Saturday, 23rd November 2024

ಇದು ಬಿಜೆಪಿ, ಜೆಡಿಎಸ್‌ಗೆ ಎಚ್ಚರಿಕೆ ಗಂಟೆ, ಆತ್ಮಾವಲೋಕನಕ್ಕೆ ಸಕಾಲ !

ಇದೇ ಅಂತರಂಗ ಸುದ್ದಿ

vbhat@me.com

ಈ ಬಾರಿ ಕರ್ನಾಟಕದ ಮತದಾರರು ಸ್ಪಷ್ಟ ತೀರ್ಪನ್ನು ನೀಡಿದ್ದಾರೆ. ನಿಸ್ಸಂದೇಹವಾಗಿ, ಕಾಂಗ್ರೆಸ್ ಪಕ್ಷಕ್ಕೆ ಭಾರಿ ಬಹುಮತ (೧೩೬+೧= ೧೩೭) ವನ್ನು ನೀಡಿದ್ದಾರೆ. ಪ್ರಚಾರ ಸಂದರ್ಭದಲ್ಲಿ ತಾವು ಗೆಲ್ಲುವ ಸೀಟುಗಳ ಬಗ್ಗೆ ಹೇಳುವುದು ಬೇರೆ, ಆದರೆ ಸ್ವತಃ ಕಾಂಗ್ರೆಸ್ ನಾಯಕರೂ ಈ ಫಲಿತಾಂಶವನ್ನು ನಿರೀಕ್ಷಿಸಿರಲಿಲ್ಲ.

ಹಾಗೆ ತಮ್ಮ ಪಕ್ಷ ಹೀನಾಯವಾಗಿ ಸೋಲುವುದೆಂದು ಬಿಜೆಪಿ ಮತ್ತು ಜೆಡಿಎಸ್ ನಾಯಕರೂ ಅಂದುಕೊಂಡಿರಲಿಲ್ಲ. ಅತಂತ್ರ ವಿಧಾನಸಭೆಗೆ ಅವಕಾಶ ನೀಡದೇ, ಒಂದೇ ಪಕ್ಷದ ಆಡಳಿತಕ್ಕೆ ಅನುವಾಗುವಂತೆ, ರಾಜ್ಯದ ಮತದಾರ ಅತ್ಯಂತ ಪ್ರಬುದ್ಧವಾಗಿ ಮತ ಚಲಾಯಿಸಿರುವುದು ಗೋಡೆಯ ಮೇಲಿನ ಬರಹದಷ್ಟು ಸುಸ್ಪಷ್ಟ. ಮತದಾರನ ಆದೇಶವನ್ನು ಪ್ರಶ್ನಿಸುವಂತೆ ಇಲ್ಲ. ಧೀಮಾಕು, ಅಹಂಕಾರ, ಅಽಕಾರದ ಮದವನ್ನು ತಲೆಗೇರಿಸಿಕೊಂಡವರಿಗೆಲ್ಲ ಮತದಾರ ಐದು ವರ್ಷ ವಿಶ್ರಾಂತಿ ನೀಡಿದ್ದಾನೆ.

ವಿಧಾನಸಭೆ ಸ್ಪೀಕರ್ ಸೇರಿದಂತೆ, ಬಸವರಾಜ ಬೊಮ್ಮಾಯಿ ಸರಕಾರದ ಒಂದು ಡಜನ್ ಮಂತ್ರಿಗಳು ಸೋತಿರುವುದನ್ನು ಗಮನಿಸಿದರೆ, ಆಡಳಿತ ವಿರೋಧಿ ಅಲೆ ಅದೆಷ್ಟು ಪ್ರಬಲವಾಗಿತ್ತು ಎಂಬುದು ಗೊತ್ತಾಗುತ್ತದೆ. ೨೨೪ ರ ಪೈಕಿ, ೧೬೦ ಸ್ಥಾನಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಸೋತಿರುವುದು ಆ ಪಕ್ಷದ ಹೀನಾಯ ಸಾಧನೆಯನ್ನು ತೋರಿಸುತ್ತದೆ. ನೀವು ಇಷ್ಟು ವರ್ಷ ಜನಸೇವೆ ಮಾಡಿದ್ದು ಸಾಕು, ಮನೆಗೆ ಹೋಗಿ ಎಂದು ಮತದಾರ ನಿರ್ದಾಕ್ಷಿಣ್ಯವಾಗಿ ಹೇಳಿದ್ದಾನೆ.

ಅಂತೂ ಕರ್ನಾಟಕದಲ್ಲಿ, ಬಿಜೆಪಿಯ ಮೂಲ ಪ್ರಚಾರ  ಮಂತ್ರದಲ್ಲಿ ಒಂದಾಗಿದ್ದ ‘ಡಬಲ್ ಎಂಜಿನ್’ ಸರಕಾರ ಕೆಟ್ಟು
ಹೋದಂತಾ ಗಿದೆ. ಕಾಂಗ್ರೆಸ್ ೧೩೫ ಸ್ಥಾನಗಳಲ್ಲಿ ಜಯಭೇರಿ ಬಾರಿಸಿರುವುದನ್ನು ನೋಡಿದರೆ, ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಅದೆಷ್ಟು ವ್ಯಾಪಕವಾಗಿತ್ತು ಎಂಬುದನ್ನು ಅರ್ಥೈಸಿಕೊಳ್ಳಬಹುದು. ಈ ಅಲೆಯಲ್ಲಿ ಬಿಜೆಪಿ ತರಗೆಲೆಯಂತೆ ಕೊಚ್ಚಿಕೊಂಡು ಹೋಗಿದೆ.

