Saturday, 14th December 2024

ಕಾಳಸಂತೆಯಲ್ಲಿ ಪಡಿತರ ಅಕ್ಕಿ ಮಾರಾಟ ತಡೆಗಟ್ಟಿ

ಪ್ರತಿ ಕುಟುಂಬಕ್ಕೂ ೧೦ ಕೆ.ಜಿ. ಅಕ್ಕಿ ಪೂರೈಸಲು ಸರಕಾರ ಹರಸಾಹಸ ಪಡುತ್ತಿದೆ. ಆದರೆ ಇನ್ನೊಂದೆಡೆ ಪಡಿತರ ಅಕ್ಕಿಯು ಕಾಳಸಂತೆಯಲ್ಲಿ
ಎಗ್ಗಿಲ್ಲದೆ ಮಾರಾಟವಾಗುತ್ತಿದೆ. ಅನೇಕ ಕುಟುಂಬಗಳು ಈಗ ಪಡೆಯುತ್ತಿರುವ ಐದು ಕೆ.ಜಿ ಅಕ್ಕಿಯನ್ನೂ ತಾವು ಬಳಸದೆ ಪ್ರತಿ ಕೆ.ಜಿ.ಗೆ ?೧೦ ರಂತೆ ಮಾರಾಟ ಮಾಡುತ್ತಿದ್ದಾರೆ.

ಅಕ್ಕಿ ಖರೀದಿಸಿದವರು ಸರಕಾರಕ್ಕೆ ಕೆ.ಜಿ.ಗೆ ?೩೪ ರಂತೆ ಮಾರಾಟ ಮಾಡುತ್ತಿದ್ದಾರೆ. ಈ ಅಕ್ಕಿಯನ್ನು ಖರೀದಿಸುವ ಕೆಲವರು, ಎಥಿನಾನ್ ತಯಾರಿಸಲು ಸಕ್ಕರೆ ಕಾರ್ಖಾನೆಗಳಿಗೆ ಮಾರಾಟ ಮಾಡುತ್ತಿದ್ದಾರೆ. ಇನ್ನು ಪ್ರತಿ ವ್ಯಕ್ತಿಗೆ ೧೦ ಕೆ.ಜಿ. ಅಕ್ಕಿ ನೀಡುವುದರಿಂದ ಕಾಳಸಂತೆಯ ವ್ಯವಹಾರ ಇನ್ನೂ ದೊಡ್ಡ ಪ್ರಮಾಣದಲ್ಲಿ ನಡೆಯುವುದಕ್ಕೆ ದಾರಿ ಮಾಡಿ ಕೊಟ್ಟಂತಾಗುತ್ತದೆ. ಅಕ್ಕಿ ಅಕ್ರಮ ದಂಧೆ ಮತ್ತೊಂದು ರೀತಿಯಲ್ಲೂ ನಡೆಯುತ್ತಿದೆ.

ಆಹಾರ ನಿಗಮ, ಉಗ್ರಾಣ ನಿಗಮದ ಗೋದಾಮುಗಳಿಂ ದಲೇ ಸಾಗಿಸಲಾಗುತ್ತದೆ. ನ್ಯಾಯಬೆಲೆ ಅಂಗಡಿಗಳಿಗೆ ಪ್ರತಿ ಕ್ವಿಂಟಲ್‌ಗೆ ಚೀಲದ ತೂಕ ಸೇರಿಸಿ ೧೦೧ಕೆ.ಜಿ ೩೦೦ ಗ್ರಾಂ ಕೊಡಬೇಕು. ಚೀಲದಲ್ಲಿರುವ ಅಕ್ಕಿಯ ಒಂದೆರಡು ಕೆ.ಜಿಯಷ್ಟು ತೆಗೆಯುತ್ತಾರೆ. ೯೯ಕೆ.ಜಿ., ೯೮ ಕೆ.ಜಿ. ಕೊಡುತ್ತಾರೆ. ಹೀಗೆ ತೆಗೆದ ಅಕ್ಕಿಯನ್ನು ಅಧಿಕಾರಿಗಳೇ ಮಾರುತ್ತಾರೆ ಎಂಬ ದೂರುಗಳೂ ಕೇಳಿ ಬಂದಿವೆ. ಪಡಿತರ ಅಕ್ಕಿಯನ್ನು ಸೋನಾ ಮಸೂರಿಗೆ ಬೆರೆಸುವ ಕೆಲಸವೂ ನಡೆಯುತ್ತಿದೆ. ಪಿಡಿಎಸ್ ಅಕ್ಕಿಗೆ ಡಬಲ್ ಪಾಲಿಷ್ ಮಾಡಿಸಿ ೭೦ ಕೆ.ಜಿ ಸೋನಾ ಮಸೂರಿಗೆ ೩೦ ಕೆ.ಜಿ. ಮಿಶ್ರಣ ಮಾಡಲಾಗುತ್ತದೆ.

ಇದೂ ಒಂದು ರೀತಿ ಕಣ್ಣಿಗೆ ಮಣ್ಣೆರಚುವ ಕೆಲಸ. ಪ್ರಭಾವಿ ರಾಜಕಾರಣಿಗಳ ಹಿಂಬಾಲಕರೇ ಈ ಅಕ್ಕಿ ದಂಧೆಯಲ್ಲಿ ತೊಡಗಿದ್ದಾರೆ. ಇದೆಲ್ಲವೂ ಅಧಿಕಾರಿಗಳಿಗೆ ಗೊತ್ತಿದ್ದರೂ ನಿಯಂತ್ರಣ ಮಾಡದೇ ಇರುವುದು ವಿಪರ್ಯಾಸ. ಕುಟುಂಬಕ್ಕೆ ಹೆಚ್ಚಾದ ಅಕ್ಕಿಯನ್ನು ಸರಕಾರವೇ ಕೆ.ಜಿ.ಗೆ ?೧೫ರಂತೆ ಖರೀದಿಸಿದರೆ ಕಾಳಸಂತೆಗೆ ಕಡಿವಾಣ ಹಾಕಿದಂತಾಗುತ್ತದೆ ಹಾಗೂ ಬಡ ಕುಟುಂಬಗಳಿಗೂ ಅನುಕೂಲ ವಾಗುತ್ತದೆ. ಕೇಂದ್ರ ಸರಕಾರಕ್ಕೆ ?೩೪ ನೀಡಿ ಅಕ್ಕಿ ಖರೀದಿಸುವ ಬದಲು, ಹೀಗೆ ಪಡೆದರೆ ಸರಕಾರಕ್ಕೆ ಆರ್ಥಿಕ ಹೊರೆಯೂ ಕಡಿಮೆಯಾಗುತ್ತದೆ. ಈ ನಿಟ್ಟಿನಲ್ಲಿ ಗ್ರಾಮ ಮತ್ತು ತಾಲೂಕು ಕೇಂದ್ರಗಳಲ್ಲಿ ಅಕ್ಕಿ ಖರೀದಿ ಕೇಂದ್ರಗಳನ್ನು ಸರಕಾರ ತೆರೆಯಲು ಯೋಚಿಸಬೇಕಿದೆ.