ಹಿಂದಿರುಗಿ ನೋಡಿದಾಗ
ಕ್ರಿ.ಶ.೬೦೦ರ ಹೊತ್ತಿಗೆ ಅರಬ್ ವ್ಯಾಪಾರಿಗಳು ಗಸಗಸೆ ಗಿಡವನ್ನು ಭಾರತೀಯರಿಗೆ ಪರಿಚಯಮಾಡಿಕೊಟ್ಟರು. ನಂತರ ಭಾರತೀಯರೂ ಗಸಗಸೆ ಗಿಡವನ್ನು ಬೆಳೆಯಲಾರಂಭಿಸಿದರು. ಆರಂಭದಲ್ಲಿ ಗಸಗಸೆ ಗಿಡವನ್ನು ಪ್ರಧಾನವಾಗಿ ವೈದ್ಯಕೀಯ ಚಿಕಿತ್ಸೆಯಲ್ಲಿ ನೋವನ್ನು ನಿವಾರಿಸಲು, ನಿದ್ರೆ ತರಿಸಲು ಹಾಗೂ ಕೆಮ್ಮನ್ನು ನಿಗ್ರಹಿಸಲು ಬಳಸುತ್ತಿದ್ದರು.
ಪ್ರಕೃತಿಯು ಮನುಕುಲಕ್ಕೆ ನೀಡಿದ ಒಂದು ಮಹಾನ್ ವರ ಹಾಗೂ ಅತ್ಯಂತ ಕ್ರೂರಶಾಪ ಎಂದರೆ ಅದು ಗಸಗಸೆ ಗಿಡ. ಇದರ ಕಾಯಿಯನ್ನು ಹೆರೆದಾಗ ಬಿಳಿ ಅಥವಾ ನಸುಹಳದಿ ಬಣ್ಣದ ಹಾಲು ಅದರಿಂದ ಒಸರು ತ್ತದೆ. ಈ ಹಾಲನ್ನು ಗಾಳಿಗೆ ಒಡ್ಡಿದಾಗ ಅದು ಗಟ್ಟಿಯಾಗಿ ಗೋಂದಿನಂತಾಗುತ್ತದೆ. ಇದುವೇ ಅಫೀಮು. ಈ ಅಫೀಮನ್ನು ಶುದ್ಧೀಕರಿಸಿದಾಗ ಮಾರ್ಫಿನ್ ಮುಂತಾದ ರಾಸಾಯನಿಕಗಳು ದೊರೆಯುತ್ತವೆ.
ಮಾರ್ಫಿನ್ ಬಳಸಿ ಬದಲಿ ಅಂಗಾಂಗ ಜೋಡಣೆಯಂಥ ಸಂಕೀರ್ಣ ಶಸ್ತ್ರಚಿಕಿತ್ಸೆಗಳನ್ನು ಮಾಡುವ ಕನಸು ಇಂದು ನನಸಾಗಿದೆ. ಹಾಗೆಯೇ ಮನುಕುಲದ, ಮುಖ್ಯ ವಾಗಿ ಯುವಜನತೆಯ ಸರ್ವನಾಶಕ್ಕೆ ಕಾರಣ ವಾಗುವ ರೀತಿಯಲ್ಲಿ ಅಫೀಮು ಚಟವನ್ನು ಉಂಟುಮಾಡುತ್ತಿದೆ. ಈ ಒಂದು ಗಿಡವು ಎರಡು ಯುದ್ಧಗಳಿಗೆ ಕಾರಣ ವಾಗಿದೆ ಎಂದರೆ ಆಶ್ಚರ್ಯವಾಗುತ್ತದೆ. ಆದರೆ ಇದು ಕಟುಸತ್ಯ. ‘ಪೆಪಾವರಮ್ ಸಾಮ್ನಿ-ರಮ್’ ಎಂಬ ವೈಜ್ಞಾನಿಕ ನಾಮಧೇಯವುಳ್ಳ ಈ ಗಸಗಸೆ ಗಿಡದ ಕಾಯಿಗಳು, ಸ್ಪೇನ್ ದೇಶದ ‘ಬ್ಯಾಟ್ ಕೇವ್’ ಎಂಬ ಗುಹೆಯಲ್ಲಿ ದೊರಕಿವೆ.
