನೆ ಇದ್ದಂತೆ !

ವಿಶ್ಲೇಷಣೆ

ಸರಸ್ವತಿ ವಿಶ್ವನಾಥ್ ಪಾಟೀಲ್

ರಾಜಕೀಯ ಪಕ್ಷಗಳಿಗೆ ಸರಕಾರ ಎಂಬುದು ಬಾಡಿಗೆಮನೆ ಇದ್ದಂತೆ. ಇರುವಷ್ಟು ದಿನ ಅವರಿಗೆ ಬೇಕಾಗುವ ಹಾಗೆ ಅನುಕೂಲ ಮಾಡಿಕೊಂಡು, ಅಲ್ಲೇ ತಿಂದುಂಡು, ಕೊನೆಗೆ ಹೋಗುವಾಗ ಗುಡಿಸಿ ಗುಂಡಾಂತರ ಮಾಡಿ ಹೋಗುತ್ತಾರೆ.

ಒಂದು ಕಾಲಕ್ಕೆ ‘ರಾಜಕಾರಣಿಗಳು’, ‘ರಾಜ ಕೀಯ’ ಅಂದರೆ ಎಷ್ಟೊಂದು ಒಳ್ಳೆಯ ಪದ/ಪರಿಕಲ್ಪನೆ ಆಗಿತ್ತು. ಇದು ಎಷ್ಟು ಗೌರವದ ವೃತ್ತಿ ಆಗಿತ್ತೆಂದರೆ, ಪ್ರತಿಯೊಬ್ಬರೂ ಎದ್ದು ನಿಂತು ಗೌರವಿಸುತ್ತಿದ್ದರು. ಆದರೀಗ ಯಾರಾದರೂ ಕೈಕೊಟ್ಟರೆ, ನಂಬಿಸಿ ಮೋಸ ಮಾಡಿದರೆ, ನಮ್ಮ ದುಡ್ಡು ನುಂಗಿಹಾಕಿದರೆ, ಹೇಳಿದ ಹಾಗೆ ನಡೆದುಕೊಳ್ಳದಿದ್ದರೆ, ಸುಳ್ಳು ಹೇಳಿದರೆ, ‘ನೀನು ಮುಂದೆ ಒಳ್ಳೇ ರಾಜಕಾರಣಿ ಆಗ್ತೀಯ ನೋಡು’ ಅಂತ ಅವರಿವರು ತಮಾಷೆ ಮಾಡುತ್ತಾರೆ!

ಕೇಳಲು ತಮಾಷೆ ಅನ್ನಿಸಿದರೂ, ಇದು ನೂರಕ್ಕೆ ನೂರರಷ್ಟು ಸತ್ಯ. ಈ ಕಾಲಕ್ಕೆ ರಾಜಕಾರಣ ಅನ್ನೋದು ಹೇಗಾಗಿದೆ ಅಂದರೆ, ಹಂಗಿಸುವ ಅಥವಾ ವ್ಯಂಗ್ಯಮಾಡುವ ರೀತಿಯಲ್ಲಿ ಬಳಸು ವಂತಾಗಿದೆ. ಇದು ವಿಪರ್ಯಾಸ. ಹಿಂದೆಲ್ಲ ಮಹಾತ್ಮರು ಸ್ವಾತಂತ್ರ್ಯ ದಕ್ಕಿಸಿಕೊಳ್ಳುವುದಕ್ಕಾಗಿ, ದೇಶದ ಒಳಿತಿಗಾಗಿ ಹೋರಾಡಿ ಜೈಲು ಸೇರಿದ್ದು ನಿಜ, ಅಲ್ಲಿಂದ ವಾಪಸ್ ಬಂದು ಅವರು ಇನ್ನೂ ಹೆಸರು ಮಾಡಿದ್ದು ನಿಜ. ಹಾಗಂತ, ಈಗಿನ ಕೆಲವು ಕೆಲಸಕ್ಕೆ ಬಾರದ ಮಂದಿ ‘ಜೈಲಿಗೆ ಹೋಗಿ ಬಂದ ಮೇಲೆ ಮಹಾತ್ಮರಾಗುತ್ತೇವೆ’ ಎನ್ನುವ ಭ್ರಮೆಯಲ್ಲಿ ಜೈಲಿಗೆ ಹೋಗಿ ಬಂದರೂ ರಾಜಾರೋಷ ವಾಗಿ ಓಡಾಡಿಕೊಂಡಿದ್ದಾರೆ!

