Saturday, 23rd November 2024

ಕಂಜೂಸುತನ ಮತ್ತು ಸಣ್ಣ ಸಂಗತಿಗಳಿಗೆ ಕೊಡುವ ಮಹತ್ವದ ಮಧ್ಯದ ಫರಕ್ಕು !

ನೂರೆಂಟು ವಿಶ್ವ

vbhat@me.com

‘ಭಟ್ರೇ, ಇದೇನು ಎನ್ವಲಪ್ (ಲಕೋಟೆ) ಕತ್ತರಿಸುತ್ತಾ ಇದ್ದೀರಲ್ಲ? ನಿಮ್ಮ ಅಟೆಂಡರ್‌ಗೆ ಹೇಳಿದ್ದರೆ ಆತ ನೀಟಾಗಿ ಕತ್ತರಿಸುತ್ತಿದ್ದ ಅಲ್ಲವಾ? ಇಂಥ ಸಣ್ಣ ಕೆಲಸವನ್ನು ನೀವು ಮಾಡುವುದಾ? ನೀವು ಒಂದು ಪತ್ರಿಕೆಯ ಮಾಲೀಕರು ತಾನೇ? ಮಾಲೀಕರಾದವರು ಬೇರೆಯವರಿಂದ ಕೆಲಸ ಮಾಡಿಸಬೇಕು, ಅವರೇ ಕೆಲಸ ಮಾಡುತ್ತಾ ಕುಳಿತಿರಬಾರದು’ ಎಂದು ಇತ್ತೀಚೆಗೆ ನನ್ನ ಆಫೀಸಿಗೆ ಬಂದ ಬಹುಕಾಲದ ಸ್ನೇಹಿತರೊಬ್ಬರು ನನಗೊಂದು ‘ಗ್ಯಾನ್’ ಕೊಟ್ಟರು.

‘ಇಲ್ಲ, ಇದು ನನಗೆ ಇಷ್ಟವಾದ ಕೆಲಸ. ಯಾವತ್ತೂ ನಾನು ಎನ್ವಲಪ್ ಅನ್ನು ಬಿಸಾಡುವುದಿಲ್ಲ. ಉಳಿದೆಲ್ಲ ಕಾಗದಗಳಿಗಿಂತ ಅವು ದಪ್ಪವಾಗಿರುತ್ತವೆ. ಬಾಂಡ್ ಕಾಗದಕ್ಕಿಂತ ಬರೆಯಲು ಬಹಳ ಚೆನ್ನಾಗಿ ಆಗುತ್ತದೆ. ಈ ಎಲ್ಲ ಕಾಗದಗಳನ್ನು ಒಂದೇ ಗಾತ್ರದಲ್ಲಿ ಕತ್ತರಿಸಿ ಇಟ್ಟುಕೊಳ್ಳುತ್ತೇನೆ. ನೀವು ಹೇಳಿದಂತೆ ಅಟೆಂಡರ್‌ಗೆ ಈ ಕೆಲಸವನ್ನು ವಹಿಸಬಹುದು. ಆದರೂ ನಾನು ಹಾಗೆ ಮಾಡುವುದಿಲ್ಲ.

ನನ್ನ ಬರವಣಿಗೆಗೆ ಬೇಕಾದ ಕಚ್ಚಾ ಸಾಮಾನುಗಳನ್ನು ನಾನು ಸಿದ್ಧ ಮಾಡಿಕೊಳ್ಳುವುದರಲ್ಲಿ ಇರುವ ಸಂತೋಷವನ್ನು ನಾನೇ ಅನುಭವಿಸುತ್ತೇನೆ. ಬರೆಯುವ ಮುನ್ನ ಟೇಬಲನ್ನು ಅಣಿಗೊಳಿಸುವ ಕೆಲಸವನ್ನು ಬೇರೆಯವರಿಗೆ ಬಿಡಬಹುದು, ಆದರೆ ಅದನ್ನು ನಾವೇ ಮಾಡಿಕೊಳ್ಳುವುದರಲ್ಲಿ ಸಿಗುವ ಆನಂದವೇ ಬೇರೆ. ಅಂಥ ಆನಂದ ಬೇರೆಯವರಿಗೆ ಕೆಲಸ, ನಮಗೆ ಖುಷಿ ಕೊಡುವ ಸಂಗತಿ. ಇದು ತೀರಾ ಸಣ್ಣ ವಿಷಯವಾಗಿರಬಹುದು. ತನ್ನ ವೃತ್ತಿಯನ್ನು ಇಷ್ಟಪಡುವ ವಾಹನ ಚಾಲಕ, ಬೆಳಗ್ಗೆ ಎದ್ದು ವಾಹನವನ್ನು ಸ್ವಚ್ಛಗೊಳಿಸುವ ಕೆಲಸವನ್ನು ಬೇರೆಯವರಿಗೆ ಕೊಡುವುದಿಲ್ಲ. ತಾನೇ ಖುದ್ದು ಮಾಡುತ್ತಾನೆ.

