Saturday, 23rd November 2024

ರಾಜ್ಯ ಬಿಜೆಪಿ ಎಂಬ ಬಿಗ್ ಬಾಸ್ ಮನೆ !

ನೂರೆಂಟು ವಿಶ್ವ

vbhat@me.com

ಇದು ಗೆದ್ದ ರಾಜಕೀಯ ಪಕ್ಷ ಬೀಗುವ ಹಾಗೂ ಸೋತ ಪಕ್ಷಗಳು ಆತ್ಮಾವಲೋಕನ ಮತ್ತು ಪಶ್ಚಾತ್ತಾಪ ಪಡುವ ಕಾಲ. ಅದನ್ನು ಅನುಭವಿಸಲೇಬೇಕು, ಬೇರೆ ದಾರಿಯಿಲ್ಲ. ತಾನು ಇಷ್ಟು ಹೀನಾಯವಾಗಿ ಸೋಲಬಹುದು ಎಂದು ಬಿಜೆಪಿ ನಿರೀಕ್ಷಿಸಿರಲಿಲ್ಲ.

ಹೆಗಲ ಮೇಲೆ ಮೋದಿಯನ್ನಿಟ್ಟುಕೊಂಡೂ ಸೋತಿದ್ದು ಬಿಜೆಪಿಗೆ ಬಹಳ ದೊಡ್ಡ ಹೊಡೆತ. ಮೋದಿಯೇನಿದ್ದರೂ ಲೋಕಸಭಾ ಚುನಾವಣೆಗೆ, ವಿಧಾನಸಭಾ ಚುನಾವಣೆಯಲ್ಲಿ ಅವರ ಆಟ ನಡೆಯುವುದಿಲ್ಲ ಎಂಬುದು ಸಾಬೀತಾಗಿದೆ. ಮೋದಿಯವರನ್ನು ಇಟ್ಟುಕೊಂಡರೆ ತಮ್ಮ ಎಲ್ಲ ಹುಳುಕುಗಳೂ ಮಾಫ್ ಎಂದು ಬಿಜೆಪಿಯ ರಾಜ್ಯ ನಾಯಕರು ಅಂದುಕೊಂಡಿದ್ದರು. ಅದು ಸುಳ್ಳಾಗಿದೆ. ಬಿಜೆಪಿ ನಾಯಕರ ಅಹಂಕಾರ, ದರ್ಪ, ಕೊಬ್ಬನ್ನು ರಾಜ್ಯದ ಮತದಾರ ಇಳಿಸಿzನೆ. ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ಬಂದರೆ ಸಾಕು, ಹೈಕಮಾಂಡ್ ಇವೆಂಟ್ ಮ್ಯಾನೇಜ್ಮೆಂಟ್ ಟೀಮನ್ನು ಕಳಿಸಿಕೊಡುತ್ತದೆ, ಅದಕ್ಕೆ ಚುನಾವಣೆ ಗೆಲ್ಲುವುದು ಹೇಗೆ ಎಂಬುದು ಗೊತ್ತಿದೆ, ನೀವು ರಾಜ್ಯದ ನಾಯಕರು ನಾವು ಹೇಳಿದಷ್ಟು ಮಾಡಿ ಎಂದು ಧೀಮಾಕಿನಿಂದ ಬಿಜೆಪಿ ದಿಲ್ಲಿ ನಾಯಕರು ಹೇಳುತ್ತಿದ್ದರು.

ಚುನಾವಣೆ ಗೆಲ್ಲಲು ಅವರೊಂದು ಚೆಕ್ ಲಿ ಸಿದ್ಧಪಡಿಸಿ, ಟೆಂಪ್ಲೆಟ್ ಹಾಕಿ ಕೊಡುತ್ತಿದ್ದರು. ಅದನ್ನು ಪಾಲಿಸುವುದಷ್ಟೇ ನಿಮ್ಮ ಕೆಲಸ ಎಂದು ಹೇಳುತ್ತಿದ್ದರು. ಆದರೆ ಆ ಟೆಂಪ್ಲೆಟ್ ಕರ್ನಾಟಕದಲ್ಲಿ ನಡೆದಿಲ್ಲ ಎನ್ನುವುದು ದಿಲ್ಲಿ ನಾಯಕರಿಗೆ ಈಗ ಜ್ಞಾನೋದಯವಾಗಿದೆ. ಕಳೆದ ಕೆಲವು ವರ್ಷಗಳಿಂದ ರಾಜ್ಯ ಬಿಜೆಪಿ ಕೆಲವರ ‘ಪ್ರೈವೇಟ್ (ಅನ್)ಲಿಮಿಟೆಡ್ ಕಂಪನಿ’ ಥರ ಆಗಿ ಹೋಗಿತ್ತು. ಇಲ್ಲಿ ಹೇಳುವವರು ಕೇಳುವವರು ಯಾರೂ ಇರಲಿಲ್ಲ. ‘ಸಂಘ ಹೇಳಿದೆ ’ ಅಂದ್ರೆ ಮುಗೀತ್. ಅದನ್ನು ಯಾರೂ ಪ್ರಶ್ನೆ ಮಾಡುವಂತಿಲ್ಲವಲ್ಲ. ಈ ‘ಸಂಘ ಹೇಳಿದೆ’ ಎನ್ನುವುದು ಟಿವಿ ಧಾರಾವಾಹಿ ‘ಬಿಗ್ ಬಾಸ್’ ಮನೆಯ ಅಗೋಚರವಾಣಿ ಯಂತೆ ಕೇಳಿಸುತಿತ್ತು.

ಬಿಗ್ ಬಾಸ್ ಹೇಳಿದ ‘ಟಾ’ ಮಾಡುವುದಷ್ಟೇ ಕೆಲಸ. ಬಿಗ್ ಬಾಸ್‌ನನ್ನು ಯಾರೂ, ಏನನ್ನೂ ಕೇಳುವಂತಿಲ್ಲವಲ್ಲ? ಸಂಘ ಅಂದ್ರೆ ಯಾರು, ಆ ಆದೇಶದ ಮೂಲ ಯಾವುದು? ಮುಂತಾದ ಪ್ರಶ್ನೆಗಳನ್ನು ಯಾರೂ ಕೇಳುತ್ತಿರಲಿಲ್ಲ. ಸಂಘದ ಹೆಸರಿನಲ್ಲಿ, ಕರ್ನಾಟಕ ಬಿಜೆಪಿಯಲ್ಲಿ ನಿರ್ಧಾರಗಳು, ಆದೇಶಗಳು ಈ ರೀತಿ ರವಾನೆಯಾಗುತ್ತಿದ್ದವು. ಹೀಗಾಗಿ ಸಂಘದ ಹೆಸರಿನಲ್ಲಿ ಯಾರ್ಯಾರೋ ಆದೇಶಗಳನ್ನು ಕೊಡಲಾರಂಭಿಸಿದರು. ಜೀವನದಲ್ಲಿ ಒಂದು ಬಾರಿಯೂ ಚುನಾವಣೆಗೆ ನಿಲ್ಲದವರು, ಚುನಾ ವಣಾ ರಾಜಕೀಯ ಅಂದ್ರೆ ಏನು ಎಂದು ಗೊತ್ತಿರದವರೆಲ್ಲ ರಾಜಕೀಯ ಪಕ್ಷವನ್ನು ನಿಯಂತ್ರಿಸಲಾರಂಭಿಸಿದರು. ಜೀವನದಲ್ಲಿ ಕಾಲೇಜು, ಮಂಡಳ ಪಂಚಾಯತಿ ಚುನಾವಣೆಯನ್ನೂ ಸೆಣಸದ ಪಡಪೋಶಿಗಳಾದ ಅರುಣ್ ಕುಮಾರ್, ತಿಪ್ಪೇಸ್ವಾಮಿ, ಕೇಶವ ಪ್ರಸಾದಿಗಳೆಲ್ಲ ಮುನ್ನೆಲೆಗೆ ಬಂದುಬಿಟ್ಟರು. ಇವರೆಲ್ಲ ‘ಸಂಘ’ದ ಹೆಸರಿನಲ್ಲಿ ದೊಡ್ಡ ನಾಯಕರಿಗೂ ಆದೇಶ ನೀಡಲಾ ರಂಭಿಸಿದರು.