ಏನೇ ಬದಲಾದರೂ ನಮ್ಮ ಸರಕಾರಗಳು ಮಾತ್ರ ವರ್ಷ ವರ್ಷಗಳಿಂದ ಹಾಗೇ ಇವೆ, ಏನೂ ಬದಲಾಗಿಲ್ಲ. ಹಣ, ಹೆಂಡ, ಜಾತಿ, ಆಮಿಷಗಳನ್ನೊಡ್ಡಿ, ಬಲಪ್ರದರ್ಶನ ಮಾಡಿ ಗೆದ್ದು ಬರುವುದೇ ಈಗಲೂ ಚಾಲ್ತಿಯಲ್ಲಿದೆ. ಗೆದ್ದ ಮೇಲೆ ತಿರುಗಿ ನೋಡದ ರಾಜಕಾರಣಿಗಳು, ಗೆಲ್ಲುವ ಅನಿವಾರ್ಯಕ್ಕೆ ಚುನಾ ವಣೆಯ ಸಮಯಕ್ಕೆ ಸರಿಯಾಗಿ ಜನರನ್ನು ಓಲೈಸುತ್ತಾ, ಮತ ಕೇಳುತ್ತಾ ಬೀದಿಗೆ ಇಳಿಯುತ್ತಾರೆ. ಆ ಸೂಕ್ಷ್ಮತೆಯನ್ನು ಅರ್ಥ ಮಾಡಿಕೊಳ್ಳದ ನಾವು ಮತ್ತೆ ಅದೇ ಭ್ರಷ್ಟರನ್ನು, ಲಂಚಕೋರರನ್ನು, ಲೂಟಿ ಹೊಡೆಯುವವರನ್ನು ಆರಿಸಿ ತರುತ್ತೇವೆ.

ಪ್ರಧಾನಿ ಮೋದಿಯವರು ಅಧಿಕ ಮುಖಬೆಲೆಯ ಹಳೆಯ ನೋಟುಗಳನ್ನು ರದ್ದುಪಡಿಸಿದ ಮೇಲೆ, ‘ಹೊಸ ನೋಟುಗಳಿಗೆ ಚಿಪ್ ಅಳವಡಿಸಲಾಗಿದೆ, ಜಾಸ್ತಿ ನೋಟು ಸಂಗ್ರಹಿಸಿಟ್ಟಲ್ಲಿ ಅದು ಸಿಗ್ನಲ್ ಕೊಡುತ್ತೆ. ಅಂಥವರ ಆಸ್ತಿಯನ್ನು ರೈಡ್ ಮಾಡಲಾಗುತ್ತೆ’ ಅಂತೆಲ್ಲ ಸುದ್ದಿ ಹಬ್ಬಿಸಿದ್ದರು. ಆದರೆ ಅಂಥದ್ದೇನೂ ನಡೆಯಲಿಲ್ಲ. ಕಪ್ಪುಹಣದ ಹಾವಳಿ ನಿಲ್ಲುತ್ತಲೂ ಇಲ್ಲ. ನಿಜಕ್ಕೂ ‘ಚಿಪ್’ ಇಟ್ಟಿದ್ದು ನೋಟಿಗೋ ಅಥವಾ ನಮ್ಮ ಕೈಗೋ ಗೊತ್ತಾಗುತ್ತಿಲ್ಲ.
ಚಲನಚಿತ್ರವೊಂದರಲ್ಲಿ ಹೀಗೊಂದು ದೃಶ್ಯ ಬರುತ್ತದೆ.

