Saturday, 14th December 2024

ಇಎಂಎಸ್ ಭಾಷಣ ಕೇಳಿ ಅರಸು ಮಾರ್ಕ್ಸ್‌ವಾದಿ ಆಗಲಿಲ್ಲ !

ಪ್ರಸ್ತುತ

ಎಂ.ಕೆ.ಭಾಸ್ಕರ ರಾವ್

ಇಂದಿರಾ ಗಾಂಧಿಯವರ ರಾಜಕೀಯ ಬದ್ಧ ವೈರಿಗಳಲ್ಲಿ ಇಎಂಎಸ್ ಮೊದಲಿಗರು ಎನ್ನುವುದು ಅರಸುಗೆ ಗೊತ್ತಿಲ್ಲದ್ದೇನೂ ಆಗಿರಲಿಲ್ಲ. ಆದರೂ ಅವರು ಇಎಂಎಸ್‌ರ ಉಭಯಕುಶಲೋಪರಿ ವಿಚಾರಿಸಿ ಕೈಕುಲುಕಿದರು. ಇಎಂಎಸ್ ಭಾಷಣ ಕೇಳಿದ ಅರಸು ಮಾರ್ಕ್ಸ್‌ವಾದಿ ಆಗಲಿಲ್ಲ. ಅರಸು ತಮ್ಮ ಭಾಷಣ ಕೇಳಲು ಬಂದರೆಂಬ ಕಾರಣಕ್ಕೆ ಕಾಂಗ್ರೆಸ್ ವಿಚಾರದಲ್ಲಿ ಇಎಂಎಸ್ ಮೃದು ಆಗಲಿಲ್ಲ.

ಇತ್ತೀಚಿನ ದಶಕಗಳಲ್ಲಿ ಕರ್ನಾಟಕ ಕಂಡ ಖಡಕ್ ರಾಜಕಾರಣಿ ಸಿದ್ದರಾಮಯ್ಯ. ದೇವರಾಜ ಅರಸು ತರುವಾಯದಲ್ಲಿ ಕಾಂಗ್ರೆಸ್‌ನಲ್ಲಿ ಎರಡನೇ ಬಾರಿಗೆ ಮುಖ್ಯಮಂತ್ರಿ ಗದ್ದುಗೆಯನ್ನು ಕೈ ವಶಪಡಿಸಿಕೊಂಡಿರುವ ಚಾಣಾಕ್ಷ. ಸಾರ್ವಜನಿಕ ಬದುಕಿನಲ್ಲಿ ಅವರದು ನೇರವೂ ನಿಷ್ಠುರವೂ ಆದ ನಡವಳಿಕೆ. ತಾವು ಹೇಳಬೇಕಾ ಗಿರುವುದನ್ನು ಕಡ್ಡಿ ಮುರಿದಂತೆ ಹೇಳುವುದಕ್ಕೆ ಯಾವತ್ತೂ ಹಿಂದೆ ಮುಂದೆ ನೋಡಿದವರಲ್ಲ. ಉಘೇಉಘೇ ಎಂದು ವಾಚಾಮಗೋಚರ ಹೊಗಳುವ ವಂದಿಮಾಗಧರನ್ನು ಸುರಕ್ಷಿತ ಅಂತರದಲ್ಲಿಡುವುದಕ್ಕೆ ಹೇಗೋ ಟೀಕಾಕಾರರ ಬಾಯಿ ಮುಚ್ಚಿಸುವುದರಲ್ಲಿಯೂ ಅವರು ಸಿದ್ಧಹಸ್ತರು.

