Saturday, 14th December 2024

ಕರೋನಾ ನಿರ್ವಹಣೆ: ಪಕ್ಷಗಳ ಪಾತ್ರ ಮಹತ್ವದ್ದು

ದೇಶದಾದ್ಯಂತ ಗುರುವಾರ ಒಂದೇ ದಿನ ಹೊಸದಾಗಿ ೧೦,೧೫೮ ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, ೧೯ ಮಂದಿ ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಟಣೆ ತಿಳಿಸಿದೆ.

ಸರಿಸುಮಾರು ಎಂಟು ತಿಂಗಳ ದಾಖಲಾದ ಗರಿಷ್ಠ ಪ್ರಕರಣ ಇದಾಗಿದೆ. ಈ ಸಂಖ್ಯೆ ಆತಂಕ ಹುಟ್ಟಿಸುವಂತ ಹದ್ದಲ್ಲ. ಆದರೆ, ಯಾವುದೇ ಅಪಾಯಕ್ಕೆ ಆಸ್ಪದ ಕೊಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕೆಂದು ಕರೋನಾದ ಹಿಂದಿನ ಅಲೆಗಳು ಕಲಿಸಿರುವ ಪಾಠವನ್ನು ಯಾರೂ ಸುಲಭವಾಗಿ ಮರೆಯುವಂತಿಲ್ಲ. ವಿಶ್ವದ ಹಲವು ದೇಶಗಳಲ್ಲಿ ಆರ್ಥಿಕ ಹಿಂಜರಿತದ ಭೀತಿ ಎದುರಾಗಿದೆ.

ಕರೋನಾದಿಂದ ಆರ್ಥಿಕ ಸಂಕಷ್ಟ ತೀವ್ರವಾಗದಂತೆ ಎಚ್ಚರಿಕೆ ವಹಿಸಬೇಕಾಗಿದೆ. ನಮ್ಮ ಎಣಿಕೆಗಳನ್ನೆಲ್ಲ ಬುಡಮೇಲು ಮಾಡುವಂತೆ ಕರೋನಾ ರೂಪಾಂತರ ತಳಿಗಳು ವರ್ತಿಸುವುದರಿಂದ, ಸಂಭಾವ್ಯ ಬಿಕ್ಕಟ್ಟನ್ನು ಎದುರಿಸಲು ಈಗಿನಿಂದಲೇ ಸಿದ್ಧತೆ ನಡೆಸುವುದು ಅನಿವಾರ್ಯ. ಇದೀಗರಾಜ್ಯದಲ್ಲಿ ಚುನಾವಣೆಯ ಅಬ್ಬರವಿರುವು ದರಿಂದ ರಾಜಕೀಯ ಸಭೆ- ಸಮಾವೇಶಗಳೂ ದೊಡ್ಡ ಸಂಖ್ಯೆಯಲ್ಲಿ ನಡೆಯುತ್ತವೆ. ಇದು ಸೋಂಕಿಗೆ ಆಹ್ವಾನ ಕೊಡುವ ಅಪಾಯ ಇರುತ್ತದೆ.

ಆದ್ದರಿಂದ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ರಾಜಕೀಯ ಸಮಾವೇಶಗಳನ್ನು ಹಮ್ಮಿಕೊಳ್ಳುವುದು ಜಾಣತನ. ಮಾ ಕಡ್ಡಾಯವಾಗಿ ಧರಿಸುವುದು ಹಾಗೂ ಸ್ವಚ್ಛತಾ ಕ್ರಮಗಳನ್ನು ಪಾಲಿಸುವುದು ಮತ್ತೆ ನಮ್ಮ ದೈನಂದಿನ ಜೀವನದ ಭಾಗವಾಗಬೇಕಾಗಿದೆ. ಕರೋನಾ ಮಾತ್ರವಲ್ಲ, ಸುಲಭವಾಗಿ ಹರಡುವ ನೆಗಡಿ, ಕೆಮ್ಮಿನಂತಹ ಸೋಂಕುಗಳನ್ನು ತಡೆಗಟ್ಟಲೂ ಮಾ ಬಳಕೆ ಅನುಕೂಲಕರ. ಹೊಸ ಕೋವಿಡ್ ಪ್ರಕರಣಗಳನ್ನು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಮೈಯೆಲ್ಲ ಕಣ್ಣಾಗಿ ನಿರ್ವಹಿಸಬೇಕಾಗಿದೆ. ಅಗತ್ಯ ಔಷಧಗಳ ಲಭ್ಯತೆಯನ್ನು ಖಾತರಿಪಡಿಸಿಕೊಳ್ಳುವುದರ ಜತೆಗೆ, ವೈದ್ಯಕೀಯ ಕ್ಷೇತ್ರದಲ್ಲಿ ಮೂಲಭೂತ ಸೌಕರ್ಯಗಳನ್ನು ಉತ್ತಮಪಡಿಸುವುದಕ್ಕೆ ಆದ್ಯತೆ ನೀಡಬೇಕು. ಜನಸಾಮಾನ್ಯರ ಬದುಕನ್ನು ಬುಡಮೇಲು ಮಾಡುವ ಮತ್ತೊಂದು ಲಾಕ್‌ಡೌನ್‌ಗೆ ಯಾವ ಅವಕಾಶವನ್ನೂ ಸರಕಾರ ಕಲ್ಪಿಸಬಾರದು. ಕರೋನಾ ನಿಯಂತ್ರಣದ ಹೋರಾಟದಲ್ಲಿ ರಾಜಕೀಯ ಪಕ್ಷಗಳು ಹಾಗೂ ಜನಪ್ರತಿನಿಧಿಗಳ ಪಾತ್ರ ಮಹತ್ವದ್ದು.

ರಾಜಕೀಯ ಸಮಾವೇಶಗಳನ್ನು ನಡೆಸುವಲ್ಲಿ ರಾಜಕೀಯ ಪಕ್ಷಗಳು ಹೊಣೆಗೇಡಿತನ ಪ್ರದರ್ಶಿಸಿರುವುದನ್ನು ಕರೊನಾದ ಹಿಂದಿನ ಅಲೆಗಳಲ್ಲಿ ನೋಡಿದ್ದೇವೆ. ಅವಿವೇಕದ ಮಾದರಿಗಳು ಮರುಕಳಿಸದಂತೆ ಎಚ್ಚರ ವಹಿಸುವುದು ಎಲ್ಲರ ಜವಾಬ್ದಾರಿ.