ಬಿಜೆಪಿಯ ನಾಯಕರು ಇವರ ಮಾತುಗಳನ್ನು ಬಿಗ್ ಬಾಸ್ ಮನೆಯಿಂದ ಬಂದ ಮಾತುಗಳಿರಬಹುದು ಎಂದು ಭಾವಿಸಿದರು. ಯಡಿಯೂರಪ್ಪನವರಂಥ ನಾಯಕರನ್ನೂ ಈ ‘ಸಂಘ ಹೇಳಿದೆ’ ಎಂಬ ಅಗೋಚರವಾಣಿ ಕಟ್ಟಿ ಹಾಕುವಂತೆ ಮಾಡಿತು. ಬಿಜೆಪಿಯ ರಾಜ್ಯಾಧ್ಯಕ್ಷರು ಸಹ ಡಮ್ಮಿಯಾದರು ಅಥವಾ ಅಂಥ ಡಮ್ಮಿಗಳನ್ನೇ ಆರಿಸಿ ಆ ಸ್ಥಾನಗಳಿಗೆ ಕುಳ್ಳಿರಿಸಿದರು. ಶಾಖೆ ಗಳಲ್ಲಿ ಅಗ್ರೇಸರನಾದವನು, ಮುಖ್ಯ ಶಿಕ್ಷಕನ ಕಿವಿಯಲ್ಲಿ ಉಸುರುತ್ತಾನಲ್ಲ, ಅಷ್ಟಕ್ಕೇ ರಾಜ್ಯಾಧ್ಯಕ್ಷರು ಸೀಮಿತರಾದರು. ರಾಜ್ಯಾಧ್ಯಕ್ಷರು ತಮ್ಮ ಆದೇಶಕ್ಕಾಗಿ ಅರುಣ್ ಕುಮಾರ್, ತಿಪ್ಪೇಸ್ವಾಮಿ, ಸುರಾನಾ, ಕೇಶವ ಪ್ರಸಾದಿಗಳತ್ತ ನೋಡಲಾ ರಂಭಿಸಿದರು.

ಇವರಿಗೆ ಬಿಗ್ ಬಾಸ್ ಮನೆಯಿಂದ ಆದೇಶ ಬರುತ್ತಿತ್ತು. ಅದನ್ನು ಪಾಲಿಸುವುದಷ್ಟೇ ಟಾ.ಕಳೆದ ಹತ್ತಾರು ವರ್ಷಗಳಿಂದ ಬಿಜೆಪಿ ನಡೆದುಕೊಂಡು ಬರುತ್ತಿರುವ ರೀತಿ ಇದು. ಹೀಗಾಗಿ ಇದೊಂಥರಾ ನಂದೋರಾಯನ ದರ್ಬಾರಿನಂತಾಗಿತ್ತು. (ಆ ದರ್ಬಾರಿ ನಲ್ಲಿ ನಾಯಿ, ನರಿಗಳೆಲ್ಲ ಮಂತ್ರಿಗಳಾಗಿದ್ದುವಂತೆ) ಇಲ್ಲದಿದ್ದರೆ ಚುನಾವಣೆಯಲ್ಲಿ ಸೋತ ಲಕ್ಷ್ಮಣ ಸವದಿ ಉಪಮುಖ್ಯಮಂತ್ರಿ ಆಗುತ್ತಿರಲಿಲ್ಲ.

ಅಸಲಿಗೆ ಅವರೂ ತಮ್ಮನ್ನು ಉಪಮುಖ್ಯಮಂತ್ರಿ ಮಾಡಿ ಎಂದು ಹೇಳಿರಲಿಲ್ಲ. ಎಮ್ಮೆಲ್ಸಿ ಮಾಡಿ ಎಂದೂ ಕೇಳಿಕೊಂಡಿರಲಿಲ್ಲ. ಅಂಥವರನ್ನು ಉಪಮುಖ್ಯಮಂತ್ರಿ ಮಾಡಿದರು. ಅದರಿಂದ ಪಕ್ಷಕ್ಕಾಗಲಿ, ಸರಕಾರಕ್ಕಾಗಲಿ ದಮಡಿ ಪ್ರಯೋಜನ ಆಗಲಿಲ್ಲ. ಆ ನಿರ್ಧಾರಕ್ಕೆ ತಳಬುಡ ಇರಲಿಲ್ಲ. ಖುದ್ದು ತುಘಲಕ್ ಕೂಡ ಅಂಥ ತಿಕ್ಕಲು ನಿರ್ಧಾರ ತೆಗೆದುಕೊಳ್ಳುತ್ತಿರಲಿಲ್ಲ. ಯಡಿಯೂರಪ್ಪ ನವರ ಮಹತ್ವವನ್ನು ಕುಗ್ಗಿಸಲು ಮೂವರು ಉಪಮುಖ್ಯಮಂತ್ರಿಗಳನ್ನಾಗಿ ಮಾಡಲಾಯಿತು. ಯಡಿಯೂರಪ್ಪನವನವರು ಮುಖ್ಯಮಂತ್ರಿಯಾಗಿದ್ದಷ್ಟು ಸಮಯ ಅವರಿಗೆ ಪ್ರಬಲ ಪ್ರತಿಪಕ್ಷ ಕಾಂಗ್ರೆಸ್ ಆಗಿರಲೇ ಇಲ್ಲ, ಸಂಘದವರೇ ಆ ಪಾತ್ರ ವಹಿಸಿದರು.

ಹೆಜ್ಜೆ ಹೆಜ್ಜೆಗೆ ಯಡಿಯೂರಪ್ಪನವರನ್ನು ಮಣಿಸುವುದು ಹೇಗೆ, ಅವರಿಗೆ ಮುಖಭಂಗ ಮಾಡುವುದು ಹೇಗೆ, ದುರ್ಬಲರನ್ನಾಗಿ
ಮಾಡುವುದು ಹೇಗೆ ಎಂಬ ಪ್ಲಾನ್‌ಗಳು ಬಿಗ್ ಬಾಸ್ ಮನೆಯಲ್ಲಿ ತಯಾರಾಗುತ್ತಿದ್ದವು. ಅದು ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಸ್ಥಾನ ದಿಂದ ಕೆಳಗಿಳಿಸುವ ತನಕವೂ ಮುಂದುವರಿಯಿತು. ಅಸಲಿಗೆ ಯಡಿಯೂರಪ್ಪನವರು ಕೆಳಗಿಳಿಯು ವಂತಾಗಿದ್ದು ಅನ್ಯಪಕ್ಷದವರಿಂದ ಅಲ್ಲ. ಅವರ ಪಕ್ಷದವರೇ ಅವರನ್ನು ಇಳಿಸಿದರು.