ಅಷ್ಟಕ್ಕೂ ಅದು ಅವನ ಪಾಲಿಗೆ ಒತ್ತಾಯದ ಕೆಲಸವಲ್ಲ. ಅದು ಪ್ರೀತಿಯಿಂದ ಮಾಡುವ ಕಾಯಕ. ಈ ಕೆಲಸವನ್ನು ಬೇರೆಯವರು ಮಾಡಿದರೆ ಆತನಿಗೆ ಸಮಾಧಾನವಿಲ್ಲ. ಕೆಲವು ಕೆಲಸಗಳನ್ನು ನಾವು ಬೇರೆಯವರಿಗೆ ಬಿಡಬಾರದು. ಸಣ್ಣದೋ-ದೊಡ್ಡದೋ, ನಾವೇ ಮಾಡಬೇಕು. ತನ್ನ ಹತ್ಯಾರಗಳನ್ನು ಹರಿತಗೊಳಿಸುವ ಕೆಲಸವನ್ನು ಬಡಗಿ ಬೇರೆಯವರಿಗೆ ಕೊಡುವು ದಿಲ್ಲ. ಆತನಿಗೆ ಮಾತ್ರ ಗೊತ್ತು, ನನ್ನ ಯಾವ ಹಿಡಿತದಲ್ಲಿ, ಯಾವ ಕೋನದಲ್ಲಿ, ಆ ಹತ್ಯಾರ ಚೆನ್ನಾಗಿ ಕತ್ತರಿಸುತ್ತ ದೆಂಬುದು. ಹೀಗಾಗಿ ಆ ಕೆಲಸವನ್ನು ಆತ ಬೇರೆಯವರಿಗೆ ಕೊಡುವುದಿಲ್ಲ.

ನೀವು ಹಿಡಿದ ಬ್ಯಾಟ್ ಎಷ್ಟೇ ಚೆನ್ನಾಗಿರಬಹುದು, ಆದರೆ ವಿರಾಟ್ ಕೊಹ್ಲಿಗೆ ತಾನು ಆಯ್ಕೆ ಮಾಡಿದ ಬ್ಯಾಟುಗಳೇ ಬೇಕು. ಆತನಿಗೆ ಬೇರೆಯವರ ಬ್ಯಾಟ್ ಹಿಡಿದು ಆಡು ಅಂದ್ರೆ ಎಂಜಲ ಬಾಳೆಯಲ್ಲಿ ಊಟ ಮಾಡಿದಂತೆ!

ಹಾಗಂತ ಹೇಳಿದೆ. ನನ್ನ ಸ್ನೇಹಿತರು ಪ್ರತಿಕ್ರಿಯಿಸಲಿಲ್ಲ. ನನ್ನ ಮಾತಿಗೆ ತಲೆದೂಗಿದರು. ಕೆಲವು ಕೆಲಸಗಳನ್ನು ಬೇರೆಯವರಿಗೆ ಮಾಡಕೊಡದೇ, ನಾವೇ ಮಾಡಿಕೊಳ್ಳಬೇಕು. ನನಗೆ ಈ ಎನ್ವಲಪ್ ಕತ್ತರಿಸಿಟ್ಟುಕೊಳ್ಳುವುದನ್ನು ಹೇಳಿಕೊಟ್ಟವರು ವಿಜಯ ಸಂಕೇಶ್ವರ ಅವರು. ಅವು ‘ವಿಜಯ ಕರ್ನಾಟಕ’ದ ಆರಂಭದ ದಿನಗಳು. ಒಂದು ದಿನ ಸಂಕೇಶ್ವರರು ನನ್ನ ಕೋಣೆಗೆ ಬಂದಾಗ, ನನ್ನ ಟೇಬಲ್ ಮೇಲಿರುವ ನೂರಾರು ಎನ್ವಲಪ್ ಮತ್ತು ಪತ್ರಗಳನ್ನು ನೋಡಿ, ಈ ಎನ್ವಲಪ್‌ಗಳನ್ನು ಬಿಸಾಡಬೇಡಿ. ಬರೆಯಲು ಬಳಸಿಕೊಳ್ಳಿ.

