Friday, 13th December 2024

ಚೀನಾಗೆ ಅಮಿತ್‌ ಶಾ ರವಾನಿಸಿದ ದಿಟ್ಟ ಸಂದೇಶ

ಸಂಗತ

ವಿಜಯ್‌ ದರಡಾ

ಅರುಣಾಚಲದ ಶಿವೋಮಿ ಪ್ರದೇಶದಲ್ಲಿ ಬಹುದೊಡ್ಡ ಯುರೇನಿಯಂ ನಿಕ್ಷೇಪ ಇರುವುದು ಕೂಡ ಗಮನಿಸಬೇಕಾದ ಸಂಗತಿ. ಇದೆಲ್ಲವೂ ಚೀನಾಗೆ ಕಿರಿಕಿರಿ ಉಂಟು ಮಾಡುವ ಸಂಗತಿಗಳು. ಹಾಗಾಗಿ ಅದು ಮತ್ತೆ ಭಾರತವನ್ನು ಕೆಣಕಿ ಅರುಣಾಚಲ ತನ್ನದೆಂದು ಹೇಳುವ ಮೂಲಕ ಕ್ಯಾತೆ ತೆಗೆಯುತ್ತಿದೆ.

ಭಾರತದ ಆಂತರಿಕ ರಾಜಕೀಯದ ವಿಷಯಕ್ಕೆ ಬರುವುದಾದರೆ, ಪಾಕಿಸ್ತಾನದ ವಿಚಾರದಲ್ಲಿ ತೋರಿದಷ್ಟು ಗಡಸು ಪ್ರತಿಕ್ರಿಯೆ ಯನ್ನು ಚೀನಾ ವಿಚಾರದಲ್ಲಿ ಪ್ರಕಟಪಡಿಸಲಾಗಿಲ್ಲ.

ಅಧಿಕಾರದಲ್ಲಿರುವ ಪಕ್ಷ ಯಾವುದೇ ಇರಲಿ, ಜನಸಾಮಾನ್ಯನ ಇಂಗಿತ ಬಹುತೇಕ ಒಂದೇ ಆಗಿರುತ್ತದೆ. ಕಳೆದ ವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಚೀನಾ ವಿರುದ್ಧ ಸ್ಪಷ್ಟವಾದ ಮತ್ತು ಧೈರ್ಯದಿಂದ ಕೂಡಿದ ಎಚ್ಚರಿಕೆಯೊಂದನ್ನು ಕೊಟ್ಟಿದ್ದಾರೆ.

ಚೀನಾ ಗಡಿಭಾಗದಿಂದ ೨೯ ಕಿಮೀ ದೂರದಲ್ಲಿರುವ ಅರುಣಾಚಲ ಪ್ರದೇಶದ ಕಿಬಿತು ಎಂಬಲ್ಲಿಂದ ಈ ಸಂದೇಶವನ್ನು ಅವರು ಚೀನಾ ಸರಕಾರಕ್ಕೆ ತಲುಪಿಸಿ ದ್ದಾರೆ. ನಮ್ಮದು ೧೯೬೨ ರಲ್ಲಿದ್ದ ಭಾರತವಲ್ಲ, ನಮ್ಮ ದೇಶದ ಒಂದಿಂಚು ಜಾಗವನ್ನೂ ಯಾರೂ ಕಬಳಿಸಲು, ಕಿತ್ತುಕೊಳ್ಳಲು ಸಾಧ್ಯವಿಲ್ಲ ಎಂದವರು ಅಬ್ಬರಿಸಿದ್ದರು. ಚೀನಾ ತನ್ನ ಮ್ಯಾಪ್ ನಲ್ಲಿ ಅರುಣಾಚಲ ಪ್ರದೇಶದ ಕೆಲ ನಗರಗಳ ಹೆಸರುಗಳನ್ನು ಬದಲಿಸಿದೆ. ಇದು ಮೂರನೇ ಬಾರಿ ಆಗುತ್ತಿದೆ.

