ಮಹಾದೇವ ಬಸರಕೋಡ
ಶಿಕ್ಷಣದ ಅಗತ್ಯದ ಕುರಿತು ಶಿಕ್ಷಕರು-ಪಾಲಕರು ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕಿದೆ. ಬಡಕುಟುಂಬಗಳ ಆರ್ಥಿಕ ಸ್ವಾವಲಂಬ ನೆಯ ಕುರಿತು ಸರಕಾರಗಳು ಭಿನ್ನವಾಗಿ ಯೋಚಿಸಬೇಕಿದೆ. ಶಿಕ್ಷಣ ಮುಗಿದ ನಂತರ ಉದ್ಯೋಗಾವಕಾಶ ಕಲ್ಪಿಸುವಂತಾಗಲು ‘ಕೌಶಲಾಭಿವೃದ್ಧಿ ಶಿಕ್ಷಣ’ಕ್ಕೆ ಒತ್ತು ನೀಡಬೇಕಿದೆ.
‘ಶಿಕ್ಷಣ’ ಎಂಬುದು ಮಗುವಿನ ಸರ್ವತೋಮುಖ ಅಭಿವೃದ್ಧಿಯ ಮಹದಾಸೆಯನ್ನು ತನ್ನೊಡಲಲ್ಲಿ ಇರಿಸಿಕೊಂಡು, ನಮ್ಮ ಬದುಕಿನಲ್ಲಿ ಮೊದಲಿನಿಂದಲೂ ಹಾಸುಹೊಕ್ಕಾ ಗಿದ್ದುಕೊಂಡು ಬಂದಿದೆ. ಪ್ರತಿ ಮಗುವಿನಲ್ಲೂ ಅಂತರ್ಗತವಾಗಿರುವ ಶಕ್ತಿಯನ್ನು ಜಗತ್ತಿ ನೆದುರು ಅನಾವರಣಗೊಳಿಸಿ, ಮಾನವ ಸಂಪನ್ಮೂಲವನ್ನು ಸಮರ್ಥವಾಗಿ ಸೃಜಿಸುವ ಗುರುತರ ಜವಾಬ್ದಾರಿ ಶಿಕ್ಷಣದ್ದು.
ಹೀಗಾಗಿ ಶಿಕ್ಷಣವು ಮಗುವಿನ ಮೂಲಭೂತ ಹಕ್ಕಾಗಿದೆ; ಇದನ್ನು ಒದಗಿಸಬೇಕಾದ್ದು ಪೋಷಕರ, ಸರಕಾರದ ಜವಾಬ್ದಾರಿ ಹಾಗೂ ಆದ್ಯಕರ್ತವ್ಯ ಎಂದೇ ಪರಿಗಣಿಸಲಾಗಿದೆ. ಸರಕಾರ ಒದಗಿಸುವ ಉಚಿತ ಸಮವಸ, ಪಠ್ಯಪುಸ್ತಕ, ಬಸ್ ಪಾಸ್‌ಗಳು, ವಿದ್ಯಾರ್ಥಿ ವೇತನ ಗಳು, ಅಕ್ಷರ ದಾಸೋಹ, ವಸತಿ ಶಾಲೆಗಳು, ವಿದ್ಯಾರ್ಥಿ ನಿಲಯಗಳು ಸೇರಿದಂತೆ ಹತ್ತು ಹಲವು ಪ್ರೋತ್ಸಾಹ ದಾಯಕ ಯೋಜನೆಗಳು ಈ ದಿಸೆಯಲ್ಲಿ ಗಮನಾರ್ಹ ಬದಲಾವಣೆ ಯನ್ನು ತಂದಿವೆ.
ಇಷ್ಟಾಗಿಯೂ, ರಾಜ್ಯದಲ್ಲಿ ಪ್ರೌಢಶಾಲಾ ಹಂತದಲ್ಲಿ ಶಾಲೆಯನ್ನು ಅರ್ಧಕ್ಕೇ ಬಿಟ್ಟವರ ಪ್ರಮಾಣವು ೨೦೨೧-೨೩ರ ಅವಧಿ ಯಲ್ಲಿ ಶೇ. ೧೪.೬ರಷ್ಟು ಎಂದು ತಿಳಿದುಬಂದಿದ್ದು, ಇದು ರಾಷ್ಟ್ರೀಯ ಸರಾಸರಿಗಿಂತ ಅಧಿಕ ಎಂದು ಯೋಜನಾ ಅನುಮೋದನೆ ಮಂಡಳಿಯ ಸಭೆಯಲ್ಲಿ ಉಲ್ಲೇಖಿಸಲಾಗಿದೆ. ಹೀಗಾಗಿ ಇದು ಕೊಂಚ ಆತಂಕಕಾರಿ ಬೆಳವಣಿಗೆಯಾಗಿದೆ ಎಂಬುದನ್ನು ಅಲ್ಲಗಳೆಯಲಾಗದು. ಇದಕ್ಕೆ ಕಾರಣಗಳನ್ನು ಹುಡುಕುತ್ತ ಹೋದಾಗ ಅವು ನಮಗೆ ಅಪರಿಚಿತವೇನಲ್ಲ ಎಂಬುದು ಅರಿವಾಗುತ್ತದೆ.