೨೦೧೩ರಿಂದ ೧೮ರವರೆಗೆ ಮೊದಲಬಾರಿ ಸಿಎಂ ಆಗಿದ್ದ ಅವಧಿಯಲ್ಲಿ ಅವರಲ್ಲಿ ಕಂಡ ಈ ಗುಣಗಳು ಎರಡನೇ ಬಾರಿ ಸಿಎಂ ಆದ ಬಳಿಕ ನಿಧಾನವಾಗಿ ಕರಗುತ್ತಿದೆಯೇನೋ ಎಂ ಅನುಮಾನಗಳು, ಅವರು ಸಿಎಂ ಗದ್ದುಗೆ ಏರಿದ ಏರಿದ ಎರಡೇ ತಿಂಗಳಲ್ಲಿ ಕಾಡಲಾರಂಭಿಸಿವೆ. ಸಿದ್ದರಾಮಯ್ಯನವರ ನೇರನಿಷ್ಠುರ ನಡವಳಿಕೆಯನ್ನು ಅವರದೇ ಪಕ್ಷದಲ್ಲಿ ಸಹಿಸಿಕೊಳ್ಳಲಾಗದ ಅನೇಕರು ಇದ್ದಾರೆ. ಅಸಹಾಯಕತೆಯಲ್ಲಿ ಅವರೆಲ್ಲ ಬಾಯಿ ಮುಚ್ಚಿಕೊಂಡೂ ಇದ್ದಾರೆ. ರಾಜ್ಯದ ಸರಿಸುಮಾರು ನಲವತ್ತು ವಿಧಾನಸಭಾ ಕ್ಷೇತ್ರಗಳಲ್ಲಿ ಯಾರು ಗೆಲ್ಲಬೇಕು, ಯಾರು ಗೆಲ್ಲಬಾರದು ಎನ್ನುವುದನ್ನು ನಿರ್ಣಯಿಸುವ ಜಾತಿ ಬಲದ ಸಾಮರ್ಥ್ಯವೂ ಸಿದ್ದರಾಮಯ್ಯ ಅವರಲ್ಲಿರು ವುದೇ ಶಾಸಕರ ಅಸಹಾಯಕತೆಗೆ ಪ್ರಬಲ ಕಾರಣ ಎಂಬ ಮಾತು ಆ ಪಕ್ಷದಲ್ಲೇ ಕೇಳಿಬರುತ್ತಿದೆ.

ಜನತಾ ಪರಿವಾರದಲ್ಲಿ ರಾಜಕೀಯವಾಗಿ ಬಲಿತ ಸಿದ್ದ ರಾಮಯ್ಯ, ಕಾಂಗ್ರೆಸ್‌ನೊಳಕ್ಕೆ ಬಂದ ತರುವಾಯದಲ್ಲಿ ಬೆಳೆದ ಬಗೆಯನ್ನು ‘ಒಂಟೆ ಡೇರೆಯೊಳಗೆ ನುಗ್ಗಿದಂತೆ’ ಎಂದು ಸ್ವಪಕ್ಷೀಯರೇ ವರ್ಣಿಸುತ್ತಾರೆ. ಪಕ್ಷದ ಒಳ ವ್ಯವಹಾರ ಅದೆಂದು ಕೆಲವರು ನಿರ್ಲಕ್ಷಿಸಬಹುದು. ಆದರೆ ಮುಖ್ಯಮಂತ್ರಿಯಾಗಿ ಅವರ ಬಾಹ್ಯ ನಡವಳಿಕೆಗಳಲ್ಲಿ ಆಗುವ ಬದಲಾವಣೆ ಮತ್ತು ಅದಕ್ಕೆ ಪೂರಕವಾಗಿರುವ ಒತ್ತಡ ತಂತ್ರ ಸಾರ್ವತ್ರಿಕವಾಗಿ ಅಚ್ಚರಿ ಮೂಡಿಸುತ್ತಿರುವುದಂತೂ ನಿಜ.

