Friday, 13th December 2024

ಅಧಿಕಾರಕ್ಕಿಂತ ಕಾರ‍್ಯಕರ್ತರ ವಿಶ್ವಾಸ ಮುಖ್ಯ

ರಾಜ್ಯ ವಿಧಾನಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಹೊರಬಿದ್ದಿದ್ದು, ೩೦-೩೫ ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸಲಾಗಿದೆ. ಈ ಸುದ್ದಿ ಹೊರಬೀಳುತ್ತಿದ್ದಂತೆ ಟಿಕೆಟ್ ವಂಚಿತರೆಲ್ಲರೂ ಪಕ್ಷದ ವಿರುದ್ಧವೇ ಸೆಟೆದು ನಿಂತಿದ್ದು, ಪಕ್ಷದ ತೀರ್ಮಾನವನ್ನು ಧಿಕ್ಕರಿಸಿ ಚುನಾವಣೆಗೆ ಸ್ಪರ್ಧಿಸಿಯೇ ಸ್ಪರ್ಧಿಸುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ.

ಹಾಗಾದರೆ ಇವರೆಲ್ಲರೂ ಒಂದೋ ಪ್ರತಿಪಕ್ಷದ ಸ್ಥಾನದಲ್ಲಿರುವ ಕಾಂಗ್ರೆಸ್ ಅಥವಾ ಜೆಡಿಎಸ್‌ಗೆ ಹೋಗಬೇಕು, ಇಲ್ಲವೇ ಪಕ್ಷೇತರರಾಗಿ ಸ್ಪರ್ಧಿಸಬೇಕು. ಇವೆರಡರಲ್ಲಿ ಯಾವುದೇ ನಿರ್ಧಾರ ತೆಗೆದುಕೊಂಡರೂ ಪೇಚಿಗೆ ಸಿಲುಕುವುದು ನಿಮ್ಮನ್ನೇ ನಂಬಿರುವ ಕಾರ್ಯ ಕರ್ತರು. ಇಷ್ಟು ದಿನ ನೀವು ಪ್ರತಿಪಕ್ಷಗಳನ್ನು ಪುಂಖಾನುಪುಂಕವಾಗಿ ಟೀಕಿಸಿದಾಗಲೆಲ್ಲ ನಿಮಗೆ ಬೆಂಬಲಕ್ಕೆ ನಿಂತ ಕಾರ್ಯಕರ್ತರು ನಾಳೆ ಬೆಳಗಾಗುವಷ್ಟರಲ್ಲೇ ಅದೇ ಪಕ್ಷದ ಕಾರ್ಯಕರ್ತರಾಗಿ ಕೆಲಸ ಮಾಡುವುದು ಎಂತಹವರಿಗೂ ಕಿರಿಕಿರಿ ಮಾಡದೇ ಇರುವುದಿಲ್ಲ. ರಾಜಕಾರಣಿಗಳಿಗೆ ಅಧಿಕಾರವೇ ಮುಖ್ಯ. ಆದರೆ ಕಾರ್ಯಕರ್ತರಿಗೆ ಹಾಗಲ್ಲ, ಯಾವುದೇ ಒಂದು ಪಕ್ಷದ ಸಿದ್ಧಾಂತ, ಬದ್ಧತೆಯನ್ನು ನಂಬಿ ಆ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸಿ ಕೊಂಡು ಬಂದಿರುತ್ತಾರೆ. ಇಷ್ಟು ದಿನ ಪಕ್ಷದ ಸಿದ್ಧಾಂತದೊಂದಿಗೆ ನಿಮ್ಮನ್ನು ತಳಕು ಹಾಕಿಕೊಂಡಿರುತ್ತಾರೆ.

ಆದರೆ ಒಂದೇ ದಿನದಲ್ಲಿ ನಿಮ್ಮ ವರಸೆ ಬದಲಾದರೆ ನಿಜವಾಗಲೂ ನೀವು ವಿಶ್ವಾಸ ಕಳೆದುಕೊಳ್ಳುವುದು ಕಾರ್ಯಕರ್ತರದ್ದು ಎಂಬುದನ್ನು ಅರಿಯಬೇಕು. ಸ್ವಂತ ಕ್ಷೇತ್ರದಲ್ಲೇ ಹತ್ತು ಸಾವಿರ ಜನರನ್ನು ಸೇರಿಸಲು ಸಾಧ್ಯವಿಲ್ಲದವರನ್ನು, ಚುನಾವಣೆಯಲ್ಲಿ ಸೋತವರನ್ನು ಮುಖ್ಯಮಂತ್ರಿ, ಉಪಮುಖ್ಯಮಂತ್ರಿಯಾಗಿ ಮಾಡಿದಾಗ, ನಿಮಗಿಂತ ನಿಮ್ಮ ಕ್ಷೇತ್ರದ ಜನರು ಖುಷಿ ಪಟ್ಟಿದ್ದರು. ಆದರೆ ಈಗ ಇದ್ದಕ್ಕಿದ್ದಂತೆ ಪಕ್ಷ ಬದಲಿಸಿದರೆ ಆ ಕ್ಷೇತ್ರದ ಜನರಿಗೆ ನಿಮ್ಮ ಮೇಲೆ ಯಾವ ಭಾವನೆ ಬರಬಹುದು ಎಂಬುದನ್ನು ಟಿಕೆಟ್ ವಂಚಿತ ಶಾಸಕರು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ರಾಜಕಾರಣದಲ್ಲಿ ಅಧಿಕಾರ ಯಾರಿಗೂ ಶಾಶ್ವತವಲ್ಲ.

ಅಧಿಕಾರದ ಏರಿಳಿತಗಳು ಸ್ವಾಭಾವಿಕ. ಆದರೆ ನಿಜವಾದ ರಾಜಕಾರಣಿಗೆ ಬೇಕಿರುವುದು ಪಕ್ಷ ನಿಷ್ಠೆ ಮತ್ತು ಕಾರ್ಯಕರ್ತರ ವಿಶ್ವಾಸ. ಆದರೆ ದುಡ್ಡು, ಹೆಂಡ, ಸೀರೆ ಹಂಚಿ ಚುನಾವಣೆಯಲ್ಲಿ ಗೆಲ್ಲಬಹುದು ಎಂಬುದನ್ನೇ ನಂಬಿರುವವರಿಗೆ ಪಕ್ಷನಿಷ್ಠೆ, ಕಾರ್ಯಕರ್ತರ ವಿಶ್ವಾಸ ಗಣನೆಗೆ ಬರುವುದಿಲ್ಲ. ಹೀಗಾಗಿ ಮತದಾರರೇ ಇದಕ್ಕೆಲ್ಲ ತಿಲಾಂಜಲಿ ಇಡಬೇಕು.