Saturday, 14th December 2024

ಮಣಿಪುರ ದಂಗೆಗೂ, ಅಫ್ಘಾನಿಸ್ತಾನಕ್ಕೂ ಸಂಬಂಧವಿದೆ

ವಿದ್ಯಮಾನ

ಶಶಿಕುಮಾರ್‌ ಕೆ.

ಮಣಿಪುರದಲ್ಲಿ ಮಾದಕ ವಸ್ತುಗಳ ಕಳ್ಳಸಾಗಣೆ ಜಾಲದ ವಿರುದ್ಧ ನಿಷ್ಠುರವಾಗಿ ಕ್ರಮ ಕೈಗೊಂಡು ಈ ಪಿಡುಗನ್ನು ನಿಯಂತ್ರಿಸ ಲಾಗುತ್ತಿದೆ. ಅರಣ್ಯಗಳಲ್ಲಿ ತೀವ್ರ ತಪಾಸಣೆ ನಡೆಯುತ್ತಿದೆ. ಹೀಗಾಗಿ ಅಲ್ಲಿನ ಗಲಭೆಗಳಿಗೆ ಈ ಮಾದಕ ವಸ್ತುಗಳ ಕಾರ್ಯಜಾಲದವರು ಕುಮ್ಮಕ್ಕು ನೀಡುತ್ತಿದ್ದಾರೆ.

ಭಾರತದ ವಾಯವ್ಯ ದಿಕ್ಕಿನಲ್ಲಿರುವ ಪಾಕಿಸ್ತಾನದ ಆಚೆಯ ಅಫ್ಘಾನಿಸ್ತಾನಕ್ಕೂ ಭಾರತದ ಈಶಾನ್ಯ ಭಾಗದ ಮಣಿಪುರದಲ್ಲಿ ನಡೆಯುತ್ತಿರುವ ಗಲಭೆಗಳಿಗೂ ಸಂಬಂಧವಿದೆ ಎಂದು ರಕ್ಷಣಾ ವಿಭಾಗದ ಪರಿಣಿತರು ಮತ್ತು ಗೂಢಚರ್ಯ ವಿಭಾಗದವರು ಹೇಳುತ್ತಿದ್ದಾರೆ. ಈ ವಿಷಯ ಕೇಳಿದ ತಕ್ಷಣ ಪ್ರತಿಯೊಬ್ಬರಿಗೂ ಆಶ್ಚರ್ಯವಾಗಬಹುದು. ಕಳೆದ ಒಂದು ವರ್ಷ ದಿಂದ ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಬೆಳವಣಿಗೆಗಳಿಗೂ ಮಣಿಪುರಕ್ಕೂ ನೇರ-ನೇರ ಸಂಬಂಧವಿದೆ. ಪ್ರಪಂಚ ಭೂಪಟವನ್ನು ಗಮನಿಸಿದರೆ ಜಗತ್ತಿನಲ್ಲಿ ಓಪಿಯ ಮ್‌ನ ಉತ್ಪಾದನೆ/ಸಾಗುವಳಿ, ನಂತರ ಓಪಿಯಮ್‌ನಿಂದ ಡ್ರಗ್ಸ್ ತಯಾರಿಕೆ ಮತ್ತು ಸ್ಮಗ್ಲಿಂಗ್‌ಗೆ ಜಗತ್ತಿನಲ್ಲಿ ಎರಡು ಪ್ರಧಾನವಾದ ಕ್ಷೇತ್ರಗಳಿರುವುದು ಅರಿವಾಗುತ್ತದೆ.

