Saturday, 23rd November 2024

ಅವರಿಗೆ ಮೌನ ಧ್ಯಾನಕ್ಕೆ ಸಮವಾಗಿತ್ತು, ಮಾತು ಮೌನವನ್ನು ಅರಸುವ ಮಾರ್ಗವಾಗಿತ್ತು

ಇದೇ ಅಂತರಂಗ ಸುದ್ದಿ

vbhat@me.com

‘ನಾನಂತೂ ಪುಸ್ತಕಗಳನ್ನು ಬರೆಯಲಾರೆ. ಯಾರಿಗಾಗಿ ಬರೆಯಲಿ? ಪುಸ್ತಕ ಬರೆಯುವುದೆಂದರೆ ವಿಳಾಸವಿಲ್ಲದವನಿಗೆ ಪತ್ರ ಬರೆದಂತೆ. ಮಾತಿಗಾದರೂ ತಾನು ಯಾರನ್ನು ತಲುಪುತ್ತೇನೆಂದು ಗೊತ್ತಿರುತ್ತದೆ. ಗುರುತು ಇಲ್ಲದವರೊಡನೆ ಸಂವಹನ ಮಾಡಲು ಬಯಸುವವರು ಬರೆಯಲು ಇಷ್ಟಪಡುತ್ತಾರೆ’ ಹೀಗೆಂದು ಹೇಳಿದವರು ಓಶೋ. ಹೀಗಾಗಿ ಅವರು ಬರೆಯಲಿಲ್ಲ. ಮಾತಾಡಿದರು, ಉಪದೇಶ ಮಾಡಿದರು, ಕತೆ ಹೇಳಿದರು, ಪ್ರವಚನ ನೀಡಿದರು, ಶಿಷ್ಯರ ಪ್ರಶ್ನೆಗಳಿಗೆ ಉತ್ತರಿಸಿದರು.

ಸಮಸ್ಯೆಗಳನ್ನು ಹಂಚಿಕೊಂಡವರಿಗೆ ಸಾಂತ್ವನ ನುಡಿದರು. ಮೌನ ಹಾಗೂ ಮಾತು ಇವೆರಡನ್ನೂ ಅವರು ಸಮ-ಸಮವಾಗಿ ದುಡಿಸಿಕೊಂಡರು. ಅವರಿಗೆ ಮೌನ ಧ್ಯಾನಕ್ಕೆ ಸಮವಾಗಿತ್ತು. ಮಾತು ಮೌನವನ್ನು ಅರಸುವ ಮಾರ್ಗವಾಗಿತ್ತು. ಹೀಗಾಗಿ ಓಶೋ ಅವೆರಡರ ಸಾಮರ್ಥ್ಯದಿಂದ ಅಪ್ರತಿಮ ಧ್ಯಾನಿಯೂ ಆದರು, ಮಾತುಗಾರರೂ ಆದರು. ಇವೆರಡಕ್ಕೆ ಅಗತ್ಯವಾದ ಓದು, ಅಧ್ಯಯನ, ಸಂಶೋಧನೆಯಲ್ಲಿ ಅವರಿಗೆ ಅಪರಿಮಿತ ಆಸಕ್ತಿಯಿತ್ತು. ಆದರೆ ಅವರು ಬರೆಯಲು ಕುಳಿತುಕೊಳ್ಳಲೇ ಇಲ್ಲ.

ವಿಪರ‍್ಯಾಸವೆಂದರೆ, ಓಶೋ ಮಾತಾಡಿದ್ದೆಲ್ಲ ಅಕ್ಷರ ರೂಪಕ್ಕೆ ಬಂದಿದೆ. ಅವರ ಮಾತುಗಳೆಲ್ಲ ಅಕ್ಷರವಾಗಿ ಪುಸ್ತಕದಲ್ಲಿ ಬೆಚ್ಚಗೆ ಕುಳಿತುಕೊಂಡಿವೆ. ಅವರ ಹೆಸರಿನಲ್ಲಿ ೬೫೦ಕ್ಕೂ ಹೆಚ್ಚು ಪುಸ್ತಕಗಳು ಪ್ರಕಟವಾಗಿವೆ. ಒಬ್ಬ ವ್ಯಕ್ತಿ ತನ್ನ ಜೀವಿತ ಕಾಲದಲ್ಲಿ ಇಷ್ಟೊಂದು ಪುಸ್ತಕಗಳನ್ನು ಬರೆಯುವುದು ಸಾಧ್ಯವಾ ಎಂದು ಬೆರಗಾಗುವಷ್ಟು, ಸ್ವತಃ ಲೇಖಕರಿಗೇ ಶೀರ್ಷಿಕೆಗಳನ್ನು ನೆನಪಿಟ್ಟುಕೊಳ್ಳಲು ಸಾಧ್ಯವಾಗದಷ್ಟು ಪುಸ್ತಕಗಳು ಅವರ ಹೆಸರಿನಲ್ಲಿ ಬಂದಿವೆ. ಒಂದು ವೇಳೆ ಅವರೇ ಬರೆದಿದ್ದರೆ, ಅಷ್ಟೆಲ್ಲ ಪುಸ್ತಕಗಳನ್ನು ಬರೆಯಲು ಸಾಧ್ಯವೇ ಇರಲಿಲ್ಲ.