ನಮ್ಮ ಪೂರ್ವಜರು ಗಸಗಸೆಯನ್ನು ಬಳಸುತ್ತಿದ್ದರು ಎನ್ನುವುದಕ್ಕೆ ನಮಗೆ ದೊರೆತಿರುವ ಅತ್ಯಂತ ಪ್ರಾಚೀನ ಪುರಾವೆ ಇದು. ಈ ಕಾಯಿಗಳು ಕ್ರಿ.ಪೂ.೪೨೦೦ ವರ್ಷಗಳ ಹಿಂದಿನಷ್ಟು ಹಳೆಯವು. ಪ್ರಾಚೀನ ಸುಮೇರಿಯನ್ ಮತ್ತು ಈಜಿಪ್ಷಿಯನ್ ಪುರೋಹಿತರಿಗೆ ಗಸಗಸೆ ಕಾಯಿಯ ಲಕ್ಷಣಗಳು ತಿಳಿದಿದ್ದವು. ಗಸಗಸೆ ಗಿಡವು ಹಿಪ್ರೋಸ್ (ನಿದ್ರಾದೇವತೆ), ನಿಕ್ಸ್ (ಇರುಳಿನ ದೇವತೆ), ಥನಾಟಸ್ (ಮೃತ್ಯುದೇವತೆ) ಮುಂತಾದ ಗ್ರೀಕ್ ದೇವತೆಗಳ ಶಿಲ್ಪಗಳಲ್ಲಿ ಸ್ಥಾನವನ್ನು ಪಡೆದಿದೆ. ಗಸಗಸೆಯು ನೋವನ್ನು ನಿವಾರಿಸುತ್ತಿತ್ತು, ಒಳ್ಳೆಯ ನಿದ್ರೆಯನ್ನು ಕೊಡುತ್ತಿತ್ತು. ಜತೆಗೆ ‘ಸ್ವರ್ಗಾನಂದ’ದ ಅನುಭವವನ್ನು ನೀಡುತ್ತಿತ್ತು. ಕ್ರಿ.ಶ.೬೦೦ರ ಹೊತ್ತಿಗೆ ಅರಬ್ ವ್ಯಾಪಾರಿಗಳು ಗಸಗಸೆ ಗಿಡವನ್ನು ಭಾರತೀಯರಿಗೆ ಪರಿಚಯ ಮಾಡಿಕೊಟ್ಟರು.
ನಂತರ ಭಾರತೀಯರೂ ಗಸಗಸೆ ಗಿಡವನ್ನು ಬೆಳೆಯಲಾರಂಭಿಸಿದರು. ಆರಂಭದ ದಿನಗಳಲ್ಲಿ ಗಸಗಸೆ ಗಿಡವನ್ನು ಪ್ರಧಾನವಾಗಿ ವೈದ್ಯಕೀಯ ಚಿಕಿತ್ಸೆಯಲ್ಲಿ ನೋವನ್ನು ನಿವಾರಿಸಲು, ನಿದ್ರೆ ತರಿಸಲು ಹಾಗೂ ಕೆಮ್ಮನ್ನು ನಿಗ್ರಹಿಸಲು ಬಳಸುತ್ತಿದ್ದರು. ಅರಬ್ ವ್ಯಾಪಾರಿಗಳು ಕ್ರಿ.ಶ.೪೦೦ರ ಹೊತ್ತಿಗೆ ಗಸಗಸೆ ಗಿಡದ ವೈದ್ಯಕೀಯ ಉಪಯೋಗವನ್ನು ಚೀನಿಯರಿಗೆ ಪರಿಚಯ ಮಾಡಿಕಟ್ಟರು. ಗಸಗಸೆ ಗಿಡದ ಪುಡಿಯನ್ನು ತಂಬಾಕಿ ನೊಡನೆ ಬೆರೆಸಿ ಸೇದುವ ಅಭ್ಯಾಸವು ಆಗ್ನೇಯ ಏಷ್ಯಾದಲ್ಲಿ ಆರಂಭವಾಯಿತು ಎನ್ನಲಾಗಿದೆ. ಇದು ಕ್ರಮೇಣ ಚೀನಾ ದೇಶಕ್ಕೂ ಹರಡಿ ಬಲವಾಗಿ ಬೇರುಬಿಟ್ಟಿತು.
ವೈದ್ಯಕೀಯ ಉಪಯೋಗಕ್ಕಿಂತ ಅದು ಕೊಡುವ ನಶೆ, ಖುಷಿ, ಆನಂದಕ್ಕಾಗಿ ಜನರು ಬಳಸುವುದು ಹೆಚ್ಚಿತು. ೧೭೨೯ರ ವೇಳೆಗೆ ಚೀನಾ ದೇಶವು ೨೦೦ ಪೆಟ್ಟಿಗೆ ಅಫೀಮನ್ನು ಆಮದು ಮಾಡಿಕೊಳ್ಳಲಾರಂಭಿಸಿತು. ಒಂದು ಪೆಟ್ಟಿಗೆಯು ೭೭ ಕೆಜಿ ತೂಗುತ್ತಿತ್ತು. ಅದರಲ್ಲಿ ಅಫೀಮಿನ ಉಂಡೆಗಳಿರುತ್ತಿದ್ದವು. ಆರಂಭದಲ್ಲಿ
ಚೀನಿಯರಿಗೆ ಅಗತ್ಯವಿದ್ದ ಅಫೀಮನ್ನು ಪೋರ್ಚುಗೀಸ್ ವ್ಯಾಪಾರಿಗಳು ಪೂರೈಸುತ್ತಿದ್ದರು. ಚೀನಾ ದೇಶದ ಯಾಂಗ್ ಜ಼ೆಂಗ್ ಸಾಮ್ರಾಟನು (೧೬೭೮-೧೭೩೫) ಚೀನಿಯರ ಅಫೀಮು ಬಳಕೆ ಮಿತಿಮೀರಿದ್ದನ್ನು ನೋಡಿದ. ತನ್ನ ದೇಶದಲ್ಲಿ ಅಫೀಮು ಬಳಕೆಯನ್ನು ನಿಷೇಧಿಸಿದ.
