ಶಿಶಿರ ಕಾಲ
shishirh@gmail.com
‘ಆಸೆಯೇ ದುಃಖಕ್ಕೆ ಮೂಲ’ ಎಂಬ ಮಾತು ಕೇಳಿದಾಕ್ಷಣ ಅದು ಬುದ್ಧ ಹೇಳಿದ್ದು ಎಂದು ಥಟ್ಟನೆ ನೆನಪಾಗುತ್ತದೆ. ಗೌತಮ ಬುದ್ಧ ಸಾವಿರ ಬೋಧನೆ ಮಾಡಿರ ಬಹುದು, ಆದರೆ ಬಹುತೇಕರಿಗೆ ಗೊತ್ತಿರುವ ಅವನ ಏಕೈಕ ಮಾತು ಇದು ಮಾತ್ರ. ಇದನ್ನೇ ವಿಸ್ತರಿಸುವ, ಅನ್ಯ ಆಯಾಮಗಳಲ್ಲಿ ವಿವರಿಸುವ ಹಲವು ಪುಸ್ತಕ, ಗ್ರಂಥಗಳಿವೆ. ಅದೆಷ್ಟೋ ಪ್ರವಚನಗಳಿವೆ. ಸೂಕ್ಷ್ಮವಾದ ಮತ್ತು ಎಲ್ಲ ಕಾಲಕ್ಕೂ ಲಾಗುವಾಗುವ ವಿಚಾರ ಇದು. ಬುದ್ಧ ನದು ಮಹಾವೈರಾಗ್ಯದಿಂದ ಹುಟ್ಟಿದ ಜ್ಞಾನ. ಸರಳ ಆದರೆ ಆಳ.
ಕಷ್ಟ, ಸಾವು, ನೋವು ಇತ್ಯಾದಿಯನ್ನು ಕಂಡಾಗ ಎಲ್ಲರಿಗೂ ಚಿಕ್ಕ ವೈರಾಗ್ಯವೊಂದು ಆ ಕ್ಷಣಕ್ಕೆ ಹಾದು ಹೋಗುತ್ತದೆ. ಆದರೆ ಬುದ್ಧನದು ಅಂಥ ವೈರಾಗ್ಯವಲ್ಲ. ಅವನಲ್ಲಿಯೇ ನಿಂತು ಸತ್ಯವನ್ನು ಹುಡುಕಿಕೊಟ್ಟ ವೈರಾಗ್ಯವದು. ಓಶೋ ರಜನೀಶರ ಮಾತುಗಳಲ್ಲಿ ಬೌದ್ಧ ತತ್ತ್ವಗಳನ್ನು ಕೇಳುವುದರ ಕಿಕ್ಕೇ ಬೇರೆ. ಬುದ್ಧನ ಬೋಧನೆಗಳು, ವಿಚಾರಗಳ ವಿಶೇಷತೆಯೇ ಅದರ ನಿರಂತರ ಪ್ರಸ್ತುತತೆ. ಬುದ್ಧ ಬದುಕಿದ್ದು, ಹೇಳಿದ್ದು ಇವೆಲ್ಲ ರಾಜ ಮಹಾರಾಜರ ಆಳ್ವಿಕೆಯಿದ್ದ ಕ್ರಿ.ಪೂ. ಐದನೇ ಶತಮಾನ. ಎರಡೂವರೆ ಸಾವಿರ ವರ್ಷದ ಹಿಂದೆ.
ಅದಾದ ಮೇಲೆ ಈ ನೆಲದ ಸಂಸ್ಕೃತಿ ಬುಡಮೇಲಾಗಿ ಹೋಯಿತು, ದಾಳಿಗಳಾದವು, ಯುರೋಪಿಯನ್ನರು ದೇಶವನ್ನು ಲೂಟಿ ಮಾಡಿ, ತಿಂದು ತೇಗಿದರು. ಅನಂತರ ಸ್ವಾತಂತ್ರ್ಯ, ಅಲ್ಲಿಂದ ಇಂದಿನವರೆಗೆ. ಹೀಗೆ ಎಲ್ಲ ಕಾಲ, ಸಾಮಾಜಿಕ ವ್ಯವಸ್ಥೆ, ಸಂದರ್ಭಗಳಲ್ಲಿ ಬುದ್ಧನ ಬೋಧನೆ ಮಾತ್ರ ಪ್ರಸ್ತುತವಾಗಿಯೇ ಇತ್ತು, ಇದೆ. ಬುದ್ಧನ ವೈರಾಗ್ಯ ಹುಟ್ಟಿದ್ದು ಶುದ್ಧೋದನನ ಮೂರ್ಖತನ ದಿಂದ ಎನ್ನುವವರಿದ್ದಾರೆ. ಜಗತ್ತಿನ ಕಷ್ಟಗಳನ್ನು ಮರೆಮಾಡಿ ಮಕ್ಕಳನ್ನು ಬೆಳೆಸುವುದು ಸರಿಯಲ್ಲವೆನ್ನುವ ವಾದ. ಸಿದ್ಧಾರ್ಥ ಗೌತಮನಿಗೆ ಆ ಪ್ರಮಾಣದಲ್ಲಿ ಸತ್ಯದ ಆಘಾತವಾಗದಿದ್ದಲ್ಲಿ ಆತ ಬುದ್ಧನಾಗುವಷ್ಟು ವೈರಾಗ್ಯ ಪಡೆಯುತ್ತಿರಲಿಲ್ಲವೇನೋ. ಆತನೊಬ್ಬ ಶಾಕ್ಯ ವಂಶದ ಒಳ್ಳೆಯ ರಾಜನಾಗಿ ಆಳಿ, ಇತಿಹಾಸ ದಲ್ಲಾದ ಅದೆಷ್ಟೋ ರಾಜರಲ್ಲಿ ಒಬ್ಬನಾಗಿರುತ್ತಿದ್ದ.
