ನವದೆಹಲಿ: ದೇಶದಾದ್ಯಂತ ದಿನದಿಂದ ದಿನಕ್ಕೆ ಕೋವಿಡ್-19 ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಯಾಗುತ್ತಿದ್ದು, ಕಳೆದ 24 ಗಂಟೆಗಳ ಅವಧಿಯಲ್ಲಿ 700ಕ್ಕೂ ಅಧಿಕ ಹೊಸ ಕರೊನಾ ವೈರಸ್ ಸೋಂಕು ಪ್ರಕರಣಗಳು ಪತ್ತೆಯಾಗಿವೆ.
ಈ ಮೂಲಕ ಸಕ್ರಿಯ ಪ್ರಕರಣಗಳ ಸಂಖ್ಯೆ 4,623ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಗುರುವಾರ ತಿಳಿಸಿದೆ.
ಕಳೆದ ವರ್ಷ ನವೆಂಬರ್ 12ರಂದು 734 ಕೋವಿಡ್ ಪ್ರಕರಣಗಳು ವರದಿಯಾಗಿದ್ದವು. ಮುಂಜಾನೆ 8 ಗಂಟೆಗೆ ಲಭ್ಯವಾದ ಮಾಹಿತಿ ಪ್ರಕಾರ, ಇಂದು 754 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಕರ್ನಾಟಕದಲ್ಲಿ ಒಬ್ಬರು ಸಾವಿಗೀಡಾಗಿರುವುದು ಸೇರಿದಂತೆ ಈವರೆಗೆ ಒಟ್ಟು 5,30,790 ಮಂದಿ ಕೋವಿಡ್ನಿಂದ ಮೃತಪಟ್ಟಿದ್ದಾರೆ. ಈ ಮೂಲಕ ಈವರೆಗೆ 4,46,92,710 ಮಂದಿಗೆ ಕರೊನಾ ವೈರಸ್ ಸೋಂಕು ತಗುಲಿದೆ.
ದೇಶದಾದ್ಯಂತ ಈವರೆಗೆ 4,41,57,297 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ದೈನಂದಿನ ಮರಣ ಪ್ರಮಾಣ ಶೇ 1.19ರಷ್ಟಿದೆ. ದೇಶದಾದ್ಯಂತ ನಡೆಯುತ್ತಿರುವ ಲಸಿಕಾ ಅಭಿಯಾನದ ಅಡಿ ಈವರೆಗೆ 220.64 ಕೋಟಿಗೂ ಅಧಿಕ ಕೋವಿಡ್ ವಿರುದ್ಧದ ಲಸಿಕಾ ಡೋಸ್ಗಳನ್ನು ವಿತರಿಸಲಾಗಿದೆ.