ಸಂಗತ
ವಿಜಯ್ ದರಡಾ
ಬಿಹಾರದ ಬಾಹುಬಲಿ ಆನಂದ್ ಮೋಹನ್ ಸಿಂಗ್ ಬಿಡುಗಡೆಯ ಸುದ್ದಿ ಕೇಳುತ್ತಿದ್ದಂತೆ ನನಗೆ ೧೯೯೪ರ ಡಿಸೆಂಬರ್ ೫ ರ ಭೀಕರ ದಿನ ನೆನಪಿಗೆ ಬಂತು. ಆ ದಿನದಂದು ಬಿಹಾರದ ಮುಜಫರಪುರ ನಗರದ ಮೂಲಕ ಹೈವೇಯಲ್ಲಿ ಹಾದುಹೋಗುತ್ತಿದ್ದ ಗೋಪಾಲ ಗಂಜದ ಕಲೆಕ್ಟರ್ ಜಿ.ಕೃಷ್ಣಯ್ಯನವರನ್ನು ಆನಂದ್ ಮೋಹನ್‌ನಿಂದ ಪ್ರಚೋದನೆಗೆ ಒಳಗಾದ ಗುಂಪೊಂದು
ಹತ್ಯೆ ಮಾಡಿತ್ತು.
ಹಾಡಹಗಲೇ ಜನಜಂಗುಳಿಯ ಮಧ್ಯೆ ಕೃಷ್ಣಯ್ಯ ಅವರ ಕೊಲೆಯಾಗಿತ್ತು. ಎಕೆ-೪೭ ಉಗುಳಿದ ಗುಂಡುಗಳಿಂದ ಅವರ ದೇಹ ರಕ್ತಸಿಕ್ತವಾಗಿತ್ತು. ೩೭ ವರುಷದ ಐಎಎಸ್ ಅಧಿಕಾರಿಯೊಬ್ಬನ ಭೀಕರ ಹತ್ಯೆಯಿಂದ ಇಡೀ ದೇಶವೇ ಆಘಾತಕ್ಕೆ ಒಳಗಾಗಿತ್ತು.
ಕೊಲೆಗಾರರು ಎಂಎಲ್‌ಎ ಆನಂದ್ ಮೋಹನ್ ಕಡೆಯವರಾಗಿದ್ದರು. ಆ ದಿನಗಳಲ್ಲಿ ಮಾತ್ರವಲ್ಲ ಇಂದಿಗೂ ಬಿಹಾರ್ ಮತ್ತು ಉತ್ತರ ಪ್ರದೇಶಗಳಲ್ಲಿ ಇಂತಹ ಭೀಕರ ಅಪರಾಧಿಕ ಪ್ರಕರಣಗಳು ನಡೆಯುತ್ತಲೇ ಇರುತ್ತವೆ. ಮಾನವ ಹಕ್ಕುಗಳ ಬಗ್ಗೆ ಹುಯಿಲೆಬ್ಬಿಸುವ ಮಂದಿಯನ್ನೂ ಲೆಕ್ಕಿಸದೆ ಕ್ರಿಮಿನಲ್‌ಗಳನ್ನು ಹತ್ತಿಕ್ಕುವಲ್ಲಿ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ದಿಟ್ಟ ನಡೆ ತೋರುತ್ತಿದ್ದಾರೆ.
ಆದರೆ ಆನಂದ್ ಮೋಹನ್ ಎಂಬ ಕ್ರಿಮಿನಲ್ ಹಿನ್ನೆಲೆಯ ವ್ಯಕ್ತಿಯನ್ನು ಜೈಲಿನಿಂದ ಬಿಡುಗಡೆ ಮಾಡುವುದನ್ನು ತಡೆಯುವುದು ಕ್ಲೀನ್ ಇಮೇಜ್ ಹೊಂದಿರುವ ಬಿಹಾರದ ಮುಖ್ಯಮಂತ್ರಿ ನಿತೀಶ್‌ಕುಮಾರ್ ಗೆ ಏಕೆ ಸಾಧ್ಯವಾಗಲಿಲ್ಲ. ಪ್ರೀತಿ ಮತ್ತು ಸಮರದಲ್ಲಿ ಎಲ್ಲವೂ ಸರಿ. ಇದೊಂದನ್ನು ಮಾತ್ರ ಇಲ್ಲಿ ಹೇಳಬಹುದೇನೋ. ಎಲ್ಲ ಪಕ್ಷದವರಿಗೂ ಇದು ಅನ್ವಯವಾಗುವ ಸಂಗತಿ. ಕೆಲವು ಪಾರ್ಟಿಗಳಲ್ಲಿ ಇಂತಹ ನಿರ್ಧಾರಗಳ ಸಂಖ್ಯೆ ಕಡಿಮೆ ಇರಬಹುದು, ಇನ್ನು ಕೆಲವು ಪಕ್ಷಗಳಲ್ಲಿ ಅದು ಎಲ್ಲೆ ಮೀರಿರುತ್ತದೆ.