ಅಷ್ಟೇ ಅಲ್ಲ, ಆಫೀಸಿನ ಬೇರೆ ಬೇರೆ ವಿಭಾಗಗಳ ಮುಖ್ಯಸ್ಥರಿಗೆ ಒಂದು ಸುತ್ತೋಲೆ ಹೊರಡಿಸಿ, ‘ಯಾರೂ ಎನ್ವಲಪ್‌ಗಳನ್ನು ಬಿಸಾಡಬಾರದು, ಅವುಗಳನ್ನು ಬರೆಯಲು ಬಳಸಿಕೊಳಬೇಕು ಎಂದು ಆದೇಶಿಸಿ’ ಎಂದಿದ್ದರು. ಅದರಿಂದ ಆಫೀಸಿನಲ್ಲಿ ಸಾಕಷ್ಟು ಕಾಗದ ಉಳಿತಾಯವಾಗಿತ್ತು. ಅದಕ್ಕಿಂತ ಮುನ್ನ ಸುಮಾರು ಇಪ್ಪತ್ತು ವರ್ಷಗಳ ಮುನ್ನ, ನನ್ನ ತಂದೆಯವರು, ಯಾವ ಕಾರಣಕ್ಕೂ ಲಕೋಟೆಯನ್ನು ಬಿಸಾಡಕೂಡದೆಂದು ಹೇಳುತ್ತಿದ್ದರು. ಅಂದಿನಿಂದ ಆರಂಭವಾದ ಆ ಹವ್ಯಾಸ ಇಂದಿಗೂ ಮುಂದುವರಿದುಕೊಂಡು ಬಂದಿದೆ. ನನ್ನ ತಂದೆಯವರು, ಮನೆಯಲ್ಲಿರುವ ಎಲ್ಲರಿಗೂ ಅವರೇ ಬಾಳೆಹಣ್ಣುಗಳನ್ನು ಸುಲಿದು, ಹಣ್ಣನ್ನು ನಮಗೆ ಕೊಟ್ಟು, ಸಿಪ್ಪೆಯನ್ನು ಅವರೇ ಇಟ್ಟುಕೊಂಡು, ಆ ಸಿಪ್ಪೆಯನ್ನು ಕೊಟ್ಟಿಗೆಯಲ್ಲಿರುವ ದನ-ಕರುಗಳಿಗೆ ತಿನ್ನಿಸಿ ಬರುತ್ತಿದ್ದರು.

ನಮ್ಮ ಕೈಗೆ ಹಣ್ಣನ್ನು ಕೊಟ್ಟರೆ, ನಾವು ಸಿಪ್ಪೆಯನ್ನು ಬಿಸಾಡಬಹುದೆಂದು ಅವರು ಹಾಗೆ ಮಾಡುತ್ತಿದ್ದರು. ಇದೂ ಒಂಥರ ನಮಗೆ ಬಂದ ಪತ್ರದ ಲಕೋಟೆಯನ್ನು ಕತ್ತರಿಸಿಟ್ಟುಕೊಂಡಂತೆ. ಸಿಪ್ಪೆಯನ್ನು ವೃಥಾ ಬಿಸಾಡಿ ನಿರರ್ಥಕಗೊಳಿಸಬಾರದು ಎಂಬುದು ಒಂದಾದರೆ, ದನ-ಕರುಗಳಿಗೆ ಈ ಸಿಪ್ಪೆಯಂದರೆ ಮೃಷ್ಟಾನ್ನ! ನಮಗೆ ಹಣ್ಣಿನ ಮೇಲೆ ಕಣ್ಣಿದ್ದರೆ, ಅವರಿಗೆ ಸಿಪ್ಪೆಯ ಮೇಲೆ!

ನಾನು ಕಳೆದ ವರ್ಷ ಬರೆದ, ‘ಕೈ ಹಿಡಿದು ನೀ ನಡೆಸು ತಂದೆ: ಅಪ್ಪನ ಆಪ್ತ ಸಲಹೆಗಳು’ ಎಂಬ ಪುಸ್ತಕ ಬಿಡುಗಡೆಯಾಯಿ ತಷ್ಟೆ. ಆ ಕೃತಿಯಲ್ಲಿ ತಂದೆಯಾದವನು ತನ್ನ ಹದಿನೆಂಟರಿಂದ ಇಪ್ಪತ್ತೈದು ವರ್ಷ ಒಳಗಿನ ಮಗನಿಗೆ ಯಾವ ಉಪದೇಶವನ್ನು ಕೊಡಬೇಕು ಎಂಬುದನ್ನು ಚರ್ಚಿಸಿದ್ದೇನೆ. ಅಷ್ಟೇ ಅಲ್ಲ, ಸುಮಾರು ಮುನ್ನೂರೈವತ್ತು ಉಪದೇಶಗಳನ್ನು ಕೊಟ್ಟಿದ್ದೇನೆ. ಈ ಎಲ್ಲ ಉಪದೇಶಗಳನ್ನೂ ನನಗೆ ಬಂದ ಪತ್ರಗಳ, ಕತ್ತರಿಸಿದ ಲಕೋಟೆ ಮೇಲೆ ಬರೆದಿದ್ದು. ಸದಾ ನನ್ನ ಟೇಬಲ್ ಮೂಲೆಯಲ್ಲಿ ಯಾವತ್ತೂ ಹತ್ತಾರು ಲಕೋಟೆ ಕಾಗದಗಳಿರುತ್ತವೆ.

ನೆನಪಾದಾಗ, ಹೊಳೆದಾಗ, ಆ ಲಕೋಟೆಗಳ ಮೇಲೆ ಬರೆದು ಸಂಗ್ರಹಿಸಿಟ್ಟಿದ್ದು ಒಂದು ಪುಸ್ತಕವಾಗಬಹುದು ಎಂಬ ಯೋಚನೆಯೇ ಇರಲಿಲ್ಲ. ಇಂದಿಗೂ ನಾನು ‘ವಕ್ರತುಂಡೋಕ್ತಿ’ ಮತ್ತು ‘ದಾರಿದೀಪೋಕ್ತಿ’ಗಳನ್ನು ಬರೆಯುವುದು ಈ ಲಕೋಟೆ ಕಾಗದಗಳ ಮೇಲೆಯೇ. ಇಲ್ಲದಿದ್ದರೆ ಇವು ಕಸದಬುಟ್ಟಿ ಸೇರಿ ನಿರರ್ಥಕವಾಗಿ ಬಿಡುತ್ತಿದ್ದವು.

