Wednesday, 11th December 2024

ಮಾಜಿ ಪ್ರಧಾನಿ ದೇವೇಗೌಡ ಜನನೇತಾರರಾಗಿ ಗುರುತಿಸಲ್ಪಟ್ಟಿದ್ದಾರೆ: ಚಂದ್ರಶೇಖರಯ್ಯ

ತುಮಕೂರು: 1960ರ ದಶಕದಿಂದಲೂ  ರಾಜಕಾರಣದಲ್ಲಿ ಸಕ್ರಿಯರಾಗಿರುವ ರೈತರ ಮಗ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಪ್ರಸ್ತುತತೆಯ ಜನನೇತಾರರಾಗಿ ಗುರುತಿಸಲ್ಪಟ್ಟಿದ್ದಾರೆ ಎಂದು ಕೆಂಪೇಗೌಡ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಸಂಯೋಜನಾಧಿಕಾರಿ ಬಿ.ಎನ್.ಚಂದ್ರಶೇಖರಯ್ಯ ತಿಳಿಸಿದರು.
 ಪಾರದರ್ಶಕ ಮಾಧ್ಯಮ ಸಂಸ್ಥೆ ಹಾಗೂ ಜಿಲ್ಲಾ ಕಸಾಪ ಆಶ್ರಯದಲ್ಲಿ ತುಮಕೂರಿನ ಕನ್ನಡ ಭವನದಲ್ಲಿ ಶುಕ್ರವಾರ ಸಂಜೆ ಏರ್ಪಡಿಸಿದ್ಧ ಮಾಜಿ ಪ್ರಧಾನಿ ಎಚ್.ಡಿ. ದೇವೇ ಗೌಡರ ಬದುಕು -ಬರಹ ಕುರಿತ ‘ನೇಗಿಲಗೆರೆಗಳು’ ಪುಸ್ತಕವನ್ನು ಜಿಲ್ಲಾಮಟ್ಟದಲ್ಲಿ ಸಾಂಕೇತಿಕ ಬಿಡುಗಡೆಗೊಳಿಸಿ ಮಾತನಾಡಿದರು.
ದೇವೇಗೌಡರು ಶಾಸಕರಾಗಿ, ಸಚಿವರಾಗಿ, ವಿಪಕ್ಷ ನಾಯಕರಾಗಿ ಮುಖ್ಯಮಂತ್ರಿಯಾಗಿ ಪ್ರಧಾನಮಂತ್ರಿಯವರೆಗಿನ ಉನ್ನತಸ್ಥಾನ ಕ್ಕೇರಿದ್ದರೂ ತಮ್ಮ 6 ದಶಕ ಮೀರಿದ ರಾಜಕೀಯದಲ್ಲಿ ಅಧಿಕಾರ ಸ್ಥಾನದಲ್ಲಿದ್ದುದು ಕೇವಲ ಹತ್ತು ವರ್ಷಗಳು ಮಾತ್ರ. ಈ ಹತ್ತುವರ್ಷದಲ್ಲಿ ಪ್ರತೀ ದಿನ, ಪ್ರತಿಕ್ಷಣವನ್ನು ವ್ಯರ್ಥ ಮಾಡದೆ ರೈತಪರ, ನೀರಾವರಿ ಯೋಜನೆಗಳ ಜಾರಿಗೆ ಹೆಚ್ಚಿನ ಒತ್ತುಕೊಟ್ಟಿದ್ದು, ಪ್ರಧಾನಿಯಾಗಿದ್ದಲೂ ವೈಯಕ್ತಿಕ ಭದ್ರತೆಗೆ ಒತ್ತುಕೊಡದೆ ಸೌತ್ ಬ್ಲಾಕ್ ಕಚೇರಿಗೆ ಮುಕ್ತ ಪ್ರವೇಶ ಕಲ್ಪಿಸಿದ್ದರು. ಬುಲೆಟ್ ಫ್ರೂಪ್ ಭದ್ರತೆಯಿಲ್ಲದೆ ಕಾಶ್ಮೀರಕ್ಕೆ ಭೇಟಿ ಕೊಟ್ಟು ಚುನಾವಣೆ ನಡೆಸಿ ಪ್ರಜಾಪ್ರಭುತ್ವ ಮರುಸ್ಥಾಪಿಸಿದ್ದನ್ನು ಅಲ್ಲಿನ ಜನ ಎಂದಿಗೂ ಮರೆಯುವುದಿಲ್ಲ.
