ಶಿವಪ್ರಸಾದ್
ನಮ್ಮಲ್ಲಿ ಹಲವರ ಜೀವನದಲ್ಲಿ ಇದು ಒಂದಲ್ಲ ಒಂದು ರೀತಿಯಲ್ಲಿ ಅನುಭವವೇದ್ಯವಾಗಿರುತ್ತದೆ. ಒಂದು ಬಸ್ ಸ್ಟ್ಯಾಂಡ್ ತುಂಬ ಜನರಿದ್ದಾಗ ಅಲ್ಲಿ ಅವರೊಂದಿಗೆ ನಿಲ್ಲಬೇಕಾದಾಗ ಅಥವಾ ಅವರ ಮುಂದೆ ಹಾದುಹೋಗಬೇಕಾದಾಗ ‘ಹೇಗೆ ನಡೆದು ಹೋಗಬೇಕು’ ಎಂಬ ಅಳುಕು ತಲೆದೋರಬಹುದು. ಇಂಥ ಪರಿಸ್ಥಿತಿಯಲ್ಲಿ ಅಳುಕಿ ನಿಂದ ಅಲ್ಲಿ ನಿಂತಿರುವವರ ಹಿಂದೆ ಹೋಗಿ ನಿಂತುಬಿಡುತ್ತೇವೆ. ಅಲ್ಲಿ ನಿಂತ ಮೇಲೂ ನಾನು ಸರಿಯಾಗಿ ನಿಂತಿರುವೆನೇ ಅಥವಾ ಇಲ್ಲವೇ ಎಂಬ ಸಂದೇಹದೊಂದಿಗೆ, ಇತರರು ನನ್ನನ್ನು ನೋಡಿ ನಗುತ್ತಿರಬಹುದು ಎಂಬ ಅನುಮಾನವು ಕಾಡುತ್ತಿರುತ್ತದೆ.
ನನ್ನಲ್ಲೇನೋ ಕೊರತೆಯಿದೆ ಎಂಬ ಕೀಳರಿಮೆಯ ಪರಿಣಾಮವಾಗಿ, ಒಂದು ರೀತಿಯ ನಾಚಿಕೆಯುಂಟಾಗುತ್ತದೆ. ನಾನು ನಡೆದು ಹೋಗುವ ರೀತಿ ಸರಿಯಾಗಿಲ್ಲ, ನನ್ನ ಉಡುಪು ಸರಿಯಾಗಿಲ್ಲ, ಹೀಗೆ ಏನೇನೋ ಇಲ್ಲ ಸಲ್ಲದ ಸಂದೇಹಗಳು ನಮ್ಮನ್ನು ಕಾಡುತ್ತಿರುತ್ತವೆ. ನಮ್ಮ ವ್ಯಕ್ತಿತ್ವದ ಬಗ್ಗೆ ಹಲವು ಕೀಳರಿಮೆಯ ಭಾವನೆಗಳನ್ನು ನಮ್ಮ ಮನದ ತುಂಬ ತುಂಬಿಕೊಂಡು ಜೀವನ ನಡೆಸುತ್ತಿರುತ್ತೇವೆ. ಕಾಲ ಕಳೆದಂತೆ ಈ ಕೀಳರಿಮೆಯಿಂದಾಗಿ ನಮ್ಮ ನಡವಳಿಕೆಯೇ ಬದಲಾಗುತ್ತದೆ. ಆಗ ನಮ್ಮ ವಕ್ರ ನಡವಳಿಕೆ ಇನ್ನಷ್ಟು ಎದ್ದು ಕಾಣುವಂತಾಗುತ್ತದೆ. ನಾವು ಸರಿಯಾಗಿಯೇ ಇದ್ದರೂ ನಮ್ಮಲ್ಲೇನೋ ನ್ಯೂನತೆಯಿದೆ ಎಂಬ ಭಾವ ನಮ್ಮ ಹೆಗಲೇರಿ ಕುಳಿತುಬಿಡುತ್ತದೆ. ಈ ಜಗತ್ತಿನಲ್ಲಿ ಯಾರೊಬ್ಬರೂ ಪರಿಪೂರ್ಣವಾಗಿ ಸುರದ್ರೂಪಿಗಳಾಗಿರುವುದು ಸಾಧ್ಯವಿಲ್ಲ ಎಂಬ ಸಾಮಾನ್ಯವಾದ ಜ್ಞಾನವೂ ಇಲ್ಲದಂತಾಗಿ ನಮ್ಮಲ್ಲಿ ಕೀಳರಿಮೆಯ ಭಾವನೆ ಬಲವಾಗಿ ಮನೆಮಾಡಿಬಿಡುತ್ತದೆ.
