ಆಶಾಕಿರಣ
ಶ್ರೀನಿವಾಸಮೂರ್ತಿ ಎನ್.ಸುಂಡ್ರಹಳ್ಳಿ
ಈಗಂತೂ ಎಲ್ಲೆಂದರಲ್ಲಿ ಯಥೇಚ್ಛವಾಗಿ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಗೊಳ್ಳುತ್ತಿದೆ. ಈ ಶತಮಾನದ ಅತಿದೊಡ್ಡ ಸಮಸ್ಯೆಗಳಲ್ಲಿ ಇದೂ ಒಂದು. ಪ್ಲಾಸ್ಟಿಕ್ಗೆ ಪರ್ಯಾಯವಾಗಿರುವ ಮಾರ್ಗಗಳನ್ನು ಅಳವಡಿಸಿಕೊಳ್ಳುವ ಇಚ್ಛಾಶಕ್ತಿಯನ್ನು ನಾವು ಹೊಂದಿಲ್ಲ ಅಥವಾ ‘ಛಿbಛಿ, ಛ್ಠಿoಛಿ, ಛ್ಚಿqsಛಿ’ ಎಂಬ ೩ ‘’ ಪದ್ಧತಿಯನ್ನು ಅನುಸರಿಸುವಲ್ಲಿ ನಿರ್ಲಕ್ಷ್ಯದ ಧೋರಣೆ ಹೊಂದಿದ್ದೇವೆ. ವಿದ್ಯಾರ್ಥಿಗಳು ಮತ್ತು ಯುವಜನರು ಸೇರಿದಂತೆ ಸಾರ್ವಜನಿಕರಲ್ಲಿ ಈ ಬಗ್ಗೆ ಅರಿವು ಮೂಡಿಸುವಲ್ಲಿ ಪ್ರಜ್ಞಾವಂತರು ಸೋಲುತ್ತಿದ್ದಾರೆ.
ಪ್ಲಾಸ್ಟಿಕ್ ನಿಯಂತ್ರಣಕ್ಕಾಗಿ ಸರಕಾರಗಳೂ ಏನೆಲ್ಲ ಕಾಯಿದೆ-ಕಾನೂನುಗಳನ್ನು ರೂಪಿಸಿದರೂ, ಅವನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರದ ಕಾರಣ ಅವು ಉಪಯೋಗವಾಗುತ್ತಿಲ್ಲ. ಹೀಗಾಗಿ ಪ್ಲಾಸ್ಟಿಕ್ ಬಳಕೆ ನಿಲ್ಲುತ್ತಿಲ್ಲ. ಅದರ ಪೂರೈಕೆ ಮತ್ತು ಬಳಕೆಗಳು ಕದ್ದುಮುಚ್ಚಿ, ಅವ್ಯಾಹತವಾಗಿ ನಡೆಯುತ್ತಿವೆ. ಯಾವ ವಿಷಯ ದಲ್ಲೇ ಆಗಲಿ, ಒಂದಿಷ್ಟಾದರೂ ಬದಲಾವಣೆ ತರಲು ಸಾಧ್ಯವಿದ್ದರೆ ಅದು ಶಾಲೆಗಳಿಂದ ಮಾತ್ರ. ಶಾಲಾಡಳಿತ ವ್ಯವಸ್ಥೆಗಳಲ್ಲಿ ಇಚ್ಛಾಶಕ್ತಿಯಿದ್ದರೆ, ಶಿಕ್ಷಕರೂ ಈ ನಿಟ್ಟಿನಲ್ಲಿ ರವಷ್ಟಾದರೂ ಗಮನ ಕೊಟ್ಟರೆ ಗುರುತರವಾದ ಬದಲಾವಣೆಯನ್ನು ತರಬಹುದು.