ಆದರೆ ಅನೇಕರಿಗೆ ಅವೆಲ್ಲ ಓಶೋ ಅವರ ಭಾಷಣ, ಪ್ರವಚನಗಳೆಂಬುದು ಗೊತ್ತಿಲ್ಲ. ಓಶೋ ನಿಧನರಾಗಿ ಇಪ್ಪತ್ತೆಂಟು ವರ್ಷಗಳಾದವು. ಆದರೂ ಅವರ ಹೆಸರಿನಲ್ಲಿ ಪ್ರತಿವರ್ಷ ಅರ್ಧಡಜನ್ ಪುಸ್ತಕ ಗಳಾದರೂ ಪ್ರಕಟವಾಗುತ್ತವೆ. ಅವರ ಹೆಸರಿನಲ್ಲಿ ಎರಡು ಡಜನ್‌ಗಳಿಗಿಂತ ಹೆಚ್ಚು ನಿಯತ ಕಾಲಿಕಗಳಿವೆ. ಓಶೋ ಹೇಳಿದ್ದಾರೆನ್ನಲಾದ ಹೊಸ ಹೊಸ ವಿಚಾರಗಳು ಆಗಾಗ ಕಾಣುತ್ತಲೇ ಇರುತ್ತವೆ.

ಕನ್ನಡದಲ್ಲಂತೂ ಈಗ ಓಶೋ ಪುಸ್ತಕಗಳನ್ನು ಅನುವಾದಿಸಲು ಕಾಪಿರೈಟ್ ಅಗತ್ಯವಿಲ್ಲ. ಯಾರು ಬೇಕಾದರೂ ಅನುವಾದಿಸಬಹುದು. ಹೀಗಾಗಿ ಅವರ ಕೃತಿಗಳು ಕನ್ನಡದಲ್ಲಿ ದಂಡಿಯಾಗಿ ಬರುತ್ತಿವೆ. ಕೆಲವು ಪುಸ್ತಕಗಳ ಅನುವಾದಗಳಂತೂ ಓಶೋಗೆ ‘ಬಗೆದ’ ಗಾಯದಂತಿದೆ. ಅವನ್ನು ಅನುವಾದಿಸದಿದ್ದರೆ ಓಶೋಗೆ ಸಂತೋಷವಾಗುತ್ತಿತ್ತೇನೋ? ಓಶೋ ಕೃತಿ ಯಾರೇ ಅನುವಾದಿಸಿದರೂ ಓದುತ್ತಾರೆಂಬ ಭ್ರಮೆಯೇ ಇದಕ್ಕೆ ಕಾರಣ.
ಇತ್ತೀಚೆಗೆ ನಾಲ್ಕೈದು ಕೃತಿಗಳನ್ನು ತಂದು ಓದಲಾರಂಭಿಸಿದರೆ, ಮೂರು ಪುಟಗಳನ್ನು ಓದಲಾಗಲಿಲ್ಲ. ಇತ್ತೀಚಿನ ದಿನಗಳಲ್ಲಿ ಕೆಲವು ಕಲಬೆರಕೆ ಅನುವಾದಕರು ಸೇರಿಕೊಂಡುಬಿಟ್ಟಿದ್ದಾರೆ.

ಒಂದು ವಾರದ ಲಾಡ್ಜ್ ಬಾಡಿಗೆ, ಪ್ರತಿದಿನ ಎರಡು ಕ್ವಾರ್ಟರ್ ರಮ್ಮು ಕುಡಿಸಿದರೆ ಒಂದು ಸೆಕ್ಸ್ ಮ್ಯಾಗಜಿನ್‌ಗೆ ಹೊಂದಿಸುವಷ್ಟು ಬರೆದುಕೊಡುತ್ತಿದ್ದ ಬಾಡಿಗೆ ಲೇಖಕರಂತೆ, ಈ ಕಲಬೆರಕೆ ಅನುವಾದಕರೂ ಹೆಚ್ಚು ಕಮ್ಮಿ ಅದೇ ಷರತ್ತುಗಳಿಗೆ ಪುಸ್ತಕ ಅನುವಾದ ಮಾಡಿಕೊಡುತ್ತಿದ್ದಾರೆ. ಪ್ರಕಾಶಕರಿಗೂ
ಇವನ್ನೆಲ್ಲ ತಿದ್ದುವ, ಸರಿಪಡಿಸುವ ಕಾಳಜಿ ಇರಬೇಕಿತ್ತು. ಅವರು ಯಾರು ಏನೇ ಬರೆದುಕೊಟ್ಟರೂ ಕಣ್ಮುಚ್ಚಿ ಪ್ರಕಟಿಸುವುದರಿಂದ ಈ ಪಡಪೋಶಿ ಬರಹಗಳು ಹಾಗೇ ತಪ್ಪುತಪ್ಪಾಗಿ ಪ್ರಕಟವಾಗುತ್ತಿವೆ. ಕಾಪಿರೈಟ್ ಇಲ್ಲ ಎಂಬ ಕಾರಣಕ್ಕೆ ಅನುವಾದಿಸುವವರು ರೈಟ್‌ಕಾಪಿ ಬರೆಯದಿದ್ದರೆ, ಅಂಥವ ರನ್ನು ತಿರಸ್ಕರಿಸುವ ಕಾಲ ದೂರವಿಲ್ಲ. ಆದರೆ ಓಶೋ ಪುಸ್ತಕಗಳು ಮಾತ್ರ ಅಚ್ಚರಿ ಹುಟ್ಟಿಸುತ್ತಲೇ ಇರುತ್ತವೆ, ಅವರ ಮಾತಿನಂತೆ.

