Sunday, 15th December 2024

ಕರೋನಾ: ರಾಜಕೀಯ ನಾಯಕರು ಜವಾಬ್ದಾರಿಯುತವಾಗಿ ವರ್ತಿಸಲಿ

ದೇಶದಲ್ಲಿ ಮತ್ತೆ ಕರೋನಾ ತನ್ನ ಅಟ್ಟಹಾಸ ಮುಂದುವರಿಸಿದೆ. ಹಾಗೆಂದು ತೀರಾ ಆತಂಕಪಡುವ ಸ್ಥಿತಿ ಇಲ್ಲ ಎನ್ನುತ್ತಿದ್ದಾರೆ ತಜ್ಞರು. ವ್ಯಾಪಕ ಲಸಿಕಾರಣ ಹಾಗೂ ಮೂರು ವರ್ಷಗಳ ಅವಧಿಯಲ್ಲಿ ಜನರ ದೇಹದಲ್ಲಿ ಬೆಳೆದಿರ ಬಹುದಾದ ಪ್ರತಿರೋಧ ಶಕ್ತಿಯ ಆಧಾರದಲ್ಲಿ ಇಂಥ ನಿಲುವಿಗೆ ಬಂದಿರಬಹುದು.

ಜತೆಗೆ ರೂಪಾಂತರಿ ತಳಿಯಲ್ಲಿ ಸಾವನ್ನು ತರುವಷ್ಟು ಶಕ್ತಿ ಇಲ್ಲ ಎಂಬುದೂ ಇದಕ್ಕೆ ಇನ್ನೊಂದು ಕಾರಣ. ಹಾಗಾಗಿ ಹೊಸ ರೂಪಾಂತರಿ ತಳಿ ನಾಗರಿಕರ ಆರೋಗ್ಯದ ಮೇಲೆ ಹೆಚ್ಚಿನ ಅಪಾಯ ಉಂಟುಮಾಡುವ ಸಾಧ್ಯತೆ ಕಡಿಮೆ. ಹಾಗೆಂದು ನಾವು ಮೈಮರೆಯುವ ಸನ್ನಿವೇಶವಿಲ್ಲ. ಅದರಲ್ಲೂ ಕರ್ನಾಟಕ ದಲ್ಲಿ ಚುನಾವಣೆ ನಡೆಯುತ್ತಿರುವು ದರಿಂದ ಎಲ್ಲೆಡೆ ವ್ಯಾಪಕ ರಾಜಕೀಯ ಸಮಾವೇಶಗಳು, ಜನದಟ್ಟಣೆ ಹೆಚ್ಚಿದೆ. ಹೀಗಾಗಿ ಸೋಂಕು ಹರಡುವ ಎಲ್ಲ ಸಾಧ್ಯತೆಗಳೂ ಇವೆ. ಇದಕ್ಕಿಂತ ಆತಂಕಕಾರಿ ಸಂಗತಿ ನಮ್ಮಲ್ಲಿನ ಲಸಿಕೆಯ ಪ್ರಮಾಣ. ರಾಷ್ಟ್ರೀಯ ಆರೋಗ್ಯ ಮಿಷನ್ ಇತ್ತೀಚೆಗೆ ಬಿಡುಗಡೆ ಮಾಡಿರುವ ವರದಿಯ ಪ್ರಕಾರ, ದೇಶದಲ್ಲಿ ಕೋವಿಡ್ ಸೋಂಕು ಹೆಚ್ಚುತ್ತಿರುವ ನಡುವೆಯೇ ರಾಜ್ಯದಲ್ಲಿ ಸುಮಾರು ೧೪.೩ ಲಕ್ಷ ಜನರು ಎರಡನೇ ಡೋಸ್ ಕೋವಿಡ್ ಲಸಿಕೆ ಪಡೆದಿಲ್ಲ.