ಇಷ್ಟೆಲ್ಲಾ ಪೀಠಿಕೆ ಯಾಕೆಂದರೆ, ಅಸ್ಸಾಂನ ರಾಜಧಾನಿ ದಿಸ್ಪುರದಲ್ಲಿ ‘ಅಕ್ಷರ ಫಾರಂ’ ಎಂಬ ಹೆಸರಿನ ಶಾಲೆ ಯೊಂದಿದೆ. ಇದು ಶುಲ್ಕವನ್ನು ವಸೂಲು ಮಾಡುವ ರೀತಿಯೇ ವಿಭಿನ್ನ. ಹೌದು, ಈ ಶಾಲೆ ತನ್ನ ವಿದ್ಯಾರ್ಥಿ ಗಳಿಂದ ಹಣದ ರೂಪದಲ್ಲಿ ಶುಲ್ಕವನ್ನು ವಸೂಲಿ ಮಾಡುವುದೇ ಇಲ್ಲ. ಬದಲಿಗೆ ಪ್ಲಾಸ್ಟಿಕ್ ತ್ಯಾಜ್ಯವನ್ನು ಅದಕ್ಕೆಂದು ಪರಿಗಣಿಸುತ್ತದೆ ಎಂದರೆ ಬಹುತೇಕರಿಗೆ ಅಚ್ಚರಿಯಾಗ ಬಹುದು. ಆದರೆ ಇದು ನಿಜ. ಈ ಶಾಲೆಯಲ್ಲಿ ಒಟ್ಟು ೧೧೦ ವಿದ್ಯಾರ್ಥಿಗಳಿದ್ದಾರೆ. ಪ್ರತಿವಾರ ಅವರು ಎಲ್ಲಿಂದಾದರೂ ಸರಿ, ಒಂದಷ್ಟು ಪ್ಲಾಸ್ಟಿಕ್ ತ್ಯಾಜ್ಯವನ್ನು ತರಲೇಬೇಕು. ಹೀಗೆ ಪ್ರತಿವಿದ್ಯಾರ್ಥಿ ತರುವ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸಿ ಅವುಗಳನ್ನು ಬಳಸಿ ಪರಿಸರಸ್ನೇಹಿ ಇಟ್ಟಿಗೆಗಳನ್ನು ತಯಾರಿಸಲಾಗುತ್ತದೆ.
ಈ ಇಟ್ಟಿಗೆಗಳನ್ನು ಶಾಲೆಯ ಶೌಚಾಲಯ, ಪಾದಚಾರಿ ರಸ್ತೆಗಳು ಹಾಗೂ ಇನ್ನಿತರ ಕಾಮಗಾರಿಗಳಲ್ಲಿ ಬಳಸಿಕೊಳ್ಳಲಾಗುತ್ತಿದೆ. ಈ ವಿದ್ಯಾರ್ಥಿಗಳು ಸಿಕ್ಕಸಿಕ್ಕಲ್ಲಿ ಪ್ಲಾಸ್ಟಿಕ್ ಸಂಗ್ರಹ ಮಾಡಿಕೊಂಡು ಬರುವುದಲ್ಲದೆ ಮನೆಮನೆಗೂ ಹೋಗಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಕೇಳಿ ಹೆಕ್ಕಿಕೊಂಡು ಬರುತ್ತಾರೆ ಮತ್ತು ಪ್ಲಾಸ್ಟಿಕ್ ಬಳಸದಿರುವಂತೆ ಮನವಿಯನ್ನೂ ಮಾಡುತ್ತಾರೆ. ಹೀಗಾಗಿ ಸಾರ್ವಜನಿಕರಲ್ಲೂ ಅರಿವು ಮೂಡುತ್ತಿದೆ. ಕೆಲವೊಂದು ಮಕ್ಕಳು ಶಾಲಾ ಶುಲ್ಕವನ್ನು ಕಟ್ಟಲಾಗದೆ ವಿದ್ಯಾಭ್ಯಾಸದಿಂದ ಹೊರಗುಳಿದು, ಸಮೀಪದ ಕಲ್ಲಿನ ಕ್ವಾರಿಗಳಲ್ಲಿ ಕೂಲಿಕೆಲಸ ಮಾಡುತ್ತಾ, ದಿನಕ್ಕೆ ೧೫೦ರಿಂದ ೨೦೦ ರುಪಾಯಿಯನ್ನು ಗಳಿಸುತ್ತಿದ್ದರಂತೆ. ಹೀಗೆ ಶಿಕ್ಷಣದಿಂದ ವಂಚಿತರಾಗಿದ್ದ ಮಕ್ಕಳಲ್ಲೂ ಈಗ ‘ಪ್ಲಾಸ್ಟಿಕ್ ಕೊಟ್ಟರೆ ಸಾಕು, ವಿದ್ಯಾಭ್ಯಾಸ ಮಾಡಬಹುದು’ ಎಂಬ ಆಶಾಕಿರಣ ಸುರಿಸಿ ಈ ಶಾಲೆಯ ಕಡೆಗೆ ಮುಖಮಾಡಿದ್ದಾರೆ.