‘ರಾಜಕೀಯ ಅಂದ್ರೆ ಏನು?’ ಅಂತ ರಾಜಕಾರಣಿಯೊಬ್ಬನಿಗೆ ಹೀರೋ ಕೇಳಿದಾಗ, ‘ರಾ ಅಂದ್ರೆ ರಾವಣ, ಜ ಅಂದ್ರೆ ಜರಾಸಂಧ, ಕೀ ಅಂದ್ರೆ ಕೀಚಕ, ಯ ಅಂದ್ರೆ ಯಮಧರ್ಮ’ ಅಂತ ಉತ್ತರಿಸುವ ರಾಜಕಾರಣಿ, ‘ಚುನಾವಣೆಯಲ್ಲಿ ಗೆಲ್ಲೋಕೆ ದುಡ್ಡು ಸುರೀತೀವಿ; ಗೆದ್ದ ಮೇಲೆ ರಿಕವರಿ ಮಾಡಿಕೊಳ್ಳೋ ದ್ರಲ್ಲಿ ತಪ್ಪೇನು?’ ಅಂತ ಪ್ರಶ್ನಿಸುತ್ತಾನೆ. ಇದು ಚಲನಚಿತ್ರವಾದರೂ ಶೇ.೯೯ರಷ್ಟು ನಡೀತಿರೋದು ಹೀಗೆಯೇ ಅಲ್ಲವೇ? ರಾಜಕಾರಣಿಗಳಿಗೆ ಸಿಗುವ ಸಂಬಳಕ್ಕೆ ಅಷ್ಟೊಂದು ಹಣ ಮಾಡಲು ಹೇಗೆ ಸಾಧ್ಯ? ಮಕ್ಕಳ ಮದುವೆಗೆ ಕೋಟಿಗಟ್ಟಲೆ ಖರ್ಚುಮಾಡಲು, ಸ್ವಿಸ್ ಬ್ಯಾಂಕ್‌ನಲ್ಲಿ ಹಣ ಇಡಲು ಹೇಗೆ ಸಾಧ್ಯ? ಕಪ್ಪುಹಣ ಅಂತ ಹೆಸರು ಹುಟ್ಟಿದ್ದೇ ಇಂಥ ಕೆಲವು ರಾಜಕಾರಣಿಗಳಿಂದ.

ರಾಜಕೀಯ ಪಕ್ಷಗಳಿಗೆ ಸರಕಾರ ಎಂಬುದು ಕೇವಲ ಬಾಡಿಗೆಮನೆ ಇದ್ದಂತೆ. ಇರುವಷ್ಟು ದಿನ ಅವರಿಗೆ ಬೇಕಾಗುವ ಹಾಗೆ ಅನುಕೂಲ ಮಾಡಿ ಕೊಂಡು, ಅಲ್ಲೇ ತಿಂದುಂಡು, ಕೊನೆಗೆ ಹೋಗುವಾಗ ಗುಡಿಸಿ ಗುಂಡಾಂತರ ಮಾಡಿ ಹೋಗುತ್ತಾರೆ. ಅವರು ಹೋದಮೇಲೆ ಮತ್ತೆ ಅಲ್ಲೇ ಇನ್ನೊಬ್ಬರು ಬಾಡಿಗೆದಾರ ಬರುತ್ತಾರೆ. ಮತ್ತೆ ಅದೇ ಕೆಲಸ ಮುಂದುವರಿಸುತ್ತಾರೆ. ಹೀಗಾಗಿ ಮನೆ ಹಾಳಾಗುತ್ತಲೇ ಇರುತ್ತದೆ. ಗುಡಿಸುವವರು ಗುಡಿಸುತ್ತಲೇ ಇರುತ್ತಾರೆ. ನಮಗೆ ಮಾತ್ರ ಒಳ್ಳೆಯ ಬಾಡಿಗೆದಾರ ಸಿಗುವುದೇ ಇಲ್ಲ. ಸಿಗುವುದಿಲ್ಲ ಅನ್ನುವುದಕ್ಕಿಂತ ನಾವು ಹುಡುಕುವ ಪ್ರಯತ್ನ ಕೂಡ ಮಾಡುವುದಿಲ್ಲ.