ಒಟ್ಟಾರೆ ವೈರಾಗ್ಯಕ್ಕೆ ಮತ್ತು ಜ್ಞಾನೋದಯದವರೆಗಿನ ಗೌತಮನ ಸ್ಥಿತಿಗೆ ಆತನ ತಂದೆ ಮಾಡಿದ ತಪ್ಪೇ ಕಾರಣವೆನ್ನುವ ವಾದ. ಅಂದು ಗೌತಮನಿಗೆ ಹೊರಜಗತ್ತನ್ನು ಕಂಡಾಗ ಆದ ಮಾನಸಿಕ ಆಘಾತ ಸಹಿಸಲು ಅಸಾಧ್ಯವಾಗಿಯೇ ಇದ್ದಿರಬೇಕು. ಮನಸ್ಸಿನ ಮೇಲಾಗುವ ಬಾಹ್ಯ ಪ್ರಭಾವಗಳು ಎಂಥೆಂಥ
ವರನ್ನು ಬದಲಿಸಿ ಇತಿಹಾಸವಾಗಿಸಿದೆ ಅಲ್ಲವೇ? ಬಾಲ್ಯದ ಕಷ್ಟ, ಶೋಷಣೆ ಇತ್ಯಾದಿಯನ್ನು ಮೆಟ್ಟಿ ನಿಂತು ಬೆಳೆದವರದ್ದು ಯಶಸ್ಸು. ಆದರೆ ಎಲ್ಲರದೂ ಹಾಗಲ್ಲವಲ್ಲ. ಅಂಥ ಬಾಲ್ಯದಲ್ಲಿ ಸಂಭವಿಸಿದ ಕಹಿಘಟನೆ, ಅನುಭವಗಳ ಭಾರವನ್ನು ಹೊತ್ತು ಜೀವನವಿಡೀ ಬದುಕುವವರು ಇದ್ದಾರೆ. ಆ ಭಾರವನ್ನು
ಹೊರಲಾರದೆ ಅರ್ಧಕ್ಕೇ ಬದುಕು ಬಿಟ್ಟವರು ಅದೆಷ್ಟೋ.
ಯಾರದ್ದೋ, ಯಾವುದೋ ಆಸೆಗೆ ಇನ್ಯಾರದ್ದೋ ಬದುಕು ಮೂರಾಬಟ್ಟೆಯಾಗುವ ಉದಾಹರಣೆಗಳು ಸಾಮಾನ್ಯ. ಗೌತಮನ ತಂದೆಗೆ ದುಃಖವನ್ನೇ ಕಾಣಿಸದೆ ಮಗನನ್ನು ಸಾಕ ಬೇಕೆನ್ನುವ ಆಸೆ ಅದೇಕೆ ಮೂಡಿತೋ ಗೊತ್ತಿಲ್ಲ. ಆತನ ಆ ಆಸೆಯೇ ಆತನ ದುಃಖಕ್ಕೆ ಕಾರಣವಾದದ್ದು ಎಂಬ ವ್ಯಾಖ್ಯಾನವೂ ಇದೆ. ಇರಲಿ, ಏನೋ ಒಂದು. ಇದೆಲ್ಲದರಿಂದ ಜಗತ್ತಿಗೆ ಬುದ್ಧ ಸಿಕ್ಕಿದ. ಕಳೆದ ಒಂದು ಶತಮಾನದಲ್ಲಿ ವಿಜ್ಞಾನ ಅದೆಷ್ಟು ಬೆಳೆದಿದೆ ಎನ್ನುವುದನ್ನು ಹೇಳಿ ವಿವರಿಸಬೇಕಿಲ್ಲ. ಆದ ವೈಜ್ಞಾನಿಕ ಬೆಳವಣಿಗೆಗಳಿಂದ ನಮ್ಮೆಲ್ಲರ ಬದುಕುವ ರೀತಿಯಂತೂ ಪೂರ್ಣ ಬದಲಾಗಿದೆ. ಆದರೆ ಬುದ್ಧನ ಆ ಮಾತು ಮಾತ್ರ ಸಾಮಾಜಿಕವಾಗಿ ಇಂದಿಗೂ ಪ್ರಸ್ತುತ.
ಅಷ್ಟೇ ಅಲ್ಲ, ಜೀವವೈಜ್ಞಾನಿಕವಾಗಿಯೂ ಬುದ್ಧನ ಮಾತು ಸತ್ಯವೆನ್ನುವುದು ನಮ್ಮ ಅರಿವಿಗೆ ಬರುತ್ತಿದೆ. ಡೋಪಮೈನ್- ಇದು ಬುದ್ಧ ಹೇಳಿದ ಆಸೆ, ಬಯಕೆ
ಮತ್ತು ದುಃಖ ಇವೆಲ್ಲವನ್ನೂ ನಿರ್ದೇಶಿಸುವ, ನಮ್ಮ ಮಿದುಳು ತಯಾರಿಸುವ ರಾಸಾಯನಿಕ. ಇದು ಮಿದುಳಿನಲ್ಲಿ ಸಂತೋಷ ವನ್ನು ಉತ್ತೇಜಿಸುವ ನ್ಯೂರೊಟ್ರಾನ್ಸ್ಮಿಟರ್ (ನರಪ್ರೇಕ್ಷಕ). ಪ್ರತಿ ಬಾರಿ ನಮಗೆ ಖುಷಿಯಾದಾಗ, ಗೆಲುವಾದಾಗ ಈ ರಾಸಾಯನಿಕ ಉತ್ಪತ್ತಿಯಾಗುತ್ತದೆ. ಆ ಕಾರಣಕ್ಕೆ ಇದನ್ನು
‘ಖುಷಿಯ ಹಾರ್ಮೋನ್’ ಎಂದು ಕೂಡ ಕರೆಯಲಾಗುತ್ತದೆ. ಖುಷಿಯಾದಾಗ, ಬಯಸಿದ್ದು ಸಿಕ್ಕಾಗ ಇದು ಹದವಾಗಿ ಉತ್ಪತ್ತಿಯಾಗುತ್ತದೆ. ಮಿದುಳಿನಲ್ಲಿರುವ ಈ ರಾಸಾಯನಿಕದ ಗ್ರಾಹಕಗಳು ಇದನ್ನು ಗ್ರಹಿಸುತ್ತವೆ. ಇದರಿಂದ ಖುಷಿ, ಸುಖದ ಅನುಭವ ನಮಗಾಗುತ್ತದೆ ಎನ್ನುವುದು ವಿಜ್ಞಾನ.
