ಚಿಕ್ಕನಾಯಕನಹಳ್ಳಿ: ಶ್ರೀ ರಾಮ ನವಮಿ ಪ್ರಯುಕ್ತ ಪಟ್ಟಣ ಸೇರಿ ತಾಲೂಕಿನ ಎಲ್ಲೆಡೆ ದೇವಾಲಯಗಳಲ್ಲಿ ವಿಶೇಷ ಪೂಜೆ, ಭಕ್ತರಿಗೆ ಪಾನಕ ಕೋಸಂಬರಿ ವಿತರಿಸಲಾಯಿತು.
ಪಟ್ಟಣದ ಸುಪ್ರಸಿದ್ದ ಹಳೆಯೂರು ಆಂಜನೇಯಸ್ವಾಮಿ ದೇವಾಲಯದಲ್ಲಿ ಮುಂಜಾನೆಯಿಂದಲೇ ವಿವಿಧ ಪೂಜೆಗಳು ನಡೆದವು. ದೇವಾಲಯದ ಆವರಣದಲ್ಲಿ ದೇವರ ಉತ್ಸವ ಮೂರ್ತಿಯ ಮೆರವಣಿಗೆ ನಡೆಯಿತು. ಭಕ್ತರು ಬೆಳಗ್ಗೆಯಿಂದಲೇ ದೇವರ ದರ್ಶನ ಪಡೆದರು.
ಜೋಗಿಹಳ್ಳಿಯ ಆದಿ ಹನುಮಂತರಾಯಸ್ವಾಮಿ ದೇವಾಲಯದಲ್ಲಿ ಶ್ರೀರಾಮನವಮಿ ಪ್ರಯುಕ್ತ ವಿಶೇಷ ಪೂಜೆ, ದೇವರ ಮೂಲಮೂರ್ತಿಗೆ ಬೆಣ್ಣೆ ಅಲಂಕಾರ ಮಾಡಲಾಗಿತ್ತು. ಭಕ್ತರಿಗೆ ಪಾನಕ, ಕೋಸಂಬರಿ ವಿತರಿಸಲಾಯಿತು. ತಿಪಟೂರು ರಸ್ತೆಯ ಪಂಚಮುಖಿ ಆಂಜನೇಯ ಸ್ವಾಮಿ ದೇಗುಲದಲ್ಲೂ ಭಕ್ತರಿಂದ ವಿಶೇಷ ಅಲಂಕಾರ, ಪೂಜೆ ನೆರವೇರಿತು.
ದೇವಾಂಗ ಬೀದಿಯ ಬನಶಂಕರಿ ದೇವಾಲಯದಲ್ಲಿ ಶ್ರೀರಾಮನ ಚಿತ್ರಪಟವಿಟ್ಟು ೭ ದಿನಗಳ ಕಾಲ ಅಖಂಡ ಭಜನೆ ಆರಂಭವಾಯಿತು. ಭಜನೆ ಮಾಡುವವರಿಗೆ ದೇವಾಲಯದಲ್ಲಿ ದಾಸೋಹದ ವ್ಯವಸ್ಥೆ ಮಾಡಲಾಗಿದೆ. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಪಟ್ಟಣದ ನೆಹರು ವೃತ್ತದಲ್ಲಿ ವಿಶ್ವ ಹಿಂದು ಪರಿಷತ್ನಿಂದ, ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಮುಂದೆ ಮಾರುತಿ ಆಟೋ ಚಾಲಕರ ಸಂಘದಿಂದ ಪಾನಕ ಪಲ್ಲಾರ ವಿತರಿಸಲಾಯಿತು.