ಇದು ಸ್ವೀಕಾರಾರ್ಹ ಸಂಗತಿಯಲ್ಲವೆಂದು ಮೆಲುಮಾತಿನಲ್ಲಿ ಭಾರತ ಆಗಿಂದಾಗ್ಯೆ ಹೇಳುತ್ತಲೇ ಇತ್ತು. ಅರುಣಾಚಲದ
ಕಿಬಿತುವಿನಲ್ಲಿ ಗ್ರಾಮೀಣ ಅಭಿವೃದ್ಧಿಯ ಯೋಜನೆಯೊಂದರ ಉದ್ಘಾಟನೆಗೆ ಬಂದಿದ್ದ ಅಮಿತ್ ಶಾ, ಯುದ್ಧೋನ್ಮಾದದಲ್ಲಿರುವ ಚೀನಾದ ಇಂಗಿತ ಮತ್ತು ವ್ಯೂಹದ ಬಗ್ಗೆ ತಮ್ಮ ವಿರೋಧವನ್ನು ಕಟು ಶಬ್ದಗಳಲ್ಲಿ ಪ್ರಕಟಿಸಿದರು. ಚೀನಾ ಅರುಣಾಚಲದಿಂದ ಲಢಾಕ್‌ವರೆಗೆ ರಸ್ತೆ ಸಂಪರ್ಕವನ್ನು ಕಲ್ಪಿಸಿದೆ. ಇದರಿಂದ ತನ್ನ ದೇಶದ ಸೈನಿಕರು ಗಡಿಭಾಗವನ್ನು ತಲುಪುವುದು ಸುಲಭ ವಾಗಲಿ ಎಂಬುದು ಅದರ ಉದ್ದೇಶ.

ಅಷ್ಟೇ ಅಲ್ಲ, ಹೊಸ ಹಳ್ಳಿಗಳನ್ನೂ ಅದು ಸೃಷ್ಟಿಸಿದೆ. ನಮ್ಮ ಗಡಿಭಾಗದ ಹಳ್ಳಿಗಳ ಅಭಿವೃದ್ಧಿಯನ್ನು ಮಾಡುವುದು ಇದಕ್ಕೆ
ತಕ್ಕ ಉತ್ತರ ಎಂದು ನಾವು ಭಾವಿಸಿದ್ದೇವೆ. ಹಾಗಾಗಿ ಕೇಂದ್ರ ಸರಕಾರ ೪೮೦೦ ಕೋಟಿ ರುಪಾಯಿಗಳ ಯೋಜನೆಗೆ ಒಪ್ಪಿಗೆ
ನೀಡಿದೆ. ಆ ಪೈಕಿ ೨೫೦೦ ಕೋಟಿ ರುಪಾಯಿ ರಸ್ತೆ ಸೌಕರ್ಯಕ್ಕೇ ವಿನಿಯೋಗವಾಗಲಿದೆ. ಅರುಣಾಚಲ, ಸಿಕ್ಕಿಂ, ಉತ್ತರಾ ಖಂಡ, ಹಿಮಾಚಲ ಮತ್ತು ಲಡಾಖ್ ಸೇರಿದಂತೆ ಒಟ್ಟು ೧೯ ಜಿಲ್ಲೆಗಳ ೨೯೬೭ ಹಳ್ಳಿಗಳಿಗೆ ಇದರ ಪ್ರಯೋಜನ ಸಿಗಲಿದೆ. ಈ ಯೋಜನೆಯಡಿಯಲ್ಲಿ ಅಭಿವೃದ್ಧಿಯಾಗುತ್ತಿರುವ ಮೊದಲ ಗ್ರಾಮ ಕಿಬಿತು ಎಂದು ಅಮಿತ್ ಶಾ ಪ್ರಕಟಿಸಿದರು.

