ನವದೆಹಲಿ: ಉತ್ತರಪ್ರದೇಶದ ನೋಯ್ಡಾದಲ್ಲಿ ರಿಯಲ್ ಎಸ್ಟೇಟ್ ಕಂಪನಿಯಿಂದ ಒಬ್ಬ ಗ್ರಾಹಕ ರಿಗೆ 16 ಲಕ್ಷ ರೂ ಪರಿಹಾರ ಸಿಕ್ಕಿದೆ.
ನೋಯ್ಡಾದಲ್ಲಿ ಅಪಾರ್ಟ್ಮೆಂಟ್ ನಿರ್ಮಾಣ ಯೋಜನೆಯ ಪ್ರೊಮೋಟರ್ ಕಂಪನಿ ನೆಕ್ಸ್ಜೆನ್ ಇನ್ಫ್ರಾಕಾನ್ 3 ವರ್ಷ ತಡವಾಗಿ ಫ್ಲ್ಯಾಟ್ ಅನ್ನು ಗ್ರಾಹಕನಿಗೆ ಹಸ್ತಾಂತರಿಸಿತ್ತು. ಇದನ್ನು ಪ್ರಶ್ನಿಸಿ ಆ ಗ್ರಾಹಕ ಉತ್ತರಪ್ರದೇಶದ ರೇರಾ ಪ್ರಾಧಿಕಾರದ ಮೊರೆ ಹೋದರು. ಈ ಪ್ರಕರಣ ವಿಚಾರಣೆ ನಡೆಸಿದ ರೇರಾ ನ್ಯಾಯಾಲಯ ಈ ಪ್ರೊಮೋಟರ್ ಕಂಪನಿಯಿಂದ ಗ್ರಾಹಕರಿಗೆ 16 ಲಕ್ಷ ರೂ ಪರಿಹಾರ ಕೊಡುವಂತೆ ಆದೇಶಿಸಿತು.
2017ರಲ್ಲಿ ಈ ವ್ಯಕ್ತಿ 1.35 ಕೋಟಿ ರೂ ಪಾವತಿಸಿ ಫ್ಲ್ಯಾಟ್ ಬುಕ್ ಮಾಡಿದ್ದರು. 2018 ಡಿಸೆಂಬರ್ ತಿಂಗಳಲ್ಲಿ ಫ್ಲ್ಯಾಟ್ ಹಸ್ತಾಂತರಿಸುವುದಾಗಿ ಪ್ರೊಮೋಟರ್ ಕಂಪನಿ ಹೇಳಿತ್ತು. ಆದರೆ, ಎರಡು ವರ್ಷವಾದರೂ ಫ್ಲ್ಯಾಟ್ ಸಿಗದೇ ಹೋದಾಗ ಆ ಗ್ರಾಹಕ 2021ರಲ್ಲಿ ರೇರಾದಲ್ಲಿ ದೂರು ಕೊಟ್ಟರು.
ಆಗ ರಿಯಲ್ ಎಸ್ಟೇಟ್ ಕಂಪನಿ ಫ್ಲ್ಯಾಟ್ ಹಸ್ತಾಂತರಿಸುವುದಾಗಿ ಹೇಳಿತು. ಆದರೂ ಫ್ಲ್ಯಾಟ್ ಹಸ್ತಾಂತರವಾಗಬೇಕಾಗಿದ್ದು ಇಷ್ಟು ವಿಳಂಬಗೊಂಡಿದ್ದ ರಿಂದ ರೇರಾ ನ್ಯಾಯಾಲಯ ಈ ಪ್ರಕರಣದ ವಿಚಾರಣೆ ನಡೆಸಿ ಗ್ರಾಹಕನ ಪರವಾಗಿ ತೀರ್ಪು ನೀಡಿತ್ತು.
ಗ್ರಾಹಕ ಪಾವತಿಸಿದ ಮೊತ್ತಕ್ಕಕೆ 2018ರಿಂದ ಈಚೆ ಆಗುವ ಬಡ್ಡಿಯನ್ನು ಗಣಿಸಿ 16 ಲಕ್ಷ ರೂ ಹಣವನ್ನು ಗ್ರಾಹಕನಿಗೆ ಪಾವತಿಸುವಂತೆ ನೆಕ್ಸ್ಜೆನ್ ಇನ್ಫ್ರಾಕಾನ್ ಸಂಸ್ಥೆಗೆ ಕೋರ್ಟ್ ಸೂಚಿಸಿತು.