ಇದೇ ಅಂತರಂಗ ಸುದ್ದಿ
vbhat@me.com
ಅಧಿಕಾರ ಬಂದಾಗ ಯಾರನ್ನು ಹತ್ತಿರ ಇಟ್ಟುಕೊಳ್ಳಬೇಕು ಹಾಗೂ ಯಾರನ್ನು ದೂರವಿಡಬೇಕು ಎಂಬುದು ಗೊತ್ತಿಲ್ಲದಿದ್ದರೆ, ಅಧಿಕಾರ ವಂಚಿತರಾಗುವಂತೆ ಮಾಡುತ್ತಾರೆ. ಇವೆಲ್ಲಕ್ಕಿಂತ ಮುಖ್ಯವಾಗಿ ಯಾರನ್ನು ಎಲ್ಲಿಡಬೇಕು ಎಂಬುದು ಗೊತ್ತಿರ ಬೇಕಾಗುತ್ತದೆ. ಅಧಿಕಾರದಲ್ಲಿದ್ದಾಗ ಎಲ್ಲರೂ ಮಾಡುವ ತಪ್ಪೆಂದರೆ ತಮ್ಮ ಸುತ್ತ ಅಯೋಗ್ಯರನ್ನು, ಅಪಾತ್ರರನ್ನು ಇಟ್ಟು ಕೊಳ್ಳುವುದು.
ಮುಖ್ಯಮಂತ್ರಿ ಅಥವಾ ಪ್ರಧಾನಿ ಸುತ್ತ ಯಾರಿದ್ದಾರೆಂಬುದನ್ನು ಆಧರಿಸಿ, ಅವರ ಯೋಗ್ಯತೆಯೇನು ಎಂಬುದನ್ನು ಅಳೆಯ ಬಹುದು. ಯಶಸ್ವಿ ಆಡಳಿತ ಗಾರರು, ತಮ್ಮ ಸುತ್ತ ಅರ್ಹ, ದಕ್ಷ, ಯೋಗ್ಯ, ನಿಷ್ಕಳಂಕ ವ್ಯಕ್ತಿಗಳನ್ನು ಇಟ್ಟುಕೊಂಡಿರು ತ್ತಾರೆ. ತಮ್ಮ ಸುತ್ತ ಕಾಕಪೋಕರು, ಹೊಗಳು ಭಟರು, ಅಪಾತ್ರರು, ದಲ್ಲಾಳಿಗಳು, ಬ್ರೋಕರ್‌ಗಳು, ಫಿಕ್ಸರ್ ಗಳನ್ನು ಇಟ್ಟುಕೊಂಡರೆ, ಅಂಥವರಿಂದಲೇ ಸಮಸ್ಯೆ, ಸಂಕಷ್ಟಗಳು ಬರುವುದು ನಿಶ್ಚಿತ. ಆಟ ಕೆಡಿಸುವವರು ಇವರೇ. ಅಷ್ಟು ದಿನ ಅವರು ಎಲ್ಲಿ ಇರುತ್ತಾರೋ ಗೊತ್ತಿರುವುದಿಲ್ಲ, ಅಧಿಕಾರ ಬರುತ್ತಿರುವಂತೆ, ಹಠಾತ್ತನೆ ಆಂತರಿಕ ಟೀಮನ್ನು ಸೇರಿ ಬಿಡುತ್ತಾರೆ.
ಅಧಿಕಾರದಲ್ಲಿ ಇದ್ದವರಿಗೆ ಏಕಾಏಕಿ ಹತ್ತಿರವಾಗಿ ಬಿಡುತ್ತಾರೆ. ಅಷ್ಟು ದಿನ ಹತ್ತಿರದಲ್ಲಿದ್ದವರಿಗಿಂತ ಇವರೇ ಹೆಚ್ಚು ಠಳಾಯಿಸ ಲಾರಂಭಿಸಿರುತ್ತಾರೆ. ಅಧಿಕಾರದಲ್ಲಿ ದ್ದವರ ಹಿಂದೆ- ಮುಂದೆ ಕಾಣಿಸಿಕೊಳ್ಳ ಲಾರಂಭಿಸುತ್ತಾರೆ. ಅಷ್ಟು ದಿನ ಹತ್ತಿರದಲ್ಲಿದ್ದವರೇ ಬೇರೆ, ಅಧಿಕಾರ ಬರುತ್ತಿರುವಂತೆ ಹತ್ತಿರವಾಗುವವರೇ ಬೇರೆ. ಅನೇಕರು ಮಾಡುವ ತಪ್ಪು ಇದು. ಏಕಾಏಕಿ ಹತ್ತಿರವಾಗುವವರ ಅಜೆಂಡಾವೇ ಬೇರೆಯದು. ದುರಂತವೆಂದರೆ, ಅಧಿಕಾರದಲ್ಲಿ ಇದ್ದವರಿಗೆ ಇಷ್ಟು ದಿನ ಹತ್ತಿರದಲ್ಲಿದ್ದವರಿಗಿಂತ, ಅಧಿಕಾರ ಬಂದ ನಂತರ ದಿಢೀರ್ ಅವತರಿಸಿ ಬರುವವರೇ ಶೀಘ್ರ ಆಪ್ತವಾಗಿಬಿಡುತ್ತಾರೆ.