ಬೇಕಾದದ್ದನ್ನು ಪಡೆದಾಗ, ಗೆದ್ದಾಗ, ಸಂಭೋಗದ ಸಮಯ ದಲ್ಲಿ ಮತ್ತು ನಂತರ, ಹೀಗೆ ಈ ರಾಸಾಯನಿಕ ಮಿದುಳಿನಲ್ಲಿ ಉತ್ಪತ್ತಿಯಾಗುತ್ತದೆ. ಅಷ್ಟೇ ಅಲ್ಲ, ಈ ರಾಸಾಯನಿಕದ ಬಯಕೆ ನಮ್ಮ ಮಿದುಳಿನಲ್ಲಿ ಹುಟ್ಟುವುದರ ಮೂಲಕ ಹಂಬಲ, ಬಯಕೆ, ಪಡೆಯಬೇಕೆಂಬ ಆಸೆ, ಉತ್ಕಟತೆಯನ್ನು ಹೆಚ್ಚಿಸುತ್ತದೆ. ಈ ರಾಸಾಯನಿಕದ ಬಯಕೆಯೇ ನಮ್ಮ ಅಸಲಿ ಆಸೆಯ ಮೂಲ. ಅದೆಷ್ಟೋ ಲಕ್ಷ ವರ್ಷಗಳ ಹಿಂದಿನ ಆದಿಮಾನವನ ಕಾಲದಲ್ಲಿ ಆಹಾರ ಸಿಕ್ಕಾಗ, ಒಳ್ಳೆಯ ಹಣ್ಣಿನ ಮರ ಸಿಕ್ಕಾಗ, ಕಾಡು ಪ್ರಾಣಿಗಳನ್ನು ಬೇಟೆಯಾಡಿ ಕೊಂದಾಗ, ಈ ಡೋಪಮೈನ್ ರಾಸಾಯನಿಕದ ಉತ್ಪತ್ತಿಯಾಗುತ್ತಿತ್ತು. ಆಗ ಮನುಷ್ಯನಿಗೆ ಬೇಕುಗಳ, ಸಂತೋಷ ಕೊಡುವ ಘಟನೆಗಳ ಸಂಖ್ಯೆ ಕಡಿಮೆಯಿದ್ದವು. ಈ ಕಾರಣಕ್ಕೆ ಡೋಪಮೈನ್ ಅನ್ನು ಮಿದುಳಿನಲ್ಲಿ ಗ್ರಹಿಸಿ ಖುಷಿಯ ಅನುಭವಕ್ಕೆ ಕಾರಣವಾಗುವ
ರೆಸೆಪ್ಟರ್ (ಗ್ರಾಹಕಗಳು) ಅತ್ಯಂತ ಚುರುಕಾಗಿರುತ್ತಿದ್ದವು.
ಅಂದು ಮನುಷ್ಯ ಒಂದು ಬೇಟೆಯಾಡಿದರೆ ಆತನಿಗೆ, ಇಂದಿನ ಮನುಷ್ಯನಿಗೆ ಸುಮಾರು ಐವತ್ತು ಹೊಸ ವಸ್ತುಗಳನ್ನು ಖರೀದಿಸಿದಾಗ ಆಗುವ ಖುಷಿಯ ಉತ್ತುಂಗದ ಅನುಭವ ವಾಗುತ್ತಿತ್ತು. ಇದನ್ನು ಅಲ್ಪ ತೃಪ್ತಿ ಎಂದು ತಪ್ಪಾಗಿ ಗ್ರಹಿಸಬಾರದು. ಬದುಕು, ಬೇಕು, ಅವಶ್ಯಕತೆ ಇವೆಲ್ಲ ಇದ್ದದ್ದೇ ಕಡಿಮೆ. ನಾವು ಅದೆಷ್ಟೋ ಲಕ್ಷ ವರ್ಷ ಅಷ್ಟು ಪ್ರಮಾಣದ ಖುಷಿ, ಗೆಲುವಿಗೆ ಮಾತ್ರ ಒಗ್ಗಿಕೊಂಡವರು. ಹಾಗಾಗಿ ಅಂದು ಏನನ್ನೋ ಪಡೆಯಬೇಕೆಂದರೆ, ಆತನಲ್ಲಿ ಉತ್ಪತ್ತಿ ಯಾಗುತ್ತಿದ್ದ ಸ್ವಲ್ಪ ಡೋಪಮೈನ್ ರಾಸಾಯನಿಕವೇ ಸಾಕಾಗಿತ್ತು. ಇದರ ಜತೆ ಡೋಪಮೈನ್ ಗ್ರಾಹಕಗಳ ಚುರುಕಿನಿಂದಾಗಿ, ಬಯಕೆಯ ತೀವ್ರತೆಯ ಪ್ರಮಾಣ ಹೆಚ್ಚಿರುತ್ತಿತ್ತು. ಅದು ಒಬ್ಬ ವ್ಯಕ್ತಿಯನ್ನು ಹತ್ತಿಪ್ಪತ್ತು ಮೈಲಿ ಓಡಾಡಿ, ದಿನವಿಡೀ ಕಷ್ಟ ಪಟ್ಟು, ಬದುಕನ್ನು ಪಣಕ್ಕಿಟ್ಟು, ಸಾಹಸಕ್ಕೆ ಕೈ ಹಾಕುವಂತೆ ಪ್ರೇರೇಪಿಸುತ್ತಿತ್ತು. ಒಂದು ಚಿಕ್ಕ ಪ್ರೇರೇಪಣೆ ಒಂದು ದೊಡ್ಡ ಸಾಹಸಕ್ಕೆ ಕೈಹಾಕುವಂತೆ ಮಾಡುತ್ತಿತ್ತು.