ಹಾಗೆ ನೋಡಿದರೆ, ಯಡಿಯೂರಪ್ಪನವರಂಥ ದೊಡ್ಡ ನಾಯಕನನ್ನು ಕೆಳಗಿಳಿಸಲು ಕಾರಣಗಳೇ ಇರಲಿಲ್ಲ. ಮಿತಿಮೀರಿದ
ಭ್ರಷ್ಟಾಚಾರ ಕಾರಣ ಎನ್ನುವುದಾದರೆ, ಅದು ಅನಂತರ ಬಂದವರ ಕಾಲದಲ್ಲಿ ನಿಲ್ಲದೇ ಮತ್ತಷ್ಟು ಹೆಚ್ಚಾಯಿತಲ್ಲ… ನಲವತ್ತು
ಪರ್ಸೆಂಟ್ ಸರಕಾರವಾಯಿತಲ್ಲ…ಆಗ ಬಿಗ್ ಬಾಸ್ ಯಾಕೆ ‘ಟಾ ಮಾಸ್ಟರ್’ ಆಗಲಿಲ್ಲ? ‘ಸಂಘ’ದವರೇನು ಮಾಡಿದರು? ಯಡಿಯೂರಪ್ಪನವರನ್ನು ಇಳಿಸಿದ್ದೇಕೆ ಎಂಬುದನ್ನು ಯಾಕೆ ತಿಳಿಸಲಿಲ್ಲ? ಅಂದು ಯಡಿಯೂರಪ್ಪನವರನ್ನು ಇಳಿಸಿದ್ದು ಪಕ್ಷಕ್ಕೆ ಕುಟಾರಘಾತವಾಯಿತು ಎಂಬುದು ಈ ಸಲದ ಚುನಾವಣೆ ನಿಚ್ಚಳವಾಗಿ ಸಾಬೀತುಪಡಿಸಿದೆ.

ನಾವು ಯಾವ ಕಾಮಿಡಿಯನ್, ಪ್ರಾಣಿಗಳನ್ನು ಇಟ್ಟುಕೊಂಡು ಸರ್ಕಸ್ ಕಂಪನಿಯಂತೆ ರಾಜಕೀಯ ಪಕ್ಷವನ್ನೂ ನಡೆಸುತ್ತೇವೆ ಎಂಬ ಮನೋಭಾವವೇ ಅಪಾಯಕಾರಿ. ತಾವು ಸಿದ್ಧಾಂತ, ಬದ್ಧತೆ ಪ್ರಣೀತ ರಾಜಕೀಯ ಮಾಡುತ್ತೇವೆ ಎಂದು ‘ಸಂಘ’ ದವರು ಹೇಳುತ್ತಾರೆ. ಅದೇ ನಿಜವಾಗಿದ್ದರೆ, ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಕಾಂಗ್ರೆಸ್ ಸರಕಾರವನ್ನು ಉರುಳಿಸಿ, ಹದಿನೇಳು ಶಾಸಕರಿಂದ ರಾಜೀನಾಮೆ ಕೊಡಿಸಿ, ಅವರನ್ನೆಲ್ಲ ಮುಂಬೈಗೆ ಕಳುಹಿಸಿ, ಮಾಡಬಾರದ ಅನಾಚಾರಗಳನ್ನೆಲ್ಲ ಮಾಡಿಸಿ, ಬಿಜೆಪಿ ಸರಕಾರವನ್ನು ಅಸ್ತಿತ್ವಕ್ಕೆ ತರುತ್ತಿರಲಿಲ್ಲ. ಅಂದರೆ ಬಿಜೆಪಿ ಸರಕಾರ ಹುಟ್ಟಿಕೊಂಡಿದ್ದೇ ಭ್ರಷ್ಟಾಚಾರದ ಕೂಪದಲ್ಲಿ. ಈ ಎಲ್ಲ ಅಪಸವ್ಯಗಳು ನಡೆದಿದ್ದೇ ‘ಸಂಘ’ದ ನಾಯಕರ ಮೂಗಿನ ಕೆಳಗೆ.

ಹೀಗಿರುವಾಗ ಯಡಿಯೂರಪ್ಪನವರ ಆಡಳಿತದಲ್ಲಿ ಭ್ರಷ್ಟಾಚಾರ ಮಿತಿ ಮೀರಿತು ಎನ್ನುವ ಮಾತಿನಲ್ಲಿ ಯಾವ ಅರ್ಥವಿದೆ? ಕಳಪೆ ಬೀಜ ಹಾಕಿ ಒಳ್ಳೆಯ ಫಲ ಬರಬೇಕು ಎಂದು ನಿರೀಕ್ಷಿಸಲು ಸಾಧ್ಯವೇ? ಬಿಜೆಪಿ ಸರಕಾರ ಬರುವ ಪ್ರತಿ ಸಂದರ್ಭದಲ್ಲೂ ಪ್ರಜಾಪ್ರಭುತ್ವದ ಸಿದ್ಧಾಂತಗಳೆಲ್ಲ ನೆಲಸಮವಾಗಿವೆ. ಅವನ್ನು ‘ಸಂಘ’ದವರು ನೋಡಿದ್ದಾರೆ ಮತ್ತು ಅದಕ್ಕೆ mZಠಿqsಯೂ
ಆಗಿzರೆ ಮತ್ತು ಆ ಎಲ್ಲ ಅನೈತಿಕ ಕ್ರಮವನ್ನು ಬೆಂಬಲಿಸಿದ್ದಾರೆ. ಹೀಗಿರುವಾಗ ಯಡಿಯೂರಪ್ಪನವರ ಮೇಲೆ ಗೂಬೆ ಕೂರಿಸಿ, ಅವರನ್ನು ಸಿಎಂ ಗಾದಿಯಿಂದ ಇಳಿಸಿದ್ದು ಯಾವ ಪುರುಷಾರ್ಥ ಸಾಽಸಲು? ಯಾರೋ ಒಬ್ಬರಿಗೆ ಸರಿ ಬಂದಿಲ್ಲವೆಂದು ಯಡಿಯೂರಪ್ಪನವರನ್ನು ಬದಲಿಸಿದ ಆ ಕ್ರಮಕ್ಕೆ ಬಿಜೆಪಿ ಬೆಲೆ ತೆರುವಂತಾಯಿತು.

