Saturday, 23rd November 2024

ಬರಿಗಾಲಲ್ಲಿ ನಡೆಯುವುದು, ಮದುವೆಯಾಗದಿರುವುದು ಅರ್ಹತೆ, ಶ್ರೇಷ್ಠತೆ ಅಲ್ಲ !

ಇದೇ ಅಂತರಂಗ ಸುದ್ದಿ

vbhat@me.com

ಇತ್ತೀಚೆಗೆ ಸ್ನೇಹಿತರೊಬ್ಬರು ಮೊನ್ನೆಯ ವಿಧಾನಸಭಾ ಚುನಾವಣೆಯಲ್ಲಿ ಆರಿಸಿ ಬಂದ ನೂತನ ಶಾಸಕರ ಬಗ್ಗೆ ಮಾತಾಡು ತ್ತಿದ್ದರು. ಮೊದಲ ಬಾರಿಗೆ ಆರಿಸಿ ಬಂದವರ ಪೈಕಿ ಯಾರು, ಹೇಗೆ, ಅವರ ಸಾಮರ್ಥ್ಯ, ಒಳ್ಳೆಯತನ, ಗುಣಕಥನಗಳ ಬಗ್ಗೆ ಚರ್ಚಿಸುತ್ತಿದ್ದರು. ಹಾಗೆ ಮಾತಾಡುತ್ತಾ ಬೈಂದೂರು ಕ್ಷೇತ್ರದಿಂದ ಆರಿಸಿ ಬಂದಿರುವ ಗುರುರಾಜ ಶೆಟ್ಟಿ ಗಂಟಿಹೊಳಿ ಬಗ್ಗೆ ಮಾತಾಡಿದರು. ನನ್ನ ಸ್ನೇಹಿತರಿಗೆ ಗಂಟಿಹೊಳಿ ಬಗ್ಗೆ ಹೆಚ್ಚು ಗೊತ್ತಿಲ್ಲ, ಅವರ ಪರಿಚಯವೂ ಇಲ್ಲ. ಪತ್ರಿಕೆಯಲ್ಲಿ ಪ್ರಕಟ ವಾಗಿರುವ ವರದಿಗಳನ್ನು ಓದಿ, ತಮ್ಮ ಅಭಿಪ್ರಾಯ ರೂಢಿಸಿಕೊಂಡವರು.

ಸಾರ್, ಗಂಟಿಹೊಳಿ ಗ್ರೇಟ್ ಸಾರ್. ಚಪ್ಪಲ್ಲನ್ನೇ ಧರಿಸುವುದಿಲ್ಲವಂತೆ. ಬರಿಗಾಲಲ್ಲಿ ನಡೆಯುತ್ತಾರಂತೆ. ವಿಧಾನಸಭೆಗೂ ಬರಿಗಾಲ ಬರುತ್ತಾರಂತೆ. ಇಂಥವರು ಇರಬೇಕು ಸಾರ್. ಎಷ್ಟು ಸಿಂಪಲ್ ಅಲ್ವಾ? ನಿಜಕ್ಕೂ ಗ್ರೇಟ್ ಸಾರ್ ಅವರು. ನನಗೆ ಅವರ ಬಗ್ಗೆ ಬಹಳ ಅಭಿಮಾನ ಮೂಡಿತು’ ಎಂದು ತಮ್ಮ ಪ್ರಶಂಸೆಯ ಧಾರೆಯನ್ನು ಭೋರ್ಗರೆದರು.

ನಾನು ‘ಹೂಂ..ಹೂಂ..’ ಎಂದು ತಲೆ ಅಡಿಸಿದೆ. ಅಷ್ಟೊತ್ತಿಗೆ ಅಲ್ಲಿಗೆ ನನ್ನ ಇನ್ನೊಬ್ಬ ಮಿತ್ರರು ಆಗಮಿಸಿದರು. ಅವರ ಬಳಿಯೂ ಇವರು, ಗಂಟಿಹೊಳಿ ಅವರ ಕುರಿತು ಗಂಟು ಬಿಚ್ಚಿದರು. ‘ಏನ್ಸಾರ್, ನಮಗೆ ಇಂಥ ಶಾಸಕರು ಬೇಕಾಗಿದ್ದಾರೆ. ಗಂಟಿಹೊಳಿ ಅವರು ಚಪ್ಪಲಿಯನ್ನೇ ಹಾಕದ ಬರಿಗಾಲ ಸಂತ’ ಎಂದು ಹೊಗಳಲಾರಂಭಿಸಿದರು.

ಆಗ ನಾನು ಹೇಳಿದೆ – ‘ಗಂಟಿಹೊಳಿಯವರು ಒಳ್ಳೆಯವರೆಂದು ಕೇಳಿದ್ದೇನೆ. ಆದರೆ ಅವರು ಚಪ್ಪಲಿ ಧರಿಸದಿರುವುದು ನಮಗೆ ಮಹಾನ್ ಸಂಗತಿ ಆಗಬೇಕಿಲ್ಲ. ಶಾಸಕರಾದವರು ಒಳ್ಳೆಯ ಕೆಲಸ ಮಾಡಿದರೆ ಅದು ಗ್ರೇಟ್. ಅವರು ಚಪ್ಪಲಿಯನ್ನಾದರೂ ಹಾಕಲಿ, ಹಾಕದಿರಲಿ, ಬೂಟನ್ನಾದರೂ ಹಾಕಲಿ, ಹೈಹೀಲ್ಡ್‌ನ್ನಾದರೂ ಧರಿಸಲಿ, ಅದು ಮುಖ್ಯವಾಗಬೇಕಿಲ್ಲ. ಅವೆಲ್ಲ ಅವರ ವೈಯಕ್ತಿಕ ತಲುಬುಗಳು. ಅಷ್ಟಕ್ಕೂ ಬರಿಗಾಲಲ್ಲಿ ನಡೆಯುವವರೆಲ್ಲ ಸಂತರಲ್ಲ.’ ನನ್ನ ಸ್ನೇಹಿತರು ಮಾತಾಡಲಿಲ್ಲ.