ಅಫೀಮು ಬಳಸುವವರಿಗೆ ಉಗ್ರಶಿಕ್ಷೆಯನ್ನು ವಿಧಿಸಿದ. ಭಾರತದಲ್ಲಿ ಬಕ್ಸರ್ ಯುದ್ಧವು ೧೭೬೪ರಲ್ಲಿ ಘಟಿಸಿತು. ಈ ಯುದ್ಧವು ಬ್ರಿಟಿಷ್ ಈಸ್ಟ್ ಇಂಡಿಯ ಕಂಪನಿ ಮತ್ತು ಬಂಗಾಳದ ನವಾಬ ಮೀರ್ ಖಾಸಿಂ, ಅವಧ್ ನವಾಬ ಶೂಜಾ- ಉದ್-ದೌಲ ಮತ್ತು ಮೊಘಲ್ ಸಾಮ್ರಾಜ್ಯದ ಅರಸ ಇಮ್ಮಡಿ ಷಾ ಅಲಂ ಅವರ ಸಂಯುಕ್ತ ಸೇನೆಯ ನಡುವೆ ನಡೆಯಿತು. ಯುದ್ಧವು ಇಂದಿನ ಬಿಹಾರ್ ರಾಜ್ಯದ ಗಂಗಾನದಿಯ ತಟದಲ್ಲಿದ್ದ ಬಕ್ಸರ್ ಎಂಬಲ್ಲಿ ನಡೆದು, ಅದರಲ್ಲಿ ಸುಲ್ತಾನರ
ಸಂಯುಕ್ತ ಸೇನೆ ಸೋತಿತು. ೧೭೬೫ರಲ್ಲಿ ‘ಅಲಹಾಬಾದ್ ಒಪ್ಪಂದ’ವಾಯಿತು. ಆ ಒಪ್ಪಂದದ ಅನ್ವಯ ಈಸ್ಟ್ ಇಂಡಿಯ ಕಂಪನಿಯು ಬಂಗಾಳ, ಬಿಹಾರ ಮತ್ತು ಒಡಿಶಾ ಪ್ರದೇಶಗಳ ಕಂದಾಯವನ್ನು ತಾನೇ ವಸೂಲಿ ಮಾಡಲಾರಂಭಿಸಿತು.
ಈಸ್ಟ್ ಇಂಡಿಯ ಕಂಪನಿಯು ಈ ಪ್ರದೇಶಗಳಲ್ಲಿ ಬೆಳೆಯುತ್ತಿದ್ದ ಅಫೀಮಿನ ಒಡೆತನವನ್ನು ತಾನೇ ತೆಗೆದುಕೊಂಡಿತು. ಅಫೀಮು ರಫ್ತು ಮಾಡುವ ಕ್ಷೇತ್ರದಲ್ಲಿ ಸಾರ್ವಭೌಮತೆಯನ್ನು ಸ್ಥಾಪಿಸಿತು. ಈಸ್ಟ್ ಇಂಡಿಯ ಕಂಪನಿಯು ಬಕ್ಸರ್ ಯುದ್ಧ ದಲ್ಲಿ ೨೮ ದಶಲಕ್ಷ ಪೌಂಡುಗಳ ನಷ್ಟವನ್ನು ಅನುಭವಿಸಿತ್ತು. ಈಸ್ಟ್ ಇಂಡಿಯ ಕಂಪನಿಯು ಚೀನಿ ವ್ಯಾಪಾರಿಗಳ ಹತ್ತಿರ ಚಹವನ್ನು ಕೊಂಡುಕೊಂಡು ಅದನ್ನು ಬ್ರಿಟನ್ನಿಗೆ ಕಳುಹಿಸಿ ಕೊಡಬೇಕಾಗಿತ್ತು. ಚಹವನ್ನು ಬೆಳ್ಳಿಯ ವಿನಿಮಯದ
ಮೂಲಕ ಮಾತ್ರ ಕೊಳ್ಳಬಹುದಾಗಿತ್ತು. ಹೀಗಾಗಿ ಈಸ್ಟ್ ಇಂಡಿಯ ಕಂಪನಿಯು, ಕಲ್ಕತ್ತ ನಗರದಲ್ಲಿ ಅಫೀಮನ್ನು ಬಹಿರಂಗವಾಗಿ ಹರಾಜು ಹಾಕಿ ಬೆಳ್ಳಿಯನ್ನು ಗಳಿಸಲಾರಂಭಿಸಿತು. ಅಫೀಮನ್ನು ಕೊಂಡುಕೊಂಡ ದಲ್ಲಾಳಿಗಳು ಬ್ರಿಟಿಷ್ ನೌಕೆಗಳಲ್ಲಿ ಚೀನಾಕ್ಕೆ ಹೋಗುತ್ತಿದ್ದರು. ಚೀನಾದಲ್ಲಿದ್ದ ದಲ್ಲಾಳಿ ಗಳಿಗೆ ದುಪ್ಪಟ್ಟು ಬೆಲೆಗೆ ಮಾರುತ್ತಿದ್ದರು. ಚೀನಿ ದಲ್ಲಾಳಿಗಳು ಕಳ್ಳ ಮಾರುಕಟ್ಟೆಯ ಜಾಲದ ಮೂಲಕ ಇಡೀ ಚೀನಾ ದೇಶಕ್ಕೆ ಅಫೀಮನ್ನು ಒದಗಿಸುತ್ತಿದ್ದರು.
