ಸಂಗತ
ವಿಜಯ್ ದರಡ
ರಾಜಕೀಯಸ್ಥರ ಗರ್ಭದಿಂದ ಹುಟ್ಟಿದ ಪಾಪದ ಕೂಸು ಈ ಭ್ರಷ್ಟಾಚಾರ. ಚುನಾವಣೆಗಳು ದುಬಾರಿಯಾದಾಗ ಕಳ್ಳಹಾದಿಯಲ್ಲಿ ದುಡ್ಡು ಗುಡ್ಡೆಹಾಕುವ ಪ್ರಕ್ರಿಯೆ ಶುರುವಾಯಿತು. ಅಧಿಕಾರಶಾಹಿಗೆ ಹಣ ಮಾಡುವುದಕ್ಕೆ ರಾಜಕೀಯಸ್ಥರು ದಾರಿ ಮಾಡಿಕೊಟ್ಟರು.
ಇತ್ತೀಚೆಗೆ ಹೊರಬಂದ ಕೇಂದ್ರ ಸರಕಾರದ ನಿರ್ದೇಶನವೊಂದು ಆಡಳಿತಾತ್ಮಕ ವಲಯಗಳಲ್ಲಿ ಚರ್ಚೆಯ ವಿಷಯವಾಗಿತ್ತು. ಜನಸಾಮಾನ್ಯ ಇಂಥ ನಿರ್ದೇಶನಗಳನ್ನು ಗಮನಿಸುತ್ತಲೇ ಇರುತ್ತಾನೆ ಮತ್ತು ಅಂಥ ನಿರ್ದೇಶನಗಳಿಂದ ವಿಶೇಷ ಪರಿಣಾಮ ವೇನಾದರೂ ಉಂಟಾದೀತೇ ಎಂಬ ಕುತೂಹಲವೂ ಆತನಲ್ಲಿರುತ್ತದೆ. ಆ ನಿರ್ದೇಶನದ ಪ್ರಕಾರ ಒಬ್ಬ ಐಎಎಸ್, ಐಪಿಎಸ್ ಅಥವಾ ಐಎಫ್ಎಸ್ ಅಧಿಕಾರಿ ತನ್ನ ಆರು ತಿಂಗಳ ಒಟ್ಟು ಸಂಬಳಕ್ಕಿಂತ ಹೆಚ್ಚು ಮೊತ್ತವನ್ನು ಒಂದು ವರುಷದಲ್ಲಿ ಸ್ಟಾಕ್ ಮಾರ್ಕೆಟ್ ನಲ್ಲಿ ಹೂಡಿದ್ದರೆ ಆ ಬಗ್ಗೆ ಸರಕಾರಕ್ಕೆ ತಿಳಿಸಬೇಕು ಆಲ್ ಇಂಡಿಯಾ ಸರ್ವಿಸ್ ಕಾಂಡಕ್ಟ್ ರೂಪ್ಸ್ ೧೯೬೮ರ ನಿಯಮ ೧೬(೧೪) ರ ಅಡಿಯಲ್ಲಿ ವಿದಿತ ವಾಗಿರುವಂತೆ ಅಂತಹ ಅಧಿಕಾರಿಗಳು ಶೇರು, ಡಿಬೆಂಚರ‍್ಸ್ ಮತ್ತು ಇತರೆ
ಸೆಕ್ಯುರಿಟಿ ಗಳಲ್ಲಿ ತಮ್ಮ ಎರಡು ತಿಂಗಳ ಸಂಬಳದ ಮೊತ್ತಕ್ಕಿಂತ ಹೆಚ್ಚಿನದ್ದನ್ನು ಹೂಡಿಕೆ ಮಾಡಿದರೆ, ಒಂದು ತಿಂಗಳ ಒಳಗಾಗಿ ಸರಕಾರಕ್ಕೆ ತಿಳಿಸಬೇಕು.
ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ ಈ ಅಧಿಕಾರಶಾಹಿ ಸ್ಥಾನಗಳಲ್ಲಿ ರುವ ವ್ಯಕ್ತಿಗಳಿಂದ ಇಂಥ ಮಾಹಿತಿಯನ್ನು ಸರಕಾರವು ಕಾಲಕಾಲಕ್ಕೆ ಪಡೆಯುತ್ತಿದ್ದೆಯೇ? ಎಲ್ಲರೂ ಪ್ರಾಮಾಣಿಕವಾಗಿ ವಿವರಗಳನ್ನು ಒದಗಿಸುವುದೇ ಆಗಿದ್ದರೆ ಇಂಥದೊಂದು ನಿಯಮದ ಅಗತ್ಯವೇ ಇರುತ್ತಿರಲಿಲ್ಲ. ತನಿಖೆಯೊಂದರ ನಂತರದಲ್ಲಿ ಪಾರ್ಲಿಮೆಂಟಿನ ಸ್ಥಾಯೀ ಸಮಿತಿಯ ಗಮನಕ್ಕೆ ಬಂದ ಅಂಶವೆಂದರೆ ಕಳೆದ ೧೧ ವರ್ಷಗಳಿಂದ ೧೪೦೦ ಮಂದಿ ಐಎಎಸ್ ಅಧಿಕಾರಿಗಳು ತಮ್ಮ ಆಸ್ತಿ ಮತ್ತು ಆದಾಯದ ವಿವರಗಳನ್ನೇ ಸರಕಾರಕ್ಕೆ ಸಲ್ಲಿಕೆ ಮಾಡಿಲ್ಲ.
ಇಂಥ ಅನೇಕ ಕಾನೂನು ಕಟ್ಟಳೆಗಳಿದ್ದರೂ, ಹಿರಿಯ ಅಧಿಕಾರಿಗಳು ಅವಕ್ಕೆ ಕವಡೆ ಕಾಸಿನ ಕಿಮ್ಮತ್ತನ್ನೂ ಕೊಡುತ್ತಿಲ್ಲ.
ಅಧಿಕಾರಿಗಳ ಆಸ್ತಿ ಮತ್ತು ಆದಾಯಕ್ಕೆ ಸಂಬಂಧಪಟ್ಟ ಮಾಹಿತಿಯನ್ನು ಪಡೆಯುವ ನಿಯಮವನ್ನು ಸಂಸತ್ತಿನ ಸ್ಟಾಂಡಿಂಗ್ ಕಮಿಟಿ ಮಾಡಿದ್ದಾದರೂ ಏತಕ್ಕೆ? ಪ್ರಾಮಾಣಿಕತೆ ಮತ್ತು ನಿಷ್ಠೆಯಿಂದ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳ ಸಂಖ್ಯೆ ನಮ್ಮ ದೇಶದಲ್ಲಿ ದೊಡ್ಡದಿದೆ. ಎಲ್ಲೋ ಕೆಲವು ಅಪ್ರಾಮಾಣಿಕರ ಕಾರಣದಿಂದ ಎಲ್ಲರನ್ನೂ ಅನುಮಾನದಿಂದ ನೋಡುವಂತಾಗಿದೆ. ಈ ಅಪ್ರಾಮಾಣಿಕರು ವ್ಯವಸ್ಥೆ ಯನ್ನೇ ಬುಡಮೇಲು ಮಾಡುತ್ತಾರೆ.
ಉನ್ನತ ಸ್ತರದಲ್ಲಿಯೇ ಭ್ರಷ್ಟಾಚಾರ ಶುರುವಾಯಿತೆಂದರೆ ಅದು ಸರಪಣಿಯಂತೆ ತಳಮಟ್ಟದವರೆಗೂ ತಲುಪಿ ವ್ಯವಸ್ಥೆ ಯನ್ನೇ ಹಾಳು ಮಾಡುತ್ತದೆ. ಅಧಿಕಾರಿಗಳಲ್ಲಿ ಎಷ್ಟು ಮಂದಿ ಭ್ರಷ್ಟರಿದ್ದಾರೆಂಬುದನ್ನು ಹೇಳುವುದು ಕಷ್ಟದ ಕೆಲಸ. ಒಂದು ಅಂದಾಜಿನ ಪ್ರಕಾರ ಅಂಥವರ ಸಂಖ್ಯೆ ಕಡಿಮೆಯೇನಿಲ್ಲ. ಪ್ರತಿವರ್ಷ ೨೫ ರಿಂದ ೩೦ ಸಾವಿರ ಭ್ರಷ್ಟಾಚಾರದ ದೂರುಗಳು ಅಧಿಕಾರಿಗಳ
ವಿರುದ್ಧ ದಾಖಲಾಗುತ್ತವೆ. ತನಿಖಾ ಸಂಸ್ಥೆಗಳು ಇಂಥ ಅಧಿಕಾರಿಗಳ ಮನೆ ಮೇಲೆ ದಾಳಿ ಮಾಡಿದಾಗ ಬಂಡಲುಗಟ್ಟಲೆ ನಗದು ಹಣ, ಮಣಗಟ್ಟಲೆ ಚಿನ್ನಾಭರಣ ಸಿಗುತ್ತದೆ. ಆಗಲೇ ನೋಡಿ ಆಸ್ತಿ ಮತ್ತು ಆದಾಯದ ಬಗ್ಗೆ ಚರ್ಚೆಗಳು ಶುರುವಾಗು ವುದು.
