Saturday, 14th December 2024

ಮುಂದೆ ಇನ್ನಷ್ಟು ಭಾರ ಗ್ಯಾರಂಟಿ !

ಅಶ್ವತ್ಥಕಟ್ಟೆ

ranjith.hoskere@gmail.com

ಇಡೀ ದೇಶದಲ್ಲಿ ಈಗ ಎಲ್ಲೆಡೆ ಪ್ರಚಲಿತದಲ್ಲಿರುವ, ದೇಶದ ಯಾವುದೇ ರಾಜ್ಯದಲ್ಲಿ ಚುನಾವಣೆ ಎದುರಾದರೂ ಸಿದ್ಧ ಸೂತ್ರ ವಿರುವ ವಿಷಯವೆಂದರೆ ‘ಉಚಿತ ಗ್ಯಾರಂಟಿ’ಗಳ ಭಾಗ್ಯ ಎನ್ನುವುದು ಸ್ಪಷ್ಟವಾಗುತ್ತಿದೆ. ಕರ್ನಾಟಕದಲ್ಲಿ ಯಶಸ್ವಿಯಾದ ಈ ಸೂತ್ರ ವನ್ನು ಮುಂದಿನ ದಿನದಲ್ಲಿ ಕಾಂಗ್ರೆಸ್ ಮಾತ್ರವಲ್ಲದೇ ಬಿಜೆಪಿ ನಾಯಕರು ತಮ್ಮ ಪ್ರಣಾಳಿಕೆಯಲ್ಲಿ ಅಳವಡಿಸಿಕೊಂಡರೂ ಅಚ್ಚರಿಯಿಲ್ಲ ಎನ್ನುವ ಮಾತಿದೆ.

ಆದರೆ, ಗ್ಯಾರಂಟಿ ಯೋಜನೆಗಳು ಈ ಮಟ್ಟಿಗೆ ಯಶಸ್ವಿಯಾಗಲಿದೆ ಎನ್ನುವುದು ಸ್ವತಃ ಕಾಂಗ್ರೆಸ್ ನಾಯಕರಿಗೆ ಅರಿವಿರಲಿಲ್ಲ. ಕೊಟ್ಟ ಮಾತಿನಂತೆ ಕಾಂಗ್ರೆಸಿ ಗರು ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿದ್ದಾರೆ. ಆದರೆ ಇದರ ಜತೆಜತೆ ಯಲ್ಲಿ ಆರ್ಥಿಕ ಹೊರೆ ಯನ್ನೂ ಮೈಮೇಲೆ ಎಳೆದುಕೊಂಡಿರುವ ತೀರ್ಮಾನದ ಬಗ್ಗೆಯೂ ಚರ್ಚೆಗಳು ಆರಂಭವಾಗಿವೆ. ಕರ್ನಾಟಕದಲ್ಲಿ ಕಾಂಗ್ರೆಸ್ ಅಽಕಾರದ ಗದ್ದುಗೆ ಏರಿದ ೧೫ ದಿನದಲ್ಲಿ ಐದೂ ಗ್ಯಾರಂಟಿಗಳನ್ನು ಒಂದೇ ಬಾರಿಗೆ ಜಾರಿಗೊಳಿಸುವ ಮಹತ್ವದ ತೀರ್ಮಾನ ವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡು ಒಂದೊಂದೇ ಯೋಜನೆಯ ಆದೇಶಗಳು ಬಿಡುಗಡೆಯಾಗುತ್ತಿವೆ.

