ವೀಕೆಂಡ್ ವಿತ್ ಮೋಹನ್
camohanbn@gmail.com
ಸಮಾಜದಲ್ಲಿನ ಹಿಂದುಳಿದ ವರ್ಗಗಳ ಏಳಿಗೆಗಾಗಿ ಶುರುವಾದಂತಹ ಮೀಸಲಾತಿ ಹೋರಾಟ ಆಗಾಗ ಚರ್ಚೆಗೆ ಬರುತ್ತಲೇ ಇರುತ್ತದೆ. ಹಿಂದುಳಿದ
ವರ್ಗದಲ್ಲಿ ಜನ್ಮ ತಾಳಿದ್ದ ಬಾಬಾಸಾಹೇಬರು ತಮ್ಮ ಜೀವನದ ಕಟ್ಟಕಡೆಯ ಕ್ಷಣದವರೆಗೂ ಮೀಸಲಾತಿಯ ಹೋರಾಟದಲ್ಲಿ ಪಾಲ್ಗೊಂಡಿದ್ದರು.
ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆದಿದ್ದ ಬಾಬಾಸಾಹೇಬರು ಭಾರತದ ಸಂವಿಧಾನದ ರಚನೆಯ ಸಂದರ್ಭದಲ್ಲಿ ವೈಜ್ಞಾನಿಕವಾದಂತಹ ಮೀಸಲಾತಿ ನೀತಿಯನ್ನೇ ಪ್ರಸ್ತಾಪಿಸಿದ್ದರು.ಅವರ ಹಲವು ಸಲಹೆಗಳನ್ನು ನೆಹರು ನೇತೃತ್ವದ ಕಾಂಗ್ರೆಸ್ ಸರ್ಕಾರ ಪರಿಗಣಿಸಲಿಲ್ಲವೆಂಬ ಕೊರಗು ಅವರನ್ನು ಕಾಡುತ್ತಿದ್ದರೂ ಸಹ ತಮ್ಮ ನಿರಂತರ ಹೋರಾಟವನ್ನು ಬಾಬಾಸಾಹೇಬರು ನಿಲ್ಲಿಸಲಿಲ್ಲ. ಬಾಬಾಸಾಹೇಬರು ಹಿಂದೂ ಧರ್ಮದಲ್ಲಿ ಜನ್ಮ ತಾಳಿ
ದ್ದಕ್ಕೆ ಪಶ್ಚಾತಾಪ ಪಟ್ಟಿದ್ದು ಎಷ್ಟು ಸತ್ಯವೋ, ಮುಸಲ್ಮಾನ್ ಮತ್ತು ಕ್ರಿಶ್ಚಿಯನ್ ಧರ್ಮದ ಬಗ್ಗೆ ಅವರಿಗಿದ್ದಂತಹ ಹಲವು ಧೋರಣೆಗಳು ಕೂಡ ಅಷ್ಟೇ ಸತ್ಯ. ಮುಸ್ಲಿಂ ಧರ್ಮದಲ್ಲಿನ ಬುರ್ಖಾ ಪದ್ದತಿಯನ್ನು ಬಾಬಾಸಾಹೇಬರು ತೀವ್ರವಾಗಿ ಖಂಡಿಸಿದ್ದರು.