ಈ ಕಾರಣದಿಂದ ಮನೆಯಲ್ಲಿ ಮತ್ತು ಆಫೀಸಿನಲ್ಲಿ ಲಕೋಟೆಗಳನ್ನು ಕತ್ತರಿಸಲೆಂದೇ, ಬೇಕಾದಾಗ ಥಟ್ಟನೆ ಕೈಗೆಟಕುವಂತೆ ಅಲ್ಲಲ್ಲಿ ಕತ್ತರಿಗಳನ್ನು ಇಟ್ಟುಕೊಂಡಿದ್ದೇನೆ. ಅಂತರದೇಶಿ ಅಥವಾ ಎನ್ವಲಪ್ ಪತ್ರಗಳನ್ನು ಬೇಕಾಬಿಟ್ಟಿ ಹರಿದು ಹಾಕುವುದಿಲ್ಲ. ‘ಕತ್ತರಿ ಪ್ರಯೋಗ’ ಮಾಡಿಯೇ ಓಪನ್ ಮಾಡುತ್ತೇನೆ. ಕಾರಣ ಇಷ್ಟೇ, ಆ ಕಾಗದಗಳನ್ನು ಗರಿಷ್ಠ ಬಳಸಿಕೊಳ್ಳುವುದು ಮತ್ತು ಲಕೋಟೆ ಅಥವಾ ಅಂತರ ದೇಶಿ ಪತ್ರಗಳ ಮೇಲಿರುವ ಮಾಹಿತಿಯನ್ನು ಕಾಪಿಡುವುದು.

ಪ್ರತಿ ಪತ್ರವೂ ಕೆಲವು ಪ್ರಮುಖ ಮಾಹಿತಿಯನ್ನು ಒಳಗೊಂಡಿರುತ್ತವೆ. ಅವನ್ನು ಬೇಕಾಬಿಟ್ಟಿ ಹರಿಯುವುದರಿಂದ ಆ ಮಾಹಿತಿ ನಾಶವಾಗಿ ಹೋಗಬಹುದು. ಈ ಕಾರಣದಿಂದ ಅವನ್ನು ‘ಕತ್ತರಿ ಪ್ರಯೋಗ’ಕ್ಕೆ ಒಳಪಡಿಸಬೇಕು. ಬೆಂಗಳೂರಿನ ಎಂ.ಜಿ. ರಸ್ತೆಯಲ್ಲಿರುವ ಒಬೆರಾಯ್ ಹೋಟೆಲ್ ಉದ್ಘಾಟನೆಯಾಗಿ ಎರಡು ದಿನಗಳ ನಂತರ ಅದರ ಮಾಲೀಕರಾದ ರಾಯ್ ಬಹದೂರ್ ಮೋಹನ್ ಸಿಂಗ್ ಒಬೆರಾಯ್ ಅವರನ್ನು ಹೋಟೆಲಿನ ಅವರ ಆಫೀಸಿನಲ್ಲಿ ಭೇಟಿಯಾಗಿದ್ದೆ. ಅಂದು ಅವರು ಸಹ ತಮ್ಮ ಆಫೀಸಿನಲ್ಲಿ ಕುಳಿತು ಕಾಗದಗಳನ್ನು ಕತ್ತರಿಸಲೆಂದೇ ಮುಡಿಪಾಗಿದ್ದ ಚಾಕುವಿನಲ್ಲಿ ತಮಗೆ ಬಂದ ಲಕೋಟೆಗಳನ್ನು ಕತ್ತರಿಸುತ್ತಿದ್ದರು.

ಪ್ರತಿ ಲಕೋಟೆಯನ್ನು ಬೆಳಕಿಗೆ ಹಿಡಿದು, ಅದರೊಳಗಿನ ಕಾಗದವನ್ನು ಒಂದು ಮೂಲೆಗೆ ತಳ್ಳಿ, ನಾಜೂಕಾಗಿ ಕತ್ತರಿಸುತ್ತಿದ್ದರು. ಲಕೋಟೆಯ ಒಳಗಿನ ಕಾಗದ ಅಚಾನಕ್ ಆಗಿ ಕತ್ತರಿಸಿ ಹೋಗಬಾರದು ಎಂಬ ಎಚ್ಚರ ಅವರದ್ದಾಗಿತ್ತು. ಕೇಂದ್ರದಲ್ಲಿ ಸಚಿವರಾಗಿದ್ದ ಸಮಯದಲ್ಲಿ, ಅರುಣ್ ಶೌರಿಯವರನ್ನು ಅವರ ಕಚೇರಿಯಲ್ಲಿ ರವಿ ಬೆಳಗೆರೆ ಅವರೊಂದಿಗೆ ಭೇಟಿ ಮಾಡಿದ್ದೆ. ನಮಗಾಗಿ ಎದುರು ನೋಡುತ್ತಿದ್ದ ಅವರು, ಒಂದು ಕೈಯಲ್ಲಿ ಕತ್ತರಿ ಹಿಡಿದು ಲಕೋಟೆಗಳನ್ನು ಕತ್ತರಿಸುತ್ತಿದ್ದರು. ‘ಇದು ಸಂಪಾದಕನಾಗಿದ್ದಾಗ ರೂಢಿಸಿಕೊಂಡ ಅಭ್ಯಾಸ. ಈಗಲೂ ಮುಂದುವರಿದುಕೊಂಡು ಬಂದಿದೆ, ನೋಡಿ.