ಹಾಗಂತ ಯಾರೂ ಪ್ರಶ್ನಾತೀತರಲ್ಲ. ಅಂದು ಕಲೆಕ್ಟರ್ ಜಿ. ಕೃಷ್ಣಯ್ಯ ಕೊಲೆಯಾದಾಗ, ಆನಂದ್ ಮೋಹನ್‌ಗೂ ಆತನ ವ್ಯಕ್ತಿಗತ ಪರಿಚಯವಿರಲಿಲ್ಲ ಮತ್ತು ಗುಂಪಿನಲ್ಲಿ ಆನಂದಮೋಹನ್‌ನನ್ನು ಯಾರೂ ಗುರುತಿಸಿರಲಿಲ್ಲ. ಈ ಘಟನೆ ನಡೆಯುವುದಕ್ಕೆ ಒಂದು ದಿನ ಮುನ್ನ, ರಾತ್ರಿ ವೇಳೆಯಲ್ಲಿ ಪೊಲೀಸ್ ಸಮವಸ್ತ್ರದಲ್ಲಿದ್ದ ಕ್ರಿಮಿನಲ್‌ಗಳು ಮಾಫಿಯಾ ಡಾನ್ ಕೌಶಲೇಂದ್ರ ಆಲಿ
ಯಾಸ್ ಚೋಟಾ ಶುಕ್ಲಾ ಎಂಬವನ ಹತ್ಯೆ ಮಾಡಿದ್ದರು. ಆ ವ್ಯಕ್ತಿ ಆನಂದ್ ಮೋಹನನ ಬಿಹಾರ್ ಪೀಪಲ್ಸ್ ಪಾರ್ಟಿಯ ಸಕ್ರಿಯ ಸದಸ್ಯನಾಗಿದ್ದ. ಛೋಟಾನ ಕೊಲೆಯನ್ನು ಖಂಡಿಸಲು ನಡೆದ ಪ್ರತಿಭ ಟನೆಯಲ್ಲಿ ಜನಸಮೂಹವೇ ಸೇರಿತ್ತು.
ಆ ವೇಳೆ ದುರದೃಷ್ಟವಶಾತ್ ಜಿ. ಕೃಷ್ಣಯ್ಯ ಆ ಹಾದಿಯಲ್ಲಿ ಸಾಗುತ್ತಿದ್ದರು. ಅವರ ವಾಹನದ ಮೇಲೆ ಕೆಂಪು ಲೈಟ್ ಇತ್ತೆಂಬ ಒಂದೇ ಕಾರಣಕ್ಕೆ ಅವರನ್ನು ಅಡ್ಡಹಾಕಿ ಕೊಲೆ ಮಾಡಲಾಯ್ತು. ತಾನೊಬ್ಬ ಶಾಸಕ ಎಂಬ ಅಹಮಿನಲ್ಲಿದ್ದ ಆನಂದ್ ಮೋಹನ್ ತನ್ನನ್ನು ಯಾರೂ ಮುಟ್ಟಲಾರರು ಎಂಬ ಧೈರ್ಯದಲ್ಲಿದ್ದ. ಯುಪಿ ಮತ್ತು ಬಿಹಾರದಲ್ಲಿ ನಡೆಯುತ್ತಿರುವ ಇಂತಹ ಅಪರಾಧಿಕ ವಿದ್ಯಮಾನಗಳನ್ನು ಮಹಾರಾಷ್ಟ್ರ ಮತ್ತು ಗೋವಾಗಳಲ್ಲಿ ಊಹಿಸುವುದು ಕೂಡ ಸಾಧ್ಯವಿಲ್ಲ.