ಮೊದಲ ಪ್ರಯಾಣಿಕ ಯಾರು?
‘ನ್ಯೂ ಮೆಕ್ಸಿಕೋದಲ್ಲಿರುವ ಜೋರ್ನಾಡ ಡೆಲ್ ಮುಚೋರ್ ಎಂಬ ಮರುಭೂಮಿಯಲ್ಲಿ ‘ಸ್ಪೇಸ್‌ಪೋರ್ಟ್ (ಏರ್‌ಪೋರ್ಟ್) ಅಮೆರಿಕ’ ಹೆಸರಿನ ವಿಮಾನ ನಿಲ್ದಾಣವಿದೆ. ಇದನ್ನು ನಿರ್ಮಿಸಿ ಏಳು ವರ್ಷಗಳಾದವು. ಆದರೆ ಒಬ್ಬನೇ ಒಬ್ಬ ಪ್ರಯಾಣಿಕ ಇಲ್ಲಿಂದ ಹೋಗಿಲ್ಲ, ಇಲ್ಲಿಗೆ ಬಂದಿಳಿದಿಲ್ಲ. ಒಂದೇ ಒಂದು ವಿಮಾನವೂ ಲ್ಯಾಂಡ್ ಅಗಿಲ್ಲ ಹಾಗೂ ಟೇಕಾಫ್ ಆಗಿಲ್ಲ. ಈ ವಿಮಾನ ನಿಲ್ದಾಣದಿಂದ ಮತ್ತೊಂದು ನಗರಕ್ಕೆ ವಿಮಾನ ಸಂಚರಿಸು
ವುದಿಲ್ಲ. ಏನಿದ್ದರೂ ಇಲ್ಲಿಂದ ಬೇರೆ ಗ್ರಹಗಳಿಗೆ ಬಾಹ್ಯಾಕಾಶ ನೌಕೆ ನೆಗೆಯಬಹುದು. ಈ ನಿಲ್ದಾಣ ಹತ್ತಾರು ಸಾವಿರ ಪ್ರಯಾಣಿಕರು ಆಗಮಿಸಬಲ್ಲ, ನಿರ್ಗಮಿಸಲು ಬೇಕಾದ ಸಕಲ ವ್ಯವಸ್ಥೆ ಹೊಂದಿದೆ. ಆದರೂ ಒಬ್ಬರೂ ಅದರ ಪ್ರಯೋಜನ ಪಡೆದಿಲ್ಲ.

ವರ್ಜಿನ್ ಕಂಪನಿಯ ಮುಖ್ಯಸ್ಥ ರಿಚರ್ಡ್ ಬ್ರಾನ್‌ಸನ್ ಪ್ರಕಾರ, ಇದು ಭವಿಷ್ಯದ ವಿಮಾನ ನಿಲ್ದಾಣ. ಬೇರೆ ಗ್ರಹಗಳಿಗೆ ಹೋಗಬೇಕಾದ ಪ್ರಯಾಣಿಕರಿಗಾಗಿ ನಿರ್ಮಿಸಿದ ವಿಮಾನ ನಿಲ್ದಾಣ. ವೈಜ್ಞಾನಿಕ ಕತೆಗಳಲ್ಲಿ ಬರುವ ಕಲ್ಪನೆಗಳನ್ನು ಸಾಕಾರಗೊಳಿಸಿ ಈ ವಿಮಾನ ನಿಲ್ದಾಣ ವಿನ್ಯಾಸಗೊಳಿಸಲಾಗಿದೆ. ಇದು ಭವಿಷ್ಯದ ವಿಮಾನ ನಿಲ್ದಾಣವಾಗಿರುವುದರಿಂದ, ‘ನಾಳೆ ಬಾ’ ಎಂಬಂತೆ ಪ್ರಯಾಣಿಕರು ನಾಳೆ ಬರಬಹುದು
ಎಂದು ಆಶಿಸಬಹುದು. ಎಲ್ಲ ವಿಮಾನ ನಿಲ್ದಾಣಗಳಿಗೂ ಮೂರು ಅಕ್ಷರಗಳ ಕೋಡ್ ನೀಡಲಾಗುತ್ತದೆ. ಆ ಅಕ್ಷರಗಳ ಮೂಲಕವೇ ವಿಮಾನ ನಿಲ್ದಾಣ
ಅಥವಾ ನಗರಗಳನ್ನು ಗುರುತಿಸುವುದು. ಉದಾಹರಣೆಗೆ, SFO. ಹೀಗೆಂದರೆ ಸ್ಯಾನ್ ಫ್ರಾನ್ಸಿಸ್ಕೋ ಎಂದರ್ಥ. MAD ಅಂದರೆ ಸ್ಪೇನ್‌ನ ಮ್ಯಾಡ್ರಿಡ್ ವಿಮಾನ ನಿಲ್ದಾಣ ಎಂದರ್ಥ.

ಆದರೆ ನ್ಯೂ ಮೆಕ್ಸಿಕೋ ಮರುಭೂಮಿಯಲ್ಲಿರುವ ಈ ಸ್ಪೇಸ್ ಪೋರ್ಟ್‌ಗೆ ನೀಡಲಾಗಿರುವ ಕೋಡ್- 90NM ಈ ವಿಮಾನ ನಿಲ್ದಾಣದಲ್ಲಿ ಮೊದಲ ಬೋರ್ಡಿಂಗ್ ಪಾಸ್ ಪಡೆಯಲು ಸಾವಿರಾರು ಜನ ಕೇಳಿದಷ್ಟು ಹಣ ಕೊಡಲು ಸಿದ್ಧರಾಗಿ ಕಾಯುತ್ತಿದ್ದಾರೆ. ಹುಚ್ಚರಿರುವ ತನಕ ಹುಚ್ಚುತನಕ್ಕೆ
ಕೊರತೆಯಾಗುವುದಿಲ್ಲ ಎಂಬುದು ಸುಳ್ಳಲ್ಲ.