‘ಯಾರದ್ದೋ ದುಡ್ಡು, ಎಲ್ಲಮ್ಮನ ಜಾತ್ರೆ’ ಅನ್ನೋ ಹಾಗೆ, ಅಗತ್ಯವಿಲ್ಲದ ಪ್ರತಿಯೊಂದು ಸರಕಾರಿ ಸಭೆ-ಸಮಾರಂಭವನ್ನೂ ಅವಶ್ಯಕತೆಗಿಂತ ಅದ್ದೂರಿಯಾಗಿ ನಡೆಸಲಾಗುತ್ತದೆ. ಯಾವ ಕಾರ್ಯಕ್ರಮಕ್ಕೆ ಎಷ್ಟು ಬೇಕೋ ಅಷ್ಟು ಮಾಡಿದರೆ ಸಾಕಲ್ಲವೇ? ಆದರೆ ಇಲ್ಲಿ ಹಾಗಾಗುವುದಿಲ್ಲ. ಪೆಂಡಾಲ್, ಕುರ್ಚಿ, ಮೈಕು, ಡೆಕೋರೇಷನ್, ಊಟ, ಜಾಹೀರಾತು, ಪಾಂಪ್ಲೆಟ್, ಬಂದ ಅತಿಥಿಗಳನ್ನು ವಿಜೃಂಭಣೆಯಿಂದ ಸ್ವಾಗತಿಸಿ ಅವರು ಉಳಿದುಕೊಳ್ಳಲೆಂದು ಪಂಚತಾರಾ ಹೋಟೆಲ್‌ಗಳು, ಊಟೋಪಚಾರಗಳು, ಸ್ವಾಗತಿಸಲು ಪುಚ್ಪಗುಚ್ಛಗಳು ಹೀಗೆ ವಿವಿಧ ಬಾಬತ್ತುಗಳಿಗೆ ಕೋಟಿಗಟ್ಟಲೆ ಖರ್ಚು ಮಾಡಲಾಗುತ್ತದೆ.

ನಿಜ ಹೇಳಬೇಕೆಂದರೆ, ಕೆಲವೇ ಸಾವಿರ ರುಪಾಯಿಗಳಲ್ಲಿ ನಡೆಯಬಹುದಾದ ಕೆಲವೊಂದು ಕಾರ್ಯಕ್ರಮಗಳಿಗೆ ಮಿತಿಮೀರಿ ಖರ್ಚುಮಾಡ ಲಾಗುತ್ತದೆ. ಈ ಹಣ ಯಾರೊಬ್ಬರ ಮನೆಯ ಸ್ವತ್ತಲ್ಲ, ಅದು ನಾವು-ನೀವು ಸರಕಾರಕ್ಕೆ ವರ್ಷ ವರ್ಷವೂ ತಪ್ಪದೆ ಕಟ್ಟುತ್ತಿರುವ ತೆರಿಗೆ ಹಣ.
ಹೀಗೆ ದುಂದುವೆಚ್ಚ ಮಾಡುವ ಬದಲು ಹತ್ತು ಹಲವಾರು ಒಳ್ಳೆಯ ಕೆಲಸಗಳಿಗೆ, ದೇಶದ ಒಳಿತಿಗೆ ಬಳಸಬಹುದು. ಆದರೆ ಇಲ್ಲಿ ಆಗುತ್ತಿರುವುದೇ ಬೇರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕರ್ತವ್ಯ ನಿಮಿತ್ತ ಬೆಂಗಳೂರಿಗೆ ಭೇಟಿ ನೀಡಿದಾಗ ಅವರನ್ನು ಸ್ವಾಗತಿಸಲು ಮುಖ್ಯಮಂತ್ರಿ ಮತ್ತು ರಾಜ್ಯಪಾಲರು ಸೇರಿದಂತೆ ಅನೇಕ ಗಣ್ಯರು ಓಡೋಡಿ ಬಂದರು.

ಇದು ಸರಕಾರದ ಕರ್ತವ್ಯ ಎಂದೇ ಪರಿಗಣಿಸೋಣ. ಆದರೆ ಲಕ್ಷಾಂತರ ರುಪಾಯಿ ವೆಚ್ಚ ಮಾಡಿ ಹೂವಿನಿಂದ ಅಲಂಕರಿಸಿದ ‘ರಾಷ್ಟ್ರಪತಿ ದ್ರೌಪದಿ
ಮುರ್ಮು ಅವರಿಗೆ ಸ್ವಾಗತ’ ಎಂಬ ಫಲಕಗಳನ್ನು ವಿವಿಧೆಡೆ ರಸ್ತೆಯಲ್ಲಿ ಹಾಕಲಾಯಿತು. ಎಲ್ಲ ಕೂಲಿ ಕಾರ್ಮಿಕರಿಗೂ, ನೌಕರರಿಗೂ ತೊಂದರೆ ಆಗುವ ರೀತಿಯಲ್ಲಿ ರಸ್ತೆಗಳಲ್ಲಿ ಮೆರವಣಿಗೆ ಮಾಡಲಾಯಿತು. ಸ್ವಾಗತ ಕಾರ್ಯಕ್ರಮಕ್ಕೆಂದೇ ಹೀಗೆ ದುಂದುವೆಚ್ಚ ಮಾಡಲಾಯಿತು. ಆದರೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಕನ್ನಡ ಓದಲು ಬರುವುದೇ ಇಲ್ಲ. ಹೀಗಿರುವಾಗ, ಅವರಿಗೆ ಅರ್ಥವಾಗದ ಭಾಷೆಯಲ್ಲಿ ಹೀಗೆ ಫಲಕಗಳನ್ನು ಎಬ್ಬಿಸಿ, ಅದಕ್ಕಾಗಿ ಲಕ್ಷಾಂತರ ಹಣ ಸುರಿಯುವ ಅವಶ್ಯಕತೆ ಇತ್ತಾ ಎಂಬುದು ನನ್ನ ಪ್ರಶ್ನೆ.