ಅವುಗಳಲ್ಲಿ ಮೊದಲನೆಯದು ಇರಾನ್, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ. ಈ ವಲಯವನ್ನು ‘ಗೋಲ್ಡನ್ ಕ್ರೆಸೆಂಟ್’ ಎನ್ನುವರು. ಇದು ಭಾರತ ದೇಶದ ವಾಯವ್ಯ ಭಾಗದಲ್ಲಿದೆ. ಇನ್ನು ಭಾರತದ ಈಶಾನ್ಯ ಭಾಗದಲ್ಲಿ ಮ್ಯಾನ್ಮಾರ್, ಲಾವೋಸ್, ಥೈಲ್ಯಾಂಡ್ ಈ ಮೂರು ದೇಶಗಳು ಸಹ ಡ್ರಗ್ಸ್, ಓಪಿಯಮ್ ಉತ್ಪಾದನೆಯಲ್ಲಿ ಪ್ರಪಂಚ ದಲ್ಲಿಯೇ ಕುಖ್ಯಾತಿ ಪಡೆದಿವೆ. ಈ ವಲಯವನ್ನು ‘ಗೋಲ್ಡನ್ ಟ್ರಯಾಂಗಲ್’ ಎನ್ನುವರು. ಇಲ್ಲಿ ಅರ್ಥ ಮಾಡಿಕೊಳ್ಳಬೇಕಾದ ವಿಚಾರ ವೆಂದರೆ ಭಾರತದ ವಾಯವ್ಯ ದಿಕ್ಕಿನಲ್ಲಿ ಗೋಲ್ಡನ್ ಕ್ರೆಸೆಂಟ್ ಇದ್ದರೆ, ಈಶಾನ್ಯ ದಿಕ್ಕಿನಲ್ಲಿ ಗೋಲ್ಡನ್ ಟ್ರಯಾಂಗಲ್ ಇದೆ. ಗೋಲ್ಡನ್ ಟ್ರಯಾಂಗಲ್‌ನಿಂದ ಬರುವ ಮಾದಕ ವಸ್ತುಗಳ ಪೂರೈಕೆಯ ಪ್ರವೇಶಸ್ಥಾನ ಮಣಿಪುರ. ಅಫ್ಘಾನಿಸ್ತಾನದಲ್ಲಿ ತಾಲಿಬಾ ನಿಗಳು ಅಧಿಕಾರಕ್ಕೆ ಬಂದಾಗಿನಿಂದ, ಕಳೆದ ಎರಡು ವರ್ಷಗಳಿಂದ ಅಲ್ಲಿ ಡ್ರಗ್ಸ್ ವ್ಯಾಪಾರದ ಮೇಲೆ ತುಂಬಾ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.

ಅಫ್ಘಾನಿಸ್ತಾನದ ಆರ್ಥಿಕ ವ್ಯವಹಾರ ಡ್ರಗ್ಸ್ ಮೇಲೆ ಅವಲಂಬಿತವಾಗಿದ್ದರೂ ತಾವು ಅಧಿಕಾರಕ್ಕೆ ಬಂದಿರುವುದರಿಂದ ಡ್ರಗ್ಸ್ ಅನ್ನು ಸಂಪೂರ್ಣವಾಗಿ ನಾಶಮಾಡುವ ಸಂಕಲ್ಪ ಅವರದ್ದು. ಭಾರಿ ಪ್ರಮಾಣದಲ್ಲಿ ಓಪಿಯಮ್ ಸಾಗುವಳಿ ಮತ್ತು ಮಾದಕ
ವಸ್ತುಗಳ ಜಾಲವನ್ನು ಅವರು ನಾಶ ಮಾಡುತ್ತಿದ್ದಾರೆ. ೨೦೨೧-೨೨, ೨೦೨೨-೨೩ ಈ ಅವಧಿಯಲ್ಲಿ ಅಫ್ಘಾನಿಸ್ತಾನದಲ್ಲಿ ನಂಗನ ಮಾರ್, ಹೆಲ್ಮಾರ್‌ನಂಥ ಮಾದಕವಸ್ತುಗಳ ತಯಾರಿಕೆಯ ಸ್ಥಳಗಳಲ್ಲಿ ಹೇರಳ ಪ್ರಮಾಣದಲ್ಲಿ ಓಪಿಯಂ ಸಾಗುವಳಿ ಕಡಿಮೆ ಯಾಗಿದೆ. ಹೆಲ್ಮಾರ್‌ನಲ್ಲಿನ ಉಪಗ್ರಹ ಚಿತ್ರಗಳನ್ನು ಗಮನಿಸಿದರೆ, ನಸುಗೆಂಪು ಬಣ್ಣದಲ್ಲಿರುವ ಓಪಿಯಮ್ ಸಾಗುವಳಿ ಪ್ರದೇಶ ಗಳು ಈಗ ಕಣ್ಮರೆಯಾಗಿ,ಹಸಿರು ಬಣ್ಣದ ಚಿತ್ರಗಳು ಕಾಣುತ್ತಿವೆ. ಅಂದರೆ ಈಗ ಅಲ್ಲಿ ಗೋಧಿಯ ಸಾಗುವಳಿ ಹೆಚ್ಚಾಗಿ ಆಗುತ್ತಿದೆ. ಈ ಸಾಧನೆಯು ಜಗತ್ತಿನ ಒಂದು ದೇಶಕ್ಕೆ ಇಷ್ಟವಾಗುತ್ತಿಲ್ಲ. ಅದೇ ಅಮೆರಿಕ!