ಕಳೆದ ತಿಂಗಳ ೨೩ರಂದು, ಶನಿವಾರ ಕೆಲವು ಪುಸ್ತಕ ಗಳನ್ನು ಬಿಡುಗಡೆ ಮಾಡಲು ಸಿಎಂ ಒಪ್ಪಿಕೊಂಡಿದ್ದರು. ಈ ಕೃತಿಗಳೆಲ್ಲವೂ ವಿಶ್ವವಾಣಿ ದೈನಿಕದಲ್ಲಿ ಅಂಕಣ ರೂಪದಲ್ಲಿ ಪ್ರಕಟವಾದವು. ಅದರಲ್ಲಿ ವಿಶ್ವೇಶ್ವರ ಭಟ್ಟರ ಅಂಕಣ ಬರಹಗಳ ಮೂರು ಸಂಪುಟವೂ ಸೇರಿದ್ದವು. ಬಿಡುಗಡೆ ಕಾರ್ಯಕ್ರಮಕ್ಕೆ ಹಾಜರಾಗುವುದನ್ನು ಖಚಿತಪಡಿಸಿದ್ದ ಸಿದ್ದರಾಮಯ್ಯ ಕೊನೆ ಗಳಿಗೆಯಲ್ಲಿ ಬರಲಿಲ್ಲ. ಅವರು ಬರಲಿಲ್ಲ ಎನ್ನುವುದು ದೊಡ್ಡ ಅಪರಾಧವಲ್ಲ. ಆದರೆ ಸಿದ್ದರಾಮಯ್ಯ ಯಾಕೆ ಹೀಗೆ ಮಾಡಿ
ದರು ಎಂಬ ಪ್ರಶ್ನೆ ಸಹಜವಾಗೇ ಕೆಲವರಾದರೂ ಯೋಚಿಸುವಂತೆ ಮಾಡಿತು. ಸಿಎಂ ಆದವರಿಗೆ ಹತ್ತಾರು ಬಗೆಯ ಕೆಲಸ, ಕಾರ್ಯಭಾರದ ಒತ್ತಡ ಇರುವುದು ಸಹಜ.

ಒಪ್ಪಿಕೊಂಡ ಕಾರ್ಯಕ್ರಮಕ್ಕೆ ಹೋಗಲಾಗದ ಸ್ಥಿತಿ ಕೊನೆ ಗಳಿಗೆಯಲ್ಲಿ ಎದುರಾಗುವುದೂ ಸಹಜವೇ. ಇಂಥ ಯಾವುದಾದರೊಂದು ಅನಿವಾರ್ಯದ ಪರಿಸ್ಥಿತಿ ಯಿಂದ ಬಾರದೇ ಇದ್ದಿದ್ದರೆ ಸಿದ್ದರಾಮಯ್ಯನವರ ವಿಚಾರದಲ್ಲಿ ಆಕ್ಷೇಪಕ್ಕೆ ಅವಕಾಶವೇ ಇರುತ್ತಿರಲಿಲ್ಲ. ಆದರೆ ಅವರ ಗೈರು ಹಾಜರಾಗುವ ತೀರ್ಮಾನಕ್ಕೆ
ಕಾರಣವಾಗಿದ್ದು ಅವರ ಸ್ವಂತದ್ದಾಗಿರದೆ ಅವರನ್ನು ಕಟ್ಟಿ ಹಾಕುವ ಗುಂಪಿನದ್ದಾಗಿದ್ದು ಎನ್ನುವುದು. ವಿಶ್ವೇಶ್ವರ ಭಟ್ಟರ ಪುಸ್ತಕ ಬಿಡುಗಡೆಗೆ ಮುಖ್ಯಮಂತ್ರಿ
ಒಪ್ಪಿಕೊಂಡಿರುವ ಸುದ್ದಿ ಹರಡುತ್ತಿದ್ದಂತೆ ‘ಯಾವುದೇ ಕಾರಣಕ್ಕೂ ಸಿಎಂ ಹೋಗಕೂಡದು’ಎಂಬ ವಾದ, ಒತ್ತಡ ಸಾಮಾಜಿಕ ಜಾಲತಾಣದಲ್ಲಿ ವಾರಗಟ್ಟಲೆ ಆಂದೋಲನದಂತೆ ನಡೆಯಿತು. ಇದಕ್ಕೆ ಸಿಎಂ ಮಣಿದರೋ, ಬೆದರಿದರೋ ಅಥವಾ ತಾವಾಗಿಯೇ ತೀರ್ಮಾನಕ್ಕೆ ಬಂದರೋ ಸ್ಪಷ್ಟವಾಗಿಲ್ಲ.