ಮಾತ್ರವಲ್ಲ, ಒಂದು ಕಾಲಕ್ಕೆ ಶಾಲೆಗೆ ಹೋಗಬೇಡಿರೆಂದು ಹೇಳುತ್ತಿದ್ದ ಹೆತ್ತವರೇ ಈಗ ಮಕ್ಕಳನ್ನು ಶಾಲೆಗೆ ಕರೆತರುತ್ತಿದ್ದಾರಂತೆ. ಇಲ್ಲಿನ ಇನ್ನೊಂದು
ವಿಶೇಷವೆಂದರೆ, ಪ್ಲಾಸ್ಟಿಕ್ ತ್ಯಾಜ್ಯವನ್ನು ಎಲ್ಲೆಲ್ಲಿಂದಲೋ ಹೆಕ್ಕಿ ತರುವ ತೀರಾ ಬಡ ಕುಟುಂಬದ ಮಕ್ಕಳಿಗೆ ಪ್ರತಿಯಾಗಿ ಒಂದಷ್ಟು ಹಣವನ್ನೂ ನೀಡಲಾಗುತ್ತಿದೆ. ಇದರಿಂದ ಮಕ್ಕಳಿಗೆ ಶಿಕ್ಷಣ ಸಿಗುತ್ತಿರುವುದರ ಜತೆಗೆ, ಆಯಾ ಕುಟುಂಬ ಗಳಿಗೂ ಒಳಿತಾಗಿದೆ ಎನ್ನುತ್ತದೆ ಶಾಲಾ ಆಡಳಿತ ಮಂಡಳಿ.
ಇಂಥದೊಂದು ವಿಭಿನ್ನ ಚಿಂತನೆಯ ಶಾಲೆಯ ಹಿಂದಿರುವುದು ಪರ್ಮಿತಾ ಶರ್ಮಾ ಮತ್ತು ಮಝೀನ್ ಮುಖ್ತರ್ ಎಂಬ ಜೋಡಿ. ನ್ಯೂಯಾರ್ಕ್ನಲ್ಲಿ ವಾಸವಿದ್ದ ಮುಖ್ತರ್ ಅವರು ೨೦೧೩ರಲ್ಲಿ ವಿಭಿನ್ನ ಶಾಲಾ ಪ್ರಾಜೆಕ್ಟ್ನೊಂದಿಗೆ ಭಾರತಕ್ಕೆ ಬಂದರು. ಇದೇ ಸಂದರ್ಭದಲ್ಲಿ ಅವರಿಗೆ ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ನ ಸ್ನಾತಕೋತ್ತರ ವಿದ್ಯಾರ್ಥಿನಿ ಪರ್ಮಿತಾ ಅವರ ಭೇಟಿಯಾಯಿತು. ಮೂಲತಃ ಅಸ್ಸಾಂನವರಾದ ಪರ್ಮಿತಾ ಕೂಡ ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುವ ಮತ್ತು ವಿಶಿಷ್ಟವಾದುದನ್ನೇನಾದರೂ ಸಾಧಿಸುವ ಆಸಕ್ತಿಯನ್ನು ಹೊಂದಿದ್ದರು.