ನಾನು ಯಾವ ಲಕೋಟೆಗಳನ್ನೂ ಬಿಸಾಡುವುದಿಲ್ಲ. ಟಿಪ್ಪಣಿ ಮಾಡಿಕೊಳ್ಳಲು ಲಕೋಟೆಗೆ ಬಳಸಿದ ಕಾಗದ ಅನುಕೂಲ ವಾಗುತ್ತದೆ. ಅರುಣ್ ಶೌರಿಯವರು ತಮ್ಮ ಮೇಜಿನ ಮೇಲೆ ಇಂಚುಪಟ್ಟಿ, ಮೂರ್ನಾಲ್ಕು ಬಗೆಯ ಕತ್ತರಿ, ಭೂತಗನ್ನಡಿ, ಪೆನ್ಸಿಲ್, ಸ್ಟೇಪಲ್ ರಿಮೂವರ್, ಥ್ರೀಎಂ ಸ್ಟಿಕರ್, ಪೇಪರ್ -ಗ್, ಇರೇಸರ್, ಕಂಪಾಸ್, ಶಾರ್ಪನರ್, ಪೇಪರ್ ಕಟರ್ ನೈ-,
ಬೈನಾಕ್ಯುಲರ್, ಸೊಳ್ಳೆಗಳನ್ನು ಓಡಿಸುವ (ಸಾಯಿಸುವ ಬ್ಯಾಟ್ ಅಲ್ಲ) ಬ್ಯಾಟ್… ಹೀಗೆ ಅನೇಕ ವಸ್ತುಗಳನ್ನಿಟ್ಟುಕೊಂಡಿದ್ದರು.
‘ಎಲ್ಲ ಸರಿ, ಸೊಳ್ಳೆಗಳನ್ನು ಹೊಡೆಯುವ ಬ್ಯಾಟ್ ಏಕೆ?’ ಎಂದು ಶೌರಿಯವರನ್ನು ಕೇಳಿದಾಗ, ‘ನನ್ನ ಏಕಾಗ್ರತೆಗೆ ಭಂಗ
ಮಾಡಲು ಅದೊಂದೇ ಸಾಕು, ನಾನು ಸಂಪಾದಕನಾಗಿದ್ದಾಗ ರೂಢಿಸಿಕೊಂಡ ಅಭ್ಯಾಸ ಹಾಗೆ ಇಲ್ಲಿ ತನಕ ನಡೆದುಕೊಂಡು
ಬಂದಿದೆ’ ಎಂದು ನಗುತ್ತಾ, ‘ಯಾವತ್ತೂ ಲಕೋಟೆಗೆ ಉತ್ಕೃಷ್ಟ ಗುಣಮಟ್ಟದ ಕಾಗದ ಬಳಸುತ್ತಾರೆ.

ದುರದೃಷ್ಟವಶಾತ್ ಅಷ್ಟೊಂದು ಉತ್ತಮ ಗುಣಮಟ್ಟದ ಕಾಗದಗಳನ್ನು ಬರೆಯಲು ಬಳಸುವುದಿಲ್ಲ. ಇವು ಬಾಂಡ್ ಪೇಪರ್
ಗಿಂತ ಉತ್ತಮ ಗುಣಮಟ್ಟದ್ದಾಗಿರುತ್ತದೆ. ಹಾಗೆಯೇ ಆಮಂತ್ರಣ ಪತ್ರಕ್ಕೂ ಬಳಸುವ ಕಾಗದ ಬಹಳ ಚೆನ್ನಾಗಿರುತ್ತದೆ.
ಹೀಗಾಗಿ ನಾನು ಅವುಗಳನ್ನು ಬಿಸಾಡುವುದಿಲ್ಲ. ಟಿಪ್ಪಣಿ ಮಾಡಿಕೊಳ್ಳಲು ಈ ಕಾಗದಗಳು ಉಪಯುಕ್ತ’ ಎಂದು ಹೇಳಿದ್ದರು. ಕೇಂದ್ರ ಸಚಿವರಿಗೆ ಅವರು ಬಯಸಿದ ಕಾಗದ ಅಥವಾ ಸ್ಟೇಷನರಿಗಳನ್ನು ಪಡೆಯುವುದು ಕಷ್ಟವಲ್ಲ.