ಮೂಲ ಕೃತಿಕಾರರಾದ ಸುಗತ ಶ್ರೀನಿವಾಸರಾಜು ಸಂವಾದದಲ್ಲಿ ಪಾಲ್ಗೊಂಡು ನಾನು ಈ ಕೃತಿ ಬರೆಯಲು ಕೈಗೆತ್ತುಕೊಂಡಾಗ ದೇವೇಗೌಡರ ಬಗ್ಗೆ ಇದ್ದ ಭಾವನೆಗಳೇ ಬದಲಾದವು. ಗೌಡರ ರಾಜಕೀಯದಹೊರತಾಗಿ ಅವರೊಳಗಿರುವ ಅದ್ಭುತ ಜ್ಞಾನ, ಸ್ಮರಣಾ ಶಕ್ತಿ, ಓದಿನ ಆಸಕ್ತಿ, ಶಾಸನಸಭೆ , ಪಾರ್ಲಿಮೆಂಟ್‌ನ ಗ್ರಂಥಾಲಯವನ್ನು ಸದ್ಬಳಕೆ ಮಾಡಿಕೊಳ್ಳುತ್ತಿದ್ದ ಪರಿ, ರೈತರ ಪರವಾಗಿ, ನೀರಾವರಿ ಯೋಜನೆ ಜಾರಿ ವಿಷಯವಾಗಿ ಅಧಿಕಾರ ತ್ಯಾಗ ಮಾಡುತ್ತಿದ್ದ ಅವರ ಬದ್ದತೆ ಎಲ್ಲವು ತಿಳಿಯಿತು. ಅವರಲ್ಲಿ ಅಧಿಕಾರದ ಹಪಹಪಿಯಿರಲಿಲ್ಲ. ವಿರೋಧ ಪಕ್ಷದಲ್ಲಿ ಹೆಚ್ಚು ಇರಲು ಬಯಸುತ್ತಿದ್ದರು. ಇವೆಲ್ಲ ಅಂಶವನ್ನು ದಾಖಲೆ ಸಹಿತ ಇಂಗ್ಲೀಷ್ ಹಾಗೂ ಕನ್ನಡ ಅನುವಾದಿತ ಕೃತಿಯಲ್ಲಿ ದಾಖಲಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಜಾಪ್ರಗತಿ ಸಂಪಾದಕ ಎಸ್.ನಾಗಣ್ಣ, ಸಹ ಸಂಪಾದಕ ಮಧುಕರ್,  ಕಸಾಪ ಮಾಜಿ ಅಧ್ಯಕ್ಷೆ ಬಾ.ಹ.ರಮಾಕುಮಾರಿ, ಎಂ.ಎಚ್.ನಾಗರಾಜ್, ಕೆ.ಚಂದ್ರಣ್ಣ, ರಂಗಮಣಿ ನಗರ ಜೆಡಿಎಸ್ ಅಭ್ಯರ್ಥಿ ಎನ್.ಗೋವಿಂದರಾಜು ಜೆಡಿಎಸ್ ಜಿಲ್ಲಾಧ್ಯಕ್ಷ ಆರ್.ಸಿ.ಆಂಜಿನಪ್ಪ, ಕಾರ್ಯಧ್ಯಕ್ಷ ಟಿ.ಆರ್.ನಾಗರಾಜು, ವಿಜಯ್‌ಗೌಡ, ಮಧು, ಶ್ರೀನಿವಾಸ್ ಸೇರಿದಂತೆ ಪಕ್ಷದ ಮುಖಂಡರು, ಸಾಹಿತಿಗಳು, ಚಿಂತಕರು ಸಭಿಕರಾಗಿ ಪಾಲ್ಗೊಂಡರು.