ಅವನ ಹೆಸರು ಸುರೇಶ. ಸರಕಾರಿ ಪ್ರೌಢಶಾಲೆಯಲ್ಲಿ ೮ನೆಯ ತರಗತಿಗೆ ಪ್ರವೇಶ ಪಡೆದು ಹಾಜರಾಗಿ, ಪರೀಕ್ಷೆಯಲ್ಲಿ ಉತ್ತೀರ್ಣನೂ ಆದ. ಆದರೆ ೯ನೆಯ ತರಗತಿ ಪ್ರಾರಂಭವಾಗುತ್ತಿದ್ದಂತೆ ಶಾಲೆಗೆ ಆಗಾಗ ‘ಚಕ್ಕರ್’ ಹಾಕತೊಡಗಿದ. ತರಗತಿಯ ಶಿಕ್ಷಕರು ಈ ಕುರಿತು ಪ್ರಶ್ನಿಸಿದರೆ ಏನೋ ಒಂದು ಕಾರಣ ಹೇಳಿ ಕಾಲ ತಳ್ಳಲು ಶುರುಮಾಡಿದ. ಒಮ್ಮೆ ಸುರೇಶನನ್ನು ಹುಡುಕಿಕೊಂಡು ಹೊರಟ ಶಿಕ್ಷಕರು ಆವನ ಮನೆಯನ್ನು ಪ್ರವೇಶಿಸುತ್ತಿದ್ದಂತೆ ದಿಗ್ಭ್ರಾಂತರಾಗಬೇಕಾಗಿ ಬಂತು. ಕಾರಣ ಕಣ್ಣಿಗೆ ರಾಚುವಂತಿದ್ದ ಮನೆಯ ವಾಸ್ತವಿಕ ಪರಿಸ್ಥಿತಿ. ಸುರೇಶನ ತಾಯಿ ಸಾಕಷ್ಟು ವರ್ಷಗಳ ಹಿಂದೆಯೇ ತೀರಿಹೋಗಿದ್ದರೆ, ಆಸರೆಯಾಗಿದ್ದ ಅಪ್ಪ ಕೂಡ ಹಾಸಿಗೆ ಹಿಡಿದು ಮಲಗಿದ್ದರು. ಅವರನ್ನು ನೋಡಿಕೊಳ್ಳುವುದಕ್ಕೆ ಸುರೇಶನ ಹೊರತಾಗಿ ಬೇರಾರೂ ಇರಲಿಲ್ಲ.
Read E-Paper click here
‘ಸರ್, ಅನಾರೋಗ್ಯಪೀಡಿತ ತಂದೆಯನ್ನು ಆರೈಕೆ ಮಾಡುವುದರ ಜತೆಜತೆಗೆ ಹೊಟ್ಟೆ ತುಂಬಿಸಿಕೊಳ್ಳುವುದಕ್ಕೂ ಹೆಣಗಾಡ ಬೇಕಾದ ಪರಿಸ್ಥಿತಿಯಿದೆ; ಹೀಗಿರುವಾಗ ಶಾಲೆಗೆ ಬರುವುದಾದರೂ ಹೇಗೆ ಸರ್‘ ಎಂಬ ಸುರೇಶನ ಪ್ರಶ್ನೆಗೆ ಶಿಕ್ಷಕರ ಕಣ್ಣಾಲಿಗಳು
ತುಂಬಿ ಬಂದಿದ್ದವು. ಅವನ ಸಮಸ್ಯೆಗೆ ಶಿಕ್ಷಕರು ಮಾನವೀಯ ನೆಲೆಗಟ್ಟಿನಲ್ಲಿ ಸ್ಪಂದಿಸಿದರಾರೂ, ಶಾಲೆಯ ಮುಖ್ಯವಾಹಿನಿಗೆ
ಅವನನ್ನು ಕರೆತರುವಲ್ಲಿ ಸೋತುಹೋಗಿದ್ದರು. ೯ನೆಯ ತರಗತಿಯಲ್ಲಿದ್ದಾಗ ಆಗಾಗ ಚಕ್ಕರ್ ಹೊಡೆಯುತ್ತಿದ್ದ ಸುರೇಶ ೧೦ನೆಯ ತರಗತಿಗೆ ಉತ್ತೀರ್ಣನಾದರೂ, ಸಂಪೂರ್ಣ ಗೈರುಹಾಜರಾಗುತ್ತಿರುವುದು ಶಿಕ್ಷಕರ ಅರಿವಿಗೆ ಬಂತು. ಸುರೇಶನ ಸಮಸ್ಯೆ ಬಗೆಹರಿಸ ಲೆಂದು ತರಗತಿಯ ಶಿಕ್ಷಕರು ಹಲವು ಬಾರಿ ದೂರವಾಣಿಯಲ್ಲಿ ಆತನ ಒಂದಷ್ಟು ಸಂಬಂಧಿಕರೊಂದಿಗೆ ಚರ್ಚಿಸಿದಾಗಲೂ ಯಾವುದೇ ಪ್ರಯೋಜನವಾಗಲಿಲ್ಲ.