ತನಗೆ ಆಗದ ತನ್ನ ಪಕ್ಷದವರನ್ನೇ, ಪಕ್ಷದೊಳಗಿದ್ದು ಮುಗಿಸುವ ನಂಜಿನ, ವಿಘಟನಾ ಮನೋಭಾವವೇ ಬಿಜೆಪಿಗೆ ಮುಳು ವಾಯಿತು. ಇಲ್ಲದಿದ್ದರೆ ಜಗದೀಶ ಶೆಟ್ಟರ್, ಈಶ್ವರಪ್ಪ, ಸವದಿ ಅವರಿಗೆ ಟಿಕೆಟ್ ತಪ್ಪಿಸುವ ಅಗತ್ಯವೇ ಇರಲಿಲ್ಲ. ಅಷ್ಟಕ್ಕೂ ಅವರೇನು ಮಾಡಿದ್ದಾರೆ? ಪಕ್ಷದಲ್ಲಿ ಹೊಸಬರಿಗೆ ಅವಕಾಶ ನೀಡಬೇಕು, ಕಾರ್ಯಕರ್ತರನ್ನು ಬೆಳೆಸಬೇಕು ಎಂಬುದಕ್ಕೆ ಯಾರ ತಕರಾರೂ ಇಲ್ಲ, ಅದು ಒಪ್ಪುವ ವಿಚಾರವೇ. ಆದರೆ ಹಿರಿಯರನ್ನು ಅವಮಾನಿಸಿ, ಹಂಗಿಸಿ, ಅವರಿಗೊಂದು ಬೀಳ್ಕೊಡುಗೆ ಯನ್ನೂ ನೀಡದೇ, ಬಾಳೆ ಎಳೆಯ ಮೇಲಿನ ಬೇವಿನ ಸೊಪ್ಪಿನಂತೆ ಬಿಸಾಡುವುದನ್ನು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ.

ಹೀಗಾಗಿ ಶೆಟ್ಟರ್, ಸವದಿ ಪಕ್ಷದಿಂದ ಸಿಡಿದು ಹೋದರು. ಅವರಿಬ್ಬರಿಗೆ ಟಿಕೆಟ್ ನಿರಾಕರಿಸಿ ಬಿಜೆಪಿಯೇನು ಮಹಾನ್ ಕ್ರಾಂತಿ ಮಾಡಿತಾ? ನನಗೆ ಬೇಡದವರನ್ನು ಬೇವಿನಸೊಪ್ಪಿನಂತೆ ಬಿಸಾಡುತ್ತೇನೆ, ನಾವು ಹೇಳಿದಂತೆ ನೀವು ಸುಮ್ಮನೆ ಕೇಳಿಕೊಂಡಿರಬೇಕು ಎಂದು ನಿರೀಕ್ಷಿಸುವುದು ಖಂಡಿತವಾಗಿಯೂ ಶಿಸ್ತಲ್ಲ, ಅದು ಸರ್ವಾಧಿಕಾರಿ ಧೋರಣೆ. ಈ ಸಲ ಬಿಜೆಪಿಗೆ ಇದು ದೊಡ್ಡ ಹೊಡೆತವನ್ನೇ ಕೊಟ್ಟಿತು. ಹೊಸಬರನ್ನು ಚುನಾವಣಾ ಕಣಕ್ಕೆ ಹಿರಿಯರ ಸಮಾಧಿಯ ಮೇಲೆ ತರುವ ಕ್ರಮವನ್ನು
ಯಾವ ವ್ಯವಸ್ಥೆಯೂ ಒಪ್ಪುವುದಿಲ್ಲ. ಈ ಬಾರಿ ಬಂದ ಹೊಸಬರೆಲ್ಲ ತಮ್ಮದೇ ಪಕ್ಷದ ಹಿರಿಯರನ್ನು, ಪಕ್ಷ ಕಟ್ಟಿದವರನ್ನು ಅವಮಾನಿಸಿ, ತುಳಿದು, ಅವರನ್ನು ನೋಯಿಸಿ ಬಂದವರೇ. ಇದು ಬದಲಾವಣೆಯಲ್ಲ, ಚಿತಾವಣೆ. ಬಿಜೆಪಿಯಲ್ಲಿ ಆಗಿದ್ದು ಅದು.
ಇತ್ತೀಚಿನ ದಿನಗಳಲ್ಲಿ ಬಿಜೆಪಿಗೆ ‘ದಂಡ’ವಾಗಿ ಪರಿಣಮಿಸರುವುದು ಅದರ ಮಾನದಂಡ.

ತಮಗೆ ಬೇಡವರನ್ನು ತುಳಿಯಲು ಒಂದು ಮಾನದಂಡ, ಬೇಕಾದವರನ್ನು ಮೂಲೆಗುಂಪು ಮಾಡಲು ಇನ್ನೊಂದು. ಆರು ಸಲ ಆರಿಸಿ ಬಂದವರಿಗೆ ಇನ್ನೂ ಟೆಕೆಟ್ ಕೊಡಬೇಕಾ? ನೋಡಿದವರ ಮುಖಗಳನ್ನೇ ಮತ್ತೆ ಮತ್ತೆ ನೋಡುತ್ತಿರಬೇಕಾ? ಈ ವಾದವೇನೋ ಸರಿ ಎಂದು ಒಪ್ಪೋಣ. ಆದರೆ ಇದು ಎಲ್ಲರಿಗೂ ಅನ್ವಯವಾಗಬೇಕಲ್ಲ? ಶೆಟ್ಟರ್‌ಗೆ, ಅಂಗಾರಗೆ ಅನ್ವಯವಾಗುವ ಈ ನಿಯಮ ಆರ್.ಅಶೋಕ್, ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ ಅನ್ವಯ ಆಗುವುದಿಲ್ಲ. ಅದೇ ಅದೇ ಮುಖಗಳನ್ನು ಎಷ್ಟು ಸಲ ನೋಡೋದು ಎಂಬ ನಿಯಮ ರಾಮದಾಸ್‌ಗೆ ಅನ್ವಯವಾದರೆ, ಸುರೇಶ್‌ಕುಮಾರ್ ಮತ್ತು ಕಾರಜೋಳಗೆ ಅನ್ವಯವಾಗುವುದಿಲ್ಲ. ವಂಶಪಾರಂಪರ್ಯ ನಿಯಮ ತೇಜಸ್ವಿನಿ ಅನಂತಕುಮಾರಗೆ, ಈಶ್ವರಪ್ಪನವರಿಗೆ ಅನ್ವಯವಾದರೆ, ಕರುಣಾಕರ ರೆಡ್ಡಿ-ಸೋಮಶೇಖರ ರೆಡ್ಡಿ, ಜೊ ದಂಪತಿಗೆ…ಅನ್ವಯವಾಗುವುದಿಲ್ಲ.

ಒಂದೆಡೆ  high moral stand ತೆಗೆದುಕೊಳ್ಳುವುದು, ಇನ್ನೊಂದೆಡೆ ಅದನ್ನೇ ಉಲ್ಲಂಘಿಸುವುದು.. ಈ ದ್ವಂದ್ವ, ಉಪರೇಟಿ ನಿರ್ಧಾರ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿರುವುದನ್ನು ಗಮನಿಸಬಹುದು. ಎಂದಿನಂತೆ ‘ಬಿಗ್ ಬಾಸ್’ ಮನೆಯಿಂದ ಯಾವ ನಿರ್ಧಾರ ಬರುತ್ತದೆ ಎಂದು ನಿರೀಕ್ಷಿಸಲು ಸಾಧ್ಯವೇ ಇಲ್ಲ. ರಾಜ್ಯ ಬಿಜೆಪಿ, ಅಧ್ಯಕ್ಷರ ಆದೇಶಕ್ಕಿಂತ ಬಿಗ್ ಬಾಸ್ ಮನೆಯ ಅದ್ದೇಶದಿಂದ ನಡೆದಿದ್ದೇ ಹೆಚ್ಚು.