ಈಸ್ಟ್ ಇಂಡಿಯಾ ಕಂಪೆನಿಯಿಂದ ಮೂರು ಶತಮಾನಗಳ ಕಾಲ ನಲುಗಿದ್ದ ಭಾರತ, ಸ್ವಾತಂತ್ರ್ಯ ಸಿಕ್ಕ ನಂತರ ಮತ್ತೊಮ್ಮೆ ಈಸ್ಟ್ ಇಂಡಿಯಾ ಕಂಪೆನಿಯ ರೀತಿಯಲ್ಲಿ ಆಡಳಿತ ನಡೆಸುವುದು ಅವರಿಗೆ ಇಷ್ಟವಿರಲಿಲ್ಲ. ಹಿಂದೂ ಧರ್ಮದ ಬಗ್ಗೆ ಅವರಿಗೆ ಎಷ್ಟೇ ಮನಸ್ತಾಪವಿದ್ದರೂ ಸಹ ತಮ್ಮ ಜೀವನದ ಕೊನೆ ಗಳಿಗೆಯಲ್ಲಿ ಬೌದ್ಧ ಧರ್ಮ ಸ್ವೀಕರಿಸಿದರು. ಇಸ್ಲಾಂ ಮತ್ತು ಕ್ರಿಶ್ಚಿಯನ್ ಧರ್ಮದವರು ಬಾಬಾಸಾಹೇಬರನ್ನು ಕೈಬೀಸಿ ಕರೆದರೂ ಸಹ ಅವರ ಮಾತಿಗೆ ಬಾಬಾಸಾಹೇಬರು ಒಪ್ಪಿಗೆ ನೀಡಲಿಲ್ಲ.
ಮೀಸಲಾತಿಯ ವಿಷಯದಲ್ಲಿ ಬಾಬಾಸಾಹೇಬರಿಗಿದ್ದಂತಹ ಸ್ಪಷ್ಟತೆ ಬೇರೆ ಯಾರಿಗೂ ಇರಲಿಲ್ಲ. ಮೀಸಲಾತಿ ನೀಡುವ ಸಂವಿಧಾನ ರಚನೆಯ ಆರಂಭಿಕ ಚರ್ಚೆಗಳಲ್ಲಿ ಧರ್ಮಾಧಾರಿತ ಮೀಸಲಾತಿ ನೀಡುವುದನ್ನು ವಿರೋಧಿಸಲಾಗಿತ್ತು. ಧರ್ಮ ದಲ್ಲಿನ ಪ್ರತಿಯೊಂದು ವರ್ಗವೂ ಸಾಮಾಜಿಕವಾಗಿ ಮತ್ತು
ಶೈಕ್ಷಣಿಕವಾಗಿ ಹಿಂದುಳಿದಿರುವುದಿಲ್ಲವೆಂಬ ಸ್ಪಷ್ಟತೆ ಅವರಿಗಿತ್ತು. ಧರ್ಮದೊಳಗಿನ ಜಾತಿಗಳಲ್ಲಿ ಮೇಲು ಮತ್ತು ಕೀಳೆಂಬ ವರ್ಗವಿತ್ತೇ ವಿನಃ ಇಡೀ ಧರ್ಮವೇ ಹಿಂದುಳಿದಿರಲಿಲ್ಲವೆಂಬುದು ಸತ್ಯ. ಮೀಸಲಾತಿಯೆಂಬುದು ಜಾತಿ ಆಧಾರಿತವಾಗ ಬೇಕೇ ಹೊರತು ಧರ್ಮಾಧಾರಿತವಾಗಬಾರದು.
ಇಸ್ಲಾಂ ಧರ್ಮದಲ್ಲಿ ಕೆಳಸ್ತರದ ಮುಸಲ್ಮಾನರಿದ್ದಾರೆ, ಕ್ರಿಶ್ಚಿಯನ್ ಧರ್ಮದಲ್ಲಿ ಕೆಳಸ್ತರದ ಕ್ರಿಶ್ಚಿಯನ್ನರಿದ್ದಾರೆ.
ಕ್ರಿಶ್ಚಿಯನ್ನರಲ್ಲಿ ಕ್ಯಾಥೊಲಿಕ್ ಮತ್ತು ಪ್ರೊಟೆಸ್ಟೆಂಟ್‌ಗಳೆಂಬ ಎರಡು ಬಹುದೊಡ್ಡ ವಿಭಾಗಗಳಿವೆ. ಚರ್ಚುಗಳಲ್ಲಿ ಕ್ಯಾಥೊಲಿಕ್ ಗಳಿಗೆ ಮೊದಲ ಆದ್ಯತೆ, ನಂತರದ ಸರದಿ ಪ್ರೊಟೆಸ್ಟಂಟರದ್ದು. ಹಿಂದೂ ಧರ್ಮದಿಂದ ಮತಾಂತರವಾದವರನ್ನು ಕ್ಯಾಥೊಲಿಕ್‌ಗಳು ನೋಡುವ ರೀತಿಯೇ ವಿಭಿನ್ನ.