‘ನಿಮಗೆ ಇನ್ನೊಂದು ವಿಷಯ ಹೇಳಬೇಕು. ನೀವು ಗಂಟಿಹೊಳಿಯವರು ನಾಮಪತ್ರ ಸಲ್ಲಿಸುವಾಗ ಆಸ್ತಿ ಘೋಷಿಸಿ ಕೊಳ್ಳುತ್ತಾರಲ್ಲ. ಅವರು ಎಷ್ಟು ಆಸ್ತಿ ಘೋಷಿಸಿಕೊಂಡಿದ್ದಾರೆ ಗೊತ್ತಾ?’ ಎಂದು ಕೇಳಿದೆ. ಅದಕ್ಕೆ ಅವರು ಗೊತ್ತಿಲ್ಲವೆಂದು ತಲೆಯಾಡಿಸಿದರು.‘ಬರೋಬ್ಬರಿ ಏಳು ಕೋಟಿ ರುಪಾಯಿ ಘೋಷಿಸಿಕೊಂಡಿದ್ದಾರೆ. ಏಳು ಕೋಟಿ ಇದ್ದವರಿಗೆ ನೂರಿನ್ನೂರು
ರುಪಾಯಿ ಚಪ್ಪಲಿ ಖರೀದಿಸಲು ಆಗುವುದಿಲ್ಲವಾ? ಹೀಗಿರುವಾಗ ಅವೆ ಮುಖ್ಯ ಸಂಗತಿಗಳಾಗಬೇಕಿಲ್ಲ. ನಿಮ್ಮಂಥವರು
ಇಂಥ ಕ್ಷುಲಕ ವಿಷಯಗಳಿಗೆ ಮಾರು ಹೋಗಬಾರದು.

ಅದೇ ನಮಗೆ ಆದರ್ಶವಾಗಬಾರದು, ಮುಖ್ಯವೆನಿಸಬಾರದು. ಶಾಸಕರ ವ್ಯಕ್ತಿತ್ವ, ಚಾರಿತ್ರ್ಯ, ಸಾಮರ್ಥ್ಯಗಳು ನಮಗೆ ಮುಖ್ಯವಾಗಬೇಕೇ ಹೊರತು, ಅವರು ಪಂಚೆ ಧರಿಸುತ್ತಾರಾ, ವಾಚು ಕಟ್ಟುತ್ತಾರಾ, ಕಟ್ಟುವುದಿಲ್ಲವಾ.. ಅವೆ ಮುಖ್ಯವಾಗ ಬಾರದು. ಒಬ್ಬ ಅಭ್ಯರ್ಥಿಯನ್ನು ಆರಿಸಲು ಅವೆ ಮಾನದಂಡಗಳಾಗಬಾರದು’ ಎಂದೆ.

ನಮ್ಮ ಸ್ನೇಹಿತರು ಏನೂ ಹೇಳದೇ ಸುಮ್ಮನೆ ಕುಳಿತಿದ್ದರು. ‘ಕೋಟಿ ಕೋಟಿ ಆಸ್ತಿಯಿಟ್ಟುಕೊಂಡು ಚಪ್ಪಲಿ ಧರಿಸದಿರುವುದು ಸರಳತೆಯಲ್ಲ. ಅಷ್ಟಕ್ಕೂ ಅದು ಗಲೀಜಿನ ಪ್ರತೀಕ. ಗಂಟಿಹೊಳಿಯವರು ಚಪ್ಪಲಿ ಧರಿಸದಿರುವುದನ್ನು ವಿಶ್ವದ ಎಂಟನೇ ಅದ್ಭುತ ಎಂಬ ರೀತಿಯಲ್ಲಿ ಪರಿಗಣಿಸಿ, ನಿಮ್ಮ ಅಮಾಯಕತೆ, ಮುಗ್ಧತೆಯನ್ನು ಪ್ರದರ್ಶಿಸಬೇಡಿ’ ಎಂದೆ. ನನ್ನ ಸ್ನೇಹಿತರು ತದೇಕಚಿತ್ತದಿಂದ ನನ್ನ ಮುಖವನ್ನೇ ನೋಡುತ್ತಾ ಕುಳಿತಿದ್ದರು.