ಸಮಸ್ಯೆ ಇತ್ಯರ್ಥ
ಮೊನ್ನೆ ಯೋಗಿ ದುರ್ಲಭಜೀ ಏನು ಮಾಡಿದರಂತೆ ಗೊತ್ತಾ? ಅವರ ಅಚ್ಚುಮೆಚ್ಚಿನ ತಾಣವಾದ ಪುಸ್ತಕದ ಅಂಗಡಿಗೆ ಹೋಗಿದ್ದರಂತೆ. ಹಲವಾರು ಪುಸ್ತಕಗಳ ಮಧ್ಯೆ ಒಂದು ಪುಸ್ತಕ ಕಣ್ಣಿಗೆ ಬಿತ್ತಂತೆ. ಆ ಕೃತಿಯ ಹೆಸರು ‘How to solve 50% of your Problems’ ಒಂದು ಕ್ಷಣ ಯೋಚಿಸಿ, ಯೋಗಿಯವರು ಆ ಪುಸ್ತಕದ ಎರಡು ಪ್ರತಿಗಳನ್ನು ಖರೀದಿಸಿದರಂತೆ!

ಈ ಪ್ರಶ್ನೆಗೆ ಉತ್ತರ ಗೊತ್ತಾ ?
ನಮ್ಮ ಪತ್ರಿಕೆಗೆ ಆಗಾಗ ಬರೆಯುವ ತುರುವೇಕೆರೆ ಪ್ರಸಾದ ಅವರು ಹಲವು ಪ್ರಶ್ನೆಗಳನ್ನು ಕೇಳಿ ಕೊನೆಗೆ ಒಂದು ಮೂಲಭೂತ ಪ್ರಶ್ನೆಯನ್ನು ಕೇಳಿzರೆ. ಉತ್ತರ ನಿಮಗೆ ಗೊತ್ತಿದ್ದರೆ ಹೇಳಿ. ಸೊನ್ನೆ ಕಂಡು ಹಿಡಿದದ್ದು ಯಾರು?’ ನಾವು ಭಾರತೀಯರು’ಒದ್ದು ಬಿಡ್ತೀನಿ, ಕಿಕ್ ಮಾಡ್ತೀನಿ ಅಂತ ಮಾತ್ ಮಾತಿಗೆ ಹೇಳೋರು ಯಾರು?’ ನಾವೇ, ‘ಇಂಡಿಯ’ ಝಾಡಿಸಿ ಒದಿ ಎಂದು ಹಾಡು ಹೇಳಿರೋರು ಯಾರು? ಇನ್ಯಾರು? ನಮ್ಮ ಶಂಕರನಾಗ್, ಮೂಗನ ಸೇಡು ಪಿಕ್ಚರ್ ನಲ್ಲಿ ವೆರಿಗುಡ್, ಬೇರೆಯವರ ಹತ್ರ ಇರೋದನ್ನ ಏನಾದರೂ ಮಾಡಿ ಕಿತ್ತುಕೊಳ್ಳಲೇಬೇಕು ಅನ್ನೋ ದುರಾಸೆ ಇರೋದು
ಯಾರಿಗೆ?’ ಆಫರ್ಸ್, ನಮಗೇ ಸ್ವಲ್ಪ ಜಾಸ್ತಿ ಅನ್ನುಯಾರಾದರೂ ಮುಂದೆ ಹೋಗ್ತಾರೆ ಅಂದ್ರೆ ತೊಡರುಗಾಲು ಕೊಡೋರು ಯಾರು?

ಇದಂತೂ ನಾವೇ! ಪದೇ ಪದೇ ತಪ್ಪು ಮಾಡಿ ಹೆಚ್ಚು ಪೆನಾಲ್ಟಿ ಕಟ್ಟೋರು ಯಾರು?’ ಒಂದು ರೀತಿಲಿ ನಾವೇ! ನಮ್ಮನ್ನ ಮೂಲೆಗುಂಪು ಮಾಡಿದಾರೆ, ಕಾರ್ನರ್ ಮಾಡಿದಾರೆ ಅಂತ ಮಾತು ಮಾತಿಗೂ ಹಳಹಳಿಸೋರು ಯಾರು? ಅನುಮಾನವೇ ಇಲ್ಲ, ನಾವೇ! ರೇಶನ್ ಕಾರ್ಡು, ಆಧಾರ್ ಕಾರ್ಡು, ಹಸಿರು ಕಾರ್ಡು, ಹಳದಿ ಕಾರ್ಡು,ಆ ಕಾರ್ಡು, ಈ ಕಾರ್ಡು ಅಂತ ಪದೇ ಪದೇ ಒದ್ದಾಡೋರು ಯಾರು?’ ಇದಂತೂ ನಾವೇ! ನಮ್ಮ ಪ್ರೀತಿಯ ಆಹಾರ ಯಾವುದು?’ ಮತ್ತಿನ್ಯಾವುದು? ‘ರಾಗಿ ಮುದ್ದೆ’ ಕೆಳಗೆ ಬಿzನ್ನ ಕೈ ಹಿಡಿದೆತ್ತದೆ ಮುಂದಕ್ಕೆ ಓಡೋರು ಯಾರು?’ ನಾವೇ!