ಇವರು ಪವರ್ ಬ್ರೋಕರ್‌ಗಳು, ಫಿಕ್ಸರ್‌ಗಳು. ಇಂಥವರೇ ಎಲ್ಲರಿಗಿಂತ ಹೆಚ್ಚು ಆಕರ್ಷಕವಾಗಿ ಕಾಣುತ್ತಾರೆ. ಕಾರಣ ಇವರು
ಅಧಿಕಾರದಲ್ಲಿರುವವರ ದೌರ್ಬಲ್ಯಗಳನ್ನು ಬಹು ಬೇಗ ಅರಿತುಕೊಂಡು, ಅವರನ್ನು ಮರುಳು ಮಾಡುವ ಚಾಕಚಕ್ಯತೆ ಹೊಂದಿರು ತ್ತಾರೆ. ಅಧಿಕಾರದಲ್ಲಿರುವವರ ಬೇಕು-ಬೇಡಗಳನ್ನು ತಾಪ್ಡೇತೋಪ್ಡು ಪೂರೈಸುವ ಹಿಕಮತ್ತು ಬಲ್ಲವರಾಗಿರುತ್ತಾರೆ.
ಅಧಿಕಾರದಲ್ಲಿರುವವರಿಗೆ ದುಬಾರಿ ವಾಚು, ಮೊಬೈಲು, ಗಿಫ್ಟ್ ಗಳನ್ನು ಕೊಟ್ಟು ಬಹು ಬೇಗ ಅಂತರಂಗದಲ್ಲಿ ಸ್ಥಾನ ಗಳಿಸಿ
ಕೊಂಡುಬಿಡುತ್ತಾರೆ.
ಅಲ್ಲದೇ ತಾವು ಎಲ್ಲ ‘ಸೇವೆ’ಗಳಿಗೂ ಸಿದ್ಧ ಎಂಬುದರ ಇಂಗಿತ ವ್ಯಕ್ತಪಡಿಸುತ್ತಾರೆ. ಅಧಿಕಾರದಲ್ಲಿರುವವರೂ ಇಂಥ ಗಿರಾಕಿ ಗಳನ್ನೇ ಎದುರು ನೋಡುತ್ತಿರುತ್ತಾರೆ. ಹೀಗಾಗಿ ಇಬ್ಬರ ಮಧ್ಯೆ ಹಠಾತ್ ಆಕರ್ಷಣೆ ಬೆಳೆದು, ಆಪ್ತರಾಗಿಬಿಡುತ್ತಾರೆ. ಅಷ್ಟು ದಿನ ಹತ್ತಿರದಲ್ಲಿದ್ದವರು ಈ ಹೊಸಬರ ಹೊಡೆತಕ್ಕೆ ಮಂಕು ಕವಿದು ಕ್ರಮೇಣ ಹಿಂದಕ್ಕೆ ತಳ್ಳಲ್ಪಡುತ್ತಾರೆ. ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ ಬಂದವರು ತಮ್ಮ ಸುತ್ತ ಎಂಥವರನ್ನು ಇಟ್ಟುಕೊಂಡಿದ್ದಾರೆ ಎಂಬುದನ್ನು ಆಧರಿಸಿ, ಅವರ ಆಡಳಿತ ಹೇಗಿರ ಬಲ್ಲದು ಎಂಬುದನ್ನು ಸೂಕ್ಷ್ಮಮತಿಗಳಾದವರು, ಆಡಳಿತ ಬಲ್ಲವರು, ರಾಜಕೀಯ ವಿಶ್ಲೇಷಕರು, ಹೇಳಬಲ್ಲರು.
ಆಪ್ತ ಕಾರ್ಯದರ್ಶಿ, ಪ್ರಧಾನಕಾರ್ಯದರ್ಶಿ, ವಿಶೇಷ ಕರ್ತವ್ಯ ಅಧಿಕಾರಿ, ಸಲಹೆಗಾರರು, ಮಾಧ್ಯಮ ಸಲಹೆಗಾರರು, ಆರ್ಥಿಕ ಸಲಹೆಗಾರರು, ರಾಜಕೀಯ ಸಲಹೆಗಾ ರರು, ಕಾರ್ಯದರ್ಶಿಗಳು, ಮುಖ್ಯ ಕಾರ್ಯದರ್ಶಿಗಳು, ಗುಪ್ತಚರ ಮುಖ್ಯಸ್ಥರು… ಮುಂತಾದ ಆಯಕಟ್ಟಿನ ಜಾಗಕ್ಕೆ ಮುಖ್ಯಮಂತ್ರಿಯಾದವರು ಎಂಥವರನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಎಂಬುದನ್ನು ಆಧರಿಸಿ ಅವರ ಯಶಸ್ಸು, ಸಾಧನೆ ನಿರ್ಧರಿತವಾಗುತ್ತದೆ. ಈ ಜಾಗಗಳಿಗೆ ಭ್ರಷ್ಟರು, ಅಪಾತ್ರರು, ವ್ಯವಹಾರಸ್ಥರನ್ನು ನೇಮಿಸಿ ಕೊಂಡರೆ, ಆಗ ಅಂಥ ನೇಮಕಗಳು ಕಳುಹಿಸುವ ಸಂದೇಶಗಳೇ ಬೇರೆ. ಮುಖ್ಯಮಂತ್ರಿಗಳಾದವರಿಗೆ ಎಂಥವರನ್ನು ನೇಮಿಸಿ ಕೊಳ್ಳಬೇಕು ಎಂಬ ವಿವೇಚನೆ ಇರುವುದಿಲ್ಲವಾ ಎಂದು ಕೇಳಬಹುದು.