ಕೊನೆಗೊಮ್ಮೆ ಖುದ್ದಾಗಿ ಅವನ ಮನೆಗೆ ಭೇಟಿಯಿತ್ತಾಗ, ೯ನೆಯ ತರಗತಿಯ ವಾರ್ಷಿಕ ಪರೀಕ್ಷೆಯ ನಂತರ ಬಂದ ಬೇಸಿಗೆ ರಜೆಯಲ್ಲಿ ಹಿರಿಯರ ಅಸಮ್ಮತಿಯ ನಡುವೆಯೂ ಆತ ಮಂಗಳೂರಿಗೆ ಹೋಗಿದ್ದುದು ಗೊತ್ತಾಯಿತು. ಅಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡು ಕೈಗೆ ಒಂದಷ್ಟು ಹಣ ಸೇರುತ್ತಿದ್ದಂತೆ ಸ್ಮಾರ್ಟ್ ಫೋನು ಖರೀದಿಸಿದ. ದಿನಗಳೆದಂತೆ ಕೈಯಲ್ಲಿ ಸಾಕಷ್ಟು ಹಣ ಓಡಾಡ ತೊಡಗಿದಾಗ ತಾತ್ಕಾಲಿಕವಾಗಿ ಖುಷಿ ನೀಡುವ ‘ಭ್ರಾಂತಿಯ ಬಾಬತ್ತು’ಗಳಿಗೆ ಒಳಗಾದ. ವಯಸ್ಸಿಗೆ ಮೀರಿದ ಆಕರ್ಷಣೆ ಗಳ ಕಪಿಮುಷ್ಟಿಗೆ ಸಿಲುಕಿ ಆತ ಶಾಲೆಯ ಅನಿವಾರ್ಯದಿಂದ ಸಾಕಷ್ಟು ದೂರಕ್ಕೆ ಸಾಗಿದ್ದ.
ಶಿಕ್ಷಕರು, ಮನೆಯ ಹಿರಿಯರು, ನೆರೆಹೊರೆಯವರು ಸೇರಿದಂತೆ ಯಾರ ಮಾತಿಗೂ ಕಿವಿಗೊಡದ ಹಂತಕ್ಕೆ ಸುರೇಶ ತಲುಪಿ ಯಾಗಿತ್ತು….. ಮೇಲಿನ ಕಥಾನಕ ಸಾಂಕೇತಿಕವಷ್ಟೇ. ಗಂಡು ಮಕ್ಕಳ ಪ್ರೌಢಶಿಕ್ಷಣಕ್ಕೆ ಒಂದಷ್ಟು ದೂರ ಪಯಣಿಸುವ ಅನಿವಾ ರ್ಯದಲ್ಲಿ, ಅವರ ಹಾದಿತಪ್ಪುವಿಕೆಗೆ ಸಂಬಂಧಿಸಿದ ಪಾಲಕರ ಆತಂಕವಿನ್ನೂ ದೂರವಾಗಿಲ್ಲ. ಮತ್ತೊಂದೆಡೆ, ‘ಹೆಣ್ಣು ಮಕ್ಕಳು ಕೊಟ್ಟ ಮನೆಗೆ ಹೋಗಲೇಬೇಕಲ್ಲ? ಅವರನ್ನು ಎಷ್ಟು ಓದಿಸಿದರೇನು, ಕಸ- ಮುಸುರೆ ಮಾಡುವುದು, ಬಟ್ಟೆ ತೊಳೆಯುವುದು ಅವರಿಗೆ ತಪ್ಪೀತೇ?’ ಎನ್ನುವಂಥ ಅಸಂಗತ ನಿಲುವುಗಳು ನಮ್ಮ ಸಮಾಜದ ಕೆಲವರಲ್ಲಿ ಇಂದಿಗೂ ಮಡುಗಟ್ಟಿವೆ.