ಪಂಜಾಬ್ ಇಲೆಕ್ಟ್ರಿಸಿಟಿ ಬೋರ್ಡಿನ ಚೀಫ್ ಇಂಜಿನಿಯರ್ ತ್ರಿಲೋಕಿನಾಥ್ ಅವರದ್ದೂ ಇಂಥದ್ದೇ ಒಂದು ಪ್ರಕರಣ. ಕೆಲವೇ ವರ್ಷಗಳ ಸೇವಾವಽಯ ನಂತರದಲ್ಲಿ, ಅವರ ಬಳಿ ೨.೭೫ ಕೋಟಿಯ ಆಸ್ತಿ ಇರುವುದು ಪತ್ತೆಯಾಯಿತು. ಅವರಿಗಿದ್ದ ಮಾಸಿಕ ಸಂಬಳ ರು. ೨೬,೦೦೦ ಮಾತ್ರ. ಸಂಬಳದ ಒಂದು ರುಪಾಯಿಯನ್ನೂ ಖರ್ಚು ಮಾಡದೇ ಉಳಿತಾಯ ಮಾಡಿದ್ದರೂ ಇಷ್ಟೊಂದು ದೊಡ್ಡ ಮೊತ್ತ ಗಳಿಸುವುದು ಅವರಿಗೆ ಸಾಧ್ಯವಿರಲಿಲ್ಲ.
ಇನ್ನೊಂದು ಉದಾಹರಣೆ ಗಮನಿಸಿ, ಮಧ್ಯಪ್ರದೇಶದ ಐಎಎಸ್ ಅಽಕಾರಿಗಳಾದ ಅರವಿಂದ ಜೋಷಿ ಮತ್ತು ಟಿನೂ ಜೋಷಿ
ಅವರ ಆದಾಯವನ್ನು ಮೀರಿದ ಆಸ್ತಿ ಗಳಿಸಿದ್ದಾರೆಂಬ ಆರೋಪ ಬಂತು. ಅವರುಗಳ ಮನೆಯಿಂದ ಮೂರು ಕೋಟಿಯಷ್ಟು ನಗದು ಹಣ ಜಮೆ ಮಾಡಲಾಯಿತು. ನಗದುಹಣ ಎಣಿಸಲು ಮೆಶೀನುಗಳನ್ನು ತರಿಸಲಾಯಿತು. ಇಂಥ ಹಿರಿಯ ಅಧಿಕಾರಿ ಗಳು ಈ ರೀತಿಯ ಅಕ್ರಮ ಗಳಿಕೆಗೆ ತಾವೇ ಸ್ವತಃ ಮುಂಗುತ್ತಾರೆಯೇ ಎಂಬುದು ಇಲ್ಲಿ ಉದ್ಭವಿಸುವ ಪ್ರಶ್ನೆ.
ಇಲ್ಲ, ಅಧಿಕಾರಶಾಹಿ ಮತ್ತು ರಾಜಕೀಯ ವ್ಯಕ್ತಿಗಳ ನಡುವಣ ನೈಚ್ಚಾನುಸಂಧಾನ ಇಲ್ಲಿ ಇದ್ದೇ ಇರುತ್ತದೆ. ಅನ್ಯಥಾ ಇದು
ಸಾಧ್ಯವೇ ಇಲ್ಲ. ನಾನು ಒಂದು ಉದಾಹರಣೆಯನ್ನು ಕೊಡುವೆ. 1996 ರಲ್ಲಿ ಉತ್ತರ ಪ್ರದೇಶದ ಐಎಎಸ್ ಅಸೋಸಿ ಯೇಶನ್ ಅಖಂಡ ಪ್ರತಾಪ್ ಸಿಂಗ್ ಎಂಬ ಅಧಿಕಾರಿಯನ್ನು ಹಿಡಿದರು. ಆತ ಅತ್ಯಂತ ಭ್ರಷ್ಟನಾಗಿದ್ದ. ಅವರ ವಿರುದ್ಧ ತನಿಖೆಗೂ ಆದೇಶ ವಾಯ್ತು. ಆದರೆ ಆಗಿನ ಮುಖ್ಯಮಂತ್ರಿ ಕಲ್ಯಾಣಸಿಂಗರ ಶಿಫಾರಸ್ಸಿನ ಮೇರೆಗೆ ಎಲ್ಲವೂ ಮುಚ್ಚಿಹೋಯಿತು. ಕೇಂದ್ರ ಸರಕಾರವು ಸಿಬಿಐ ತನಿಖೆಗೆ ಆದೇಶಿಸಿದಾಗಲೂ ಏನೂ ಆಗಲಿಲ್ಲ. ಮಾಯಾವತಿ ಅಧಿಕಾರಕ್ಕೆ ಬಂದ ನಂತರದಲ್ಲಿ ಆ ಅಽಕಾರಿಯ ವಿರುದ್ಧ ಇದ್ದ ವಿಜಿಲೆನ್ಸ್ ಪ್ರಕರಣಗಳನ್ನೂ ಕೈಬಿಡಲಾಯಿತು.