ಈ ಪ್ರಶ್ನೆಗೆ ಉತ್ತರ-‘ವಿವೇಚನೆ ಇರುತ್ತದೆ, ಆದರೆ ಅನೇಕರು ಈ ವಿವೇಚನೆ ಬಳಸಿಕೊಳ್ಳಲು ಸೋಲುತ್ತಾರೆ. ಅಧಿಕಾರದ ಅಮಲು ವಿವೇಚನೆಯ ಮೇಲೆ ಸದಾ ಸವಾರಿ ಮಾಡುವುದರಿಂದ, ವಿವೇಚನೆ ಅಮಲನ್ನು ನೆಲಕ್ಕಿಳಿಸಿ, ತನಗೆ ಈ ಸಹವಾಸ ವೇ ಬೇಡ ಎಂದು ಹೊರಟು ಹೋಗುತ್ತದೆ.’ ಅಧಿಕಾರಿಗಳ ಜತೆಗೆ, ಮುಖ್ಯಮಂತ್ರಿಯಾದವರು, ರಾಜಕಾರಣಿಗಳು ಹಾಗೂ ಸಚಿವರ ಪೈಕಿ ಯಾರನ್ನು ನಿಕಟವರ್ತಿಗಳಾಗಿ, ವಿಶ್ವಾಸಿಗರಾಗಿ ಇಟ್ಟುಕೊಳ್ಳುತ್ತಾರೆಂಬುದು ಬಹಳ ಮುಖ್ಯ.
ಅನೇಕ ಮುಖ್ಯಮಂತ್ರಿಗಳು ಎಡವುವುದು ಇಲ್ಲಿಯೇ. ತಮ್ಮ ಸುತ್ತ ಯಾರ‍್ಯಾರಿಗೋ ಸುಳಿಯಲು ಅವಕಾಶ ಮಾಡಿಕೊಟ್ಟು,
ತಮ್ಮ ಇಮೇಜನ್ನು ಕುಗ್ಗಿಸಿಕೊಳ್ಳುತ್ತಾರೆ. ಮುಖ್ಯಮಂತ್ರಿ ಪಕ್ಕ ಒಬ್ಬ ರಿಯಲ್ ಎಸ್ಟೇಟ್ ಧಣಿ, ರೌಡಿ ಶೀಟರ್, ಕಳಂಕಿತರು,
ತಲೆಹಿಡುಕರು ಪದೇಪದೆ ಕಾಣಿಸಿಕೊಂಡರೆ ಎಂಥ ಸಂದೇಶ ರವಾನೆಯಾಗಬಹುದು? ಇಂಥವರು ಎರಡು ಸಲ ಸಿಎಂ ಜತೆ
ಪತ್ರಿಕೆಗಳಲ್ಲಿ, ಟಿವಿಗಳಲ್ಲಿ ಕಾಣಿಸಿಕೊಂಡರೆ, ಜನರ ಬಾಯಿಗೆ ಕವಳ ಸಿಕ್ಕಿದಂತೆಯೇ. ಚೆನ್ನಾಗಿ ಬಾಯಲ್ಲಿ ತಿರುಗಾಡಿಸಿ, ಜಗಿದು, ಉಗಿಯಲಾರಂಭಿಸುತ್ತಾರೆ. ಸಿಎಂ ಅವರದ್ದೊಂದೇ ಅಲ್ಲ, ಇಡೀ ಸರಕಾರದ ಬಗ್ಗೆ ಜನರ ಧೋರಣೆ, ಅನಿಸಿಕೆಯೇ ಬದಲಾಗಿ ಬಿಡುತ್ತದೆ.
ಈ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಹಾ ಚಾಣಾಕ್ಷ. ಅವರ ಆಂತರಿಕ ತಂಡದಲ್ಲಿ ಕಳಂಕಿತರಿಗೆ ಸ್ಥಾನವೇ ಇಲ್ಲ. ಎಲ್ಲರೂ ದಕ್ಷರು, ಪ್ರಾಮಾಣಿಕರು, ಯೋಗ್ಯರು. ಅಷ್ಟೇ ಅಲ್ಲ ವಿಷಯ ಪರಿಣತರು, ಬುದ್ಧಿವಂತರು. ಅವರೆಲ್ಲರ ಏಕಮುಖ ಗಮನ ನರೇಂದ್ರ ಮೋದಿ. ಸ್ವಂತ ವರ್ಚಸ್ಸು ವೃದ್ಧಿಗೆ ಯಾರೂ ಕೆಲಸ ಮಾಡುವವರಲ್ಲ. ಯಾರೂ ಬಹಿರಂಗವಾಗಿ ಕಾಣಿಸಿ ಕೊಳ್ಳುವವರಲ್ಲ. ಹೀಗಾಗಿ ಅವರ ಕಿಚನ್ ಕ್ಯಾಬಿನೆಟ್ ನಲ್ಲಿರುವ ಅಧಿಕಾರಿ ವರ್ಗ ಯಾವುದೆಂದು ಎಲ್ಲರಿಗೂ ಗೊತ್ತಿಲ್ಲ.