ಉತ್ತರ ಪ್ರದೇಶದಲ್ಲಿ ನಿಷ್ಪಾಪಿ ಜನರನ್ನು ಕೊಲೆಗಡುಕರು ಮೊಸಳೆಗಳ ಬಾಯಿಗೆ ತಳ್ಳುತ್ತಿದ್ದರೆ ಬಿಹಾರದಲ್ಲಿ ಸಾಮೂಹಿಕ ಹತ್ಯೆಗಳು ನಡೆದು ಹೆಣಗಳನ್ನು ಹೊಲಗದ್ದೆಗಳಲ್ಲಿ ಹೂತುಹಾಕುವ ಪ್ರಸಂಗಗಳು ಆಗಾಗ ನಡೆಯುತ್ತಿರುತ್ತವೆ. ಇದಕ್ಕೆ ಬಹು ಮುಖ್ಯ ಕಾರಣವೆಂದರೆ ಭೂಗತಪಾತಕಿಗಳು ರಾಜಕೀಯ ಪಕ್ಷಗಳ ಮೇಲೆ ಹಿಡಿತ ಹೊಂದಿದ್ದಾರೆ. ಪ್ರತಿಯೊಂದು ಪಕ್ಷವೂ ಹೆಚ್ಚಿನ ಸಂಖ್ಯೆಯಲ್ಲಿ ಭೂಗತಪಾತಕಿಗಳನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡು ಬಲಾಢ್ಯರಾಗುವ ಮತ್ತು ಚುನಾವಣೆ ಗೆಲ್ಲುವ ಕನಸು ಕಾಣು ತ್ತಾರೆ.
ಇದಕ್ಕೋಸ್ಕರ ರಾಜಕೀಯ ಪಕ್ಷಗಳು ಯಾವುದೇ ವ್ಯೂಹವನ್ನು ರಚಿಸಲೂ ಹಿಂಜರಿಯುವುದಿಲ್ಲ. ಪ್ರಸ್ತುತ ಆನಂದ್ ಮೋಹನ್ ಪ್ರಕರಣವನ್ನೇ ಗಮನಿಸಿ. ಕೆಳಕೋರ್ಟು ಆತನಿಗೆ ಮರಣದಂಡನೆಯನ್ನು ವಿಧಿಸಿತ್ತು. ಆದರೆ ಹೈಕೋರ್ಟು ಅದನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಿತು. ಹೈಕೋರ್ಟಿನ ತೀರ್ಪನ್ನು ಸುಪ್ರೀಮ್ ಕೋರ್ಟು ಎತ್ತಿಹಿಡಿಯಿತು. ಜೀವಾವಧಿ ಶಿಕ್ಷೆ ಎಂದರೆ ಅವನ ಕೊನೆಯುಸಿರಿನ ತನಕ ಜೈಲುಶಿಕ್ಷೆ. ಆದರೆ ಅಲ್ಲೂ ಒಂದು ಶರತ್ತಿದೆ.
ಅಪರಾಧಿಯ ಸನ್ನಡತೆಯ ಕಾರಣಕ್ಕೆ ಆತನನ್ನು ಜೈಲಿನಿಂದ ಬಿಡುಗಡೆ ಮಾಡುವಂತೆ ರಾಜ್ಯ ಸರಕಾರ ಆದೇಶಿಸಬಹುದು. ಗಮನಿಸಬೇಕಾದ ಇನ್ನೊಂದು ಸಂಗತಿಯಿದೆ. ಯಾವುದೇ ವ್ಯಕ್ತಿ ಸರಕಾರಿ ಅಧಿಕಾರಿಯೊಬ್ಬನ ಕೊಲೆ ಮಾಡಿದ್ದರೆ, ಆತನನ್ನು
ಬಿಡುಗಡೆ ಮಾಡುವುದಕ್ಕೆ ಅವಕಾಶವೇ ಇಲ್ಲ. ಆದರೆ ಜೈಲಿನ ನೀತಿಸಂಹಿತೆಯಲ್ಲಿರುವ ಈ ಶರತ್ತನ್ನು ನಿತೀಶ್‌ಕುಮಾರ್ ಸರಕಾರ ತಿದ್ದುಪಡಿ ಮಾಡಿದೆ. ಈ ನಡವಳಿಕೆಯನ್ನು ಬಿಹಾರ ಮತ್ತು ಮಧ್ಯಪ್ರದೇಶದ ಐಎಎಸ್ ಅಸೋಸಿಯೇಶನ್ ಉಗ್ರವಾಗಿ ಖಂಡಿಸಿದೆ.