ಕಳೆದ ಮೂರು ವರ್ಷಗಳ ಬಿಜೆಪಿ ಆಡಳಿತದಿಂದ ಜನ ರೋಸಿ ಹೋಗಿದ್ದು ಫಲಿತಾಂಶದಿಂದ ಢಾಳಾಗಿ ಎದ್ದು ಕಾಣುತ್ತದೆ.
‘ಇದು ನಲವತ್ತು ಪರ್ಸೆಂಟ್ ಸರಕಾರ’ಎಂದು ಹಾದಿ-ಬೀದಿಯಲ್ಲಿ ಹೋಗುವವರು ಬಿಜೆಪಿ ಸರಕಾರದ ವಿರುದ್ಧ ಮಾತಾಡಲಾ  ರಂಭಿಸಿದ್ದರು. ಇದನ್ನು ಜನ ಸಾಮಾನ್ಯನಿಗೆ ಮನವರಿಕೆ ಮಾಡಿಕೊಡಲು ಕಾಂಗ್ರೆಸ್ ಯಶಸ್ವಿಯಾಯಿತು. ನಲವತ್ತು ಪರ್ಸೆಂಟ್ ಕಮಿಷನ್ ಸರಕಾರ ಎಂದು ಕಾಂಗ್ರೆಸ್,ಬಿಜೆಪಿ ಸರಕಾರದ ವಿರುದ್ಧ ಸುಮಾರು ಒಂದೂವರೆ ವರ್ಷಗಳಿಂದ
ಸತತ ಟೀಕೆಗಳ ಧಾರೆಯನ್ನೇ ಸುರಿಸಿತು. ಹಾಗೆಂದು ತನ್ನ ಆರೋಪಗಳಿಗೆ ಯಾವುದೇ ಆಧಾರಗಳನ್ನು ಒದಗಿಸಲಿಲ್ಲ. ಆದರೂ ಜನಸಾಮಾನ್ಯರ ಮನಸ್ಸಿನಲ್ಲಿ ‘ಬಿಜೆಪಿ ಭ್ರಷ್ಟ ಸರಕಾರ’ ಎಂಬ ಭಾವನೆಯನ್ನು ಮೂಡಿಸಲು ಯಶಸ್ವಿಯಾಯಿತು.

ಕಾಂಗ್ರೆಸ್ಸಿನ ಈ ದಾಳಿಯನ್ನು ಸಮರ್ಥವಾಗಿ ಎದುರಿಸಲು, ಪ್ರತಿತಂತ್ರ ಹೂಡಲು, ಬಿಜೆಪಿ ವಿಫಲವಾಯಿತು. ಸ್ವತಃ ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಮತ್ತು ಭಾರತ ರಾಜಕಾರಣದ ಚಾಣಕ್ಯ ಅಮಿತ್ ಶಾ ಹಾಗೂ ಹಿಂದುತ್ವ ಮುಕುಟಮಣಿ ಯೋಗಿ ಆದಿತ್ಯನಾಥ್ ಬಿರುಸಿನ ಪ್ರಚಾರ, ರೋಡ್ ಶೋ ಮಾಡಿದರೂ ಮತದಾರನ ಮೇಲೆ ಯಾವುದೇ ಪ್ರಭಾವ ಬೀರದೇ ಹೋದದ್ದು ಗಮನಾರ್ಹ. ಮೋದಿ ರೋಡ್ ಶೋ ಮಾಡಿದ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಸೋತಿರುವುದನ್ನು ನೋಡಿದರೆ, ಮೋದಿ ಗುಮ್ಮ ಪ್ರತಿಸ್ಪರ್ಧಿಗಳನ್ನು ಹೆದರಿಸಲು ವಿಫಲವಾಗಿದ್ದಂತೂ ದಿಟ. ಸ್ಥಳೀಯ ನಾಯಕರನ್ನು ಕಡೆಗಣಿಸಿ, ಅತಿಯಾಗಿ ಮೋದಿಯವರ ಮೇಲೆ ಅವಲಂಬಿತವಾಗಿದ್ದು ಬಿಜೆಪಿಗೆ ಹೆಚ್ಚಿನ ಪ್ರಯೋಜನವೂ ಆಗಲಿಲ್ಲ.

ಒಂದು ವೇಳೆ ಮೋದಿ-ಶಾ-ಯೋಗಿ ಪ್ರಚಾರ ಮಾಡದಿದ್ದರೆ ಏನಾಗುತ್ತಿತ್ತು ಎಂಬುದು ಊಹೆಗೆ ಬಿಟ್ಟ ವಿಚಾರ. ಬಿಜೆಪಿಯ ಕೆಲವು ಸ್ಥಾಪಿತ ಸಿದ್ಧಾಂತ, ಸೂತ್ರಗಳು ಕರ್ನಾಟಕ ದಲ್ಲಿ ವರ್ಕ್ ಆಗಿಲ್ಲ. ಗುಜರಾತ್ ಮಾದರಿ ಕರ್ನಾಟಕಕ್ಕಲ್ಲ ಎಂಬುದು ಸಾಬೀತಾಗಿದೆ. ಗುಜರಾತಿನಲ್ಲಿ ಇಂದಿಗೂ ಮೋದಿಯೇ ಅದ್ವಿತೀಯ. ಆದರೆ ಆ ಸೂತ್ರ ಕರ್ನಾಟಕಕ್ಕೇ ಅನ್ವಯ ಆಗಿಲ್ಲ. ಯಡಿಯೂರಪ್ಪವರನ್ನು ಕಡೆಗಣಿಸಿದ್ದು ಬಿಜೆಪಿಗೆ ನುಂಗಲಾರದ ತುತ್ತು. ಅಷ್ಟಕ್ಕೂ ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಸಿ, ಬಿಜೆಪಿ ಏನು ಸಾಧಿಸಿತು? ಅವರನ್ನು ಕೆಳಗಿಳಿಸುವ ಅಗತ್ಯವಾದರೂ ಏನಿತ್ತು? ಬಿಜೆಪಿ ಅಂದಿ
ನಿಂದಲೇ ತನ್ನ ಸಮಸ್ಯೆಯ ಕೂಪವನ್ನು ತಾನೇ ತೋಡಿಕೊಳ್ಳಲು ಆರಂಭಿಸಿತು.

ಬಸವರಾಜ ಬೊಮ್ಮಾಯಿ ಅವರನ್ನು ಸಿಎಂ ಸ್ಥಾನದಲ್ಲಿ ಕುಳ್ಳಿರಿಸಿ, ಬಿಜೆಪಿ ಸಾಧಿಸಿದ್ದಾದರೂ ಏನು ಎಂದು ಕೇಳಿದರೆ,
ಈಗಿನ ಫಲಿತಾಂಶ ಎಂದು ಹೇಳದೇ ವಿಧಿಯಿಲ್ಲ. ಕರ್ನಾಟಕದಲ್ಲಿ ಬಿಜೆಪಿ ಯನ್ನು ಕಟ್ಟಿ, ಬೆಳೆಸಿದ, ಯಡಿಯೂರಪ್ಪನವರ
ಕಡೆಗಣನೆಗೆ ಪಕ್ಷ ಬಲವಾದ ಪೆಟ್ಟು ತಿಂದಿದೆ.