ಬಲ್ಲವರು ಮಾತ್ರ ಬಲ್ಲರು. ಹೀಗಾಗಿ ಅವರ‍್ಯಾರೂ ಬ್ರೋಕರ್ ಗಳಲ್ಲ. ಇವರ ಪೈಕಿ ಒಬ್ಬ ಮಾಡುವ ಎಡವಟ್ಟು ಪ್ರಧಾನಿಗೆ ಕೆಟ್ಟ
ಹೆಸರು ತರುತ್ತದೆ. ಪ್ರಧಾನಿಗೆ ತೀರಾ ಆಪ್ತ ಅಧಿಕಾರ ಎಂಬುದು ಅನೇಕರಿಗೆ ಗೊತ್ತಿಲ್ಲ. ತಾನು ಪ್ರಧಾನಿಗೆ ತೀರಾ ಆಪ್ತ ಎಂಬ
ಪೋಸು ಕೊಟ್ಟರೆ, ತಾನು ಅಲ್ಲಿ ಇರುವುದಿಲ್ಲ ಎಂಬುದು ಅವನಿಗೆ ಗೊತ್ತು. ಹೀಗಾಗಿ ಯಾರೂ ಬಾಲ ಬಿಚ್ಚುವುದಿಲ್ಲ. ಪ್ರಧಾನಿ
ಕಾರ್ಯಾಲಯ ಅತ್ಯಂತ ಕ್ರಿಯಾಶೀಲವಾಗಿ, ದಕ್ಷತೆಯಿಂದ ಕೆಲಸ ಮಾಡುತ್ತಿದೆಯೆಂದರೆ, ಅದಕ್ಕೆ ಅವರ ‘ಇನ್ನರ್ ಸರ್ಕಲ್’
ಕಾರಣ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಹೊರತುಪಡಿಸಿದರೆ, ಪ್ರಧಾನಿಗೆ ಆಪ್ತರಾಗಿರುವ ಮೂರನೆಯವರಾರು ಎಂದು ದಿಲ್ಲಿ
ಅಧಿಕಾರದ ಪಡಸಾಲೆಯಲ್ಲಿರುವವರನ್ನು ಕೇಳಿ ನೋಡಿ, ಅನೇಕರಿಗೆ ಗೊತ್ತಿಲ್ಲ. ಅಮಿತ್ ಶಾ ಪ್ರಧಾನಿಯವರಿಗೆ ಪರಮಾಪ್ತ
ಎಂಬುದು ಎಲ್ಲರಿಗೂ ಗೊತ್ತು. ಹಾಗೆಂದು ಇಬ್ಬರೂ ಸದಾ, ಎಲ್ಲೆಡೆಯೂ ಕಾಣಿಸಿಕೊಳ್ಳುವುದಿಲ್ಲ. ಪ್ರಧಾನಿ ಹಿಂದೆ-ಮುಂದೆ,
ಅಕ್ಕ-ಪಕ್ಕ ಅವರು ಸುಳಿದಾಡುತ್ತಲೇ ಇರುವುದಿಲ್ಲ. ಮೋದಿ ಜತೆಗೆ ಶಾ ಒಂದು ಸಲವೂ ವಿದೇಶ ಪ್ರವಾಸಕ್ಕೂ ಹೋಗಿಲ್ಲ.
ಪರಮಾಪ್ತರು ಎಂದಾಕ್ಷಣ ಸದಾ ಯುಗಳಗೀತೆ ಹಾಡಬೇಕೆಂದಿಲ್ಲ, ಪೋಸು ಕೊಡಬೇಕಿಲ್ಲ, Name drop ಮಾಡಬೇಕಿಲ್ಲ.
ತಾನು ಪ್ರಧಾನಿಗೆ ಪರಮಾಪ್ತ ಎಂದು ಹೇಳಿಕೊಂಡರೆ, ಆ ಆಪ್ತತೆಯಲ್ಲಿ ಕೊರತೆಯಾಗಿದೆ, ಅದಕ್ಕಾಗಿಯೇ ಕೊರತೆ ನೀಗಲು ಹಾಗೆ ಹೇಳಿಕೊಳ್ಳುತ್ತಿದ್ದಾರೆಂದರ್ಥ. ಹೀಗಾಗಿ ಪ್ರಧಾನಿಗೆ ಆಪ್ತ ಎಂದು ಹೇಳಿಕೊಂಡು ದಿಲ್ಲಿಯಲ್ಲಿ ಅವರ ಹೆಸರಿನಲ್ಲಿ ‘ವ್ಯಾಪಾರ’ ಮಾಡಲು ಆಗುವುದಿಲ್ಲ. ಹಾಗೆಯೇ ತಾನು ಅಮಿತ್ ಶಾ ಅವರಿಗೆ ತೀರಾ ಹತ್ತಿರ ಎಂದು ಹೇಳಿಕೊಳ್ಳುವವರೂ ಸಿಗಲಾರರು. ಅಂದರೆ ಅಧಿಕಾರ ಬಂದಾಗ, ಈ ಸಂಗತಿ ತಿಳಿದುಕೊಳ್ಳದಿದ್ದರೆ, ಅವರು ಹೆಚ್ಚು ಕಾಲ ಅಧಿಕಾರದಲ್ಲಿ ಇರುವುದಿಲ್ಲ. ತಮ್ಮ ಸುತ್ತಲಿರುವವರಿಂದಲೇ ಭಾನಗಡಿ ತಂದುಕೊಳ್ಳುತ್ತಾರೆ. ಅಷ್ಟಕ್ಕೂ ಸುತ್ತಲಿರುವವರು ಕಳೆದುಕೊಳ್ಳುವುದು ಏನೂ ಇಲ್ಲ. ಆದರೆ ಅಧಿಕಾರದಲ್ಲಿ ಇರುವವರು ಅಽಕಾರವನ್ನೇ ಬಲಿಕೊಟ್ಟು ಬೆಲೆ ತೆರಬೇಕಾಗುತ್ತದೆ.
ತಮ್ಮ ಸುತ್ತಲಿನವರು ಮಾಡುವ ಅಽಕ ಪ್ರಸಂಗತನ, ಪ್ರಮಾದಗಳಿಗೆ ಅಧಿಕಾರದಲ್ಲಿರುವವರು ತಕ್ಕ ಶಾಸ್ತಿ ಅನುಭವಿಸ ಬೇಕಾಗುತ್ತದೆ. ಮುಖ್ಯಮಂತ್ರಿಯಾದವರು ತಮ್ಮ ಜಾತಿಗೆ ಸೇರಿದ ಇಬ್ಬರು ಸಚಿವರು ಅಥವಾ ರಾಜಕಾರಣಿಗಳ ಜತೆಗೆ ಹೆಚ್ಚು
ಕಾಣಿಸಿಕೊಂಡರೆ, ಆ ಸರಕಾರದ ಇಮೇಜು ಬದಲಾಗಿಬಿಡುತ್ತದೆ. ಮುಖ್ಯಮಂತ್ರಿಗಳ ಆದ್ಯತೆಗಳೇನು ಎಂಬುದರ ಬಗ್ಗೆ
ಗುಮಾನಿಗಳು ಏಳಲಾರಂಭಿಸುತ್ತವೆ. ಆಪ್ತರು ಎಂಬ ಕಾರಣಕ್ಕೆ ಅವರನ್ನು ಸದಾ ತೊಡೆ ಮೇಲೇ ಕುಳ್ಳಿರಿಸಿಕೊಳ್ಳಬೇಕು
ಎಂದೇನಿಲ್ಲ.