ಸಂವಿಧಾನದ ಪ್ರಕಾರ ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡುವುದು ನಿಷೇಧ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ನೇರವಾಗಿ ಮೀಸಲಾತಿ ನೀಡುವ ಅವಕಾಶವನ್ನು ಸಂವಿಧಾನದ ಪರಿಚ್ಛೇದ ೧೫ ಮತ್ತು ೪೨ ರಲ್ಲಿ ಕಲ್ಪಿಸಲಾಗಿದೆ.
ಬ್ರಿಟಿಷರ ಕಾಲದಲ್ಲಿ ಮುಸಲ್ಮಾನರಿಗೆ ಮೀಸಲಾತಿ ನೀಡುವ ವಿಧೇಯಕವೊಂದಿತ್ತು. ೧೯೪೭ ರ ಸ್ವಾತಂತ್ರ್ಯದ ನಂತರ ಸಂವಿಧಾನ ಜಾರಿಗೆ ಬಂತು ಬ್ರಿಟಿಷರ ಧರ್ಮಾಧಾರಿತ ವಿಧೇಯಕ ರದ್ದಾಯಿತು. ೧೯೪೭ ರಲ್ಲಿ ಅಖಂಡ ಭಾರತ ವಿಭಜನೆಯಾದ ನಂತರ ಮುಸಲ್ಮಾನರಿಗಾಗಿ ಪಾಕಿಸ್ತಾನವೆಂಬ ಹೊಸ ದೇಶ ಅಸ್ತಿತ್ವಕ್ಕೆ ಬಂದ ನಂತರ ಭಾರತದ ಸಂವಿಧಾನದಲ್ಲಿ ಜಾತ್ಯತೀತವೆಂಬ ಪದವೇ ಇರಲಿಲ್ಲ. ದೇಶ ವಿಭಜನೆಯ ನಂತರ ಭಾರತದಲ್ಲಿ ಉಳಿದು ಕೊಂಡಂತಹ ಮುಸಲ್ಮಾನರ ಓಲೈಕೆಯಲ್ಲಿ ತೊಡಗಿದ ಕಾಂಗ್ರೆಸ್ ಪಕ್ಷ ಇಂದಿರಾ ಗಾಂಧಿ ಪ್ರಧಾನಮಂತ್ರಿಯಾಗಿದ್ದ ಕಾಲದಲ್ಲಿ ಜಾತ್ಯತೀತವೆಂಬ ಪದವನ್ನು ಸಂವಿಧಾನದಲ್ಲಿ ಸೇರಿಸಿಬಿಟ್ಟರು. ಈ ಒಂದು ಪದ ನಂತರದ ದಿನಗಳಲ್ಲಿ ಇಲ್ಲ ಸಲ್ಲದ ರಾಜಕೀಯ ಓಲೈಕೆಗೆ ಕಾರಣವಾಯಿತು, ಮುಸ ಲ್ಮಾನರನ್ನು ಓಲೈಸಲು ಸಂವಿಧಾನ ವಿರೋಧಿ ಧೋರಣೆಗಳನ್ನು ಕಾಂಗ್ರೆಸ್ ತೋರುತ್ತಲೇ ಬಂತು.