ಕಳೆದ ಮೂರು ವರ್ಷಗಳಲ್ಲಿ ಪಕ್ಷಕ್ಕೂ – ಸರಕಾರಕ್ಕೂ ಸಂಬಂಧವೇ ಇರಲಿಲ್ಲ. ಸಿಎಂ – ಅಧ್ಯಕ್ಷರು ಮುಖಾಮುಖಿ ಆಗಿದ್ದು ತೀರಾ ವಿರಳ. ಅವರಿಬ್ಬರೂ ಸಮಾನಾಂತರ ರೇಖೆಗಳಂತೆ ಇದ್ದರು. ಒಂದೆಡೆ ಸೇರಲೇ ಇಲ್ಲ. ಮುಖ್ಯಮಂತ್ರಿ ಮೇಲೆ ಬಿಜೆಪಿ ರಾಜ್ಯಾಧ್ಯಕ್ಷರ ಪ್ರಭಾವ, ನಿಯಂತ್ರಣವೇ ಇರಲಿಲ್ಲ. ಅಧ್ಯಕ್ಷರೂ ಬಿಗ್ ಬಾಸ್ ಮನೆಯಿಂದ ಬರುವ ಸೂಚನೆಗೆ ಕಿವಿಗೊಟ್ಟಿದ್ದೇ ಹೆಚ್ಚು. ಒಂದೆಡೆ ಕಾಂಗ್ರೆಸ್ ರಾಜ್ಯ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಕ್ರಮಣಕಾರಿಯಾಗಿದ್ದರೆ, ಇನ್ನೊಂದೆಡೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಟುಕನಮನೆ ಗೊಡ್ಡೆತ್ತಿನಂತೆ ಗೋಚರಿಸುತ್ತಿದ್ದರು. ಅವರಿಗೆ ಯಾವ ನಿರ್ಧಾರವನ್ನೂ ಸ್ವತಂತ್ರವಾಗಿ ತೆಗೆದುಕೊಳ್ಳುವ ಅಧಿಕಾರ ಇರಲಿಲ್ಲ.

‘ಬಿಗ್ ಬಾಸ್’ ಹೇಳಿದ್ದನ್ನು ಜಾರಿಗೆ ತರುವುದಕ್ಕೆ ಮಾತ್ರ ಅವರ ಕೆಲಸ ಸೀಮಿತವಾಗಿತ್ತು. ಅವರನ್ನು ಮುಖ್ಯಮಂತ್ರಿಗಳಾದ
ಯಡಿಯೂರಪ್ಪನವರಾಗಲಿ, ಬೊಮ್ಮಾಯಿಯವರಾಗಲಿ ಯಾವತ್ತೂ ಗಂಭೀರವಾಗಿ ಪರಿಗಣಿಸಲೇ ಇಲ್ಲ. ಮಾತಿಗೆ ನಿಂತರೆ ಕಟೀಲರು ಸ್ಪರ್ಧೆ ಒಡ್ಡುತ್ತಿದ್ದುದು ಜೆಡಿಎಸ್ ರಾಜ್ಯಾಧ್ಯಕ್ಷರಾದ ಸಿಎಂ ಇಬ್ರಾಹಿಂಗೆ ಮಾತ್ರ. ರಾಜ್ಯಾಧ್ಯಕ್ಷರಾಗಿ ಅವರಿಬ್ಬರಿಗೆ ಹೆಚ್ಚು ವ್ಯತ್ಯಾಸವಿರಲಿಲ್ಲ. ಇಬ್ಬರೂ ಗುಂಡಿಗೆ ಮತ್ತು ಗುಂಡು ಇಲ್ಲದ ಬಂಧೂಕುಧಾರಿಗಳಿದ್ದಂತಿದ್ದರು!

ಅದು ಅವರ ತಪ್ಪಲ್ಲ. ಹಾಗೆ ನಡೆಸಿಕೊಂಡವರದ್ದು. ಅಸಲಿಗೆ ರಾಜ್ಯ ಬಿಜೆಪಿ ಚುನಾವಣೆಗೆ ಸಿದ್ಧವಾಗಿರಲೇ ಇಲ್ಲ. ಡಿಕೆಶಿ ಮತ್ತು
ಸಿದ್ದರಾಮಯ್ಯನವರ ವಿರುದ್ಧ ನಿಲ್ಲಿಸಲು ಅಭ್ಯರ್ಥಿಗಳೇ ಇರಲಿಲ್ಲ. ಒಂದು ಹಂತದಲ್ಲಿ ಅಶೋಕ್‌ಗೇ ಟಿಕೆಟ್ ತಪ್ಪಿಸುವ ಮಾತು ಬಿಗ್ ಬಾಸ್ ಮನೆಯಿಂದ ಕೇಳಿ ಬಂದಿತ್ತು. ಡಿಕೆಶಿ ವಿರುದ್ಧ ಸ್ಪರ್ಧಿಸಿದ ಅಶೋಕ್ ಠೇವಣಿ ಕಳೆದುಕೊಳ್ಳುತ್ತಾರೆ ಅಂದ್ರೆ ಬಿಜೆಪಿ ಖಾಲಿತನ ಗೋಚರವಾಗುತ್ತದೆ. ಪಕ್ಷ ಬಿಟ್ಟು ಹೋಗುತ್ತೇನೆ ಎಂದ ನಾರಾಯಣಗೌಡರನ್ನು ಹೆದರಿಸಿ, ಬೆದರಿಸಿ ಇಟ್ಟುಕೊಳ್ಳಲು ಕಾರಣ, ಅವರು ಹೋದರೆ ಪಕ್ಷಕ್ಕೆ ಅಭ್ಯರ್ಥಿಗಳೇ ಇಲ್ಲ ಎಂಬುದು. ಒಂಬತ್ತು ಜಿಗಳಲ್ಲಿ ಬಿಜೆಪಿ ಖಾತೆಯನ್ನೇ ತೆರೆಯಲಿಲ್ಲ.