ಮೋದಿ ಮಂತ್ರ ಲೋಕಸಭಾ ಚುನಾವಣೆಗೆ ಮಾತ್ರ ಸೀಮಿತ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಅದು ವಿಧಾನಸಭಾ
ಚುನಾವಣೆಯಲ್ಲೂ ನಡೆಯುವಂತಿದ್ದರೆ, ಭಾರತದ ಎಲ್ಲಾ ರಾಜ್ಯಗಳಲ್ಲಿ ಅಥವಾ ಬಹುತೇಕ ರಾಜ್ಯಗಳಲ್ಲಿ ಬಿಜೆಪಿ ಸರಕಾರವೇ
ಇರಬೇಕಿತ್ತು. ಆದರೆ ಹತ್ತೊಂಬತ್ತು ರಾಜ್ಯಗಳಲ್ಲಿ ಬಿಜೆಪಿ ಸರಕಾರ ಇಲ್ಲ ಎನ್ನುವುದೂ ಅಷ್ಟೇ ಸತ್ಯ. ಆ ಸಾಲಿಗೆ ಈಗ ಕರ್ನಾಟಕವೂ ಸೇರಿದಂತಾಗಿದೆ.

ಮೋದಿ ಮತ್ತು ಅಮಿತ್ ಶಾ ಎಂಬ ‘ಗುಮ್ಮ’ಗಳನ್ನು ತೋರಿಸಿ ಏನೇ ಮಾಡಿದರೂ ಜನ ಅದನ್ನು ಒಪ್ಪಿಕೊಳ್ಳುತ್ತಾರೆ ಎಂದು ಬಿಜೆಪಿ ನಾಯಕರು ಭಾವಿಸಿದ್ದರೆ ಅದು ಸುಳ್ಳು ಎಂದು ಈ ಸಲದ ಚುನಾವಣೆ ಮನವರಿಕೆ ಮಾಡಿಕೊಟ್ಟಿದೆ. ಚುನಾವಣೆಯ ಅಂಚಿನಲ್ಲಿ ವಿವೇಚನಾರಹಿತ ಪ್ರಯೋಗಗಳನ್ನು ಮಾಡಿದ್ದು ಬಿಜೆಪಿಗೆ ಮುಳುವಾಯಿತು. ಅಭ್ಯರ್ಥಿಗಳ ಆಯ್ಕೆಯಲ್ಲಿ ಪಕ್ಷ ಹಲವಾರು ಪ್ರಮಾದಗಳನ್ನು ಕೈಯಾರ ಮಾಡಿಕೊಂಡಿತು. ತಾವು ಏನು ಮಾಡಿಯೂ ದಕ್ಕಿಸಿಕೊಳ್ಳುತ್ತೇವೆ ಎಂಬ ಕೆಲವು ನಾಯಕರ ಅಹಂಕಾರದ ನಡೆ ಪಕ್ಷಕ್ಕೆ ಮುಳುವಾಗಿದ್ದು ಖರೆ. ಅವರು ಮಾಡಿದ ಉಸಾಬರಿಯನ್ನು ‘ಮೋದಿ ಮಂತ್ರ’ ಸಹ ಬಚಾವ್ ಮಾಡಲಿಲ್ಲ.

ರಾಜ್ಯದ ಮತದಾರ ‘ಆಮ್ ಆದ್ಮಿ ಪಕ್ಷದ ಚಿಹ್ನೆ’ (ಪೊರಕೆ)ಯನ್ನು ಹಿಡಿದು ಬಿಜೆಪಿಯನ್ನು ಗುಡಿಸಿ ಹಾಕಿದ್ದಾನೆ. ಈ ಸಲದ ಚುನಾವಣೆಯನ್ನು ಕಾಂಗ್ರೆಸ್ ಅತ್ಯಂತ ವ್ಯವಸ್ಥಿತವಾಗಿ ನಡೆಸಿದ್ದು ಮೇಲ್ನೋಟಕ್ಕೆ ಎದ್ದು ಕಾಣುತ್ತದೆ. ಅಭ್ಯರ್ಥಿಗಳ
ಆಯ್ಕೆಯಲ್ಲಿ ಅದು ಅತೀವ ಜಾಣ್ಮೆ ಮೆರೆಯಿತು. ಇದರ ಜತೆಗೆ ಆ ಪಕ್ಷದ ‘ಗ್ಯಾರಂಟಿ’ಗಳು ನಿಸ್ಸಂದೇಹವಾಗಿ ಮತಗಳನ್ನು ಗ್ಯಾರಂಟಿಯಾಗಿಸಿದವು. ಯಾವ ಪಕ್ಷಕ್ಕೂ ಅಲೆ ಇಲ್ಲದಿದ್ದರೂ, ಕಾಂಗ್ರೆಸ್ ಅಷ್ಟೊಂದು ಸ್ಥಾನಗಳನ್ನು ಪಡೆದಿರುವುದನ್ನು ನೋಡಿದರೆ, ‘ಐದು ಗ್ಯಾರಂಟಿಗಳು’ ಸಕತ್ ವರ್ಕ್ ಮಾಡಿದಂತೆ ಕಾಣುತ್ತದೆ.

