ಬುಲೆಟ್ ಪ್ರೂಫ್
ವಿನಯ್ ಖಾನ್
ಈ ಡೆಮಾಕ್ರಸಿನೇ ಹಾಗೇ!
ಇವತ್ತು ಮೇಲಿದ್ದವನು, ನಾಳೆ ಕೆಳಗಿರುತ್ತಾನೆ. ಇಂದು ಗೊತ್ತೇ ಇಲ್ಲದವನು ಮುಂದೆ ಒಂದು ದಿನ ನಮ್ಮನ್ನೇ ಆಳಲು ಶುರುಮಾಡುತ್ತಾನೆ. ಅದೆಷ್ಟೇ ಲೆಕ್ಕಾ ಚಾರ ಹಾಕಿ ಭವಿಷ್ಯ ನೋಡಿ, ಪ್ಲಾನ್ ಮಾಡಿ, ಕೆಲಸ ಮಾಡಿದರೂ ಅದು ಎಷ್ಟೋ ಸಲ ತಲೆಕೆಳಗಾಗುತ್ತದೆ.
That is Beauty of Democracy. ಆದರೆ ಅದೇ ಬ್ಯೂಟಿ, ಅದೆಷ್ಟೋ ಜನರನ್ನ ಸ್ಕ್ರ್ಯಾಪ್ ಮಾಡಿತ್ತಲ್ಲವೇ? ಏನೇ ಹೆಸರು, ಹಣ, ತೋಳ್ಬಲ ಇದ್ದರೂ ಡೆಮಾಕ್ರಸಿಯೆಂಬ ಬ್ಯೂಟಿ ಮುಂದೆ ಕಾಲೂರಲಿಲ್ಲವೇ? ಅದಕ್ಕೆ ಸರಿಯಾದ ಉದಾಹರಣೆ ಮೊನ್ನೆ ಮೊನ್ನೆ ತಾನೇ ನಡೆದ ವಿಧಾನಸಭೆ ಚುನಾವಣೆ. ಡಿಕೆ ಶಿವಕುಮಾರ್ ಅವರ ಧೈರ್ಯ ಬಿಟ್ಟರೇ ಮತ್ಯಾರ ಭವಿಷ್ಯವೂ ಸತ್ಯ ವಾಗುವ ಲಕ್ಷಣಗಳಿರಲಿಲ್ಲ.
ಎಷ್ಟೋ ಜನರ ಹಗಲು-ಇರುಳು ಕನಸಿಗೆ ಕೊಳ್ಳಿಯಿಟ್ಟು, ಚುನಾವಣೆಯಲ್ಲಿ ಕಾಂಗ್ರೆಸ್ಗೆ ಕನಸಿನಾಚೆಗೂ ಇಷ್ಟು ಸೀಟುಗಳು ದಕ್ಕ ಬಹುದಿತ್ತೆಂದು ಊಹಿಸಿ ರಲಿಲ್ಲ. ನರೇಂದ್ರ ಮೋದಿ-ಅಮಿತ್ ಶಾ ಆಟ ಮತ್ತೆ ರಾಜ್ಯದಲ್ಲಿ ಬಿಜೆಪಿ ಸರಕಾರವನ್ನು ರಚನೆ ಮಾಡುವ ದಾರಿಯನ್ನು ತೋರುತ್ತದೇ ಎಂದೇ ಎಲ್ಲರೂ ನಂಬಿದ್ದರು. ಸಚಿವರಾಗಲೂ ಎಷ್ಟೋ ಜನ ಹೊಸ ಬಟ್ಟೆ ಹೊಲಿಸಿ ಕೊಂಡಿದ್ದರು.
