ಟೆಂಡರ್ ಅಂತಿಮಗೊಳಿಸಲು ಚನ್ನಗಿರಿ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಪ್ರಶಾಂತ್ ಲಂಚದ ಹಣ ಪಡೆದಿರುವ ಪ್ರಕರಣವನ್ನು ಭೇದಿಸುವುದರಿಂದ ರಾಜ್ಯದಲ್ಲಿ ಲೋಕಾಯುಕ್ತ ಸಂಸ್ಥೆಗೆ ಮೆಚ್ಚುಗೆಗಳು ವ್ಯಕ್ತವಾಗಿವೆ. ಆದರೆ ಈ ರೀತಿ ಲೋಕಾಯುಕ್ತ ದಾಳಿಗೊಳಗಾದವರಲ್ಲಿ ಬಹಳಷ್ಟು ಜನರು ಶಿಕ್ಷೆಗೆ ಒಳಗಾಗಿಲ್ಲ ಎಂಬ ದೂರುಗಳೂ ಕೇಳಿಬಂದಿವೆ.
ಈ ರೀತಿಯ ಲೋಕಾಯುಕ್ತ ದಾಳಿಗೊಳಗಾದ ಪ್ರಕರಣಗಳ ವಿಚಾರಣೆಗಳನ್ನು ನಡೆಸುವುದಕ್ಕಾಗಿ ಲೋಕಾಯುಕ್ತವು ಪ್ರತ್ಯೇಕವಾದ ವಿಚಾರಣಾ ವಿಭಾಗವನ್ನೇ ಹೊಂದಿದೆ. ಈ ವಿಚಾರಣಾ ವಿಭಾಗವು ಸಾಕ್ಷಿಗಳ ಪರಿಶೀಲನೆ, ವಾದಮಂಡನೆ, ಆರೋಪಿತರಿಗೆ ತಮ್ಮನ್ನು ಸಮರ್ಥಿಸಿಕೊಳ್ಳುವ
ಅವಕಾಶ ಸೇರಿದಂತೆ ಸುದೀರ್ಘವಾದ ಪ್ರಕ್ರಿಯೆಯ ಬಳಿಕವೇ ವಿಚಾರಣಾ ವರದಿಯನ್ನು ಅಂತಿಮ ಗೊಳಿಸುವ ಪದ್ಧತಿ ಇದೆ.
ಲೋಕಾಯುಕ್ತ ಅಸ್ತಿತ್ವಕ್ಕೆ ಬಂದ ದಿನದಿಂದ ಈವರೆಗೆ ಸಾವಿರಾರು ವಿಚಾರಣಾ ವರದಿಗಳನ್ನು ಲೋಕಾಯುಕ್ತ ಮತ್ತು ಉಪ ಲೋಕಾಯುಕ್ತರು ಸಕ್ಷಮ ಪ್ರಾಧಿಕಾರಗಳಿಗೆ ಸಲ್ಲಿಸಿದ್ದಾರೆ. ಆದರೆ, ಲೋಕಾಯುಕ್ತದ ವಿಚಾರಣಾ ವರದಿಗಳ ಶಿಫಾರಸುಗಳಿಗೆ ಸರಕಾರವು ಮನ್ನಣೆ ನೀಡುತ್ತಿಲ್ಲ. ಆರೋಪಿತರ ಜಾತಿ, ಹಣಬಲ, ರಾಜಕೀಯ ಪ್ರಭಾವ ಹೆಚ್ಚು ಕೆಲಸ ಮಾಡುವುದರಿಂದ ವಿಚಾರಣಾ ವರದಿಗಳು ಸಕ್ಷಮ ಪ್ರಾಧಿಕಾರಗಳ ಕಪಾಟಿನಲ್ಲಿ ದೂಳು ತಿನ್ನುತ್ತಾ ಬಿದ್ದಿವೆ. ಹಲವು ಪ್ರಕರಣಗಳಲ್ಲಿ ಲೋಕಾಯುಕ್ತದ ವಿಚಾರಣಾ ವರದಿಗಳನ್ನು ತಿರಸ್ಕರಿಸಿ, ತಪ್ಪಿತಸ್ಥರನ್ನು ದಂಡನೆಯಿಂದ ಪಾರುಮಾಡುವ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.
ಸರಕಾರವೇ ವಿಚಾರಣೆಗೆ ಆದೇಶಿಸಿದ್ದ ಪ್ರಕರಣಗಳಲ್ಲೂ ಇದೇ ರೀತಿ ವರ್ತಿಸುವ ಪ್ರವೃತ್ತಿಯು ಲೋಕಾಯುಕ್ತ ವಿಚಾರಣೆಗಳನ್ನೇ ಅಣಕಿಸುತ್ತಿದೆ.
ಲೋಕಾಯುಕ್ತ ಅಥವಾ ಉಪ ಲೋಕಾಯುಕ್ತರು ಸಲ್ಲಿಸುವ ವಿಚಾರಣಾ ವರದಿಗಳನ್ನು ಸಕ್ಷಮ ಪ್ರಾಧಿಕಾರಗಳು ಒಪ್ಪಿಕೊಂಡು, ಕ್ರಮ ಜರುಗಿಸುವು
ದನ್ನು ಕಡ್ಡಾಯಗೊಳಿಸಲು ಕರ್ನಾಟಕ ಲೋಕಾಯುಕ್ತ ಕಾಯಿದೆ-೧೯೮೪ರ ಸೆಕ್ಷನ್ ೧೨(೪)ಕ್ಕೆ ತಿದ್ದುಪಡಿ ತರುವಂತೆ ಈ ಹಿಂದೆ ಹೈಕೋರ್ಟ್ ವಿಭಾಗೀಯ ಪೀಠ ಶಿಫಾರಸು ಮಾಡಿತ್ತು. ಹೈಕೋರ್ಟ್ ತೀರ್ಪು ಪ್ರಕಟವಾಗಿ ಆರು ತಿಂಗಳಾದರೂ ಕಾಯಿದೆ ತಿದ್ದುಪಡಿಗೆ ಯಾವುದೇ ಪ್ರಕ್ರಿಯೆ ಆರಂಭಿಸಿಲ್ಲ.
ಆದ್ದರಿಂದ ಹೈಕೋರ್ಟ್ ಮಾಡಿರುವ ಶಿ-ರಸನ್ನು ಒಪ್ಪಿಕೊಂಡು ಅನುಷ್ಠಾನಕ್ಕೆ ತರುವ ಬದ್ಧತೆಯನ್ನು ಸರಕಾರ ಪ್ರದರ್ಶಿಸಬೇಕು. ಲೋಕಾಯುಕ್ತದ
ಬಲವರ್ಧನೆ ಎಂಬುದು ರಾಜಕೀಯ ಪಕ್ಷಗಳಿಗೆ ಕೇವಲ ಚುನಾವಣಾ ಪ್ರಣಾಳಿಕೆಯ ಸರಕು ಆಗಬಾರದು.