ಸ್ಪಷ್ಟವಾಗಿರುವ ಸಂಗತಿಯೆಂದರೆ ಮುಖ್ಯಮಂತ್ರಿಯಾದವ ರೊಬ್ಬರ ಬುದ್ಧಿಭಾವಕ್ಕೆ ಬೇಲಿ ಹಾಕುವ ಯತ್ನ ನಡೆಯಿತು ಎನ್ನುವುದು. ಮುಖ್ಯಮಂತ್ರಿಯವರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ನಿರ್ಬಂಧ ವಿಽಸಲಾಯಿತು ಎನ್ನುವುದು! ಎಪ್ಪತ್ತರ ದಶಕದಲ್ಲಿ ತುರ್ತು ಪರಿಸ್ಥಿತಿ ಹೇರಿಕೆಯಾದಾಗ ಮೊದಲು ನಿರ್ಬಂಧಕ್ಕೆ ಈಡಾಗಿದ್ದು ಅಭಿವ್ಯಕ್ತಿ ಸ್ವಾತಂತ್ರ್ಯ. ಆಡುವ ಬಾಯಿ ಕಟ್ಟಿದ, ಕೇಳುವ ಕಿವಿ ಮುಚ್ಚಿಸಿದ, ನೋಡುವ ಕಣ್ಗಳಿಗೆ ಪಟ್ಟಿ ಕಟ್ಟಿದ ಆ ವಿಪರೀತದ ಬಗ್ಗೆ ಆ ಸಮಯದಲ್ಲಿ ಚರ್ಚೆ ನಡೆದಷ್ಟು ಪ್ರಮಾಣದಲ್ಲಿ ಇನ್ಯಾವಾಗಲೂ ನಡೆದದ್ದಿಲ್ಲ.

ತುರ್ತು ಪರಿಸ್ಥಿತಿ ತರುವಾಯದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ವಿಚಾರದಲ್ಲಿ ಜನರಲ್ಲಿ ಗಣನೀಯ ಜಾಗೃತಿ ಮೂಡಿದ್ದು ಸುಳ್ಳಲ್ಲ. ಇನ್ನೊಂದು ಅಭಿಪ್ರಾಯಕ್ಕೆ ಅವಕಾಶ ತಡೆಯುವುದು, ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅಡ್ಡಿ ಪಡಿಸುವುದಾಗಿದ್ದರೆ, ಮತ್ತೊಬ್ಬರು ಏನು ಹೇಳುತ್ತಾರೆನ್ನುವುದನ್ನು ಕೇಳದೇ ಇರುವುದು ಅಸಹಿಷ್ಣುತೆಯ ಲಕ್ಷಣ. ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಅಸಹಿಷ್ಣುತೆ ವಿಚಾರದಲ್ಲಿ ಏರಿದ ಧ್ವನಿಯಲ್ಲಿ ಮಾತಾಡುವ ಜನರೇ ಸಿದ್ದರಾಮಯ್ಯನವರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಸಿದು ಹಾಕಿದರು ಎನ್ನುವುದು; ಅವರು ಏನು ಮಾತಾಡಲಿದ್ದಾರೆಂಬು ದನ್ನು ಕೇಳಲಾಗದಷ್ಟು ಅಸಹಿಷ್ಣುಗಳಾದರು ಎನ್ನುವುದು ಪರಿಸ್ಥಿತಿಯ ವ್ಯಂಗ್ಯ.