ಸಿಕ್ಕಾಪಟ್ಟೆ ಗೋಲ್ಮಾಲ್ ಮಾಡೋರು ಯಾರು? ನಮ್ಮ ರಾಜಕೀಯದವರು ವ್ಯವಸ್ಥೆಯಲ್ಲಿ ಪದೇ ಪದೇ ಅಲ್ಲಿಂದಿಲ್ಲಿಗೆ, ಇಲ್ಲಿಂದಲ್ಲಿಗೆ ಕಿಕ್ ಮಾಡ್ತಾರೆ ಅಂತ ಪದೇ ಪದೇ ಅವಲತ್ತುಕೊಳ್ಳೋರು ಯಾರು?’ ನಾವೇ! ಹಾಗಿದ್ದ ಮೇಲೆ ಇಷ್ಟೆ ಅರ್ಹತೆ ಇದ್ದೂ ನಾವ್ಯಾಕೆ ವಿಶ್ವಕಪ್ ಫುಟ್ಬಾಲ್ ಆಡಕ್ಕೆ ಆಗ್ತಿಲ್ಲ?
ಈ ಪ್ರಶ್ನೆಗೆ ನಿಮಗೇನಾದ್ರೂ ಉತ್ತರ ಗೊತ್ತಾ?

ಹೆಂಡತಿ ಮಾತು
ಒಂದು ದಿನ ಮುಲ್ಲಾ ನಸ್ರುದ್ದೀನ್ ಡಾಕ್ಟರ್ ಹತ್ತಿರ ಹೋಗಿ, ‘ಏನಾದರೂ ಮಾಡಿ, ನನ್ನ ತಲೆ ಹಾಳಾಗೋದು ಬಾಕಿಯಿದೆ. ನನ್ನ ಹೆಂಡತಿ ರಾತ್ರಿ ವಿಪರೀತ ಮಾತಾಡ್ತಾಳೆ’ ಎಂದ. ಅದಕ್ಕೆ ಡಾಕ್ಟರರು .‘ಅದ್ಸರಿ , ನಿನ್ನ ಹೆಂಡತಿ ಎಲ್ಲಿದ್ದಾಳೆ? ಅವಳನ್ನು ಇಲ್ಲಿಗೆ ಕರೆದುಕೊಂಡು ಬಾ’ ಎಂದರು.
‘ಡಾಕ್ಟರರೇ, ನಿಮಗೆ ಅರ್ಥವಾಗೊಲ್ಲ. ಅವಳಿಗೆ ಏನೂ ಮಾಡಬೇಕಾಗಿಲ್ಲ. ನನಗೇ ಏನಾದರೂ ಮಾಡಿ. ಆ ಮೂಲಕ ರಾತ್ರಿಯೆಲ್ಲ ನಾನು ಎಚ್ಚರ ವಾಗಿರುವಂತೆ ಮಾಡಿ’ ಎಂದು ಗೋಗರೆದ.

ಡಾಕ್ಟರರಿಗೆ ಅರ್ಥವಾಗಲಿಲ್ಲ. ಆಗ ಮುಲ್ಲಾ ವಿವರಿಸಿದ- ‘ರಾತ್ರಿಯಾದರೆ ನನಗೆ ನಿದ್ದೆ ಬರುತ್ತದೆ. ಆದರೆ ಅವಳ ಮಾತು ಕೇಳಿದರೆ ಎಚ್ಚರವಾಗಿ ರೋಣ ಅನಿಸುತ್ತದೆ. ಆದರೆ ನನ್ನಿಂದ ಸಾಧ್ಯವಾಗುತ್ತಿಲ್ಲ. ನಿದ್ದೆ ಬರುತ್ತದೆ. ಅಲ್ಲದೇ ಅವಳು ಮಲಗಿದರೂ, ನಿದ್ದೆಯಲ್ಲಿ ಮಾತಾಡ್ತಾಳೆ. ಆಗ ಅವಳ ಮಾತು ಎಷ್ಟು ಸೊಗಸಾಗಿರುತ್ತದೆ ಅಂದ್ರೆ ಕೇಳುತ್ತಲೇ ಇರಬೇಕೆನಿಸುತ್ತದೆ. ಅವಳು ಎಚ್ಚರವಿದ್ದಾಗ ಇಷ್ಟು ಚೆನ್ನಾಗಿ ಮಾತಾಡುವುದಿಲ್ಲ. ಎಚ್ಚರ ವಿದ್ದಾಗ ಅಸಂಬದ್ಧ ಮಾತಾಡ್ತಾಳೆ. ಆದ್ದರಿಂದ ಅವಳ ಮಾತುಗಳನ್ನು ಕೇಳಲು ನಾನು ಎಚ್ಚರವಾಗಿರಬೇಕಲ್ಲ. ಅದಕ್ಕೆ ಔಷಧಿ ಕೊಡಿ’. ಮುಲ್ಲಾನ ಮಾತುಗಳನ್ನು ಕೇಳಿದ ಡಾಕ್ಟರರು ಮೂರ್ಛೆ ಹೋಗುವುದೊಂದೇ ಬಾಕಿ.

ದೇವರು ಹಾಗೂ ಜೋಕು
ಕೆಲ ವರ್ಷಗಳ ಹಿಂದೆ, ಕಸೌಳಿಯಲ್ಲಿರುವ ತಮ್ಮ ಮನೆಯಲ್ಲಿ ಮಧ್ಯಾಹ್ನದ ನಿದ್ದೆಯಿಂದ ಎದ್ದು ಚಹ ಸೇವಿಸುತ್ತಿರುವಾಗ, ಕುರ್ಚಿಯಿಂದ ಹಠಾತ್ತನೆ ಖುಷವಂತ ಸಿಂಗ್ ಬಿದ್ದು ಬಿಟ್ಟರಂತೆ. ಇನ್ನೇನು ತನ್ನ ಕತೆ ಮುಗಿಯಿತು ಎಂದು ಅನಿಸಿತಂತೆ. ದೇವರನ್ನು ನಂಬದಿದ್ದರೂ ಅವನ ಪ್ರತಿಕೃತಿ ಅವರ ಮುಂದೆ ಬಂತಂತೆ. ದೇವರು (ಬಡೇಮಿಯಾ)-ಸಿಂಗ್ ನಡುವೆ ಒಂದಷ್ಟು ಹೊತ್ತು ಮಾತುಕತೆ ನಡೆಯಿತಂತೆ.