ಎಲ್ಲೆಡೆಯೂ ಅವರ ಠೋಳಿ ಕಟ್ಟಿಕೊಂಡು ತಿರುಗ ಬೇಕೆಂದಿಲ್ಲ. ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿ.ಯಾಗಿದ್ದಾಗ, ತಮ್ಮ ಜಾತಿಯವರನ್ನು ಹತ್ತಿರಕ್ಕೂ ಬಿಟ್ಟುಕೊಳ್ಳಲಿಲ್ಲ. ಅವರ ಸುತ್ತಮುತ್ತ ಇದ್ದ ರಾಜಕಾರಣಿಗಳಲ್ಲಿ ಬೇರೆ ಜಾತಿಯವರೇ ಹೆಚ್ಚಾಗಿದ್ದರು. ಅಧಿಕಾರದಲ್ಲಿರುವವರಿಗೆ ಆಪ್ತರಾಗಬೇಕು, ಹತ್ತಿರದವರಾಗಬೇಕೆಂದು ಎಲ್ಲರೂ ಬಯಸುತ್ತಾರೆ. ಆದರೆ
ಯಾರಿಂದ ಎಷ್ಟು ಅಂತರ ಕಾಪಾಡಿಕೊಳ್ಳಬೇಕು ಎಂಬುದನ್ನು ಅಧಿಕಾರದಲ್ಲಿದ್ದವರು ತಿಳಿದುಕೊಳ್ಳಬೇಕು. ತಮ್ಮ ಸುತ್ತ ಅಪಾತ್ರರು ಸುಳಿಯದಂತೆ ಸಾಧ್ಯವಾ ದರೆ ಬೇಲಿ, ಅಗತ್ಯ ಬಿದ್ದರೆ ಗೋಡೆಗಳನ್ನು ಅವರೇ ನಿರ್ಮಿಸಿಕೊಳ್ಳಬೇಕು. ಈ ಕೆಲಸವನ್ನು ಬೇರೆಯವರು ಮಾಡುವುದಿಲ್ಲ.
ವಿಮಾನದಲ್ಲಿ ಊಟ, ತಿಂಡಿ, ನಿದ್ದೆ
ವಿಮಾನದಲ್ಲಿ ಊಟ, ತಿಂಡಿ, ನಿದ್ದೆ ಬಗ್ಗೆ ಸ್ವಲ್ಪ ಹೇಳಿ ಎಂದು ಓದುಗರೊಬ್ಬರು ವಿನಂತಿಸಿಕೊಂಡಿದ್ದಾರೆ. ಆ ಬಗ್ಗೆ ಸಣ್ಣ ಟಿ – ಹಿಂದಿನ ದಿನದಿಂದಲೇ ನಾವು ಹೋಗಬೇಕಾದ ದೇಶಕ್ಕೆ ಅನುಗುಣವಾಗಿ ಹೊಂದಿಸಿಕೊಂಡರೆ, ದೇಹದ ಗಡಿಯಾರ ಅದಕ್ಕೆ ತಕ್ಕಂತೆ ಸೆಟ್ ಆಗುತ್ತದೆ. ಪೈಲಟ್ ಗಳು ಇದನ್ನು ಒಂದು ವ್ರತದಂತೆ ಪಾಲಿಸುವುದರಿಂದ ಪದೇ ಪದೆ ವಿದೇಶ ಯಾತ್ರೆ ಕೈಗೊಂಡರೂ ಆರಾಮಾಗಿಯೇ ಇರುತ್ತಾರೆ.
ನೀವು ಬಿಸಿನೆಸ್ ಕ್ಲಾಸ್ ಪ್ರಯಾಣಿಕರಾದರೆ, ನಿಮಗೆ ಈ ನಿಯಮದಲ್ಲಿ ಸ್ವಲ್ಪ ಸಡಿಲಿಕೆಯಿದೆ. ಕಾರಣ ನೀವು ವಿಮಾನದಲ್ಲಿ
ಹಾಯಾಗಿ ಮನೆಯಲ್ಲಿ ಮಲಗಿದಂತೆ ಮಲಗಬಹುದು. ಬಿಸಿನೆಸ್ ಕ್ಲಾಸ್ ಟಿಕೆಟ್ ತೆಗೆದುಕೊಂಡಿದ್ದರೆ, ವಿಮಾನ ನಿಲ್ದಾಣದ ಲೌಂಜ್ ವ್ಯವಸ್ಥೆ ಉಚಿತವಾಗಿರುವುದರಿಂದ, ಅಲ್ಲಿಯೇ ‘ಗುಂಡು’ ಹೀರಿ ಊಟ ಮಾಡುವುದು ಜಾಣತನ. ವಿಮಾನ ಟೇಕ್ ಆಫ್ ಆಗುತ್ತಿದ್ದಂತೆ ಗಗನಸಖಿಗೆ ಡಿಸ್ಟರ್ಬ್ ಮಾಡಬೇಡಿ ಎಂದು ಮನವಿ ಮಾಡಿ ಮಲಗಿಬಿಡಬಹುದು.
