ತುಮಕೂರು: ನಗರದ ಶೇಷಾದ್ರಿಪುರಂ ಪದವಿ ಕಾಲೇಜಿನ ‘ವಿವೇಕಾನಂದ ಅಧ್ಯಯನ ಕೇಂದ್ರ’ವು ಆಂತರಿಕ ಗುಣಮಟ್ಟದ ಭದ್ರತಾ ಘಟಕದ ಸಹಯೋಗದೊಂದಿಗೆ ‘ವಿವೇಕ-ಭಾರತ ಅನಾವರಣ’ ಎಂಬ ಶೀರ್ಷಿಕೆಯಡಿ ಮಕ್ಕಳಲ್ಲಿ ಪುಸ್ತಕ ಓದುವ ಅಭ್ಯಾಸವನ್ನು ಮೂಡಿಸುವ ಸದುದ್ದೇಶ ದಿಂದ ‘ಒಂದು ದಿನದ ಭಿತ್ತಿಚಿತ್ರ ಪ್ರದರ್ಶನ ಮತ್ತು ಪುಸ್ತಕ ಮೇಳ’ವನ್ನು ಕಾಲೇಜಿನ ಆವರಣದಲ್ಲಿ ಆಯೋಜಿಸಲಾಗಿತ್ತು.
ಪತ್ರಿಕೋದ್ಯಮಿ ಶಿಲ್ಪಾ ಉದ್ಘಾಟಿಸಿ ಮಾತನಾಡಿ, ಪುಸ್ತಕ ಓದುವ ಅಭ್ಯಾಸವು ನಮಗೆ ಜ್ಞಾನವನ್ನು ನೀಡುತ್ತದೆ, ನಮ್ಮ ಶಬ್ದ ಕೋಶವನ್ನು ಮತ್ತು ಆಲೋಚನಾ ಶಕ್ತಿಯನ್ನು ಹೆಚ್ಚಿಸುತ್ತದೆ. ನಾವು ಕಠಿಣ ಪರಿಸ್ಥಿತಿಗಳಲ್ಲಿದ್ದಾಗ ಪುಸ್ತಕಗಳು ನಮ್ಮ ಅತ್ಯುತ್ತಮ ಮಾರ್ಗದರ್ಶಿಯಾಗಿ ನಮಗೆ ಸಹಾಯ ಮಾಡುತ್ತವೆ. ಪ್ರತಿ ವಯೋಮಾನದ ಜನರಲ್ಲಿನ ಒತ್ತಡದ ಮಟ್ಟವನ್ನು ನಿವಾರಿಸಲು ಪುಸ್ತಕಗಳನ್ನು ಓದುವುದು ಉತ್ತಮ ಮಾರ್ಗವಾಗಿದೆ ಎಂದು ತಿಳಿಸಿದರು.
ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಕೆ ವಿ ಅನಸೂಯ ಮಾತನಾಡುತ್ತಾ, ಸ್ವಾಮಿ ವಿವೇಕಾನಂದರ ಶ್ರೇಷ್ಠ ಸಂದೇಶ ಮತ್ತು ಉದಾತ್ತ ಚಿಂತನೆಗಳು ಸ್ಪೂರ್ತಿಯ ಕಿಡಿಯಾಗಿದ್ದು, ಅದನ್ನು ಹೊತ್ತಿಸುವಂತಹ ಈ ಕಾರ್ಯಕ್ರಮವು ‘ಸ್ವಾಮಿ ವಿವೇಕಾ ನಂದರ ಮಹಾಸಮಾಧಿ ದಿನ’ವಾದ ಇಂದು ಆಯೋಜನೆಗೊಂಡಿರುವದು ಅತ್ಯಂತ ವಿಶೇಷ. ಈ ಚಿಂತನೆಗಳನ್ನು ಭಾವಿಸಲು ನಮಗೆ ಹೃದಯ ವೈಶಾಲ್ಯತೆ ಇರಬೇಕಾಗುತ್ತದೆ. ಆಗ ನಮ್ಮ ಅಂತರಂಗದಿಂದ ಚೈತನ್ಯದ ಚಿಲುಮೆ ಚಿಮ್ಮುವುದನ್ನು ನಾವೇ ಅನುಭವಿಸಬಹುದು ಎಂದು ತಿಳಿಸಿದರು.
ಸ್ವಾಮಿ ವಿವೇಕಾನಂದರು ಮತ್ತು ಭಾರತೀಯ ಸನಾತನ ಪರಂಪರೆಯ ಪರಿಚಯನ್ನು ಪರಿಚಯಿಸುವ ನಿಟ್ಟಿನಲ್ಲಿ ಆಯೋಜಿ ಸಿದ್ದ ‘ವಿವೇಕ-ಭಾರತ ಅನಾವರಣ’ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು. ತುಮಕೂರು ನಗರದ ವಿವಿಧ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳಿಂದ ಸುಮಾರು 600ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿವೇಕಾನಂದ ಅಧ್ಯಯನ ಕೇಂದ್ರದ ಸ್ವಯಂಸೇವಕರಿಂದ ಪ್ರಾರ್ಥನೆ ನೆರವೇರಿತು.
ದ್ವಿತೀಯ ಬಿ.ಕಾಂ ವಿದ್ಯಾರ್ಥಿನಿ ಪೂರ್ವಿಕ ಕಶ್ಯಪ್ ಎಲ್ಲರನ್ನು ಸ್ವಾಗತಿಸಿದರು, ಸಾನಿಯಾ ಅಮ್ರಿನ್ ಕಾರ್ಯಕ್ರಮದ ವಂದನಾ ರ್ಪಣೆ ನೆರವೇರಿಸಿದರು. ದ್ವಿತೀಯ ಬಿ.ಕಾಂ ವಿದ್ಯಾರ್ಥಿನಿ ಮೋನಿಷಾ ಕಾರ್ಯಕ್ರಮವನ್ನು ನಿರೂಪಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ಜಗದೀಶ್ ಅಧ್ಯಕ್ಷೀಯ ನುಡಿಗಳನ್ನಾಡಿದರು . ವಿವೇಕಾನಂದ ಅಧ್ಯಯನ ಕೇಂದ್ರದ ಸಂಯೋಜಕ ರಾದ ಪ್ರೊ. ರಮ್ಯ ಕಲ್ಲೂರ್ ಮತ್ತು ಪ್ರೊ. ಶ್ರೀನಿಧಿ ಹಾಗೂ ಪ್ರಾಧ್ಯಾಪಕರುಗಳು ಉಪಸ್ಥಿತರಿದ್ದರು.