ಅಷ್ಟೇ ಪ್ರಮಾಣದ ಡೋಪಮೈನ್, ಖುಷಿಯ ಅನುಭವದ ಬೇಕುಗಳೇ ಮನುಷ್ಯನನ್ನು ಅಷ್ಟು ಜಾಗೃತರನ್ನಾಗಿಸಿ ಇಡುತ್ತಿತ್ತು. ಆದರೆ ನಾವು ಇಂದಿನ ಜಗತ್ತಿನಲ್ಲಿ ವಸ್ತುಗಳನ್ನು, ಬಯಸಿದ್ದನ್ನು ಪಡೆಯುವ ರೀತಿ ಬದಲಾಗಿದೆ. ಅದಕ್ಕೆ ತಕ್ಕಂತೆ ನಮ್ಮ ಬೇಡಿಕೆ, ಬಯಕೆ, ಬೇಕುಗಳು ಕೂಡ ಬದಲಾಗಿವೆ. ಆದರೆ ಈ ಬದಲಾವಣೆ ಮಾತ್ರ ಅತ್ಯಂತ ಕಡಿಮೆ ಸಮಯದಲ್ಲಾದದ್ದು. ನಾವು ಇದನ್ನೆಲ್ಲ ಹೇಗೆ ಸ್ವೀಕರಿಸುತ್ತಿದ್ದೇವೆ ಎನ್ನುವ ಜಿಜ್ಞಾಸೆ ಈ ಸಮಯದಲ್ಲಿ ಅವಶ್ಯಕವೆನಿಸುತ್ತದೆ. ಇಂದು ಆಹಾರಕ್ಕೆ, ಬಯಸಿದ್ದು ಪಡೆಯಲು ಯಾರೂ ಕಾಡಿಗೆ ಹೋಗಿ ಬೇಟೆಯಾಡಬೇಕಿಲ್ಲ, ಅಥವಾ ತಾವೇ ಕೃಷಿ ಮಾಡಬೇಕೆಂದಿಲ್ಲ. ಬಹುತೇಕರ ಬದುಕು ಒಂದಿಷ್ಟು ಕೆಲಸ ಗಳನ್ನು ಪುನರಾವರ್ತಿಸುವುದೇ ಆಗಿರುತ್ತದೆ. ಅಲ್ಲಿ ಆ ಕಾರಣಕ್ಕೆ ಕೆಲಸದ ನಂತರ ಯಾವುದೇ ಡೋಪಮೈನ್ ಬಿಡುಗಡೆಯಾಗು ವುದಿಲ್ಲ. ಕಚೇರಿಯಲ್ಲಿ ಒಳ್ಳೆಯ ಕೆಲಸ ಮಾಡಿದಾಗ, ಪ್ರತಿ ಬಾರಿ ಏನೋ ಒಂದು ಬಹುಮಾನ ಸಿಕ್ಕುವುದಿಲ್ಲವಲ್ಲ.
ಆ ಕಾರಣಕ್ಕೆ ಕಚೇರಿಗಳಲ್ಲಿ ಒಳ್ಳೆಯ ಕೆಲಸ ಮಾಡಿ ಮುಗಿಸುವುದೇ ಸಾಧನೆ, ಆ ಸಾಧನೆಯೇ ಸಂತೃಪ್ತಿಗೆ ಕಾರಣವಾಗಬೇಕು ಎಂದು ಹೇಳುವುದು ಇದೆ. ಉದ್ಯೋಗಿಗಳು ಬಹುತೇಕ ಕಂಪನಿಗಳನ್ನು ಬಿಡಲು ಕಾರಣ, ಅಲ್ಲಿ ಕೆಲಸದೆಡೆಗೆ ಅವರಿಗೆ ತೃಪ್ತಿಯಿಲ್ಲದಿರುವುದು. ಕೆಲಸದಿಂದ ಡೋಪಮೈನ್ ಬಿಡುಗಡೆ
ಯಾಗದಿರುವುದು. ನಿತ್ಯ ಉದ್ಯೋಗದಲ್ಲಿ ಡೋಪಮೈನ್ ಬಿಡುಗಡೆಯಾಗುವ ಸಂದರ್ಭ ಅಪರೂಪವಾದಂತೆ ನಮ್ಮ ಮಿದುಳಿನಲ್ಲಿ ಕ್ರಮೇಣ ಪ್ರೇರಣೆ ಕೂಡ ಕ್ಷೀಣಿಸುತ್ತ ಹೋಗು ತ್ತದೆ. ಆ ಕಾರಣಕ್ಕೆ ಉದ್ಯೋಗಿಗಳನ್ನು ಪ್ರೇರೇಪಿಸುವ ಹಲವು ಕಾರ್ಯಕ್ರಮಗಳನ್ನು ಕಂಪನಿಗಳು ಹಮ್ಮಿಕೊಳ್ಳುತ್ತಲೇ ಇರುತ್ತವೆ. ಏನೋ ಒಂದು ಬಹುಮಾನವನ್ನು ಆಗೀಗ ಉದ್ಯೋಗಿಗಳು ಪಡೆಯುವಂತೆ ನೋಡಿಕೊಳ್ಳುತ್ತದೆ.