ಕೊನೆಯಲ್ಲಿ ಹೇಳಿದೆ – ‘ಅರುಣ್ ಶೌರಿ ಅವರ ಒಂದು ಪುಸ್ತಕದ ಹೆಸರು Worshiping The False Gods ಅಂತ.
ನಾವು ಯಾರ್ಯಾರನ್ನೋ ಆದರ್ಶ ಎಂದು ಭಾವಿಸಿ ಆರಾಧಿಸುತ್ತೇವೆ, ಪೂಜಿಸುತ್ತೇವೆ. ಉದಾಹರಣೆಗೆ, ಬಿಜೆಪಿಯವರು ಸಂಘ ಪರಿವಾರದಿಂದ ಪಕ್ಷಕ್ಕೆ ಬಂದವರನ್ನು ಅತಿ ವಿನಯದಿಂದ, ಗೌರವದಿಂದ ಕಾಣುತ್ತಾರೆ. ತಕ್ಷಣ ಅವರ ಹೆಸರಿನ ಕೊನೆ ಯಲ್ಲಿ ಜೀ.. ಜೀ.. ಎಂದು ಅವರನ್ನು ಜೀರುಂಡೆಗಳನ್ನಾಗಿ ಮಾಡಿಬಿಡುತ್ತಾರೆ. ಕಾರಣ ಸಂಘದಿಂದ ಬಿಜೆಪಿಗೆ ಬಂದವರು
ಮದುವೆಯಾಗಿಲ್ಲ ಅಂತ ಹೇಳುತ್ತಾರೆ. ಮದುವೆಯಾಗದಿರುವುದು ಅವರ ಶಕ್ತಿ ಅಥವಾ ದೌರ್ಬಲ್ಯ.

ಅದು ಅವರ ವೈಯಕ್ತಿಕ ಆಯ್ಕೆ, ನಿರ್ಧಾರ. ಅದು ಅರ್ಹತೆ ಅಲ್ಲ. ಅದು ಶ್ರೇಷ್ಠತೆ ಅಲ್ಲ. ಅದನ್ನೇ ಒಂದು ಮಹಾನ್ ಗುಣ ಎಂದು
ಪರಿಗಣಿಸಬೇಕಿಲ್ಲ. ಬರಿಗಾಲಲ್ಲಿ ನಡೆಯುವುದು, ಮದುವೆ ಆಗದಿರುವುದು ಯೋಗ್ಯತೆಯ ಮಾಪಕಗಳಾಗಬಾರದು. ಮದುವೆ ಯಾಗಿಲ್ಲ ಎಂಬ ಕಾರಣಕ್ಕೆ ಅಪಾತ್ರರು, ಅಯೋಗ್ಯರನ್ನೆಲ್ಲ ಸಹಿಸಿಕೊಳ್ಳಬಾರದು. ಇಂಥ ವ್ಯಸನಗಳೇ ಶ್ರೇಷ್ಠತೆ ಆಗಬಾರದು.’

ಜಗನ್ನಾಥರಾಯರ ಹಾಸ್ಯ ಪ್ರಸಂಗ

ಜನಸಂಘದ ನಾಯಕರಾಗಿದ್ದ ಜಗನ್ನಾಥ ರಾವ್ ಜೋಶಿ ಹಾಸ್ಯಪ್ರಿಯರು. ಅವರಿಗೆ ತಮಾಷೆ ಇಲ್ಲದೆ ಮಾತಾಡಲು ಬರುತ್ತಿರಲಿಲ್ಲ. ಅವರ ಭಾಷಣ ಅಂದ್ರೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುತ್ತಿದ್ದರು.

‘ನನ್ನ ಭಾಷಣ ಕೇಳಿ, ಆನಂದಿಸಿದವರು ವೋಟು ಹಾಕಿದ್ರೆ ಸಾಕು, ನಾನು ಗೆಲ್ಲುತ್ತೇನೆ’ ಎಂದು ಹೇಳುತ್ತಿದ್ದರು. ಜಗನ್ನಾಥ ರಾಯರು ಇದ್ದಲ್ಲಿ ನಗುವಿಗೆ ಬರವಿರಲಿಲ್ಲ. ಮಹಾರಾಷ್ಟ್ರ ವಿಧಾನಸಭೆಯಲ್ಲಿ ಎರಡು ಅವಧಿಗೆ ಶಾಸಕರಾಗಿದ್ದ ಡಾ.ಅರವಿಂದ ಲೇಲೇ, ‘ದೀಪಕಮಲ’ ಎಂಬ ಪುಸ್ತಕದಲ್ಲಿ ಜಗನ್ನಾಥರಾಯರ ಬಗ್ಗೆ ಹಲವು ಹಾಸ್ಯ ಪ್ರಸಂಗಗಳನ್ನು ಹಂಚಿಕೊಂಡಿದ್ದಾರೆ.

ಡಾ.ಲೇಲೇ ಜಗನ್ನಾಥರಾಯರ ಒಡನಾಡಿಗಳಾಗಿದ್ದರು. ಒಮ್ಮೆ ಜಗನ್ನಾಥರಾಯರನ್ನು ಯಾರೋ, ‘ರಾಯರೇ, ನೀವು
ಮದುವೆಯನ್ನೇಕೆ ಮಾಡಿಕೊಂಡಿಲ್ಲ?’ ಎಂದು ಕೇಳಿದರು. ಅದಕ್ಕೆ ರಾಯರು, ‘ನೋಡಪ್ಪ, ನನ್ನ ಊರು ನರಗುಂದ. ಅಲ್ಲಿ ಬಾವಿ
ನೀರು ಬಹಳ ಆಳ. ಬೇಸಿಗೆಯಲ್ಲಿ ನೀರೇ ಇರುವುದಿಲ್ಲ. ಅದರನಾದರೂ ಬೆಕ್ಕು ಬಿದ್ದರೆ ನೇರವಾಗಿ ಕಾಶಿಗೆ ಹೋಗುತ್ತದೆ.
ಅಂಥ ಬೇಸಿಗೆಯಲ್ಲಿ ಎಲ್ಲಿಂದಲೋ ನೀರನ್ನು ಹೊತ್ತು ತರಬೇಕು. ಇಂಥ ಊರಿಗೆ, ಅದೂ ನನ್ನಂಥವನಿಗೆ ಯಾರು ತಮ್ಮ
ಮಗಳನ್ನು ಕೊಡ್ತಾರೆ ಹೇಳು? ಹೀಗಾಗಿ ನಾನು ಮದುವೆ ಆಗಲಿಲ್ಲ.’