ಈ ಯೋಜನೆಗೆ ಕಿಬಿತು ಗ್ರಾಮವನ್ನೇ ಏಕೆ ಆಯ್ದುಕೊಂಡರು ಎಂಬುದು ಇಲ್ಲಿ ಉದ್ಭವವಾಗುವ ಪ್ರಶ್ನೆ. ೧೯೬೨ರ ಇತಿಹಾಸ ವನ್ನೊಮ್ಮೆ ಅವಲೋಕನ ಮಾಡೋಣ. ಭಾರತ ಮತ್ತು ಚೀನಾ ಪಡೆಗಳ ನಡುವೆ ಈ ಭೂಭಾಗದಲ್ಲಿ ಭೀಕರ ಯುದ್ಧ ನಡೆದಿತ್ತು. ೧೯೬೨ರಲ್ಲಿ ಕುಮಾವು ರೆಜಿಮೆಂಟಿನ ಆರು ಧೀರ ಅಧಿಕಾರಿಗಳು ತೋರಿದ ದಿಟ್ಟನಿಲುವು ಮೆಚ್ಚುವಂಥದ್ದಾಗಿತ್ತು. ಇತಿಹಾಸ ದಲ್ಲಿ ಈಯುದ್ಧಕ್ಕೆ ತನ್ನದೇ ಆದ ಮಹತ್ವವಿದೆ. ಹಾಗಾಗಿಯೇ ವೈಬ್ರಂಟ್ ವಿಲೇಜ್ ಪ್ರೊಗ್ರಾಂ ಉದ್ಘಾಟಿಸಲು ಅಮಿತ್ ಶಾ
ಕಿಬಿತು ಗ್ರಾಮವನ್ನು ಆಯ್ದುಕೊಂಡರು. ಈ ಗ್ರಾಮ ಅರುಣಾಚಲ ಪ್ರದೇಶದ ರಾಜಧಾನಿ ಈಟಾನಗರದಿಂದ ೬೦೦ ಕಿಮೀ ದೂರದಲ್ಲಿದೆ. ಇದು ಕಟ್ಟಕಡೆಯ ಗ್ರಾಮವೂ ಹೌದು.

ಅಲ್ಲಿಂದಾಚೆಗೆ ಇರುವುದು ಚೀನಾ ಗಡಿಭಾಗ. ಆದರೆ ಅದೇ ಈಗ ಮೊದಲ ಗ್ರಾಮ, ಕೊನೆಯಗ್ರಾಮವಲ್ಲ, ಭಾರತದ
ಪರಿಕಲ್ಪನೆ ಬದಲಾಗಿದೆ ಎಂಬ ದಿಟ್ಟ ಸಂದೇಶವನ್ನು ಅಮಿತ್ ಶಾ ಚೀನಾಕ್ಕೆ ರವಾನೆ ಮಾಡಿದ್ದು ವಿಶೇಷವಾಗಿತ್ತು. ಜೊತೆಗೆ
ಜಿ-೨೦ ಸಮ್ಮೇಳನದ ಮೂಲಕವೂ ನಮ್ಮ ಉಗ್ರ ಪ್ರತಿಭಟನೆಯನ್ನು ಚೀನಾಗೆ ರವಾನಿಸಿದ್ದಾಗಿದೆ. ಈಟಾನಗರದಲ್ಲೇ ಜಿ-೨೦ ಸಮಾವೇಶ ನಡೆದಿತ್ತು. ೫೦ಪ್ರತಿನಿಽಗಳು ಭಾಗವಹಿಸಿದ್ದರು. ಇದೀಗ ಮೇ ೨೨-೨೪ ರಂದು ಅದು ಮತ್ತೆ ಶ್ರೀನಗರದಲ್ಲಿ ಸಮಾವೇಶಗೊಳ್ಳಲಿದೆ. ಆ ಸಮಾವೇಶದಲ್ಲಿ ಚೀನಾ ಭಾಗವಹಿಸದೇ ಹೊರಗುಳಿಯಬಹುದು.

ಆದರೆ ಭಾರತ ಅದಕ್ಕೆಲ್ಲ ತಲೆಕೆಡಿಸಿಕೊಳ್ಳುವುದಿಲ್ಲ. ಗಮನಿಸಬೇಕಾದ ಸಂಗತಿಯೆಂದರೆ ೧೯೬೨ರ ಯುದ್ಧಕಾಲದಲ್ಲಿ ಚೀನಾ ಅರುಣಾಚಲ ಪ್ರದೇಶದ ಅರ್ಧಭಾಗವನ್ನು ಆಕ್ರಮಿಸಿಕೊಂಡಿತ್ತು. ಆಗ ಆ ಪ್ರದೇಶವನ್ನು ನಾರ್ಥ್ ಈಸ್ಟ್ ಫ್ರಾಂಟಿಯರ್ ಏಜೆನ್ಸಿ ಎಂದು ಕರೆಯಲಾಗುತ್ತಿತ್ತು. ೧೯೭೨ರಲ್ಲಿ ಕೂಡ ಅರುಣಾಚಲ ಪ್ರದೇಶ ಕೇಂದ್ರಾಡಳಿತ ಪ್ರದೇಶವೇ ಆಗಿತ್ತು. ಅದು ಪೂರ್ಣ ಪ್ರಮಾಣದಲ್ಲಿ ರಾಜ್ಯದ ಸ್ಥಾನಮಾನ ಪಡೆದಿದ್ದು ೧೯೮೭ರಲ್ಲಿ.

