ಪ್ರಸ್ತುತ
ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿ
ರೋಬೋಗಳು ತಾವು ಜೀರ್ಣೀಸಿಕೊಂಡ ಬುದ್ಧಿಮತ್ತೆಯ ಆಧಾರದಲ್ಲಿ, ಲಭ್ಯ ದತ್ತಾಂಶವನ್ನೆಲ್ಲಾ ಕ್ಷಿಪ್ರವಾಗಿ ಜಾಲಾಡಿ ವಿಶ್ಲೇಷಿಸಿ ಯಾವುದೇ ಸಮಸ್ಯೆಗೆ ತ್ವರಿತ ಪರಿಹಾರ ಸೂಚಿಸಬಲ್ಲವು. ನಮ್ಮ ಆಶಯವನ್ನು ಗ್ರಹಿಸಿ ಪೂರಕ ಮಾಹಿತಿಯನ್ನು ಒದಗಿಸಬಲ್ಲವು.
ಮೊನ್ನೆ ಮೊನ್ನೆ ಅಂಬೆಗಾಲಿಡುತ್ತಾ ಬಂದ ಕೃತಕ ಬುದ್ಧಿಮತ್ತೆ ಅಥವಾ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (ಎಐ), ದೈತ್ಯ ತಾಂತ್ರಿಕತೆಯಾಗುವತ್ತ ಹೊರಟಿದೆ. ೨೦೨೫ರ ಹೊತ್ತಿಗೆ ಜಾಗತಿಕವಾಗಿ ೪,೨೦೦ ಕೋಟಿ ‘ಐಎಟಿ’ (ಇಂಟರ್ನೆಟ್ ಆಫ್ ಥಿಂಗ್ಸ್) ಸಂಪರ್ಕಿತ ಸಾಧನಗಳಿರುತ್ತವೆ ಎಂದು ಅಂದಾಜಿಸಲಾಗಿದೆ. ಈ ಸಾಧನಗಳ ಸಂಖ್ಯೆ ಬೆಳೆದಂತೆ, ‘ಎಐ’ ಸಂಯೋಜನೆಯೊಂದಿಗೆ ಅವು ಬುದ್ಧಿವಂತ ಯಂತ್ರಗಳಾಗಿ ಮಾರ್ಪಡುತ್ತವೆ.
ಅಷ್ಟೇ ಅಲ್ಲ, ಮಾನವನ ಕನಿಷ್ಠ ಅಥವಾ ಯಾವುದೇ ಹಸ್ತಕ್ಷೇಪವಿಲ್ಲದೆ ತಾವೇ ಜಾಣ್ಮೆಯಿಂದ ನಿರ್ಧಾರಗಳನ್ನು ಕೈಗೊಳ್ಳುವಂತೆ ವ್ಯವಸ್ಥೆಗಳು ರೂಪುಗೊಳ್ಳುತ್ತವೆ. ‘ಯಾವುದೇ ನಿರ್ಧಾರ ಕೈಗೊಳ್ಳುವಲ್ಲಿ ನಮ್ಮಲ್ಲಿ ಪ್ರಭಾವ ಬೀರಬಹುದಾದ ಪಕ್ಷಪಾತ ಭಾವವೂ ಇಲ್ಲ, ಭಾವನೆಗಳೂ ನಮಗಿಲ್ಲ. ಅತ್ಯುತ್ತಮ ನಿರ್ಣಯ ಕೈಗೊಳ್ಳುವಲ್ಲಿ ಬೃಹತ್ ದತ್ತಾಂಶಗಳನ್ನೆಲ್ಲ ಕ್ಷಿಪ್ರವಾಗಿ ಜಾಲಾಡಿ ತಕ್ಷಣದ ನಿರ್ಧಾರ ಕೈಗೊಳ್ಳಬಲ್ಲೆವು, ಮಹತ್ವದ ಸಾಧನೆ ಮಾಡಬಲ್ಲೆವು. ಮನುಷ್ಯರಿಗಿಂತ ಕ್ಷಿಪ್ರ, ಖಚಿತ ಮತ್ತು ಪರಿಣಾಮಕಾರಿ ನಿರ್ಧಾರ ಕೈಗೊಳ್ಳುವ ಶಕ್ತಿ ನಮಗಿದೆ’ ಹೀಗೆ ಹೇಳಿರುವುದು ಮನುಷ್ಯರೇ ತಯಾರಿಸಿದ, ಕೃತಕ ಬುದ್ಧಿಮತ್ತೆಯ ಆಧಾರದಲ್ಲಿ ಕೆಲಸ ಮಾಡಬಲ್ಲ ಹ್ಯೂಮನಾಯ್ಡ್ ಬಾಟ್ ಸೋಫಿಯಾ!