ಇಬ್ಬರೂ ಸೇರಿ ಯೋಜನೆಯೊಂದನ್ನು ರೂಪಿಸಿದರು. ಮಕ್ಕಳಿಗೆ ತಾವು ನೀಡುವ ಶಿಕ್ಷಣವು ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಪರಸರೀಯವಾಗಿ ಪೂರಕವಾಗಿರಬೇಕು ಎಂಬ ತೀರ್ಮಾನಕ್ಕೆ ಬಂದರು. ಈ ನಿಟ್ಟಿನಲ್ಲಿ ತಮ್ಮ ಯೋಜನೆಯನ್ನು ಅನುಷ್ಠಾನಗೊಳಿಸುವ ಪ್ರಯತ್ನದಲ್ಲಿದ್ದಾಗ ಅವರಿಗೆ ಗೋಚರಿಸಿದ್ದೇ ಅಸ್ಸಾಂನ ದಿಸ್ಪುರದ ಸುತ್ತಮುತ್ತಲಿನ ಕಲ್ಲಿನ ಕ್ವಾರಿಗಳಲ್ಲಿ ಕೂಲಿ ಕೆಲಸ ಮಾಡುತ್ತಾ ಶಿಕ್ಷಣದಿಂದ ವಂಚಿತರಾಗಿದ್ದ ಮಕ್ಕಳು. ಅವರನ್ನು ಪುಸಲಾಯಿಸಿ, ಆಟದ ಬೊಂಬೆಗಳು, ಚಾಕೊಲೇಟ್ಗಳು ಇತ್ಯಾದಿ ಗಳಿಂದ ಓಲೈಸಿ ಕರೆತಂದು ಉಚಿತ ಶಿಕ್ಷಣವನ್ನು ಆರಂಭಿಸಿಯೇಬಿಟ್ಟರು.
೨೦೧೬ರಲ್ಲಿ ಆರಂಭವಾದ ತಮ್ಮ ಶಾಲೆಗೆ ‘ಆಕ್ಷರ ಫಾರಂ’ ಎಂದು ಹೆಸರಿಟ್ಟರು. ಚಳಿಗಾಲದ ಸಂದರ್ಭದಲ್ಲಿ ಮಕ್ಕಳು ಸೇರಿದಂತೆ ಹಿರಿಯರೂ ಸುತ್ತಮುತ್ತಲಿನ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಒಟ್ಟುಮಾಡಿ ರಸ್ತೆಬದಿಗಳಲ್ಲಿ ಪೇರಿಸಿ ಬೆಂಕಿ ಹಾಕಿ ಚಳಿಗೆ ಮೈಕಾಯಿಸಿಕೊಳ್ಳುವುದನ್ನು ಕಂಡ ಮುಖ್ತರ್
ಮತ್ತು ಪರ್ಮಿತಾ, ತಾವು ಹುಟ್ಟುಹಾಕಿದ್ದ ಉಚಿತ ಶಿಕ್ಷಣ ಯೋಜನೆಯನ್ನು ಬದಲಿಸಿಕೊಂಡರು. ಉಚಿತ ಸೌಲಭ್ಯದ ಬದಲಿಗೆ ಶಾಲಾ ಶುಲ್ಕವಾಗಿ ವಿದ್ಯಾರ್ಥಿಗಳಿಂದ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸಲು ಶುರುಮಾಡಿದರು. ಈ ನಡೆಗೆ ಮಕ್ಕಳು ಹಾಗೂ ಪೋಷಕರಿಂದ ಸಕಾರಾತ್ಮಕ ಪ್ರತಿ
ಕ್ರಿಯೆಯೇ ವ್ಯಕ್ತವಾಯಿತು.