ಚೀನಿ ಇತಿಹಾಸಕಾರ ಎಡ್ವರ್ಡ್ ಹಾರ್ಪರ್ ಪಾರ್ಕರ್ (೧೮೪೯-೧೯೨೬) ಅನ್ವಯ, ಚೀನಾದೊಳಗೆ ನಾಲ್ಕು ನಮೂನೆಯ ಅಫೀಮು (ಪಾಟ್ನಾ ಹೊಸ ಅಫೀಮು, ಪಾಟ್ನಾ ಹಳೆಯ ಅಫೀಮು, ಮಾಳವ ಅಫೀಮು ಮತ್ತು ಬೆನಾರಸ್ ಅಫೀಮು) ಕಳ್ಳಮಾರ್ಗದಲ್ಲಿ ಪ್ರವೇಶಿಸುತ್ತಿದ್ದವು. ೧೭೯೭ರ ಹೊತ್ತಿಗೆ ಈಸ್ಟ್ ಇಂಡಿಯ
ಕಂಪನಿಯು ರೈತರ ಬಳಿ ನೇರವಾಗಿ ಅಫೀಮನ್ನು ಕೊಂಡು, ಅದನ್ನು ನೇರವಾಗಿ ಚೀನಿಯರಿಗೆ ಮಾರಲಾರಂಭಿಸಿತು. ೧೭೯೯ರ ಹೊತ್ತಿಗೆ ಚೀನಾ ದೇಶದ ಅಫೀಮು ಆಮದು ಪ್ರಮಾಣವು ೪೫೦೦ ಪೆಟ್ಟಿಗೆಗಳಿಗೆ ಏರಿತು. ಆಗ ಚೀನಾ ದೇಶದ ಜಿಯಾಕಿಂಗ್ ಸಾಮ್ರಾಟನು (೧೭೬೦-೧೮೨೦) ಅಫೀಮು
ಆಮದನ್ನು ನಿರ್ಬಂಧಿಸಿದನು. ಅವನ ನಿರ್ಬಂಧವನ್ನು ಯಾರೂ ಲೆಕ್ಕಿಸಲಿಲ್ಲ. ಅಫೀಮು ಕಳ್ಳ ಸಾಗಾಣಿಕೆಯು ಮುಂದುವರಿಯಿತು.
೧೮೦೪ರಲ್ಲಿ ಈಸ್ಟ್ ಇಂಡಿಯ ಕಂಪನಿಯ ಎಲ್ಲ ಸಾಲಗಳು ತೀರಿಹೋದವು. ೧೮೦೪-೧೮೦೯ರ ನಡುವೆ ಏಳು ದಶಲಕ್ಷ ಬೆಳ್ಳಿ ಡಾಲರುಗಳು ಚೀನಿ ಮಾರು
ಕಟ್ಟೆಯಿಂದ ಭಾರತೀಯ ಈಸ್ಟ್ ಇಂಡಿಯ ಕಂಪನಿಯ ಕೈ ಸೇರಿತು. ೧೮೧೦ರಲ್ಲಿ ಅಮೆರಿಕನ್ನರು ಚೀನಿಯರೊಡನೆ ಅಫೀಮು ವ್ಯಾಪಾರಕ್ಕಿಳಿದರು. ಅವರು ಟರ್ಕಿ ಮೂಲದಿಂದ ಅಫೀಮನ್ನು ಕೊಂಡು ಅದನ್ನು ಚೀನಿಯರಿಗೆ ಮಾರುತ್ತಿದ್ದರು. ಟರ್ಕಿ ಅಫೀಮಿನ ಗುಣಮಟ್ಟ, ಭಾರತೀಯ ಅಫೀಮಿನಷ್ಟು ಇರಲಿಲ್ಲ. ಆದರೂ ಅಮೆರಿಕನ್ನರು ಚೀನಾ ದೇಶದ ಒಟ್ಟು ಅಫೀಮು ಮಾರುಕಟ್ಟೆಯ ಶೇ.೧೦ರಷ್ಟು ಭಾಗವನ್ನು ವಶಪಡಿಸಿಕೊಂಡರು. ಈ ಅಮೆರಿಕನ್ ವ್ಯಾಪಾರಿಗಳಲ್ಲಿ ಭವಿಷ್ಯ
ದಲ್ಲಿ ಅಮೆರಿಕದ ಅಧ್ಯಕ್ಷರಾದ ಫ್ರಾಂಕ್ಲಿನ್ ಡಿ ರೂಸ್‌ವೆಲ್ಟ್ ಅವರ ತಾತನಾಗಿದ್ದ ವಾರೆನ್ ಡೆಲಾನೋ ಜೂನಿಯರ್ ಸಹ ಸೇರಿದ್ದ.