ಏಕೆಂದರೆ, ಅಮೆರಿಕ, ಲ್ಯಾಟಿನ್ ಅಮೆರಿಕ, ಯುರೋಪ್ ಗಳಲ್ಲಿ ಮಾದಕ ವಸ್ತುಗಳ ವ್ಯಾಪಾರವು ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ. ಅಫ್ಘಾನಿಸ್ತಾನದಿಂದ ಇರಾನ್ ಮೂಲಕ ಟರ್ಕಿ ಮಾರ್ಗವಾಗಿ ಅಮೆರಿಕಕ್ಕೆ ಮಾದಕ ವಸ್ತುಗಳು ಹೋಗದಿದ್ದರೆ,
ಅಲ್ಲಿ ಮಾದಕದ್ರವ್ಯಗಳ ವ್ಯಸನಿಗಳಾಗಿರುವವರು ಸ್ಯಾಂಟನೋ ಎನ್ನುವ ಅತ್ಯಂತ ಅಪಾಯಕಾರಿ ವಸ್ತುವಿನ ಬಳಕೆ ಶುರು ಮಾಡುತ್ತಾರೆ. ಇದು ಭಾರಿ ಪ್ರಮಾಣದ ಪ್ರಾಣಹಾನಿಗೆ ಕಾರಣವಾಗುತ್ತದೆ. ಜನರು ಬಹುಬೇಗ ಸತ್ತರೆ ಅದರಿಂದ ಬಹುದೊಡ್ಡ ಸಮಸ್ಯೆ ಹುಟ್ಟುತ್ತದೆ.

ಅಫ್ಘಾನಿಸ್ತಾನ ದಲ್ಲಿ ಡ್ರಗ್ಸ್ ಉತ್ಪಾದನೆ ಕಡಿಮೆಯಾಗಿರುವುದರಿಂದ ಅಮೆರಿಕಕ್ಕೆ ಬೇಕಾಗಿರುವ ಡ್ರಗ್ಸ್ ಪೂರೈಕೆ ಗೋಲ್ಡನ್
ಟ್ರಯಂಗಲ್ ವಲಯದಿಂದಲೇ ನಡೆಯಬೇಕು. ಗೋಲ್ಡನ್ ಟ್ರಯಾಂಗಲ್ ವಲಯದಿಂದ ಹೀಗೆ ಮಾದಕ ವಸ್ತುಗಳು ಪೂರೈಕೆ ಯಾಗಬೇಕಾದರೆ ಇಲ್ಲಿನ ಮೂರು ದೇಶಗಳಲ್ಲಿ ಡ್ರಗ್ಸ್ ಸಾಗುವಳಿ ಮತ್ತು ಸಾಗಣೆ ಮುಂದುವರಿಯಬೇಕು. ಆದರೆ ಭಾರತದಲ್ಲಿ ನರೇಂದ್ರ ಮೋದಿಯವರ ಸರಕಾರ ಅಸ್ತಿತ್ವಕ್ಕೆ ಬಂದ ಮೇಲೆ ಡ್ರಗ್ಸ್ ಉತ್ಪಾದನೆ, ಪೂರೈಕೆಯ ಮೇಲೆ ಬಹುದೊಡ್ಡ ಅಂಕುಶ ವಿಧಿಸಲಾಗಿದೆ.