ಮನುಷ್ಯ ತಾನು ಮಾಡುವ ನಿತ್ಯಕೆಲಸದಲ್ಲಿ ಪ್ರೇರಣೆಯ ಕೊರತೆ ಇದ್ದಾಗ ಡೋಪಮೈನ್ ಪಡೆಯಲು ಅನ್ಯಮಾರ್ಗ ಗಳನ್ನು ಹಿಡಿಯುತ್ತಾನೆ. ಡೋಪಮೈನ್ ರಾಸಾಯನಿಕವೆಂದರೆ ಆಸೆ, ಬಯಕೆ, ಹಂಬಲ ಪಡುವುದು ಮತ್ತು ಅದನ್ನು ಪಡೆಯುವುದು, ಇವಿಷ್ಟೇ ಅಲ್ಲ. ಇಡೀ ಮನಸ್ಸು, ದೇಹ ಸರಿಯಾಗಿ ಕೆಲಸ ಮಾಡಬೇಕೆಂದರೆ ಈ ರಾಸಾಯನಿಕ ಬೇಕು. ಹಾಗಾಗಿ ಅದರ ಬಯಕೆ ಬಯೋಲಾಜಿಕಲ್ ಕಾರಣಕ್ಕೆ ತೀವ್ರ ವಾಗುತ್ತ ಹೋಗುತ್ತದೆ. ಇಂದಿನ ಕಾಲದಲ್ಲಿ ಈ ಡೋಪಮೈನ್ ಅನ್ನು ಪಡೆಯುವ ಅಡ್ಡ ದಾರಿಗಳ ಲಭ್ಯತೆ ಹೆಚ್ಚಿದೆ. ಮೊದಲೆಲ್ಲ ಕ್ರಿಕೆಟ್ ಅಥವಾ ಇನ್ನೊಂದು ಕ್ರೀಡೆ ಆಡಿ ಆಟವನ್ನು ಗೆಲ್ಲಬೇಕಿತ್ತು. ಅದಕ್ಕೆ ಸಮಯ, ಶ್ರಮ ಬೇಕಿತ್ತು. ಆದರೆ ಮೊಬೈಲ್, ಕಂಪ್ಯೂಟರ್ ಗೇಮಿಂಗ್ ಬಂದಾಗಿನಿಂದ ಆ ಯಾವುದೇ ಶ್ರಮವಿಲ್ಲದೆ ಗೆಲ್ಲುವ ಅನುಭವ, ಡೋಪಮೈನ್ ಪಡೆಯಬಹುದು. ಮಕ್ಕಳಲ್ಲಿ ಈ ಡೋಪಮೈನ್ನ ಗ್ರಾಹಕ ಗಳು ಅತ್ಯಂತ ಕ್ರಿಯಾಶೀಲ, ಹಾಗಾಗಿ ಅಲ್ಲಿ ಈ ರಾಸಾಯನಿಕದ ಅವಶ್ಯಕತೆ ಜಾಸ್ತಿ.
ಆನ್ಲೈನ್ ಗೇಮಿಂಗ್ ನಿಂದ ಇದೆಲ್ಲ ಯಾವುದೇ ಕಷ್ಟವಿಲ್ಲದೆ ಯಥೇಚ್ಛ ಸಿಗುತ್ತದೆ. ಹಾಗಾಗಿಯೇ ಮಕ್ಕಳಿಗೆ ಮೊಬೈಲ್ ಗೇಮಿಂಗ್ ಅಷ್ಟು ಚಟವಾಗಿ ಹತ್ತಿಕೊಳ್ಳುವುದು. ಮೊದಲೆಲ್ಲ ಬೇರಿನ್ನೊಂದು ಜಾಗ ನೋಡಬೇಕೆಂದರೆ ಅಲ್ಲಿಗೆ ಹೋಗಬೇಕಿತ್ತು. ಈಗ ಯೂಟ್ಯೂಬ್ ಅದೇ ಅನುಭವ, ಡೋಪಮೈನ್ ಕೊಡ
ಬಲ್ಲದು. ಅನ್ಯರ ಅಭಿಪ್ರಾಯ, ಮಾತು ಕೇಳುವುದರಿಂದ ಹಿಡಿದು ಹೊಸತನ್ನು ತಿಳಿಯುವುದು ಇವೆಲ್ಲದಕ್ಕೆ ಯಾವುದೇ ಕಷ್ಟ ಪಡಬೇಕಿಲ್ಲ. ಸಂಭೋಗದಷ್ಟೇ ತೀವ್ರ ಅನುಭವವನ್ನು ಪೋರ್ನ್/ಅಶ್ಲೀಲ ಚಿತ್ರಗಳ ವೀಕ್ಷಣೆಯಿಂದ ಪಡೆಯಬಹುದು. ಹಾಗಾಗಿ, ಕಾಲ ಕಳೆದಂತೆ, ಪೋರ್ನ್ ಹೆಚ್ಚು ಹೆಚ್ಚು ನೋಡಿದಂತೆ, ಸೆಕ್ಸ್ಗೆ ದೈಹಿಕ ಶ್ರಮ ಬೇಡವೆನಿಸಿ ಅಸಲಿ ಸಂಭೋಗದಲ್ಲಿ ನಿರಾಸಕ್ತಿ ಹೆಚ್ಚುವುದು.