ಅಷ್ಟಕ್ಕೂ ಅವರು ಬೆಂಗಳೂರಿಗೆ ಬಂದಿದ್ದು ಯಾವುದೋ ಮದುವೆ ಅಥವಾ ಖಾಸಗಿ ಕಾರ್ಯಕ್ರಮಕ್ಕೆ ಅಲ್ಲ; ತಮ್ಮ ಅಧಿಕಾರ ವ್ಯಾಪ್ತಿಯಲ್ಲಿನ ಕರ್ತವ್ಯ ನಿರ್ವಹಣೆಗೆ. ಅದಕ್ಕೆ ಅಗತ್ಯವಿದ್ದಷ್ಟು ಮಾತ್ರವೇ ಖರ್ಚು ಮಾಡುವ ಬದಲು ಹೀಗೆ ದುಂದುವೆಚ್ಚ ಮಾಡುವ ಅಗತ್ಯವೇನಿತ್ತು? ಇದು ನಾವು
ಬೆವರು ಸುರಿಸಿ ಸಂಪಾದಿಸಿದ ನಮ್ಮದೇ ಹಣ ತಾನೇ? ದೇಶದ ಆರ್ಥಿಕ ಸ್ಥಿತಿ ಸುಧಾರಿಸಲು ರಾತ್ರೋರಾತ್ರಿ ಪೆಟ್ರೋಲ್, ಅಡುಗೆ ಅನಿಲ, ಬಸ್ ಟಿಕೆಟ್ಟುಗಳ ಬೆಲೆಯನ್ನು ಏರಿಕೆ ಮಾಡುತ್ತಾರೆ. ಆ ಹೊರೆಯೆಲ್ಲ ಬೀಳೋದು ನಮ್ಮ ತಲೆಯ ಮೇಲೆಯೇ ಅಲ್ಲವೇ? ಸರಕಾರದ ವತಿಯಿಂದ ಆಗುವ ಯಾವುದೇ ಕಾರ್ಯಕ್ರಮ, ಸಭೆ-ಸಮಾರಂಭ, ಯೋಜನೆಯು ಸರಕಾರದ ಕರ್ತವ್ಯದ ಒಂದು ಭಾಗ ಅಥವಾ ಜವಾಬ್ದಾರಿಯಾಗಿರುತ್ತದೆಯೇ ಹೊರತು, ಖಾಸಗಿ ಕಾರ್ಯಕ್ರಮವಾಗಿರುವುದಿಲ್ಲ.

ಅದನ್ನು ಕಡಿಮೆ ಹಣದಲ್ಲಿ, ಚಿಕ್ಕದಾಗಿ-ಚೊಕ್ಕನಾಗಿ, ಅವಶ್ಯಕತೆ ಇದ್ದಷ್ಟು ಮಾಡಿ ಮುಗಿಸಬಹುದು. ಆದರೆ ಅದಕ್ಕಾಗಿ ಸರಕಾರವು ಲಕ್ಷಗಟ್ಟಲೆ ಹಣವನ್ನು ಖರ್ಚು ಮಾಡುವ ಅವಶ್ಯಕತೆಯಾದರೂ ಏನಿದೆ? ಅಂಗನವಾಡಿ ಕಾರ್ಯಕರ್ತರು, ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ವೇತನ ಹೆಚ್ಚಿಸುವಾಗ ನಮ್ಮ ಸರಕಾರಕ್ಕೆ ಎದುರಾಗುವ ಬಡತನ, ಈ ರೀತಿ ದುಂದುವೆಚ್ಚ ಮಾಡುವಾಗ ಯಾಕಿರುವುದಿಲ್ಲ? ಅದೆಷ್ಟೋ ವಿಕಲಚೇತನ ಮಕ್ಕಳ ಶಾಲೆಗಳ ಶಿಕ್ಷಕರಿಗೆ ಕೇವಲ ೨ ಸಾವಿರ ರುಪಾಯಿ ವೇತನ ಪಡೆದು ಕೆಲಸ ಮಾಡುವ ಪರಿಸ್ಥಿತಿಯಿದೆ.