ತ್ರಿಪುರಾದಲ್ಲಿ ಡ್ರಗ್ಸ್ ವಿರುದ್ಧ ಭಾರಿ ಪ್ರಮಾಣದ ಕಾರ್ಯಾಚರಣೆಗಳು ನಡೆಯುತ್ತಿವೆ. ಅಲ್ಲಿನ ನೂರಾರು ಡ್ರಗ್ ಪೆಡ್ಲರ್‌ಗಳು, ಉತ್ಪಾದಕರು ಜೈಲು ಸೇರುತ್ತಿದ್ದಾರೆ. ಅದೇ ರೀತಿ, ಮಿಜೋರಾಂ, ನಾಗಾಲ್ಯಾಂಡ್ ರಾಜ್ಯಗಳಲ್ಲೂ ಡ್ರಗ್ಸ್ ವಿರುದ್ಧ ಅಲ್ಲಿನ ಸರಕಾರ ಗಳು ಸಮರ ಸಾರಿವೆ. ಇನ್ನು ಮಣಿಪುರದ ಬೀರೇನ್ ಸಿಂಗ್ ನೇತೃತ್ವದ ಸರಕಾರವೂ ಹಿಂದೆಂದೂ ಇಲ್ಲದಂಥ ರೀತಿಯಲ್ಲಿ ಡ್ರಗ್ಸ್ ಮೇಲೆ ಸಮರ ಸಾರಿದ್ದು, ಮಾದಕ ವಸ್ತುಗಳು ಸಾಗುವ ಮಾರ್ಗಗಳ ಮೇಲೆ ನಿಗಾ ಇಟ್ಟಿದೆ.

ಮಣಿಪುರ ರಾಜ್ಯದಲ್ಲಿ ಮುಖ್ಯವಾಗಿ ಚೂಡಾ ಚಾಂದ್‌ಪುರ ಜಿಲ್ಲೆಯಲ್ಲಿ ೪೯೦ ಹೆಕ್ಟೇರ್ ಅರಣ್ಯ ಪ್ರದೇಶವನ್ನು ಧ್ವಂಸಗೊಳಿಸಿ, ಭಯೋತ್ಪಾದನಾ ಸಂಘಟನೆಗಳಾದ ಕುಕಿ ನ್ಯಾಷನಲ್ ಆರ್ಮಿ, ಜೋಮಿ ರೆವಲ್ಯೂಷನರಿ ಆರ್ಮಿಗಳು ಅಲ್ಲಿ ಓಪಿಯಮ್ ಸಾಗುವಳಿ ಮಾಡುತ್ತಿದ್ದವು. ಈ ಓಪಿಯಮ್ ಉತ್ಪನ್ನಗಳ ಕಳ್ಳಸಾಗಣೆಯನ್ನು ಬರ್ಮಾದ ಟಾಗ, ಮಾಂಡಲೆ ಪ್ರಾಂತ್ಯಗಳಿಂದ ಮಾಡುವಲ್ಲಿ ಈ ಸಂಘಟನೆಗಳು ಸಕ್ರಿಯವಾಗಿ ಕೈಜೋಡಿಸಿವೆ. ಮಾದಕವಸ್ತುಗಳ ಕಳ್ಳಸಾಗಣೆಯ ಜಾಲಗಳು ಇಲ್ಲಿ ಭರಪೂರ ಸಕ್ರಿಯವಾಗಿವೆ.