ಅದರ ಜತೆಗೆ ಎಲ್ಲ ರಾಜಕೀಯ ಪಂಡಿತರ ಪ್ರಡಿಕ್ಷನ್ ‘ಅತಂತ್ರ’ವೇ ಆಗಿತ್ತು. ಚುನಾವಣೋತ್ತರ ಸಮೀಕ್ಷೆಯಲ್ಲೂ ಹೆಚ್ಚೂ ಕಡಿಮೆ ಅತಂತ್ರವೇ ಕಂಡಿತ್ತಲ್ಲವೇ? ಆದರೆ, ಜನಗಳ ಭಾವನೆ ಯಾರಿಗೆ ಕಾಣಿಸೀತು? ಅದಕ್ಕೆ ಸರಿಯಾಗಿ ಹಿಂದಿನ ಬಿಜೆಪಿ ಸರಕಾರದ ಹಗರಣಗಳು ‘೪೦%’ ವೋಟನ್ನು ಕಾಂಗ್ರೆಸ್ ಕಡೆ ವಾಲಿಸಿರಬಹುದೇನೋ. ಹಾಗೆಯೇ, ಕಾಂಗ್ರೆಸಿನ ‘ನೀರೂರಿ
ಸುವಂತಹ’ ಗ್ಯಾರಂಟಿಗಳು ಇದಕ್ಕೆ ಮತ್ತಷ್ಟು ಗರಮ್ ಮಸಾಲಾದ ಘಾಟನ್ನೂ ಹೆಚ್ಚಿಸಿತ್ತು. ಹೆಚ್ಚೂ ಕಡಿಮೆ ಈ ಚುನಾವಣೆ ಯಲ್ಲಿ ಎಷ್ಟೋ ಜನರು ಕಾಂಗ್ರೆಸ್ ಪರವಾಗಿ ಮತ ಹಾಕದೇ.
ಬಿಜೆಪಿಯ ವಿರುದ್ಧ ತಮ್ಮ ಆಕ್ರೋಶ ತೋರಿದ್ದರು. ಭಾವಿ ಸಚಿವರ ‘ಹೊಸ ಬಟ್ಟೆ’ಯನ್ನು ಕಿತ್ತು ಹಾಕಿತ್ತಲ್ಲವೇ? ೧೯೮೪ರಲ್ಲಿ ಗುಜರಾತಿನ ಡಾ.ಎ.ಕೆ.ಪಟೇಲ್ ಮತ್ತು ಆಂಧ್ರ ಪ್ರದೇಶದ ಚಂದುಪಟ್ಲ ಜಗನ್ ರೆಡ್ಡಿ ಎಂಬ ಇಬ್ಬರೇ ಲೋಕಸಭಾ ಪ್ರತಿನಿಧಿ ಗಳನ್ನು ಗೆಲ್ಲಿಸಿಕೊಳ್ಳುವಲ್ಲಿ ಸಫಲರಾಗಿದ್ದ ಬಿಜೆಪಿ, ಇಂದು ವಿಶ್ವದ ಅತಿದೊಡ್ಡ ರಾಜಕೀಯ ಪಾರ್ಟಿ! ಆವೊಂದು ಕಾಲದಲ್ಲಿ ಬಿಜೆಪಿಯ ಅಭ್ಯರ್ಥಿಗಳಿಗೆ ಸಾವಿರ ವೋಟುಗಳೇ ಗಗನ ಕುಸುಮವಾಗಿದ್ದಂತಹ ಕಾಲವನ್ನು ದಾಟಿ ಇಲ್ಲಿಯವರೆಗೂ ಬಂದಿದ್ದು ಗೊತ್ತಿದ್ದಿದ್ದದ್ದೇ.