ಅದಕ್ಕಾಗಿ ಅವರೇನು ತಮ್ಮ ಜೇಬಿನಿಂದ ಹಣ ಕೊಡಬೇಕಿರಲಿಲ್ಲ. ಆದರೂ ಅವರು ಕೈಯಲ್ಲಿ ಕತ್ತರಿ ಹಿಡಿದಿದ್ದರು. ಜಗತ್ತಿನ ಶ್ರೀಮಂತ ರಸ್ತೆಯಲ್ಲಿ ಹೋಗುವಾಗ ಒಂದು ನಾಣ್ಯ ಬಿದ್ದಿರುವುದನ್ನು ಕಂಡರೂ, ಆತ ಅದನ್ನು ನೋಡಿ ಸುಮ್ಮನೆ ಮುಂದೆ ಹೋಗುವುದಿಲ್ಲ. ಹಣವನ್ನು ಎಸೆಯುವವನೂ ಹಣ ಬಿದ್ದಿರುವುದನ್ನು ನೋಡಿದರೆ ಅದನ್ನು ಹೆಕ್ಕದೇ ಬಿಡುವುದಿಲ್ಲ. ವಾರೆನ್ ಬಫೆಟ್, ಮುಕೇಶ್ ಅಂಬಾನಿಗೆ ಒಂದೊಂದು ಡಾಲರ್, ರುಪಾಯಿ ಮಹತ್ವ ಗೊತ್ತು. ಅವರು ಕೋಟ್ಯಂತರ ರುಪಾಯಿಯನ್ನು ಒಂದು ದಿನದಲ್ಲಿ ಖರ್ಚುಮಾಡಬಲ್ಲರು.

ಆದರೆ ರಸ್ತೆಯಲ್ಲಿ ಬಿದ್ದ ಒಂದು ಡಾಲರ್/ ರುಪಾಯಿಯನ್ನು ಧಿಕ್ಕರಿಸಿ ಹೋಗುವಷ್ಟು ಶ್ರೀಮಂತರಲ್ಲ. ದಿನವೂ ಹದಿನಾರು ಪುಟಗಳ ಲಕ್ಷಾಂತರ ಪ್ರತಿಯನ್ನು ಪ್ರಿಂಟ್ ಮಾಡುವ ನನ್ನಂಥವರಿಗೆ ಕಾಗದಕ್ಕೆ ಬರವಿಲ್ಲ. ಒಂದು ದಿನದ ಪತ್ರಿಕೆಯನ್ನು ಪ್ರಿಂಟ್ ಮಾಡುವಾಗ, ವೇಸ್ಟ್ ಆಗುವ ಕಾಗದಗಳನ್ನು ಮತ್ತು ನ್ಯೂಸ್ ಪ್ರಿಂಟ್ ರೀಲಿನ ಕೊನೆಯಲ್ಲಿ ಉಳಿದ ಭಾಗವನ್ನು ಎತ್ತಿಕೊಂಡರೆ, ಹತ್ತಾರು ವರ್ಷಗಳ ಕಾಲ ಬರೆಯಬಹುದು. ಆದರೆ ಒಂದು ಪುಟ್ಟ ಕಾಗದವನ್ನೂ ಬಿಸಾಡಲು ಮನಸ್ಸು ಬರುವುದಿಲ್ಲ. ಒಂದು ಕಡೆ ಮುದ್ರಿತವಾಗಿ, ಇನ್ನೊಂದು ಮಗ್ಗುಲು ಖಾಲಿ ಇರುವ ಹ್ಯಾಂಡ್ ಬಿಲ್ ಅನ್ನು ಕಂಡರೆ ಎತ್ತಿಟ್ಟುಕೊಳ್ಳಬೇಕು ಎನಿಸುತ್ತದೆ. ಇದು ಕಂಜೂಸುತನ ಅಥವಾ ಸಣ್ಣಬುದ್ಧಿಯಲ್ಲ.

ಆದರೆ ಸಣ್ಣ ವಸ್ತು, ಸಂಗತಿಗಳಿಗೂ ಮಹತ್ವ ನೀಡುವ ಸೂಕ್ಷ್ಮ ಸಂವೇದನೆ. ಒಂದು ರುಪಾಯಿ, ಒಂದೊಂದು ರುಪಾಯಿಯೇ ತಮ್ಮನ್ನು ಈ ಹಂತಕ್ಕೆ ತಂದಿದ್ದು ಎನ್ನೋದು ಅಂಬಾನಿಗೆ ಅರ್ಥವಾಗುವ ಹಾಗೆ ಒಬ್ಬ ರಾಜಕಾರಣಿಗೆ ಅರ್ಥವಾಗುವುದಿಲ್ಲ.
ನಾನು ಕೆಲವು ವರ್ಷಗಳ ಹಿಂದೆ ಕೇಳಿದ ಒಂದು ಪ್ರಸಂಗವನ್ನು ನಿಮಗೆ ಹೇಳಬೇಕು. ಒಮ್ಮೆ ಡಾಲ್ಡಾ (ವನಸ್ಪತಿ ತುಪ್ಪ) ತಯಾರಿಸುವ ಹಿಂದೂಸ್ತಾನ್ ಯುನಿಲಿವರ್ ಕಂಪನಿಯ ಮುಖ್ಯಸ್ಥರು, ಕೇರಳದ ಒಂದು ಸಣ್ಣ ಹಳ್ಳಿಗೆ ಭೇಟಿ ನೀಡಿದ್ದರು. ಡಾಲ್ಡಾ ಬಗ್ಗೆ ಜನರ ಅಭಿಪ್ರಾಯ ಹೇಗಿದೆ ಎಂಬುದನ್ನು ಸಾಕ್ಷಾತ್ ತಿಳಿದುಕೊಳ್ಳುವುದು ಅವರ ಭೇಟಿಯ ಉದ್ದೇಶವಾಗಿತ್ತು. ‘ನಿಮ್ಮ ಅಂಗಡಿಯೊಳಗೆ ಒಂದು ಸುತ್ತು ಹಾಕಬಹುದೇ?’ ಎಂದು ಕಿರಾಣಿ ಅಂಗಡಿ ಮಾಲೀಕನಿಗೆ ಕೇಳಿದರು.