ಇಂಥ ಕಡೆಗಳಲ್ಲಿ ಅಧ್ಯಕ್ಷರು ಸಂಘಟನೆ ಕಡೆ ಗಮನವನ್ನೇ ಹರಿಸಲಿಲ್ಲ. ಇವೆಲ್ಲ ಅತ್ಲಾಗಿರಲಿ, ಮಂಡ್ಯದಲ್ಲಿ ಯಾವ ಬೀಜ ನೆಟ್ಟರೂ ಫಲ ಬರುವುದಿಲ್ಲ ಯಾಕೆ ಎಂಬ ಸರಳ ಪ್ರಶ್ನೆಗೆ ಅಧ್ಯಕ್ಷರಿಗೆ ಉತ್ತರ ಕಂಡುಕೊಳ್ಳಲು ಸಾಧ್ಯವಾಗಲಿಲ್ಲ. ಇನ್ನು ಅಂಥ ಜಿಗಳಲ್ಲಿ ಪಕ್ಷ ಸಂಘಟನೆ ಮಾಡುವ ಮಾತು ದೂರವೇ ಉಳಿಯಿತು. ಪ್ರಿಯಾಂಕ್ ಖರ್ಗೆ ವಿರುದ್ಧವೂ ಪಕ್ಷ ಒಬ್ಬ ಉತ್ತಮ ಅಭ್ಯರ್ಥಿ ರೆಡಿ ಮಾಡಲಿಲ್ಲ. ಎಂಬತ್ತು ಕ್ರಿಮಿನಲ್ ಕೇಸುಗಳಿರುವ ಅಪ್ಪಟ ರೌಡಿಗೆ ಟಿಕೆಟ್ ನೀಡಲು ಮುಂದಾಗುತ್ತಾರೆ ಅಂದ್ರೆ ಸಂದರ್ಭ ಬಂದರೆ ಬಿಜೆಪಿ ಕೂಡ ಸಿದ್ಧಾಂತವನ್ನು ಗಾಳಿಗೆ ತೋರುತ್ತದೆ ಎಂದಾಯಿತಲ್ಲವೇ? ಮುಖ್ಯಮಂತ್ರಿ ವಿರುದ್ಧ ಸ್ವಪಕ್ಷೀಯ ಶಾಸಕ ಯತ್ನಾಳ್ ದಾಳಿ ಮಾಡಿದರೂ, ಕಾಟಾಚಾರಕ್ಕೂ ಅವರಿಗೊಂದು ಶೋಕಾಸ್ ನೋಟೀಸ್ ನೀಡಲಿಲ್ಲ. ಇದು ಯತ್ನಾಳ್‌ಗೆ ಬಿಗ್ ಬಾಸ್ ಮನೆಯ ಟಾ ಎಂದು ಯಾರಿಗಾದರೂ ಅನಿಸದೇ ಹೋಗಲಿಲ್ಲ.

ಒಂದು ಹಂತದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿಯವರನ್ನು ಕಟ್ಟಿ ಹಾಕುವ ಪ್ರಯತ್ನವೂ ನಡೆಯಿತು. ಅವರನ್ನು ಆಗಾಗ
ಅಸ್ಥಿರ ಗೊಳಿಸುವ ಪ್ರಯತ್ನಗಳು ನಡೆದವು. ಹೊಸ ಮುಖ್ಯಮಂತ್ರಿ ಬರಲಿದ್ದಾರೆ ಎಂಬ ಗಾಳಿ ಸುದ್ದಿಯಂತ್ರವನ್ನು ಸದಾ
ಚಾಲೂ ಇಡಲಾಯಿತು. ಒಂದು ಹಂತದಲ್ಲಿ ಸಿಎಂ ಬದಲಾಗುವುದು ನಿಶ್ಚಿತ ಎಂಬ ಸುದ್ದಿಯನ್ನು ತೇಲಿಬಿಡಲಾಯಿತು ಅಥವಾ
ಅದು ಸುಳ್ಳಾಗಿದ್ದರೆ, ಆ ಸುದ್ದಿಯನ್ನು ನಿಲ್ಲಿಸುವ ಪ್ರಯತ್ನವೂ ಆಗಲಿಲ್ಲ.

ಚುನಾವಣೆಗೆ ಮೂರು ತಿಂಗಳು ಇರುವವರೆಗೂ ನಾಯಕತ್ವ ಬದಲಾವಣೆಯ ಸುದ್ದಿ ಬಿತ್ತರವಾಗುತ್ತಲೇ ಇತ್ತು. ತಾನೆಷ್ಟು ದಿನ ಅಽಕಾರದಲ್ಲಿರುತ್ತೇನೋ ಎಂಬ ಅನಿಶ್ಚಿತತೆ ಬೊಮ್ಮಾಯಿಯವರನ್ನು ಕುಗ್ಗಿಸಿದ್ದು ಸುಳ್ಳಲ್ಲ. ಹೀಗಾಗಿ ಅವರಿಗೆ ‘ನಲವತ್ತು ಪರ್ಸೆಂಟ್ ಸರಕಾರ’ ಎಂಬ ನಿರಾಧಾರ ಕ್ಯಾಂಪೇನನ್ನು ನೆಲಸಮ ಮಾಡಲು ಆಗಲೇ ಇಲ್ಲ. ಸಿದ್ದರಾಮಯ್ಯನರನ್ನು ಕಟ್ಟಿ ಹಾಕಲು ಆಗಲಿಲ್ಲ. ಅವರನ್ನು ರಾಜ್ಯಾದ್ಯಂತ ಫ್ರೀ ಆಗಿ ತಿರುಗಾಡಲು ಬಿಟ್ಟರು. ಲೋಕಾಯುಕ್ತಕ್ಕೆ ಪುನರ್‌ಜೀವ ಕೊಟ್ಟಿದ್ದೇವೆ ಎಂಬುದನ್ನು ಹೇಳಿಕೊಳ್ಳಲು ಆಗಲಿಲ್ಲ. ತಾವು ಬಂದ ನಂತರ ಕೈಗೊಂಡ ಅಭಿವೃದ್ಧಿ ಕೆಲಸಗಳನ್ನು ಹೇಳಿಕೊಳ್ಳಲು ಆಗಲಿಲ್ಲ. ಒಂದೊಂದು ದಿನ ಕಳೆದರೆ ಸಾಕು, ಅದೇ ಬೋನಸ್ ಎನ್ನುವಂತಾಯಿತು.

ಹಳೆ ಸರಕಾರದ ದುರಾಡಳಿತವನ್ನು ಹೊರ ತೆಗೆಯಲು ಬೊಮ್ಮಾಯಿಗೆ ಆಗಲೇ ಇಲ್ಲ. ಹೊಸಬರಿಗೆ ಟಿಕೆಟ್ ಕೊಡುತ್ತೇವೆ ಎಂಬ ನಿರ್ಧಾರದಲ್ಲಿ ಮನಸ್ಸಿಗೆ ಬಂದವರಿಗೆ ಟಿಕೆಟ್ ಕೊಡುತ್ತೇವೆ ಎಂಬ ಅಂಶ ಅಡಕವಾಗಿರುವುದನ್ನು ಗಮನಿಸಬೇಕು. ರಾಜಕಾರಣದಲ್ಲಿ ಪ್ರತಿ ನಡೆಗೂ ಲಾಜಿಕ್ ಇರಬೇಕು,  reasoning ಇರಬೇಕು. ನನಗೆ ಇಷ್ಟ, ಯಂಕಣ್ಣನಿಗೆ ಇಷ್ಟ ಎಂಬ ಕಾರಣಕ್ಕೆ ಏನೇನೋ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದಿಲ್ಲ. ಆದರೆ ಈ ಸಲ ಬಿಜೆಪಿ ಮಾಡಿದ್ದು ಅದೇ – ಉಷ್ಟ್ರಪಕ್ಷಿ ಧೋರಣೆ. ಮರಳರಾಶಿಯಲ್ಲಿ ತಲೆ ಹುದುಗಿಸಿಕೊಂಡರೂ ಜಗತ್ತನ್ನು ನೋಡಬ ಎಂಬ ಧಾಷ್ಟ್ಯ. ಮನಸ್ಸಿಗೆ ಬಂದ ನಿರ್ಧಾರ ತೆಗೆದುಕೊಂಡಿದ್ದು.