ಇಷ್ಟು ಸಾಲದೆಂಬಂತೆ, ಹಲವು ಬಿಗಿನಿಯಮಗಳ ನಡುವೆಯೂ ಕಾನೂನಿನ ಕಣ್ಣಿಗೆ ಮಣ್ಣೆರಚಿ ಬಾಲ್ಯವಿವಾಹಗಳು ನಡೆಯು ತ್ತಲೇ ಇವೆ. ಬಾಲ ಕಾರ್ಮಿಕ ಸಮಸ್ಯೆಗಳಿಂದ ಸಮಾಜಕ್ಕಿನ್ನೂ ಸಂಪೂರ್ಣ ಮುಕ್ತಿ ದೊರೆತಿಲ್ಲ. ಸಾಕಷ್ಟು ಓದಿದಾಗಲೂ ಉದ್ಯೋಗದ ಖಾತರಿ ಇಲ್ಲದಿರುವುದು ವಿದ್ಯಾರ್ಥಿಗಳಲ್ಲೂ ಪಾಲಕರಲ್ಲೂ ನಮ್ಮ ವ್ಯವಸ್ಥೆಯ ಬಗ್ಗೆ ಉದಾಸೀನ ಭಾವನೆ ಮೂಡಲು ದಾರಿಮಾಡಿ ಕೊಟ್ಟಿದೆ. ತತ್ಪರಿಣಾಮವಾಗಿ, ಹದಿಹರೆಯದ ವಯೋಸಹಜ ಆಕರ್ಷಣೆಗಳಿಗೆ, ಮನೋಚಾಂಚಲ್ಯ ಗಳಿಗೆ ಅವರು ಒಳಗಾಗಿ, ವಿವೇಚನೆಯಿಲ್ಲದೆ ಬದುಕನ್ನು ಹಾಳುಮಾಡಿಕೊಳ್ಳುತ್ತಿರುವುದಕ್ಕೆ ದೊಡ್ಡವರೆನಿಸಿಕೊಂಡವರೇ ಸಾಕ್ಷಿಯಾಗಿಬಿಟ್ಟಿದ್ದೇವೆ; ಸುಲಭವಾಗಿ ಕೈಗೆಟುಕುತ್ತಿರುವ ಸಾಮಾಜಿಕ ಜಾಲತಾಣದ ಸಾಂಗತ್ಯ ಹಾಗೂ ಅದರಲ್ಲಿ ಬಿಂಬಿತ ವಾಗುವ ಅಪಸವ್ಯಗಳ ಪ್ರಭಾವದಿಂದ ಮಕ್ಕಳು ದಾರಿತಪ್ಪುತ್ತಿದ್ದಾರೆ, ಅಂಥ ಕೂಪದಿಂದ ಅವರನ್ನು ಸಂಪೂರ್ಣವಾಗಿ ಹೊರ ತರಲು ನಮಗೆ ಸಾಧ್ಯವಾಗುತ್ತಿಲ್ಲ.
ಒಟ್ಟಾರೆ ಹೇಳುವುದಾದರೆ, ಈ ಎಲ್ಲ ಅನಪೇಕ್ಷಿತ ಅಂಶಗಳು ಮಕ್ಕಳ ಪ್ರೌಢಹಂತದ ಶಿಕ್ಷಣದ ಮೇಲೆ ಪರಿಣಾಮ ಬೀರಿ ಅವರನ್ನು ಪುಸ್ತಕದಿಂದ ವಿಮುಖವಾಗಿಸುತ್ತಿವೆ, ಇಲ್ಲವೇ ಶಿಕ್ಷಣವನ್ನು ಅರ್ಧಕ್ಕೇ ನಿಲ್ಲಿಸುವುದಕ್ಕೆ ಕಾರಣವಾಗುತ್ತಿವೆ. ಈ ಸಮಸ್ಯೆಗಳೆಲ್ಲ ಬೆಂಬಿಡದ ಬೇತಾಳದಂತೆ ನಮಗೆ ತೋರಿದರೂ, ಪ್ರಯತ್ನಿಸಿದರೆ ಇವನ್ನು ಪರಿಹರಿಸುವುದು ಕಷ್ಟವೇನಲ್ಲ. ಕಾರಣ ಇಂಥ ಪ್ರತಿಯೊಂದು ಬೇನೆಯೂ ತನ್ನೊಡಲಲ್ಲಿ ಪರಿಹಾರವನ್ನೂ ಅಡಗಿಸಿಟ್ಟುಕೊಂಡಿರುತ್ತದೆ. ಅವನ್ನು ಹೆಕ್ಕಿ ತೆಗೆಯುವ ತಾಳ್ಮೆ ಇರಬೇಕಷ್ಟೇ.