೧೯೯೯ರಲ್ಲಿ ೨೦ಕ್ಕೂ ಹೆಚ್ಚು ಪಕ್ಷಗಳನ್ನು ಸೇರಿಸಿಕೊಂಡು ಮಾಡಿದ್ದ, ಎನ್ಡಿಎ ಸರಕಾರ ಎಷ್ಟೇ ಒಳ್ಳೆಯ ಕೆಲಸಗಳನ್ನು
ಮಾಡಿದ್ದರೂ ೨೦೦೪ರ ಚುನಾವಣೆಯಲ್ಲಿ ಕಾಂಗ್ರೆಸ್ನ ಮುಂದೆ ಮಂಡಿಯೂರಲಿಲ್ಲವೇ? ಅದಾದ ಮೇಲೆ ೨೦೧೩ರ ವರೆಗೂ
ಅಷ್ಟೊಂದು ಪರಿಚಿತರಲ್ಲದ ನರೇಂದ್ರ ಮೋದಿ ೨೦೧೪ಕ್ಕೆ ಭಾರತದ ಪ್ರಧಾನ ಮಂತ್ರಿ ಆಗಲಿಲ್ಲವೇ? ಪ್ರಧಾನಿಗಳ ಖಾಂದಾನ್ನಲ್ಲೇ ಹುಟ್ಟಿದ್ದ ರಾಹುಲ್ ಗಾಂಽ ತಮ್ಮದೇ ವಂಶಪಾರಂಪರ್ಯವಾಗಿ ಗೆಲ್ಲುತ್ತ ಬಂದಿದ್ದ ರಾಯ್ಬರೇಲಿಯಲ್ಲಿ ೨೦೧೯ರಲ್ಲಿ ಸೋಲಲಿ ಲ್ಲವೇ? ನರೇಂದ್ರ ಮೋದಿ ಪ್ರಧಾನಿ ಆಗುವುದೇ ಇಲ್ಲ ಅಂತ ಶರಾ ಬರೆದಿಟ್ಟಿದ್ದ ಹಲವರ ಮುಂದೆ ಮೋದಿ ೨ಬಾರಿಯೂ ಪ್ರಧಾನಿ ಆಗಲಿಲ್ಲವೇ? ೧೯೮೨ರಲ್ಲಿ ಅಂದಿನ ಕಾಂಗ್ರೆಸ್ ರಾಷ್ಟ್ರೀಯ ಕಾರ್ಯದರ್ಶಿ ರಾಜೀವ್ ಗಾಂಧಿ ಹೈದರಾಬಾದ್ಗೆ ಬಂದಾಗ ಅವರಿಗೆ ಕೊಟ್ಟ ರಾಜಮರ್ಯಾದೆ, ಆಂಧ್ರ ಪ್ರದೇಶದ ರಾಜಕಾರಣಿಗಳ ಸ್ವಾಭಿಮಾನ ರಹಿತ ನಡೆಯನ್ನು ನೋಡಿ ಬೇಸತ್ತ ಸಿನಿಮಾ ನಟ ಎನ್.ಟಿ ರಾಮಾರಾವ್ ತಮ್ಮದೇ ಆದ ಪಕ್ಷ ಕಟ್ಟಿ ಒಂಬತ್ತೇ ತಿಂಗಳಲ್ಲಿ, ಇಂದಿರಾ ಗಾಂಧಿ ಸಾರಥ್ಯದ ಕಾಂಗ್ರೆಸ್ ಅನ್ನು ಎದುರಿಸಿ, ಇಡೀ ಆಂಧ್ರ ಪ್ರದೇಶ ಸುತ್ತಾಡಿ, ಅಧಿಕಾರಕ್ಕೇರಿದ್ದರು.
ಕಾಲ ಬದಲಾಗುತ್ತಾ ಹೊರಟಾಗ ಎಲ್ಲವೂ ಬದಲಾಗುತ್ತಲೇ ಹೋಗುತ್ತದೆ. ಭಾರತಕ್ಕೆ ಸ್ವಾತಂತ್ರ್ಯ ಬಂದಾಗಿನ ಸಂದರ್ಭಕ್ಕೆ ಬೇರೆ ಯಾವ ಪಕ್ಷವೂ ಸರಕಾರ ರಚಿಸಲಾಗದು; ಕಾಂಗ್ರೆಸ್ ಇರುವುದರಿಂದ, ಮತ್ತದನ್ನು ಯಾವುದೇ ಶಕ್ತಿ ಅಧಿಕಾರದಿಂದ ಕೆಳಗಿಳಿಸಲಾಗದು ಎಂಬ ನಂಬಿಕೆ ಎಷ್ಟೋ ಜನರಲ್ಲಿ ಇತ್ತು. ಆದರೆ, ಇವತ್ತು? ಹಾಗೆಯೇ ಹಲವಾರು ಬಿಜೆಪಿಗರ ಲೆಕ್ಕಾಚಾರ ದಲ್ಲಿ ಇನ್ನೂ ೨೦-೩೦ ವರ್ಷಗಳ ಕಾಲ ಕೇಂದ್ರದ ಬಿಜೆಪಿ ಸರಕಾರವನ್ನು ಯಾರೂ ಅಲುಗಾಡಿಸಲಾರರು ಎಂಬ ಭ್ರಮೆ ಇದೆ. ಆದರೆ ಅದು ಎಷ್ಟರ ಮಟ್ಟಿಗೆ ಸತ್ಯ? ಮೋದಿ ಇರುವವರೆಗಂತೂ ಯಾರೂ ಬಿಜೆಪಿಯನ್ನು ಅಲುಗಾಡಿಸುವುದು ಸುಲಭವಲ್ಲ ಬಿಡಿ.