ಇಂದಿಗೂ ಎಲ್ಲರೂ, ‘ಲಗ್ನವನ್ನೇಕೆ ಮಾಡಿಕೊಂಡಿಲ್ಲ ಎಂದು ಕೇಳುತ್ತಾರೆಯೇ ಹೊರತು, ಲಗ್ನ ಮಾಡಿಕೊಳ್ಳುತ್ತೀರಾ ಎಂದು ಯಾರೂ ಕೇಳುವುದಿಲ್ಲ’ ಎಂದು ಹೇಳಿದ್ದರು. ಹುಬ್ಬಳ್ಳಿಯಲ್ಲಿ ಒಂದು ಸಭೆ. ಜಗನ್ನಾಥರಾಯರು ಮಾತಾಡಲು ಎದ್ದು ನಿಂತರು. ವೇದಿಕೆಯ ಒಂದು ಮೂಲೆಯಲ್ಲಿ ಮೈಕ್ ಇಟ್ಟಿದ್ದರಿಂದ, ದಢೂತಿಯಾದರೂ ರಾಯರು ಪ್ರೇಕ್ಷಕರಿಗೆ ಸರಿಯಾಗಿ ಕಾಣಿಸುತ್ತಿರ ಲಿಲ್ಲ. ಆಗ ಪ್ರೇಕ್ಷಕರು, ‘ಮಧ್ಯ ಬನ್ನಿ, ನಮಗೆ ಕಾಣಿಸುವುದಿಲ್ಲ’ ಎಂದು ಕೂಗಲಾರಂಭಿಸಿದರು.

ಪ್ರೇಕ್ಷಕರ ಕೋರಿಕೆ ಮೇರೆಗೆ ಮೈಕನ್ನು ಮಧ್ಯಕ್ಕೆ ಸರಿಸಲಾಯಿತು. ರಾಯರು ಅಲ್ಲಿ ಬಂದು ಹೇಳಿದ ಮೊದಲ ಮಾತು –
‘ಇಂದಿನವರೆಗೆ ನಾನು ಶ್ರವಣೀಯ ಮಾತ್ರ ಆಗಿದ್ದೇ ಎಂದು ಭಾವಿಸಿದ್ದೆ. ಆದರೆ ಇಂದು ನನಗೆ ಗೊತ್ತಾಯಿತು, ನಾನು
ಪ್ರೇಕ್ಷಣೀಯ ಕೂಡ ಆಗಿದ್ದೇನೆಂದು.’ ಒಮ್ಮೆ ಒಂದು ಬೈಠಕ್. ಒಬ್ಬ ಕಾರ್ಯಕರ್ತ ಪದೇ ಪದೆ ಏಳುತ್ತಿದ್ದ. ಅವನು ಲುಂಗಿ ಯನ್ನು ಅರ್ಧದವರೆಗೆ ಎತ್ತಿ ಕಟ್ಟಿದ್ದ.

ಅಲ್ಲಿದ್ದವರು ಅವನಿಗೆ ಲುಂಗಿಯನ್ನು ಕೆಳಗಿನವರೆಗೆ ಬಿಡಲು ಹೇಳಿದರು. ಆದರೆ ಅವನು ಏಳುತ್ತಿದ್ದಂತೆ, ಅಭ್ಯಾಸಬಲದಿಂದ
ಲುಂಗಿ ಎತ್ತುತ್ತಿದ್ದ. ಅವನು ಐದಾರು ಪ್ರಶ್ನೆಗಳನ್ನು ಕೇಳಿದ. ಪ್ರಶ್ನೆ ಕೇಳಲು ಎದ್ದಾಗಲೆಲ್ಲ ಲುಂಗಿ ಎತ್ತಿ ಕಟ್ಟುತ್ತಿದ್ದ. ಅಲ್ಲಿದ್ದವರೆಲ್ಲ
ಅವನು ಕೇಳುತ್ತಿದ್ದ ಪ್ರಶ್ನೆ ಮತ್ತು ಲುಂಗಿ ಕಟ್ಟುವ ಮತ್ತು ಬಿಡುವ ವರ್ತನೆಗೆ ಬೇಸತ್ತು ಹೋದರು.