ಪ್ರಾದೇಶಿಕ ಪಕ್ಷಗಳು ತಮ್ಮ ರಾಜ್ಯಗಳಲ್ಲಿ ತಮ್ಮ ನೆಲೆಯನ್ನು ಉಳಿಸಿಕೊಳ್ಳಲು ಮುಸ್ಲಿಂ ಮೀಸಲಾತಿಯನ್ನು ಮುನ್ನೆಲೆಗೆ ತರುತ್ತಲೇ ಇವೆ. ತಮಿಳು ನಾಡು ಸರ್ಕಾರ ಮುಸಲ್ಮಾನರಿಗೆ ಶೇ. ೩.೫ ರಷ್ಟು ಮೀಸಲಾತಿ ನೀಡಿದೆ. ಆಂಧ್ರ ಪ್ರದೇಶ ಸರ್ಕಾರ ರಾಜಶೇಖರ್ ರೆಡ್ಡಿ ಕಾಲದಿಂದಲೂ ಮುಸಲ್ಮಾ
ನರಿಗೆ ಮೀಸಲಾತಿ ನೀಡುವ ನಿಟ್ಟಿನಲ್ಲಿ ಪ್ರಯತ್ನ ಪಡುತ್ತಲೇ ಇದೆ. ೨೦೦೪ ರಲ್ಲಿ ಮುಸಲ್ಮಾನರಿಗೆ ಶೇ. ೪ ರಷ್ಟು ಮೀಸಲಾತಿ ನೀಡುವ ಮೂಲಕ ಕಾನೂನು ಚರ್ಚೆಗೆ ಅವಕಾಶ ಮಾಡಿಕೊಟ್ಟಿತ್ತು.
೨೦೧೨ ರಲ್ಲಿ ಆಂಧ್ರ ಪ್ರದೇಶದ ಉಚ್ಚ ನ್ಯಾಯಾಲಯ ಸರ್ಕಾರದ ಮೀಸಲಾತಿಯನ್ನು ರದ್ದು ಮಾಡಿತ್ತು. ೨೦೧೧ ರಲ್ಲಿ ಕೇಂದ್ರದಲ್ಲಿದ್ದ ಕಾಂಗ್ರೆಸ್ ನೇತೃತ್ವದ ಸರ್ಕಾರ ಹಿಂದುಳಿದ ವರ್ಗದವರ ಶೇ. ೨೭ ರಷ್ಟು ಮೀಸಲಾತಿಯನ್ನು ತೆಗೆದು ಮುಸಲ್ಮಾನರಿಗೆ ಶೇ.೪.೫ ರಷ್ಟು ನೀಡುವುವೆಂದು ಘೋಷಿ ಸಿತ್ತು. ಆ ಸಮಯದಲ್ಲಿ ಐದು ರಾಜ್ಯಗಳ ಚುನಾವಣೆ ಇದ್ದುದ್ದರಿಂದ ಚುನಾವಣಾ ಆಯೋಗ ಈ ಘೋಷಣೆಯನ್ನು ನೀತಿ ಸಂಹಿತೆಯ ವಿರುದ್ಧ ವೆಂದು ಹೇಳಿ ರದ್ದು ಮಾಡಿತ್ತು. ಇದೇ ಸಮಯದಲ್ಲಿ ಮುಸಲ್ಮಾನರ ಆರ್ಥಿಕ, ಸಾಮಾಜಿಕ ವ್ಯವಸ್ಥೆಯನ್ನು ಅಧ್ಯಯನ ನಡೆಸಲು ಸ್ಥಾಪಿಸಿದ್ದ ಸಾಚಾರ್ ಆಯೋಗದ ಮುಖ್ಯಸ್ಥರಾಗಿದ್ದಂತಹ ಜಸ್ಟಿಸ್ ಸಾಚಾರ್ ಬಹಿರಂಗವಾಗಿ ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡು, ಚುನಾವಣೆ ಗೆಲ್ಲಲು ಕಾಂಗ್ರೆಸ್ ಪಕ್ಷ ಮುಸ್ಲಿಂ ಮೀಸಲಾತಿಯೆಂಬ ಗಿಮಿಕ್ ಮಾಡಿದೆಯೆಂದು ಹೇಳಿದ್ದರು.