ಖುಷವಂತ ಸಿಂಗ್ -ಬಡೇಮಿಯಾ, ಇನ್ನು ಕೆಲವು ತಿಂಗಳು ನನಗೆ ಬದುಕಲು ಬಿಡು. ಕೆಲವು ಅಪೂರ್ಣ ಕೆಲಸಗಳಿವೆ. ನಾನು ನಿನ್ನ ಸೇರುವ ಮೊದಲು ಆ ಕೆಲಸವನ್ನು ಮುಗಿಸುವೆ. ಅದಕ್ಕೆ ಅನುವು ಮಾಡಿಕೊಡು.
ಬಡೇಮಿಯಾ -ಅದೆಂಥ ಮಹತ್ವದ ಕೆಲಸ?
ಸಿಂಗ್ – ನನ್ನ ಕೆಲವು ಹಸ್ತಪ್ರತಿಗಳು ಪಬ್ಲಿಶರ್ ಹತ್ರಾನೇ ಇವೆ. ಅವು ಪ್ರಿಂಟಾಗಬೇಕು. ಅವನ್ನು ನಾನು ನೋಡಬೇಕು

ಬಡೇಮಿಯಾ- ಅವು ಅಂಥ ಪ್ರಮುಖ ಪುಸ್ತಕಗಳಾ? ನಿನ್ನ ಪುಸ್ತಕ ಓದಿ ಯಾರು ಉದ್ಧಾರವಾಗಿದ್ದಾರೆ?
ಸಿಂಗ್- ಗೊತ್ತಿಲ್ಲ. ಆದರೆ ಆ ಪೈಕಿ ಕೆಲವು ಜೋಕ್ ಪುಸ್ತಕಗಳಿವೆ.

ಬಡೇಮಿಯಾ- ಹೌದಾ? ನಿನ್ನ ಪುಸ್ತಕಗಳ ಪೈಕಿ ಎಲ್ಲರಿಗೂ ಅರ್ಥವಾಗೋದು ಅಂದ್ರೆ ಅವು ಮಾತ್ರ. ಕಾರಣ ನಾನು ನಿನ್ನ ಜೋಕ್ ಪುಸ್ತಕಗಳನ್ನು ಓದಿ ಹೊಟ್ಟೆ ತುಂಬಾ ನಕ್ಕಿದ್ದೇನೆ.

ಸಿಂಗ್- ನನ್ನ ಬರವಣಿಗೆಯಿಂದ ನನಗೆ, ಪ್ರಕಾಶಕನಿಗೆ ಹಾಗೂ ಓದುಗನಿಗೆ ಪ್ರಯೋಜನ ವಾಗಿದ್ದರೆ, ಜೋಕ್ ಪುಸ್ತಕಗಳಿಂದ ಮಾತ್ರ. ಪ್ರತಿ ಪುಸ್ತಕವೂ ಹತ್ತು-ಹದಿನೈದು ರೀಪ್ರಿಂಟ್‌ಗಳನ್ನು ಕಂಡಿವೆ. ಕೈತುಂಬಾ ಹಣ ತಂದು ಕೊಟ್ಟಿವೆ.

ಬಡೇಮಿಯಾ- ಹಾಗಾದರೆ ಸರಿ, ನಿನಗೆ ಇನ್ನೂ ಕೆಲವು ವರ್ಷ ಬದುಕಲು ಬಿಡುತ್ತೇನೆ. ಜೋಕ್‌ಪುಸ್ತಕಗಳನ್ನು ಮುಗಿಸು. ಈ ದೇಶದ ಜನರಿಗೆ ನಗುವುದೇ ಗೊತ್ತಿಲ್ಲ. ಹೀಗಂತ ಖುಷವಂತ ಸಿಂಗ್ ತಮ್ಮ ‘ಜೋಕ್‌ಬುಕ್-೮ರಲ್ಲಿ ಬರೆದುಕೊಂಡಿದ್ದಾರೆ. ಅವರ ಎತ್ತರಕ್ಕೇರಿದ ಲೇಖಕ ಇಷ್ಟು
ಮುಕ್ತವಾಗಿ ಬರೆದುಕೊಳ್ಳುವುದನ್ನು ಮೆಚ್ಚಲೇಬೇಕು. ಇದಾದ ನಂತರ ಖುಷವಂತ ಸಿಂಗ್ ಏಳು ವರ್ಷ ಬದುಕಿದ್ದರು!

ಹೀಗಂದ್ರೆ ಏನರ್ಥ? ನಿಮ್ಮ ಜತೆ ಯಾರೂ ಇಲ್ಲ, ನೀವೊಬ್ಬರೇ ಇದ್ದೀರಿ, ಯಾರೂ ನಿಮ್ಮನ್ನು ಗಮನಿಸುತ್ತಿಲ್ಲ. ನಿಮಗೂ ಬೇರೆಯವರನ್ನು
ನೋಡಲು ಆಗುತ್ತಿಲ್ಲ, ಅಲ್ಲದೇ ಎಲ್ಲಾ ಬಾಗಿಲುಗಳು ಮುಚ್ಚಿವೆ. ಜೀವನದಲ್ಲಿ ಇಂಥ ಪ್ರಸಂಗ ಎದುರಾದರೆ ಏನೆಂದು ತಿಳಿಯಬಹುದು? ಮತ್ತೇನಿಲ್ಲ , ನೀವು ಟಾಯ್ಲೆಟ್‌ನಲ್ಲಿ ಇದ್ದೀರಿ ಎಂದರ್ಥ!