ಆದರೆ, ಈಗಾಗಲೇ ಮೋದಿ ಅವರಿಗೆ ೭೨. ಅವರೇ ಹಾಕಿರುವ ವಯಸ್ಸಿನ ಮಿತಿಯಲ್ಲಿ ಅವರನ್ನು ಹೆಚ್ಚೂ ಕಡಿಮೆ ಇನ್ನೂ ೩
ವರ್ಷಗಳವರೆಗೆ ಅವರನ್ನು ಪ್ರಧಾನಿ ಸ್ಥಾನದಲ್ಲಿ ನೋಡಬಹುದು. ಮುಂದೆ? ಬಿಜೆಪಿಯ ಕೆಲ ನಾಯಕರು ಬಯಸುವ ಹಾಗೆ
ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ರನ್ನು ಭಾರತದ ಪ್ರಧಾನಿ ಮಾಡುತ್ತಾರಾ? ಹೇಳಬೇಕೆಂದರೆ, ಅಧಿಕೃತವಾಗಿ
ಮೋದಿ ಉತ್ತರಾಧಿಕಾರಿಯ ಬಗ್ಗೆ ಪಕ್ಷದಲ್ಲಿ ಯಾವುದೇ ಸುಳಿವಿಲ್ಲ.
೨ ಸಲ ಅತ್ಯಂತ ಜನಪ್ರಿಯ ಆಡಳಿತ ಕೊಟ್ಟ ಅಮೆರಿಕದ ಬರಾಕ್ ಒಬಾಮರ ಅವಧಿ ಮುಗಿದಮೇಲೆ ಅವರದ್ದೇ ಪಾರ್ಟಿ ಸೋತು, ರಿಪಬ್ಲಿಕನ್ ಪಾರ್ಟಿಯ ಅಧ್ಯಕ್ಷೀಯ ಪಟು ಡೊನಾಲ್ಡ್ ಟ್ರಂಪ್ ಗೆಲ್ಲಲಿಲ್ಲವೇ? ಒಂದ್ಸಲ ಯೋಚನೆ ಮಾಡಿ, ಕಾಂಗ್ರೆಸ್ ಸ್ವಲ್ಪ ಸ್ವಲ್ಪ ಬದಲಾಗುತ್ತಿದೆ. ಅದರ ಜತೆ ರಾಹುಲ್ ಗಾಂಧಿ ಕೂಡ! ಮೊನ್ನೆ ಮಾಡಿದ ಭಾರತ ಜೋಡೋ ಯಾತ್ರೆಯಿಂದ ಅವರು ಪ್ರಧಾನಿ ಆಗಲಿಕ್ಕಿಲ್ಲ. ಆದರೆ, ಜನರ ಮನಸ್ಸಲ್ಲಿ ತಮ್ಮದೇ ಒಂದು ಸೀರಿಯಸ್ನೆಸ್ ಅಂತೂ ಬೆಳೆಸಿಕೊಳ್ಳುತ್ತಿದ್ದಾರೆ. ‘ಪಪ್ಪು’ ಎಂದು ಕರೆವ ಬಿಜೆಪಿಗೆ ತಾವು ಪಪ್ಪು ಅಲ್ಲ ‘ರಾಗಾ’ ಅಂತ ತೋರಿಸುತ್ತಿಲ್ಲವಾ? ಬಿಜೆಪಿ ಅತ್ಯಂತ ಪ್ರಬಲವಾಗಿ ಬೆಳೆಯಲು, ಚುನಾವಣೆಗಳಲ್ಲಿ ವೋಟು ಗಳನ್ನು ಪಡೆಯಲು ಸಹಾಯಕವಾಗಿದ್ದು ಸಾಮಾಜಿಕ ಜಾಲತಾಣ.