ಎಲ್ಲಕ್ಕಿಂತ ಮುಖ್ಯವಾಗಿ ಪ್ರತಿಯೊಬ್ಬ ಶಿಕ್ಷಕರು ಮತ್ತು ಪಾಲಕರು ಶಿಕ್ಷಣದ ಅಗತ್ಯ- ಅನಿವಾರ್ಯದ ಕುರಿತು ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕಿದೆ. ಬಡಕುಟುಂಬಗಳ ಆರ್ಥಿಕ ಸ್ವಾವಲಂಬನೆಯ ಕುರಿತು ಸರಕಾರಗಳು ಇನ್ನಷ್ಟು ಭಿನ್ನವಾಗಿ ಯೋಚಿಸಬೇಕಿದೆ. ಎಡೆಬಿಡದ ಪ್ರಯತ್ನಗಳ ನಡುವೆಯೂ ಅಲ್ಲಲ್ಲಿ ಉಳಿದುಕೊಂಡಿರುವ ಲಿಂಗ ತಾರತಮ್ಯ ಮನೋಭಾವ, ಬಾಲ್ಯವಿವಾಹ, ಬಾಲಕಾರ್ಮಿಕ ಸಮಸ್ಯೆಗಳಂಥ ಪಿಡುಗುಗಳ ಮೂಲೋತ್ಪಾಟನೆಗೆ ಪ್ರಾಮಾಣಿಕ ಯತ್ನಗಳಾಗಬೇಕಿದೆ.
ಶಿಕ್ಷಣ ಮುಗಿದ ನಂತರ ಸಾಧ್ಯವಾದಷ್ಟರ ಮಟ್ಟಿಗಾದರೂ ಉದ್ಯೋಗಾವಕಾಶಗಳನ್ನು ಕಲ್ಪಿಸುವಂತಾಗಲು ‘ಕೌಶಲಾಭಿವೃದ್ಧಿ ಶಿಕ್ಷಣ’ಕ್ಕೆ ಹೆಚ್ಚಿನ ಒತ್ತು ನೀಡಬೇಕಿದೆ. ವಿವಿಧ ಶೈಕ್ಷಣಿಕ ಹಂತಗಳಲ್ಲಿ ತಂತ್ರಜ್ಞಾನದ ಸಾಧ್ಯತೆಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವಂತಾಗಲು ಸರಕಾರ ಗಟ್ಟಿ ನಿಲುವು ಗಳನ್ನು ತಳೆಯಬೇಕಿದೆ. ಶಾಲೆಗಳ ವಾತಾವರಣವನ್ನು ‘ವಿದ್ಯಾರ್ಥಿ-ಸ್ನೇಹಿ’ ಆಗಿಸಬೇಕಾಗಿದೆ. ನೀತಿಶಿಕ್ಷಣವನ್ನು ಶೈಕ್ಷಣಿಕ ಚಟುವಟಿಕೆಗಳ ಅವಿಭಾಜ್ಯ ಅಂಗವಾಗಿಸಿಕೊಂಡು ಅದಕ್ಕೆ ಇನ್ನಷ್ಟು ಆದ್ಯತೆ ನೀಡಬೇಕಿದೆ.
ಸ್ವಸ್ಥ ಸಮಾಜದ ನಿರ್ಮಾಣದಲ್ಲಿ, ಮಾನವೀಯತೆಯನ್ನು ಪೋಷಿಸುವಲ್ಲಿ ಶಿಕ್ಷಣದ ಪಾತ್ರ ಬಹಳ ಮಹತ್ತರವಾದುದು. ನಮ್ಮ ಬಹುತೇಕ ಸಮಸ್ಯೆಗಳಿಗೆ ಶಿಕ್ಷಣವೊಂದೇ ಪರಿಹಾರ ಎಂಬ ಅಂತಿಮ ಸತ್ಯವನ್ನು ನಾವೆಲ್ಲರೂ ಮನಗಾಣಬೇಕಾಗಿದೆ. ಈ ನಿಟ್ಟಿ ನಲ್ಲಿ ಇನ್ನಷ್ಟು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ತಕ್ಷಣ ದಿಂದಲೇ ಸನ್ನದ್ಧರಾಗಬೇಕಿದೆ.