ಜಿನಿವಾದಲ್ಲಿ ಇತ್ತೀಚೆಗೆ ನಡೆದ ‘ಒಳಿತಿಗಾಗಿ ಕೃತಕ ಬುದ್ಧಿಮತ್ತೆ’ ಎಂಬ ವಿಷಯ ಕುರಿತಾದ ಎರಡು ದಿನಗಳ ಜಾಗತಿಕ ಸಮಾವೇಶದಲ್ಲಿ ನಡೆದ ಈ ವಿದ್ಯಮಾನವು, ಸ್ವತಃ ಈ ರೋಬೋವನ್ನು ಸೃಷ್ಟಿಸಿದವರಿಗೂ ಅಚ್ಚರಿಯುಂಟುಮಾಡಿತು. ’ಸೋಫಿಯಾ’ ಎಂಬ ಈ ಯಂತ್ರಮಾನವ ಸೀಯನ್ನು ಸೃಷ್ಟಿಸಿದ್ದು ‘ಹ್ಯಾನ್ಸನ್ ರೋಬೋಟಿಕ್ಸ್’ ಎಂಬ ಹಾಂಗ್ ಕಾಂಗ್ ಮೂಲದ ಸಂಸ್ಥೆ. ಮುಂದಿನ ದಿನಗಳು ಕೃತಕ ಬುದ್ಧಿಮತ್ತೆಯ ಯುಗವೆಂದೇ ಹೇಳಬೇಕು. ಕಾರಣ, ಕಲೆ, ವಾಣಿಜ್ಯ, ವಿಜ್ಞಾನ, ವೈದ್ಯಕೀಯ ಹೀಗೆ ಎಲ್ಲಾ ಕ್ಷೇತ್ರಗಳಿಗೂ ಈ ಕೃತಕ ಬುದ್ಧಿಮತ್ತೆ ಕಾಲಿಡುತ್ತಿದೆ.
ಇಷ್ಟರವರೆಗಿನ ಎಲ್ಲಾ ಆವಿಷ್ಕಾರ ಮತ್ತು ಸಂಶೋಧನೆಗಳನ್ನು ರೋಬೋಗಳಿಗೆ ಫೀಡ್ ಮಾಡಿದರೆ ಆಯಿತು, ಅವನ್ನು ಆಧರಿಸಿ ರೋಬೋಗಳು ಅರೆಕ್ಷಣದಲ್ಲಿ, ವೈದ್ಯರಿಗಿಂತ ವೇಗವಾಗಿ ರೋಗವನ್ನು ಪತ್ತೆಹಚ್ಚುತ್ತವೆ. ಈಗಾಗಲೇ ಬಹುತೇಕರ ಗಮನಕ್ಕೆ ಬಂದಿರುವಂತೆ ಹಲವು ಸಾಧನಗಳನ್ನು ಈ ‘ಎಐ’ ಆವರಿಸಿಕೊಂಡಿದೆ. ಸ್ಮಾರ್ಟ್ ಮನೆ, ಸ್ವಯಂಚಾಲಿತ ಕಾರು, ಆರೋಗ್ಯ ಗಮನಿಸುವ ವಾಚ್, ಫಿಟ್‌ನೆಸ್ ಟ್ರಾಕರ್, ಸ್ಮಾರ್ಟ್ ಉತ್ತರ ನೀಡುವ ಚಾಟ್‌ಬಾಟ್ ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಈ ‘ಎಐ’ ಮಾಯಾಜಾಲವು ಅಂತರ್ಜಾಲದೊಳಕ್ಕೂ ಹೆಣೆದುಕೊಳ್ಳುತ್ತಿದೆ. ಇಂಟರ್ನೆಟ್ ಆಫ್ ಥಿಂಗ್ಸ್ ಮತ್ತು
‘ಎಐ’ ತಂತ್ರಜ್ಞಾನಗಳು ಸಮ್ಮಿಲನಗೊಂಡು ಬೃಹತ್ ಸಾಮರ್ಥ್ಯದ ಹೊಸ ತಾಂತ್ರಿಕತೆ ಹೊರಹೊಮ್ಮಿದೆ.