ಅಷ್ಟಾದರೂ ಸುಮ್ಮನಾಗದ ಆತ, ‘ರಾಯರೇ, ಕೊನೆಯದಾಗಿ ನಿಮಗೆ ಒಂದು ಪ್ರಶ್ನೆ ಕೇಳುತ್ತೇನೆ. ನಮ್ಮ ದೇಶದಲ್ಲಿ ಸಂಪೂರ್ಣ ಕ್ರಾಂತಿ ಯಾವಾಗ ಆಗುತ್ತದೆ?’ ಎಂದು ಕೇಳಿದ. ಅದಕ್ಕೆ ರಾಯರು ಹೇಳಿದರು – ‘ನೀನು ಈಗ ಲುಂಗಿಯನ್ನು
ಅರ್ಧಕ್ಕೆ ಎತ್ತುತ್ತಿದ್ದೀಯಾ. ಪೂರ್ಣ ಎತ್ತಿದ ದಿನ ಸಂಪೂರ್ಣ ಕ್ರಾಂತಿಯಾಗುವುದು’

ಕೋಳಿ ತಿನ್ನುವ ಬ್ರಾಹ್ಮಣರಾದದ್ದು ಹೇಗೆ? 
ರಾಜಕಾರಣಿಗಳ ಭಾಷಣವನ್ನು ವರದಿ ಮಾಡುವುದು ಒಂದು ಕಲೆ. ಅವರ ಭಾಷಣವನ್ನು ಸರಿಯಾಗಿ ಅರ್ಥೈಸಿಕೊಳ್ಳದ ಪತ್ರಕರ್ತರು ತಮ್ಮ ಮನಸ್ಸಿನ ನೇರಕ್ಕೆ ವರದಿ ಮಾಡಿ, ತಪ್ಪು ಗ್ರಹಿಕೆ ಮೂಡಿಸಿದ ಅವೆಷ್ಟೋ ಪ್ರಸಂಗಗಳಿವೆ. ಇದರಿಂದ ಕೆಲವರಿಗೆ ಕೆಡುಕಾಗಿರಬಹುದು, ಇನ್ನು ಕೆಲವರಿಗೆ ಒಳ್ಳೆಯದೂ ಆಗಿರ ಬಹುದು. ಕರ್ನಾಟಕ ಕಂಡ ವರ್ಣರಂಜಿತ ಮುಖ್ಯಮಂತ್ರಿಗಳಲ್ಲಿ ಒಬ್ಬರಾದ ದಿವಂಗತ ಆರ್.ಗುಂಡೂರಾವ್ ಅವರ ಜೀವನದ ಒಂದು ಪ್ರಸಂಗವನ್ನು, ನಾನು ಪತ್ರಿಕೋದ್ಯಮಕ್ಕೆ ಸೇರಿದ ದಿನಗಳಲ್ಲಿ ಆಗ ನಮ್ಮ ಹಿರಿಯರು ಹೇಳುತ್ತಿದ್ದುದನ್ನು ಈಗ ಮೆಲುಕು ಹಾಕುತ್ತೇನೆ.

ಆಗ ಗುಂಡುರಾಯರು ಮುಖ್ಯಮಂತ್ರಿ. ಬೆಂಗಳೂರಿನ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ಒಂದು ಸಾರ್ವಜನಿಕ ಸಭೆ.
ಗುಂಡೂರಾಯರ ಮಾತು ಅಂದ್ರೆ ಆ ದಿನಗಳಲ್ಲಿ ಬಹಳ ಜನ ಸೇರುತ್ತಿದ್ದರು. ಆ ದಿನವೂ ಅದಕ್ಕೆ ಹೊರತಾಗಿರಲಿಲ್ಲ. ಅದೇನಾಯಿತೋ, ಏನೋ, ಗುಂಡೂರಾಯರು ಮಾತಾಡುವಾಗ, ಒಬ್ಬ ಪೋಲಿ ಯುವಕ, ವೇದಿಕೆಯತ್ತ ಟೊಮೆಟೊವನ್ನು ಬೀಸಿ ಎಸೆದ. ಆತ ವೇದಿಕೆಯಿಂದ ದೂರದಲ್ಲಿ ಇದ್ದುದರಿಂದ ಅದು ವೇದಿಕೆ ತನಕ ತಲುಪಲಿಲ್ಲ. ಆದರೆ ಆತ ಎಸೆದಿದ್ದನ್ನು ಆತನ ಹಿಂದಿದ್ದವರು ಮತ್ತು ವೇದಿಕೆಯಲ್ಲಿದ್ದವರು ಗಮನಿಸಿದರು.

ಆತ ಟೊಮೆಟೊ ಎಸೆದಿದ್ದನ್ನು ಗುಂಡೂರಾಯರು ನೋಡಿದರು. ತಕ್ಷಣ ಅವರು ಕೆಂಡಾಮಂಡಲರಾದರು. ತನಗೇ ಆ
ಟೊಮೆಟೊ ಎಸೆದಿದ್ದು ಎಂದು ಅವರು ಇನ್ನಷ್ಟು ಕೋಪೋದ್ರಿಕ್ತರಾದರು. ಅಷ್ಟಕ್ಕೇ ಭಾಷಣ ನಿಲ್ಲಿಸಿದ ಅವರು, ಪಕ್ಕದ
ಟೇಬಲ್ ಮೇಲಿಟ್ಟ ಪೇಪರ್‌ವೇಟ್‌ನ್ನು ಕೈಗೆತ್ತಿಕೊಂಡರು. ರಾಯರು ಸಹನೆ ಕಳೆದುಕೊಳ್ಳುತ್ತಿದ್ದಂತೆ, ಪೊಲೀಸರು ಜಾಗೃತ ರಾದರು.