ಬಿಜೆಪಿ ಭದ್ರಕೋಟೆ ಎನಿಸಿದ್ದ ಚಿಕ್ಕಮಗಳೂರು, ಕೊಡಗು, ಬೆಳಗಾವಿ, ವಿಜಯಪುರ, ಹಾವೇರಿ ಮುಂತಾದ ಜಿಲ್ಲೆಗಳಲ್ಲಿ ಕಾಂಗ್ರೆಸ್ ಅಭೂತಪೂರ್ವ ಗೆಲುವು ಸಾಧಿಸಿರುವುದನ್ನು ನೋಡಿದರೆ, ‘ಗ್ಯಾರಂಟಿ’ ಬೀಜಕ್ಕೆ ಭಾರಿ ಫಸಲು ಬಂದಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಗ್ಯಾರಂಟಿ ಸ್ಕೀಮು ಕಾಂಗ್ರೆಸ್ಸಿಗೆ ಲಾಭದಾಯಕವಾಗಿ ಪರಿಣ ಮಿಸಬಹುದು ಎಂದು ಎಚ್ಚೆತ್ತ ಬಿಜೆಪಿ, ಮತದಾನಕ್ಕೆ ಹತ್ತು ದಿನಗಳಿರುವಾಗ, ತಾನೂ ‘ಉಚಿತ’ಗಳನ್ನು ಉಣಬಡಿಸಲು ಮುಂದಾದರೂ ಅದು ಸ್ವಲ್ಪವೂ ಪರಿಣಾಮ ಬೀರಲಿಲ್ಲ. ಈ ಗ್ಯಾರಂಟಿಗಳನ್ನು ಪಕ್ಷ ಹೇಗೆ ಜಾರಿಗೊಳಿಸುವುದೋ ಅದು ನಂತರದ ಪ್ರಶ್ನೆ. ಆದರೆ ಅಧಿಕಾರವನ್ನು ಪ್ರತಿಸ್ಪರ್ಧಿಗಳ ಕೈಯಿಂದ ಎಗರಿಸಿಕೊಂಡು ಹೋಗುವಲ್ಲಿ ‘ಗ್ಯಾರಂಟಿ’ಗಳು ನೆರವಾಯಿತು.

ಕಾಂಗ್ರೆಸ್ಸಿನ ಗ್ಯಾರಂಟಿಗಳನ್ನು ನೆಚ್ಚಿಕೊಂಡರೆ, ಕೆಲಸ ಮಾಡದೇ, ಶ್ರಮಪಡದೇ ನಿರಾತಂಕವಾಗಿ ಇರಬಹುದು ಎಂಬ ಭಾವನೆ ಹೆಚ್ಚಿನವರಲ್ಲಿ ಬಂದಿದ್ದರೆ ಆಶ್ಚರ್ಯವಿಲ್ಲ. ಇದಕ್ಕೆ ಪ್ರತಿಯಾಗಿ ಬಿಜೆಪಿ ಘೋಷಿಸಿದ ‘ಉಚಿತ’ ಕಾರ್ಯಕ್ರಮಗಳು, ಕಾಂಗ್ರೆಸ್ ಘೋಷಿಸಿದ ಗ್ಯಾರಂಟಿಗಳ ಸನಿಹಕ್ಕೂ ಬರಲೇ ಇಲ್ಲ. ಹೀಗಾಗಿ ಕಾಂಗ್ರೆಸ್ ಗೆಲುವಿನಲ್ಲಿ ‘ಗ್ಯಾರಂಟಿ’ಗಳ ಯೋಗ ದಾನ ದೊಡ್ಡದು. ತನ್ನ ಈ ಕಾರ್ಯಕ್ರಮವನ್ನು ಅದು ಮನೆಮನೆಗೆ ತಲುಪಿಸುವಲ್ಲಿ ಯಶಸ್ವಿಯಾಯಿತು.

ಬಿಜೆಪಿಯ ಸಾಂಪ್ರದಾಯಿಕ ಲಿಂಗಾಯತ ಮತದಾರರು ಈ ಸಲ ಬಿಜೆಪಿಯ ಕೈಹಿಡಿದಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡು
ಬರುತ್ತದೆ. ೫೬ ಲಿಂಗಾಯತ ಅಭ್ಯರ್ಥಿಗಳ ಪೈಕಿ, ೩೮ ಮಂದಿ ಸೋತು ೧೮ ಮಂದಿ ಮಾತ್ರ ಗೆದ್ದಿರುವುದು ಈ ಮಾತನ್ನು ಶ್ರುತ ಪಡಿಸುತ್ತವೆ. ಕಲ್ಯಾಣ ಕರ್ನಾಟಕ ಮತ್ತು ಉತ್ತರ ಕರ್ನಾಟಕದಲ್ಲಿ ಪಕ್ಷ ನಿರೀಕ್ಷಿತ ಯಶ ಕಾಣದಿರಲು ಇದೇ ಕಾರಣ. ಸದಾ ಬಿಜೆಪಿ ಜತೆ ಗಟ್ಟಿಯಾಗಿ ನಿಂತಿದ್ದ ಲಿಂಗಾಯತ ಸಮುದಾಯ ಈ ಸಲ ಅಂತರ ಕಾಪಾಡಿಕೊಂಡಿದ್ದು ನಿಚ್ಚಳ. ಇದಕ್ಕೆ ಯಡಿಯೂರಪ್ಪನವರನ್ನು ಉಪೇಕ್ಷಿಸಿದ್ದು ಸಹ ಕಾರಣ.

ಬಿಜೆಪಿ ಲಿಂಗಾಯತರ ಪಕ್ಷವಾಗಿ ಉಳಿದಿಲ್ಲ ಎಂಬುದು ಸತ್ಯ ಅಲ್ಲದಿರಬಹುದು, ಆದರೆ ಆ ರೀತಿಯ ಗ್ರಹಿಕೆ ಮನದಲ್ಲಿ ಸುಳಿಯಲು ಆಸ್ಪದ ನೀಡಿದ್ದು ಪಕ್ಷಕ್ಕೆ ಮುಳುವಾಯಿತು. ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ರಾಜ್ಯ ಕಾಂಗ್ರೆಸ್
ಅಧ್ಯಕ್ಷ ಡಿ.ಕೆ.ಶಿವಕುಮಾರ ಇಬ್ಬರೂ ತಮ್ಮ ತಮ್ಮ ಭಿನ್ನಾಭಿಪ್ರಾಯಗಳನ್ನು ಮರೆತು ಒಟ್ಟಾಗಿ ಕೆಲಸ ಮಾಡದಿದ್ದರೆ ಉಳಿಗಾಲ ಇಲ್ಲ ಎಂಬುದನ್ನು ಅರಿತುಕೊಂಡು, ಒಗ್ಗಟ್ಟು ಪ್ರದರ್ಶಿಸಿದ್ದು, ತಮ್ಮ ವೈಮನಸ್ಸನ್ನು ಬದಿಗೊತ್ತಿ ಕೆಲಸ ಮಾಡಿದ್ದು ಕಾಂಗ್ರೆಸ್‌ನ ಈ ಸಲದ ಹೆಚ್ಚುಗಾರಿಕೆ ಮತ್ತು ವೈಶಿಷ್ಟ್ಯಗಳಂದು.