ಗುರಿತಪ್ಪಲಿ, ಆದರೆ…. 

ಇತ್ತೀಚೆಗೆ ಬೆಂಗಳೂರಿಗೆ ಆಗಮಿಸಿದ್ದ ಸ್ನೇಹಿತ ಧವಳ್ ಭಾಟಿಯಾ ತಾವು ಬರೆದ ‘He Swam with Sharks for an IceCream’ ಎಂಬ ಪುಸ್ತಕವನ್ನು ಕೊಟ್ಟರು. ಆ ಕೃತಿಯ ಶೀರ್ಷಿಕೆಯೇ ಆಕರ್ಷಕವಾಗಿದೆ. ರಾತ್ರಿ ಮನೆಗೆ ಹೋಗಿ ಪುಟ ತಿರುವಿದರೆ, ಬೆಳಗಿನ ಜಾವದ ಹೊತ್ತಿಗೆ ಕೊನೆಯಲ್ಲಿ ಬಂದು ನಿಂತಿದ್ದೆ. ಆ ಪುಸ್ತಕದಲ್ಲಿ ಭಾಟಿಯಾ ಅವರು ಉದ್ದಿಮೆದಾರ ಽರುಭಾಯಿ ಅಂಬಾನಿ ಅವರ ಬಗ್ಗೆ ಪ್ರಸ್ತಾಪಿಸಿದ್ದರು. ಅಂಬಾನಿಗೆ ಒಂದು ವಿಚಿತ್ರ ಖಯಾಲಿ ಇತ್ತಂತೆ. ಅದೇನೆಂದರೆ ದೊಡ್ಡದಾಗಿ ಯೋಚಿಸೋದು. Think big ಎಂಬುದು ಅವರ ಮಂತ್ರ. ಅವರ ನೂತನ ಕಚೇರಿಯಲ್ಲಿ ಕಿಟಕಿಗಳನ್ನೆಲ್ಲ ಅವರು ಕಿತ್ತುಹಾಕಿಸಿ ಇಡೀ ಗೋಡೆಯನ್ನೇ ಕಿಟಕಿಯಾಗಿ ಮಾರ್ಪಡಿಸಿದ್ದರಂತೆ.

ಇದರಿಂದ ಹೊರಗಿನ ಜಗತ್ತು ದೊಡ್ಡದಾಗಿ ಕಾಣುವುದಲ್ಲದೇ ನಮ್ಮ ಯೋಚ ನೆಗಳು ಹಿರಿದಾಗಲು ಅನುವು ನೀಡಿದಂತಾಗುತ್ತದೆ ಎಂದು ಅವರು ಬಲವಾಗಿ ನಂಬಿದ್ದರಂತೆ. ಅದಾದ ನಂತರ ಅವರು ಎಲ್ಲಿಯೇ ಕಟ್ಟಡ ಕಟ್ಟಲಿ, ಗೋಡೆ ಗಳೇ ಕಿಟಕಿಗಳಾಗಿರಲಿ ಎಂದು ಹೇಳುತ್ತಿದ್ದರಂತೆ. ಅಂಬಾನಿ ಯವರು ತಮ್ಮ ಸಂಸ್ಥೆಗೆ ಆಯಕಟ್ಟಿನ ಜಾಗದಲ್ಲಿ ಯಾರಿರಬೇಕೆಂಬುದನ್ನು ಅವರೇ ನಿರ್ಧರಿಸುತ್ತಿದ್ದರಂತೆ. ಹೊಸ ಹೊಸ ಐಡಿ ಯಾಗಳನ್ನು ಕೊಡುವ ಚಿಂತಕರ ಚಾವಡಿಯನ್ನು ತಮ್ಮೊಂದಿಗೆ ಇಟ್ಟುಕೊಂಡಿದ್ದರಂತೆ. ಕಚೇರಿಗೆ ಬಂದು ಯೋಚಿಸುವುದಷ್ಟೇ ಅವರ ಕೆಲಸ. ಹೊಸ ಐಡಿಯಾಗಳು
ಬಂದರೆ ತಮಗೇ ಅದರ ಪ್ರಯೋಜನ ಸಿಗಬೇಕು ಎಂದು ಅವರು ಹಪಹಪಿ ಸುತ್ತಿದ್ದರಂತೆ.

Talent lost is opportunity lost ಎಂಬುದು ಅವರ ಸಿದ್ಧಾಂತ. ಅಂಬಾನಿ ತಮ್ಮ ಚಿಂತಕರ ಛಾವಡಿ ಸದಸ್ಯರಿಗೆ ಹೇಳುತ್ತಿದ್ದ ಒಂದು ಮಾತು ‘ನಿಶಾನ್ ಛೂಕ್ ಮಾಫ್, ನಹೀ ನಿಚ್ಛು ನಿಶಾನ್.’ (ಗುರಿ ತಪ್ಪಿದರೂ ಪರವಾಗಿಲ್ಲ. ಆದರೆ ಗುರಿಯನ್ನು ಮಾತ್ರ ಕೆಳಮಟ್ಟಕ್ಕೆ ಇಳಿಸಬೇಡ) ಅಂಬಾನಿ ಯಾರೂ ಏರದ ಎತ್ತರವನ್ನು ಹೇಗೆ ಏರಿದರೆಂಬುದು ತಿಳಿಯಿತಲ್ಲ.