ಬ್ರಿಟಿಷ್ ಇತಿಹಾಸಕಾರ ಸ್ಟೂವರ್ಟ್ ಲೇಕಾಕ್, ವಿಶ್ವದ ೨೦೦ ದೇಶಗಳ ಇತಿಹಾಸವನ್ನು ಪರಿಶೀಲಿಸಿದ. ಅವುಗಳಲ್ಲಿ ಬ್ರಿಟನ್ ಸಾಮ್ರಾಜ್ಯವು ೨೨ ದೇಶಗಳನ್ನು ಬಿಟ್ಟು ಉಳಿದ ೧೭೧ ದೇಶಗಳ ಮೇಲೆ ಆರ್ಥಿಕವಾಗಿ, ರಾಜಕೀಯವಾಗಿ ಹಾಗೂ ಸಾಂಸ್ಕೃತಿಕ ವಾಗಿ ದಾಳಿಯನ್ನು ಮಾಡಿತ್ತು. ಬ್ರಿಟನ್ನಿನಂಥ ಒಂದು ಪುಟ್ಟ
ದೇಶವು ಜಗತ್ತಿನ ಶೇ.೯೦ರಷ್ಟು ದೇಶಗಳ ಸಂಪತ್ತನ್ನು ಸೂರೆಗೈ ದಿತು ಎಂದರೆ, ನಾವು ಬ್ರಿಟಿಷರ ಚಾಣಾಕ್ಷತನವನ್ನು ಹಾಗೂ ಕ್ರೌರ್ಯವನ್ನು ಹೊಗಳಬೇಕೋ ಅಥವಾ ಜಗತ್ತಿನ ಜನರ ಸಾತ್ವಿಕತೆಯನ್ನು ಹಾಗೂ ಒಳಜಗಳಗಳನ್ನು ತೆಗಳಬೇಕೋ ಗೊತ್ತಾಗುತ್ತಿಲ್ಲ. ಬ್ರಿಟನ್ ಅದೆಷ್ಟು ಜನರನ್ನು ಕೊಂದಿರಬೇಕು!
ಅದೆಷ್ಟು ಸಂಪತ್ತನ್ನು ದೋಚಿರಬೇಕು?! ಚೀನಾ ದೇಶದಲ್ಲಿ ಅತ್ಯುತ್ತಮ ಚಹ, ರೇಷ್ಮೆ ಮತ್ತು ಪಿಂಗಾಣಿಯ ಉಪಕರಣಗಳಿದ್ದವು. ಚೀನಿಯರು ಅವನ್ನು ಯುರೋಪಿ ಯನ್ ದೇಶಗಳಿಗೆ ಮಾರುತ್ತಿದ್ದರು. ವಿನಿಮಯ ರೂಪದಲ್ಲಿ ಬೆಳ್ಳಿಯನ್ನು ಪಡೆಯುತ್ತಿದ್ದರು. ಬ್ರಿಟಿಷರು ಅಫೀಮನ್ನು ಚೀನಿಯರಿಗೆ ಮಾರುತ್ತಿದ್ದರು. ಅವರಿಂದ ಅದೇ ಬೆಳ್ಳಿಯನ್ನು ಹಿಂದಕ್ಕೆ ಪಡೆಯುತ್ತಿದ್ದರು. ಚೀನಾ ದೇಶದಲ್ಲಿ ಅಫೀಮಿನ ವೈದ್ಯಕೀಯ ಬಳಕೆಯು ಸೀಮಿತವಾಗಿತ್ತು.
ಉಳಿದಂತೆ ಅಫೀಮು ಚಟವಾಗಿ ದೇಶದಲ್ಲೆಲ್ಲ ವ್ಯಾಪಿಸಿತ್ತು. ಇದು ಚೀನಿ ಅರಸರಿಗೆ ಬಗೆಹರಿಯದ ತಲೆನೋವಾಗಿ ಪರಿಣಮಿಸಿತ್ತು. ಚೀನಿ ಅರಸರು ೧೭೨೯, ೧೭೯೯, ೧೮೧೪ ಮತ್ತು ೧೮೩೧ರಲ್ಲಿ ಅಫೀಮನ್ನು ನಿಷೇಧಿಸುವ ಆಜ್ಞೆಳನ್ನು ಹೊರಡಿಸಿದರಾದರೂ, ಅವು ನಿರೀಕ್ಷಿತ ಪರಿಣಾಮವನ್ನು ಬೀರಲಿಲ್ಲ. ಆದರೆ ಚಾಣಾಕ್ಷ ಬ್ರಿಟಿಷರು ಮತ್ತು ಅಮೆರಿಕನ್ನರು ಕಳ್ಳ ಮಾರ್ಗದಲ್ಲಿ ಅಫೀಮನ್ನು ಪೂರೈಸುತ್ತಲೇ ಬಂದರು. ೧೮೩೩ರ ವೇಳೆಗೆ ಚೀನಿಯರು ವರ್ಷಕ್ಕೆ ೩೦,೦೦೦ ಪೆಟ್ಟಿಗೆ ಅಫೀಮನ್ನು ಕೊಳ್ಳಲಾರಂಭಿಸಿದರು. ಬ್ರಿಟಿಷರ ದುರಾಸೆಗೆ ಮಿತಿಯಿರಲಿಲ್ಲ.
