Friday, 13th December 2024

ನಾವು ಸ್ವತಃ ಆರೋಗ್ಯವಾಗಿದ್ದು, ಅಭಿವೃದ್ಧಿಗೆ ಕೊಡುಗೆ ನೀಡೋಣ

ಬೇಸಿಗೆ ಇನ್ನೇನು ಮುಗಿಯಲಿದೆ. ಆದರೆ ಬೇಸಿಗೆ ಅಂತ್ಯವಾಗುವುದಕ್ಕೂ ಮುನ್ನ ಭೀಕರ ಬಿಸಿಲ ಧಗೆ ಕರ್ನಾಟಕಕ್ಕೆ ಅಪ್ಪಳಿಸಿದೆ. ಬಿಸಿಲಿನ ಅಬ್ಬರ ಹೇಗಿದೆ ಎಂದರೆ ಜನರು ಅಕ್ಷರಶಃ ಬೆಂದು ಹೋಗುತ್ತಿದ್ದಾರೆ. ಈಗಿನ ಸ್ಥಿತಿ ನೋಡಿದರೆ, ಮುಂದಿನ ದಿನಗಳಲ್ಲಿ ಮತ್ತಷ್ಟು ಬಿಸಿಲು ಕಾಡುವುದು ಪಕ್ಕಾ.

ಅದರಲ್ಲೂ ಕಲಬುರಗಿಯಲ್ಲಿ ಗರಿಷ್ಠ ೪೧ ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಹವಾಮಾನ ಬದಲಾವಣೆ, ಜಾಗತಿಕ ತಾಪಮಾನ ಏರಿಕೆ ಸೇರಿದಂತೆ ಹಲವು ಕಾರಣಗಳಿಂದ ಬಿಸಿಲಿನ ಧಗೆ ಹೆಚ್ಚಾಗುತ್ತಿದೆ. ರಾಜ್ಯದ ಮೂಲೆ ಮೂಲೆಯಲ್ಲೂ ಇಂತಹದ್ದೇ ಪರಿಸ್ಥಿತಿ ನಿರ್ಮಾಣವಾಗಿದೆ. ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಿ ಇಂದು ಗರಿಷ್ಠ ೩೬ ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಹೊರಬರಲು ಜನ ಯೋಚಿಸುವ ಸ್ಥಿತಿ ನಿರ್ಮಾಣವಾಗಿದೆ.

ಸೂರ್ಯನ ರೌದ್ರಾವತಾರ ಕಂಡು ಕರ್ನಾಟಕದ ಜನತೆ ಸುಸ್ತಾಗಿದ್ದಾರೆ. ಬಿಸಿಲಿನ ಬೇಗೆಯಿಂದ ರಕ್ಷಣೆ ಪಡೆಯಲು ನಾನಾ ತಂತ್ರದ ಮೊರೆ ಹೋಗುತ್ತಿದ್ದಾರೆ. ಇದರೆ ಜತೆಗೆ ದೇಶದಲ್ಲಿ ಮತ್ತೆ ಕರೋನಾ ರೂಪಾಂತರಿಯ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅಲ್ಲದೆ ಎಲ್ಲೆಡೆ ನೀರಿನ ಮಟ್ಟ ಪಾತಾಳಕ್ಕಿಳಿದು, ಕಲುಷಿತ ಗೊಂಡಿದೆ. ವೈರಸ್‌ಗಳ ದಾಳಿಗೆ ಇದೂ ಮುಖ್ಯ ಕಾರಣವಾಗಿ ಜ್ವರದ ಬಾಧೆ ರಾಜ್ಯಾದ್ಯಂತ ತೀವ್ರಗೊಳ್ಳುತ್ತಲೇ ಇದೆ. ಎಲ್ಲದರ ನಡುವೆಯೇ ಮಕ್ಕಳಿಗೆ ಬೇಸಿಗೆ ರಜೆ, ಹಬ್ಬ ಹರಿದಿನಗಳು-ಜಾತ್ರೆಗಳ ಜತೆಗೇ ರಾಜ್ಯ ವಿಧಾಸಭೆಗೆ ಚುನಾವಣೆಯೂ ಬಂದಿದೆ.

ಇವೆಲ್ಲವೂ ಜನದಟ್ಟಣೆ ಹೆಚ್ಚಿಸುವ ವಿಚಾರವೇ. ವೈಯಕ್ತಿಕ ಆರೋಗ್ಯದ ರಕ್ಷಣೆಗೆ ಸವಾಲೆಸೆಯುವ ಎಲ್ಲ ಸನ್ನಿವೇಶ ರಾಜ್ಯದಲ್ಲಿ ಸೃಷ್ಟಿಯಾಗಿದೆ. ಮುನ್ನೆಚ್ಚರಿಕೆಯೊಂದೇ ಇದಕ್ಕಿರುವ ಏಕೈಕ ಪರಿಹಾರ. ಕೈ ಹಾಗೂ ಬಾಯಿಯ ಸ್ವಚ್ಛತೆಯ ಪಾಲನೆಗೆ ಇನ್ನಿಲ್ಲದ ಆದ್ಯತೆ ನೀಡಬೇಕಿದೆ. ಆಗಾಗ ಕೈ ತೊಳೆಯುತ್ತಿರುವುದು, ಸಾದ್ಯವಾದಷ್ಟು ಪ್ರವಾಸ, ಹೊರಗಡೆಯ ಸುತ್ತಾಟ, ಪ್ರವಾಸಗಳನ್ನು ಕಡಿಮೆ ಮಾಡುವುದು, ಹೋರಗಿನ ಆಹಾರ ಸೇವಿಸದೇ, ಮನೆಯಲ್ಲಿಯೇ ಪೌಷ್ಟಿಕಾಂಶಯುಕ್ತ ಬಿಸಿ ಆಹಾರ ಸೇವನೆ, ಗುಂಪು-ಜನಜಂಗುಳಿಯತ್ತ ಸುಳಿಯದೇ ಸುರಕ್ಷಿತ ಅಂತರ ಕಾಪಾಡುವುದು, ಯಾವುದೇ ಸೋಂಕಿದ್ದಲ್ಲಿ ಮಾಸ್ಕ್ ಧಾರಣೆಯಂಥ ಶಿಸ್ತುಪಾಲನೆ ಅತಿ ಮುಖ್ಯ. ಯಾವುದೇ ರೀತಿಯ ಆರೋಗ್ಯದಲ್ಲಿನ ಏರುಪೇರಾದರೂ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಮನೆಯಲ್ಲಿ ಮಕ್ಕಳು ಹಾಗೂ ವೃದ್ಧರ ಪಾಲನೆಗೆ ಆದ್ಯತೆ ನೀಡಬೇಕಿದೆ.

ರೋಗನಿರೋಧಕ ಶಕ್ತಿ ಕಡಿಮೆ ಇರುವ ಈ ವಯೋಮಾನದವರಿಂದಲೇ ಸೋಂಕು ಹರಡಲಿದೆ ಎಂಬುದು ಗಮನದಲ್ಲಿರಲಿ. ನಾವು ಆರೋಗ್ಯವಾಗಿದ್ದು, ದೇಶದ ಅಭಿವೃದ್ಧಿಗೆ ಕೊಡುಗೆ ನೀಡೋಣ.