ಇಂಥವರ ಕಷ್ಟ ನಮ್ಮ ಸರಕಾರಕ್ಕೆ ಕಾಣುತ್ತಿಲ್ಲವೇ? ಚುನಾವಣೆಯಲ್ಲಿ ಒಂದೊಂದು ಮತವೂ ಅಮೂಲ್ಯವಾದದ್ದು. ಅಭ್ಯರ್ಥಿಗಳು ಒಂದು ಮತದಿಂದ ವಿಜೇತರಾಗಿರುವ, ಒಂದು ಮತದಿಂದ ಸೋತಿರುವ ನಿದರ್ಶನಗಳು ಸಾಕಷ್ಟಿವೆ. ಹಾಗಾಗಿ ಪ್ರತಿಯೊಬ್ಬರೂ ಮತ ಚಲಾಯಿಸುವುದರ ಜತೆಗೆ ಉತ್ತಮರನ್ನು ಆರಿಸುವ ಸಂಕಲ್ಪ ಮಾಡಬೇಕು. ನಾವು ಗೆಲ್ಲಿಸಿದ ಅಭ್ಯರ್ಥಿಯು ಕಡೇಪಕ್ಷ ನಾಗರಿಕರ ಮೂಲಭೂತ ಅವಶ್ಯಕತೆಯನ್ನು ಪೂರೈಸ ಬೇಕು, ಅದೂ ನಮ್ಮ ಹಣದಲ್ಲೇ. ಅದಕ್ಕೆಂದೇ ಸರಕಾರ ಪ್ರತಿ ನಾಗರಿಕರಿಂದ ತೆರಿಗೆಯನ್ನು ಪಡೆದುಕೊಳ್ಳುತ್ತದೆ.

ಆದಾಯ ತೆರಿಗೆ ಕಟ್ಟದ ನಾಗರಿಕ ಕೂಡ ತಾನು ಖರೀದಿಸುವ ಪ್ರತಿ ವಸ್ತುವಿಗೆ ಹಣ ಪಾವತಿಸುವಾಗಲೇ ತೆರಿಗೆಯನ್ನು ಕೊಟ್ಟಿರುತ್ತಾನೆ. ಈ ಹಣದಿಂದ ನಾಗರಿಕರಿಗೆಂದು ಕುಡಿಯಲು ಯೋಗ್ಯವಾದ ನೀರು, ವಿದ್ಯುತ್ತು, ಮಕ್ಕಳಿಗೆ ಉತ್ತಮ ಭವಿಷ್ಯಕ್ಕೆ ಉಚಿತ ವಿದ್ಯಾಭ್ಯಾಸ ಮತ್ತು ಉಚಿತ ಆರೋಗ್ಯ ಸೇವೆಯನ್ನು ಕಲ್ಪಿಸಬೇಕು. ಇದನ್ನೆಲ್ಲ ಜನಸಾಮಾನ್ಯರು ಎಲ್ಲಿಯತನಕ ಕೇಳುವುದಿಲ್ಲವೋ, ಅಲ್ಲಿಯ ತನಕ ರಾಜಕಾರಣಿಗಳು ತಮ್ಮ ತಮ್ಮ ಮನೆಯನ್ನಷ್ಟೇ ಜೋಪಾನ ಮಾಡಿಕೊಳ್ಳುತ್ತಾರೆ. ಕುಕ್ಕರ್ ಮತ್ತು ಲಿಕ್ಕರ್‌ಗೆ ನಮ್ಮ ಜೀವನವನ್ನು ಬಲಿಗೊಡದೆ ಚುನಾವಣೆಯಲ್ಲಿ ಯೋಗ್ಯರನ್ನು ಆರಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂಬುದನ್ನು ಮರೆಯದಿರೋಣ.