ಸಾಚಾರ್ ಆಯೋಗದ ವರದಿ ೨೦೦೬ ರಲ್ಲಿ ಹೊರಬಿದ್ದಿತ್ತು. ಅಂದಿನ ಕಾಲಘಟ್ಟದಲ್ಲಿ ಮುಸಲ್ಮಾನ್ ಸಮುದಾಯದಲ್ಲಿದ್ದಂತಹ ಸಮಸ್ಯೆಗಳನ್ನು ಈ ವರದಿ ಬಹಿರಂಗಪಡಿಸಿತ್ತು. ಆದರೆ ಪ್ರಸ್ತುತ ೨೦೨೩ ರಲ್ಲಿ ಮುಸಲ್ಮಾನರ ಪರಿಸ್ಥಿತಿ ಬದಲಾಗಿದೆ. ಮುಸಲ್ಮಾನರು ಸಮಾಜದ ಪ್ರತಿಯೊಂದು ವ್ಯವಹಾರ ದಲ್ಲಿಯೂ ತಮ್ಮ ಪಾಲು ಹೊಂದಿದ್ದಾರೆ. ಶೈಕ್ಷಣಿಕವಾಗಿ ಮುಸಲ್ಮಾನರಿಗೆ ಹಲವು ಅವಕಾಶಗಳನ್ನು ಸರ್ಕಾರಗಳು ಒದಗಿಸಿವೆ. ರಾಜ್ಯ ಹಾಗೂ ಕೇಂದ್ರ ಸರ್ಕಾರದ ಯೋಜನೆಗಳ ದೊಡ್ಡ ಫಲಾನುಭವಿಗಳು ಮುಸಲ್ಮಾನರೆಂಬುದು ಬಹಿರಂಗವಾಗಿ ತಿಳಿದಿರುವ ವಿಷಯ, ಉತ್ತರ ಪ್ರದೇಶದಂತಹ ರಾಜ್ಯದಲ್ಲಿ ಮುಸ್ಲಿಂ ಹೆಣ್ಣುಮಕ್ಕಳ ಶಿಕ್ಷಣದಲ್ಲಿ ಆಮೂಲಾಗ್ರ ಬದಲಾವಣೆಗಳಾಗಿವೆ.
ಕರ್ನಾಟಕದ ವಿಷಯಕ್ಕೆ ಬರುವುದಾದರೆ ಮುಸಲ್ಮಾನರನ್ನು ಓಲೈಸಲು ದೇವೇಗೌಡರು ೧೯೯೪ ರಲ್ಲಿ ಮುಸ್ಲಿಂ ಮೀಸಲಾತಿಯನ್ನು ಜಾರಿಗೆ ತಂದರು. ವೀರಪ್ಪ ಮೊಯ್ಲಿಯವರು ಅಧಿಕೃತ ಮುದ್ರೆ ಒತ್ತಿದ್ದರೂ ಸಹ ದೇವೇಗೌಡರ ಆಶೀರ್ವಾದದಿಂದ ಮುಸಲ್ಮಾನರಿಗೆ ಪ್ರವರ್ಗ ೨(ಬಿ) ಅಡಿಯಲ್ಲಿ ಶೇ.೪ ರಷ್ಟು ಮೀಸಲಾತಿ ಸಿಕ್ಕಿತ್ತು. ಧರ್ಮಾಧಾರಿತ ಮೀಸಲಾತಿ ಸಂವಿಧಾನದ ವಿರುದ್ಧವಾಗಿದ್ದರೂ ಸಹ ಇಷ್ಟು ವರ್ಷಗಳ ಕಾಲ ನಡೆದುಕೊಂಡು ಬರುತ್ತಿತ್ತು. ಆದರೆ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರ ಸಂವಿಧಾನದ ಆಶಯಗಳ ಪರವಾಗಿ ತಿದ್ದುಪಡಿ ಮಾಡಿದೆ.