ಹಾಗಾಗಿ ಅಫೀಮನ್ನು ಪೂರೈಸುತ್ತಿದ್ದ ಇತರ ದೇಶಗಳೊಡನೆ ಸ್ಪರ್ಧಾತ್ಮಕವಾಗಿ ಜಯವನ್ನು ಸಾಽಸಲು ಚೀನಿಯರೊಡನೆ ಮುಕ್ತವ್ಯಾಪಾರಕ್ಕೆ ತಮಗೆ ಅವಕಾಶ ವನ್ನು ಮಾಡಿಕೊಡ ಬೇಕೆಂದು ‘ಹಕ್ಕು’ ಮಂಡಿಸಿದರು. ಹಾಗೆಯೇ ಬ್ರಿಟನ್ನಿನ ವ್ಯಾಪಾರೀ ವರ್ಗಕ್ಕೆ ‘ಮುತ್ಸದ್ಧಿ ಸ್ಥಾನ’ವನ್ನು (ಡಿಪ್ಲೊಮ್ಯಾಟಿಕ್ ಪೊಸಿಷನ್) ನೀಡಬೇಕೆಂದು ಒತ್ತಾಯ ಮಾಡಿದರು. ೧೮೩೪. ಚೀನಾ ದೇಶದ ಡಾವೋಗ್ವಾಂಗ್ ಸಾಮ್ರಾಟನು ಚಿಂತಿತನಾದ. ಎರಡು ವಿಷಯಗಳು ಅವನನ್ನು ತೀವ್ರವಾಗಿ
ಬಾಧಿಸಿದವು. ಮೊದಲನೆಯದು ಅಫೀಮಿನ ತೀವ್ರ ಚಟಕ್ಕೆ ಚೀನಾ ದೇಶದ ಪ್ರಜೆಗಳು ನಾಶವಾಗುತ್ತಿರುವುದು ಹಾಗೂ ಎರಡನೆಯದು ಕಳ್ಳಮಾರುಕಟ್ಟೆಯಲ್ಲಿ ದೇಶದ ಬೆಳ್ಳಿಯು ಸೋರಿಹೋಗುತ್ತಿರುವುದು.
ಇವೆರಡನ್ನು ಹೇಗಾದರೂ ಮಾಡಿ ತಡೆಗಟ್ಟಬೇಕೆಂದು ನಿರ್ಧರಿಸಿದ. ಬ್ರಿಟಿಷರ ಜತೆಯಲ್ಲಿ ಎಲ್ಲ ರೀತಿಯ ವ್ಯಾಪಾರ ವಹಿವಾಟುಗಳನ್ನು ನಿಲ್ಲಿಸುವಂತೆ ಗವರ್ನರ್ ಜನರಲ್ ಲಿನ್ ಜ಼ೇಷುವಿಗೆ ಸೂಚಿಸಿದ. ೧೮೩೯ರಲ್ಲಿ ಲಿನ್ ಜ಼ೇಷು ರಾಣಿ ವಿಕ್ಟೋರಿಯಳಿಗೆ ಪತ್ರವನ್ನು ಬರೆದು, ಇನ್ನು ಮುಂದೆ ಚೀನಾ ದೇಶವು ಬ್ರಿಟನ್ನಿನ ಜತೆಯಲ್ಲಿ ವಾಣಿಜ್ಯ ವ್ಯವಹಾರಗಳನ್ನು ನಿಲ್ಲಿಸುತ್ತಿರುವುದಾಗಿ ಹೇಳಿದ. ಆದರೆ ಈ ಪತ್ರವು ಬ್ರಿಟನ್ ರಾಣಿಯ ಕೈ ತಲುಪಲೇ ಇಲ್ಲ. ಅಫೀಮು ಕಳ್ಳಸಾಗಾಣಿಕೆಯಲ್ಲಿ ತೊಡಗುವವರಿಗೆ ಗಂಭೀರ ಸ್ವರೂಪದ ಶಿಕ್ಷೆಯನ್ನು ಡಾವೋಗ್ವಾಂಗ್ ಸಾಮ್ರಾಟನು ಘೋಷಿಸಿದ. ಲಿನ್ ಜ಼ೇಷು, ಚೀನಾ ದೇಶದ ಕ್ಯಾಂಟನ್ ಬಂದರಿನಲ್ಲಿರುವ ಎಲ್ಲ ವಿದೇಶಿಯರ, ಮುಖ್ಯವಾಗಿ ಈಸ್ಟ್ ಇಂಡಿಯ ಕಂಪನಿಗೆ ಸೇರಿದ್ದ ಕಾರ್ಖಾನೆಗಳಿಂದ ಅಫೀಮನ್ನು ವಶಪಡಿಸಿಕೊಂಡ. ಆದರೆ ಈ ವಿದೇಶಿಯರು ಮತ್ತೂ
ಚಾಣಾಕ್ಷರಾಗಿದ್ದರು. ನಾಮ್-ಕೆ-ವಾಸ್ತೆ ಒಂದಷ್ಟು ಅಫೀಮನ್ನು ಮಾತ್ರ ಲಿನ್ ವಶಕ್ಕೆ ಒಪ್ಪಿಸಿದರು.