ಅಂದು -ಇಂದು

ನಮ್ಮ ಕಾಲದಲ್ಲಿ ಹಾಗಿತ್ತು, ಹೀಗಿತ್ತು ಎಂದು ಹಿರಿಯರು ಹೇಳುವುದನ್ನು ಕೇಳಿದ್ದೇವೆ. ಅಂದಿನ ಕಾಲ ಚೆನ್ನಾಗಿತ್ತು. ಈಗ ಎಲ್ಲವೂ ಹಾಳಾಗಿ ಹೋಗಿದೆ ಎಂಬುದು ಅವರ ಅಭಿಪ್ರಾಯ. ಇತ್ತೀಚಿಗೆ ಸಿಕ್ಕಿದ ಹಿರಿಯರೊಬ್ಬರು ಹೇಳಿದ್ದು ‘ನಮ್ಮ ಕಾಲವೇ ಚೆನ್ನಾಗಿತ್ತು. ಈಗ ಕಾಲ ಕೆಟ್ಟು ಹೋಗಿದೆ. ನಮ್ಮ ಕಾಲದಲ್ಲಿ ಹೆಣ್ಣು ಮಕ್ಕಳು ಅವರ ಅಮ್ಮಂದಿರಂತೆ ಅಡುಗೆ ಮಾಡುತ್ತಿದ್ದರು. ಆದರೆ ಈಗ ಅವರು ತಮ್ಮ ಅಪ್ಪಂದಿರಂತೆ ಕುಡಿಯುತ್ತಿದ್ದಾರೆ.’ ‘ಅದ್ಸರಿ, ಅಮ್ಮಂದಿರು ಏನು ಮಾಡುತ್ತಿದ್ದಾರೆ?’ಎಂದು ಕೇಳಿದೆ. ಅದಕ್ಕೆ ಅವರು ಹೇಳಿದರು : ‘ಈಗ ಅಪ್ಪ -ಅಮ್ಮ -ಮಕ್ಕಳು ಎಲ್ಲ ಸೇರಿ ಕುಡಿಯುತ್ತಾರೆ.’

ವಿನೂತನ ಅಲಾರ್ಮ್
ಎಲ್ಲರೂ ಬೆಳಗ್ಗೆ ಬೇಗ ಏಳಲು ಅಲಾರ್ಮ್ ಇಟ್ಟುಕೊಳ್ಳುತ್ತಾರೆ. ಆದರೆ ಅಲಾರ್ಮ್ ಸದ್ದು ಮಾಡಿದರೆ, ಕರ್ಕಶ ಎಂದು ಅದನ್ನು ಕುಕ್ಕಿ ಕೆಟ್ಟ ಮೂಡಿನಲ್ಲಿ ಏಳುತ್ತಾರೆ. ಇದು ಎಲ್ಲರ ಅನುಭವ. (ತನ್ನ ಡ್ಯೂಟಿಯನ್ನು ಸರಿಯಾಗಿ ಮಾಡಿ ಬೈಸಿಕೊಳ್ಳುವ ಒಂದು ವಸ್ತುವಿದ್ದರೆ ಅದು ಬಡಪಾಯಿ ಅಲಾರ್ಮ್ ಎಂದು ಹಿಂದೊಮ್ಮೆ ವಕ್ರತುಂಡೋಕ್ತಿ ಬರೆದ ನೆನಪು) ’ಜಗತ್ತಿನಲ್ಲಿ ಏನೆ ಹೊಸ ಹೊಸ ಗ್ಯಾಜೆಟ್ಟುಗಳು ಮಾರುಕಟ್ಟೆಗೆ ಬರುತ್ತಿವೆ. ಆದರೆ ಎಲ್ಲರೂ ಇಷ್ಟಪಡುವ ಅಲಾರ್ಮ್ ನ್ನು ಇಲ್ಲಿ ತನಕ ಯಾರೂ ಕಂಡುಹಿಡಿದಿಲ್ಲ ಏಕೆ?’ ಎಂದು ಓದುಗರೊಬ್ಬರು ಪತ್ರಿಕೆಯೊಂದರ ’ಸಂಪಾದಕರ ಪತ್ರ’
ವಿಭಾಗದಲ್ಲಿ ಕೇಳಿದ್ದರು.

ಇದನ್ನು ಓದಿದ ಮತ್ತೊಬ್ಬ ಓದುಗರೊಬ್ಬರು ಬರೆದಿದ್ದರು – ’ತಲತಲಾಂತರಗಳಿಂದ ವಿಶಿಷ್ಟ ಬಗೆಯ ಒಂದು ಅಲಾರ್ಮ್ ಅಸ್ತಿತ್ವದಲ್ಲಿದೆ. ಅದು ಯಾವ ಶಬ್ದವನ್ನೂ ಮಾಡುವುದಿಲ್ಲ. ಅದು ಜನರನ್ನು ಎಬ್ಬಿಸಲು ಬೆಳಕನ್ನಷ್ಟೇ ಉಪಯೋಗಿಸುತ್ತದೆ. ಅದು ಕ್ಷಣ ಕ್ಷಣಕ್ಕೂ ತನ್ನ ಬೆಳಕನ್ನು ಹೆಚ್ಚಿಸುತ್ತಾ ಹೋಗುತ್ತದೆ, ನೀವು ಏಳುವ ತನಕ. ಈ ಅಲಾರ್ಮ್ ನ್ನು ನಾನು ಅನೇಕ ವರ್ಷಗಳಿಂದ ಯಶಸ್ವಿಯಾಗಿ ಬಳಸುತ್ತಿದ್ದೇನೆ. ಅದಕ್ಕೆ ಕಿಟಕಿ ಅಂತ
ಕರೆಯುತ್ತಾರೆ.’