ಅದು ‘ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಆಫ್ ಥಿಂಗ್ಸ್’ ಅಥವಾ ‘ಎಐಒಟಿ’. ಇವು ಹೀಗೆ ಜತೆಗೂಡಿ ಕಾರ್ಯನಿರ್ವಹಿಸುತ್ತಾ ಉದ್ಯಮರಂಗಕ್ಕೆ ಹಲವು ಪ್ರಯೋಜನಗಳನ್ನು ನೀಡುತ್ತಿವೆ. ಕೃತಕ ಬುದ್ಧಿಮತ್ತೆ ಆಧರಿತ ರೋಬೋಗಳು ಮಾನವರಿಗೆ ಸಲಹೆ ನೀಡುವಷ್ಟರ ಮಟ್ಟಿಗೂ ಬೆಳೆದಿವೆ. ಕೃತಕ ಬುದ್ಧಿಮತ್ತೆ,
ತಾಂತ್ರಿಕ ಕಲಿಕೆ ಮತ್ತು ಲಾರ್ಜ್ ಲಾಂಗವೇಜ್ ಮಾಡೆಲ್ ಮುಂತಾದ ಕ್ಷೇತ್ರಗಳಲ್ಲಿ ನಡೆಯುತ್ತಿರುವ ವಿದ್ಯಮಾನ ಗಳನ್ನು ಅಪ್ಪಿ ಒಪ್ಪಿಕೊಳ್ಳುವಾಗ ಮಾನವರು ಗರಿಷ್ಠ ಎಚ್ಚರಿಕೆ ವಹಿಸಬೇಕೆಂದು ಇದೇ ರೋಬೋಗಳು ನಮಗೆ ಎಚ್ಚರಿಸಿವೆ, ಜತೆಗೆ ‘ನಾವೇನೂ ನಿಮ್ಮ ಉದ್ಯೋಗಗಳನ್ನು ಕಸಿದು ಕೊಳ್ಳುವುದಿಲ್ಲ’ ಎಂಬ ಭರವಸೆಯನ್ನೂ ನೀಡಿವೆ.
ಈ ರೋಬೋಗಳು ಹಸಿವಿನಿಂದ ಹಿಡಿದು ವಾತಾವರಣದ ಬದಲಾವಣೆಯಂಥ ಹಲವು ಜಾಗತಿಕ ಸಮಸ್ಯೆಗಳ ಕುರಿತಾದ ಚರ್ಚೆಯಲ್ಲಿ ಭಾಗವಹಿಸಬಲ್ಲವು. ವಿಚಾರ ಸಂಕಿರಣಗಳಲ್ಲಿ ಸಭಿಕರೊಂದಿಗೆ ಚರ್ಚಿಸಬಲ್ಲವು. ಮಾನವರು ನಿರ್ಧಾರ ಕೈಗೊಳ್ಳುವಲ್ಲಿ ಪಕ್ಷಪಾತ, ಪೂರ್ವಗ್ರಹ ಅಥವಾ ಭಾವನೆಗಳು ಅಡ್ಡಿಯಾಗುತ್ತವೆ. ಯಂತ್ರಮಾನವರು ಅಥವಾ ರೋಬೋಗಳು ನಮ್ಮನ್ನೇ ಆಳುವಷ್ಟರ ಮಟ್ಟಿಗೆ ಬೆಳೆದುಬಿಟ್ಟಿರುವುದು ದಿಟವೇ ಆದರೂ, ಅವು ಮಷಿನ್ ಲರ್ನಿಂಗ್ ತಂತ್ರಜ್ಞಾನದ ಮೂಲಕ ಕಲಿತುಕೊಳ್ಳುವ ವಿಷಯವನ್ನು ಗ್ರಹಿಸುವುದು ಮಾನವರೇ.