ಕಲ್ಪಿತ, ಅನಾಯಾಸ ಸಂಭೋಗವನ್ನು ಹೆಚ್ಚು ಹೆಚ್ಚು ಬಯಸುವುದು. ಹೀಗೆ, ಬದಲಾದ ಬದುಕುವ ರೀತಿಯಿಂದಾಗಿ ನಾವು ಮಿದುಳಿನಲ್ಲಿ ಡೋಪಮೈನ್ ತಯಾರಿಸಿಕೊಳ್ಳುವ, ಸುಖವನ್ನು ಅನುಭವಿ ಸುವ ರೀತಿಗಳು ಬದಲಾಗಿವೆ. ಈಗ ಅದೆಲ್ಲದಕ್ಕೆ ನಾವು ಎಷ್ಟು, ಹೇಗೆ ಒಗ್ಗಿಕೊಂಡಿದ್ದೇವೆ, ಕೆಲವು ಶಾರ್ಟ್ಕಟ್ಗಳ ಅಡ್ಡ ಪರಿಣಾಮಗಳೇನು ಎನ್ನುವುದು ಪ್ರಶ್ನೆ. ನನ್ನ ಸಹಪಾಠಿಯೊಬ್ಬನಿದ್ದ. ಆತನಿಗೆ ಓದುವ ಹುಚ್ಚು. ಒಳ್ಳೆಯದೇ ಅಲ್ಲವೇ. ಮುಲ್ಕಿ ಪರೀಕ್ಷೆಯಲ್ಲಿ ಡಿಸ್ಟಿಕ್ಷನ್ನಲ್ಲಿ ಪಾಸಾಗಿದ್ದ. ಸಿಕ್ಕಸಿಕ್ಕದ್ದೆಲ್ಲ ಓದುತ್ತಿದ್ದ. ಹೈಸ್ಕೂಲಿಗೆ ಬಂದಾಗ ರಜಾ ದಿನಗಳಲ್ಲಿ ಆತನ ಕೈಗೆ ಸ್ಪೈ, ಕ್ರೈಮ್ ಕಥೆಗಳಿರುವ ಅಗ್ಗದ ಪತ್ತೆದಾರಿ ಮತ್ತು ರೊಮ್ಯಾನ್ಸ್ ಕಾದಂಬರಿಗಳನ್ನು ಯಾರೋ ಕೊಟ್ಟರು. ಅದಾದ ನಂತರ ಆತ ಕ್ರಿಕೆಟ್, ಇನ್ನಿತರ ಆಟಗಳನ್ನು ಆಡುವುದನ್ನು ನಿಲ್ಲಿಸಿಬಿಟ್ಟ. ಬಾಹ್ಯ ಜಗತ್ತಿನ ಜತೆಗಿನ ಸಂಪರ್ಕ ಸಂಪೂರ್ಣ ಬಂದ್. ಇಡೀ ದಿನ ಇಂಥ ರೊಮ್ಯಾಂಟಿಕ್ ಕಾದಂಬರಿಗಳಲ್ಲಿಯೇ ಮುಳುಗಿರುತ್ತಿದ್ದ. ಕ್ರಮೇಣ ಈ ಹುಚ್ಚು ಎಷ್ಟು ಮಿತಿಮೀರಿತೆಂದರೆ ಶಾಲೆಯಲ್ಲಿ ಪಾಠ ನಡೆಯುತ್ತಿದ್ದರೆ ಈತ ಪಠ್ಯದಲ್ಲಿ ಮಧ್ಯದಲ್ಲಿ ಇಂಥ ಪುಸ್ತಕ ಗಳನ್ನು ಇಟ್ಟು ಓದುತ್ತಿದ್ದ.
ಇಂಥ ಅಗ್ಗದ ಕಾದಂಬರಿಗಳ ಲೋಕದಲ್ಲಿಯೇ ಆತ ವಿಹರಿಸಲು ಶುರುಮಾಡಿಬಿಟ್ಟಿದ್ದ. ಅವನ ಜೀವನದಲ್ಲಿ ಬಡತನ ಮೊದಲಾದ ಕಷ್ಟಗಳಿದ್ದವು. ಆತ
ಕ್ರಮೇಣ ಅವನ್ನೆಲ್ಲ ಮರೆತು ತನ್ನದೇ ಕಲ್ಪಿತ ಬದುಕನ್ನು ಸತ್ಯವೆಂದು ತಿಳಿಯಲು ಶುರುಮಾಡಿಕೊಂಡುಬಿಟ್ಟಿದ್ದ. ನಂತರ ಪರೀಕ್ಷೆಗಳಲ್ಲಿ ನಪಾಸಾಗುವ ಹಂತಕ್ಕೆ ತಲುಪಿಬಿಟ್ಟ. ಆನಾ ಲೆಂಬಕೆ- ಸ್ಟಾನರ್ಡ್ ವಿಶ್ವವಿದ್ಯಾಲಯದ ಮನಃಶಾಸ್ತ್ರಜ್ಞೆ. ಆಕೆಯ ಪುಸ್ತಕ ‘ಡೋಪಮೈನ್ ನೇಷನ್’ನಲ್ಲಿ ಕೆಲವರ ಬಯಕೆಗಳು ಚಟವಾಗಿ ಮಾರ್ಪಾಡಾದ ಬಗ್ಗೆ ವಿವರಿಸುತ್ತಾಳೆ. ಅಮೆರಿಕದ ಅವಳ ಪೇಶಂಟ್ ಜೇಕಬ್. ಅವನಿಗೆ ಆನ್ಲೈನ್, ಅಮೆಜಾನ್ನಲ್ಲಿ ವಸ್ತುಗಳನ್ನು ಖರೀದಿಸುವುದು
ಖುಷಿ ಕೊಡುತ್ತಿತ್ತು. ಆನ್ಲೈನ್ನಲ್ಲಿ ಏನಾದರೊಂದನ್ನು ಹುಡುಕಿ ಖರೀದಿಸುವುದು. ಖರೀದಿಸಿದ ನಂತರ ಅದು ಮನೆಗೆ ಬರುವಲ್ಲಿಯವರೆಗಿನ ಕಾಯುವಿಕೆ, ನಂತರ ಅದು ಬಂದು ಮುಟ್ಟಿದಾಗ, ಬಾಕ್ಸ್ ಅನ್ನು ತೆರೆದಾಗ, ಹೊಸ ವಸ್ತು ಗಳನ್ನು ಕಂಡಾಗ ಆಗುವ ಖುಷಿಯೇ ಅವನ ಡೋಪಮೈನ್.