ಆರಂಭದಲ್ಲಿ ೨೦ರಷ್ಟಿದ್ದ ವಿದ್ಯಾರ್ಥಿಗಳ ಸಂಖ್ಯೆ ಈಗ ೧೧೦ನ್ನು ಮುಟ್ಟಿದೆ. ಇವರೆಲ್ಲರೂ ೪ರಿಂದ ೧೫ ವರ್ಷ ವಯಸ್ಸಿನವರು. ಪ್ರತಿ ವಿದ್ಯಾರ್ಥಿಯೂ ಶಾಲೆಗೆ ಬರುವಾಗ ಬೆನ್ನಿನಲ್ಲಿ ಪುಸ್ತಕಗಳ ಚೀಲವಿದ್ದರೆ, ಕೈಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹದ ಮತ್ತೊಂದು ಚೀಲ ಇರುತ್ತದೆ! ಮುಖ್ತರ್ ಮತ್ತು ಪರ್ಮಿತಾ ಜೋಡಿ ತಮ್ಮ ಯೋಜನೆಯನ್ನು ಮಕ್ಕಳಿಗಷ್ಟೇ ಸೀಮಿತಗೊಳಿಸದೆ ಹಳ್ಳಿಗರನ್ನೂ ತೊಡಗಿಸಿದ್ದಾರೆ. ಪ್ಲಾಸ್ಟಿಕ್ ಅನ್ನು ರೀಸೈಕ್ಲಿಂಗ್ ಪ್ರಕ್ರಿಯೆಗೆ
ಒಳಪಡಿಸುವ ಕುರಿತು ಜಾಗೃತಿ ಮೂಡಿಸಲು ಅವರು ಶುರುಮಾಡಿಕೊಂಡ ಪರಿಣಾಮ ಹಳ್ಳಿಗರಿಂದಲೂ ಅದ್ಭುತವಾದ ಪ್ರತಿಕ್ರಿಯೆ ವ್ಯಕ್ತವಾಗಿದೆ ಎನ್ನುತ್ತದೆ ಈ ಜೋಡಿ.
ಈ ಶಾಲೆಯು ಮಕ್ಕಳಿಗೆ ಕಲಿಸುತ್ತಿರುವ ಪಠ್ಯಕ್ರಮವೂ ಸಂಪೂರ್ಣ ವೃತ್ತಿಪರ ಶಿಕ್ಷಣವನ್ನು ಆಧರಿಸಿರುವಂಥದ್ದು. ಹಾಡುಗಾರಿಕೆ, ನೃತ್ಯ, ಸೌರಫಲಕ ಜೋಡಣೆ, ಕಸೂತಿ, ಪ್ರಸಾದನ ಕಲೆ, ಮರಗೆಲಸ, ತೋಟಗಾರಿಕೆ, ಸಾವಯುವ ಕೃಷಿ, ಇಲೆಕ್ಟ್ರಾನಿಕ್ಸ್ ಇತ್ಯಾದಿ ವಿಷಯಗಳನ್ನು ಆಯ್ದು ಕೊಂಡು, ಮಕ್ಕಳ ಸಾಮರ್ಥ್ಯ ಹಾಗೂ ಅಗತ್ಯಕ್ಕೆ ಅನುಗುಣವಾಗಿ ಪಠ್ಯಕ್ರಮವನ್ನು ರೂಪಿಸಿಕೊಂಡಿರುವುದು ಈ ಶಾಲೆಯ ಹೆಗ್ಗಳಿಕೆ. ಇಲ್ಲಿ ಕಲಿಯುವ ಮಗು ಪದವಿಗಳ
ಮೇಲೆ ಪದವಿಗಳನ್ನು ಪಡೆಯಬೇಕಿಲ್ಲ; ಇಂಟರ್ಮೀಡಿಯೇಟ್ ಹಂತಕ್ಕೆ ಬರುತ್ತಿದ್ದಂತೆ ತನ್ನ ಬದುಕನ್ನು ಕಟ್ಟಿಕೊಳ್ಳಲು ಬೇಕಿರುವ ವೃತ್ತಿಪರ ತರಬೇತಿಯನ್ನು ಪರಿಣತರಿಂದ ಅದಾಗಲೇ ಪಡೆದಿರುತ್ತದೆ. ಹೀಗಾಗಿ, ಮುಖ್ತರ್ ಮತ್ತು ಪರ್ಮಿತಾ, ತಾವು ಹುಟ್ಟುಹಾಕಿರುವ ‘ಅಕ್ಷರ ಫಾರಂ’ ಶಾಲೆಯ ಪರಿಕಲ್ಪನೆಯನ್ನು ಇಡೀ ರಾಷ್ಟ್ರಕ್ಕೆ ಪರಿಚಯಿಸುವ ಹಾಗೂ ಮುಂದಿನ ೫ ವರ್ಷಗಳಲ್ಲಿ ರಾಷ್ಟ್ರದ ವಿವಿಧೆಡೆ ಇಂಥ ೧೦೦ ಶಾಲೆಗಳನ್ನು ಆರಂಭಿಸುವ
ಗುರಿಯನ್ನು ಹಾಕಿಕೊಂಡಿದ್ದಾರೆ.