ಬಹುತೇಕ ಯೋಜನೆ ಗಳಿಗೆ ‘ಸರಳ’ ಷರತ್ತುಗಳನ್ನು ವಿಧಿಸಿರುವ ರಾಜ್ಯ ಸರಕಾರಕ್ಕೆ ಈ ಎಲ್ಲ ಗ್ಯಾರಂಟಿಗಳ ಅನುಷ್ಠಾನಕ್ಕೆ ಬರೋಬ್ಬರಿ ೭೦ರಿಂದ ೮೦ ಸಾವಿರ ಕೋಟಿ ರು. ಅನುದಾನವನ್ನು ಬೇಡುತ್ತಿವೆ ಎನ್ನುವ ಅಧಿಕಾರಿಗಳ ಮಾತು. ಪ್ರಸಕ್ತ ಆರ್ಥಿಕ ವರ್ಷಕ್ಕೆ ಅಂದಾಜಿಸಿರುವ ೩೦ರಿಂದ ೪೦ ಸಾವಿರ ಕೋಟಿ ರು. ಸಾಕೆನ್ನುವುದು ರಾಜಕೀಯ ವಿಶ್ಲೇಷಕರ ಮಾತು.
ಇಷ್ಟು ದೊಡ್ಡ ಪ್ರಮಾಣದ ಅನುದಾನ ಬಯಸುವ, ಆರ್ಥಿಕತೆಯ ಮೇಲೆ ಬಹುದೊಡ್ಡ ಪರಿಣಾಮ ಬೀರುವ ಈ ಎಲ್ಲ ಯೋಜನೆ ಗಳು ಕೇವಲ ಒಂದು ವರ್ಷ ಅಥವಾ ಎರಡು ವರ್ಷಕ್ಕೆ ಮುಗಿಯುವ ಅಥವಾ ಇಂತಿಷ್ಟೆ ಜನರಿಗೆ ಎಂದು ಫಿಕ್ಸ್ ಮಾಡುವ ಯೋಜನೆಗಳಲ್ಲ.

ವರ್ಷದಿಂದ ವರ್ಷಕ್ಕೆ ಈ ಯೋಜನೆಯ ಫಲಾನುಭವಿಗಳು ಹೆಚ್ಚುವರಿ ‘ಸೇರ್ಪಡೆ’ಯಾಗುತ್ತಾರೆ ಹೊರತು, ಕಡಿಮೆಯಾಗುವು
ದಿಲ್ಲ. ಆದ್ದರಿಂದ ಮುಂದಿನ ದಿನದಲ್ಲಿ ಈಗಿರುವ ಅನುದಾನಕ್ಕೆ ಇನ್ನಷ್ಟು ಅನುದಾನವನ್ನು ಸೇರಿಸಿ ನೀಡಬೇಕಾಗಿರುವುದು ಮುಂಬರಲಿರುವ ಸರಕಾರಗಳ ಜವಾಬ್ದಾರಿ ಎನ್ನುವುದು ಸ್ಪಷ್ಟ.

ಏಕೆಂದರೆ, ರಾಜ್ಯ ಅಥವಾ ಕೇಂದ್ರ ಸರಕಾರಗಳು ಜನರಿಗೆ ಫ್ರೀಬಿ (ಉಚಿತ ಭಾಗ್ಯ)ಗಳನ್ನು ನೀಡುವುದು ಸುಲಭ. ಆದರೆ ನೀಡಿರುವ ಉಚಿತ ಯೋಜನೆಗಳನ್ನು ಹಿಂಪಡೆಯುವುದು ಅಥವಾ ಸ್ಥಗಿತಗೊಳಿಸುವುದು ಸುಲಭವಲ್ಲ. ಒಮ್ಮೆ ಜನರನ್ನು ಈ ರೀತಿಯ ಉಚಿತ ಯೋಜನೆ ಗಳಿಗೆ ಒಗ್ಗಿಕೊಳ್ಳುವಂತೆ ಮಾಡಿದರೆ, ಮುಂದಿನ ದಿನದಲ್ಲಿ ‘ಉಚಿತವಿಲ್ಲದ’ ಜೀವನಕ್ಕೆ ಅವರನ್ನು ಪುನಃ ಒಗ್ಗಿಸುವುದು ಬಹುದೊಡ್ಡ ಸವಾಲಿನ ಕೆಲಸ. ಕಾಂಗ್ರೆಸ್ ಸರಕಾರ, ಚುನಾವಣೆಯಲ್ಲಿ ಗೆಲ್ಲುವ ಅನಿವಾರ್ಯತೆ ಘೋಷಣೆ
ಮಾಡಿದ್ದ ಐದು ಗ್ಯಾರಂಟಿಗಳನ್ನು ‘ಒತ್ತಡ’ದಲ್ಲಿಯೇ ಜಾರಿ ಮಾಡಿದೆ.