ಇಂಥ ಜಾಲಗಳಿಗೂ ಬರ್ಮಾದಲ್ಲಿನ ಕಚಿನ್, ಕರೆನ್, ಚಿನ್, ಜೋಮಿ ಮುಂತಾದ ಬುಡಕಟ್ಟಿಗೆ ಸೇರಿದ ಭಯೋತ್ಪಾದಕರ
ಸಂಘಟನೆಗಳಿಗೂ ಸಂಬಂಧವಿದೆ. ಅದೇ ರೀತಿ ಮಣಿಪುರದಲ್ಲೂ ಈ ಸಂಘಟನೆಗಳಿಗೆ ನಂಟು ಇದೆ. ಮಣಿಪುರ ಸರಕಾರ ಇವು ಗಳನ್ನೆಲ್ಲಾ ನಿಯಂತ್ರಿಸುವ ಕಾರ್ಯ ಮಾಡುತ್ತಿದೆ. ಆದ್ದರಿಂದಲೇ ಈ ಗಲಭೆಗಳು ನಡೆಯುತ್ತಿರುವುದು. ಕಳೆದ ವರ್ಷ ಮಣಿಪುರ ಸರಕಾರವು ಪೊಲೀಸ್ ಅಧಿಕಾರಿಯೊಬ್ಬರಿಗೆ ಉತ್ತಮ ಸೇವಾ ಪದಕವನ್ನು ನೀಡಲು ತೀರ್ಮಾನಿಸಿತ್ತು. ಆದರೆ ಅವರಿಗೆ ಮಾದಕ ವಸ್ತುಗಳ ಕಾರ್ಯ ಜಾಲಗಳೊಂದಿಗೆ ಸಂಬಂಧವಿರುವ ವಿಷಯ ತಿಳಿದಾಕ್ಷಣ ಸರಕಾರವು ಅವರ ಮೇಲೆ ಕ್ರಮ ಕೈಗೊಂಡಿದ್ದರ ಜತೆಗೆ, ಪುರಸ್ಕಾರ ನೀಡುವ ಉಪಕ್ರಮದಿಂದಲೂ ಹಿಂದಡಿಯಿಟ್ಟಿತ್ತು.

ಹೀಗೆ ಮಣಿಪುರದಲ್ಲಿ ಮಾದಕ ವಸ್ತುಗಳ ಕಳ್ಳಸಾಗಣೆ ಜಾಲದ ವಿರುದ್ಧ ಅತ್ಯಂತ ನಿಷ್ಠುರವಾಗಿ ಕ್ರಮ ಕೈಗೊಳ್ಳಲಾಗುತ್ತಿದೆ ಮತ್ತು ಈ ಪಿಡುಗನ್ನು ನಿಯಂತ್ರಿಸಲಾಗುತ್ತಿದೆ. ಅರಣ್ಯ ಪ್ರದೇಶಗಳಲ್ಲಿ ಇನ್ನಿಲ್ಲದಂತೆ ತಪಾಸಣೆ ನಡೆಯುತ್ತಿದೆ. ಈ ಕಾರಣದಿಂದಲೇ ಮಣಿಪುರದಲ್ಲಿನ ಗಲಭೆಗಳಿಗೆ ಈ ಮಾದಕ ವಸ್ತುಗಳ ಕಾರ್ಯಜಾಲದವರು ಕುಮ್ಮಕ್ಕು ನೀಡುತ್ತಿದ್ದಾರೆ. ಅಫ್ಘನಿಸ್ತಾನದಲ್ಲಿ ಡ್ರಗ್ಸ್ ಉತ್ಪಾದನೆ ಕಡಿಮೆಯಾಗುವುದರೊಂದಿಗೆ ಈ ಗೋಲ್ಡನ್ ಟ್ರಯಾಂಗಲ್ ವಲಯದ ಮೇಲೆ ಒತ್ತಡ ಹೆಚ್ಚಾಗಿದೆ. ಈ ವಲಯದಲ್ಲಿ ಉತ್ಪಾದನೆಯಾದ ಮಾದಕ ದ್ರವ್ಯಗಳು ಮಣಿಪುರದ ಮಾರ್ಗವಾಗಿ ನಿಗದಿತ ನೆಲೆಗಳಿಗೆ ರವಾನೆಯಾಗುತ್ತವೆ.