ಎಲ್ಲರೂ ಒಂದಲ್ಲ ಒಂದು ಕೊರತೆಯೊಂದಿಗೆ ಹುಟ್ಟಿರುವವರೇ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ನಮ್ಮಲ್ಲಿರುವ ಕೊರತೆಗಳನ್ನು ಮೀರಿ ನಮ್ಮ ಶಕ್ತಿಗಳನ್ನು ಅರಿತು, ಕೊರತೆಗಳನ್ನು ಗೆದ್ದು ನಿಲ್ಲುವ ಮನೋಬಲ ವನ್ನು ರೂಢಿಸಿಕೊಳ್ಳಬೇಕು. ಅದೇ ನಾವು ಮಾಡುವ ನಿಜವಾದ ಸಾಧನೆ. ಸಣ್ಣ ದೌರ್ಬಲ್ಯವನ್ನೇ ದೊಡ್ಡ ಸಮಸ್ಯೆಯೆಂದು ನಾವು ಪರಿಗಣಿಸಿ ಕೈಚೆಲ್ಲಿದರೆ ಜಗತ್ತು ನಮ್ಮನ್ನು ಕಡೆಗಣಿಸಿಬಿಡುತ್ತದೆಯಷ್ಟೆ. ತಮ್ಮಲ್ಲಿದ್ದ ಕೊರತೆಗಳನ್ನು ಪಾತಾಳಕ್ಕೆ ತುಳಿದು ಸಾಧನೆಗೈದ ಎಷ್ಟೋ ಸಾಧಕರ ಉದಾಹರಣೆಗಳು ನಮ್ಮ ಮುಂದಿವೆ. ನೋಡಲು ವಿಚಿತ್ರವಾಗಿ ಕಾಣಿಸುತ್ತಿದ್ದ ಚಾರ್ಲಿ ಚಾಪ್ಲಿನ್ ಮತ್ತು ನಮ್ಮವರೇ ಆದ ನರಸಿಂಹರಾಜು ಮುಂತಾದವರು ತಮಗಿದ್ದ ದೈಹಿಕ ನ್ಯೂನತೆಗಳನ್ನೇ ತಮ್ಮ ಶಕ್ತಿಗಳಾಗಿ ಪರಿವರ್ತಿಸಿಕೊಂಡು ಹಾಸ್ಯ ಚಕ್ರವರ್ತಿಗಳಾಗಿ ಮಿಂಚಿದರು.
ಮೈಕೆಲ್ ಜಾಕ್ಸನ್ ಎಂಬ ನರ್ತಕ ಮತ್ತು ಹಾಡುಗಾರ ತನ್ನ ವಿಚಿತ್ರ ಮುಖವನ್ನು ಹೊತ್ತುಕೊಂಡೇ ವಿಶ್ವಪ್ರಸಿದ್ಧನಾದ. ಆತ ಸ್ಟೇಜ್ ಶೋ ಕೊಡುತ್ತಾನೆ
ಎಂದರೆ ವಿಶ್ವದೆಲ್ಲೆಡೆ ಲಕ್ಷಾಂತರ ಜನ ಮುಗಿಬಿದ್ದು ಟಿಕೆಟ್ ಕೊಳ್ಳುತ್ತಿದ್ದರು, ಕಿಕ್ಕಿರಿದು ಶೋ ವೀಕ್ಷಿಸುತ್ತಿದ್ದರು. ಆದರೆ ಇದೇ ಮೈಕಲ್ ಜಾಕ್ಸನ್ ತನ್ನ ಕೊನೆಯ ದಿನಗಳಲ್ಲಿ ಖಿನ್ನತೆಯಿಂದ ಮಾದಕ ದ್ರವ್ಯಗಳ ವ್ಯಸನಿಯಾಗಿ ಅವುಗಳ ಪ್ರಭಾವದಿಂದ ಆತ್ಮಹತ್ಯೆಗೆ ಶರಣಾದ.