ವಿಮಾನದಲ್ಲಿ ಮದ್ಯ ಮತ್ತು ಊಟ ಸರಬರಾಜು ಮಾಡಿ, ಪ್ಲೇಟ್ ತೆಗೆಯಲು ಕನಿಷ್ಠ ಒಂದು, ಒಂದೂವರೆ ಗಂಟೆಯಾದರೂ
ಬೇಕು. ಅಷ್ಟು ಹೊತ್ತು ನಿದ್ದೆ ಹಾಳು. ಬಿಸಿನೆಸ್ ಕ್ಲಾಸ್‌ನಲ್ಲಿ ಪ್ರಯಾಣಿಸುವುದೇ ನಿದ್ದೆ ಮಾಡಲೆಂದು. ಆ ಕ್ಲಾಸ್‌ನಲ್ಲಿ ಪ್ರಯಾಣಿಸು ವಾಗ, ಸಿನಿಮಾ ನೋಡುವುದರಿಂದ ಅಥವಾ ಪುಸ್ತಕ, ಪತ್ರಿಕೆ ಓದುವುದರಿಂದ ನಮಗೇ ನಷ್ಟ. ಎಕಾನಮಿ ಕ್ಲಾಸ್‌ನಲ್ಲಿ ಪ್ರಯಾ ಣಿಸುವವರಿಗೆ ಮಲಗುವುದು ಕಷ್ಟ. ಆ ಕ್ಲಾಸ್‌ನಲ್ಲಿ ಇರುವ ಸೀಟ್‌ಗಳು ಮಲಗುವುದಕ್ಕೆ ಯೋಗ್ಯವಲ್ಲ. ಅಲ್ಲಿ ಕುಳಿತು ನಿದ್ರಿಸ ಬಹುದು. ಆದರೂ ಅದು ಸ್ವಲ್ಪ ಕಿರಿಕಿರಿಯೇ. ಅದರಲ್ಲೂ ಇಬ್ಬರ ಮಧ್ಯೆ ಕುಳಿತರೆ, ಒಂದೋ ನಮ್ಮ ಹೆಗಲನ್ನು ಬೇರೆಯವರಿಗೆ ಕೊಡಬೇಕು, ಇಲ್ಲವೇ ನಾವು ಬೇರೆಯವರ ಹೆಗಲಿನ ಮೇಲೆ ತಲೆಯಿಡಬೇಕು. ಅದು ಇಬ್ಬರಿಗೂ ಅಲವರಿಕೆ.
ಹೀಗಾಗಿ ಎಕಾನಮಿ ಕ್ಲಾಸ್ ನಲ್ಲಿ ಪಯಣಿಸುವಾಗ, ವಿಮಾನದಲ್ಲಿಯೇ ಊಟ ಮಾಡುವುದು, ಸಿನಿಮಾ ನೋಡುವುದು, ಓದುವುದು, ವಿಡಿಯೋ ಗೇಮ್ಸ ಆಡುವುದು.. ಮುಂತಾದ ಚಟುವಟಿಕೆಗಳಲ್ಲಿ ನಿರತರಾಗಬಹುದು. ಊಟ ಮಾಡಿ, ಒಂದು ಗಂಟೆ ಓದಿ, ಎರಡು ಸಿನಿಮಾ ನೋಡಿ, ಅತ್ತಿತ್ತ ಹೊರಳಾಡಿ, ಒಂದೆರಡು ಗಂಟೆ ಮಲಗಿದರೆ, ನೀವು ಸೇರಬೇಕಾದ ದೇಶ, ಊರು ಬಂದಿರುತ್ತದೆ. ಹೀಗಾಗಿ ಎಕಾನಮಿ ಕ್ಲಾಸ್‌ನಲ್ಲಿ ಪ್ರಯಾಣಿಸುವಾಗ, ಮೊದಲೇ ನಿದ್ದೆ ಬಗ್ಗೆ ಸೂಕ್ತ ಪ್ಲಾನ್ ಮಾಡಿಕೊಳ್ಳ ಬೇಕು. ಇಲ್ಲದಿದ್ದರೆ ಗೋಳು ತಪ್ಪಿದ್ದಲ್ಲ.
ಇನ್ನೊಂದು ಸಂಗತಿ ಗೊತ್ತಿರಲಿ, ವಿಮಾನದಲ್ಲಿ ವಿತರಿಸುವ ಊಟ, ತಿಂಡಿ ಬಿಸಿಯಾಗಿರಬಹುದು, ಫುಶ್ ಇದ್ದಂತೆ ಕಾಣ
ಬಹುದು, ಆದರೆ ಅವು ಕನಿಷ್ಠ ಮೂವತ್ತಾರು ಗಂಟೆ ಮೊದಲು ಸಿದ್ಧಪಡಿಸಿದ್ದು ಎಂಬುದು ಗೊತ್ತಿರಲಿ. ಆದರೆ ಬೇರೆ ಉಪಾ
ಯವಿಲ್ಲ, ವಿಮಾನದಲ್ಲಿ ನೀಡುವ ಆಹಾರ ಸೇವಿಸುವುದು ಅನಿವಾರ್ಯ. ಆದರೆ ಯಾವ ಆಹಾರವನ್ನು, ಎಷ್ಟು ಸೇವಿಸಬೇಕು ಎಂಬ ವಿವೇಚನೆ ಇರಬೇಕು. ಹಣ್ಣು, ಜ್ಯೂಸು ಮತ್ತು ನೀರಿನ ಬಳಕೆ ಇದಕ್ಕೆ ಪರ್ಯಾಯವಾಗಬಹುದು. ಇದನ್ನು ಯಾವ ಟ್ರಾವೆಲ್ ಏಜೆಂಟರೂ ಹೇಳುವುದಿಲ್ಲ .
ಶಾಣ್ಯಾ ಆದರೇನು ಬಂತು?