ಅಚ್ಚರಿಯೆಂದರೆ, ಮಹಾರಾಷ್ಟ್ರ, ಗುಜರಾತ್, ರಾಜಾಸ್ತಾನ, ತಮಿಳುನಾಡು ಮತ್ತು ಇನ್ನಿತರ ರಾಜ್ಯಗಳಲ್ಲೂ ಅತ್ಯುತ್ತಮ ಐಎಎಸ್ ಅಧಿಕಾರಿಗಳಿದ್ದಾರೆ, ಅವರ ಸಂಘಟನೆಗಳೂ ಇವೆ. ಆದರೆ ಅವರ‍್ಯಾರೂ ಇದನ್ನು ವಿರೋಧಿಸಿದ್ದು ಕಂಡುಬಂದಿಲ್ಲ.
ಹತರಾದ ಅಧಿಕಾರಿಯ ಪತ್ನಿ ಉಮಾ ಕೃಷ್ಣಯ್ಯ, ನಿತೀಶ್ ಕುಮಾರ್ ಸರಕಾರದ ತೀರ್ಮಾನವನ್ನು ಸುಪ್ರೀಂ ಕೋರ್ಟಿ ನಲ್ಲಿ ಪ್ರಶ್ನಿಸಿದ್ದಾರೆ. ಈ ಬಗ್ಗೆ ರಾಷ್ಟ್ರಪತಿ ಮತ್ತು ಪ್ರಧಾನಿಗಳು ಮಧ್ಯಪ್ರವೇಶಿಸ ಬೇಕೆಂದೂ ಅವರು ವಿನಂತಿಸಿಕೊಂಡಿದ್ದಾರೆ.
ಇಲ್ಲಿ ಬಹುಮುಖ್ಯವಾಗಿ ಏಳುವ ಪ್ರಶ್ನೆಯೆಂದರೆ ಆನಂದ ಮೋಹನ್ ಬಿಹಾರದ ಒಂದು ಪ್ರಬಲಜಾತಿಯ ನಾಯಕರು (ನಾನು ಜಾತಿವ್ಯವಸ್ಥೆಯನ್ನು ನಂಬುವುದಿಲ್ಲ, ಜಾತಿಯಲ್ಲಿ ಮೇಲು ಕೀಳು ಎಂಬುದಿಲ್ಲ). ಆ ವ್ಯಕ್ತಿ ಲಾಲೂ ಯಾದವರ ಮೇಲೂ ಬಹಿರಂಗ ಸವಾಲು ಹಾಕಿದ್ದರು. ಆಗ ಲಾಲೂ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಮಂತ್ರಿ ಬ್ರಿಜ್ ಬಿಹಾರಿ ಪ್ರಸಾದ್ ಕೊಲೆಯೂ ನಡೆದಿತ್ತು. ದ್ವೇಷದ ಕಥೆಗಳು ಹಲವಾರಿವೆ. ಈಗ ನಿತೀಶ್‌ಕುಮಾರ್ ಮತ್ತು ಲಾಲೂ ಯಾದವ್ ಪಕ್ಷಗಳ ಸಮ್ಮಿಶ್ರ ಸರಕಾರ ಬಿಹಾರದಲ್ಲಿ ಆಡಳಿತ ನಡೆಸುತ್ತಿದೆ.
ಆನಂದ್ ಮೋಹನ್ ಬಿಡುಗಡೆಗೆ ಇವರೆಲ್ಲರೂ ಸಮ್ಮತಿ ಸೂಚಿಸಿದ್ದಾರೆಂದು ನಾವು ಪರಿಭಾವಿಸಬೇಕಾಗುತ್ತದೆ. ಮಹಾಘಟ ಬಂಧನದ ಭಾಗವಾಗಿದ್ದ ಎಲ್ಲರೂ ಆನಂದ್ ಮೋಹನ್ ಬಿಡುಗಡೆಯನ್ನು ಬಯಸಿದ್ದರು. ಊಟ, ವೋಟು ಮತ್ತು ಮನೆಮಗಳು
ಯಾವುದೇ ಕಾರಣಕ್ಕೂ ಅನ್ಯಜಾತಿಯವರಿಗೆ ಹೋಗಬಾರದೆಂಬ ಕಡ್ಡಾಯ ನಿಯಮವಿರುವ ಪ್ರದೇಶದಲ್ಲಿ ಒಬ್ಬ ವಿರೋಧಿ ಪಾತಕಿಯ ಮೇಲೆ ಸಹಾನುಭೂತಿ ತೋರುವುದಕ್ಕೆ ಕಾರಣವೇನಿರಬಹುದು. ಅದಕ್ಕೂ ಕಾರಣವಿದೆ. ಮೊದಲನೆಯದು ೨೦೨೪ರ ಲೋಕಸಭಾ ಚುನಾವಣೆ ಮತ್ತು ೨೦೨೫ ರಲ್ಲಿ ನಡೆಯಲಿರುವ ಬಿಹಾರದ ವಿಧಾನ ಸಭಾ ಚುನಾವಣೆ.