ಅಮೆರಿಕದ ಪೂರ್ವ ಅಧ್ಯಕ್ಷರಾದ ಅಬ್ರಹಾಂ ಲಿಂಕನ್ ತಮ್ಮ ತೀರಾ ಸಾಮಾನ್ಯವಾದ ಆರಂಭದ ದಿನಗಳಲ್ಲಿ ಖಿನ್ನತೆಯಿಂದ ಬಳಲಿದ್ದರು. ಅವರ ಪೋಷಕರು, ಥಾಮಸ್ ಮತ್ತು ನ್ಯಾನ್ಸಿ ಲಿಂಕನ್ ಇಬ್ಬರೂ ಖಿನ್ನತೆಯಿಂದ ಬಳಲುತ್ತಿದ್ದರು ಎಂದು ನಂಬಲಾಗಿದೆ. ಖಿನ್ನತೆಯ ದೌರ್ಬಲ್ಯ ಅನುವಂಶಿಕ ವಾಗಿ ಬರಬಹುದೆಂಬುದು ಸಂಶೋಧಕರ ಅಭಿಮತ. ಲಿಂಕನ್ ಬರೆದ ಪತ್ರಗಳು, ಅವರ ಸ್ನೇಹಿತರು ಮತ್ತು ಸಹವರ್ತಿಗಳ ಅಭಿಪ್ರಾಯ ಗಳಿಂದ, ಇತಿಹಾಸಕಾರರು ಲಿಂಕನ್ ತಮ್ಮ ಜೀವನದ ಬಹುಪಾಲು ದೀರ್ಘಕಾಲದ ಖಿನ್ನತೆಯೊಂದಿಗೆ ಹೋರಾಡಿದರು ಎಂದು ತೀರ್ಮಾನಿಸಿದ್ದಾರೆ.
ವಾಸ್ತವವಾಗಿ, ಲಿಂಕನ್‌ರ ಖಿನ್ನತೆಯು ಅಧ್ಯಕ್ಷರಾಗಿ ಚುನಾಯಿತರಾಗಲು ಅವರಿಗೆ ನಿಜವಾಗಿಯೂ ಸಹಾಯ ಮಾಡಿರಬಹುದು. ಲಿಂಕನ್‌ರ ಖಿನ್ನತೆಯು ಆಗಾಗ್ಗೆ ಆತ್ಮಹತ್ಯೆಯ ಆಲೋಚನೆಗಳನ್ನು ಒಳಗೊಂಡಿತ್ತಾದ್ದರಿಂದ, ಅವರು ಅನುಗಾಲವೂ ತಮ್ಮ ಸಾವಿನ ಬಗ್ಗೆ ಆಲೋಚಿಸುತ್ತಿದ್ದರು. ಸಾಯುವ ಮೊದಲು ಮಹತ್ತರವಾದುದ್ದೇನಾದರೊಂದನ್ನು ಸಾಧಿಸುವುದು ಅವರಿಗೆ ಮುಖ್ಯವಾಯಿತು. ತಮ್ಮ ಧ್ಯೇಯಗಳನ್ನು ಉನ್ನತ ಉದ್ದೇಶದ ಮೇಲೆ ಕೇಂದ್ರೀಕರಿಸಿ ಸಾಯಲು ಬಯಸಿದಾಗಲೂ ಬದುಕಲು ಒಂದು ಬಲವಾದ ಕಾರಣವನ್ನು ಕಂಡುಕೊಂಡರು.