ಕೆಲವು ತಿಂಗಳ ಹಿಂದೆ ವಿಶ್ವೇಶ್ವರ ಭಟ್ಟರ ಬೇರೊಂದು ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ವಿಜ್ಞಾನ ಬರಹಗಾರ ನಾಗೇಶ ಹೆಗಡೆ ಭಾಗವಹಿಸಿದ್ದು ಭಾರೀ ಚರ್ಚೆ,
ವಾದ ಪ್ರತಿವಾದಗಳಿಗೆ ಕಾರಣವಾಗಿತ್ತೆನ್ನುವುದು ಇಲ್ಲಿ ನೆನಪಾಗುವ ಬೆಳವಣಿಗೆ. ಇರುವುದೊಂದೇ ಭೂಮಿಯನ್ನು ಕಾಪಾಡಿಕೊಳ್ಳುವ ಬಗೆ ಕುರಿತಂತೆ ಹೆಗಡೆ ಅಲ್ಲಿ ಮಾತಾಡಿದರು. ಅಂಥ ಅವಕಾಶ ಸಿದ್ದರಾಮಯ್ಯನವರಿಗೆ ಸಿಗದಂತೆ ಮಾಡಲಾಯಿತು ಎನ್ನುವುದು ನಾವು ಹೇಳಿಕೊಂಡಿರುವ ತಥಾಕಥಿತ ಸ್ವಾತಂತ್ರ್ಯಕ್ಕೆ ಪೂರಕವಲ್ಲದ ನಡವಳಿಕೆ ಎನ್ನದೆ ಇನ್ನೇನೆಂದು ಹೇಳಬೇಕು…? ಸಿದ್ದರಾಮಯ್ಯ ಘಟನೆಗೆ ಪೂರಕವೋ ಎಂಬಂತೆ ಪುಣೆ ಯಲ್ಲಿ ಆಗಸ್ಟ್ ಒಂದರಂದು ನಡೆದ ಲೋಕಮಾನ್ಯ ಬಾಲ ಗಂಗಾಧರ ತಿಲಕ್ ಸ್ಮಾರಕ ಪ್ರಶಸ್ತಿ ಪ್ರದಾನ ಸಮಾರಂಭದ ಸುದ್ದಿ ಒಂದಿಷ್ಟು ಗದ್ದಲ ಎಬ್ಬಿಸಿತು.

ತಿಲಕರ ಹೆಸರಲ್ಲಿ ನೀಡುವ ೪೧ನೇ ರಾಷ್ಟ್ರೀಯ ಪ್ರಶಸ್ತಿಗೆ ಈ ಸಲದ ಆಯ್ಕೆ ಪ್ರಧಾನಿ ನರೇಂದ್ರ ಮೋದಿ. ಈ ಮೊದಲು ಇಂದಿರಾಗಾಂಧಿ, ಅಟಲ್ ಬಿಹಾರಿ
ವಾಜಪೇಯಿ, ಪ್ರಣವ್ ಕುಮಾರ ಮುಖರ್ಜಿ, ಮನಮೋಹನ್ ಸಿಂಗ್, ಶರದ್ ಪವಾರ್, ಇನೋಸಿಸ್‌ನ ನಾರಾಯಣಮೂರ್ತಿ ಮುಂತಾದವರು ಈ ಪ್ರಶಸ್ತಿ ಪುರಸ್ಕೃತರು. ಮೋದಿ ಭಾಗವಹಿಸುವ ಕಾರ್ಯಕ್ರಮದ ಮುಖ್ಯ ಅತಿಥಿ ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಎನ್ನುವುದು ವಾದದ ಮೂಲ. ಮೋದಿ ಭಾಗವಹಿ
ಸುವ ಕಾರ್ಯಕ್ರಮದಲ್ಲಿ ಪವಾರ್ ಭಾಗವಹಿಸುವುದಕ್ಕೆ ಐಎನ್ ಡಿಐಎ (ಡಾಟೆಡ್ ಇಂಡಿಯಾ) ಒಕ್ಕೂಟದ ಬಹುತೇಕರು ವಿರೋಧ ಸೂಚಿಸಿದರು. ಪುಣೆ ಕಾಂಗ್ರೆಸ್ ಘಟಕ ಮೋದಿ ವಿರುದ್ಧ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ವ್ಯಕ್ತಪಡಿಸಿತು.