ಇಂದು ಕಾಂಗ್ರೆಸಿಗರೂ ಅದನ್ನ ಬಳಸುತ್ತಿದ್ದಾರೆ. ಅವರೂ ಮೋದಿಯವರನ್ನು, ಅಮಿತ್ ಶಾರನ್ನು ಹಾಗೆ ಬಿಜೆಪಿಯ ಎಲ್ಲ
ನಾಯಕರ ಟ್ರೋಲ್ ಮಾಡುವುದನ್ನು ಶುರುಮಾಡಿದ್ದಾರೆ. ಬಿಜೆಪಿಯವರ ಥರವೇ ಪಿಆರ್ಗೆ (public relationship)
ಕೋಟಿ ಕೋಟಿ ಹಣ ಸುರಿಯುತ್ತಿದ್ದಾರೆ. ರಾಜಕೀಯ ತಂತ್ರಜ್ಞರನ್ನೂ ಬಳಸುತ್ತಿದ್ದಾರೆ. ಹೊಸ ಹೊಸ ತಂತ್ರಜ್ಞಾನದಿಂದ ಜನರ
ಮಿಡಿತವನ್ನು ತಿಳಿದು, ಅದಕ್ಕೆ ಮಲಾಮ್ ಹಚ್ಚುವ ರೀತಿ ತಮ್ಮ ಕೆಲಸಗಳನ್ನು -ಅಜೆಂಡಾವನ್ನು ರೂಪಿಸುತ್ತಿದ್ದಾರೆ.
ಎಲ್ಲದಕ್ಕೂ ಒಂದೊಳ್ಳೆ ಉದಾಹರಣೆ ಅಂದರೆ, ಮೊನ್ನೆ ಮೊನ್ನೆ ರಾಹುಲ್ ಗಾಂಧಿ ಲಾರಿಯಲ್ಲಿ ದೆಹಲಿಯಿಂದ ಚಂಡಿಗಢ ದವರೆಗೆ ಟ್ರಕ್ನಲ್ಲಿ ಹೋಗಿದ್ದು. ಅದು ಮೇಲಿನ ಮಟ್ಟಿಗೆ ಅಂಥ ದೊಡ್ಡ ವಿಷಯವಾಗಿ ಪರಿಣಮಿಸದಿದ್ದರೂ ಜನರ ಮನಸ್ಸಲ್ಲಿ ಒಂದೊಳ್ಳೆ ಭಾನೆಯನ್ನಂತೂ ಮೂಡಿಸಿತ್ತು. ಇದು ಕಟ್ಟರ್ ಬಿಜೆಪಿ ಅಥವಾ ಮೋದಿ ಅಭಿಮಾನಿಗಳಿಗೆ ಏನೂ ಅನ್ನಿಸದಿದ್ದರೂ ಸಾದಾತಿಸಾದಾ ಜನರ ಮನಸ್ಸನ್ನು ತಲುಪುವುದು ಇಂಥದ್ದೇ. ಮೋದಿ ಜನಪ್ರಿಯ ತೆಗೆ ಇಂಥ ಗಿಮಿಕ್ಗಳೂ ಕಾರಣವಲ್ಲವೇ? ಎಲ್ಲವನ್ನೂ ನೋಡುತ್ತ ಹೋದಂತೆ, ಮುಂದೆ ಬರುವ ಚುನಾವಣೆಯಲ್ಲಿ ಮೋದಿಗೆ ಅಷ್ಟೊಂದು ಹಿನ್ನೆಡೆ ಬರಲಿಕ್ಕಿಲ್ಲ.
ಆದರೆ, ಮೋದಿ ಇಲ್ಲದೇ ಬಿಜೆಪಿ ಏನಾಗಬಹುದು? ಅಷ್ಟೊತ್ತಿಗೆ ರಾಹುಲ್ ಗಾಂಧಿ ಪ್ರಧಾನಿ ಆಗುವ ಮಟ್ಟಕ್ಕೇ ಬೆಳೆಬಹುದೇ? ಅಥವಾ ಕಾಂಗ್ರೆಸ್ ನಲ್ಲಿ ಪರ್ಯಾಯ ನಾಯಕರು ಬರಬಹುದೇ? ಇತ್ತಿಚೆಗೆ ನಡೆಯುತ್ತಿರುವ ಹಲವಾರು ಸಂಗತಿಗಳು ಬಿಜೆಪಿಗೆ ಸಣ್ಣ ಪುಟ್ಟ ಹೊಡೆತಗಳನ್ನು ಕೊಡುತ್ತಲೇ ಇವೆ. ಮೊನ್ನೆ ಮೊನ್ನೆ ರಾಹುಲ್ ಗಾಂಧಿ ಸಂಸತ್ ಸದಸ್ಯತ್ವ ಕಳಕೊಂಡಾ ಗಲೂ ಅವರ ಪರ ಜನ ಮಾತಾಡಿದ್ದಿದೆ. ‘ಪಾಪ’ ಅನ್ನೋ ಭಾವನೆಯೂ ಬಂದಿದೆ.
