Saturday, 23rd November 2024

ಲಾಲೂ ಪ್ರಸಾದ್ ಯಾದವ್’ಗೆ ಸಿಬಿಐ ವಿಚಾರಣೆ ಆರಂಭ

ನವದೆಹಲಿ: ಉದ್ಯೋಗಕ್ಕಾಗಿ ಭೂ ಹಗರಣ ಕೇಸ್ ಗೆ ಸಂಬಂಧಿಸಿದಂತೆ ಮಾಜಿ ಸಚಿವ ಲಾಲೂ ಪ್ರಸಾದ್ ಯಾದವ್ ಅವರನ್ನು ಮಂಗಳವಾರ ಸಿಬಿಐ ವಿಚಾರಣೆ ಆರಂಭಿಸಿದೆ.
ಈ ಹಗರಣದಲ್ಲಿ ಅಗ್ಗದ ದರದಲ್ಲಿ ಯಾದವ್ ಕುಟುಂಬ ಮತ್ತು ಸಹವರ್ತಿಗಳಿಗೆ ಭೂಮಿಯನ್ನು ಗಿಫ್ಟ್ ಅಥವಾ ಮಾರಾಟ ಮಾಡಿದರೆ ರೈಲ್ವೆಯಲ್ಲಿ ಉದ್ಯೋಗ ನೀಡುವ ಆಮಿಷವೊಡ್ಡಲಾಗಿತ್ತು ಎಂಬ ಆರೋಪವಿದೆ. ಲಾಲೂ ಪ್ರಸಾದ್ ಅವರ ಪತ್ನಿ ಮತ್ತು ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ ಅವರನ್ನು ಪಾಟ್ನಾ ನಿವಾಸದಲ್ಲಿ ಸುಮಾರು ಐದು ಗಂಟೆಗಳ ಕಾಲ ಸಿಬಿಐ ಪ್ರಶ್ನಿಸಿದ ಒಂದು ದಿನದ ನಂತರ ಆರ್ಜೆಡಿ ಮುಖ್ಯಸ್ಥರ ವಿಚಾರಣೆ ಯನ್ನು ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್, ರಾಬ್ರಿದೇವಿ ಮತ್ತಿತರ 14 ಮಂದಿ ವಿರುದ್ಧ ಕ್ರಿಮಿನಲ್ ಪಿತೂರಿ ಮತ್ತು ಭ್ರಷ್ಟಾಚಾರ ತಡೆ ಕಾಯ್ದೆ ನಿಬಂಧನೆ ಯಡಿ ಸಿಬಿಐ ಈಗಾಗಲೇ ಜಾರ್ಜ್ ಶೀಟ್ ಸಲ್ಲಿಸಿದ್ದು, ಮಾರ್ಚ್ 15 ರಂದು ಎಲ್ಲಾ ಆರೋಪಿಗಳಿಗೆ ಸಮನ್ಸ್ ನೀಡಲಾಗಿದೆ.
ಮೇವು ಹಗರಣದಲ್ಲಿ ಶಿಕ್ಷೆಗೆ ಗುರಿಯಾಗಿರುವ ಲಾಲೂ ಪ್ರಸಾದ್ ಯಾದವ್ ಮತ್ತು ಅವರ ಪತ್ನಿಯನ್ನು ಹೊಸದಾಗಿ ವಿಚಾರಣೆ ನಡೆಸುತ್ತಿರುವುದರಿಂದ ವಿರೋಧ ಪಕ್ಷಗಳಿಂದ ಸೋಮವಾರ ತೀವ್ರ ಟೀಕೆ ವ್ಯಕ್ತವಾಗಿತ್ತು.