ಆದರೆ ಶರದ್ ಪವಾರ್ ಇದ್ಯಾವುದಕ್ಕೂ ಕ್ಯಾರೇ ಎನ್ನಲಿಲ್ಲ. ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಾವು ಹೇಳಬೇಕಾದ್ದನ್ನು ಹೇಳಿ ಬಂದರು. ವೇದಿಕೆಯಲ್ಲಿ ಮೋದಿ ಮತ್ತು ಪವಾರ್ ರಾಜಕೀಯ ಮರೆತ ಮನುಷ್ಯತ್ವ ಮೆರೆದರು. ಇನ್ನೂ ಚೋದ್ಯದ ಸಂಗತಿ ಎಂದರೆ ವೇದಿಕೆಯಲ್ಲಿ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ, ಮನಮೋಹನ್ ಸಿಂಗ್ ಸಂಪುಟದಲ್ಲಿ ಗೃಹ ಸಚಿವರೂ ಆಗಿದ್ದ ಕಾಂಗ್ರೆಸ್‌ನ ಹಿರಿಯ ದಲಿತ ಮುಖಂಡ ಸುಶೀಲ್ ಕುಮಾರ್ ಶಿಂದೆ ಪಾಲ್ಗೊಂಡಿದ್ದು! ಬಹುತೇಕ ಇಂಗ್ಲಿಷ್, ಹಿಂದಿ ವಾಹಿನಿಗಳಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭದ ನೇರ ಪ್ರಸಾರವಾಯಿತು. ಯಾವುದೇ ಚಾನೆಲ್‌ನ ವರದಿಗಾರರಿಗೆ ಶಿಂದೆ ಉಪಸ್ಥಿತಿ ನಜರಿಗೇ ಬರಲಿಲ್ಲ. ಮೋದಿ ತಮ್ಮ ಭಾಷಣದಲ್ಲಿ ಶಿಂದೆ ಹೆಸರನ್ನು ಉಲ್ಲೇಖಿಸಿದಾಗಲೇ ಕಾಂಗ್ರೆಸ್ ಪಕ್ಷ ಕೂಡ ಗಲಿಬಿಲಿಯಾಗಿದ್ದು.

ಪವಾರ್‌ಗೆ ಕಾರ್ಯಕ್ರಮಕ್ಕೆ ಹೋಗಬಾರದು ಎಂದು ತಡೆಯಲು ಹೊರಟಿದ್ದ ಕಾಂಗ್ರೆಸು ತಮ್ಮದೇ ಪಕ್ಷದ ಹಿರಿಯ ಮುಖಂಡ ಸುಶಿಲ್ ಕುಮಾರ್ ಶಿಂದೆ ವಿಚಾರದಲ್ಲಿ ಯಾಕೆ ಏನೂ ಮಾತಾಡುತ್ತಿಲ್ಲ…? ಯಕ್ಷಪ್ರಶ್ನೆ. ಮೋದಿ ಜತೆ ವೇದಿಕೆ ಹಂಚಿಕೊಂಡ ಅವರ ಕೈ ಕುಲುಕಿದ ಪ್ರಮಾದಕ್ಕೆ ಶಿಂದೆ ಅವರಿಗೆ ಕಾರಣ
ಕೇಳಿ ನೋಟಿಸ್ ಜಾರಿ ಮಾಡಿದ್ದು ಈವರೆಗೆ ವರದಿಯಾಗಿಲ್ಲ. ನೋಟಿಸ್ ಕೊಡದೆಯೇ ಪಕ್ಷದಿಂದ ಸಸ್ಪೆಂಡ್ ಮಾಡುತ್ತದೆಯೇ ಅಥವಾ ನೇರವಾಗಿ ಉಚ್ಚಾಟಿಸುತ್ತದೆಯೇ…? ನೋಡಬೇಕು. ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದ ಎಪ್ಪತ್ತರ ದಶಕ. ಬೆಂಗಳೂರು ಸೆಂಟ್ರಲ್ ಕಾಲೇಜು ಸೆನೆಟ್ ಹಾಲ್‌ನಲ್ಲಿ
ಮಾರ್ಕ್ಸ್‌ವಾದಿ ಕಮ್ಯೂನಿಸ್ಟ್ ಪಕ್ಷದ ನೇತಾರ ಇಎಂಎಸ್ ನಂಬೂದರಿಪಾಡ್‌ರ ಭಾಷಣ.