ಮೊದ ಮೊದಲು ವಾರಕ್ಕೊಮ್ಮೆ ಒಂದು ವಸ್ತುವನ್ನು ಖರೀದಿಸುತ್ತಿದ್ದ. ಕ್ರಮೇಣ ವಾರಕ್ಕೊಮ್ಮೆ ಡೋಪಮೈನ್ ಪಡೆಯುತ್ತಿದ್ದ ಮಿದುಳಿನ ಡೋಪಮೈನ್ ಗ್ರಾಹಕಗಳು ಚುರುಕನ್ನು ಕಳೆದುಕೊಂಡವು. ಬಯಕೆ, ಆಸೆ ಹೆಚ್ಚಿತು. ನಂತರ ಪ್ರತಿದಿನ ಖರೀದಿಸುವ ಹಂತಕ್ಕೆ ಮುಟ್ಟಿದ. ಮುಂದೆ ಈ ಖಯಾಲಿ ಚಟವಾಗಿ ದಿನಕ್ಕೆ ನಾಲ್ಕಾರು ವಸ್ತುಗಳನ್ನು ಆರ್ಡರ್ ಮಾಡಲು ಶುರುವಿಟ್ಟುಕೊಂಡ. ದುಡಿಮೆಗಿಂತ ಖರ್ಚು ಹೆಚ್ಚಿತು, ಮನೆತುಂಬ ಬಾಕ್ಸ್ಗಳು. ಸಾಲ ಮಾಡಿ ಖರೀದಿ ಶುರುವಾಯಿತು. ಖರೀದಿಸಿ, ಬಾಕ್ಸ್ ತೆರೆದ ಮೇಲೆ ಆತನಿಗೆ ಆ ವಸ್ತುವಿನ ಬಗ್ಗೆ ವಿಶೇಷ ಆಸಕ್ತಿ ಇರುತ್ತಿರಲಿಲ್ಲ. ವಸ್ತುವನ್ನು ಪಡೆಯುವುದೇ ಆತನಿಗೆ ಕಿಕ್. ನಂತರ ಸಾಲವೂ ಸಿಗದಂತಾಯಿತು.
ಆಗಲೂ ಜೇಕಬ್ ವಸ್ತುಗಳನ್ನು ಖರೀದಿಸುವುದು, ಬಾಕ್ಸ್ ತೆರೆಯುವುದು, ಕೆಲ ದಿನಗಳ ನಂತರ (ಖರ್ಚಿಲ್ಲದೆ) ಹಿಂದಿರುಗಿಸುವುದು ಮಾಡಲು ಶುರುಮಾಡಿದ.
ಇನ್ನೊಂದು ಕೇಸ್ ಹೀಗೆ. ಆತ ಒಲಿಂಪಿಕ್ನಲ್ಲಿ ಎಳೆಯ ಪ್ರಾಯದಲ್ಲಿಯೇ ಪದಕ ಗೆದ್ದವ. ಸೋಲುವುದು, ಗೆಲ್ಲುವುದು ಆತನಿಗೆ ಡೋಪಮೈನ್. ಕ್ರೀಡಾಪಟು ವಾಗಿದ್ದ ಆತನಿಗೆ ಆಗೀಗ ಬಹಳಷ್ಟು ಗೆಲುವು ಸಿಗುತ್ತಿತ್ತು. ಆದರೆ ಯಾವಾಗ ತನ್ನ ಕ್ರೀಡಾವೃತ್ತಿ ಬಿಟ್ಟು ಕಾಲೇಜಿಗೆ ಸೇರಿದನೋ, ಅವನಲ್ಲಿ ಗೆಲುವು, ಖುಷಿ, ಡೋಪಮೈನ್ ಸಿಗುತ್ತಿದ್ದ ಪ್ರಮಾಣ ಕಡಿಮೆಯಾಯಿತು. ಮನಸ್ಸು ಪರ್ಯಾಯ ಬಯಸಿತು. ಆತ ಆನ್ಲೈನ್ ಗ್ಯಾಂಬ್ಲಿಂಗ್ (ಜೂಜಾಟ) ಶುರುಮಾಡಿಕೊಂಡ.
ಸಾಕಷ್ಟು ಹಣ ಗೆದ್ದದ್ದೆಲ್ಲ ಆಯಿತು. ಕ್ರಮೇಣ ಜೂಜಾಟವೇ ಆತನ ಡೋಪಮೈನ್ ಆಗಿ ಆವರಿಸಿತು. ಸಾಕಷ್ಟು ಹಣವನ್ನು ನಂತರದಲ್ಲಿ ಕಳೆದುಕೊಂಡ. ಹೆಚ್ಚು ಸೋತಂತೆ ಗೆಲ್ಲಬೇಕಾದ ಹಂಬಲವನ್ನು ಡೋಪಮೈನ್ ಗ್ರಾಹಕಗಳು ಹುಟ್ಟುಹಾಕಿದವು.