‘ಯಾರ್ರ‍ೀ ಅವನು? ಎಲ್ಲಿ ಹೋದ ಅವನು? ನೀವು ಅವನಿಗೆ ಹೊಡಿಯಬೇಡಿ. ನಾನು ಅವನಿಗೆ ಇಲ್ಲಿಂದಲೇ ಪೇಪರ್‌ವೇಟ್‌ ನಿಂದ ಹೊಡೆಯುತ್ತೇನೆ’ ಎಂದು ಅಬ್ಬರಿಸಿದರು. ಆ ಪೋಲಿ ಯುವಕನಿಗೆ ಹೊಡೆಯುವುದು ಗುಂಡೂರಾಯರ ಉದ್ದೇಶ ವಾಗಿರಲಿಲ್ಲ. ಅವನನ್ನು ಹೆದರಿಸಲು ಹಾಗೆ ಹೇಳಿದ್ದರು. ಆದರೆ ರಾಯರು ಹಾಗೆ ಹೇಳುತ್ತಲೇ ಆತ ಓಡಲಾರಂಭಿಸಿದ.
ಆದರೆ ರಾಯರು, ಪೇಪರ್‌ವೇಟ್‌ನ್ನು ಕೈಯಲ್ಲಿ ಹಿಡಿದುಕೊಂಡು ಬುಗುರಿಯಂತೆ ತಿರುಗಿಸುತ್ತಾ, ‘ನಿನ್ನ  ಯೋಗ್ಯತೆಗಿಷ್ಟು… ಧಮ್ಮಿದ್ದಿದ್ದರೆ ನನ್ನ ಹತ್ತಿರ ಬಂದು, ನನಗೆ ತಾಗುವಂತೆ ಹೊಡೆಯಬೇಕಿತ್ತು.

ಯಾವನಯ್ಯ ನೀನು? ತಾಕತ್ತಿಲ್ಲದವನು. ನಾನು ಪುಳಿಚಾರು ತಿನ್ನುವ ಬ್ರಾಹ್ಮಣ ಅಂತ ತಿಳಿದಿದ್ದೀಯಾ? ನನ್ನ ತಾಕತ್ತು ನಿನಗೆ ಗೊತ್ತಿಲ್ಲ. ನಾನು ಕೋಳಿ ಸಾರು ತಿಂದು ಗಟ್ಟಿಯಾದವನು, ನಾನೇನಾದರೂ ಈ ಪೇಪರ್‌ವೇಟ್‌ನ್ನು ಜೋರಾಗಿ ಎಸೆದರೆ ನಿನ್ನ ಮೂತಿ ಒಡೆದು ಹೋದೀತು, ಹುಷಾರ್’ ಎಂದು ಅಬ್ಬರಿಸಿದರು. ಆದರೆ ಮರುದಿನದ ಪತ್ರಿಕೆಗಳ ಮುಖಪುಟದಲ್ಲಿ, ‘ನಾನು
ಕೋಳಿ ತಿನ್ನುವ ಬ್ರಾಹ್ಮಣ : ಗುಂಡೂರಾವ್’ ಎಂಬ ಶೀರ್ಷಿಕೆ ಪ್ರಕಟವಾಗಿತ್ತು. ಆ ಮಾತನ್ನು ಹೇಳಲು ಕಾರಣವಾದ ಘಟನೆ
ಅಷ್ಟು ಚರ್ಚೆ ಆಗಲೇ ಇಲ್ಲ.

ಅಂದಿನಿಂದ ಗುಂಡೂರಾಯರನ್ನು ‘ಕೋಳಿ ತಿನ್ನುವ ಬ್ರಾಹ್ಮಣ’ ಎಂದೇ ಎಲ್ಲರೂ ಕರೆಯಲಾರಂಭಿಸಿದರು. ಗುಂಡೂರಾಯರು ಬ್ರಾಹ್ಮಣರಾಗಿದ್ದರಿಂದ ಕೋಳಿ ತಿನ್ನಲಿಕ್ಕಿಲ್ಲ ಎಂದು ಭಾವಿಸಿದವರೆಲ್ಲ, ಅವರು ಹೋದಲ್ಲ, ಅವರಿಗೆ ಇಷ್ಟವೆಂದು ಊಟಕ್ಕೆ ಕೋಳಿ ಸಾರು ಮಾಡಲು ಶುರು ಮಾಡಿದರು. ಗುಂಡೂರಾಯರು ಜಿಲ್ಲಾ ಕೇಂದ್ರಗಳಲ್ಲಿ ತಪ್ಪದೇ ಊಟದ ಟೇಬಲ್ ಮೇಲೆ ಕೋಳಿ ಸಾರು ಇದ್ದೇ ಇರುತ್ತಿತ್ತು. ‘ನಾನು ಎಲ್ಲಿ ಹೋದರೂ, ಜನ ಪ್ರೀತಿಯಿಂದ, ನನ್ನ ಕೇಳದೇ ಕೋಳಿಸಾರು ಮಾಡ್ತಾರೆ. ಆ ಪೋಲಿ ಹುಡುಗನಿಗೆ ನಾನು ಆಭಾರಿಯಾಗಿರಬೇಕು.

ಕೋಳಿ ತಿನ್ನುವ ಬ್ರಾಹ್ಮಣ ಎಂದು ಬ್ರಾಹ್ಮಣೇತರರು ನನ್ನನ್ನು ಇನ್ನಷ್ಟು ಇಷ್ಟಪಡಲಾರಂಭಿಸಿದರು. ಇದು ನನಗೆ ವರದಾನ ವಾಯಿತು’ ಎಂದು ಗುಂಡೂರಾಯರು ಆಗಾಗ ಹೇಳುತ್ತಿದ್ದರು.

ತಪ್ಪು ಮಾಡದವರು ಯಾರವ್ರೇ?!