ಮುಖ್ಯಮಂತ್ರಿ ಸ್ಥಾನದ ಕುರಿತಾಗಿ ಯಾವುದೇ ಹೇಳಿಕೆ ನೀಡದಂತೆ ಈ ಇಬ್ಬರು ನಾಯಕರ ಬೆಂಬಲಿಗರನ್ನು ಒಂದು ಶಿಸ್ತಿಗೆ ಒಳಪಡಿಸಿದ್ದು ಪಕ್ಷದಲ್ಲಿ ಯಾವ ಗೊಂದಲ ಮೂಡದಂತೆ ಮಾಡಿತು. ಸಾಮಾನ್ಯವಾಗಿ ಕಾಂಗ್ರೆಸ್ಸಿನ ಸಾಂಪ್ರದಾಯಿಕ ಮತಗಳನ್ನು ಜೆಡಿಎಸ್ ತಿಂದು ಹಾಕುತ್ತಿತ್ತು. ಇದು ಬಿಜೆಪಿ ಗೆಲುವಿಗೆ ಸಹಾಯಕವಾಗುತ್ತಿತ್ತು. ಆದರೆ ಈ ಸಲ ಜೆಡಿಎಸ್‌ಗೆ ಅದು ಸಾಧ್ಯವಾಗಲೇ ಇಲ್ಲ.

ಅದು ತನ್ನ ಭದ್ರಕೋಟೆಯ ಉತ್ತಮ ಸಾಧನೆ ಮಾಡಲಿಲ್ಲ. ಒಕ್ಕಲಿಗರು ಈ ಸಲ ಏಕನಿಷ್ಠರಾಗಿ ಜೆಡಿಎಸ್‌ನ್ನು ಬೆಂಬಲಿಸಲಿಲ್ಲ. ಅತಂತ್ರ ವಿಧಾನಸಭೆ ನಿರ್ಮಾಣವಾದರೆ ಮಾತ್ರ ಜೆಡಿಎಸ್ ಆಟ, ಹಾರಾಟ. ಇಲ್ಲದಿದ್ದರೆ ಅದು ಆಟಕ್ಕೂ ಇಲ್ಲ, ಲೆಕ್ಕಕ್ಕೂ ಇಲ್ಲ. ಹೀಗಾಗಿ ಈ ಸಲದ ಫಲಿತಾಂಶ ಆ ಪಕ್ಷವನ್ನು ಸದ್ಯದ ಮಟ್ಟಿಗಂತೂ ಅಪ್ರಸ್ತುತವಾಗಿಸಿದೆ. ಇಂಥ ಕಳಪೆ ಸಾಧನೆ ಯನ್ನು
ಜೆಡಿಎಸ್ ಹಿಂದೆಂದೂ ಮಾಡಿರಲಿಲ್ಲ. ಆ ಪಕ್ಷದ ‘ಪಂಚರತ್ನ’ ಕಾರ್ಯಕ್ರಮ ಮತದಾರರ ಮೇಲೆ ಯಾವ ಪರಿಣಾಮವನ್ನೂ
ಬೀರಲು ಸಫಲವಾಗಿಲ್ಲ.

ಸಾಮಾನ್ಯವಾಗಿ ವಿರೋಧ ಪಕ್ಷಗಳು ಒಡೆದಾಗ, ಅವುಗಳಲ್ಲಿ ಬಿರುಕು ಮೂಡಿದಾಗ, ಹೊಸ ಪಕ್ಷ ರಚನೆಯಾದ  ಸಂದರ್ಭ ಗಳಲ್ಲಿ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿರುವುದನ್ನು ನಾವು ನೋಡುತ್ತಿದ್ದೇವೆ. ಆದರೆ ಈ ಸಲ ಅಂಥದ್ದೇನೂ ಆಗಿಲ್ಲ. ಆದರೂ ಕಾಂಗ್ರೆಸ್ ೧೩೬ ಸ್ಥಾನಗಳಲ್ಲಿ ಗೆದ್ದಿರುವುದು ನಿಜಕ್ಕೂ ಅದ್ಭುತ ಸಾಧನೆಯೇ. ರಾಜ್ಯದಲ್ಲಿ ಕಳೆದ ಕಾಲು ಶತಮಾನದಲ್ಲಿ ಯಾವ ಪಕ್ಷವೂ ಮಾಡದ ಸಾಧನೆಯನ್ನು ಕಾಂಗ್ರೆಸ್ ಮಾಡಿದೆ. ಇದು ಬಿಜೆಪಿಯ ಡಬಲ್ ಎಂಜಿನ್ ಸರಕಾರದ ಕನಸನ್ನು ನುಚ್ಚುನೂರು ಮಾಡಿದೆ. ಕಾಂಗ್ರೆಸ್ಸಿನ ಈ ಪರಿಯ ಗೆಲುವು ಬಿಜೆಪಿ ಪಾಲಿಗೆ ನುಂಗಲಾರದ ತುತ್ತು. ಇದು ಬಿಜೆಪಿ ಮತ್ತು ಜೆಡಿಎಸ್‌ಗೆ ಎಚ್ಚರಿಕೆ ಗಂಟೆ, ಆತ್ಮಾವಲೋಕನಕ್ಕೆ ಸಕಾಲ.

ಡೆಡ್ ಲೈನ್‌ನಲ್ಲಿ ಕೆಲಸ ಮಾಡುವುದು

ಬಬಿತಾ ಬರುವಾ ಅವರು ಅಡ್ವರ್ಟೈಸಿಂಗ್ ಕ್ಷೇತ್ರದಲ್ಲಿ ಸುಮಾರು ಕಾಲು ಶತಮಾನ ಕಾಲ ಮಹತ್ವದ ಹುದ್ದೆಗಳಲ್ಲಿ ಕೆಲಸ ಮಾಡಿದವರು. ಅದರಲ್ಲೂ ಜೆಡಬ್ಲ್ಯೂಟಿ (ಈಗಿನ ವಂಡರಮನ್ ಥಾಮ್ಸನ್) ಒಂದೇ ಸಂಸ್ಥೆಯಲ್ಲಿ ನಿರಂತರವಾಗಿ ಗುರುತಿಸಿಕೊಂಡ ವರು. ವರ್ಲ್ಡ್ ಎಕನಾಮಿಕ್ ಫಾರಮ್ ಮತ್ತು ಹಾರ್ವರ್ಡ್ ಬಿಜಿನೆಸ್ ಸ್ಕೂಲ್‌ಗಳಲ್ಲಿ ಉಪನ್ಯಾಸ ನೀಡಿದ ಬಬಿತಾ ಅವರಿಗೆ ಸಂದರ್ಶಕರೊಬ್ಬರು ಒಂದು ಪ್ರಶ್ನೆ ಕೇಳಿದ್ದರು – ‘ನಿಮ್ಮ ಬಿಜಿನೆಸ್
ನಲ್ಲಿ ಡೆಡ್ ಲೈನ್‌ನೊಳಗೆ ಕೆಲಸ ಮಾಡುವುದು ಬಹಳ ಮುಖ್ಯ.