ಆತ ‘ಆಗಬಹುದು’ ಎಂದು ಹೇಳಿದ. ಅಲ್ಲಿ ಅವರಿಗೆ ಡಾಲ್ಡಾ ಕಾಣಿಸಲಿಲ್ಲ. ತಾವು ಯಾರು ಎಂಬುದನ್ನು ಅವರು ಕಿರಾಣಿ ಅಂಗಡಿ ಮಾಲೀಕನಿಗೆ ಹೇಳಿರಲಿಲ್ಲ. ಹಿಂದೂಸ್ತಾನ್ ಯುನಿಲಿವರ್ ಡಬ್ಬದ ಮೇಲೆ ಒಂದು ಹಾಸು ಧೂಳು ಕುಳಿತಿತ್ತು. ಅದನ್ನು ನೋಡಿ ಅವರಿಗೆ ಬಹಳ ಬೇಸರವೆನಿಸಿತು. ತಮ್ಮ ಕಂಪನಿಯ ಪ್ರಾಡಕ್ಟ್ ಈ ಸ್ಥಿತಿಯಲ್ಲಿದ್ದರೆ ಯಾರು ಖರೀದಿಸುತ್ತಾರೆ ಎಂದು ಅವರಿಗೆ ಅನಿಸಿತು. ತಕ್ಷಣ ಅವರು ತಮ್ಮ ಕೋಟಿನ ಕಿಸೆಯಲ್ಲಿದ್ದ ಬಿಳಿ, ಗರಿಗರಿ ಕರ್ಚೀಫನ್ನು ಹೊರ ತೆಗೆದು ಆ ಡಬ್ಬದ ಮೇಲೆ ಕುಳಿತಿದ್ದ ಧೂಳನ್ನು ಚೆನ್ನಾಗಿ ತಿಕ್ಕಿ ತಿಕ್ಕಿ ಒರೆಸಿ, ಹೊಳೆಯುವಂತೆ ಮಾಡಿದರು.

ಅಷ್ಟಾದರೂ ಅವರಿಗೆ ಸಮಾಧಾನವಾಗಲಿಲ್ಲ. ತಮ್ಮ ಕೋಟಿನ ಕೆಳಕಿಸೆಯೊಳಗೆ ಕೈಹಾಕಿ ಡಾಲ್ಡಾ ಡಬ್ಬವನ್ನು ಕೋಟಿನಿಂದಲೇ ಮತ್ತೊಮ್ಮೆ ಒರೆಸಿದರು! ಇದನ್ನು ಅಂಗಡಿಯ ಕೆಲಸಗಾರರು ಗಮನಿಸುತ್ತಲೇ ಇದ್ದರು. ಅವರಿಗೆ ಆಶ್ಚರ್ಯ! ಅವರೇಕೆ ಹೀಗೆ ಮಾಡುತ್ತಿದ್ದಾರೆ? ಹೇಳಿದ್ದರೆ ನಾವೇ ಮಾಡುತ್ತಿದ್ದೆವಲ್ಲ? ಎಂದುಕೊಂಡರು. ಆ ಕೋಟುಧಾರಿ ವ್ಯಕ್ತಿಯ ಜತೆ ಮಾತಾಡಿದಾಗಲೇ ಗೊತ್ತಾಗಿದ್ದು ಅವರು ಡಾಲ್ಡಾ ಕಂಪನಿ ಮುಖ್ಯಸ್ಥರೆಂದು.

ಸಾಮಾನ್ಯವಾಗಿ ಡಾಲ್ಡಾ ಕಂಪನಿಯ ಮಾರಾಟಗಾರರು ಪ್ರತಿ ಅಂಗಡಿಗೂ ಹೋಗಿ, ಡಾಲ್ಡಾ ಸೇರಿದಂತೆ ಇನ್ನಿತರ ಪ್ರಾಡಕ್ಟ್‌ಗಳನ್ನು ನೋಡಿ, ಸರಿಯಾದ ಜಾಗದಲ್ಲಿ ಇಟ್ಟಿದ್ದಾರಾ, ಧೂಳು ಕುಳಿತಿದೆಯಾ, ಡೇಟ್ ಭಾರವಾಗಿದೆಯಾ ಮುಂತಾದ
ಸಂಗತಿಗಳನ್ನು ಪರೀಕ್ಷಿಸುತ್ತಾರೆ. ಆದರೆ ಈ ಕಿರಾಣಿ ಅಂಗಡಿಯಲ್ಲಿ ಆ ದೋಷ ಮಾತ್ರ ಸೇಲ್ಸ್ ಟೀಮ್ ಕಣ್ಣಿಗೆ ಬಿದ್ದಿರಲಿಲ್ಲ.