ಎಲ್ಲರೂ ಆನಂದ್ ಮೋಹನ್ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳುವ ಮನಃಸ್ಥಿತಿಯನ್ನು ತಲುಪಿದ್ದಾರೆನಿಸುತ್ತದೆ. ಮುಸ್ಲಿಂ ಮತ್ತು ಯಾದವರ ಮತಬುಟ್ಟಿಯಲ್ಲಿ ೩೦% ಪಾಲು ಲಾಲೂ ಯಾದವ್ ಕಡೆಗಿದೆ. ಅದರೊಂದಿಗೆ ನಿತೀಶ್‌ಕುಮಾರರ ಕೋರಿ-ಕುರ್ಮಿ ಮತಗಳೂ ಸೇರುತ್ತವೆ. ಹೀಗಾದಾಗ ಮೇಲ್ಜಾತಿಯ ೨೦% ಮತದಾರರು ತಮ್ಮನ್ನು ಬೆಂಬಲಿಸಿದರೂ ಸಾಕು ಬಿಹಾರದಲ್ಲಿ ತಮ್ಮದೇ ಅಧಿಕಾರ ಮತ್ತು ಪಾರಮ್ಯ ಎಂಬ ಲೆಕ್ಕಾಚಾರಕ್ಕೆ ಇವರು ಬಂದಂತಿದೆ.
ಹೀಗಾಗಬೇಕೆಂದರೆ ಆನಂದ್ ಮೋಹನ್ ಮತ್ತು ಆತನ ಜಾತಿಯವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಆತ ಶಾಸಕ, ಸಂಸದ ನೂ ಆಗಿದ್ದ ವ್ಯಕ್ತಿ. ಆತನ ಪತ್ನಿ ಲ್ವಲಿ ಆನಂದ್ ಕೂಡ ಸಂಸದೆ. ರಜಪೂತ್ ಭೂಮಿಹಾರ್ ಸಂಘಟನೆಯಲ್ಲಿ ಪ್ರಮುಖವಾಗಿರುವ ಬಿಹಾರ್ ಪೀಪಲ್ಸ್ ಪಾರ್ಟಿಯ ಸ್ಥಾಪಕನೂ ಅದೇ ಆನಂದ್ ಮೋಹನ್. ಇದೆಲ್ಲವೂ ನಿತೀಶ್ ಮತ್ತು ಲಾಲೂ ಅವರಿಗೆ ಚೆನ್ನಾಗಿ ಯೇ ಗೊತ್ತಿದೆ. ರಾಜಕೀಯದಲ್ಲಿ ಯಾರೂ ಶಾಶ್ವತವಾಗಿ ಮಿತ್ರರೂ ಅಲ್ಲ, ಶತ್ರುಗಳೂ ಅಲ್ಲ ಎಂಬ ಹೇಳಿಕೆ ಜನಜನಿತ. ಅದೀಗ ಬಿಹಾರದಲ್ಲಿ ಮತ್ತೆ ನಿಜವಾಗುತ್ತಿದೆ. ರಾಜಕೀಯ ಬೆಂಬಲ ಸಿಕ್ಕಿದರೆ ಕ್ರಿಮಿನಲ್‌ಗಳು ರಾಜ್ಯವನ್ನು ಆಳುವ ಪರಿಸ್ಥಿತಿ ಬರುತ್ತದೆ.
ಹೀಗಾದಾಗ ರಾಷ್ಟ್ರಮಟ್ಟದ ರಾಜಕೀಯವೂ ಹಿನ್ನಡೆ ಕಾಣುತ್ತದೆ. ಕಾನೂನು ಸುವ್ಯವಸ್ಥೆಗೆ ಇದೊಂದು ಕಪ್ಪುಚುಕ್ಕೆ ಕೂಡ ಹೌದು. ನವಪೀಳಿಗೆಯ ರಾಜಕಾರಣಿಗಳೆಲ್ಲರೂ ಇದನ್ನು ವಿರೋಧಿಸುತ್ತಾರೆಂಬ ಭರವಸೆ ನನಗಿದೆ.