ದೇಶದ ಅತ್ಯುನ್ನತ ಹುದ್ದೆಗೇರಿದರೂ ಲಿಂಕನ್ ತಮ್ಮ ವಿನಮ್ರತೆಯ ಭಾವದಿಂದಾಗಿ ಅಹಂಕಾರದ ವ್ಯಕ್ತಿತ್ವ ಹೊಂದಿರಲಿಲ್ಲ. ಇತರರಿಂದ ಕಲಿಯಲು ಅವರು ಸದಾ ಉತ್ಸುಕರಾಗಿದ್ದರು ಮತ್ತು ತಮ್ಮ ಸಚಿವ ಸಂಪುಟದಲ್ಲಿ ತಮ್ಮ ಮಾಜಿ ವಿರೋಧಿಗಳನ್ನೂ ನೇಮಿಸಿಕೊಂಡರು. ತಮ್ಮ ವಿನಮ್ರತೆ ಯಿಂದಾಗಿ ಸ್ವಂತ ವೈಫಲ್ಯಗಳನ್ನು ಒಪ್ಪಿಕೊಳ್ಳಲು ಅವರಿಗೆ ಸುಲಭವಾಯಿತು ಮತ್ತು ಇತರರ ಯಶಸ್ಸಿನಿಂದ ಅಸೂಯೆ ಅಥವಾ ಹೆದರಿಕೆಯಾಗಲಿಲ್ಲ. ಆದ್ದರಿಂದ ಖಿನ್ನತೆಯ ಮನಃಸ್ಥಿತಿ ಅವರ ಸ್ವಂತ ಯಶಸ್ಸಿನ ಮೇಲೆ ಪ್ರಭಾವ ಬೀರಲಿಲ್ಲ.
ನಮ್ಮ ನ್ಯೂನತೆಗಳನ್ನು ಮೆಟ್ಟಿನಿಲ್ಲುವಲ್ಲಿ ನಮ್ಮ ಮನೋನಿಶ್ಚಯ ಪ್ರಮುಖ ಪಾತ್ರವಹಿಸುತ್ತದೆ. ಒಮ್ಮೆ ನಮ್ಮ ಮನಸ್ಸು ನಕಾರಾತ್ಮಕ ಭಾವನೆಗೆ ಜಾರಿಬಿಟ್ಟರೆ, ನಾವು ಯಾವುದರ ಬಗ್ಗೆ ಆಲೋಚಿಸಿದರೂ ಅದು ಅಸಾಧ್ಯವಾಗಿಯೇ ಕಾಣುತ್ತದೆ. ಆಗ ನಮ್ಮ ವ್ಯಕ್ತಿತ್ವ, ಚಿಂತನೆ ಮತ್ತು ಮನಸ್ಸು ನಕಾರಾತ್ಮಕವಾಗಿ ರೂಪುಗೊಳ್ಳುತ್ತದೆ. ಹೀಗಾಗಿ ನಮ್ಮ ನಿರ್ಧಾರಗಳೂ ನಕಾರಾತ್ಮಕ ಧಾಟಿಯಲ್ಲಿ ನಡೆಯುತ್ತವೆ. ಬದುಕು ಸಾಗುತ್ತ ಹೋದಂತೆಲ್ಲ ಬದಲಾಗುತ್ತಿರುತ್ತದೆ.
ನಾವು ಮಾಡುವ ಪ್ರತಿ ತಪ್ಪೂ ನಮಗೆ ಒಂದೊಂದು ಪಾಠವನ್ನು ಕಲಿಸುತ್ತಿರುತ್ತದೆ. ಪ್ರತಿಯೊಬ್ಬ ಮನುಷ್ಯನಲ್ಲೂ ತನ್ನದೇ ಆದ ಪ್ರತಿಭೆಗಳು
ಮನೆ ಮಾಡಿರುತ್ತವೆ. ಅದನ್ನು ಅರಿತು ಆ ಸಾಮರ್ಥ್ಯವನ್ನು ಆತ ಬೆಳೆಸಿಕೊಳ್ಳುತ್ತ ಸಾಗಬೇಕು. ಉದಾಹರಣೆಗೆ, ಒಬ್ಬ ಮನುಷ್ಯ ಬರವಣಿಗೆಯನ್ನೇ ತನ್ನ ಮುಖ್ಯ ಚಟುವಟಿಕೆಯನ್ನಾಗಿಸ ಹೊರಟರೆ ಸಹಜವಾಗಿಯೇ ಆತನ ಚಿಂತನೆ ಮತ್ತು ವ್ಯಕ್ತಿತ್ವ ಸಕಾರಾತ್ಮಕವಾಗಿ ರೂಪುಗೊಳ್ಳುತ್ತವೆ. ಆತನ ಬರವಣಿಗೆ ಮಾತ್ರ ಆಗ ಬೆಳೆಯುವುದಿಲ್ಲ. ಅದು ಬರಹಗಾರನನ್ನೂ ಬೆಳೆಸುತ್ತದೆ, ಆತನನ್ನು ಪಕ್ವಗೊಳಿಸುತ್ತದೆ.