ಮಾತ್ರವಲ್ಲ, ರಾಜ್ಯದಲ್ಲಿ ೩.೯೬ ಕೋಟಿ ಜನರು ತಮ್ಮ ಮುನ್ನೆಚ್ಚರಿಕೆಯ ಡೋಸ್ ಪಡೆದಿಲ್ಲ. ಪ್ರಸ್ತುತ ರಾಜ್ಯ ದಲ್ಲಿ ಶೇ ೨೩ರಷ್ಟು ಮಂದಿ ಮಾತ್ರ ಮುನ್ನೆಚ್ಚರಿಕೆ ಡೋಸ್ ಲಸಿಕೆ ಪಡೆದಿದ್ದಾರೆ ಎಂದು ತಿಳಿಸಿದೆ ವರದಿ. ಸತತವಾಗಿ ಮೂರು ಕೋವಿಡ್ ಅಲೆಗಳನ್ನು ಎದುರಿಸಿರುವ ರಾಜ್ಯದಲ್ಲಿ ಲಕ್ಷಾಂತರ ಜನರು ಇನ್ನೂ ಕೋವಿಡ್ ಎರಡನೇ ಡೋಸ್ ಲಸಿಕೆಯನ್ನೇ ಪಡೆದಿಲ್ಲ ಎಂಬುದು ನಮ್ಮ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿತನದ ಪ್ರತೀಕ. ನಿಜಕ್ಕೂ ಲಸಿಕೆಗಳ ಕೊರತೆಯೊಂದಿಗೆ, ಈ ಅಂಕಿಅಂಶಗಳು ಈಗ ಕಳವಳಕ್ಕೆ ಕಾರಣವಾಗಿದೆ.

ಏಕೆಂದರೆ, ರಾಜ್ಯದಲ್ಲಿ ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ ೨ ಸಾವಿರ ಗಡಿ ದಾಟಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ಶಿವಮೊಗ್ಗ, ದಾವಣಗೆರೆ, ಕಲಬುರಗಿ, ಬಳ್ಳಾರಿ, ತುಮಕೂರು ಮತ್ತು ಚಿಕ್ಕಮಗಳೂರಿನಲ್ಲಿ ಸೋಂಕು ಹೆಚ್ಚಿದೆ. ಹಾಗಾಗಿ, ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು ಹಾಗೂ ಸಾಧ್ಯವಾದಷ್ಟೂ ವೈಯಕ್ತಿಕ ಅಂತರ ಪಾಲಿಸುವುದು ಸೇರಿದಂತೆ ಕೋವಿಡ್ ಕಾಲಘಟ್ಟದ ಎಲ್ಲ ಮುನ್ನೆಚ್ಚರಿಕಾ ಕ್ರಮಗಳಿಗೆ ಮರಳುವುದು ಇಂದಿನ ಅಗತ್ಯ.

ಎಲ್ಲಕ್ಕಿಂತ ಹೆಚ್ಚಾಗಿ ಇನ್ನು ಎಲ್ಲರೂ ಕೋವಿಡ್ ಮಾರ್ಗಸೂಚಿಯನ್ನು ನಮ್ಮ ಜೀವನಶೈಲಿಯನ್ನು ಭಾಗವಾಗಿಯೇ ಮಾಡಿಕೊಳ್ಳುವುದು ಒಳಿತು. ಜತೆಗೆ ಮಕ್ಕಳು, ಹಿರಿಯ ನಾಗರಿಕರ ಕಾಳಜಿ ಹಿಂದೆಂದಿಗಿಂತಲೂ ಹೆಚ್ಚು ಮಾಡಬೇಕಿದೆ. ರಾಜಕೀಯ ನಾಯಕರು ಹೆಚ್ಚು ಜವಾಬ್ದಾರಿಯುತವಾಗಿ ಚುನಾ ವಣೆಯ ಸಂದರ್ಭದಲ್ಲಿ ವರ್ತಿಸಬೇಕಿದೆ.