ಡಿಜಿಟಲ್ ತಂತ್ರಜ್ಞಾನದ ಅಭಿವೃದ್ಧಿ ಜಗತ್ತನ್ನು ಇನ್ನೊಂದು ಹೆಜ್ಜೆ ಮುಂದಕ್ಕೆ ಒಯ್ಯುವ ಬದಲು, ವಂಚನೆ-ಅಪರಾಧ ಲೋಕಕ್ಕೆ ದೂಡುತ್ತಿರುವುದು ಆತಕಕಾರಿ ಬೆಳವಣಿಗೆ.
ಒಂದೆಡೆ ಡಿಜಿಟಲ್ ವೇದಿಕೆ ಮೂಲಕ ಸಾಲ ನೀಡುವ ಅಕ್ರಮ ಆಪ್ಗಳು, ಸೈಬರ್ ವಂಚನೆಯ ಜಾಲ ದಿನದಿಂದ ದಿನಕ್ಕೆ ಬಲಗೊಳ್ಳುತ್ತಿದೆ. ಇನ್ನೊಂದೆಡೆ ದೇಶವಿರೋಧಿ ಚಟುವಟಿಕೆಗಳಿಗಾಗಿಯೇ ಹೊಸಹೊಸ ಮೆಸೆಂಜರ್ ವೇದಿಕೆಗಳ ಸಂಖ್ಯೆ ಹೆಚ್ಚುತ್ತಿವೆ.
ಎರಡೂ ರೀತಿಯ ಸೈಬರ್ ಅಪರಾಧಗಳೂ ದೇಶದ ಭದ್ರತೆಗೆ ಅಪಾಯಕಾರಿಯೇ. ಇನ್ನೂ ಆತಂಕಕಾರಿ ಸಂಗತಿಯೆಂದರೆ ಇಂಥ ಜಾಲಗಳಿಗೆ ನಮ್ಮ ನೆರೆಯ ವೈರಿ ದೇಶಗಳೆರಡರ ಕುಮ್ಮಕ್ಕು. ಅಕ್ರಮ ಸಾಲದ ಆಪ್ಗಳಿಗೆ ಚೀನಾ ನಿರಂತರ ಬೆಂಬಲ ನೀಡುತ್ತಿದ್ದು, ಆ ದೇಶದಲ್ಲಿಯೇ ಸಾಪ್ಟ್ವೇರ್ಗಳು ಅಭಿವೃದ್ಧಿಗೊಂಡು ಭಾರತದ ಆರ್ಥಿಕತೆಯನ್ನು ದಿಕ್ಕೆಡಿ ಸುತ್ತಿವೆ.
ಇನ್ನು ಜಮ್ಮು-ಕಾಶ್ಮೀರದಂಥ ಸೂಕ್ಷ್ಮ ಪ್ರದೇಶಗಳಲ್ಲಿ ಪಾಕಿಸ್ತಾನಿ ಜನ್ಯ ಅಥವಾ ಆ ದೇಶದಿಂದ ನಿಯಂತ್ರಿತ ಆಪ್ಗಳು ಭಾರತದಲ್ಲಿ ದುಷ್ಕೃತ್ಯದ ಯೋಜನೆಗೆ ಇಂಬು ನೀಡುತ್ತಿವೆ. ಹಲವು ವರ್ಷಗಳಿಂದಲೂ ಅತ್ಯಂತ ವ್ಯವಸ್ಥಿತವಾಗಿ ಇಲ್ಲಿ ಕಾರ್ಯ ನಿರ್ವಹಿಸುತ್ತಲೇ ಬಂದಿರುವ ಎರಡೂ ರೀತಿಯ ಈ ಬೃಹತ್ ಜಾಲ ದೇಶದಲ್ಲಿ ಆಳವಾಗಿ ಬೇರೂರಿದ್ದು ಅದರ ನಿರ್ಮೂಲನೆ ಸುಲಭವಲ್ಲ ಎನ್ನುವ ಮಟ್ಟಕ್ಕೆ ಬೆಳೆದಿದೆ. ಇಂಥ ಜಾಲದ ಒಂದು ಕೊಂಬೆಯಷ್ಟೇ ಮುಂಬೈನಲ್ಲಿ ಗುರುವಾರ ಬಯಲಾದ ಹೈದರಾಬಾದ್ ಮೂಲದ ಶ್ರೀನಿವಾಸ್ ದದಿ ಮತ್ತವನ ತಂಡ.