ಇಲ್ಲದಿದ್ದರೆ ಪುತ್ತೂರಿನಂಥ ಪುತ್ತೂರಿನಲ್ಲಿ ಬಿಜೆಪಿ ಮೂರನೇ ಸ್ಥಾನಕ್ಕೆ ಹೋಗುತ್ತಿತ್ತಾ? ಅರವಿಂದ ಲಿಂಬಾವಳಿಗೆ ಟಿಕೆಟ್ ತಪ್ಪಿಸಿ, ರಾಜಕಾರಣವೇ ಗೊತ್ತಿಲ್ಲದ ಅವರ ಪತ್ನಿಗೆ ಟಿಕೆಟ್ ಕೊಟ್ಟಿದ್ದು ಯಾವ ಲಾಜಿಕ್? ಕೊಪ್ಪಳದಲ್ಲೂ ಹೀಗೆ ಮಾಡಿದ್ದೇಕೆ?
ದ್ರಾಕ್ಷಿ ಗಿಡದಲ್ಲಿ ಕುಂಬಳಕಾಯಿ ಬಿಡುವುದಿಲ್ಲ. ಚುನಾವಣಾ ಹೊಸ್ತಿಲಲ್ಲಿ ಏಕಾಏಕಿ ಹುಚ್ಚಾಪಟ್ಟೆ ಪ್ರಯೋಗಗಳನ್ನು ಮಾಡು ವುದು ತರವಲ್ಲ. ಅಷ್ಟಕ್ಕೂ, ಇಡೀ ದೇಶದಲ್ಲಿ ತುರ್ತುಸ್ಥಿತಿಯ ನಂತರದ ಚುನಾವಣೆಯಲ್ಲಿ ಎಲ್ಲ ರಾಜ್ಯಗಳಲ್ಲಿ ಧೂಳೀಪಟ ವಾದರೂ ಕಾಂಗ್ರೆಸ್ಸನ್ನು ಆರಿಸಿದ ವಿಚಿತ್ರ ರಾಜ್ಯ ಕರ್ನಾಟಕ. ಇಂಥ ರಾಜ್ಯದಲ್ಲಿ ಸಾಕಷ್ಟು ಅಳೆದು ತೂಗಿ ಹೆಜ್ಜೆಯಿಡಬೇಕು. ಎಲ್ಲ ರಾಜ್ಯಗಳಲ್ಲೂ ಅದೇ ಪ್ರದರ್ಶನ ನೀಡುವ ಇವೆಂಟ್ ಮ್ಯಾನೇಜ್ಮೆಂಟ್ ಟೀಮಿನ ಸುಪರ್ದಿಗೆ ಬಿಡಬಾರದು ಎನ್ನುವುದನ್ನು ಕರ್ನಾಟಕ ತೋರಿಸಿಕೊಟ್ಟಿದೆ. ರಾಜಕೀಯ ಪಕ್ಷವನ್ನು ರಾಜಕೀಯ ಪಕ್ಷದಂತೆಯೇ ನಡೆಸಬೇಕು, ಸಂಘದ ಥರ ನಡೆಸಲು ಸಾಧ್ಯವಿಲ್ಲ. ಹಾಗೆ ಸಂಘವನ್ನು ರಾಜಕೀಯ ಪಕ್ಷದಂತೆ ನಡೆಸಲು ಸಾಧ್ಯವಿಲ್ಲ.

ಮೋದಿಯಂಥವರು ಬಿರುಸಿನ ಪ್ರಚಾರ ಕೈಗೊಂಡರೂ, ಏನೂ ಪ್ರಯೋಜನ ಆಗುವುದಿಲ್ಲ ಅಂತಾದರೆ, ಸ್ಥಳೀಯ ನಾಯಕರಿಗೆ ಮೋದಿಯವರ ಮಾಚೋ ಇಮೇಜನ್ನೂ ಕುಗ್ಗಿಸುವ ಸಾಮರ್ಥ್ಯ ಇದೆ ಅಂತಾಯಿತು. ಕ್ಯಾನ್ಸರ್ ಹುಣ್ಣಿಗೆ ಬ್ಯಾಂಡೇಡ್ ಕಟ್ಟಿ ಗುಣಪಡಿಸಲು ಸಾಧ್ಯವಿಲ್ಲ. ಕರ್ನಾಟಕದ ಹುಣ್ಣಿಗೆ ಮೋದಿಯಂಥವರಿಗೂ ರಾಮಬಾಣವಾಗಲು ಆಗಲಿಲ್ಲ. ರಾಜ್ಯ ಬಿಜೆಪಿ ಯನ್ನು ಕಳೆದ ಹತ್ತು ವರ್ಷಗಳಿಂದ ನಡೆಸುತ್ತಿರುವವರು ಉತ್ತರಿಸಬೇಕು.

ಬಿಜೆಪಿ ಬಗ್ಗೆ ಜನಮಾನಸದಲ್ಲಿ ಯಾವ ಪ್ರಮಾಣದ ಆಕ್ರೋಶವಿತ್ತು ಎಂಬುದು ಫಲಿತಾಂಶದಲ್ಲಿ ಅಡಕವಾಗಿದೆ. ಆದರೆ ಈ ಸಂಗತಿ ಬಿಜೆಪಿ ನಾಯಕರಿಗೆ ಗೊತ್ತಾಗಲೇ ಇಲ್ಲ. ಲಿಂಗಾಯತರು ಸೇರಿದಂತೆ ಸಮಾಜದ ಎಲ್ಲ ಸಮುದಾಯಗಳೂ ಕಾಂಗ್ರೆಸ್ಸನ್ನು ಬೆಂಬಲಿಸಿರುವುದು ಬಿಜೆಪಿಯ ಬಗ್ಗೆ ಜನ ರೋಸಿ, ಹೇಸಿ ಹೋದುದರ ಪ್ರತೀಕ. ಸ್ಪರ್ಧಿಸಿದ ೨೨೪ ಕ್ಷೇತ್ರಗಳ ಪೈಕಿ ೧೫೯ ರಲ್ಲಿ ಸೋತು ಹೋಯಿತೆಂದರೆ, ಬಿಜೆಪಿ ಸಂಘಟನೆ ಅದೆಷ್ಟು ದುರ್ಬಲವಾಗಿತ್ತು ಎಂಬುದನ್ನು ಅರ್ಥ ಮಾಡಿಕೊಳ್ಳಬಹುದು.