ಡೆಡ್ ಲೈನ್ ಮ್ಯಾನೇಜ್ಮೆಂಟನ್ನು ನೀವು ನಿಮ್ಮ ತಂಡದೊಂದಿಗೆ ಹೇಗೆ ನಿರ್ವಹಿಸುತ್ತೀರಿ? ಇದು ನಿಮ್ಮ ಕೆಲಸ ಮತ್ತು ಜೀವನದ ಸಮತೋಲನ ಕಾಪಾಡುವುದರ ಮೇಲೆ ಪರಿಣಾಮ ಬೀರಿದೆಯೇ?’ ಅದಕ್ಕೆ ಬಬಿತಾ ಉತ್ತರಿಸಿದ್ದರು – ‘ಖಂಡಿತ ವಾಗಿಯೂ ಪರಿಣಾಮ ಬೀರಿದೆ. ಅದರಲ್ಲೂ ನಮ್ಮ ಅಡ್ವರ್ಟೈಸಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡುವವರು ಇದನ್ನು ಅನುಭವಿಸಲೇಬೇಕು. ನಮ್ಮದು ಕ್ರಿಯೇಟಿವ್ ಕೆಲಸ. ನಮ್ಮ ಡೆಡ್ ಲೈನ್ ಮ್ಯಾನೇಜ್ಮೆಂಟ್, ಕ್ರಿಯೇಟಿವಿಟಿ ಮೇಲೆ ಪ್ರಭಾವ ಬೀರಬಾರದು.

ಜಾಹೀರಾತನ್ನು ನೋಡಿದಾಗ, ಅದರ ಹಿಂದೆ ಕೆಲಸ ಮಾಡಿದವರ ಕಷ್ಟಗಳು ಅರ್ಥವಾಗಬಾರದು. ಅಲ್ಲಿ ಜಾಹೀರಾತಿನ ವಸ್ತುವೇ ವಿಜೃಂಭಿಸಬೇಕು. ನಾವು ಬಹಳ ಕಟುನಿಟ್ಟಿನ ಡೆಡ್ ಲೈನ್ ಒತ್ತಡದಲ್ಲಿ ಕೆಲಸ ಮಾಡುತ್ತೇವೆ. ನಮ್ಮ ಕ್ಷೇತ್ರದಲ್ಲಿ ಡೆಡ್ ಲೈನ್‌ನಲ್ಲಿ ಕೆಲಸ ಮಾಡಿದರೇ ಉತ್ತಮ ಫಲಿತಾಂಶ ಬರುವುದು ಸಾಧ್ಯ ಎಂದು ಎಷ್ಟೋ ಸಲ ಅನಿಸಿದೆ. ಒತ್ತಡದಲ್ಲಿzಗಲೇ ನಮ್ಮೊಳಗಿನ ಅತ್ಯುತ್ತಮವಾದವು ಹೊರಬರಲು ಸಾಧ್ಯ. ನನ್ನ ಪ್ರಕಾರ, ಡೆಡ್ ಲೈನ್‌ಗಳು ನಿರೋಧಕಗಳಲ್ಲ, ಅವು ಪ್ರೇರಣಾದಾಯಕ. ಆದರೆ ಇಡೀ ತಂಡ ಉತ್ತೇಜಿತವಾಗಿರಬೇಕು.’

ಒಮ್ಮೆ ಅಮೆರಿಕದ ಅಧ್ಯಕ್ಷರು ತಮ್ಮ ದೇಶದ ಪ್ರತಿಷ್ಠಿತ ಬಾಹ್ಯಾಕಾಶ ಸಂಸ್ಥೆಯಾದ ನಾಸಾ (National Aeronautics
and Space Administration) ಕ್ಕೆ ಭೇಟಿ ನೀಡಿದ್ದರಂತೆ. ನಾಸಾ ಕಚೇರಿಯನ್ನು ಪ್ರವೇಶಿಸುವಾಗ ಅಧ್ಯಕ್ಷರು, ಪ್ರವೇಶ
ದ್ವಾರದ ಬಳಿ ನಿಂತ ದ್ವಾರಪಾಲಕನನ್ನು, ‘ನಾಸಾದಲ್ಲಿ ನೀವು ಯಾವ ಕೆಲಸವನ್ನು ಮಾಡುತ್ತಿದ್ದೀರಿ?’ ಎಂದು ಕೇಳಿದರಂತೆ.
ಅದಕ್ಕೆ ಆ ದ್ವಾರಪಾಲಕ, ‘ಅಧ್ಯಕ್ಷರೇ, ಮನುಷ್ಯರನ್ನು ಚಂದ್ರನ ಮೇಲೆ ಕಳಿಸುವ ಮುಖ್ಯವಾದ ಕಾರ್ಯದಲ್ಲಿ ಇಲ್ಲಿ ನನ್ನನ್ನು ಸೇರಿದಂತೆ ಎಲ್ಲರೂ ನಿರತರಾಗಿದ್ದಾರೆ’ ಎಂದು ಹೇಳಿದನಂತೆ.

