Saturday, 14th December 2024

ಅಕ್ಕಿ ಗಿರಣಿದಾರರ ಸಮಸ್ಯೆ ಬಗೆಹರಿಸದಿದ್ದರೆ ಪ್ರತಿಭಟನೆ

ತುಮಕೂರು: ನಗರದಲ್ಲಿರುವ ಅಕ್ಕಿ ಗಿರಣಿದಾರರು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ  ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕಲ್ಕಿ ರಮೇಶ್ ಬಾಬು,  ಪ್ರಸ್ತುತ ದಿನಗಳಲ್ಲಿ ವಿದ್ಯುತ್ ದರಗಳ ಹೆಚ್ಚಳದಿಂದ ಈಗಾಗಲೇ ಅಕ್ಕಿ ಗಿರಣಿದಾರರಿಗೆ ಆರ್ಥಿಕವಾಗಿ ಹೊರೆಯಾಗುತ್ತಿದೆ. ಈ ಹೆಚ್ಚಳದಿಂದ ಗಿರಣಿಗಳನ್ನು ನಡೆಸುವುದು ಕಷ್ಟಕರವಾಗಿದ್ದು, ಅಕ್ಕಿ ಗಿರಣಿದಾರರು ಆರ್ಥಿಕ ಸಂಕಷ್ಟಕ್ಕೆ ಸಿಲುಕುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ, ಆದಷ್ಟು ಶೀಘ್ರವಾಗಿ ವಿದ್ಯುತ್ ದರಗಳ ಹೆಚ್ಚಳವನ್ನು ಹಿಂಪಡೆಯಬೇಕೆಂದು ಒತ್ತಾಯಿಸಿದರು.
ಕಾಂಗ್ರೆಸ್ ಸರಕಾರದ ಸಚಿವ ಸಂಪುಟದ ನಿರ್ಧಾರದಂತೆ ಎ.ಪಿ.ಎಂ.ಸಿ. ಕಾಯ್ದೆಯನ್ನು ಪುನಃ ಹಿಂದಿನ ರೀತಿಯಂತೆ ತಿದ್ದುಪಡಿ ಮಾಡಲು ಹೊರಟಿರುವ ಸರಕಾರದ ನಿರ್ಧಾರ ದಿಂದ ಅಕ್ಕಿಗಿರಣಿಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುವು ದಿಲ್ಲ. ಇದರಿಂದ ಅಕ್ಕಿ ಗಿರಣಿ ಉದ್ಯಮಗಳು ತೀವ್ರತರವಾದ ತೊಂದರೆಗೆ ಸಿಲುಕುತ್ತದೆ. ಸರಕಾರ ಅಕ್ಕಿ ಗಿರಣಿದಾರರ ಬೇಡಿಕೆ ಈಡೇರಿಸದಿದ್ದರೆ ಪ್ರತಿಭಟನೆ ನಡೆಸಲಾಗುವುದೆಂದರು.
ತಮ್ಮ ಮನವಿಯನ್ನು ಸರಕಾರವು ಪುರಸ್ಕರಿಸದೇ ಇದ್ದಲ್ಲಿ ರಾಜ್ಯದ ಅಕ್ಕಿ ಗಿರಣಿಗಳ ಹಿತಾಸಕ್ತಿಗೆ ಪ್ರತಿಕೂಲವಾದ್ದಲ್ಲಿ, ಅಕ್ಕಿ ಗಿರಣಿಗಳು ಕಾರ್ಯನಿರ್ವಹಿಸದೆ ಸ್ಥಗಿತಗೊಳ್ಳುವ ಅನಿವಾರ್ಯತೆ ಸೃಷ್ಟಿಯಾಗುತ್ತದೆ. ಅಂತಹ ಸಂದಿಗ್ಧ ಪರಿಸ್ಥಿತಿಗೆ ಅವಕಾಶ ನೀಡಬಾರದೆಂದು ಸರಕಾರಕ್ಕೆ ಮನವರಿಕೆ ಮಾಡುತ್ತಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಅಕ್ಕಿ ಗಿರಣಿ ಸಂಘದ ಎನ್.ಆರ್.ವಿಶ್ವರಾಧ್ಯ,  ಕೆ.ಜಿ.ಮುನಿಗಂಗಪ್ಪ, ಟಿ.ಎಸ್.ಪ್ರಿತೇಶ್, ಕೆ.ನಂಜುಂಡ ಪ್ರಸಾದ್, ಎಸ್.ಆರ್.ಜಗನ್ನಾಥ್ ಶೆಟ್ಟಿ, ಕೆ.ನಟೇಶ್ ಬಾಬು ಇದ್ದರು.