ಪಠ್ಯಕ್ಕೆ ಹೊರತಾದ ಯಾವ ಚಟುವಟಿಕೆಯನ್ನೂ ಮಕ್ಕಳಿಂದ ಮಾಡಿಸದ ಅಥವಾ ಪಠ್ಯದಿಂದಾಚೆಗೆ ಯಾವ ಶಿಕ್ಷಣವನ್ನೂ ಮಕ್ಕಳಿಗೆ ನೀಡದ ಮತ್ತು ಪೋಷಕರಿಂದ ಹೆಚ್ಚೆಚ್ಚು ಶುಲ್ಕವನ್ನು ಸಂಗ್ರಹಿಸುವ ಶಾಲೆಗಳು, ‘ಅಕ್ಷರ ಫಾರಂ’ನ ಈ ಪಠ್ಯಕ್ರಮವನ್ನು ಅನುಸರಿಸಬಹುದಲ್ಲವೇ? ಬರೀ ಶುಲ್ಕದ ಬದಲಿಗೆ, ವಾರಕ್ಕೊಂದು ಸಲವಾದರೂ ಸರಿ ಪ್ಲಾಸ್ಟಿಕ್ ತ್ಯಾಜ್ಯವನ್ನೂ ಸಂಗ್ರಹಿಸುವ ಮೂಲಕ ಪರಿಸರದ ಸಂರಕ್ಷಣೆಗೆ ಮನಸ್ಸು ಮಾಡಬಹುದಲ್ಲವೇ? ಸ್ವಂತಕ್ಕಾಗಿ ಮಾತ್ರವೇ ಚಿಂತಿಸದೆ ಸಮಾಜದ ಹಿತರಕ್ಷಣೆಯ ಬಗ್ಗೆಯೂ ಒಂದಿಷ್ಟು ಆಲೋಚಿಸಬಹುದಲ್ಲವೇ? ರಾಜ್ಯದಲ್ಲಿ ಸರಕಾರಿ ಶಾಲೆಗಳು, ಅನುದಾನಿತ ಮತ್ತು ಅನುದಾನರಹಿತ ಖಾಸಗಿ ಶಾಲೆಗಳು ಸೇರಿದಂತೆ ೭೦ ಸಾವಿರಕ್ಕೂ ಹೆಚ್ಚು ಶಾಲೆಗಳಿವೆ. ಈ ಪೈಕಿ ಒಂದೊಂದು ಶಾಲೆಯೂ ವಾರಕ್ಕೊಂದು ದಿನವಾದರೂ ಕನಿಷ್ಠ ಪ್ರಮಾಣದಲ್ಲಾದರೂ ಸರಿ ಪ್ರತಿಯೊಬ್ಬ ವಿದ್ಯಾರ್ಥಿಯಿಂದ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಿಸುವ ಕ್ರಮಕ್ಕೆ ಮುಂದಾ ದರೆ ಹಾಗೂ ಅದನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಿದ್ದೇ ಆದರೆ, ಅಥವಾ ‘ಅಕ್ಷರ ಫಾರಂ’ ಶಾಲೆಯ ರೀತಿಯಲ್ಲಿ ಅದನ್ನು ರೀಸೈಕ್ಲಿಂಗ್ ಪ್ರಕ್ರಿಯೆಗೆ ಒಳಪಡಿಸಿದ್ದೇ ಆದರೆ, ಪ್ರತಿ ಬೀದಿಯೂ ಸ್ವಚ್ಛವಾಗುತ್ತದೆ, ಪ್ರತಿ ಮನೆಯ ಆವರಣವೂ ನಳನಳಿಸುತ್ತದೆ.