ಮುಖ್ಯವಾಗಿ ಚೂಡಾ ಚಾಂದ್‌ಪುರ ಜಿಲ್ಲೆಯಲ್ಲಿ ಕುಕಿ ಸಮುದಾಯದವರು ಹೆಚ್ಚಾಗಿ ವಾಸಿಸುತ್ತಾರೆ. ಈ ಪ್ರಾಂತ್ಯದಲ್ಲಿಯೇ ಅತ್ಯಧಿಕ ಪ್ರಮಾಣದಲ್ಲಿ ಮಾದಕ ವಸ್ತು ವ್ಯಸನಿಗಳಾಗಿರುವ ಯುವಕರಿದ್ದಾರೆ. ಹೀಗೆ ಈ ಪ್ರದೇಶವು ಡ್ರಗ್ಸ್ ದಂಧೆಗೆ ರಹದಾರಿ ಯಾಗಿರವುದರ ಜತೆಗೆ, ಅಲ್ಲಿನ ಸ್ಥಳೀಯರೂ (ಮಣಿಪುರದ ಶೇ.೧೦ರಷ್ಟು ಜನ) ಈ ವ್ಯಸನಕ್ಕೆ ದಾಸರಾಗಿರುವಂಥ ಪರಿಸ್ಥಿತಿಗೆ ಸಾಕ್ಷಿಯಾಗಿದೆ. ಮಾದಕ ವಸ್ತುಗಳ ಕಾರ್ಯ ಜಾಲ ಮತ್ತು ಕಳ್ಳಸಾಗಣೆಗಳ ಮೇಲೆ ಹೀಗೆ ನಿಯಂತ್ರಣ ಸಾಧಿಸಿರುವುದು ಅಪಥ್ಯ ವಾಗಿರುವ ವ್ಯಕ್ತಿಗಳು ಮತ್ತು ಶಕ್ತಿಗಳು ಮಣಿಪುರದಲ್ಲಿ ಹೀಗೆ ದೊಂಬಿಯನ್ನು ಸೃಷ್ಟಿಸುತ್ತಿದ್ದಾರೆ. ಅಲ್ಲದೆ, ಎರಡೂ ಬುಡಕಟ್ಟು ಗಳ ನಡುವೆ ಇರುವಂಥ ಸಹಜ ವೈಷಮ್ಯವನ್ನು ಉಪಯೋಗಿಸಿಕೊಂಡು ಸಂಘರ್ಷದ ಬೆಂಕಿಗೆ ಮತ್ತಷ್ಟು ತುಪ್ಪ ಸುರಿಯು ತ್ತಿದ್ದಾರೆ.

ಅಫ್ಘಾನಿಸ್ತಾನದಲ್ಲಿ ಕಡಿಮೆಯಾದ ಉತ್ಪಾದನೆಯನ್ನು ಪೂರ್ತಿಗೊಳಿಸಲು ನಡೆಯುತ್ತಿದ್ದ ಪ್ರಯತ್ನಕ್ಕೆ ಅಡ್ಡಿ ಬಂದ ಕಾರಣಕ್ಕೆ ಮಣಿಪುರ ಸರಕಾರವನ್ನು ಸಂಕಷ್ಟಕ್ಕೆ ಸಿಲುಕಿಸಲು ಪ್ರಯತ್ನಿಸುತ್ತಿರುವ ಮಾದಕ ವಸ್ತುಗಳ ಕಾರ್ಯಜಾಲಗಳನ್ನು ಕೇಂದ್ರ ಸರಕಾರ ಮಟ್ಟಹಾಕುತ್ತಿದೆ. ಹೀಗಾಗಿ ಕೇಂದ್ರ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಮಣಿಪುರ ಪ್ರದೇಶದಲ್ಲಿ ಹೀಗೆ ನಿರಂತರ ಸಂಘರ್ಷಗಳು ನಡೆಯುತ್ತಿವೆ ಎಂದು ಗುಪ್ತ ಚರ ಮೂಲಗಳು ತಿಳಿಸಿವೆ. ಅಫ್ಘಾನಿಸ್ತಾನಕ್ಕೂ ಮಣಿಪುರದ ಗಲಭೆಗಳಿಗೂ ಇರುವ ಸಂಬಂಧ ಈಗ ಗೊತ್ತಾಯಿತಲ್ಲವೇ?