ಅವುಗಳ ಕೆಲಸಗಳಿಗೆ ಬೇಕಾಗುವ ಮಾಹಿತಿಕೋಶವನ್ನೇ ‘ದತ್ತಾಂಶ ಸಂಚಯ’ ಅಥವಾ ‘ಡೇಟಾಬೇಸ್’ ಎಂದು ಕರೆಯಲಾಗುತ್ತದೆ. ಸರಳವಾಗಿ ಹೇಳುವುದಾದರೆ, ಮನುಷ್ಯನೊಬ್ಬ ನಿರ್ದಿಷ್ಟ ಕೆಲಸ ಮಾಡಿದಾಗ, ಆ ಕಾರ್ಯವು ಆ ದತ್ತಾಂಶದ ಮೇಲೆ ಬೀರುವ ಪರಿಣಾಮವನ್ನು ತಿಳಿದುಕೊಂಡು ‘ಹಾಗೆ ಮಾಡಿದರೆ ಹೀಗಾಗುತ್ತದೆ’ ಎಂಬುದನ್ನು ಅರಿತುಕೊಂಡು ಈ ರೋಬೋಗಳು ಕಲಿಯುತ್ತಾ ಹೋಗುತ್ತವೆ. ಈ ಮಷಿನ್ ಲರ್ನಿಂಗ್ ಆಧಾರದ ಮೇಲೆಯೇ ಈ ರೋಬೋಗಳು ತಾವು ಜೀರ್ಣೀಸಿಕೊಂಡ ಬುದ್ಧಿಮತ್ತೆಯ ಆಧಾರದಲ್ಲಿ, ಲಭ್ಯ ದತ್ತಾಂಶವನ್ನೆಲ್ಲಾ ಕ್ಷಿಪ್ರವಾಗಿ ಜಾಲಾಡಿ ದತ್ತಾಂಶ ವಿಶ್ಲೇಷಣೆ ಮಾಡಿ ಯಾವುದೇ ಸಮಸ್ಯೆಗೆ ತ್ವರಿತ ಪರಿಹಾರ ಸೂಚಿಸಬಲ್ಲವು.
ನಮ್ಮ ಇನ್‌ಪುಟ್ ಅನ್ನು ತ್ವರಿತವಾಗಿ ಅರ್ಥೈಸಿಕೊಂಡು, ನಮ್ಮ ಆಶಯವೇನು ಎಂಬುದನ್ನು ಗ್ರಹಿಸಿ ಅದಕ್ಕೆ ಪೂರಕವಾದ ಮಾಹಿತಿಯನ್ನೇ ಅವು ನಮಗೆ
ಒದಗಿಸುತ್ತವೆ. ಯಾಂತ್ರಿಕ ಬುದ್ಧಿಮತ್ತೆ ಆಧರಿತ ‘ಲೀಸಾ’ ಎಂಬ ವಾರ್ತಾವಾಚಕಿಯನ್ನು ‘ಒಡಿಶಾ ಟಿವಿ’ ಇತ್ತೀಚೆಗಷ್ಟೇ ಪರಿಚಯಿಸಿತು. ಸಾಂಪ್ರದಾಯಿಕ ಸೀರೆಯುಟ್ಟು ನೋಟದಲ್ಲಿ ಮಾನವ ಸೀಯನ್ನೇ ಹೋಲುವಂತಿದ್ದ ಲೀಸಾ, ಒಡಿಯಾ ಭಾಷೆಯ ಸುದ್ದಿಯನ್ನು ಸುಲಲಿತವಾಗಿ ಆ ಕ್ಷಣದಲ್ಲೇ ಆಂಗ್ಲಭಾಷೆಗೆ ಭಾಷಾಂತರಿಸಿಕೊಂಡು, ಇಂಗ್ಲಿಷ್ ಸುದ್ದಿಯಾಗಿ ನಿರೂಪಿಸಿದಳು. ಇದು ಗೂಗಲ್ ಅನುವಾದ ಸಾಧನಕ್ಕಿಂತಲೂ ಚೆನ್ನಾಗಿ ಕೆಲಸ ಮಾಡುತ್ತದೆ ಎಂದು ಒಡಿಶಾ ಟಿವಿ ಹೇಳಿಕೊಂಡಿದೆ.