ನಡೆಯುವವರು ಎಡವು ತ್ತಾರೆ ಮತ್ತು ಬರೆಯುವವರು ತಪ್ಪು ಮಾಡುತ್ತಾರೆ ಮತ್ತು ಕಾಗುಣಿತ ತಪ್ಪುಗಳನ್ನು ಮಾಡಿಯೇ ಮಾಡುತ್ತಾರೆ. ‘ಇಲ್ಲ, ನಾನು ಹಾಗೆ ಮಾಡೊಲ್ಲ’ ಎಂದು ಹೇಳಿದವರು ಯಾರೂ ಇಲ್ಲವಂತೆ. ಇಂಗ್ಲಿಷ್ ಭಾಷೆಯ ತಪ್ಪು, ಸರಿ, ವೈಶಿಷ್ಟ್ಯ, ಸೊಬಗು, ವಿಚಿತ್ರ, ವಿನೋದ, ಬಳಕೆ… ಹೀಗೆ ಆ ಭಾಷೆಗೆ ಸಂಬಂಧಿಸಿದ ಕುತೂಹಲ ಸಂಗತಿಗಳನ್ನೊಳಗೊಂಡ Eats, Shootes Leaves ಪುಸ್ತಕದ ಲೇಖಕ ಕೂಡ All spelling and grammatical errors in this book are intentional; other wise, they were put there by the editor ಎಂಬ ನಿರಾಕರಣೆ (Disclaimer)ಯನ್ನು ಆರಂಭದಲ್ಲಿಯೇ ಬರೆದುಕೊಳ್ಳುತ್ತಿರಲಿಲ್ಲ.

ಹಳೆ ಒಡಂಬಡಿಕೆ (Old Testament)ಮತ್ತು ಹೀಬ್ರೂ ಬೈಬಲ್ ಅಥವಾ ಕಿಂಗ್ ಜೇಮ್ಸ್ ಬೈಬಲ್‌ನಲ್ಲಿ ಹತ್ತು ಅನುಶಾಸನ
(Commandments)ಗಳಿವೆ. ಅವುಗಳಂದು Thou shalt not commit adultery (ವ್ಯಭಿಚಾರ ಮಾಡಕೂಡದು). ಆದರೆ ೧೬೩೧ರಲ್ಲಿ ಪ್ರಕಟವಾದ ಹಳೆ ಒಡಂಬಡಿಕೆಯಲ್ಲಿ, not ಪದ ಇಲ್ಲದೇ Thou shalt commit adultery ಎಂದು ಪ್ರಕಟವಾಗಿ ದೊಡ್ಡ ರಾದ್ಧಾಂತವೇ ಆಗಿ ಹೋಯಿತು. ಅದನ್ನು ಪ್ರಕಟಿಸಿದ ಮುದ್ರಕನನ್ನು ಜನ ಥಳಿಸಿದರು. ಅವನ ರಕ್ಷಣೆಗೆ ಧಾವಿಸಿದ ಮಗನ ಕೈಕತ್ತರಿಸಿ ಹಾಕಿದರು. ಮುದ್ರಿತವಾದ ಪ್ರತಿಗಳನ್ನು ವಾಪಸ್ ಪಡೆಯುವುದರೊಳಗೆ, ಅದು ಆಗಲೇ ವಿತರಣೆಯಾಗಿ ನಗೆಪಾಟಲಿಗೀಡಾಯಿತು. ಈ ಪುಸ್ತಕವನ್ನು ನಿಷೇಧಿಸಬೇಕೆಂಬ ಆಗ್ರಹ ಕೇಳಿಬಂತು.

ಇನ್ನು ಕೆಲವು ಕಿಡಿಗೇಡಿಗಳು Thou shalt commit adultery ಎಂದು ಬರೆದಿರುವುದು ಸರಿಯಾಗಿದೆ, ಮನುಷ್ಯನಾದ ವನು ವ್ಯಭಿಚಾರ ಮಾಡಬೇಕು ಎಂದು ವಾದಿಸಿದರು. ವಾಕ್ಯದಲ್ಲಿ not ಪದ ಹಾರಿ ಹೋಗಿದ್ದರಿಂದ ಅದು ಇನ್ನಿಲ್ಲದ ವಿವಾದಕ್ಕೆ ಕಾರಣವಾಯಿತು. ಸ್ವತಃ ಧರ್ಮಗುರುಗಳು ಹೇಳಿಕೆ ನೀಡಿದರೂ ವಿವಾದ ನಿಲ್ಲಲಿಲ್ಲ. ತಮಾಷೆಯೆಂದರೆ, ಅಂದು ಮಾಡಿದ ತಪ್ಪಿನಿಂದಾದ ಹುಟ್ಟಿದ ವಿವಾದ ಮತ್ತು ಚರ್ಚೆ ಇಂದಿಗೂ ಮುಂದುವರಿದುಕೊಂಡು ಬಂದಿದೆ. ಈಗಲೂ ಕೆಲವರು, ‘ಹಳೆ ಒಡಂಬಡಿಕೆಯಲ್ಲಿಯೇ ವ್ಯಭಿಚಾರ ಮಾಡಬೇಕು ಎಂದು ಬರೆದಿದೆಯಲ್ಲ’ ಎಂದು ವಾದಿಸುತ್ತಾರೆ.