ಆಯಾ ಪುರಸಭೆ ಅಥವಾ ಪಂಚಾಯತಿಗಳು ಈ ಪ್ಲಾಸ್ಟಿಕ್ ತ್ಯಾಜ್ಯವನ್ನು ಶಾಲೆಗಳಿಂದ ಸಂಗ್ರಹಿಸಿ ವಿಲೇವಾರಿಗೆ ಸೂಕ್ತಕ್ರಮ ಕೈಗೊಳ್ಳಬಹುದು. ಈ ಪ್ಲಾಸ್ಟಿಕ್ನೊಂದಿಗೆ ಹಸಿಕಸ ಮಿಶ್ರಣವಾಗಿರದ ಕಾರಣ ರೀಸೈಕ್ಲಿಂಗ್ ಪ್ರಕ್ರಿಯೆ ಸುಲಭವಾಗುತ್ತದೆ. ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಣೆ ಮತ್ತು ವಿಲೇವಾರಿಯ ಅರಿವನ್ನು ಹೀಗೆ ಮಕ್ಕಳಲ್ಲಿ ಮೂಡಿಸಿದ್ದೇ ಆದಲ್ಲಿ ಅವರಲ್ಲೂ ಸಾಮಾಜಿಕ ಬದ್ಧತೆ ಬೆಳೆಯುತ್ತದೆ.
’ಖಟ್ಝ್ಠಠಿಜಿಟ್ಞ ಠಿಟ PZoಠಿಜ್ಚಿ Pಟ್ಝ್ಝ್ಠಠಿಜಿಟ್ಞ’ ಎಂಬುದು ಈ ವರ್ಷದ ಪರಿಸರದ ದಿನದ ಧ್ಯೇಯವಾಕ್ಯವಾಗಿದೆ. ಈ ದೃಷ್ಟಿಯಿಂದಲಾದರೂ ಎಲ್ಲಾ ಶಾಲೆಗಳು ಈ ಆಂದೋಲನವನ್ನು ಕೈಗೆತ್ತಿಕೊಂಡು ಸಾರ್ಥಕ್ಯ ಮೆರೆಯಬಹುದು. ‘ಹನಿ ಹನಿಗೂಡಿದರೆ ಹಳ್ಳ’ ಎಂಬ ಮಾತಿನಂತೆ ಈ ಕ್ರಮದಿಂದ
ಒಂದಿಷ್ಟಾದರೂ ಮಾಲಿನ್ಯ ಕಡಿಮೆಯಾಗಬಹುದು. ಅಗತ್ಯ ಮೂಲಸೌಕರ್ಯಗಳನ್ನೇ ಕಲ್ಪಿಸದೆ ‘ಪಬ್ಲಿಕ್ ಶಾಲೆ’, ‘ಇಂಗ್ಲಿಷ್ ಶಾಲೆ’ ಎಂದೆಲ್ಲ ಆರಂಭಿಸಿ ಕೋಟಿಗಟ್ಟಲೆ ಹಣವನ್ನು ಸೋರಿಕೆ ಮಾಡುವ ಸರಕಾರವೂ ಈ ರೀತಿಯ ಪರಿಕಲ್ಪನೆಯೆಡೆಗೆ ಗಮನಹರಿಸಿ ಕ್ರಮ ಕೈಗೊಳ್ಳಲು ಸಾಧ್ಯವಿದೆಯಲ್ಲವೇ?