ಯಾವುದೋ ದತ್ತಿನಿಧಿ ಉಪನ್ಯಾಸ ಎಂಬ ಅಡಬಡ ನೆನಪು. ಇಎಂಎಸ್ ಭಾಷಣ ಶುರುವಾಗಿ ಐದು ನಿಮಿಷವೂ ಆಗಿರಲಿಲ್ಲ. ಸಭೆಯಲ್ಲಿ ಒಂದು ಬಗೆಯ ಸಂಚಲನ, ಕಾರಣ ಸಭೆಗೆ ಅರಸು ಆಗಮನ. ವೇದಿಕೆಗೆ ಬರಲು ಸಂಘಟಕರು ವಿನಂತಿಸಿದರೂ ಹೋಗಲೊಲ್ಲದ ಅರಸು ಜನರ ಮಧ್ಯೆ ಕುಳಿತರು. ಇಎಂಎಸ್ ಅವರದು ಸುಮಾರು ತೊಂಬತ್ತು ನಿಮಿಷದ ವಿಚಾರ ಪ್ರಚೋದಕ ಉಪನ್ಯಾಸ. ಅಲ್ಲಿದ್ದ ಇತರೆಲ್ಲರೂ ಅದನ್ನು ಮೈಯೆಲ್ಲ ಕಿವಿಯಾಗಿ ಕೇಳಿದ ರೀತಿಯಲ್ಲಿ ಅರಸು ಕೂಡ ಆಲಿಸಿದರು. ಇಂದಿರಾ ಗಾಂಧಿಯವರ ರಾಜಕೀಯ ಬದ್ಧ ವೈರಿಗಳಲ್ಲಿ ಇಎಂಎಸ್ ಮೊದಲಿಗರು ಎನ್ನುವುದು ಅರಸುಗೆ ಗೊತ್ತಿಲ್ಲದ್ದೇನೂ ಆಗಿರಲಿಲ್ಲ.

ಆದರೂ ಅವರು ಇಎಂಎಸ್‌ರ ಉಭಯಕುಶಲೋಪರಿ ವಿಚಾರಿಸಿ ಕೈಕುಲುಕಿದರು. ಇಎಂಎಸ್ ಭಾಷಣಕ್ಕೆ ಅರಸು ಹೋಗಿದ್ದು ಕಾಂಗ್ರೆಸ್‌ನಲ್ಲಿದ್ದ ಅನೇಕರಿಗೆ ಸಹನೆ ಆಗಲಿಲ್ಲ. ಆ ದೂರು ಇಂದಿರಾ ಗಾಂಽವರೆಗೂ ಹೋಯಿತು. ಅರಸು ಕ್ಯಾರೇ ಅನ್ನಲಿಲ್ಲ. ಇಎಂಎಸ್ ಭಾಷಣ ಕೇಳಿದ ಅರಸು ಮಾರ್ಕ್ಸ್‌ವಾದಿ ಆಗಲಿಲ್ಲ. ಅರಸು ತಮ್ಮ ಭಾಷಣ ಕೇಳಲು ಬಂದರೆಂಬ ಕಾರಣಕ್ಕೆ ಕಾಂಗ್ರೆಸ್ ವಿಚಾರದಲ್ಲಿ ಇಎಂಎಸ್ ಮೃದು ಆಗಲಿಲ್ಲ. ಅವರವರ ಯೋಗ್ಯತೆ ಅವರವರಿಗೆ. ಅಂಥ ಮನಸ್ಸುಗಳ ಸ್ವಾತಂತ್ರ್ಯ ಹತ್ತಿಕ್ಕುವುದು ಮೃಗೀಯ ಸ್ವಭಾವ ಎನಿಸುತ್ತದೆ.

(ಲೇಖಕರು ಹಿರಿಯ ಪತ್ರಕರ್ತರು)