ನನಗೆ ಈ ಪ್ರಸಂಗ ಇಷ್ಟ. ಆ ದ್ವಾರಪಾಲಕ, ‘ನಾಸಾ ಪ್ರವೇಶ ದ್ವಾರದ ಬಾಗಿಲು ಕಾಯುವುದು ನನ್ನ ಕೆಲಸ ಎಂದು
ಹೇಳಬಹುದಿತ್ತು. ಆದರೆ ಆತ ಹಾಗೆ ಹೇಳಲಿಲ್ಲ. ಮನುಷ್ಯರನ್ನು ಚಂದ್ರನ ಮೇಲೆ ಕಳಿಸುವುದು ನನ್ನ ಕೆಲಸ ಎಂದು ಆತ ಹೇಳಿದ. ತನ್ನ ಕೆಲಸದ ಮಹತ್ವವನ್ನು ಎತ್ತರಿಸಿಕೊಂಡ. ಸಹಜವಾಗಿ ತಾನು ಅತ್ಯಂತ ಪ್ರಮುಖ ಕೈಂಕರ್ಯದಲ್ಲಿ ತೊಡಗಿ ಕೊಂಡಿದ್ದೇನೆ ಎಂಬುದನ್ನು ಮನವರಿಕೆ ಮಾಡಿದ. ಇಂಥ ಕೆಲಸಗಾರರನ್ನೊಳಗೊಂಡ ತಂಡದಿಂದ ಎಂಥ ಡೆಡ್ ಲೈನ್‌ ನದರೂ ಕೆಲಸ ಮಾಡಬಹುದು. ಕಾರಣ ಎಲ್ಲರೂ ಏಕ ಉದ್ದೇಶಕ್ಕಾಗಿ ಕೆಲಸ ಮಾಡುತ್ತಿರುತ್ತಾರೆ.’

ಟೀಕೆ ಮತ್ತು ಸಚಿನ್
ಪ್ರಸ್ತುತ ಆದಿತ್ಯ ಬಿರ್ಲಾ ಗುಂಪಿನ ಕಾರ್ಯನಿರ್ವಾಹಕ ಅಧ್ಯಕ್ಷ ಮತ್ತು ದಕ್ಷಿಣ ಏಷ್ಯಾ ಪೆಪ್ಸಿಕೋ ಸಂಸ್ಥೆಯ ಅಧ್ಯಕ್ಷ ಮತ್ತು ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದ ಶಿವ್ ಶಿವಕುಮಾರ ಅವರು ಬರೆದ The Art Of Management ಎಂಬ ಪುಸ್ತಕಕ್ಕೆ ಖ್ಯಾತ ಕ್ರಿಕೆಟ್ ತಾರೆ ಸಚಿನ್ ತೆಂಡೂಲ್ಕರ್ ಮುನ್ನುಡಿ ಬರೆದಿದ್ದಾರೆ. ಅದರಲ್ಲಿ ಸಚಿನ್ ಹಲವು ವಿಷಯಗಳನ್ನು ಚರ್ಚಿಸಿದ್ದು, ಆ ಪೈಕಿ ಅವರು ‘ಟೀಕೆಗಳನ್ನು ನಿಭಾಯಿಸುವುದು ಹೇಗೆ’ ಎಂಬ ಬಗ್ಗೆ ತಮ್ಮ ನಿಲುವನ್ನು ವ್ಯಕ್ತಪಡಿಸಿದ್ದಾರೆ. ಸಚಿನ್ ಅವರಂಥ ಖ್ಯಾತನಾಮ ಆಟಗಾರರು ಟೀಕೆಯನ್ನು ಹೇಗೆ ಎದುರಿಸಿರಬಹುದು? ಆ ಕುರಿತು ಸಚಿನ್ ಹೀಗೆ ಹೇಳುತ್ತಾರೆ – ‘ಟೀಕೆಗಳು
ಇಲ್ಲದೇ ಜೀವಿಸಲು ಸಾಧ್ಯವಿಲ್ಲ.

ಅದು ನಮ್ಮ ಬದುಕಿನ ಅವಿಭಾಜ್ಯ ಅಂಗ. ಟೀಕೆಗಳು ದೇವರನ್ನೂ ಬಿಟ್ಟಿಲ್ಲ. ಅವಿಲ್ಲದೇ ಜೀವನವೇ ಇಲ್ಲ. ಈ ಸಂಗತಿಯನ್ನು ಅರ್ಥ ಮಾಡಿಕೊಳ್ಳಬೇಕು. ಹೀಗಾಗಿ ಟೀಕೆಗಳಿಗೆ ಮುಕ್ತವಾಗಿರಬೇಕು. ನಾವು ಜನರಿಗೆ ಹಣೆಪಟ್ಟಿ ಅಂಟಿಸುತ್ತೇವೆ. ಜನರನ್ನು ನೋಡಿದಾಗ ನಮಗೆ ಅವರ ಹಣೆಪಟ್ಟಿಯೇ ಮೊದಲು ಕಾಣಿಸುತ್ತದೆ. ನಾನು ಯಾರಿಗೂ ಹಣೆಪಟ್ಟಿ ಅಂಟಿಸವುದಿಲ್ಲ. ಆತ ಮಾಜಿ ಕ್ರಿಕೆಟರ್, ಪತ್ರಕರ್ತ,ವೀಕ್ಷಕ ವಿವರಣಕಾರ, ನನ್ನ ಅಭಿಮಾನಿ ಎಂದು ನೋಡುವುದಿಲ್ಲ. ನಾನು ಅವರನ್ನು ನನಗೆ ಪ್ರತಿಕ್ರಿಯೆ ನೀಡುವವರು ಎಂದಷ್ಟೇ ಭಾವಿಸುತ್ತೇನೆ.’

ನೀವು ನಂಬುತ್ತೀರೋ, ಬಿಡುತ್ತೀರೋ, ನಾನು ಬೌಲ್ ಎದುರಿಸುವಾಗ, ನನ್ನ ಆರ್ಮ್ ಗಾರ್ಡ್ ಅಡ್ಡಿಯಾಗುತ್ತದೆ ಮತ್ತು ಪರಿಣಾಮವಾಗಿ, ಮುಂದಿನ ಕೆಲವು ಪ್ರಮುಖ ದೃಶ್ಯವನ್ನು ಮರೆ ಮಾಚುತ್ತದೆ ಮತ್ತು ನನ್ನ ಒಟ್ಟಾರೆ ಭಂಗಿಯನ್ನು ಉತ್ತಮ ಪಡಿಸಿಕೊಳ್ಳಲು ಅವಕಾಶ ಇದೆ ಎಂದು ಹೇಳಿದವರು ಯಾರು ಗೊತ್ತಾ? ಚೆನ್ನೈಯಲ್ಲಿ ನಾನು ಉಳಿದುಕೊಂಡ ಹೊಟೇಲಿನ ವೇಟರ್. ನನ್ನ ಬ್ಯಾಟ್ ಸ್ವಿಂಗ್ ಗೆ ಅಡ್ಡಿಯಾಗುತ್ತಿರುವುದನ್ನು ಆತ ಸೂಕ್ಷ್ಮವಾಗಿ ಗಮನಿಸಿದ್ದ.