ದಿನಕ್ಕೆ ಕನಿಷ್ಠ ೫ ಕೋಟಿ ರು.ಗಳಷ್ಟು ಬೃಹತ್ ಮೊತ್ತದ ವಂಚನೆಯನ್ನು ಈ ತಂಡ ಎಸಗುತ್ತಿತ್ತೆಂದರೆ ಅಗಾಧತೆಯನ್ನು ಗಮನಿಸ ಬಹುದು. ಮಾತ್ರವಲ್ಲ, ನೇರವಾಗಿ ಇಲ್ಲಿನ ಹಣ ಚೀನಾಕ್ಕೆ ರವಾನೆಯಾಗಿ ಕ್ರಿಪ್ಟೋಗೆ ಬದಲಾಗುತ್ತಿತ್ತು. ಇಂಥ ಅಕ್ರಮ ಆಪ್ಗಳು ನಮ್ಮ ಆರ್ಥಿಕತೆಯನ್ನೇ ಬುಡಮೇಲು ಮಾಡುವ ದೃಷ್ಟಿಯಿಂದ ನೇರವಾಗಿ ಚೀನಾದಿಂದಲೇ ನಿಯಂತ್ರಣಕ್ಕೊಳ ಪಡುತ್ತಿವೆ.
ಈಶಾನ್ಯದ ಗಡಿಯಲ್ಲಿ ಒಂದಿಲ್ಲೊಂದು ತಗಾದೆ ತೆಗೆಯುವ ಮೂಲಕ ಸದಾ ನೇರ ಸಮರಕ್ಕೆ ಪ್ರೇರೇಪಿಸುತ್ತಿರುವ ಚೀನಾದ ಪಡೆಗಳಲ್ಲದೇ, ಕಣ್ಣಗೆ ಕಾಣಿಸದ ಇಂಥ ಜಾಲಗಳ ಮೂಲಕ ಅವೆಷ್ಟೋ ಚೀನಾದ ಪರೋಕ್ಷ ಸೈನಿಕರು ಈಗಾಗಲೇ ಭಾರತ ದೊಳಕ್ಕೆ ಬೀಡುಬಿಟ್ಟು ಕಾರ್ಯಾಚರಣೆ ನಡೆಸುತ್ತಿದ್ದಾರೆ. ನೇರ ಯುದ್ಧದಿಂದ ಇಂದಿನ ಸಶಕ್ತ ಭಾರತವನ್ನು ಎದುರಿಸಲು ಸಾಧ್ಯವಿಲ್ಲ ಎಂಬುದನ್ನು ಮನಂಗಂಡಿರುವ ವೈರಿ ದೇಶಗಳೆರಡೂ ಒಟ್ಟಾಗಿ ಸೇರಿ ವಿಭಿನ್ನ ಸ್ವರೂಪದಲ್ಲಿ ಇಲ್ಲಿನ ಆತಂತರಿಕ ನೆಮ್ಮದಿಗೆ ಭಂಗ ತರುತ್ತಿರುವುದಂತೂ ಸತ್ಯ.
ದೇಶದ ಜನರ ಹಿತರಕ್ಷಣೆ ಹಾಗೂ ಭದ್ರತೆಯ ದೃಷ್ಟಿಯಿಂದ ಈಗಾಗಲೇ ಕೇಂದ್ರ ಗೃಹ ಸಚಿವಾಲಯವು ಕಠಿಣ ಕಾನೂನು ಕ್ರಮ ತೆಗೆದುಕೊಂಡಿದ್ದು, ಸಾಕಷ್ಟು ಇಂಥ ಅಕ್ರಮ ಆಪ್ಗಳನ್ನು ನಿಷೇಽಸುತ್ತಲೇ ಬಂದಿದೆ. ಆದರೆ ಇವ್ಯಾವುವೂ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ಅಥವಾ ಇನ್ನಾವುದೇ ಸರಕಾರಿ ಸಂಸ್ಥೆಗಳ ನಿಯಂತ್ರಣಕ್ಕೆ ಒಳಪಡದೇ ಇರುವ ಹಿನ್ನೆಲೆಯಲ್ಲಿ ರಾಷ್ಟ್ರದ ಭದ್ರತೆ, ಅರ್ಥವ್ಯವಸ್ಥೆ ದೃಷ್ಟಿಯಿಂದ ಸೂಕ್ತ ಕಾನೂನು ಜಾರಿಗೊಳಿಸುವ ಅಗತ್ಯ ಹಿಂದೆಂದಿಗಿಂತಲೂ ಹೆಚ್ಚಿದೆ.