ಆದರೆ ಈ ಪ್ರಮಾಣದ ಅನುದಾನವನ್ನು ಹೀರುವ ಈ ಯೋಜನೆಗಳಿಂದ, ರಾಜ್ಯದ ಬೊಕ್ಕಸದ ಮೇಲೆಯೂ ಅಷ್ಟೇ ಪ್ರಮಾಣದ ಒತ್ತಡ ಬೀರಲಿದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಹಾಗೇ ನೋಡಿದರೆ, ಕರ್ನಾಟಕಕ್ಕೂ ಮೊದಲು ಇದೇ ಗ್ಯಾರಂಟಿ ಯೋಜನೆಯನ್ನು ಜಾರ್ಖಂಡ್, ರಾಜಸ್ಥಾನ ಗಳಲ್ಲಿ ಕಾಂಗ್ರೆಸ್ ನೀಡಿತ್ತು. ಅದಕ್ಕೂ ಮೊದಲು ಆಮ್ ಆದ್ಮಿ ಪಕ್ಷ, ದೆಹಲಿಯಲ್ಲಿ ಕೆಲವು ಉಚಿತಗಳನ್ನು ಘೋಷಣೆ ಮಾಡಿ, ಯಶಸ್ವಿಯಾಗಿ ನಿರ್ವಹಣೆ ಮಾಡುತ್ತಿದೆ. ಆದರೆ ರಾಜಸ್ಥಾನ ಹಾಗೂ ಜಾರ್ಖಂಡ್‌ ನಲ್ಲಿ ಕಾಂಗ್ರೆಸ್‌ನಿಂದ ಈ ಯೋಜನೆಗಳನ್ನು ಅನುಷ್ಠಾನಗೊಳಿಸಲು ‘ಅನುದಾನ’ ಕೊರತೆಯಿಂದ ಸಾಧ್ಯವಾಗಿಲ್ಲ.

ಕರ್ನಾಟಕದಲ್ಲಿಯೂ ಇದೇ ಸ್ಥಿತಿಯಾಗುವ ಸಾಧ್ಯತೆಯಿದೆ ಎನ್ನುವ ಮಾತುಗಳು ಕೇಳಿ ಬಂದಿದ್ದರೂ, ಮುಂದಿನ ವರ್ಷವೇ ಇರುವ ಲೋಕಸಭಾ ಚುನಾವಣೆಯನ್ನು ಗಮನದಲ್ಲಿರಿಸಿಕೊಂಡು ಹಾಗೂ ಈ ಯೋಜನೆಗಳ ಭಾರವನ್ನು ಕೆಲ ವರ್ಷದ ಮಟ್ಟಿಗಾದರೂ ತಡೆದುಕೊಳ್ಳುವ ಶಕ್ತಿಯಿರುವುದರಿಂದ, ಎಲ್ಲ ಗ್ಯಾರಂಟಿ ಗಳನ್ನು ಅನುಷ್ಠಾನಕ್ಕೆ ತರಲು ತೀರ್ಮಾನಿಸ ಲಾಯಿತು. ಇಡೀ ದೇಶಕ್ಕೆ ‘ಮಾದರಿ’ಯ ರೀತಿಯಲ್ಲಿ ಈ ಗ್ಯಾರಂಟಿ ಯೋಜನೆಗಳನ್ನು ಮುಂದಿಟ್ಟುಕೊಂಡೇ ಕಾಂಗ್ರೆಸ್ ಸರಕಾರ ಮುಂಬರಲಿರುವ ಪಂಚ ರಾಜ್ಯಗಳ ಚುನಾವಣೆ ಹಾಗೂ ಲೋಕಸಭಾ ಚುನಾವಣೆಗೆ ಸಿದ್ಧತೆ ಆರಂಭಿಸಿಕೊಂಡಿದೆ.