ನಂತರ ಮುಲಾಯಂ ಸಿಂಗ್ ಯಾದವ್ ಮುಖ್ಯಮಂತ್ರಿಯಾದ ನಂತರದಲ್ಲಿ ಅಖಂಡ ಪ್ರತಾಪ್ ಸಿಂಗ್ ಮತ್ತೆ ಮುನ್ನೆಲೆಗೆ
ಬಂದರು, ಅವರ ಪಾಲಿಗದು ಸುವರ್ಣಕಾಲ. ಅವರಿಗೆ ಸೇವಾವಧಿ ವಿಸ್ತರಣೆಯನ್ನು ಕೊಟ್ಟು ಚೀಫ್ ಸೆಕ್ರೆಟರಿ ಹುದ್ದೆಗೆ ತರಲಾಯಿತು. ಬೇರೆ ಬೇರೆ ಪಕ್ಷಗಳ ಮುಖ್ಯಮಂತ್ರಿಗಳು ಒಬ್ಬ ಭ್ರಷ್ಟ ಅಧಿಕಾರಿಯ ಬೆನ್ನಿಗೆ ನಿಂತು ರಕ್ಷಣೆ ಯಾಕೆ ಕೊಟ್ಟರು? ಇದು ಯಕ್ಷಪ್ರಶ್ನೆ. ಅದೇ ವರ್ಷ ಐಎಎಸ್ ಅಸೋಸಿಯೇಶನ್‌ನವರು ನೀರಾ ಯಾದವ್ ಎಂಬ ಅಧಿಕಾರಿಯನ್ನು ಅತ್ಯಂತ ಭ್ರಷ್ಟ ಅಧಿಕಾರಿ ಎಂದು ಗುರುತಿಸಿ ಕ್ರಮಕ್ಕೆ ಆಗ್ರಹಿಸಿದರು. ಆದರೆ ಏನೂ ಆಗಲಿಲ್ಲ. ಆಕೆಗೂ ಬಡ್ತಿ ಸಿಕ್ಕಿತು.
ಇಂಥ ಅನೇಕ ಉದಾಹರಣೆಗಳಿವೆ. ಭ್ರಷ್ಟ ಅಧಿಕಾರಿಗಳು ತಮಗಿರುವ ರಾಜಕೀಯ ಸಂಬಂಧಗಳ ಕಾರಣದಿಂದ ಶಿಕ್ಷೆಗೆ
ಒಳಗಾಗದೇ ಬಡ್ತಿ ಪಡೆಯುತ್ತಾರೆ. ಅಧಿಕಾರದಲ್ಲಿರುವ ರಾಜಕೀಯ ಪಕ್ಷದವರು ಇಂಥ ವ್ಯಕ್ತಿಗಳ: ವಿರುದ್ಧ ತನಿಖೆಗೆ
ಅನುಮತಿಯನ್ನೇ ಕೊಡುವುದಿಲ್ಲ. ಕಾನೂನನ್ನು ಗಾಳಿಗೆ ತೂರಿ ಮನಬಂದಂತೆ ನಡೆದುಕೊಳ್ಳುತ್ತಾರೆ. ಪಾರದರ್ಶಕತೆಯ ಕುರಿತಾದ ಅಂಕಿ ಅಂಶಗಳು ಹೇಳುವ ಪ್ರಕಾರ ಭಾರತದಲ್ಲಿ ಭ್ರಷ್ಟಾಚಾರ ಮಿತಿಮೀರಿದೆ.