ಶಿಕ್ಷಣಕ್ಕೆ ಪಡೆದ ಸಾಲದ ಹಣವನ್ನೂ ಜೂಜಾಟದಲ್ಲಿ ಕಳೆದು ಕೊಂಡದ್ದಾಯಿತು. ಬಹುತೇಕ ಜೂಜು, ಆಲ್ಕೋಹಾಲ್, ಡ್ರಗ್ಸ್, ಆಸೆ, ಬಯಕೆ, ಹೆಬ್ಬಯಕೆ, ಅತಿಯಾಸೆ, ಹುಚ್ಚಾಸೆ ಇವೆಲ್ಲದರ ಹಿಂದೆ ಇರುವುದು ಈ ರಾಸಾಯನಿಕ, ಮತ್ತು ಅದನ್ನು ಗ್ರಹಿಸುವ ಗ್ರಾಹಕಗಳು. ಈ ಗ್ರಾಹಕಗಳದ್ದೇ ಸಮಸ್ಯೆ, ಅವು ಹೆಚ್ಚು ಡೋಪಮೈನ್ ಪಡೆದಂತೆ ಜಾಡ್ಯ ಬೆಳೆಸಿಕೊಳ್ಳುತ್ತವೆ, ಇನ್ನಷ್ಟು ಬೇಕೆನ್ನುವ ಹಂಬಲವನ್ನು ಮಿದುಳಿಗೆ ರವಾನಿಸಿ ದೇಹ, ಮನಸ್ಸು ಅದರತ್ತ ಕೆಲಸ ಮಾಡುವಂತೆ ನೋಡಿಕೊಳ್ಳುತ್ತವೆ. ನಮ್ಮ ಮಿದುಳು ಅಂಥ ಕೆಲಸವನ್ನು ಮಾಡಲು ಕಷ್ಟದ, ಸುಲಭದ ಎರಡು ಆಯ್ಕೆಯಿದ್ದರೆ, ಆಯ್ದುಕೊಳ್ಳುವುದು ಸುಲಭದ್ದನ್ನು.
ಜೂಜಾಡುವುದು, ಅಶ್ಲೀಲ ಚಿತ್ರಗಳ ವೀಕ್ಷಣೆ, ತಂಬಾಕು, ಆಲ್ಕೋಹಾಲ್, ಗಾಂಜಾ, ಡ್ರಗ್ಸ್ ಇವೆಲ್ಲದರಿಂದ ಡೋಪ ಮೈನ್ ಅನ್ನು ಸುಲಭದಲ್ಲಿ ಪಡೆಯಬಹುದು. ಆದರೆ ಕಾಲ ಕಳೆದಂತೆ ಡೋಪಮೈನ್ನ ಬಯಕೆ, ಆಸೆ ಹೆಚ್ಚುತ್ತದೆಯಲ್ಲ. ಇನ್ನಷ್ಟು ಬೇಕೆನ್ನಿಸಲು ಶುರುವಾಗುತ್ತದೆ. ಈ ಸುಳಿಗೆ ಕೆಟ್ಟ ಚಟಗಳಷ್ಟೇ ಸೀಮಿತವಲ್ಲ. ಕೆಲವು ತೀರಾ ಮುಗ್ಧವೆನಿಸುವ ಹವ್ಯಾಸಗಳೆನಿಸಿಕೊಳ್ಳುವ ಅತಿರಂಜಿತ, ಅವಾಸ್ತವಿಕ ಕಾದಂಬರಿ ಗಳನ್ನು ಓದುವುದು, ವಸ್ತುಗಳ ಖರೀದಿ, ಲೆಕ್ಕ ಮೀರಿ ಆಹಾರ
ಸೇವಿಸುವುದು, ಯೂಟ್ಯೂಬ್, ಸೋಷಿಯಲ್ ಮೀಡಿಯಾ ಇವೆಲ್ಲ ಆಧುನಿಕ ಜಗತ್ತು ನಮಗೆ ತೆರೆದಿಡುವ ಡೋಪಮೈನ್- ಮನಸ್ಸಿನೊಳಗಿನ ಆಸೆಯನ್ನು ಪೂರೈಸುವ ಪರ್ಯಾಯ ಮಾರ್ಗಗಳು.
ಇವೆಲ್ಲ ಹೊಸತು. ಇವಕ್ಕೆಲ್ಲ ಚಟಗಳೆಂಬ ಆರೋಪ ಇನ್ನೂ ಬಂದಿಲ್ಲ. ಆದರೆ ಗುರುತಿಸಿಕೊಳ್ಳದಿದ್ದರೆ ಅವಕ್ಕೂ ನಮ್ಮ ಬದುಕನ್ನು ನುಂಗಿಹಾಕುವಷ್ಟು ತಾಕತ್ತಿದೆ.
ಬಯಕೆ, ಆಸೆ, ಸುಖಗಳ ವಿಷವರ್ತುಲದಲ್ಲಿ ಬೀಳದೇ ಹಗ್ಗದ ಮೇಲೆ ನಡೆದಂತೆ ಸಮತೋಲನದಲ್ಲಿ ಬದುಕುವುದು ಇಂದು ಹಿಂದೆಲ್ಲದಕ್ಕಿಂತ ಕಷ್ಟ. ಆದರೆ ಸಮಸ್ಯೆಯ ಗುರುತಾದರೆ ಅಸಾಧ್ಯವಂತೂ ಅಲ್ಲ. ಇದೆಲ್ಲ ಕಾರಣಕ್ಕೆ ಬುದ್ಧ ಹೇಳಿದ್ದು ಇಂದಿಗೂ ಪ್ರಸ್ತುತ, ವೈಜ್ಞಾನಿಕವಾಗಿಯೂ ಸತ್ಯ. ಆತ ಹೇಳಿದ ಇನ್ನೊಂದು ಮಾತು: ಆಂತರ್ಯದ ಅರಿವು ಮತ್ತು ನಿರಂತರ ಅವಲೋಕನದಿಂದ ಮಾತ್ರ ಆಸೆಗಳನ್ನು ಗುರುತಿಸಬಹುದು.