ಇನ್ನುಳಿದಂತೆ ಕರ್ನಾಟಕದಲ್ಲಿ ಕಾಂಗ್ರೆಸ್ ಯಶಸ್ಸು ನೋಡಿದರೆ, ಮುಂದಿನ ದಿನದಲ್ಲಿ ಬಿಜೆಪಿಯೂ ಇದೇ ರೀತಿಯ ಉಚಿತಗಳ ಘೋಷಣೆ ಮಾಡಿದರೂ ಅಚ್ಚರಿಯಿಲ್ಲ. ಹಾಗೇ ನೋಡಿದರೆ, ಕರ್ನಾಟಕದ ಚುನಾವಣೆಯ ಸಮಯದಲ್ಲಿಯೇ ಬಿಜೆಪಿ ಹತ್ತು ಹಲವು ಉಚಿತ ಯೋಜನೆಗಳನ್ನು ಜಾರಿಗೊಳಿಸುವುದಾಗಿ, ಪ್ರಣಾಳಿಕೆಯನ್ನು ಹೇಳಿಕೊಂಡಿದ್ದರು. ಅದನ್ನು ಸರಿಯಾಗಿ ಜನರಿಗೆ ಮುಟ್ಟಿಸುವಲ್ಲಿ ವಿಫಲವಾಯಿತು ಎನ್ನುವುದು ಬೇರೆ ಮಾತು.

ಆದರೆ, ಎಲ್ಲ ಚುನಾವಣೆಯಲ್ಲಿಯೂ ಈ ರೀತಿಯ ಉಚಿತ ಯೋಜನೆ ಘೋಷಣೆ ಮಾಡಿ, ಅಧಿಕಾರಕ್ಕೆ ಬಂದು ಉಚಿತ ಯೋಜನೆ ಗಳನ್ನು ಜನರಿಗೆ ನೀಡುತ್ತ ಹೋದರೆ, ರಾಜ್ಯ ಹಾಗೂ ರಾಷ್ಟ್ರದ ಆರ್ಥಿಕ ವ್ಯವಸ್ಥೆ ಏನಾಗಲಿದೆ ಎನ್ನುವುದು ಹಲವರ ಆತಂಕವಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ರೀತಿಯ ಉಚಿತ ಭಾಗ್ಯ ನೀಡಿರುವ ಯಾವ ದೇಶವೂ ಅಭಿವೃದ್ಧಿ ಪಥಕ್ಕೆ ಬಂದಿಲ್ಲ. ಬದಲಿಗೆ, ಸಾಲದ ಹೊರೆಯನ್ನು ಹೋರಲಾಗದ ಸ್ಥಿತಿಗೆ ಬಂದು ನಿಂತಿವೆ.

ಕರ್ನಾಟಕದಲ್ಲಿ ಈ ಐದು ಗ್ಯಾರಂಟಿಗಳ ಯೋಜನೆ ಜಾರಿಗೆ ಮುಂದಾದ ಸಮಯದಲ್ಲಿಯೂ ಆರ್ಥಿಕ ಇಲಾಖೆ ಅಧಿಕಾರಿಗಳು ಇದನ್ನು ವಿರೋಽಸಿದ್ದಾರೆ. ಪ್ರತಿಯೊಂದು ಯೋಜನೆಗೂ ವಾರ್ಷಿಕವಾಗಿ ಹತ್ತಾರು ಸಾವಿರ ಕೋಟಿ ಬಯಸುತ್ತವೆ. ಇದರಿಂದಾಗಿ ಕರ್ನಾಟಕದ ಶಿಸ್ತಿನ ಆರ್ಥಿಕ ವ್ಯವಸ್ಥೆ ಅಸ್ಥವ್ಯಸ್ಥವಾಗುವ ಸಾಧ್ಯತೆಯೇ ಹೆಚ್ಚಿದೆ. ಇದಿಷ್ಟೇ ಅಲ್ಲದೇ, ಜಿಎಸ್‌ಟಿ ಬಂದ ಬಳಿಕ ತೆರಿಗೆಯಿಂದ ಹೆಚ್ಚುವರಿ ಸಂಪನ್ಮೂಲ ಸಂಗ್ರಹಿಸುವ ಅವಕಾಶವೂ ರಾಜ್ಯ ಸರಕಾರದ ಬಳಿಯಿಲ್ಲದೇ ಇರುವುದರಿಂದ, ಹೆಚ್ಚುವರಿ ಹೊರೆಯನ್ನು ಸರಿದೂಗಿಸುವುದಕ್ಕೆ ಅಗತ್ಯ ಸಂಪನ್ಮೂಲ ಕ್ರೋಡೀಕರಣವಾಗುವುದಿಲ್ಲ ಎನ್ನುವ ಮಾತನ್ನು ಹೇಳಿದ್ದಾರೆ. ಆದರೆ ನುಡಿದಂತೆ ನಡೆಯಬೇಕು ಎನ್ನುವ ಏಕೈಕ ಕಾರಣಕ್ಕೆ ಯೋಜನೆಗಳನ್ನು ಜಾರಿಗೊಳಿಸಿ, ಅನುಷ್ಠಾನಗೊಳಿಸಲು ಸೂಚನೆ ನೀಡಿದ್ದಾರೆ.