೧೯೬೨ರ ಕಾಲಘಟ್ಟದಲ್ಲಿ ಚೀನಾ ಅರುಣಾಚಲವನ್ನು ಒತ್ತುವರಿ ಮಾಡಿದ್ದನ್ನು ನಾನು ಮೊದಲೇ ಹೇಳಿದ್ದೆ. ಅದು ಹಾಗೆ ಅತಿಕ್ರಮಿಸಿದ ಭಾಗವನ್ನು ತನ್ನ ವಶದಲ್ಲಿಟ್ಟು ಕೊಳ್ಳಬೇಕಿದ್ದು, ಆದರೆ ಅದಾಗಲಿಲ್ಲ. ಏಕೆಂಬುದು ಗಮನಾರ್ಹ ಸಂಗತಿ. ವಾಸ್ತವವಾಗಿ ಅರುಣಾಚಲ ಪ್ರದೇಶದ ನಾಗರಿಕರಿಗೆ ಚೀನಾ ಆಡಳಿತ ಇಷ್ಟವಿಲ್ಲವೆಂಬುದು ಚೀನಾದ ಆಡಳಿತಕ್ಕೂ ತಿಳಿದಿತ್ತು.
ಅಲ್ಲೊಂದು ದೊಡ್ಡ ದಂಗೆ ಸಂಭವಿಸಬಹುದು ಎಂಬುದೂ ಅದಕ್ಕೆ ಗೊತ್ತಿತ್ತು. ಹಾಗಾಗಿ ಅದು ತೆಪ್ಪಗೆ ಕುಳಿತಿತ್ತು.

ಆದರೆ ಈಗ ಮತ್ತೇಕೆ ಅರುಣಾಚಲ ತನ್ನದೆಂದು ಚೀನಾ ಕ್ಯಾತೆ ತೆಗೆಯುತ್ತಿದೆ? ಈಗ ಭಾರತ ತನ್ನ ಸರ್ವಾಂಗೀಣ ಪ್ರಗತಿಯತ್ತ
ದೃಷ್ಟಿ ಇಟ್ಟಿದೆ ಎಂಬ ವಿಚಾರದ ಅರಿವು ಚೀನಾ ದೇಶಕ್ಕಿದೆ. ಆರ್ಥಿಕತೆ, ಔದ್ಯಮಿಕ ಪ್ರಗತಿ ಮತ್ತು ಮೂಲಭೂತ ಸೌಕರ್ಯಗಳ ವಿಚಾರದಲ್ಲಿ ಭಾರತ ಸಾಕಷ್ಟು ಮುಂದುವರಿದಿದೆ. ಅದು ವಿಶ್ವದ ಐದನೇ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ ಮತ್ತು ೨೦೪೦ರ ಸುಮಾರಿಗೆ ಮೂರನೇ ಸ್ಥಾನಕ್ಕೆ ಬರಲಿದೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ.

ಅರುಣಾಚಲದ ಶಿವೋಮಿ ಪ್ರದೇಶದಲ್ಲಿ ಬಹುದೊಡ್ಡ ಯುರೇನಿಯಂ ನಿಕ್ಷೇಪ ಇರುವುದು ಕೂಡ ಗಮನಿಸಬೇಕಾದ ಸಂಗತಿ. ಇದೆಲ್ಲವೂ ಚೀನಾಗೆ ಕಿರಿಕಿರಿ ಉಂಟು ಮಾಡುವ ಸಂಗತಿಗಳು. ಹಾಗಾಗಿ ಅದು ಮತ್ತೆ ಭಾರತವನ್ನು ಕೆಣಕಿ ಅರುಣಾಚಲ ತನ್ನದೆಂದು ಹೇಳುವ ಮೂಲಕ ಕ್ಯಾತೆ ತೆಗೆಯುತ್ತಿದೆ. ನಮ್ಮ ನಗರ ಪಟ್ಟಣಗಳ ಹೆಸರುಗಳನ್ನು ಯಾರಾದರೂ ಅನ್ಯರು ಬದಲಾವಣೆ ಮಾಡಿದಾಗ ಆಗುವ ಮುಜುಗರ ಮತ್ತು ಇರುಸು ಮುರುಸು, ಕೆಲವೊಮ್ಮೆ ಗಡಿಭಾಗದಲ್ಲಿ ಉದ್ವಿಗ್ನತೆಗೂ ಕಾರಣವಾಗಬಹುದು.

