Saturday, 23rd November 2024

ವರ್ಕ್ ಶಾಪ್ ಕಾರ್ಮಿಕರ ಸಂಘದ ಸಂಭ್ರಮದ ವಾರ್ಷಿಕೋತ್ಸವ

ಕುಶಾಲನಗರ: ವರ್ಕ್ ಶಾಪ್ ಕಾರ್ಮಿಕರ ಸಂಘದ 13 ನೇ ವರ್ಷದ ವಾರ್ಷಿ ಕೋತ್ಸವ ಸಂಭ್ರಮದಿಂದ ನಡೆಯಿತು. ಇದೇ ಸಂದರ್ಭ ಅರ್ಥಪೂರ್ಣವಾಗಿ ಕಾರ್ಮಿಕ ದಿನಾಚರಣೆಯನ್ನು ಆಚರಿಸಲಾಯಿತು.

ಪುರಸಭೆ ಅಧ್ಯಕ್ಷ ಜೈವರ್ಧನ್ ಕಾರ್ಯಕ್ಕೆ ಚಾಲನೆ ನೀಡಿದರು. ಬಳಿಕ ಮಾತ ನಾಡಿದ ಜಯವರ್ಧನ್, ಕಾರ್ಮಿಕರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಾರ್ಮಿಕರ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಕಾರ್ಮಿಕರು ದೇಶದ ಆರ್ಥಿಕತೆಯ ಬೆನ್ನೆಲುಬು. ಅವರ ಕಾರ್ಯ ಶ್ಲಾಘನೀಯ.‌ ಬಾಬಾ ಸಾಹೇಬ್ ಅಂಬೇಡ್ಕರ್ ಅವರು  ಕಾಯ್ದೆ ರೂಪಿಸಿ ಕಾರ್ಮಿಕರ ಬಾಳು ಹಸನಾಗುವಂತೆ ಮಾಡಿದರು ಎಂದು ಜಯವರ್ಧನ್ ಹೇಳಿದರು.

ಉದ್ಯಮಿ ಜಯಶ್ರೀ ಮಾತನಾಡಿ, ಎಲ್ಲರೂ ಸಂಘಟಿತರಾದರೆ ಅಂದುಕೊಂಡಿದ್ದನ್ನು ಸಾಧಿಸಹುದು. ಕಾರ್ಮಿಕರ ಶೋಷಣೆ ತಪ್ಪಿಸಲು ಕಾರ್ಮಿಕರ ಸಂಘಟನೆ ಅಸ್ತಿತ್ವಕ್ಕೆ ಬಂದಿತು. ಕಾರ್ಮಿಕರಿಗಾಗಿಯೇ ಹಲವು ಹಕ್ಕುಗಳಿವೆ ಅವುಗಳನ್ನು ಅರಿತು ಮುನ್ನಡೆಯಿರಿ ಎಂದು ಸಲಹೆ ನೀಡಿದರು.
ಕಾಯಕವೇ ಕೈಲಾಸ. ಕೆಲಸದ ಸಮಯದಲ್ಲಿ ಜಾಗೃತೆ ವಹಿಸುವುದು ಒಳಿತು. ದುಡಿದ ಹಣದಲ್ಲಿ ಉಳಿತಾಯ ಮಾಡಿದರೆ ಅದು ನಮ್ಮ ಜೀವನಕ್ಕೆ ಭದ್ರತೆಯಾಗಿರುತ್ತದೆ ಎಂದು ಉದ್ಯಮಿ ರಾಮದಾಸ್ ಕಿವಿಮಾತು ಹೇಳಿದರು.
ವರ್ಕ್ ಶಾಪ್ ಸಂಘದ ಅಧ್ಯಕ್ಷ ಮದನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು‌.
ಹತ್ತನೆ ತರಗತಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಹೆಚ್ಚಿನ ಅಂಕ‌ ಪಡೆದ ಸಂಘದ ಸದಸ್ಯರ ಮಕ್ಕಳಿಗೆ ಬಹುಮಾನ ನೀಡಿ ಪ್ರೋತ್ಸಾ ಹಿಸಲಾಯಿತು. ಸಂಘದ ಸದಸ್ಯರಿಗೆ ನಡೆದ ಕ್ರೀಡಾ ಕೂಟದಲ್ಲಿ ವಿಜೇತರಾದವರಿಗೂ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ಸಂಘದ ಪದಾಧಿಕಾರಿಗಳು ಪಟ್ಟಣದ ಮಾರಿಯಮ್ಮ ದೇವಾಲಯದಿಂದ ಮೆರವಣಿಗೆ ಸಾಗಿ ಬಂದರು.