ಹೇಳಬೇಕೆಂದರೆ ಭಾರತದಲ್ಲಿ ಭ್ರಷ್ಟಾಚಾರವೆಂಬುದು ಇರಲೇ ಇಲ್ಲ. ರಾಜಕೀಯಸ್ಥರ ಗರ್ಭದಿಂದ ಹುಟ್ಟಿದ ಪಾಪದ ಕೂಸು ಈ ಭ್ರಷ್ಟಾಚಾರ. ಚುನಾವಣೆಗಳು ದುಬಾರಿಯಾದಾಗ ಕಳ್ಳಹಾದಿಯಲ್ಲಿ ದುಡ್ಡು ಗುಡ್ಡೆಹಾಕುವ ಪ್ರಕ್ರಿಯೆ ಶುರುವಾಯಿತು. ಅಧಿಕಾರ ಶಾಹಿಗೆ ಹಣ ಮಾಡುವುದಕ್ಕೆ ರಾಜಕೀಯಸ್ಥರು ದಾರಿ ಮಾಡಿಕೊಟ್ಟರು. ಅದಕ್ಕೂ ಮುನ್ನ ಇಂಥ ಪ್ರಕರಣಗಳಲ್ಲಿ ರಾಜಕೀಯ ಸ್ಥರು ಮತ್ತು ಉದ್ಯಮಿಗಳು ಸಿಕ್ಕಿಬೀಳುವುದು ಸಾಮಾನ್ಯವಾಗಿತ್ತು. ಆದರೆ ಈಗ ನಿರಂತರವಾಗಿ ಭ್ರಷ್ಟ ಅಧಿಕಾರಿ ಗಳು ಸಿಕ್ಕಿಬೀಳುತ್ತಿದ್ದಾರೆ. ಭ್ರಷ್ಟತೆಯ ಹೆಜ್ಜೆ ಗುರುತಿಲ್ಲದ ಇಲಾಖೆಯೇ ಇಂದು ಇರಲಾರದು. ಆರೋಗ್ಯಕರ ಸಮಾಜಕ್ಕೆ ಮಾರಕ ವೆನಿಸಿರುವ ಸಂಗತಿಯಿದು.
ಪ್ರಧಾನಿ ನರೇಂದ್ರ ಮೋದಿಯವರು ದೇಷವನ್ನು ಭ್ರಷ್ಟಾಚಾರ ಮುಕ್ತ ಮಾಡಲು ಬಯಸಿದ್ದಾರೆ. ಇದು ಆಗಬೇಕೆಂದರೆ ಗಟ್ಟಿಯಾದ ಕಾನೂನುಗಳು ಜಾರಿಗೆ ಬರಬೇಕು. ರಾಜಕೀಯಸ್ಥರ ಮತ್ತು ಅಧಿಕಾರಿಗಳ ನಡುವಣ ನೈಚ್ಚಾನುಸಂಧಾನ ತೊಲಗಬೇಕು. ಅಮೆರಿಕಾ, ಯುನೈಟೆಡ್ ಕಿಂಗ್ಡಮ್, ಫ್ರಾನ್ಸ್ ಮತ್ತು ಜಪಾನಿನ ಜನಸಾಮಾನ್ಯರಿಗೆ ಭ್ರಷ್ಟಾಚಾರವೆಂದ ರೇನೆಂಬುದೇ ಗೊತ್ತಿಲ್ಲ. ಅದೇ ರೀತಿಯ ವ್ಯವಸ್ಥೆ ನಮ್ಮಲ್ಲೂ ಜಾರಿಗೆ ಬರಬೇಕು. ಸರಕಾರದ ಇತ್ತೀಚಿನ ನಿರ್ದೇಶನ ಸ್ವಾಗತಾರ್ಹವಾದುದು.
ಅಧಿಕಾರಿಗಳು ಪಾರದರ್ಶಕತೆಯಿಂದ ವರ್ತಿಸಿ ಜನರ ವಿಶ್ವಾಸವನ್ನು ಗಳಿಸಬೇಕು. ಅವರು ತಮ್ಮ ಸಂಪತ್ತಿನ ಚೀಲಗಳನ್ನು ಮುಚ್ಚಿಟ್ಟರೆ ಅವರಿಗೇ ಆಪತ್ತು.