ಅಂಥ ಸೆಂಟಿಮೆಂಟ್ಗಳೂ ರಾಜಕೀಯದಲ್ಲಿ ವರ್ಕ್ ಆಗುತ್ತದಲ್ಲವೇ? ಮೋದಿ ಕಾಲದಲ್ಲೂ ನಿರಂಕುಶಪ್ರಭುತ್ವವನ್ನು ನೋಡು ತ್ತಿದ್ದೇವಲ್ಲ! ರಾತ್ರೋ ರಾತ್ರಿ ನೋಟ್ ಬ್ಯಾನ್ ಮಾಡುವುದು. ಯಾವುದೋ ದೇಶಗಳ ಆಪ್ಗಳನ್ನು ಬ್ಯಾನ್ ಮಾಡುವುದು. ಒಮ್ಮೆಲೇ ದೇಶವನ್ನು ಲಾಕ್ಡೌನ್, ಇಂಟರ್ನೆಟ್ ಶಟ್ಡೌನ್, ಹೆಚ್ಚಿದ ಪೆಟ್ರೋಲ್-ಡೀಸೆಲ್, ಸಿಲೆಂಡರ್ ದರ ಇಂತಹ ಇನ್ನೂ ಅನೇಕ ಸಾರ್ವಜನಿಕರಿಗೆ ಕಿಂಚಿತ್ತಾದರೂ ಬೇಸರ ತಂದಿದೆ.
ಎಲ್ಲದ್ದಕ್ಕಿಂತ ಹೆಚ್ಚಾಗಿ ಪ್ರಜಾಪ್ರಭುತ್ವದಲ್ಲಿ ನಿರಂಕುಶಪ್ರಭುತ್ವ (Autocracy) ಯಾವತ್ತೂ ನಡೆಯಲ್ಲ. ಇಂದಿರಾ ಗಾಂಽ ನಿರಂಕುಶವಾದಿಯಾಗಿದ್ದರೂ ಅಂದಿನ ಕಾಲದ ಜನರಲ್ಲಿ ಸರಿಯಾದ ವಿದ್ಯೆಯಿರಲಿಲ್ಲ, ಮಿಡಿಯಾಗಳಿಗೂ ವ್ಯಾಪಕತೆ ಮತ್ತು ಜನಪ್ರಿಯತೆ ಇರಲಿಲ್ಲ. ಆಗ ಅವರದ್ದೇ ಮಾದರಿ, ಅವರು ಹೇಳಿದ್ದೇ ವೇದವಾಕ್ಯ, ಜೀ ಹುಜೂರ್ ಎನ್ನುವ ಜನ- ಅಧಿಕಾರ ವರ್ಗ ಅದರದ್ದೆಲ್ಲ ನಡೆಯಿತು. ಆದರೆ, ಇಂದಿನ ಕಾಲದಲ್ಲಿ? ಇಂದು ಸಣ್ಣ ಪುಟ್ಟ ಹೆಜ್ಜೆ ಇಟ್ಟು ಬೆಳೆಯುತ್ತಿರುವ ರಾಹುಲ್ರ ಕಾಂಗ್ರೆಸ್ ಮುಂದೆ ಆಲದಮರ ಆಗುವುದಿಲ್ಲ ಎನ್ನುವುದಕ್ಕೆ ಏನು ಗ್ಯಾರಂಟಿ? ಅಧಿಕಾರದ ಮದವೇರಿಸಿಕೊಂಡಿರುವ ಬಿಜೆಪಿ ನಾಯಕರು ತಮ್ಮ ಸ್ಥಿತಿಯನ್ನು ನೋಡಿಕೊಳ್ಳಬೇಕು.