ಮುಂದಿನ ಕೆಲವೇ ದಿನದಲ್ಲಿ ಯಶಸ್ವಿ ಅನುಷ್ಠಾನವೂ ಆಗಬಹುದು. ಏಕೆಂದರೆ ಇನ್ನೊಂದೇ ವರ್ಷದಲ್ಲಿ ಲೋಕಸಭಾ ಚುನಾವಣೆಯಿದೆ! ಬಹುತೇಕ ಆರ್ಥಿಕ ತಜ್ಞರ ಪ್ರಕಾರ, ಈ ಐದು ಗ್ಯಾರಂಟಿ ಯೋಜನೆಗಳನ್ನು ನೀಡುವ ಮೂಲಕ ಇತರ ಅಭಿವೃದ್ಧಿ ಕಾರ್ಯಗಳ ವೇಗಕ್ಕೆ ಬ್ರೇಕ್ ಬೀಳಲಿದೆ. ಏಕೆಂದರೆ ಈ ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು
ಮೂರು ಲಕ್ಷ ಕೋಟಿ ಚಿಲ್ಲರೆ ರು. ಗಳ ಬಜೆಟ್ ಮಂಡಿಸಿದಾಗ, ಪ್ರತಿಪಕ್ಷದಲ್ಲಿದ್ದ ಸಿದ್ದರಾಮಯ್ಯ, ಕೃಷ್ಣಬೈರೇಗೌಡ, ಎಚ್.ಕೆ. ಪಾಟೀಲ್, ಶಿವಲಿಂಗೇಗೌಡ ಸೇರಿದಂತೆ ಹಲವು ನಾಯಕರು ಈ ಬಜೆಟ್‌ನ ಶೇ.೬೫ರಷ್ಟು ಅನುದಾನ ‘ಬದ್ಧತಾ ವೆಚ್ಚ’ಕ್ಕೆ ಖರ್ಚಾಗಲಿದೆ.

ಅಂದರೆ ಪಿಂಚಣಿ, ಸರಕಾರಿ ನೌಕರರ ವೇತನ, ರಾಜ್ಯ ಸರಕಾರದ ಸಾಲಕ್ಕೆ ಬಡ್ಡಿ ಹಾಗೂ ಅಸಲು, ಸಾಮಾಜಿಕ ಭದ್ರತಾ ಪಿಂಚಣಿ ಸೇರಿದಂತೆ ಹಲವು ವೆಚ್ಚಗಳಿವೆ ಖರ್ಚಾಗುತ್ತದೆ. ಬಾಕಿ ಉಳಿಯಲಿರುವ ಶೇ.೩೫ರಷ್ಟು ಅಂದರೆ ಸರಿಸುಮಾರು ಒಂದು ಲಕ್ಷ ಕೋಟಿ ರು.ಗಳಲ್ಲಿ ಇಡೀ ವರ್ಷದ ರಾಜ್ಯದ ಅಭಿವೃದ್ಧಿ ಕಾಮಗಾರಿಗಳು ನಡೆಯಬೇಕು. ಇದರಲ್ಲಿ ನೀರಾವರಿ,
ಇಂಧನ, ನಗರಾಭಿವೃದ್ಧಿ, ಲೋಕೋಪಯೋಗಿ ಸೇರಿದಂತೆ ಎಲ್ಲ ಇಲಾಖೆಗಳ ಹೊಸ ಯೋಜನೆ, ಈಗಿರುವ ಯೋಜನೆಗಳ ಮುಂದುವರಿಯುವ ಅನುದಾನ ಸೇರಿದಂತೆ ಎಲ್ಲವನ್ನು ಸರಿದೂಗಿಸಬೇಕು.