ಆದರೆ ಆತ ಸತತವಾಗಿ ನಕಾರಾತ್ಮಕ ಭಾವನೆಯೊಂದಿಗೆ ಓದುಗರಿಗೂ ನಕಾರಾತ್ಮಕವಾದುದನ್ನೇ ಕೊಡುತ್ತ ಹೋದರೆ, ಅವರು ಆತನನ್ನು ತಿರಸ್ಕರಿಸು ತ್ತಾರೆ. ಹೀಗಾಗಿ ಆತ ಅನಿವಾರ್ಯವಾಗಿ ಸಕಾರಾತ್ಮಕ ನಾಗಿ, ಜೀವನ್ಮುಖಿಯಾಗುತ್ತಾನೆ. ಓದುಗರಿಗೆ ಇಷ್ಟವಾಗುವಂಥ ಮತ್ತು ಉಪಯುಕ್ತ ವಾದಂಥ ಮಾಹಿತಿಯನ್ನು ತನ್ನ ಬರವಣಿಗೆಗಳಲ್ಲಿ ನೀಡುತ್ತಾನೆ. ಆ ಧಾಟಿಯಲ್ಲಿ ಆಲೋಚಿಸುವುದನ್ನೇ ತಾನೂ ರೂಢಿಸಿಕೊಳ್ಳುತ್ತಾನೆ. ಹೀಗಾದಾಗ ಆತ ಜೀವನದ ಪ್ರತಿ ಹಂತದಲ್ಲೂ ಸಕಾರಾತ್ಮಕವಾದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತ ಹೋಗುತ್ತಾನೆ. ಇನ್ನೂ ಸಾಕಷ್ಟು ಅವಕಾಶವಿದೆ. ನೀವೇಕೆ ಅದನ್ನು ನಂಬ ಬೇಕೆಂದರೆ, ನಾನು ಚಿಕ್ಕವನಾಗಿದ್ದಾಗ ಯಾವುದನ್ನಾದರೂ ಉತ್ತಮವಾಗಿ ಮಾಡಲು ಈಗಾಗಲೇ ತಡವಾಗಿದೆ ಎಂದು ಭಾವಿಸಿದ್ದೆ.
ಆದರೆ ಅಸಾಧ್ಯವಾದುದನ್ನು ಸಾಧಿಸುವುದು ಒಂದು ರೀತಿಯ ವಿನೋದ. ಯಶಸ್ಸೆಂಬುದು ಎಂದೋ ಒಂದು ದಿನ ಇದ್ದಕ್ಕಿದ್ದಂತೆ ಸಂಭವಿಸಿ, ಕೈಹಿಡಿದು ಆಕಾಶದೆತ್ತರಕ್ಕೆ ಕರೆದೊಯ್ಯುವ ಘಟನೆ ಎಂದು ನಾವು ಭಾವಿಸಬಹುದು. ಆದರೆ ಅದು ಒಂದು ಆಕಸ್ಮಿಕ ಘಟನೆಯಲ್ಲಅಥವಾ ದಿಢೀರನೆ ದೇವರು ಒಲಿಯುವುದರಿಂದ ಕೈಹಿಡಿಯುವ ಸೌಭಾಗ್ಯವಲ್ಲ. ಅದು ಒಮ್ಮಿಂದೊಮ್ಮೆ ಒಲಿದುಬಿಡುವುದೂ ಇಲ್ಲ. ಪ್ರತಿ ಕ್ಷಣ ಸಂಭವಿಸುತ್ತಲೇ ಇರಬೇಕಾದ ಪ್ರಯತ್ನದ ಫಲವೇ ಯಶಸ್ಸು. ಒಮ್ಮೆ ಯಶಸ್ಸಿನ ಕುದುರೆ ಏರಿದವರು ಅದರಿಂದ ಇಳಿಯಲಾರರು. ಹೀಗಾಗಿ ಯಶಸ್ಸಿನ ಕುದುರೆಯನ್ನೇರುವ
ಪ್ರಯತ್ನ ವನ್ನು ನಿರಂತರವಾಗಿ ನಾವೆಲ್ಲರೂ ಮಾಡುತ್ತ ಸಾಗೋಣ.