‘ನಾನು ನಿಮ್ಮ ಮೇಲೆ ನಂಬಿಕೆ ಇಡುವುದಿಲ್ಲ ಅಂತಾದರೆ, ನೀವು ಎಷ್ಟೇ ಶಾಣ್ಯಾ (smart) ಆಗಿದ್ದರೂ ಪ್ರಯೋಜನ ಇಲ್ಲ.’
ಹೀಗೆಂದು ಹೇಳಿದವರು Do Epic Shit ಎಂಬ ಕೃತಿಯನ್ನು ಬರೆದ ಅಂಕುರ್ ವಾರಿಕೂ. ಈ ಉಪದೇಶವನ್ನು ಅವರು
ಮೊದಲು ಕೇಳಿದ್ದು ಅವರ ಮ್ಯಾನೇಜರ್‌ನಿಂದ. ಆತ ಹೆಜ್ಜೆಹೆಜ್ಜೆಗೆ ಮೇಲಿನ ಮಾತುಗಳನ್ನು ಹೇಳುತ್ತಿದ್ದನಂತೆ. ನನ್ನ ಮ್ಯಾನೇಜರ್ ಬರೀ ತಪ್ಪುಗಳನ್ನೇ ಹುಡುಕುತ್ತಾನೆ. ಅದಕ್ಕಾಗಿಯೇ ಅವನನ್ನು ನೇಮಿಸಿದ್ದಾರೆ ಎಂದು ವಾರಿಕೂ ಭಾವಿಸಿ
ದ್ದರಂತೆ. ಆದರೆ ಹಾಗೆ ಯೋಚಿಸುವುದೇ ತಪ್ಪು ಎಂದು ಅವರಿಗೆ ಒಂದು ದಿನ ಅನಿಸಿತಂತೆ. ಅಂದಿನಿಂದ ಮ್ಯಾನೇಜರ್ ಹೇಳುತ್ತಿದ್ದ ಮೇಲಿನ ಮಾತುಗಳನ್ನು ತಾವೇ ನೆನಪು ಮಾಡಿಕೊಳ್ಳತೊಡಗಿದರಂತೆ.
ಮ್ಯಾನೇಜರ್ ನನ್ನ ತಪ್ಪುಗಳನ್ನು ಹುಡುಕುತ್ತಿದ್ದಾನೆ ಎನ್ನುವುದರ ಬದಲು ನಾನು ತಪ್ಪುಗಳಿಲ್ಲದ ಕೆಲಸ ಮಾಡಲಿ ಎಂದು
ಬಯಸುತ್ತಿzನೆ ಎಂದು ಅಂದುಕೊಳ್ಳಲು ಆರಂಭಿಸಿದರಂತೆ. ಅಂದಿನಿಂದ ಅವರ ಕೆಲಸದಲ್ಲಿ ತನ್ನಷ್ಟಕ್ಕೆ ಅಗಾಧ ಬದಲಾವಣೆ
ಅನುಭವಕ್ಕೆ ಬರಲಾರಂಭಿಸಿತಂತೆ. ಕ್ರಮೇಣ ಮ್ಯಾನೇಜರ್ ಕೂಡ ಇವರನ್ನು ನಂಬಲು ಆರಂಭಿಸಿದನಂತೆ. ಅವರನ್ನು ಪ್ರೀತಿಸಲು ಶುರು ಮಾಡಿದನಂತೆ.
ಕ್ರಮೇಣ ಅವನ ಜತೆ ಉತ್ತಮ ಸಂಬಂಧ ಸಾಧ್ಯವಾಯಿತಂತೆ. ನಿಮ್ಮ ಕೆಲಸ ಅಂದ್ರೆ ಬರೀ ಕೆಲಸವಷ್ಟೇ ಅಲ್ಲ. ನಿಮ್ಮ
ಮೇಲಾಧಿಕಾರಿ ನಿಮ್ಮ ಮೇಲೆ ಎಷ್ಟು ನಂಬಿಕೆ ಇಟ್ಟಿದ್ದಾನೆ, ನೀವು ಕೆಲಸ ಮಾಡುವ ಸಂಸ್ಥೆ ನಿಮ್ಮನ್ನು ಎಷ್ಟು ಚೆನ್ನಾಗಿ ನೋಡಿ
ಕೊಳ್ಳುತ್ತದೆ, ನೀವು ವೈಯಕ್ತಿಕವಾದುದನ್ನು ಮೀರಿ ಆ ಸಂಸ್ಥೆಗೆ ಏನನ್ನು ಕೊಡುತ್ತೀರಿ ಎಂಬುದನ್ನು ಅವಲಂಬಿಸಿರುತ್ತದೆ. ಜನ
ನಿಮ್ಮನ್ನು ನಂಬಬೇಕು, ನಿಮ್ಮ ಕೆಲಸ ನಿಮ್ಮ ವ್ಯಕ್ತಿತ್ವವನು ಹೇಳಬೇಕು.