ತಲೆಮೇಲೆ ಮೋದಿ ಫೋಟೋ-ಹೆಸರನ್ನು ಹೊತ್ತು ಎಷ್ಟು ವರ್ಷ ಓಡಾಡಬಹುದು? ಪ್ರತಿಪಕ್ಷದಲ್ಲಿ ಗಟ್ಟಿಯಾದ ನಾಯಕತ್ವ ಇಲ್ಲವೆಂಬುದು ಮೋದಿಯವರಿಗೆ ದೊಡ್ಡ ಫಲ ಕೊಟ್ಟಿದೆ. ಆದರೆ, ಅದು ಎಷ್ಟು ದಿನಗಳವರೆಗೆ ನಡೆಯುತ್ತದೆ? ಅಮೆರಿಕದ ಅಧ್ಯಕ್ಷ ಜೋ ಬೈಡೆನ್, ಮೋದಿ ಆಟೋಗ್ರಾಫ್ ಕೇಳಲಿ. ಪಪುವಾದ ಪ್ರಧಾನಿ, ಮೋದಿ ಅವರ ಕಾಲಿಗೆ ಬಿದ್ದು ಆಶೀರ್ವಾದ ವನ್ನೂ ತೆಗೆದು ಕೊಳ್ಳಲಿ, ಆಸ್ಟ್ರೇಲಿಯಾದ ಪ್ರಧಾನಿ ಮೋದಿಯವರನ್ನು ಬಾಸ್ ಎಂದೂ ಕರೆಯಬಹುದು. ಆದರೆ, ಆ ಎಲ್ಲ ಸವಲತ್ತು, ಜೈಕಾರಗಳು ಬಿಜೆಪಿಗೆ ಹಾರ ಹಾಕಿಸುತ್ತವೆಯೇ? ಎಷ್ಟು ವರ್ಷ ಅಂತ ದೇಶದಲ್ಲಿ ಒನ್ ಮ್ಯಾನ್ ಶೋ ಆಗುತ್ತದೆ? (ಮೊನ್ನೆ ನಡೆದ ರಾಜ್ಯ ಚುನಾವಣೆಯಲ್ಲಿ ಬಿಜೆಪಿ ಫ್ಲಾಪ್ ಶೋ ಕಂಡ ತಕ್ಷಣ ಮೋದಿ ಚಾರ್ಮ್ ಇಲ್ಲ ಅಂತಲ್ಲ) ಎಷ್ಟೋ ಕಡೆ ಓದಿದಾಗ ೨೦೨೯ರ ಲೋಕಸಭಾ ಚುನಾವಣೆಯ ಮೇಲೆ ಕಾಂಗ್ರೆಸ್ ಕಣ್ಣಿಟ್ಟಿದೆ.
೨೦೨೪ರ ಚುನಾವಣೆ ಅವರಿಗೆ ಬರೀ ಚುನಾವಣೆ ಅಷ್ಟೇ! ೫ ವರ್ಷ ಒಂದು ರಾಜಕೀಯ ಪಕ್ಷಕ್ಕೆ ಅತೀ ದೊಡ್ಡ ಸಮಯವೇ. ಆದರೆ, ಬಿಜೆಪಿಯವರಿಗೆ ಇನ್ನೂ ಕಾಲ ಮಿಂಚಿಲ್ಲ, ಮೋದಿ ಹೆಸರಿನ ಠಸ್ಸೆ ಬಳಸಿ ಚುನಾವಣೆ ಮಾಡುವುದಕ್ಕಿಂತ ತಮ್ಮದೇ ಹೆಸರನ್ನು ಸ್ವಲ್ಪನಾದರೂ ಬಳಸಿಕೊಂಡು ಗೆಲ್ಲವುದನ್ನು ಕಲಿಯಬೇಕು. ಮೋದಿ ಎಂಬ ಆಲದ ಮರ ಬಿದ್ದ ಮೇಲೆ ಕೆಳಗಿರುವ ಚಿಕ್ಕಪುಟ್ಟ ಮರಗಳು ಹೇಳಹೆಸರಿಲ್ಲ ದಂತಾಗಬಹುದು. ಅಲ್ವಾ?