‘ಅದು ಆಕಸ್ಮಿಕವಾಗಿ ಆದ ಪ್ರೂಫ್ (ಕರಡು) ದೋಷವಲ್ಲ, ಉದ್ದೇಶಪೂರ್ವಕವಾಗಿಯೇ ಬರೆದಿದ್ದು’ ಎಂದು ಪ್ರತಿಪಾದಿಸು ವವರೂ ಇದ್ದಾರೆ. ಖ್ಯಾತ ಐರಿಷ್ ಕಾದಂಬರಿಕಾರಿ, ಕತೆಗಾರ ಜೇಮ್ಸ ಜಾಯ್ಸ್ ಬರೆದ ‘ಯೂಲಿಸಿಸ್’ ಬಹಳ ಜನಪ್ರಿಯ ಕೃತಿ. ೧೯೨೨ ರಲ್ಲಿ ಈ ಕೃತಿ ಬಿಡುಗಡೆಯಾದಾಗ, ಅದರಲ್ಲಿ ಐದು ಸಾವಿರ ಕಾಗುಣಿತ ದೋಷಗಳು ಇದ್ದುವಂತೆ. ಕೃತಿ ಮತ್ತು ಕೃತಿಕಾರರ ಹೆಸರನ್ನು ಹೊರತುಪಡಿಸಿದರೆ, ಇಡೀ ಪುಸ್ತಕದಲ್ಲ ತಪ್ಪುಗಳೇ ತುಂಬಿದ್ದುವಂತೆ. ಕೊನೆಗೆ ಸ್ವತಃ ಜಾಯ್ಸ್, ತಾನೇ ಇಡೀ ಕೃತಿಯನ್ನು ಮೂರು ಸಲ ಓದಿ, ಕರಡು ತಿದ್ದಿದನಂತೆ.

ಆನಂತರ ಪುಸ್ತಕ ಅಚ್ಚಾಗಿ ಬಂದಾಗ, ನಲವತ್ತು ಕಾಗುಣಿತ ದೋಷಗಳು ಇದ್ದುವಂತೆ. ಇತ್ತೀಚೆಗೆ ಪತ್ರಿಕೆಯೊಂದರಲ್ಲಿ (ವಿಶ್ವವಾಣಿ ಅಲ್ಲ) ‘ಡಿಸಿಸಿ ಬ್ಯಾಂಕ್‌ನಿಂದ ಮಹಿಳಾ ಸಂಘಗಳಿಗೆ ಶೂನ್ಯ ಬಡ್ಡಿದರದಲ್ಲಿ ಸಾವು ಸೌಲಭ್ಯ’ (ಸಾಲ ಸೌಲಭ್ಯ ಎಂದಾಗಬೇಕಿತ್ತು) ಎಂಬ ಶೀರ್ಷಿಕೆ ನೋಡಿ ಇವೆ ನೆನಪಾಯಿತು.

ಒಂದು ಹೆಡ್ ಲೈನ್ ಕುರಿತು

ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರು, ಕಾನೂನು ಖಾತೆಯನ್ನು ಕಿರಣ್ ರಿಜಿಜು ಅವರಿಂದ ತೆಗೆದು ಅರ್ಜುನ್ ರಾಮ್ ಮೇಘವಾಲ್ ಅವರಿಗೆ ನೀಡಿದರಷ್ಟೇ. ನಂತರ ರಿಜಿಜು ಅವರಿಗೆ ಭೂವಿಜ್ಞಾನ(Earth Sciences)ಖಾತೆಯನ್ನು ನೀಡಿದರು.

ಈ ಸುದ್ದಿಗೆ ಕೋಲ್ಕತಾದಿಂದ ಪ್ರಕಟವಾಗುವ ‘ದಿ ಟೆಲಿಗ್ರಾಫ್’ ಪತ್ರಿಕೆ ಒಂದು ಸುಂದರ ಹೆಡ್ ಲೈನ್ ನೀಡಿತ್ತು – Doctor Papad brings Rijiju down to earth (sciences) ಕೋವಿಡ್ ನಂತರ, ಅರ್ಜುನ್ ರಾಮ್ ಮೇಘವಾಲ್ ‘ಡಾಕ್ಟರ್ ಪಾಪಡ್’ ಎಂದೇ ಪ್ರಸಿದ್ಧ. ಕಾರಣ ಇಷ್ಟೇ, ಕೋವಿಡ್ ಸಂದರ್ಭದಲ್ಲಿ ಮೇಘವಾಲ, ‘ಬಾಭಿಜೀ ಪಾಪಡ್’ ಬ್ರ್ಯಾಂಡಿನ ಪಾಪಡ್‌ನ್ನು ಸೇವಿಸಿದರೆ, ಕೋವಿಡ್ ಸೋಂಕು ಬರುವುದಿಲ್ಲ ಎಂದು ಹೇಳಿಕೆ ನೀಡಿದ್ದರು. ಅಂದಿನಿಂದ ಅವರಿಗೆ ‘ಡಾಕ್ಟರ್
ಪಾಪಡ್’ ಎಂಬ ಬಿರುದು ನೀಡಲಾಗಿತ್ತು ಮತ್ತು ಮಾಧ್ಯಮಗಳು ಅವರನ್ನು ಆ ಹೆಸರಿನಿಂದ ಕಿಂಡಾಲ್ ಮಾಡುತ್ತಿದ್ದವು.
ಈಗ ಮತ್ತೊಮ್ಮೆ ಆ ಹೆಡ್ ಲೈನ್‌ನ್ನು ಓದಿ.