ಮುಸಲ್ಮಾನರನ್ನು ಆರ್ಥಿಕವಾಗಿ ಹಿಂದುಳಿದ ವರ್ಗಗಳ ಶೇ. ೧೦ ರಷ್ಟು ಮೀಸಲಾತಿಯೊಳಗೆ ಸೇರಿಸಿದೆ. ಲಿಂಗಾಯಿತ ಸಮುದಾಯದ ಬಹುದಿನದ ಬೇಡಿಕೆಯಾಗಿದ್ದಂತಹ ಮೀಸಲಾತಿ ಯನ್ನು ಶೇ.೨ ರಷ್ಟು ಏರಿಕೆ ಮಾಡಿದೆ. ಒಕ್ಕಲಿಗರ ಮೀಸಲಾತಿಯನ್ನು ಶೇ. ೨ ರಷ್ಟು ಏರಿಕೆ ಮಾಡಿದೆ. ರಾಜ್ಯ ಸರ್ಕಾರದ ಈ ನಿರ್ಧಾರದಿಂದ ತಮ್ಮ ಮತಬ್ಯಾಂಕಿಗೆ ಪೆಟ್ಟು ಬೀಳುತ್ತ ದೆಯೆಂಬ ಭಯದಿಂದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷ ದಿನಕ್ಕೊಂದು ಹೇಳಿಕೆಗಳನ್ನು ನೀಡುತ್ತಿವೆ.
ಕರ್ನಾಟಕದಲ್ಲಿ ಲಿಂಗಾಯಿತರಿಗೆ ಸತತವಾಗಿ ಅವಮಾನ ಮಾಡುತ್ತಿರುವ ಕಾಂಗ್ರೆಸ್ ತಾನು ಅಽಕಾರಕ್ಕೆ ಬಂದರೆ ಮುಸಲ್ಮಾನರಿಗೆ ಪುನಃ ಮೀಸಲಾತಿ ನೀಡುತ್ತೇವೆಂದು ಹೇಳುತ್ತಿದೆ. ಅದೇ ಮಾತನ್ನು ಕುಮಾರಸ್ವಾಮಿಯವರೂ ಹೇಳುತ್ತಿದ್ದಾರೆ. ಒಕ್ಕಲಿಗರನ್ನು ಗುತ್ತಿಗೆಗೆ ತೆಗೆದುಕೊಂಡವರಂತೆ ಮಾತನಾ ಡುವ ಜೆಡಿಎಸ್ ಪಕ್ಷ, ಒಕ್ಕಲಿಗರಿಗೆ ನೀಡಿರುವ ಮೀಸಲಾತಿಯನ್ನು ತೆಗೆದು ಮುಸಲ್ಮಾನರಿಗೆ ನೀಡುವಂತೆ ಮಾತನಾಡುತ್ತಿದೆ. ಕಾಂಗ್ರೆಸ್ ಪಕ್ಷ ಲಿಂಗಾಯಿತ ನಾಯಕರಾದ ನಿಜಲಿಂಗಪ್ಪನವರನ್ನು ಮುಗಿಸಿತ್ತು.
ರಾಜೀವ್ ಗಾಂಧಿ ಕಾಲದಲ್ಲಿ ವೀರೇಂದ್ರ ಪಾಟೀಲರನ್ನು ಅಧಿಕಾರದಿಂದ ಕೆಳಗಿಳಿಸಿ ಇಡೀ ಸಮುದಾಯಕ್ಕೆ ಮೋಸ ಮಾಡಿತ್ತು. ಸಿದ್ದರಾಮಯ್ಯನವರಿಗೆ ಒಕ್ಕಲಿಗರು ಮತ್ತು ಲಿಂಗಾಯಿತರೆಂದರೆ ಅಲರ್ಜಿ. ೨೦೧೮ ರ ಚುನಾವಣೆಯಲ್ಲಿ ದೇವೇಗೌಡರನ್ನು ಬಾಯಿಗೆ ಬಂದಂತೆ ಬೈದಿದ್ದನ್ನು ಹಳೇ ಮೈಸೂರು ಜನ ಕೇಳಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಿ ದ್ದರು. ತನ್ನನ್ನು ತಾನು ಅಹಿಂದ ನಾಯಕನೆಂದು ಹೇಳುವ ಸಿದ್ದರಾಮಯ್ಯನವರು, ಮುಖ್ಯಮಂತ್ರಿ ರೇಸ್‌ನಲ್ಲಿದ್ದಂತಹ ದಲಿತ ನಾಯಕ ಜಿ. ಪರಮೇಶ್ವರ್ ಕಷ್ಟ ಪಟ್ಟು ಕಟ್ಟಿದ್ದ ಕಾಂಗ್ರೆಸ್ ಎಂಬ ಹುತ್ತದಲ್ಲಿ ನಾಗರಹಾವಿನಂತೆ ಬಂದು ಸೇರಿ, ಕೊರಟಗೆರೆ
ಚುನಾವಣೆಯಲ್ಲಿ ಸೋಲಿಸಿ ಅವರ ರಾಜಕೀಯ ಜೀವನಕ್ಕೆ ದೊಡ್ಡ ಪೆಟ್ಟು ನೀಡಿದರು.