ಉಳಿದಿದ್ದನ್ನು ಬಚ್ಚಿಟ್ಟರು. ಚಾರ್ಲ್ಸ್ ಇಲಿಯಟ್ ಎನ್ನುವವನು ಬ್ರಿಟಿಷರ ಪರವಾಗಿ ವ್ಯಾಪಾರ-ವಹಿವಾಟನ್ನು ಚೀನಾದಲ್ಲಿ ನೋಡಿ ಕೊಳ್ಳುವ ಸೂಪರಿಂಟೆಂಡೆಂಟ್ ಆಗಿದ್ದ. ಲಿನ್ ಘೋಷಿಸಿದ್ದ ಅಂತಿಮ ಗಡವು ಕಳೆದು ೩ ದಿನಗಳಾದ ನಂತರ ಇಲಿಯಟ್ ಬಂದ. ೨೦,೦೦೦ ಪೆಟ್ಟಿಗೆ ಅಫೀಮನ್ನು ಸಾಲದ ಮೇಲೆ ಚೀನಿ ಸರಕಾರಕ್ಕೆ ನೀಡುತ್ತಿರುವುದಾಗಿ ಹೇಳಿ, ಅಫೀಮನ್ನು ಲಿನ್ ವಶಕ್ಕೆ ಒಪ್ಪಿಸಿದ. ಅದನ್ನು ತೆಗೆದುಕೊಂಡ ಲಿನ್, ಹ್ಯೂಮನ್ ಎಂಬ ಸ್ಥಳದಲ್ಲಿ ಅಷ್ಟೂ ಅಫೀಮನ್ನು ಸುಟ್ಟುಹಾಕಿದ. ಚಾರ್ಲ್ಸ್ ಇಲಿಯಟ್ ಚೀನಿಯರ ಮೇಲೆ ಯುದ್ಧವನ್ನು ಘೋಷಿಸುವಂತೆ ಬ್ರಿಟನ್ ರಾಣಿಯನ್ನು ಪ್ರಾರ್ಥಿಸಿದ.
ಸೆಪ್ಟೆಂಬರ್ ೪, ೧೮೩೯ರಂದು ಕೊವಲೂನ್ ನದಿಮುಖದಲ್ಲಿ ಯುದ್ಧವು ಆರಂಭವಾಯಿತು. ಜೂನ್ ೨೧, ೧೮೪೦ರಲ್ಲಿ ಬ್ರಿಟನ್ ತಾನು ಕಳೆದುಕೊಂಡ ಅಫೀಮಿನ ಮೌಲ್ಯವನ್ನು ಮರುಗಳಿಸಲು ಹಾಗೂ ಭವಿಷ್ಯದಲ್ಲಿ ವ್ಯಾಪಾರವು ನಿರಾತಂಕ ವಾಗಿ ಸಾಗಲು ಒಂದು ನೌಕಾಸೇನೆಯನ್ನು ಕಳಿಸಿತು. ಜೂನ್
೨೧, ೧೮೪೦ರಂದು ಬ್ರಿಟನ್ ರಾಯಲ್ ನೇವಿಯ ನೌಕಾ ಪಡೆಯು ಮಕವೊ ಬಳಿಗೆ ಬಂದು ದಿಂಘಾಯ್ ಬಂದರಿನ ಮೇಲೆ ಫಿರಂಗಿ ದಾಳಿಯನ್ನು ನಡೆಸಿತು. ಬ್ರಿಟಿಷರ ಅತ್ಯುತ್ತಮ ಫಿರಂಗಿ ದಾಳಿಗೆ ಚೀನಿಯರು ತರಗೆಲೆಯಂತೆ ಹಾರಿ ಹೋದರು. ೧೮೪೨ರಲ್ಲಿ ಚೀನಿಯರು ಏಕಮುಖವಾಗಿದ್ದ ಸಂಧಿಯನ್ನು ಬ್ರಿಟನ್ನಿ ನೊಡನೆ ಮಾಡಿಕೊಂಡರು. ಚೀನಾ ದೇಶವು ಹಾಂಗ್‌ಕಾಂಗ್ ಹಾಗೂ ಸುತ್ತಮುತ್ತಲಿನ ಕೆಲವು ದ್ವೀಪಗಳನ್ನು ಬ್ರಿಟಿಷರಿಗೆ ಒಪ್ಪಿಸಿತು. ಜತೆಗೆ ಷಾಂಘೈ,
ಕ್ಯಾಂಟನ್, ನಿಂಗ್ಬೋ, ಫಜ಼ುವ ಮತ್ತು ಷಿಯಾಮೆನ್ ಬಂದರು ನಗರಗಳ ವಾಣಿಜ್ಯ ಸ್ವಾಮ್ಯವನ್ನು ಬ್ರಿಟಿಷರಿಗೆ ಒಪ್ಪಿಸಿತು. ಲಿನ್ ಸುಟ್ಟುಹಾಕಿದ್ದ ೨೦,೦೦೦ ಪೆಟ್ಟಿಗೆ ಅಫೀಮಿಗೆ ಬದಲಾಗಿ ೨೧ ದಶಲಕ್ಷ ಡಾಲರುಗಳನ್ನು ದಂಡವಾಗಿ ನೀಡಿತು.