ಯಡಿಯೂರಪ್ಪನವರನ್ನು ವಿನಾಕಾರಣ ಅಧಿಕಾರದಿಂದ ಕೆಳಗಿಸಿದ್ದು ವಿನಾಶಕಾರಿಯಾಗಿ ಪರಿಣಮಿಸಿತು. ಕಾಂಗ್ರೆಸ್ಸಿನ ‘ಗ್ಯಾರಂಟಿ’ ಅಸಗಳನ್ನು ಬಿಜೆಪಿ ನಿರ್ಲಕ್ಷಿಸಿದ್ದು, ಕೊನೆ ಕ್ಷಣದಲ್ಲಿ ಪೂರ್ವಸಿದ್ಧತೆಯಿಲ್ಲದೆ ಅನ್ಯ ಮನಸ್ಸಿನಿಂದ ತಾನೂ ಉಚಿತಗಳನ್ನು ಘೋಷಿಸಿದ್ದು ಬಿಜೆಪಿಯ ಯಡವಟ್ಟುತನಗಳನ್ನು ತೋರಿಸುತ್ತದೆ. ಫಲಿತಾಂಶ ಬಂದ ನಂತರ ಕಟೀಲ್ ರಾಜೀನಾಮೆ ಕೊಡಬೇಕಿತ್ತು ಅಂತ ಅನೇಕರು ಈಗ ಹೇಳುತ್ತಿದ್ದಾರೆ.

ಅಸಲಿಗೆ ಅವರು ಚುನಾವಣೆಗೆ ಆರು ತಿಂಗಳ ಮೊದಲೇ ಹಾಗೆ ಮಾಡಬೇಕಿತ್ತು. ಆದರೆ ಅವರನ್ನು ಮುಂದಿಟ್ಟುಕೊಂಡು ಪಕ್ಷವನ್ನು ತಮ್ಮ ನಿಯಂತ್ರಣದಲ್ಲಿಟ್ಟುಕೊಳ್ಳಲು ಪ್ರಯತ್ನಿಸಿದ್ದರ ಫಲವನ್ನು ಈಗ ಬಿಜೆಪಿ ಅನುಭವಿಸುತ್ತಿದೆ. ಚುನಾವಣೆಗೂ ಮುನ್ನ ಕಾರ್ಯಕರ್ತರಿಗೆ ಹುದ್ದೆ ಕೊಡುವ ಭರದಲ್ಲಿ, ಅಪಾತ್ರರನ್ನು ರಾಜ್ಯಸಭೆಗೆ, ವಿಧಾನಪರಿಷತ್‌ಗೆ ಕಳಿಸಿದ್ದರ ಫಲ ಚುನಾವಣಾ ಸಂದರ್ಭದಲ್ಲಿ ಪ್ರಯೋಜನಕ್ಕೆ ಬರಲಿಲ್ಲ. ಶಾಂತಾರಾಮ ಸಿದ್ದಿ, ಸ್ಪ್ಯಾನ್ ನಾರಾಯಣ, ಕಡಾಡಿಯವರು ಚುನಾವಣಾ ಪ್ರಚಾರದಲ್ಲೂ ಬಳಕೆಯಾಗಲಿಲ್ಲ. ಅಸಂಬಂದ್ಧ ಪ್ರಯೋಗ, ತೋಳಸಂಬಟ್ಟೆ ನಿರ್ಧಾರ, ಅನರ್ಥಕಾರಿ ರಾಜಕೀಯ ನಡೆ, ತಾನು ಹೇಳಿದಂತೆ ಆಗಬೇಕು ಎಂಬ ಮೊಂಡು ಹಠ, ಸಂಘಟನೆಯ ದುರ್ಬಳಕೆ, ಬೇರೆಯವರೆಲ್ಲ ಕೊಳಕು, ತಾನು ಮಾತ್ರ ಶುಭ್ರ ಎಂಬ ‘ವಾಷಿಂಗ್ ಪೌಡರ್ ನಿರ್ಮಾ’ ಮನಸ್ಥಿತಿ, ಪಕ್ಷವನ್ನು ರಸಾತಳಕ್ಕೆ ತಳ್ಳಿದೆ.

ಮೋದಿಯಂಥ ಅಪ್ಪೆ ಮಿಡಿಯನ್ನು ಇಟ್ಟುಕೊಂಡು ಉಪ್ಪಿನಕಾಯಿಗೆ ತಡಕಾಡಿದರು ಎಂಬಂತಾಗಿ ಹೋಯಿತು ಬಿಜೆಪಿ ಸ್ಥಿತಿ.
ಕರ್ನಾಟಕ ಬಿಜೆಪಿ ಉದ್ಧಾರವಾಗಲು ಕಣ್ಣಿಗೆ ಕಾಣದ, ಆದರೆ ಸರ್ವಾಂತರ್ಯಾಮಿಯಾಗಿರುವ, ಬಿಗ್ ಬಾಸ್ ಮೆಂಟಾಲಿಟಿ
ಅಂತ್ಯವಾಗಬೇಕು. ಇಲ್ಲದಿದ್ದರೆ ‘ಸಂಘ’ಕ್ಕೂ ಕೆಟ್ಟ ಹೆಸರು ತಪ್ಪಿದ್ದಲ್ಲ. ಜಗನ್ನಾಥ ಭವನಕ್ಕೆ ಕೇಶವಕೃಪಾ ಮಾರ್ಗದರ್ಶನ
ಮಾಡಬೇಕು, ಆದರೆ ನಿಯಂತ್ರಿಸಲು ಹೋಗಬಾರದು, ಸವಾರಿ ಮಾಡಬಾರದು. ರಾಜಕೀಯ ಪಕ್ಷವನ್ನು ರಾಜಕಾರಣಿಗಳೇ
ನಡೆಸಲು ಅನುವು ಮಾಡಿಕೊಡಬೇಕು. ಇಲ್ಲದಿದ್ದರೆ ‘ಭವನ’ದ ಹೊಲಸುಗಳೆಲ್ಲ ಪವಿತ್ರವಾದ ‘ಕೃಪಾ’ಕ್ಕೆ ಅಂಟಿಕೊಳ್ಳುತ್ತದೆ.

ಸಂಘದವರಿಗೆ ಮಾಡಲು ಬೇರೆ ಕೆಲಸಗಳಿವೆ. ತಿಪ್ಪೇಸ್ವಾಮಿ, ಅರುಣಕುಮಾರ, ಪ್ರಸಾದಿಗಳಿಗೆ ಬಿಜೆಪಿ ನಿಯಂತ್ರಿಸುವ
ತಲುಬು ಇದ್ದರೆ, ಯಾವುದಾದರೂ ಚುನಾವಣೆಯಲ್ಲಿ ನಿಂತು ಗೆದ್ದು ಬಾರಪ್ಪ ಎಂದಾದರೂ ಹೇಳಬೇಕು. ಇಲ್ಲದಿದ್ದರೆ ಅವರು
ಬಿಜೆಪಿ ನಿಯಂತ್ರಿಸಲು ಹೋದರೆ ಅಜರುದ್ದೀನ್ ಕೃಷಿ ಬಗ್ಗೆ ಪಾಠ ಮಾಡಿದಂತಾಗುತ್ತದೆ. ಯಾವತ್ತೂ ಜವಾಬ್ದಾರಿ ಹೊತ್ತು
ಕೊಂಡವರು ಉತ್ತರದಾಯಿಗಳಾಗಬೇಕು. Responsibility without accountability ಒಳ್ಳೆಯದಲ್ಲ. ದೀನದಯಾಳ ಉಪಾಧ್ಯಾಯರು ಹೇಳಿದ್ದೂ ಇದನ್ನೇ. ಈಗ ಇಷ್ಟು ಸಾಕು.