ನಿಶ್ಯಬ್ದವಾಗಿ ಮತ್ತೊಬ್ಬ ದಲಿತ ನಾಯಕ ಮಲ್ಲಿಕಾರ್ಜುನ ಖರ್ಗೆಯವರನ್ನು ದೆಹಲಿಗೆ ಕಳುಹಿಸಿ ಕರ್ನಾಟಕದಲ್ಲಿ ತಮ್ಮ ನೆಲೆಯನ್ನು ಭದ್ರ ಮಾಡಿ ಕೊಂಡರು. ಅತ ಡಿ.ಕೆ. ಶಿವಕುಮಾರ್ ತುಮಕೂರಿನಲ್ಲಿ ದೇವೇಗೌಡರ ಜೊತೆ ಕೈಜೋಡಿಸಿ ಒಕ್ಕಲಿಗ ನಾಯಕ ಮುದ್ದಹನುಮೇಗೌಡರ ರಾಜಕೀಯ ಜೀವನವನ್ನು ಅಂತ್ಯ ಮಾಡಿದರು. ತಮ್ಮೊಳಗಿರುವ ಲಿಂಗಾಯಿತ, ಒಕ್ಕಲಿಗ, ದಲಿತ ನಾಯಕರ ರಾಜಕೀಯ ಜೀವನವನ್ನು ಮುಗಿಸಿರುವ ಕಾಂಗ್ರೆಸ್ ಸಾಮಾಜಿಕವಾಗಿ ಈ ಮೂರು ಸಮುದಾಯಕ್ಕೆ ಮೀಸಲಾತಿಯಲ್ಲಿ ನ್ಯಾಯ ಕೊಡಲು ಸಾಧ್ಯವಿಲ್ಲ.
ಸಂವಿಧಾನದ ಆಶಯಗಳ ವಿರುದ್ಧ ನಡೆದ ಹಲವು ಘಟನೆಗಳ ಪರವಾಗಿ ನಿಲ್ಲುವವರು ಸಂವಿಧಾನವನ್ನೇ ತಮ್ಮ ಗುರಾಣಿಯನ್ನಾಗಿಸಿಕೊಂಡು ಮಾತನಾಡುತ್ತಾರೆ. ಬುರ್ಖಾ ಹಾಕುವುದನ್ನು ಬಾಬಾಸಾಹೇಬರು ವಿರೋಧಿಸಿದ್ದ ವಿಷಯ ತಿಳಿದಿದ್ದರೂ ಸಹ ಹಿಜಾಬ್ ಹೋರಾಟದ ಸಂದರ್ಭದಲ್ಲಿ
ಸಂವಿಧಾನವನ್ನೇ ತಮ್ಮ ಗುರಾಣಿಯನ್ನಾಗಿಸಿಕೊಂಡು ಲೊಡ್ಡೆಗಳು ಹಿಜಾಬ್ ಪರ ಹೋರಾಟಗಾರರ ಪರವಾಗಿ ನಿಂತಿದ್ದರು. ಮುಸ್ಲಿಂ ಮೀಸಲಾತಿ ವಿಷಯದಲ್ಲಿಯೂ ಅದೇ ಮಾದರಿಯಲ್ಲಿ ಚರ್ಚೆಗಳು ನಡೆಯುತ್ತಿವೆ. ಧರ್ಮಾಧಾರಿತ ಮೀಸಲಾತಿ ಸಂವಿಧಾನಕ್ಕೆ ವಿರುದ್ದವಾದದ್ದೆಂದು ತಿಳಿದಿದ್ದರೂ ಸಹ ಮತ್ತದೇ ಸಂವಿಧಾನವನ್ನು ಮುನ್ನೆಲೆಗೆ ತಂದು ಚರ್ಚಿಸುವ ಪ್ರಯತ್ನಗಳು ನಡೆಯುತ್ತಿವೆ.
ಬಹುತೇಕ ಮುಸಲ್ಮಾನರರನ್ನು ಧರ್ಮ ಅಥವಾ ಸಂವಿಧಾನದ ನಡುವಣ ಪ್ರಥಮ ಆಯ್ಕೆಯನ್ನು ಕೇಳಿದರೆ, ಧರ್ಮವನ್ನೇ ಮೊದಲು ಆಯ್ಕೆ ಮಾಡು ಕೊಳ್ಳುತ್ತಾರೆ ಹೊರತು ಸಂವಿಧಾನವನ್ನಲ್ಲ. ಇಂತಹ ಮಂದಿ ಸಂವಿಧಾನದಲ್ಲಿನ ಮೀಸಲಾತಿಯ ಬಗ್ಗೆ ಮಾತನಾಡುವುದು ತಮ್ಮ ಅನುಕೂಲಕ್ಕೆ ತಕ್ಕಂತೆ
ಸಂವಿಧಾನವನ್ನು ಬಳಸಿಕೊಳ್ಳುವ ಇಬ್ಬಗೆಯ ನೀತಿಯನ್ನು ತೋರಿಸುತ್ತಿದೆ. ನ್ಯಾಯಾಲಯ ನೀಡುವ ತೀರ್ಪುಗಳನ್ನು ಗೌರವಿಸದೆ ತಮ್ಮ ಧರ್ಮವೇ ಅಂತಿಮವೆಂದು ಹೇಳುವ ಹಲವು ಮುಸ್ಲಿಂ ನಾಯಕರಿದ್ದಾರೆ, ಭಾರತದ ಶಾಸಕಾಂಗ ವ್ಯವಸ್ಥೆ, ಕಾರ್ಯಾಂಗ ವ್ಯವಸ್ಥೆ ಮತ್ತು ನ್ಯಾಯಾಂಗ ವ್ಯವಸ್ಥೆಯ ಮೇಲೆ ನಂಬಿಕೆಯಿಡದ ನಾಯಕರು ತಮ್ಮ ಅನುಕೂಲಕ್ಕೆ ತಕ್ಕಂತೆ ಸಂವಿಧಾನವನ್ನು ಬಳಸಿಕೊಳ್ಳುವುದು ದುರದೃಷ್ಟಕರ ಸಂಗತಿ.
ಪೌರತ್ವ ತಿದ್ದುಪಡಿ ಕಾಯ್ದೆ ಸಂದರ್ಭದಲ್ಲಿ ನಡೆದ ಹೋರಾಟದಲ್ಲಿ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ಹಿಂದುಗಳಿಗೆ ಪೌರತ್ವ ನೀಡುವುದನ್ನು
ವಿರೋಧಿಸಿದವರು ಮುಸ್ಲಿಂ ಮೀಸಲಾತಿಯ ಪರವಾಗಿ ನಿಲ್ಲುತ್ತಿರುವುದು ವಿರೋಧಿಗಳ ಮತ್ತೊಂದು ಇಬ್ಬಗೆಯ ನೀತಿಯ ಅನಾವರಣ.
Read E-Paper click here