ಕಾಂಗ್ರೆಸ್ ನಾಯಕರೇ ಹೇಳಿರುವಂತೆ ಬದ್ಧತಾ ವೆಚ್ಚ ಹೊರತುಪಡಿಸಿ ಸಿಗುವ ಅನುದಾನದಲ್ಲಿ ರಾಜ್ಯದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯವಿಲ್ಲ. ಹೆಚ್ಚುವರಿ ಅನುದಾನವನ್ನು ಒಟ್ಟುಗೂಡಿಸಬೇಕು ಎನ್ನುವ ಮಾತನ್ನು ಸದನದಲ್ಲಿ ಆಡಿದ್ದರು. ಆದರೀಗ ಅದೇ ಕಾಂಗ್ರೆಸ್ ನಾಯಕರು, ರಾಜ್ಯ ಸರಕಾರದ ಬೊಕ್ಕಸದ ಮೇಲೆ ಹೆಚ್ಚುವರಿಗೆ ಕನಿಷ್ಠ ೫೦ ಸಾವಿರ ಕೋಟಿ ರು.ಗಳನ್ನು
ಹೇರಿದ್ದಾರೆ. ಅಂದರೆ ಈಗಿರುವ ಒಂದು ಲಕ್ಷ ಕೋಟಿಗೆ ಉಪಯೋಗಿಸಬಹುದಾದ ಅನುದಾನದ ಶೇ.೫೦ರಷ್ಟು ಪಾಲನ್ನು ಈ ಐದು ಗ್ಯಾರಂಟಿ ಯೋಜನೆಗಳಿಗೆ ಮೀಸಲಿಟ್ಟಿದೆ.

ಹಾಗಾದರೆ, ಉಳಿದ ಯೋಜನೆಗಳಿಂದ ಎಲ್ಲಿಂದ ಅನುದಾನ ಒಟ್ಟುಗೂಡಿಸುತ್ತಾರೆ ಎನ್ನುವ ಪ್ರಶ್ನೆಗೆ ಸ್ವತಃ ಕಾಂಗ್ರೆಸ್ ನಾಯಕ ರಿಂದಲೂ ಉತ್ತರವಿಲ್ಲ. ಅಷ್ಟೇ ಅಲ್ಲ, ಈಗ ಘೋಷಣೆಯಾಗಿರುವ ಯೋಜನೆಗಳಿಗೂ ಎಷ್ಟು ಅನುದಾನ ಅಗತ್ಯವಿದೆ ಎನ್ನುವ ಸ್ಪಷ್ಟತೆ ಸರಕಾರಕ್ಕೆ ಸಿಗುತ್ತಿಲ್ಲ ಎನ್ನುವುದು ಹಲವರ ಅಭಿಪ್ರಾಯವಾಗಿದೆ. ಚುನಾವಣೆಯಲ್ಲಿ ಗೆಲುವು ಸಾಧಿಸಬೇಕು ಎನ್ನುವ ಏಕೈಕ ಕಾರಣಕ್ಕೆ ಈ ರೀತಿಯ ಉಚಿತ ಯೋಜನೆಗಳನ್ನು ಘೋಷಿಸುತ್ತಾ ಹೋದರೆ, ಮುಂದೊಂದು ದಿನ ಇಡೀ ದೇಶ ದಲ್ಲಿ ಎಲ್ಲರೂ ಎಲ್ಲವನ್ನು ಉಚಿತವಾಗಿ ಬಯಸುತ್ತಾರೆ.