ಈ ಸಂಗತಿಯನ್ನು ನನಗೆ ಬೇರೆ ಯಾರೂ ಹೇಳಿರಲಿಲ್ಲ. ಆತ ಹೇಳಿದ್ದು ನಿಜವೂ ಆಗಿತ್ತು. ಇದು ನನಗೆ ಬಹಳ ಪ್ರಯೋಜನ ವಾಯಿತು. ನಾನು ಆ ನಿಟ್ಟಿನಲ್ಲಿ ಸರಿಯಾದ ಕ್ರಮವನ್ನು ಥಟ್ಟನೆ ತೆಗೆದುಕೊಂಡೆ. ನನ್ನ ಭಂಗಿಯನ್ನು ಬದಲಿಸಿಕೊಂಡೆ. ನನ್ನ ಬ್ಯಾಟಿಂಗ್ ಭಂಗಿ ಬಗ್ಗೆ ಹೊಟೇಲ್ ವೇಟರನೇನು ಕಾಮೆಂಟು ಮಾಡುವುದು ಎಂದು ಅಂದುಕೊಳ್ಳಲಿಲ್ಲ.’ ‘ನಾವು ಹಳೆಯ ಸಂಗತಿಗಳಿಂದ ಮುಂದೆ ಹೋಗುತ್ತಿರಬೇಕು. ಬೌಲರ್ ಎಸೆದ ಬಾಲ್ ಬಗ್ಗೆ ಯೋಚಿಸುವುದು ಬಹಳ ಮುಖ್ಯ.

ಅದಕ್ಕಿಂತ ಮುಖ್ಯವಾದುದು ಮುಂದೆ ಎಸೆಯಲಿರುವ ಬಾಲ. ನೀವು ಬ್ಯಾಟ್ ಮಾಡುತ್ತೀದ್ದೀರಿ, ನಿಮ್ಮ ಮುಂದಿನಿಂದ ನೂರಾ ನಲವತ್ತು ಕಿ.ಮೀ. ವೇಗದಲ್ಲಿ ಎರಡು ಬಾಲ್‌ಗಳು ಬರುತ್ತಿವೆ ಎಂದು ಕಲ್ಪಿಸಿಕೊಳ್ಳಿ. ಒಂದು ಬಾಲ, ಹಳೆಯದು ಮತ್ತು ಎರಡನೆ ಯದು ವಾಸ್ತವ ಜಗತ್ತಿನದು. ನಾನು ರನ್ ಗಳಿಸಬೇಕಾದರೆ, ವಾಸ್ತವವಾಗಿ ಯೋಚಿಸಬೇಕು. ಹಿಂದಿನ ಬಾಲ್ ಬಗ್ಗೆ ಯೋಚಿಸಿ ಫಲವಿಲ್ಲ. ವಾಸ್ತವ ಜಗತ್ತಿನ ಬಾಲ್ ಕುರಿತು ಯೋಚಿಸಬೇಕು. ನಾನು ಯಾವತ್ತೂ ಹಿಂದಿನ ಬಾಲ್‌ನ್ನು ಮರೆಯುವುದನ್ನು ರೂಢಿ ಮಾಡಿಕೊಂಡಿದ್ದೇನೆ. ಹಿಂದಿನ ಎಸೆತಗಳ ಬಗ್ಗೆ ತಲೆಕೆಡಿಸಿಕೊಳ್ಳಬಾರದು. ಯಾವತ್ತೂ ವಾಸ್ತವದಲ್ಲಿ ಬದುಕಬೇಕು. ಜನ ನೂರೆಂಟು ವಿಷಯಗಳನ್ನು ಮಾತಾಡುತ್ತಾರೆ. ನಾನು ಅವರೆಲ್ಲರಿಗೂ ಉತ್ತರ ಕೊಡುವದು ನನ್ನ ಮಾತಿನಿಂದ ಅಲ್ಲ, ನನ್ನ ಬ್ಯಾಟ್‌ನಿಂದ.’

ಪುಸ್ತಕ ಅರ್ಪಣೆ ಯಾರಿಗೆ?

ಮೊನ್ನೆ ‘ಸಂಪಾದಕರ ಸದ್ಯಶೋಧನೆ’ ಅಂಕಣದಲ್ಲಿ ಲಂಡನ್ ನ ‘ಸಂಡೇ ಟೈಮ್ಸ್’ ಪತ್ರಿಕೆಯ ಬೆ ಸೆಲ್ಲಿಂಗ್ ಲೇಖಕಿ, ಪ್ರಸಿದ್ಧ ಘೋ ರೈಟರ್ (ಬೇರೆ ಹೆಸರಿನಿಂದ ಬರೆಯುವವಳು) ಮತ್ತು ಪ್ರಾಜೆಕ್ಟ್ ಎಡಿಟರ್ ಎಮ್ಮಾ  ಮಾರಿಯೋಟ್ (ಎಮ್ಮಾ ಎಂಬ ಬಾಡಿಗೆ ಲೇಖಕಿ) ಬಗ್ಗೆ ಬರೆದಿದ್ದೆ. ಹಾಗೆ ಆಕೆ ಬರೆದಿದ್ದ ಅ History of the world in Numbers ಎಂಬ ಪುಸ್ತಕದ ಬಗ್ಗೆಯೂ ಪ್ರಸ್ತಾಪಿಸಿದ್ದೆ. ಈ ಪುಸ್ತಕವನ್ನು ಎಮ್ಮಾ ಮಾರಿಯೋಟ್ ಯಾರಿಗೆ ‘ಅರ್ಪಣೆ’ ಮಾಡಿರಬಹುದು ಎಂಬ ಕುತೂಹಲದಿಂದ ನೋಡಿದೆ. ಆಕೆ ಬರೆದಿದ್ದಳು – To those who have lived and died before us – approximately 107.6 billion people !