ಈಗ ವಾರಿಕೂ ಅವರಿಗೆ ಅವರ ಮೊದಲ ಮ್ಯಾನೇಜರ್ ಹೇಳಿದ ಮೇಲಿನ ಸಾಲನ್ನು ಮತ್ತೊಮ್ಮೆ ಓದಿ. ನಿರ್ಗಮನ ಸಂದರ್ಶನ ಕುರಿತು ಕೆಲವು ಕಂಪನಿಗಳಲ್ಲಿ ಅದರಲ್ಲೂ ವಿಶೇಷವಾಗಿ ಬಹು ರಾಷ್ಟ್ರೀಯ ಕಂಪನಿಗಳಲ್ಲಿ ಕೆಲಸ ಮಾಡಿ, ನೀವು ಆ ಸಂಸ್ಥೆ ಯಿಂದ ನಿರ್ಗಮಿಸುವ ಸಂದರ್ಭ ಬಂದಾಗ, ಎಚ್.ಆರ್. (ಹ್ಯೂಮನ್ ರಿಸೋರ್ಸ) ವಿಭಾಗದವರು ನಿರ್ಗಮನ ಸಂದರ್ಶನ (Exit Interview) ವನ್ನು ಏರ್ಪಡಿಸುತ್ತಾರಷ್ಟೆ. ‘ನೀವು ನಮ್ಮ ಸಂಸ್ಥೆಯನ್ನು ಯಾಕೆ ಬಿಡುತ್ತಿದ್ದೀರಿ?’ ನಮ್ಮ ಸಂಸ್ಥೆಯಲ್ಲಿ ನಿಮಗೆ ಮೆಚ್ಚುಗೆಯಾಗದ ಅಂಶಗಳೇನು?, ನಮ್ಮ ಸಂಸ್ಥೆಯಲ್ಲಿ ಕೆಲಸ ಮಾಡುವುದು ಅಭಿಮಾನದ ವಿಷಯ ಎಂದು ನಿಮಗೆ ಅನಿಸಿದೆಯಾ?, ನಿಮ್ಮ ವೃತ್ತಿ ಜೀವನ ಸುಧಾರಣೆಗೆ ನಮ್ಮಲ್ಲಿ ಕೆಲಸ ಮಾಡಿದ್ದು ಸಹಾಯಕವಾಯಿತಾ?, ನಿಮ್ಮ ಖಾಸಗಿ-ವೃತ್ತಿಜೀವನದ ಮಧ್ಯೆ ಸಮತೋಲನ ಕಾಯ್ದುಕೊಳ್ಳಲು ನಮ್ಮಸಂಸ್ಥೆ ನೆರವಾಯಿತಾ?, ನಮ್ಮಲ್ಲಿ ಕೆಲಸ ಮಾಡುವಾಗ, ಕೆಲಸದ ಒತ್ತಡದಿಂದ ನಿಮ್ಮ ಖಾಸಗಿ ಜೀವನದ ಮೇಲೆ ಪ್ರತಿಕೂಲ ಪರಿಣಾಮ ಆಯಿತಾ?, ನಮ್ಮ ಸಂಸ್ಥೆ ಯಾವ ಕ್ಷೇತ್ರಗಳಲ್ಲಿ ಸುಧಾ ರಿಸಿಕೊಳ್ಳಬೇಕು ಎಂದು ನಿಮಗೆ ಅನಿಸುತ್ತದೆ? .. ಇವೇ ಮುಂತಾದ ಪ್ರಶ್ನೆಗಳನ್ನು ನಿರ್ಗಮಿತ ಉದ್ಯೋಗಿಗೆ ಕೇಳಲಾಗುತ್ತದೆ.
ಇಂಥ ಪ್ರಶ್ನೆಗಳಿಗೆ ಉತ್ತರಿಸಿ, ನಿಮ್ಮ ಆಕ್ರೋಶವನ್ನು ಹೊರಹಾಕುವುದರಿಂದ ಯಾವ ಪ್ರಯೋಜನವೂ ಇಲ್ಲ. ಈ ಎಲ್ಲ ಪ್ರಶ್ನೆಗಳನ್ನು ನೀವು ಆ ಸಂಸ್ಥೆಯಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಯಾರೂ ಕೇಳಿರುವುದಿಲ್ಲ. ಒಂದು ವೇಳೆ ಕೇಳಿದ್ದಿದ್ದರೆ ನೀವು ಆ ಸಂಸ್ಥೆಯನ್ನು ತೊರೆಯುವ ಪ್ರಸಂಗವೇ ಬರುತ್ತಿರಲಿಲ್ಲ. ನೀವು ಯಾವುದೇ ಸಂಸ್ಥೆಯಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ, ಒಂದು ಆರೋಗ್ಯಪೂರ್ಣವಾದ ಚರ್ಚೆ, ಸಂವಾದ ಅಥವಾ ಮಾತುಕತೆ ಸಾಧ್ಯವಾ ಎಂಬುದನ್ನು ಎಚ್.
ಆರ್. ವಿಭಾಗದವರನ್ನು ಕೇಳಬೇಕು. ಅದು ಸಾಧ್ಯವಾಗದಿದ್ದರೆ ನಿರ್ಗಮನ ಸಂದರ್ಶನದಲ್ಲಿ ಭಾಗವಹಿಸಬಾರದು.
ನೀವು ಸಂಸ್ಥೆಯನ್ನು ಬಿಡುವ ಸಂದರ್ಭದಲ್ಲಿ, ಆ ಸಂಸ್ಥೆಯನ್ನು ಉತ್ತಮಗೊಳಿಸುವುದು ಹೇಗೆ ಎಂಬ ಪ್ರಶ್ನೆಗಳಿಗೆ ಉತ್ತರಿಸು ವುದು ಅರ್ಥಹೀನ. ಉತ್ತಮ ಸಂಸ್ಥೆಗಳನ್ನು ಅಲ್ಲಿ ಕೆಲಸ ಮಾಡುವ ಸಿಬ್ಬಂದಿ ಜತೆ ನಿರಂತರ ಮಾತುಕತೆ ನಡೆಸುವ ಮೂಲಕ ಕಟ್ಟಲಾಗುತ್ತದೆಯೇ ಹೊರತು, ಅವರು ಬಿಟ್ಟು ಹೋಗುವಾಗ ಹೇಳುವ ಅಭಿಪ್ರಾಯಗಳಿಂದ ಅಲ್ಲ. ನಿಮಗೆ ಕೆಲಸ ಮಾಡುವಾಗ ಹೇಳಲು ಸಾಧ್ಯವಾಗದ್ದನ್ನು, ಕೆಲಸ ಬಿಡುವಾಗ ಹೇಳುವುದರಲ್ಲಿ ಅರ್ಥವಿಲ್ಲ.