ಆದರೆ ಕಂಪನಿಯ ಮುಖ್ಯಸ್ಥರು ಸೇಲ್ಸ್ ಟೀಮಿನ ಕಟ್ಟಕಡೆಯ ಸಿಬ್ಬಂದಿ ಮಾಡುವ ಕೆಲಸವನ್ನು ಅತ್ಯಂತ ಶ್ರದ್ಧೆಯಿಂದ ಮಾಡಿದ್ದರು. ಅಂಗಡಿಯವನಿಗೆ ಒಂದು ಒರೆಸುವ ಬಟ್ಟೆ ಕೊಡು ಅಂತ ಹೇಳಿದ್ದರೂ ಆತನೇ ಬಂದು ಡಾಲ್ಡಾ ಡಬ್ಬವನ್ನು ಒರೆಸಿ, ಸ್ವಚ್ಛಗೊಳಿಸುತ್ತಿದ್ದ. ಆದರೆ ಸಂಸ್ಥೆಯ ಮುಖ್ಯಸ್ಥರೇ ಆ ಕೆಲಸಕ್ಕೆ ನಿಂತಿದ್ದರು. ಸೇಲ್ಸ್ ಟೀಮ್‌ಗೆ ಯಾವ ಸಂದೇಶ ರವಾನೆ ಯಾಗಬೇಕೋ ಅದು ರವಾನೆಯಾಗಿತ್ತು.

ಕಂಪನಿ ಮುಖ್ಯಸ್ಥರು ಯಾರ ಮೇಲೂ ರೇಗಾಡಿರಲಿಲ್ಲ, ಕಿರುಚಾಡಿರಲಿಲ್ಲ. ಆದರೆ ಇಡೀ ದೇಶದಲ್ಲಿರುವ ತನ್ನ ಸಿಬ್ಬಂದಿಗೆ ಒಂದೂ ಮಾತಾಡದೇ, ಯಾವಜ್ಜೀವ ನೆನಪಿಟ್ಟುಕೊಳ್ಳುವ ಪಾಠವನ್ನು ಹೇಳಿದ್ದರು. ಈ ಘಟನೆ ನಡೆದು ಅರ್ಧ ಶತಮಾನವೇ ಕಳೆದಿರಬೇಕು. ಆದರೂ ಇಂದಿಗೂ ದೊಡ್ಡ ಕಂಪನಿಗಳಲ್ಲಿ ಸೇಲ್ಸ್ ಟೀಮಿನ ಮುಖ್ಯಸ್ಥರು, ಈ ಪ್ರಸಂಗವನ್ನು ಒಂದು ಆದರ್ಶದ ನಿದರ್ಶನವಾಗಿ ನೀಡುವುದುಂಟು.

ಒಂದು ಸಂಸ್ಥೆಯನ್ನು ಕಟ್ಟುವಾಗ ಆರಂಭದಲ್ಲಿ ಸಣ್ಣ ಸಣ್ಣ ಸಂಗತಿಗಳೇ ಮುಖ್ಯವಾಗುತ್ತವೆ. ವಾಸ್ತವವೆಂದರೆ, ನಂತರವೂ ಆ ಸಣ್ಣ ಸಂಗತಿಗಳೇ ಸಂಸ್ಥೆಯನ್ನು ಕಾಪಾಡುತ್ತವೆ. ಅದೇ ಮುಂದೆ ಆದರ್ಶದ ತೋರುಬೆರಳುಗಳಾಗುತ್ತವೆ. ಬಹಳ ಜನ ಸಣ್ಣ ಕೆಲಸ ಮಾಡಲು ಮುಂದಾದರೆ ತನ್ನನ್ನು ಕಂಜೂಸು ಎಂದು ಭಾವಿಸಬಹುದು ಎಂದು ಅಂದುಕೊಳ್ಳುತ್ತಾರೆ. ಆದರೆ ಕಂಜೂಸುತನಕ್ಕೂ, ಸಣ್ಣ ಸಂಗತಿಗಳಿಗೆ ಕೊಡುವ ಮಹತ್ವಕ್ಕೂ ನಡುವೆ ಭೂಮಿ-ಆಕಾಶದ ಅಂತರವಿರುವುದು ಗೊತ್ತಿರುವು ದಿಲ್ಲ. ಕಂಜೂಸು ಆಗಿ ಅಂತ ಹೇಳುವುದಿಲ್ಲ. ಆದರೆ ಸಣ್ಣ ಸಣ್ಣ ಸಂಗತಿಗಳಿಗೆ ಮಹತ್ವ ಕೊಡಲೇಬೇಕು.