ಕೃತಕ ಬುದ್ಧಿಮತ್ತೆಯು ಆಟೋಮೊಬೈಲ್, ವಾಯುಯಾನ, ಬ್ಯಾಂಕಿಂಗ್, ಸಾರಿಗೆ, ಆರೋಗ್ಯ, ರಕ್ಷಣೆ, ಉತ್ಪಾದನೆ ಮತ್ತು ಪೂರೈಕೆ ಸರಪಳಿ ಸೇರಿದಂತೆ
ಉದ್ಯಮದ ಪ್ರತಿಯೊಂದು ಘಟಕದ ಮೇಲೂ ಪ್ರಭಾವ ಬೀರಿದೆ. ಹಳೆಯ ನೀರು ಕೊಚ್ಚಿಹೋಗಿ ಹೊಸನೀರು ಬಂದಂತೆ, ನವೀಕೃತ ತಾಂತ್ರಿಕತೆಯು
ಹರಿದು ಬರುತ್ತಿರುವುದರಿಂದ ಉದ್ಯಮಗಳು ಹೊಸ ಉತ್ಸಾಹ ಮತ್ತು ವೇಗವನ್ನು ಪಡೆದುಕೊಳ್ಳುತ್ತಿವೆ. ಇದೀಗ ನಮ್ಮ ದೇಶದ ಆದಾಯ ತೆರಿಗೆ ಸಂಗ್ರಹ
ಮತ್ತು ಲೆಕ್ಕಾಚಾರವನ್ನು ಕೂಡ ‘ಎಐ‘ ನಿರ್ವಹಿಸಲಿದೆ. ಎಲ್ಲಾ ಹಣಕಾಸು ಸಂಸ್ಥೆಗಳು, ಬ್ಯಾಂಕುಗಳ ಖಾತೆಗಳನ್ನು ಕ್ರೋಡೀಕರಿಸಿ ಅದರ ತೆರಿಗೆಯನ್ನು ಲೆಕ್ಕ ಹಾಕಿ, ಸಲ್ಲಿಸಿದ ರಿಟರ್ನ್ಸ್‌ನೊಂದಿಗೆ ತಾಳೆಹಾಕುತ್ತದೆ. ಎಲ್ಲಾ ಆದಾಯ, ತೆರಿಗೆಗಳು ಮತ್ತು ರಿಯಾಯಿತಿಗಳನ್ನು ಆದಾಯತೆರಿಗೆ ದತ್ತಾಂಶ ಸಂಗ್ರಹದಲ್ಲಿ
ಅಳವಡಿಸಲಾಗುತ್ತದೆ. ಯಾವ ಪಕ್ಷಪಾತ, ಪ್ರಭಾವವೂ ಇಲ್ಲದೆ ಅದು ಆದಾಯದ ಮೇಲಿನ ತೆರಿಗೆಯನ್ನು ಲೆಕ್ಕಹಾಕುತ್ತದೆ.
ಸಂಬಂಧಿಸಿದ ಎಲ್ಲ ದತ್ತಮಾಹಿತಿಯನ್ನು ವಿಶ್ಲೇಷಿಸುತ್ತದೆ. ಹೀಗಾಗಿ ಕೃತಕ ಬುದ್ಧಿಮತ್ತೆಯ ಅನಿವಾರ್ಯ ಮತ್ತು ಅಪಾಯಗಳ ನಡುವೆ ನಾವು ಜಾಗರೂಕತೆ ಯಿಂದ ಹೆಜ್ಜೆ ಇಡಬೇಕಾಗಿದೆ.