Friday, 13th December 2024

ಪುಲಸ ಮೀನು 13,000 ರುಪಾಯಿಗೆ ಮಾರಾಟ..!

ಗೋದಾವರಿ: ಆಂಧ್ರಪ್ರದೇಶದಲ್ಲಿ ತೆಲುಗಿನಲ್ಲಿ ಇಲಿಸ್ ಮೀನನ್ನು ಪುಲಸ ಎಂದು ಕರೆಯುತ್ತಾರೆ. ಇತ್ತೀಚೆಗೆ ಗೋದಾವರಿಯ ಕುಟುಂಬವೊಂದಕ್ಕೆ 2 ಕಿಲೋ ತೂಕದ ಪುಲಸ ಮೀನು ಸಿಕ್ಕಿದ್ದು , ಇದು ಹರಾಜಿನಲ್ಲಿ ಬರೋಬ್ಬರಿ 13,000 ರುಪಾಯಿಗೆ ಮಾರಾಟವಾಗಿ ಹೊಸ ದಾಖಲೆ ಬರೆದಿದೆ .

ಗೋದಾವರಿ ನದಿಯಲ್ಲಿ ಪ್ರವಾಹ ಉಕ್ಕೇರಿ ಕೆಂಪು ನೀರು ಪ್ರವಹಿಸಿದಾಗ ಜನರಿಗೆ ಪುಲಸದ ನಿರೀಕ್ಷೆ ಶುರು ವಾಗುತ್ತದೆ. ಜುಲೈನಿಂದ ಸೆಪ್ಟಂಬರ್ ಅವಧಿಯಲ್ಲಿ ಗೋದಾವರಿ ನದಿ ಪ್ರವಾಹ ಎರಗಿದಾಗ ನೀರು ವಿವಿಧ ಖನಿಜಗಳ ಕಾರಣಕ್ಕೆ ಕೆಂಪಾಗಿರುತ್ತದೆ. ಆಂಧ್ರದಲ್ಲಿ ಪುಲಸ ಮೀನು ಸಿಗುವುದು ಗೋದಾವರಿ ನದಿಯ ಈ ಕೆಂಪು ನೀರಿನಿಂದಲೇ. ಇದರ ರುಚಿಯೂ ಅದ್ಬುತವಾದುದು. ಹೀಗಾಗಿ, ಪುಲಸ ಮೀನಿಗೆ ಆಂಧ್ರದಲ್ಲಿ ಭಾರೀ ಬೇಡಿಕೆ ಇದೆ. ಇದೀಗ ಗೋದಾವರಿ ನದಿ ನೀರಿನಲ್ಲಿ ಈ ಸೀಸನ್​ನ ಮೊದಲ ಪುಲಸ ಮೀನು ಪತ್ತೆಯಾಗಿದೆ.

ಯಾನಂನಲ್ಲಿರುವ ಗೋದಾವರಿ ನದಿಗೆ ಮೀನುಗಾರಿಕೆಗೆ ತೆರಳಿದ್ದ ಮೀನುಗಾರರಿಗೆ ಮೊಟ್ಟಮೊದಲ ಬಾರಿಗೆ 2 ಕೆ.ಜಿ. ತೂಕದ ಇಲಿಸ್ ಅಥವಾ ಪುಲಸ ಮೀನು ಸಿಕ್ಕಿದೆ. ಪಾರ್ವತಿ ಮತ್ತು ಸತ್ಯವತಿ ಎಂಬುವವರು ಹರಾಜಿನಲ್ಲಿ ಈ ಮೀನನ್ನು ಮಾರಿದರು. ಭೀಮಾವರದ ವ್ಯಕ್ತಿಯೊಬ್ಬರು ಹರಾಜಿನಲ್ಲಿ ಈ 2 ಕಿಲೋ ತೂಕದ ಪುಲಸನ ಮೀನನ್ನು ಬರೋಬ್ಬರಿ 15,000 ರುಪಾಯಿಗೆ ಖರೀದಿ ಮಾಡಿದರು.

ಗೋದಾವರಿ ನದಿ ನೀರಿನಲ್ಲಿ ಪುಲಸ ಮೀನು 1 ತಿಂಗಳು ಮಾತ್ರ ಸಿಗುತ್ತದೆ. ಹೀಗಾಗಿ, ಇದಕ್ಕೆ ವಿಪರೀತ ಬೇಡಿಕೆ ಇದೆ. ಪಾಂಫ್ರೆಟ್, ಮಂಜ್ರಮ್ ಇತ್ಯಾದಿ ಮೀನಿ ಗಿಂತಲೂ ಇದರ ಬೆಲೆ ಹೆಚ್ಚು. ಬಾಂಗ್ಲಾದೇಶದಲ್ಲಿ ಇದರ ಲಭ್ಯತೆ ಹೆಚ್ಚು. ಇಲಿಶ್ ಎಂದು ಕರೆಯಲಾಗುವ ಈ ಮೀನು ಬಾಂಗ್ಲಾದೇಶದ ಪ್ರಮುಖ ಆದಾಯ ಮೂಲ ಗಳಲ್ಲಿ ಒಂದೆನಿಸಿದೆ. ತಮಿಳುನಾಡಿನಲ್ಲಿ ಈ ಮೀನಿಗೆ ಉಳ್ಳ ಮೀನ್ ಎಂದು ಕರೆಯುತ್ತಾರೆ.

ಬೆಂಗಳೂರಿನಲ್ಲಿ ಈ ಮೀನು ವಿರಳವಾಗಿ ಲಭ್ಯ ಇದೆ. ಇಲ್ಲಿ ಇದರ ಬೆಲೆ ಕಿಲೋಗೆ 4 ಸಾವಿರ ರೂಗಿಂತಲೂ ಹೆಚ್ಚು.