ನೈಜ ಬಡವರ ಏಳ್ಗೆಗೆ ಅನುದಾನ ನೀಡುವುದು, ಯೋಜನೆ ಘೋಷಿಸುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ ಈ ಎಲ್ಲ ಯೋಜನೆಗಳಿಗೆ ಇಂತಿಷ್ಟು ಸಮಯ ಎನ್ನುವುದನ್ನು ಸ್ಪಷ್ಟಪಡಿಸಬೇಕು ಹಾಗೂ ನೈಜವಾಗಿಯೂ ಅರ್ಹರಿಗೆ ಈ ಎಲ್ಲ ಯೋಜನೆಗಳು ತಲುಪುವಂತೆ ನೋಡಿಕೊಳ್ಳಬೇಕು. ಪರ ವಿರೋಧದ ನಡುವೆ ಈಗಾಗಲೇ ಗೃಹ ಲಕ್ಷ್ಮಿ ಹೊರತುಪಡಿಸಿ ಉಳಿದ ಎಲ್ಲ ಯೋಜನೆಗಳಿಗೆ ಮಾರ್ಗ ಸೂಚಿ ಬಿಡುಗಡೆಯಾಗಿದ್ದು, ಒಂದೊಂದೇ ಯೋಜನೆಗಳು ಮುಂದಿನ ತಿಂಗಳಿನಿಂದ ಅನುಷ್ಠಾನಕ್ಕೂ ಬರಲಿದೆ. ಈ ಎಲ್ಲದರ ನಡುವೆ ಹಲವರ ಪ್ರಕಾರ ಕಾಂಗ್ರೆಸ್ ಜಾರಿಗೊಳಿಸಿರುವ ಗೃಹಲಕ್ಷ್ಮೀ, ಗೃಹಜ್ಯೋತಿ, ಶಕ್ತಿ, ಯುವನಿಧಿ ಹಾಗೂ ಅನ್ನಭಾಗ್ಯ ಯೋಜನೆಗಳು ಮುಂದಿನ ಲೋಕಸಭಾ ಚುನಾವಣೆಯವರೆಗೆ ಯಾವುದೇ ಅಡ್ಡಿ ಆತಂಕವಿಲ್ಲದೇ ನಡೆಯಲಿವೆ.

ಏಕೆಂದರೆ ಕರ್ನಾಟಕದಲ್ಲಿ ಯಶಸ್ವಿಯಾಗಿ ರುವ ಗ್ಯಾರಂಟಿ ಯೋಜನೆಗಳ ಆಧಾರದಲ್ಲಿಯೇ ಮುಂದಿನ ಎಲ್ಲ ಚುನಾವಣೆ ಗಳನ್ನು ನಡೆಸುವ ಲೆಕ್ಕಾಚಾರಕ್ಕೆ ಕಾಂಗ್ರೆಸ್ ಬಂದಿರುವುದು ಸ್ಪಷ್ಟ. ಆದರೆ ಚುನಾವಣೆಯ ಬಳಿಕವೂ ಈ ‘ಬಿಳಿಯಾನೆ’ಯನ್ನು ಇದೇ ರೀತಿ ಸಾಕುವರೇ ಎನ್ನುವ ಪ್ರಶ್ನೆ ಬಹುತೇಕರಲ್ಲಿದೆ. ಆದರೆ ಮೊದಲೇ ಹೇಳಿದಂತೆ, ಕೊಟ್ಟ ಉಚಿತ ಯೋಜನೆಗಳನ್ನು ಹಿಂಪಡೆದರೆ ಅಥವಾ ಸ್ಥಗಿತಗೊಳಿಸಿದರೆ ಸರಕಾರಗಳ ವಿರುದ್ಧ ತಿರುಗಿ ಬೀಳುವುದು ಸ್ಪಷ್ಟ. ಇವನ್ನು ಆಳುವವರು ಯಾವ ರೀತಿ ನಿರ್ವಹಿಸಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ.