Saturday, 23rd November 2024

ದಿಲ್ಲಿಯ ಗ್ಯಾಂಗ್‌ಸ್ಟರ್ ದೀಪಕ್ ಬಾಕ್ಸರ್‌ ಮೆಕ್ಸಿಕೋದಲ್ಲಿ ಸೆರೆ

ನವದೆಹಲಿ: ದಿಲ್ಲಿಯ ಗ್ಯಾಂಗ್‌ಸ್ಟರ್, ಮೋಸ್ಟ್ ವಾಂಟೆಡ್ ಕ್ರಿಮಿನಲ್ ದೀಪಕ್ ಬಾಕ್ಸರ್‌ನನ್ನು ಮೆಕ್ಸಿಕೋದಲ್ಲಿ ಸೆರೆ ಹಿಡಿಯಲಾಗಿದೆ.

ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ನೆರವಿನೊಂದಿಗೆ ದಿಲ್ಲಿಯ ವಿಶೇಷ ಪೊಲೀಸ್ ತಂಡವು ಮೆಕ್ಸಿಕೋದಲ್ಲಿ ಕಾರ್ಯಾಚರಣೆ ನಡೆಸಿ, ಗ್ಯಾಂಗ್‌ಸ್ಟರ್ ದೀಪಕ್ ಬಾಕ್ಸರ್‌ನನ್ನು ಬಂಧಿಸಿದೆ.

ಒಂದೆರಡು ದಿನಗಳಲ್ಲಿ ಬಂಧಿತ ಗ್ಯಾಂಗ್‌ಸ್ಟರ್ ಬಾಕ್ಸರ್‌ನನ್ನು ಭಾರತಕ್ಕೆ ಕರೆ ತರಲಾಗುವುದು. ದಿಲ್ಲಿ-ಎನ್‌ಸಿಆರ್‌ನ ಮೋಸ್ಟ್ ವಾಂಟೆಡ್ ಗ್ಯಾಂಗ್‌ ಸ್ಟರ್‌ಗಳ ಪೈಕಿ ದೀಪಕ್ ಕೂಡ ಒಬ್ಬನಾಗಿದ್ದಾನೆ. ನಕಲಿ ಪಾಸ್‌ಪೋರ್ಟ್ ಬಳಸಿ ಕೊಂಡು ಆತ ದೇಶದಿಂದ ಪಲಾಯನ ಮಾಡಿದ್ದ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದೇ ಮೊದಲ ಬಾರಿಗೆ ದಿಲ್ಲಿ ಪೊಲೀಸರು ಭಾರತದ ದೇಶದಿಂದ ಆಚೆಗೆ ಗ್ಯಾಂಗ್‌ಸ್ಟರ್‌ನನ್ನು ಅರೆಸ್ಟ್ ಮಾಡಿದ್ದಾರೆ.

2022ರ ಆಗಸ್ಟ್ ತಿಂಗಳಿನಿಂದ ದೀಪಕ್ ದೇಶವನ್ನು ತೊರೆದಿದ್ದಾನೆ. ಬಿಲ್ಡರ್ ಅಮಿತ್ ಗುಪ್ತಾ ಎಂಬುವವರನ್ನು ಈತ ಕೊಲೆ ಮಾಡಿದ್ದಾರೆ. ದಿಲ್ಲಿಯ ಸಿವಿಲ್‌ ಲೈನ್ಸ್‌ ಪ್ರದೇಶದಲ್ಲಿ ಬಿಲ್ಡರ್ ಗುಪ್ತಾನಿಗೆ ಅನೇಕ ಬಾರಿ ಗುಂಡು ಹಾರಿಸಿ ಕೊಲೆ ಮಾಡಿದ್ದ.

ಬಳಿಕ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದ ದೀಪಕ್, ಅಮಿತ್ ಗುಪ್ತಾನನ್ನು ನಾನೇ ಕೊಲೆ ಮಾಡಿದ್ದು, ಈ ಕೊಲೆಗೆ ಹಣ ವಸೂಲಿ ಕಾರಣವಲ್ಲ. ಬದಲಿಗೆ ದ್ವೇಷ ಸಾಧನೆ ಎಂದು ಹೇಳಿಕೊಂಡಿದ್ದ.

ಮೆಕ್ಸಿಕೋದಲ್ಲಿ ಬಂಧಿತನಾಗಿರುವ ಗ್ಯಾಂಗ್‌ಸ್ಟರ್ ದೀಪಕ್ ಬಾಕ್ಸರ್, ಗೋಗಿ ಎಂಬ ಗ್ಯಾಂಗ್‌ನ ಲೀಡರ್ ಆಗಿದ್ದ. 2021ರಲ್ಲಿ ಜೀತೇಂದ್ರ ಗೋಗಿ ಕೊಲೆ ಯಾದ ಬಳಿಕ, ಆತನ ಸ್ಥಾನವನ್ನು ಆಕ್ರಮಿಸಿಕೊಂಡಿದ್ದ. ಟಿಲ್ಲು ಗ್ಯಾಂಗ್‌ನ ಗ್ಯಾಂಗ್‌ಸ್ಟರ್‌ಗಳು ಜೀತೇಂದ್ರ ಗೋಗಿಯನ್ನು ಹೊಡೆದುರುಳಿಸಿದ್ದರು.

ನ್ಯಾಯವಾದಿಯ ವೇಷದಲ್ಲಿ ನ್ಯಾಯಾಲಯವನ್ನು ಪ್ರವೇಶಿಸುವಾಗ ಈ ಗ್ಯಾಂಗ್‌ಸ್ಟರ್‌ಗಳು ಗೋಗಿಯನ್ನು ಕೊಂದು ಹಾಕಿದ್ದರು.

ದೀಪಕ್ ಬಾಕ್ಸರ್ ಜನವರಿ 29 ರಂದು ಕೋಲ್ಕೊತಾದಿಂದ ರವಿ ಆಂಟಿಲ್ ಎಂಬ ಹೆಸರಿನಿಂದ ಮೆಕ್ಸಿಕೋಗೆ ವಿಮಾನ ಮೂಲಕ ಪ್ರಯಾಣ ಮಾಡಿದ್ದ.