ನಮ್ಮ ಸೈನಿಕರು ಚೀನೀ ಸೈನಿಕರ ಮೇಲೆ ದಾಳಿ ಮಾಡಿದಾಗ ಅಲ್ಲೆಷ್ಟು ಮಂದಿ ಹತರಾದರೆಂಬುದನ್ನು ಚೀನಾ ಬಹಿರಂಗ ಪಡಿಸುವಲ್ಲಿಯೂ ಹಿಂದೇಟು ಹಾಕುವಂಥ ದೇಶ. ಬಹುಶಃ ಬಹಳ ಮಂದಿಗೆ ಗೊತ್ತಿರಲಾರದು, ಚೀನೀ ಸೈನ್ಯದಲ್ಲಿರುವವರಿಗೆ ಅಲ್ಲಿನ ಸರಕಾರ ಇಂಜೆಕ್ಷನ್ ಕೊಡಿಸಿ ಎತ್ತರ ಹೆಚ್ಚಿಸುವ ಕೆಲಸವನ್ನು ಮಾಡುತ್ತದೆ. ಇದು ಅಲ್ಲಿನ ಕಥೆ. ಗೊತ್ತಿರಲಿ ಅಮೆರಿಕಾ
ಪಾಕಿಸ್ತಾನಕ್ಕೆ ಅತ್ಯಾಧುನಿಕ ಟ್ಯಾಂಕ್‌ಗಳನ್ನು ಕೊಟ್ಟು ಭಾರತದ ಮೇಲೆ ದಾಳಿಗೆ ಉತ್ತೇಜಿಸಿದಾಗ, ನಮ್ಮ ಸೇನೆ ಆ ಟ್ಯಾಂಕುಗಳನ್ನು ಆಟಿಕೆಗಳಂತೆ ಪುಡಿಗಟ್ಟಿತ್ತು.

ನೀವು ೧೦೦ ಕೆಜಿಯ ಕುಸ್ತಿಪಟುವಾಗಿರಬಹುದು. ಆದರೆ ನಾವೇನು ೧೦೦ ಕೆಜಿ ಕುಸ್ತಿಪಟುಗಳಲ್ಲ. ೬೦ ಕೆಜಿಯ ಕುಸ್ತಿಪಟು ನೂರು ಕೆಜಿಯವನನ್ನು ಮಣ್ಣು ಮುಕ್ಕಿಸಬಲ್ಲ ಎಂಬುದನ್ನು ಮೊದಲು ಅರಿಯಿರಿ ಎಂಬ ಎಚ್ಚರಿಕೆಯ ಮಾತನ್ನು ಅಮಿತ್ ಶಾ ಚೀನಾಗೆ ರವಾನಿಸಿದ್ದಾರೆ. ನಾವು ಯಾವತ್ತೂ ನಮ್ಮ ಎದುರಾಳಿಯನ್ನು ಕೀಳಂದಾಜು ಮಾಡುವವರಲ್ಲ. ಹಾಗಂತ ಯಾರಾ ದರೂ ನಮ್ಮನ್ನು ಸುಲಭ ದಲ್ಲಿ ಬಗ್ಗುಬಡಿಯುತ್ತೇವೆಂದು ಬೀಗಿದರೆ ನಾವು ಸುಮ್ಮನೆ ಕೂರುವವರಲ್ಲ. ೧೯೬೨ರ ಯುದ್ಧದಲ್ಲಿ ನಮ್ಮ ಸೈನಿಕರಿಗೆ ಸಮವಸವಿರಲಿಲ್ಲ. ಅವರು ಕೊರೆಯುವ ಚಳಿಯಲ್ಲಿ ಇನ್ನಿಲ್ಲದ ತೊಂದರೆ ಎದುರಿಸ ಬೇಕಾಯಿತು.