ಜತೆಗೆ ಚೀನಾ ದೇಶದ ‘ಅತ್ಯಂತ ನೆಚ್ಚಿನ ಮಿತ್ರರಾಷ್ಟ್ರ’ (ಮೋಸ್ಟ್ ಫಾವರ್ಡ್ ನೇಶನ್) ಸ್ಥಾನವನ್ನೂ ಬ್ರಿಟನ್ನಿಗೆ ನೀಡಿತು. ೧೮೫೦ರಲ್ಲಿ ‘ಟೈಪಿಂಗ್ ಕ್ರಾಂತಿ’ಯು ಚೀನಾದಲ್ಲಿ ನಡೆ ಯಿತು. ಚೀನಾ ದೇಶದ ಖಿಂಗ್ ರಾಜವಂಶ ಹಾಗೂ ಟೈಪಿಂಗ್ ರಾಜವಂಶಗಳ ನಡುವಿನ ಯಾದವೀ ಕಲಹದಲ್ಲಿ ೨೦ ದಶಲಕ್ಷ ಪ್ರಜೆಗಳು ಸತ್ತರು. ಕಮಿಷನರ್ ಯಿ ಮಿಂಗ್ಚೆನ್ (೧೮೦೭- ೧೮೫೯) ಅಫೀಮು ವ್ಯಾಪಾರವು ‘ಅಕ್ರಮ’ ಎಂದು ಘೋಷಿಸಿದ. ೧೮೫೬ರಲ್ಲಿ ಬ್ರಿಟಿಷರಿಗೆ ಸೇರಿದ್ದ ಆರೋ ನೌಕೆಯನ್ನು ವಶಪಡಿಸಿಕೊಂಡ. ಹಾಂಗ್‌ಕಾಂಗಿನ ಗವರ್ನರ್ ಆಗಿದ್ದ ಸರ್ ಜಾನ್ ಬೌರಿಂಗ್, ಬ್ರಿಟನ್ನಿನ ರಿಯರ್ ಅಡ್ಮಿರಲ್ ಸರ್ ಮೈಕೇಲ್ ಸೈಮೂರ್ ಅವರಿಗೆ ಸಂದೇಶವನ್ನು ಕಳುಹಿಸಿದ.
ಸೈಮೂರ್ ತನ್ನ ಪುಟ್ಟ ನೌಕಾಪಡೆಯನ್ನು ಕ್ಯಾಂಟನ್ ಕಡೆ ನಡೆಸಿದ. ಫಿರಂಗಿಗಳಿಂದ ಗುಂಡನ್ನು ಹಾರಿಸತೊಡಗಿದ. ಸೈಮೂರ್ ಪಡೆ ಚಿಕ್ಕದಿತ್ತು. ಚೀನಿ ಪಡೆ ಬೃಹತ್ತಾಗಿತ್ತು. ಸೈಮೂರ್ ಕ್ಯಾಂಟನ್ ಬಂದರನ್ನು ವಶಪಡಿಸಿಕೊಳ್ಳಲು ವಿಫಲನಾದ. ಚೀನಿಯರು ಕ್ಯಾಂಟನ್ನಿನಲ್ಲಿದ್ದ ಬ್ರಿಟಿಷರ ಎಲ್ಲ ಆಸ್ತಿಗೆ ಬೆಂಕಿಯನ್ನಿಟ್ಟರು. ಈ ಗೊಂದಲದಲ್ಲಿ ಓರ್ವ ಫ್ರೆಂಚ್ ಪಾದ್ರಿಯು ಹತನಾದ. ಬ್ರಿಟನ್ ಮತ್ತು ಫ್ರಾನ್ಸ್ ದೇಶಗಳೆರಡೂ ಒಟ್ಟಿಗೆ ಕೆರಳಿದವು. ಎರಡೂ ಸೇನೆಗಳ ಜೋಡಿ ದಾಳಿಗೆ ಚೀನಿ ಸೈನ್ಯವು ನುಚ್ಚು ನೂರಾಗಿ ೧೮೫೮ರಲ್ಲಿ ತಿಯಾನ್ಜಿನ್ ಒಪ್ಪಂದಕ್ಕೆ ಸಹಿ ಹಾಕಿತು.
ಒಪ್ಪಂದದ ಅನ್ವಯ ಅಫೀಮು ವ್ಯಾಪಾರವನ್ನು ಕಾನೂನು ಬದ್ಧಗೊಳಿಸಿದರು. ೧೦ ಬಂದರುಗಳನ್ನು ಯುರೋಪಿಯನ್ನರ ವ್ಯಾಪಾರಕ್ಕೆ ಬಿಟ್ಟುಕೊಟ್ಟರು. ಯುರೋಪಿನ ಎಸ್ಟೇಟುಗಳಲ್ಲಿ ದುಡಿಯುತ್ತಿದ್ದ ಚೀನಿ ಕೂಲಿಗಳನ್ನು ರಫ್ತು ಮಾಡಿದರು. ಬ್ರಿಟನ್ ಮತ್ತು ಫ್ರೆಂಚ್ ಆಮದುಗಳಿಗೆ ಸುಂಕ ವಿನಾಯತಿ ಯನ್ನು ಪಡೆದು ಕೊಂಡರು. ಬೀಜಿಂಗ್ ವಶಪಡಿಸಿಕೊಂಡರು. ಅಫೀಮು ಚಟಕ್ಕಿಂತಲೂ ಬ್ರಿಟನ್ ನೀತಿ ಮನುಕುಲಕ್ಕೆ ಅಪಾಯಕರವಾಗಿದ್ದುದ್ದನ್ನು ಮರೆಯಲು ಸಾಧ್ಯವಿಲ್ಲ.