ಆದರೆ ನಮ್ಮಲ್ಲೀಗ ೬ ಪದರದ ಬೆಚ್ಚಗಿನ ಸಮವಸ್ತ್ರವಿದೆ, ನಮ್ಮ ಜವಾನರಿಗೆ ಬೇಕಾದ ಎಲ್ಲ ಸವಲತ್ತೂಗಳೂ ಇವೆ, ಅವರು ಸಶಕ್ತರಿದ್ದಾರೆ. ಸಿಯಾಚೆನ್ ಗ್ಲೇಷಿಯರ್ ನಲ್ಲಿ ವರ್ಷಪೂರ್ತಿ ಇದ್ದರೂ ಅವರು ಬೆಚ್ಚಗಿರುತ್ತಾರೆ. ಸನ್ನಿವೇಶಗಳು ಏನೇ ಇರಲಿ ನಾವೆಂದೂ ಸೋಲೊಪ್ಪಿಕೊಳ್ಳುವ ಜಾಯಮಾನದವರಲ್ಲ. ಭಾರತದ ನಾಗರಿಕನಾಗಿ ಚೀನಾ ದೇಶಕ್ಕೆ ನಾನು ಹೇಳುವುದೊಂದೇ, ನೀವು ಮರೆತು ಗಾಳಿಗೆ ತೂರಿರುವ ಭಗವಾನ್ ಬುದ್ಧನ ಮಾರ್ಗವನ್ನು ಅನುಸರಿಸಿ. ನಮಗೆ ಬುದ್ಧ, ಮಹಾವೀರ, ಮಹಾತ್ಮಾಗಾಂಧಿ ಎಲ್ಲರೂ ಮಾನ್ಯರು, ಅಹಿಂಸೆಯೇ ನಮ್ಮ ಪರಮಧರ್ಮ.

ನಾವು ಎಲ್ಲ ಜಾತಿ ಜನಾಂಗಗಳನ್ನು ಸಮಾನವಾಗಿ ಪರಿಗಣಿಸುತ್ತೇವೆ. ನೀವಂತೂ ಜಾತಿಯನ್ನು ಗಾಳಿಗೆ ತೂರಿದವರು. ನಿಮ್ಮ ದೇಶದಲ್ಲಿ ಜನರು ದೇವರನ್ನು ಪೂಜಿಸುವುದಕ್ಕೂ ಅವಕಾಶವಿಲ್ಲ. ಕದ್ದುಮುಚ್ಚಿ ದೇವರ ಪೂಜೆ ಮಾಡಬೇಕಾದ ಪರಿಸ್ಥಿತಿ ಇದೆ. ನಮ್ಮಲ್ಲಿ ಪ್ರಜಾಪ್ರಭುತ್ವವಿದೆ. ನಿಮ್ಮಲ್ಲಿ ನಿಮ್ಮ ಜನರನ್ನೇ ದಮನ ಮಾಡುವ ಆಕ್ರಮಣಕಾರಿ ಪ್ರವೃತ್ತಿ ಬಲವಾಗಿದೆ. ನಿಮ್ಮ ದೇಶದಲ್ಲೇ ಕ್ರಾಂತಿಯ ಸದ್ದು ಅನುರಣಿಸುತ್ತಿದೆ. ಅದೆಷ್ಟು ದಿನ ಜನರನ್ನು ಬಂದೂಕಿನ ಗುರಿತೋರಿಸಿ ಮಣಿಸಬಲ್ಲಿರಿ.
ನೀವು ಬೇರೆಯವರನ್ನು ಹಾಳು ಮಾಡಲು ಹೊರಟರೆ ನಿಮ್ಮ ದೇಶದ ಉತ್ಪನ್ನಗಳು ಇಡೀ ವಿಶ್ವ ನಿರಾಕರಿಸುತ್ತದೆ.

ಆಗೇನಾಗುತ್ತದೆ ಗೊತ್ತಿದೆಯಲ್ಲ. ನಮ್ಮ ಶಕ್ತಿಯ ಬಗ್ಗೆ ನಮಗೆ ಚೆನ್ನಾಗಿ ಗೊತ್ತಿದೆ. ಭ್ರಮಾಲೋಕದಿಂದ ಹೊರ ಬನ್ನಿ.